ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಅಂತರಾಳದ ತುಡಿತದ ತಾಪವೇರಿಸಿದ ಉಸ್ತಾದ್ ಎಲ್ಲಿರುವೆ
ಮನದಾಳದ ಮಿಡಿತದ ಜ್ವರವೇರಿಸಿದ ಉಸ್ತಾದ್ ಎಲ್ಲಿರುವೆ
ಕಣ್ಮುಚ್ಚಿ ಬಾಹುಬಂಧನದಿ ಮೈಮರೆಯುವ ತವಕದಲ್ಲಿದ್ದೆ
ಜೀವದ ಹಂಬಲದ ಹಯವೇರಿದ ಉಸ್ತಾದ್ ಎಲ್ಲಿರುವೆ
ಕಣ್ಣೀರಿನ ಕೊಳದ ತುಂಬೆಲ್ಲಾ ನಿನ್ನ ಬಿಂಬದ ಹೋಯ್ದಾಟ
ನನ್ನೊಲವ ಜಲಪಾತದ ನಶೆಯೆರಿಸಿದ ಉಸ್ತಾದ್ ಎಲ್ಲಿರುವೆ
ಎದೆ ಬನವ ಹಸನಾಗಿಸಿ ಪ್ರೇಮದೂಗಳ ತೋಟವಾಗಿಸಿದ್ದೆ
ಪ್ರೀತಿಯ ಪಾರಿಜಾತಕೆ ಗುಂಗೇರಿಸಿದ ಉಸ್ತಾದ್ ಎಲ್ಲಿರುವೆ
ಭೃಂಗವಾಗಿ ಬಂದು ಹಾಡಿ ತಣಿಸುವೆ ಎಂದುಕೊಂಡಿದ್ದೆ
ಪ್ರಣಯದ ರಾಗದಲಿ ಝೇಂಕರಿಸಿದ ಉಸ್ತಾದ್ ಎಲ್ಲಿರುವೆ
ಒಲವ ಮಂದಿರದೆ ಪ್ರೇಮ ದೀವಿಗೆಯ ಹಚ್ಚಿ ಉರಿಸುತ್ತಿದ್ದೆ
ಕಿರು ಜ್ಯೋತಿಯ ಬೆಳಕಲಿ ಆಲಾಪಿಸಿದ ಉಸ್ತಾದ್ ಎಲ್ಲಿರುವೆ
ಅನುಳ ಉಸಿರ ಬಸಿರನುತ್ತಿ ನಿನ್ನೆಸರ ಬಿತ್ತಿ ಹಸಿರಾಗಿಸಿದ್ದೆ
ಮರೆಯೆ ನಾನೆಂದು ಆಣೆ ಭಾಷೆಯಿರಿಸಿದ ಉಸ್ತಾದ್ ಎಲ್ಲಿರುವೆ
ಡಾ ಅನ್ನಪೂರ್ಣ ಹಿರೇಮಠ
ತುಂಬಾ ಚೆನ್ನಾಗಿದೆ
ಚೆನ್ನಾಗಿದೆ