ಧೂಮಪಾನ ದುಷ್ಟಪರಿಣಾಮಗಳು.
ಸಂಗಮೇಶ ಎನ್ ಜವಾದಿ
ಧೂಮಪಾನ ಎಂದರೆ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಹೊಗೆಯನ್ನು ಒಳತೆಗೆದುಕೊಳ್ಳುವುದನ್ನು ಧೂಮಪಾನ ಸೇವನೆ ಯೆಂದು ಕರೆಯಲಾಗುತ್ತದೆ. ಇದರಿಂದ ಹೊರಡುವ ಹೊಗೆಯನ್ನು ಉಚ್ಛ್ವಾಸದ ಮೂಲಕ ಒಳತೆಗೆದುಕೊಂಡಾಗ ಇದರ ಸಕ್ರಿಯ ವಸ್ತುಸಾರಗಳು ಆಲ್ವಿಯೋಲೈ ಮೂಲಕ ಶ್ವಾಸಕೋಶದಲ್ಲಿ ಹೀರಲ್ಪಡುತ್ತವೆ.ಈ ಸಕ್ರಿಯ ವಸ್ತುಸಾರಗಳು ನರಗಳ ತುದಿಗಳಲ್ಲಿ ರಾಸಾಯನಿಕ ಕ್ರಿಯೆಗಳನ್ನುಂಟುಮಾಡಿ ಹೃದಯ ಬಡಿತದ ವೇಗ, ನೆನಪಿನ ಶಕ್ತಿ, ಸಕ್ರಿಯತೆ ಹಾಗೂ ಪ್ರತಿಕ್ರಿಯಿಸುವ ಸಮಯದಲ್ಲಿ ಏರಿಕೆಯನ್ನುಂಟುಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಚಟ ಹೆಚ್ಚಾಗಿ ಗ್ರಾಸವಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 500ರಲ್ಲಿ 100ಜನರಿಗೆ ಮಾದಕ ವ್ಯಸನಿಗಳಾಗಿದ್ದರೆ, ಇತ್ತೀಚಿನ ದಿನಗಳಲ್ಲಿ 100ರಲ್ಲಿ 40 ಜನರಿಗೆ ಇಂತಹ ಚಟಗಳಿಗೆ ವ್ಯಸನಿಯಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇಂತಹ ಮಾದಕ ವಸ್ತುಗಳ ಸೇವನೆಯಿಂದ ಯಾವುದೇ ಪ್ರಯೋಜನ ವಿಲ್ಲದುದ್ದರೂ,ಮೋಜು ಮಸ್ತಿಗಾಗಿ, ಪಾಶ್ಚಾತ್ಯ ಸಂಸ್ಕೃತಿಯ ಸೆಳೆತ, ಸಂಪ್ರದಾಯದ ಕಂದಾಚಾರ, ಕಾಮೋತ್ತೇಜನ ಪ್ರಚೋದನೆಗಾಗಿ, ಆಕ್ರಮಣ ಶೀಲತೆ ತೋರಿಸಲು, ಪ್ರತಿಭೆ ಪ್ರದರ್ಶನಕ್ಕೆ, ಹಣಕಾಸು ಸಮಸ್ಯೆ, ಖಿನ್ನತೆ ಯಂತಹ ವಿಷಯಗಳಿಂದಾಗಿ,ಧೂಮಪಾನದಂತ ಚಟಗಳತ್ತ ಆಕರ್ಷಿತರಾಗುತ್ತಿದ್ದಾರೆ.
ಹೀಗಾಗಿ ಈಗ ತಂಬಾಕು ಭಾರತದಲ್ಲಿ ಹಲವು ರೂಪಗಳಲ್ಲಿ ಸರ್ವೇಸಾಮಾನ್ಯವಾಗಿ ವ್ಯಾಪಕವಾಗಿ ಬಳಕೆಯಲ್ಲಿರುವ ಒಂದು ವ್ಯಸನಕಾರಿ ಪದಾರ್ಥ. ನಿಕೊಟಿನ್ ತಂಬಾಕನ್ನು ಸಿಗರೇಟ್ ರೂಪದಲ್ಲಿ ವಿಶ್ವದಾದ್ಯಂತ ಹೆಚ್ಚಾಗಿ ಬಳಸಲಾಗುತ್ತಿರುವಂತೆ, ಭಾರತದಲ್ಲಿ ಸಿಗರೇಟ್, ಬೀಡಿ, ನಶ್ಯ, ಹುಕ್ಕಾ ಮತ್ತು ಜಗಿಯುವ ತಂಬಾಕು ಎಂಬ ಬೇರೆಬೇರೆ ರೂಪದಲ್ಲಿ ಬಳಸಲಾಗುತ್ತದೆ.ಧೂಮಪಾನ ದುಶ್ಚಟಗಳ ಬಳಕೆಗೆ ಯಾವುದೇ ನಿರ್ಧಿಷ್ಟ ಕಾರಣಗಳು ಇಲ್ಲದಿದ್ದರೂ, ಹಿರಿಯರ ಜೊತೆಗೆ ಇವತ್ತಿನ ಯುವ ಸಮೂಹ ಕೂಡ, ಕ್ಷುಲಕ ಕಾರಣ, ಕ್ಷಣಿಕ ತೀರ್ಮಾನಗಳಿಂದಾಗಿ ದುಶ್ಚಟಕ್ಕೆ ಬಲಿಯಾಗುತ್ತಿದೆ. ವಿಶ್ವ ಸಂಸ್ಥೆಯ ಸಮೀಕ್ಷೆಯ ಪ್ರಕಾರ 1 6ರ ವಯೋಮಿತಿಯಿಂದ 30ರ ವಯೋಮಿತಿಯ ಒಳಗಿನವರೇ, ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಾರೆ ಎನ್ನುವ ಅಂಶ ಹೊರಗೆಡುವಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಎಂದರೆ ಶೇ 10ರಲ್ಲಿ 4 ಜನ ಧೂಮಪಾನವನ್ನು, 3 ಜನ ಮದ್ಯಪಾನವನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಕೂಡ ಇದರಿಂದ ಹೊರತಾಗಿಲ್ಲ. ಧೂಮಪಾನ ಅತಿ ಹೆಚ್ಚಿನ ವ್ಯಸನಕಾರಿ ಪದಾರ್ಥ ಮತ್ತು ಅದರ ಸೇವನೆ ಬಿಡಬೇಕೆಂದುಕೊಂಡರೂ ಬಿಡಲು ಸಾಧ್ಯವಾಗುವುದಿಲ್ಲ. ಇದು ಹೆಚ್ಚಿನ ವಿಷಕಾರಿ ಗುಣ ಹೊಂದಿದೆ. ಜಗತ್ತಿನಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ 40 ಲಕ್ಷ ಸಾವು ಸಂಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ತಂಬಾಕು ಪ್ರತಿ ವರ್ಷ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತಿದೆ.ತಂಬಾಕು ಸಂಬಂಧಿತ ರೋಗಗಳಿಂದ ಭಾರತದಲ್ಲಿ ಪ್ರತಿನಿತ್ಯ 2500 ಜನರು ಮರಣ ಹೊಂದುತ್ತಿದ್ದಾರೆ. ವಿಶ್ವದಾದ್ಯಂತ ಕೊಕೇನ್ ಅಥವಾ ಹೆರಾಯಿನ್ ಮತ್ತು ಮದ್ಯ ಬಳಕೆಯಿಂದ, ಅಗ್ನಿ ದುರಂತ, ಕೊಲೆ, ಆತ್ಮಹತ್ಯೆ, ಅಪಘಾತ ಮತ್ತು ಏಡ್ಸ್ ನಿಂದಾಗುವ ಸಾವುಗಳ ಒಟ್ಟೂ ಸಂಖ್ಯೆಗಳಿಗಿಂತಲೂ ತಂಬಾಕು ಸೇವನೆಯಿಂದ ಸಾಯುವವರ ಸಂಖ್ಯೆಯು ಅಧಿಕ ಪ್ರಮಾಣದಲ್ಲಿದೆ.
ಧೂಮಪಾನದಲ್ಲಿ ಏನಿದೇ : ಹೊಗೆಸೊಪ್ಪಿನ ಗಿಡದಲ್ಲಿನ ನಿಕೊಟಿಯಾನಾ ಟೊಬ್ಯಾಕಮ್ ಎನ್ನುವ ಸಾರವನ್ನು ಬಳಸಿಕೊಂಡು ತಯಾರಾಗುವ ಪದಾರ್ಥ ತಂಬಾಕು. ಈ ಗಿಡದ ಒಣಗಿದ ಎಲೆಗಳನ್ನು ಉಳಿದ ಕೆಲವು ವಸ್ತುಗಳೊಂದಿಗೆ ಮಿಶ್ರಣ ಮಾಡಿ ಬೀಡಿ, ಸಿಗರೇಟ್, ನಶ್ಯ, ಹುಕ್ಕಾ, ಜರ್ದಾ, ಕಡ್ಡಿಪುಡಿ ಮತ್ತು ತಂಬಾಕಿನ ಉಳಿದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಸುಫಾರಿ ಜಗಿಯುವುದರ ಮೂಲಕ, ಸೇದುವುದರ ಮೂಲಕ (ನಶ್ಯ), ಧೂಮಪಾನದ ಮೂಲಕ (ಸಿಗರೇಟ್, ಬೀಡಿ) ಹೀಗೆ ಅನೇಕ ವಿಧಗಳಲ್ಲಿ ತಂಬಾಕನ್ನು ಬಳಸಲಾಗುತ್ತದೆ.
ಮುದ ನೀಡುವ ನಿಕೊಟಿನ್ ತಂಬಾಕು ಗಿಡದ ಎಲೆಗಳಲ್ಲಿ ಕಂಡುಬರುವ ರಾಸಾಯನಿಕ. ಧೂಮಪಾನ ಅಥವಾ ತಂಬಾಕು ಜಗಿಯುವುದು ನಿಕೊಟಿನ್ ಮತ್ತು ಕಾರ್ಬನ್ ಮೋನಾಕ್ಸೈಡ್ ಹಾಗೂ ಟಾರ್ಗಳನ್ನೊಳಗೊಂಡು ಅಂದಾಜು 4000 ಬೇರೆ ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ.
ಧೂಮಪಾನ ವ್ಯಸನಕ್ಕೆ ಕಾರಣಗಳು :
ತಂಬಾಕು ಸೇವನೆಯು ಮಿದುಳಿನಲ್ಲಿ ಆನಂದ ನೀಡುವ ಡೋಪಮೈನ್ ನರವಾಹಕವನ್ನು ಬಿಡುಗಡೆ ಮಾಡುತ್ತದೆ. ಮಿದುಳು ಇದನ್ನು ಆನಂದದಾಯಕವಾದ ಚಟುವಟಿಕೆ ಎಂದು ಗ್ರಹಿಸುತ್ತದೆ ಮತ್ತು ವ್ಯಕ್ತಿಯು ತಂಬಾಕು ಸೇವನೆಯನ್ನು ಮತ್ತೆಮತ್ತೆ ಬಯಸುವಂತೆ ಮಾಡುತ್ತದೆ. ಕ್ರಮೇಣ ಮಿದುಳಿನ ಸಂದೇಶವಾಹಕಗಳು ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಆನಂದದ ಭಾವ ಹೊಂದಲು ಮಿದುಳು ಹೆಚ್ಚು ತಂಬಾಕು ಪದಾರ್ಥಗಳ ಸೇವನೆಯನ್ನು ಬಯಸುತ್ತದೆ.
ವ್ಯಕ್ತಿಯು ನಿಕೊಟಿನ್ ಸೇವಿಸಿದಾಗ, ರಾಸಾಯನಿಕಗಳು ಚರ್ಮ, ಬಾಯಿ, ಮೂಗಿನ ನಾಳಗಳು ಹಾಗೂ ಶ್ವಾಸಕೋಶಗಳ ಮೂಲಕ ಮಾನವನ ಮಿದುಳನ್ನು ತಲುಪುತ್ತವೆ. ನಿಕೊಟಿನ್ಯುಕ್ತ ಧೂಮಪಾನವು ನಿಮಗೆ ತಕ್ಷಣ ನಶೆಯನ್ನು ಮತ್ತು ಅತಿಯಾದ ಶಕ್ತಿಯನ್ನು ನೀಡುತ್ತದೆ. ಕೆಲವು ನಿಮಿಷಗಳ ನಂತರ, ನಶೆ ಇಳಿದು ಹೋಗುತ್ತದೆ ಮತ್ತು ನಿಮಗೆ ಸುಸ್ತಾದಂತೆ ಅಥವಾ ಶಕ್ತಿ ಕಡಿಮೆಯಾದಂತೆ ಭಾಸವಾಗುತ್ತದೆ. ಇದರ ಪರಿಣಾಮವಾಗಿ, ನಿಮಗೆ ಮತ್ತೆ ಧೂಮಪಾನ ಮಾಡಬೇಕೆಂದು ಅನಿಸುತ್ತದೆ.ಅಧ್ಯಯನಗಳ ಪ್ರಕಾರ ಮಕ್ಕಳು ಹಾಗೂ ಹದಿಹರೆಯದವರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಉತ್ಪನ್ನಗಳ ವ್ಯಸನಿಗಳಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂಬಾಕು ಬಳಸಲು ಆರಂಭಿಸಿದರೆ, ವ್ಯಸನಿಗಳಾಗುವ ಸಾಧ್ಯತೆ ಹೆಚ್ಚು.ತಂಬಾಕು ವ್ಯಸನದಿಂದ ಮಿದುಳಿನಲ್ಲಿ ಉಂಟಾಗುವ ಬದಲಾವಣೆಗಳು ಕೊಕೇನ್ ಮತ್ತು ಹೆರಾಯಿನ್ ಬಳಕೆಯಿಂದ ಉಂಟಾಗುವ ಬದಲಾವಣೆಗಳಂತೆ. ದೀರ್ಘಕಾಲದ ಬಳಕೆಯಿಂದ ವ್ಯಕ್ತಿಗೆ ಧೂಮಪಾನ ಮಾಡುವ (ಅಥವಾ ತಂಬಾಕು ಪದಾರ್ಥಗಳ ಬಳಕೆಯ) ಬಯಕೆ ಕೂಡ ಉಂಟಾಗಬಹುದು. ಸಾಮಾನ್ಯವಾಗಿ ಬೆಳಗ್ಗೆ ಏಳುವಾಗ, ಕಾಫಿಯ ಸೇವಿಸುವಾಗ, ಕೆಲಸದ ನಡುವಿನ ಊಟದ ವಿರಾಮದಲ್ಲಿ ತಂಬಾಕು ಸೇವನೆಯನ್ನು ಬಯಸುವಂತೆ ಮಾಡುತ್ತದೆ. ವಾಹನ ಚಲಿಸುವಾಗ, ಮದ್ಯಪಾನ ಮಾಡುವಾಗ ಅಥವಾ ಒತ್ತಡದ ಕೆಲಸ ಮಾಡುತ್ತಿರುವಾಗ ಧೂಮಪಾನ ಮಾಡಬೇಕೆಂದು ಬಲವಾಗಿ ಅನಿಸುವ ಸಾಧ್ಯತೆಯೂ ಇದೆ.
ಧೂಮಪಾನದ ದುಷ್ಟಪರಿಣಾಮಗಳು : ಸಿಗರೇಟ್ ನಲ್ಲಿ ಸುಮಾರು 4000 ವಿಷ ಪದಾರ್ಥಗಳಿದ್ದು 400ರಕ್ಕೂ ಹೆಚ್ಚು ಪದಾರ್ಥಗಳು ಕ್ಯಾನ್ಸರಿಗೆ ಕಾರಣವಾಗಿವೆ,ಅತಿಯಾದ ಧೂಮಪಾನ ನರಗಳ ದೌರ್ಬಲ್ಯ, ಜೀರ್ಣ ಶಕ್ತಿಯಲ್ಲಿನ ಇಳಿತಕ್ಕೆ ಕಾರಣವಾಗುತ್ತದೆ. ಸತತವಾದ ದಮ್ಮು , ರಕ್ತದ ಖಾಯಿಲೆ ಉಂಟುಮಾಡುತ್ತದೆ. ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಗೆ ಭಂಗ ತರುತ್ತದೆ. ದೇಹದ ಎಲ್ಲಾ ಅಂಗಗಳಿಗೂ ಧಕ್ಕೆಯಾಗುತ್ತದೆ .5 ಸೆ, ಮೀ, ಸಿಗರೇಟ್ ಸೇವನೆಯಿಂದ 5 ನಿಮಿಷ ಆಯಸ್ಸು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಜಠರ ಮತ್ತು ಕರುಳಿನ ಮೇಲೆ ಧೂಮಪಾನ ಸರಿಪಡಿಸಲು ಆಗದಂತಹ ಪರಿಣಾಮ ಬೀರುತ್ತದೆ. ಸಿಗರೇಟಿನಲ್ಲಿರುವ ದುಷ್ಪರಿಣಾಮ ಬೀರುವ ವಿಷದ ಅಂಶ ಜಠರದ ಒಳಪದರವನ್ನು ಸವೆಸುತ್ತದೆ ಮತ್ತು ಜೀರ್ಣಾಂಗದ ಕಿಣ್ವಗಳು ಸರಿಯಾಗಿ ಕೆಲಸ ಮಾಡಲು ಅಡ್ಡಿಪಡಿಸುತ್ತದೆ. ಇದೇ ಕಾರಣದಿಂದ ಧೂಮಪಾನ ವ್ಯಸನಿಗಳು ಆಹಾರ ಜೀರ್ಣವಾಗುವುದರಲ್ಲಿ ತೊಂದರೆ ಅನುಭವಿಸುತ್ತಾರೆ.ಧೂಮಪಾನ ವ್ಯಸನಿಯಾಗಿದ್ದರೆ ನಿಮ್ಮ ನಾಲಗೆಯ ಮೇಲಿರುವ ರುಚಿ ಗ್ರಾಹಕ (ಟೇಸ್ಟ್ ಬಡ್) ಗಳು ಬೇಗನೆ ನಶಿಸಿ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿಯೇ ಧೂಮಪಾನ ವ್ಯಸನಿಗಳು ಖಾರ ಪದಾರ್ಥಗಳನ್ನು ಯಾವುದೇ ತೊಂದರೆಯಿಲ್ಲದೆ ಸೇವಿಸುತ್ತಾರೆ. ಅವರ ನಾಲಗೆಯ ಮೇಲಿನ ರುಚಿ ಗ್ರಾಹಕಗಳು ನಶಿಸಿ ಹೋಗಿರುವ ಕಾರಣ ಅವರಿಗೆ ರುಚಿ ತಿಳಿಯುದಿಲ್ಲ.
ಕಳೆದ ದಶಕದಲ್ಲಿ ತಂಬಾಕು ಸಂಬಂಧಿತ ರೋಗಗಳು ತ್ವರಿತವಾಗಿ ಹೆಚ್ಚಾಗಿವೆ. ಸಂತಾನಕ್ಕಾಗಿ ದಂಪತಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರಲ್ಲಿ ಬೇಗನೆ ರಜೋನಿವೃತ್ತಿ ಹೊಂದುವಿಕೆ ಕಂಡು ಬರುತ್ತಿದೆ.ಧೂಮಪಾನ ಮಾಡುವವರು ಶೇ.14 ಬಂಜೆತನಕ್ಕೆ ಒಳಗಾಗುತ್ತಾರೆ. ಶೇ.30ರಷ್ಟು ಬಹುಬೇಗ ರಜೋನಿವೃತ್ತಿ ಹೊಂದುತ್ತಾರೆ. 30ರ ವಯೋಮಾನದ ಮಹಿಳೆಯರಲ್ಲಿ ಫಲವತ್ತತೆ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯು 35ರ ನಂತರ ವೇಗ ಪಡೆದುಕೊಳ್ಳುತ್ತದೆ. ಆದರೆ ತಂಬಾಕು ಬಳಕೆಯು ಅವಧಿಗೆ ಮುಂಚೆಯೇ ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದಿನಕ್ಕೆ 10ಕ್ಕಿಂತಲೂ ಹೆಚ್ಚು ಸಿಗರೇಟುಗಳ ಸೇವನೆಯು ನಿಮ್ಮ ಗರ್ಭಧರಿಸುವ ಸಾಮರ್ಥ್ಯದ ಮೇಲೆ ಹಾನಿಯುಂಟುಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.ಧೂಮಪಾನ ಮಾಡುತ್ತಿರುವ ಮಹಿಳೆಯರು ಶೇ.60ರಷ್ಟು ತಾವು ಗರ್ಭವತಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳುವರು. ಇದು ಅಪಸ್ಥಾನೀಯ ಗರ್ಭಾವಸ್ಥೆ ಮತ್ತು ಇತರೆ ಟ್ಯೂಬಲ್ ಫ್ಯಾಕ್ಟರ್ ಬಂಜೆತನಕ್ಕೂ ಸಂಬಂಧ ಹೊಂದಿದೆ. ಸಿಗರೇಟಿನಲ್ಲಿ ಇರುವ ರಾಸಾಯನಿಕಗಳು ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಒಳಗೊಂಡಿವೆ.ತಂಬಾಕು ಪುರುಷರ ಸಂತಾನೋತ್ಪತ್ತಿ ಶಕ್ತಿಯ ಮೇಲೂ ಪ್ರಭಾವ ಬೀರುತ್ತದೆ. ಇದು ರಕ್ತನಾಳಗಳಿಗೆ ಹಾನಿಯುಂಟು ಮಾಡಿ ರಕ್ತದ ಹರಿವಿನ ಮೇಲೂ ಪ್ರಭಾವ ಬೀರುತ್ತದೆ. ಕೆಲವು ಅಧ್ಯಯನಗಳು ಧೂಮಪಾನದ ಪರಿಣಾಮಗಳನ್ನು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ಕಡಿಮೆಯಾದ ಲೈಂಗಿಕ ನೆರವೇರಿಕೆಯೊಂದಿಗೆ ಸಂಬಂಧ ಕಲ್ಪಿಸಿವೆ. ಮಾನವನ ವೀರ್ಯ ಕಣಗಳು ಸಮರ್ಪಕವಾಗಿ ಸಂತುಲಿತ ಒಂದರಿಂದ ಒಂದಕ್ಕೆ ಸಂಬಂಧ ಹೊಂದಿರುವ ಪ್ರೊಟಮೈನ್ 1 ಮತ್ತು ಪ್ರೊಟಮೈನ್ 2 ಎಂದು ಕರೆಯಲಾಗುವ ಎರಡು ಚಿಕ್ಕ, ಅಧಿಕ ಆವೇಶದ ಪ್ರೊಟೀನುಗಳನ್ನು ಕೊಂಡೊಯ್ಯುತ್ತವೆ. ಆದರೂ ಧೂಮಪಾನಿಗಳ ವೀರ್ಯವು ಬಹಳ ಕಡಿಮೆ ಪ್ರೊಟಮೈನ್ ಅನ್ನು ಕೊಂಡೊಯ್ಯುತ್ತದೆ. ತಂಬಾಕಿನಿಂದ ಉಂಟಾಗುವ ಹಾನಿಯು ವೀರ್ಯದಲ್ಲಿ ಕ್ರೊಮೊಸೋಮುಗಳ ಹಾನಿ ಮತ್ತು ಡಿಎನ್‌ಎ ವಿಘಟನೆಯನ್ನೂ ಒಳಗೊಳ್ಳುತ್ತದೆ. ಧೂಮಪಾನವು ವೀರ್ಯಕ್ಕೆ ಹಾನಿಯುಂಟುಮಾಡಿ ಸಂತಾನಶಕ್ತಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಧೂಮಪಾನಿಗಳ ವೀರ್ಯದಿಂದ ಬೆಳವಣಿಗೆಯಾದ ಭ್ರೂಣವು ಡಿಎನ್‌ಎ ಹಾನಿಯ ಕಾರಣದಿಂದಾಗಿ ಬದುಕುಳಿಯುವ ಕಡಿಮೆ ಸಾಧ್ಯತೆಯನ್ನು ಹೊಂದಿರುತ್ತದೆ. ನಿಷ್ಟ್ರೀಯ ಧೂಮಪಾನ ಪುರುಷರ ಸಂತಾನಶಕ್ತಿಯ ಮೇಲೆ ಪ್ರಭಾವ ಬೀರಬಹುದು. ಪುರುಷ ಧೂಮಪಾನಿಗಳು ಕಡಿಮೆ ಚಲನಶೀಲತೆಯೊಂದಿಗೆ ವೀರ್ಯದ ಕಡಿಮೆ ಗುಣಮಟ್ಟದೊಂದಿಗೆ ಬಳಲಬಹುದು ಮತ್ತು ಇದು ಅಸಹಜ ಆಕಾರದ ವೀರ್ಯಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಒಬ್ಬ ವ್ಯಕ್ತಿಯು ನಿರಂತರವಾಗಿ ಧೂಮಪಾನ ಮಾಡುವವನಾಗಿದ್ದರೆ, ಮೊಟ್ಟೆಗಳನ್ನು ಫಲವತ್ತತೆಗೊಳಿಸುವ ವೀರ್ಯದ ಸಾಮರ್ಥ್ಯವನ್ನೂ ಕಡಿಮೆ ಮಾಡಬಹುದು. ದೀರ್ಘಕಾಲದ ತಂಬಾಕು ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಹಲ್ಲುಗಳ ಅಕಾಲಿಕ ಮುಪ್ಪು (ಚರ್ಮ ಸುಕ್ಕುಗಟ್ಟುವಿಕೆ), ಕಣ್ಣಿನ ಪೊರೆ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ, ಬೊಜ್ಜು, ಉಸಿರಾಟದ ತೊಂದರೆ, ಹೃದಯದ ತೊಂದರೆ ಹಾಗೂ ಸ್ಟ್ರೋಕ್ ಅಪಾಯ, ಭ್ರೂಣಕ್ಕೆ ಹಾನಿ ( ಗರ್ಭಿಣಿ ಮಹಿಳೆಯರು ಧೂಮಪಾನ ಮಾಡುವುದರಿಂದ), ನಪುಂಸಕತ್ವ ಅಥವಾ ಬಂಜೆತನದ ಸಮಸ್ಯೆಗಳು ಉಂಟಾಗಬಹುದು. ತಂಬಾಕು ಸೇವನೆಯು ಮಧುಮೇಹ, ಸಂಧಿವಾತ ಹಾಗೂ ಆಸ್ಟಿಯೋಪೊರೊಸಿಸ್ ಮುಂತಾದ ತೊಂದರೆಗಳನ್ನು ಹೆಚ್ಚು ಮಾಡಬಹುದು ಜೊತೆಗೆ ಧೂಮಪಾನ ಮಾಡಿದವರ ಆಯುಷ್ಯವು ಧೂಮಪಾನ ಮಾಡದವರ ಆಯುಷ್ಯಕ್ಕಿಂತ 15 ವರ್ಷ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ ಹಾಗೂ ತಂಬಾಕಿನ ಪರೋಕ್ಷ ಧೂಮಪಾನ (ಪ್ಯಾಸಿವ್ ಸ್ಮೋಕಿಂಗ್) ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು, ಹಾಗೂ ಇದು ಮಾರಕವೆಂದು ಸಾಬೀತಾಗಿದೆ. ದೀರ್ಘಾವಧಿಯ ಪರೋಕ್ಷ ಧೂಮಪಾನದಿಂದ ಶ್ವಾಸಕೋಶ, ಸ್ತನ ಹಾಗೂ ಲಿವರ್ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಇದು ಸ್ಟ್ರೋಕ್ ಹಾಗೂ ಹೃದಯಾಘಾತಗಳಿಗೆ ಕೂಡ ಕಾರಣವಾಗಬಹುದು. ಪರೋಕ್ಷ ಧೂಮಪಾನದಿಂದ ಹೊರಬರಲು ಯಾವುದೇ ‘ಸುರಕ್ಷತೆ’ಗಳಿಲ್ಲ ಹಾಗೂ ಹೊಗೆಯ ಅಪಾಯವನ್ನು ತಡೆಯಲು ಸಾಧ್ಯವಿಲ್ಲ.ಸಾಮಾನ್ಯವಾಗಿ ಬೀಡಿ, ನಶ್ಯ ಮತ್ತು ಇತರ ಹೊಗೆ ರಹಿತ ತಂಬಾಕು ಪದಾರ್ಥಗಳು ಸಿಗರೇಟ್ ಗಿಂತ ‘ಸುರಕ್ಷಿತ’ ಎಂಬ ನಂಬಿಕೆಯಿದೆ. ಇದು ಸತ್ಯವಲ್ಲ. ಅವು ಕೂಡ ಸಿಗರೇಟ್ನಂತೆಯೇ ವ್ಯಕ್ತಿ ಹಾಗೂ ಆತನ ಸುತ್ತಮುತ್ತಲಿನವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ.
ಧೂಮಪಾನ ವ್ಯಸನದ ಪರಿಣಾಮಗಳು —
ತಂಬಾಕು ಅಥವಾ ನಿಕೊಟಿನ್ ಬಳಕೆ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯು ಅಡ್ರೆನಾಲಿನ್ (ದೇಹದೊಳಗೆ ಬಿಡುಗಡೆಗೊಳ್ಳುವ ಮುದ ನೀಡುವ ವಸ್ತು) ಬಿಡುಗಡೆ ಮಾಡುತ್ತದೆ. ಅದು ದೇಹದ ಉಷ್ಣಾಂಶವನ್ನು, ಹೃದಯ ಬಡಿತವನ್ನು ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಶ್ವಾಸಕೋಶ, ಬಾಯಿ, ಸ್ತನ, ಗರ್ಭಕೋಶ, ಪ್ಯಾನ್ಕ್ರಿಯಾಸ್, ಮೂತ್ರಪಿಂಡ ಅಥವಾ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ತೊಂದರೆಗೆ ಒಳಗಾಗುವ ಅಪಾಯ ಹೆಚ್ಚು. ಹೊಗೆರಹಿತ ತಂಬಾಕು ಸೇವನೆಯನ್ನು ಮಾಡುವವರಲ್ಲಿ ಬಾಯಿ, ಧ್ವನಿಪೆಟ್ಟಿಗೆ, ಅನ್ನನಾಳ, ಪ್ಯಾನ್ಕ್ರಿಯಾಸ್ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.
ಧೂಮಪಾನವನ್ನು ತಡೆಗಟ್ಟುವ ವಿಧಾನ:
ಅನೇಕ ಜನರು ಕೋಲ್ಡ್ ಟರ್ಕಿ ವಿಧಾನದ ಮೂಲಕ ತಮ್ಮ ನಿಕೋಟಿನ್ ಚಟವನ್ನು ಬಿಡಲು ಸಮರ್ಥರಾಗಿದ್ದಾರೆ (ಆದರೆ ಮನೋವೈದ್ಯರು ಈ ವಿಧಾನವನ್ನು ಶಿಫಾರಸ್ಸು ಮಾಡುವುದಿಲ್ಲ). ಉಳಿದವರಿಗೆ ವೈದ್ಯಕೀಯ ವೃತ್ತಿಪರರ ನೆರವಿನ ಅಗತ್ಯವಿದೆ. ಧೂಮಪಾನದಿಂದ ಹೊರಬರಲು ಇಚ್ಛಿಸಿ, ಅದರಲ್ಲಿ ಸಫಲರಾಗದೆ ಇದ್ದಲ್ಲಿ ನಿರಾಶಾವಾದಿಗಳಾಗುವ ಅಗತ್ಯವಿಲ್ಲ. ಕೆಲವು ಸಹಾಯ ಸಹಕಾರಗಳ ಮೂಲಕ ನೀವು ಅದರಿಂದ ಹೊರಬರಲು ಸಾಧ್ಯವಿದೆ. ನೀವು ಸಹಾಯಕ್ಕಾಗಿ ಮನೋವೈದ್ಯರನ್ನು ಸಂಪರ್ಕಿಸಿ.ಕೇವಲ 3%ದಷ್ಟು ಜನ ಮಾತ್ರ ಸ್ವಂತಂತ್ರವಾಗಿ ಧೂಮಪಾನ ಬಿಡಲು ಸಾಧ್ಯವಾಗುತ್ತದೆ ಎಂದು ಅಂದಾಜಿಸಲಾಗಿದೆ. ಉಳಿದ ಹೆಚ್ಚಿನ ಜನರಿಗೆ ವೃತ್ತಿಪರರ ಸಹಾಯ ಅಗತ್ಯ. ಧೂಮಪಾನ ಚಟದಿಂದ ಹೊರಬರುವುದು ಅಷ್ಟು ಸುಲಭವಲ್ಲ ಮತ್ತು ಅದರಿಂದ ಹೊರ ಬರಲು ಸಹಾಯ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ.ಹೆಚ್ಚಿನ ಸಂದರ್ಭದಲ್ಲಿ ವ್ಯಸನಿಗಳು, ಅವರ ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಂದ ವೈದ್ಯರು ಅಥವಾ ಮನೋವೈದ್ಯರ ಹತ್ತಿರ ಕರೆತರಲ್ಪಡುತ್ತಾರೆ. ವೈದ್ಯರು ಅಥವಾ ಆಪ್ತಸಲಹೆಗಾರರು ನಿಮ್ಮನ್ನು ಪ್ರಶ್ನಿಸುತ್ತಾರೆ, ಇದರಿಂದ ನಿಮ್ಮ ವ್ಯಸನದ ತೀವ್ರತೆಯನ್ನು ತಿಳಿಯಲು ಸಾಧ್ಯವಾಗುತ್ತದೆ. ಫಾಗರ್ಸ್ಟೋರ್ಮ್ ಟೆಸ್ಟ್ ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗಿನ ಮಾತುಕತೆಗಳ ಸಂಯೋಜನೆಯು ನಿಮಗೆ ಉತ್ತಮವಾದ ಚಿಕಿತ್ಸೆಯನ್ನು ನೀಡಲು ಸಹಾಯ ಮಾಡುತ್ತದೆ.ಈ ಚಿಕಿತ್ಸೆ ತಡೆಗಟ್ಟಲು
ಡ್ರಗ್ ಮತ್ತು ಮದ್ಯ ವ್ಯಸನಗಳ ಚಿಕಿತ್ಸೆಯಂತಲ್ಲ. ಆಸ್ಪತ್ರೆಗೆ ದಾಖಲಾಗದೆಯೆ, ಹೊರರೋಗಿಯಾಗಿದ್ದುಕೊಂಡೇ ಚಿಕಿತ್ಸೆಯನ್ನು ಪಡೆಯಬಹುದು. ವ್ಯಕ್ತಿಗಳು ವ್ಯಸನವನ್ನು ಬಿಡುವಂತೆ ಅವರನ್ನು ಹುರುದುಂಬಿಸುವುದು ಚಿಕಿತ್ಸೆಯ ಗುರಿಯಾಗಿದೆ. ನಾನು ಧೂಮಪಾನಿಯಲ್ಲ ಎಂಬ ಚಿತ್ರಣವನ್ನು ವ್ಯಕ್ತಿಗೆ ಕಟ್ಟಿಕೊಡುವ ಮೂಲಕ, ಅವರು ಯಾವುದೇ ಸವಾಲುನ್ನು ಎದುರಿಸಲು ಈ ಚಿಕಿತ್ಸೆ ಸಹಾಯ ಮಾಡುತ್ತದೆ.ಧೂಮಪಾನ ವ್ಯಸನಿಗಳಿಗೆ ಸಾಮಾನ್ಯವಾಗಿ ಚಿಕಿತ್ಸೆಯ ಸಮಯದಲ್ಲಿ ‘ವ್ಯಸನ ಬಿಡುವ ದಿನಾಂಕ’ವನ್ನು ಆಯ್ಕೆಮಾಡಲು ಕೇಳಿಕೊಳ್ಳಲಾಗುತ್ತದೆ. ನಂತರ ಅವರಿಗೆ ನಿಕೋಟಿನ್ ನೀಡಲಾಗುತ್ತದೆ. ಇದರಿಂದ ಕ್ರಮೇಣವಾಗಿ ಅವರು ವ್ಯಸನ ಬಿಡಲು ಸುಲಭವಾಗುತ್ತದೆ. ವಿಥ್ ಡ್ರಾವಲ್ ಸಿಂಪ್ಟಮ್ಗಳನ್ನು ನಿಭಾಯಿಸಲು ಸೂಕ್ತ ಔಷಧಗಳನ್ನು ನೀಡಲಾಗುತ್ತದೆ.
ಕೊನೆಯ ಮಾತು : ಧೂಮಪಾನ ಬಳಕೆಯನ್ನು ಬಿಡಲು ಹೊರಟಾಗ ನಡುಕ, ಆತಂಕ, ಖಿನ್ನತೆಯ ಮನಸ್ಥಿತಿ, ನಿದ್ರೆಯ ಕೊರತೆ, ಬುದ್ಧಿಸ್ಥಿರವಿಲ್ಲದ ಭಾವನೆ, ಹೃದಯ ಬಡಿತದ ಇಳಿಕೆ, ಹಸಿವು ಮತ್ತು ಕಿರಿಕಿರಿ ಹೆಚ್ಚಳ ಮುಂತಾದ ವಿಥ್ ಡ್ರಾಯಲ್ ಸಿಂಪ್ಟಮ್ಸ್ ಕಾಣಿಸಿಕೊಳ್ಳಬಹುದು.ಹೀಗಾಗಿ ಯಾವುದೇ ರೀತಿಯಲ್ಲಿ ಹೆದರಿಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ, ವೈದ್ಯರು ಸೊಚಿಸುವ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದರೆ, ಧೂಮಪಾನದಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ ಬಂಧುಗಳೆ !
ಆದ್ದರಿಂದ ಸಮಸ್ಯೆ ಬಂದ ಮೇಲೆ ಪರಿತಪಿಸುವುದಕ್ಕಿಂತ, ಬರುವ ಮೊದಲೇ ಜಾಗೃತಿ ವಹಿಸಬೇಕು. ವಯೋ ಸಹಜರಲ್ಲಿ ಹೊಸ ಹೊಸ ಬಯಕೆಗಳತ್ತ ಆಕರ್ಷಣೆಗೆ ಒಳಗಾಗುವುದು ಸಹಜ. ಅಂತಹ ಸಂದರ್ಭಗಳಲ್ಲಿ ಮದ್ಯಪಾನಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಅವುಗಳಿಂದ ದೂರ ಇರುವಂತೆ ನಾವೆಲ್ಲರೂ ನೋಡಿಕೊಳ್ಳುವುದು ಅತ್ಯುತ್ತಮ.
*********