ಪುರದ ನಾಗಣ್ಣ – ನಂರುಶಿ ಕಡೂರು

ನೆನೆವ ಮನಕ್ಕೆ ಮಣ್ಣನೆ ತೋರಿದೆ.
ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ.
ಪೂಜಿಸುವ ಕೈಗೆ ಹೊನ್ನನೆ ತೋರಿದೆ.
ಇಂತೀ ತ್ರಿವಿಧವನೆ ತೋರಿ ಕೊಟ್ಟು
ಮರಹನಿಕ್ಕಿದೆಯಯ್ಯಾ.
ಅಮರಗುಂಡದ ಮಲ್ಲಿಕಾರ್ಜುನಯ್ಯಾ
ನೀ ಮಾಡಿದ ಬಿನ್ನಾಣಕ್ಕೆ ನಾನು ಬೆರಗಾದೆನು

      ಸಿಕ್ಕಿರುವ ಕೆಲವೇ ಕೆಲವು ವಚನಗಳಲ್ಲಿ ತಂದೆ ಅಮರಗುಂಡದ ಮಲ್ಲಿಕಾರ್ಜುನಯ್ಯನ ನೆನೆದು ನುಡಿದ ವಚನಗಳಲ್ಲಿ ವ್ಯವಸಾಯದ ಜೊತೆಗೆ ಆಧ್ಯಾತ್ಮದ ಲೇಪನವನ್ನು ಕೊಟ್ಟು ಬೆಡಗಿನಂತೆ ವಚನಗಳನ್ನು ನುಡಿಯುವ, ಬಯಲು ಸೀಮೆಯಲ್ಲಿ ಜನಿಸಿ, ಮೂಲ ಸೊಗಡನ್ನು ಬಿಡದೆ, ಅಂತರಂಗವ ತೋರಿದ  ವಚನಕಾರರಲ್ಲಿ ಪುರದ ನಾಗಣ್ಣ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ.

     ಮಣ್ಣು, ಹೆಣ್ಣು, ಹೊನ್ನು, ಈ ಮೂರು ಕೂಡ ಗಂಡಿಗೆ ಹಿತ ಶತೃಗಳಂತೆ. ಈ ಮೂರನ್ನು ತ್ಯಾಗ ಮಾಡಿದರೆ ಮಾತ್ರ ವಿರಕ್ತನಾಗಲು ಯೋಗ್ಯವಾಗುವನು. ಇವುಗಳ ಆಮಿಷಕೆ ಬಲಿಯಾದರೆ ಹುಲು ಮಾನವನೇ, ನಿನ್ನ ಕೇಡನು ನೀನೇ ಆಹ್ವಾನಿಸಿದಂತೆ. ಈ ಮೂರನ್ನು ಗಂಡು ಎಂದಿಗೂ ತಾನೇ ತಾನು ಹುಡುಕಿ ಹೋಗಬಾರದು. ತಮ್ಮಲ್ಲಿಗೆ ಅವುಗಳೇ ಹುಡುಕಿ ಬಂದರೆ ಏಳ್ಗೆಯಾಗುವುದರಲ್ಲಿ ಅನುಮಾನವೇ ಇಲ್ಲ. ಇವುಗಳ ಹಿಂದೆ ನಾವೇ ಹೊರಟರೆ ಅವನತಿ ಕಟ್ಟಿಟ್ಟ ಬುತ್ತಿ, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇದಕ್ಕೆ ಅನೇಕ ವೃತ್ತಾಂತಗಳನ್ನು ನಿದರ್ಶನಗಳಾಗಿ ಕೊಡಬಹುದು. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ಹುಟ್ಟಿಕೊಂಡಿದ್ದು ಇವುಗಳ ಆಧಾರದ ಮೇಲೆಯೇ. ನಮಗೆ ಬೇಕಾದ ಮೂರು ವಸ್ತುಗಳನ್ನೇ ಮುನ್ನೆಲೆಯಲಿ ಬಿಂಬಿಸಿ ನಮ್ಮನ್ನೆಲ್ಲ ಎಚ್ಚರಿಸುತ್ತಿದ್ದಾರೆ ವಚನಕಾರರು. ಇವುಗಳ ಸಾಮೀಪ್ಯದಿಂದ ಜಯಿಸಿ ಬರುವುದು ಅಷ್ಟು ಸುಲಭವಲ್ಲ. ಎಂದು ವಚನಕಾರ ಪುರದ ನಾಗಣ್ಣ ತಿಳಿಸಿದ್ದಾರೆ.
     ಎಲ್ಲರೂ ಬಡಿದಾಡುವುದು ಈ ಮೂರು ವಸ್ತುಗಳಿಗಾಗಿಯೇ. ಅದರಂತೆ, ನೆನೆವ ಮನಕ್ಕೆ ಮಣ್ಣನೇ ತೋರಿದೆ. ಎಂದರೇ ವ್ಯವಸಾಯ ಮಾಡುವವರಿಗೆ ಮಣ್ಣೇ ಮುಖ್ಯ. ಅದರ ಬಗ್ಗೆಯೇ ಹಗಲಿರುಳು ಯೋಚಿಸುತ್ತ ಏನಾದರೊಂದು ಸಾಧಿಸುವೆನು ಎನ್ನುವ ಛಲವಿದ್ದವನಿಗೆ ಮಣ್ಣನು ನೀಡು. ನಮ್ಮ ಜೀವನದ ಅಂತಿಮ ಕೂಡ ಮಣ್ಣೆ ಎಂಬುವುದನ್ನು ಮರೆಯಬಾರದು. ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ. ಹೆಣ್ಣು ಎಂಬುದು ಮಾಯೇ. ಎಲ್ಲರಿಗೂ ನಿರಾಯಾಸವಾಗಿ ದಕ್ಕುವವಳಲ್ಲ. ಕಣ್ಣಿಗೆ ಕಾಣಿಸುವುದೇ ಕಷ್ಟ ಅಂತಹದರಲ್ಲಿ ಒಲಿಯುವುದು ದೂರದ ಮಾತು. ಅದಕ್ಕಾಗಿ ಕಣ್ಣಿಗೆ ಕಂಡರೆ ಸಾಕು ಸಾರ್ಥಕ ಜೀವನ ನಡೆಸುತ್ತಾನೆಂಬುದೇ ಸತ್ಯ. ಆತ್ಮಬಲದಿಂದ ಸದ್ವಿಚಾರ ಮಾಡಿ ದುಡಿದ ಕಣ್ಣುಗಳಿಗೆ ಹೆಣ್ಣನು ತೋರಿದೆ. ಕಷ್ಟ ಪಟ್ಟರೇ ಮಾತ್ರ ಸುಖವೆಂಬಂತೆ ಪೂಜಿಸುವ ಕೈಗೆ ಹೊನ್ನನೇ ತೋರಿದೆ. ಎಲ್ಲಾ ಕಷ್ಟಗಳನ್ನು ಅನುಭವಿಸಿ ಮಣ್ಣನು ಹೆಣ್ಣಿನೊಂದಿಗೆ ಆರಾಧಿಸಿ ನೋಡಿ ವ್ಯವಸಾಯದಿಂದ ಉತ್ತಮ ಫಸಲು ಪಡೆದಾಗ ಹೊನ್ನು ಎಂಬ ಅದೃಷ್ಟ ಲಕ್ಷ್ಮೀ ತಾನೇ ತಾನಾಗಿ ತನ್ನೊಳಗೆ ಬಂದುಬಿಡುವಳು. ಹೊನ್ನು ಜೊತೆ ಇದ್ದರೆ ಯಾವುದು ನಮಗೆ ಸರಿಸಮ ಎನ್ನುವಂತೆ. ಕೊಟ್ಟ ಮಣ್ಣಿನಲ್ಲಿ ಶ್ರದ್ಧೆಯಿಟ್ಟು ಕೆಲಸ ಮಾಡಿದಾಗ ನಾವು ನೋಡುವ ಸೌಂದರ್ಯ ಹೆಣ್ಣಿನಂತೆ ಕಾಣುತ್ತದೆ. ಆ ಹೆಣ್ಣು ಫಲವತ್ತಾಗಿ ಬೆಳೆದಾಗ ಕೈಗೆ ಹೊನ್ನು ಸಿಕ್ಕಂತೆ. ಇಂತಹ ಈ ಮೂರನ್ನು ತೋರಿಸಿ ಅಜ್ಞಾನವನಿಕ್ಕದೆ ವಿವೇಕ ಶೂನ್ಯರನ್ನಾಗಿ ಮಾಡದೆ ನಡೆಸಿಕೊಂಡು ಪ್ರತಿಹೆಜ್ಜೆಗೂ ಜೊತೆಯಲ್ಲಿದ್ದು ಕಾಯುತಲಿರು ಅಮರಗುಂಡದ ಮಲ್ಲಿಕಾರ್ಜುನ ನಿನ್ನ ಬೆರಗಿಗೆ ಮತ್ತು ಬಿನ್ನಾಣಕ್ಕೆ ಬೆರಗಾಗದವರು ಯಾರೀರುವರು. ನಿನ್ನ ನಂಬಿ ಮೋಸ ಹೋದವರು ಯಾರಿರುವರು ಜಗದಲಿ.

Leave a Reply

Back To Top