ಕಾವ್ಯ ಸಂಗಾತಿ
ಜಯಶ್ರೀ ಜೆ.ಅಬ್ಬಿಗೇರಿ
ಓ ಹೆಣ್ಣೆ!
ಸಪ್ತ ಸಾಗರದಷ್ಟು ನೋವಿದ್ದರೂ
ಬೆಂಕಿಯೊಂದಿಗೆ ಸೆಣಸಾಟವಿದ್ದರೂ
ದಿನ ದೂಡುವುದು ಹರಸಾಹಸವಾಗಿದ್ದರೂ
ಕುಂದಿಲ್ಲ ನಗು ಮುಖದ ಕಳೆ
ಓ ಹೆಣ್ಣೆ! ಆ ದೇವರೇ ಬೆರಗಿಹನು ನಿನ್ನ ಸಹನೆಗೆ
ನಂಬಿಸಿ ಬೆನ್ನಿಗೆ ಚೂರಿ ಇರಿದರೂ
ಚಿಂತೆಯ ಸಂತೆಯಲ್ಲಿ ಬಾಡಿಸಿದರೂ
ಹಾಡು ಹಗಲೇ ಕನಸುಗಳಿಗೆ ತಣ್ಣೀರೆರಚಿದರೂ
ಇನಿತೂ ಕಡಿಮೆಯಾಗಿಲ್ಲ ಅಪ್ಪಿ ಮುದ್ದಾಡುವ ಮಮತೆ
ಓ ಹೆಣ್ಣೆ! ಆ ದೇವರೇ ಬೆರಗಾಗಿಹನು ನಿನ್ನ ಕ್ಷಮೆಗೆ
ಭೋಗದ ವಸ್ತುವಾಗಿಸಿ ಸುಖ ಪಟ್ಟು ಬೀಸಾಡಿದರೂ
ಕಂಡ ಕಂಡವರಿಗೆ ಹಣದಾಸೆಗೆ ಮಾರಿದರೂ
ಕೋಪ ತಾಪದ ಕೆಂಡಗಳನು ಕಾರಿದರೂ
ಸೊರಗಿಲ್ಲ ಚಿಮ್ಮುವ ಕೆಚ್ಚೆದೆಯ ಕಾರಂಜಿ
ಓ ಹೆಣ್ಣೆ! ಆ ದೇವರೇ ಬೆರಗಾಗಿಹನು ನಿನ್ನ ಛಲಕೆ
ಅಕ್ಷರ ಭಾಗ್ಯವ ಕಸಿದರೂ ಆಕಾಶ ಮುಟ್ಟುವ ಗುರಿ ನಿನ್ನದು
ದ್ರೋಹ ಬಗೆದವರಿಗೂ ಒಳಿತು ಬಗೆಯುವ ಹೊನ್ನ ಮನಸ್ಸು ನಿನ್ನದು
ಪಾಪ ಮಾಡದ ಪಾಪಿ ನೀನು ಕೊಳೆಯ ತೊಳೆವ ಗಂಗೆ ನೀನು
ಕತ್ತು ಹಿಸುಕಿದರೂ ಗತ್ತು ಬಿಡದೇ ಬಾಳುವ ಸ್ಪೂರ್ತಿದಾಯಿ ನೀನು
ಓ ಹೆಣ್ಣೆ! ಆ ದೇವರೇ ಬೆರಗಾಗಿಹನು ನಿನ್ನ ಸ್ಪೂರ್ತಿ ಸೆಲೆಗೆ
ಕೀಳು ಕೀಳೆಂದು ಜರಿದರೂ ತುಂಬಿವೆ ಹೊಂಗನಸು ಕಂಗಳಲಿ
ಭಾಗ್ಯವ ಕಸಿದುಕೊಂಡರೂ ಭರವಸೆಯ ಕಿರುನಗೆ ಕೆಂದುಟಿಯಲಿ
ವಿಷ ವರ್ತುಲದಲಿ ಸಿಕ್ಕಿಸಿದರೂ ಅರಳುವ ಚೆಲುವಾದ ಹೃದಯ ಎದೆಯಲಿ
ಗರ್ಭದಲ್ಲಿರುವಾಗಲೇ ಕೊಂದು ಬೀಸಾಡಿದರೂ ಮೃತ ಸಂಜೀವಿನಿ
ಓ ಹೆಣ್ಣೆ! ಆ ದೇವರೇ ಬೆರಗಾಗಿಹನು ನಿನ್ನ ಜೀವನ ಪ್ರೀತಿಗೆ
ನಿನ್ನ ಪ್ರೀತಿಯ ರೀತಿಗೆ
ಜಯಶ್ರೀ ಜೆ.ಅಬ್ಬಿಗೇರಿ
ನಿಜ ತಾಯಿ, ಆರ್ಥಿಕ ಸಬಲತೆ ಪೂರ್ಣ ವಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಹೆಣ್ಣು ಬದುಕಿಗೆ ಸುಧಾರಣಾ ಅಸ್ತ್ರವಾಗಬಲ್ಲದು ಎನಿಸುತ್ತದೆ.
ಬಾಗೇಪಲ್ಲಿ ಕೃಷ್ಣಮೂರ್ತಿ
9481476302.
ಸತ್ಯದ ಪ್ರತೀಕ ಈ ಕವಿತೆ ಶುಭರಾತ್ರಿ
ತಾಯಿಯ ವರ್ಣನೆ ಮತ್ತು ದ್ರೋಹ ಬಗೆದರು ಒಳಿತು ಮಾಡುವಾ ಮನಸು
ಸುಂದರ ಒಡಪು
Sripad Algudkar ✍️
Pune
*ಹೆಣ್ಣೆಂದರೆ ಆದಿ, ಹೆಣ್ಣೆಂದರೆ ಅಂತ್ಯ*,
*ಹೆಣ್ಣು ಎಂದರೆ ಶಕ್ತಿ. ಜಗತ್ತಿನ ಎಲ್ಲಾ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಕಾಲ ಎಲ್ಲರನ್ನೂ ಪ್ರೀತಿಯಲ್ಲಿ ಪೊರೆಯುವವಳು ಈ ಹೆಣ್ಣು*
ತುಂಬಾ ಚೆನ್ನಾಗಿದೆ…. !!
ಓ ಹೆಣ್ಣೆ ಕವನ ತುಂಬಾ ಅದ್ಭುತವಾಗಿದೆ. ನಿಮಗೆ ಹೃದಯಪೂರ್ವಕ ಅಭಿನಂದನೆಗಳು ಮೇಡಮ್
ಹೆಣ್ಣು ಪ್ರೀತಿಯ ಸೆಲೆ. ಅದ್ಭುತ ಕವನ ಮೇಡಂ.ಅಭಿನಂದನೆಗಳು
ಹೆಣ್ಣಿನ ಜೀವನ ವರ್ಣನಾತೀತ. ಕವಿತೆ ತುಂಬಾ ಚೆನ್ನಾಗಿ ಮೂಡಿದೆ. ಸ್ಪೈರ್ತಿದಾಯಕವೂ ಹೌದು