ಬಳಲಿಕೆಯಿಂದಾಗಿ ಸುಮತಿಗೆ ನಿದ್ರೆ ಬಂದಿತ್ತು. ಹಸಿವು ಹೆಚ್ಚಾದಂತೆ ಅನಿಸಿ ಅವಳಿಗೆ ಎಚ್ಚರವಾಯಿತು. ಆದರೆ ಹಾಸಿಗೆ ಬಿಟ್ಟು ಏಳಲು ಅವಳಿಂದ ಸಾಧ್ಯವಾಗುತ್ತಿಲ್ಲ. ಸ್ವಲ್ಪ ಹೊತ್ತು ಹಾಗೇ ಮಲಗಿದಳು. ಇನ್ನೂ ಹೀಗೆ ಮಲಗಿದರೆ ಉಳಿದ ಕೆಲಸವೆಲ್ಲವೂ ಒಂದೇ ಬಾರಿಗೆ ಮಾಡಲು ಸಾಧ್ಯವಾಗುವುದಿಲ್ಲವೆಂದು ನೆನೆದು ಒಲ್ಲದ ಮನಸ್ಸಿನಿಂದ ಹಾಸಿಗೆ ಬಿಟ್ಟು ಎದ್ದಳು. ಜೀರಿಗೆ ಹಾಕಿ ಕಾಯಿಸಿದ್ದ ನೀರನ್ನು ಕುಡಿದಾಗ ಹೊಟ್ಟೆ ತೊಳೆಸುವುದು ಸ್ವಲ್ಪ ಕಡಿಮೆ ಆದಂತೆ ಅನಿಸಿತು. ನೇಂದ್ರ ಬಾಳೆಯ ಹಣ್ಣಿನ ಜೊತೆ ಒಂದು ಸಣ್ಣ ತುಂಡು ಪುಟ್ಟು ತಿಂದಳು. ಕಡಲೆ ಸಾರಿನ ಜೊತೆ ತಿನ್ನಲು ಸಾಧ್ಯವೇ ಆಗಲಿಲ್ಲ. ಸಿಹಿ ಸಿಹಿ ಆಗದಿರಲಿ ಎಂದು ಸ್ವಲ್ಪ ಕಡಲೆ ಸಾರಿನ ಜೊತೆ ಪುಟ್ಟು ತಿನ್ನುವುದು ಅವಳಿಗೆ ಅಭ್ಯಾಸ. ನೇಂದ್ರ ಬಾಳೆ ಹಣ್ಣಿನ ಜೊತೆಗೆ ಸಕ್ಕರೆ ಹಾಗೂ ಸ್ವಲ್ಪ ಹೆಚ್ಚುವರಿ ತೆಂಗಿನ ತುರಿಯನ್ನು ಸೇರಿಸಿ ತಿನ್ನುವುದು ಎಂದರೆ ಅವಳಿಗೆ ಬಹಳ ಇಷ್ಟ. ಆದರೆ ಈಗ ಹೊಟ್ಟೆ ತುಂಬುವಷ್ಟು ತಿನ್ನಲು ಅವಳಿಂದ ಸಾಧ್ಯವಾಗಲಿಲ್ಲ. ತಿಂಡಿ ತಿಂದ ಬಳಿಕ ಸಾವಕಾಶವಾಗಿ ಮನೆಯ ಇತರ ಕೆಲಸಗಳನ್ನು ಮಾಡಿ ಮುಗಿಸಿದಳು. ಸಂಜೆಗೆ ನಿಧಾನವಾಗಿ ಅಡುಗೆ ಮಾಡಿದರೆ ಆಯಿತೆಂದುಕೊಳ್ಳುತ್ತಾ ತರಕಾರಿಗಳನ್ನು ಗಿಡದಿಂದ ಬಿಡಿಸಿ ತರಲೆಂದು ಹಿತ್ತಲ ಕೈ ತೋಟಕ್ಕೆ ಹೋದಳು. ಅವಳ ಕಾಳಜಿ ಹಾಗು ಆರೈಕೆಯಿಂದ ತರಕಾರಿ ಗಿಡಗಳೆಲ್ಲಾ ನಳನಳಿಸಿ ಸೊಂಪಾಗಿ ಬೆಳೆದಿದ್ದವು. ಗಿಡಗಳ ಜೊತೆಗೆ ಕಾಲ ಕಳೆಯುವಾಗ ಅವಳಿಗೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಗಿಡಗಳಿಂದ ಸಂಜೆಯ ಅಡುಗೆಗೆ ಬೇಕಾದ ತರಕಾರಿ ಬಿಡಿಸುತ್ತಾ ಇದ್ದ ಅವಳಿಗೆ ಯಾರೋ ಬಾಗಿಲು ತಟ್ಟಿದ ಹಾಗೆ ಅನಿಸಿತು. ಇಷ್ಟು ಹೊತ್ತಿಗೆ ಯಾರು ಬಂದಿರಬಹುದು? ಎಂದು ಯೋಚಿಸುತ್ತಾ ಹಿತ್ತಲಲ್ಲಿ ಇದ್ದವಳು ನಿಧಾನವಾಗಿ ಹಜಾರದ ಬಾಗಿಲ ಬಳಿ ಬಂದಳು ಅಪರೂಪಕ್ಕೆ ಕೆಲವೊಮ್ಮೆ ಅಪ್ಪ ತಮ್ಮಂದಿರನ್ನು ಕರೆದುಕೊಂಡು ಬರುತ್ತಿದ್ದರು.

ಸಾಮಾನ್ಯವಾಗಿ ಅಲ್ಲಿನ ಸಂತೆಯ ದಿನವಾದ ಗುರುವಾರದಂದು ಹೆಚ್ಚಾಗಿ ಅಪ್ಪ ಹಾಗೂ ತಮ್ಮಂದಿರು ಮತ್ತು ಕೆಲವೊಮ್ಮೆ ಅಕ್ಕ ಭಾವ ಸುಮತಿಯ ಮನೆಗೆ ಬರುತ್ತಿದ್ದರು. ಆದರೆ ಆ ದಿನ ಸಂತೆಯ ದಿನವಾಗಿರದೇ ಇದ್ದುದರಿಂದ ಯಾರಿರಬಹುದು ಎಂಬ ಕೂತೂಹಲ ಮೂಡಿ

ಬಾಗಿಲ ಬಳಿ ಇದ್ದ ಸಣ್ಣ ಕಿಟಕಿಯಲ್ಲಿ ಇಣುಕಿ ನೋಡಿದಳು.

ಸೀರೆಯ ಸೆರಗು ಮಾತ್ರ ಕಾಣಿಸಿತು. “ಓಹ್ ಯಾರೋ ಹೆಂಗಸರು ಬಂದಿರುವರು”…. ಅಂದುಕೊಳ್ಳುತ್ತಾ ಬಾಗಿಲು ತೆರೆದಳು. ನೋಡಿದರೆ ಅಕ್ಕ ಅಪ್ಪ ಹಾಗೂ ತಮ್ಮಂದಿರು ಬಂದಿದ್ದರು. ಅಕ್ಕನ ಕಂಕುಳಲ್ಲಿ ಅವಳ ಪುಟ್ಟ ಕಂದನು ನಿದ್ರೆ ಮಾಡಿದ್ದನು. ಎಲ್ಲರನ್ನೂ ಕಂಡ ಸುಮತಿಗೆ ಬಹಳ ಸಂತಸವಾಯಿತು….”ಓಹ್ ಎಲ್ಲರೂ ಬಂದಿದ್ದೀರಿ….ಇದೇನು ಆಶ್ಚರ್ಯ ಈವತ್ತು ಇಲ್ಲಿನ ಸಂತೆಯ ದಿನ ಕೂಡಾ ಅಲ್ಲ ….ಏನು ವಿಶೇಷ? ಎಂದು ಎಲ್ಲರ ಮುಖವನ್ನು ಒಮ್ಮೆ ನೋಡಿ ಕೇಳಿದಳು. ತಮ್ಮಂದಿರ ಮುಖ ನೋಡಿದರೆ ಏನೂ ತಿಳಿಯದ ಮುಗ್ಧತೆ. ಅಪ್ಪ ಇವಳ ಮುಖವನ್ನು ನೋಡಿ ನಸು ನಕ್ಕರು. ಅಕ್ಕನ ಕಣ್ಣಲ್ಲಿ ಕಂಡೂ ಕಾಣದ ತುಂಟ ನಗೆ. ಏನಿರಬಹುದು? ಎಂದುಕೊಳ್ಳುತ್ತಾ ಅಚ್ಚರಿಯಿಂದ ನಿಂತಿದ್ದ ಸುಮತಿಯನ್ನು ಉದ್ದೇಶಿಸಿ….ನಮ್ಮನ್ನು ಮನೆಯ ಒಳಗೂ ಕರೆಯದೇ ಇಲ್ಲಿ ಬಾಗಿಲಿನಲ್ಲಿ ನಿಂತೇ ಪ್ರಶ್ನಿಸುತ್ತಾ ಇರುವೆಯಲ್ಲ….ಎಂದು ಅಕ್ಕ ಕೇಳಿದಾಗ ತಟ್ಟನೇ ಪಕ್ಕಕ್ಕೆ ಸರಿದು ನಿಂತು… ಕ್ಷಮಿಸಿ ಹೀಗೆ ಇದ್ದಕ್ಕಿದ್ದ ಹಾಗೆ ನಿಮ್ನೆಲ್ಲರನ್ನು ನೋಡಿದ ಖುಷಿಗೆ ಹಾಗೇ ನಿಂತುಬಿಟ್ಟೆ…ಎಲ್ಲರೂ ಒಳಗೆ ಬನ್ನಿ ಎಂದು ಹೇಳುತ್ತಾ ಅಪ್ಪನ ಕೈಲಿದ್ದ ಕೈ ಚೀಲವನ್ನು ತೆಗೆದುಕೊಳ್ಳಲು ಹೋದಳು. ಸ್ವಲ್ಪ ಭಾರ ಎನಿಸಿತು. ಆದರೆ ನಾರಾಯಣನ್ ಕೈ ಚೀಲವನ್ನು ಅವಳ ಕೈಗೆ ಕೊಡದೇ…. “ನಡಿ ಮಗಳೇ ಒಳಗೆ ಹೋದ ನಂತರ ನಾನೇ ಇಡುವೆ”…. ಎಂದಾಗ

ಏನನ್ನೂ ಹೇಳದೇ ನಕ್ಕು ತಮ್ಮಂದಿರ ಕೈ ಹಿಡಿದು ಒಳಗೆ ನಡೆದಳು.

ಖುಷಿಯಿಂದ ಓಡುನಡಿಗೆಯಲ್ಲಿ ಕಾಫಿ ಮಾಡಿ ಏನಾದರೂ ಪಲಹಾರವನ್ನು ತರಲೆಂದು ಹೊರಟ ತಂಗಿಯನ್ನು ತಡೆದು….ಹೀಗೆಲ್ಲಾ ಆತುರಾತುರವಾಗಿ ಓಡಬೇಡ….ನಿಧಾನವಾಗಿ ನಡೆ…ಜಾಗ್ರತೆ”…. ಎಂದು ಅಕ್ಕ ನಗುತ್ತಾ ಹೇಳಿದಾಗ ಅಚ್ಚರಿಯಿಂದ ಪ್ರಶ್ನಾರ್ಥಕವಾಗಿ ನೋಡಿ…”ನಾನು ಚಿಕ್ಕವಳಿದ್ದಾಗ ಜೋರಾಗಿ ಓಡಿ ಎಷ್ಟೋ ಸಲ ಬಿದ್ದಿದ್ದೇನೆ…. ಆಗೆಲ್ಲಾ ಏನೂ ಹೇಳದೇ ಸುಮ್ಮನಿರುತ್ತಿದ್ದ ನೀನು ಇಂದೇಕೆ ಹೀಗೆ ಹೇಳುತ್ತಾ ಇರುವೆ? ಎಂದು ಪ್ರಶ್ನೆ ಮಾಡಿದಾಗ ತಂಗಿಯ ಮುಗ್ಧ ಮಾತು ಕೇಳಿ ಅವಳನ್ನೊಮ್ಮೆ ನೋಡಿದಳು. ಮುಖ ಬಾಡಿದ್ದರೂ ಏನೋ ಒಂದು ಬಗೆಯ ಆಕರ್ಷಣೆ ಇತ್ತು ಅವಳ ಮುಖದಲ್ಲಿ. ತುಂಟ ನಗುವೊಂದು ಮೂಡಿ….”ನಡೆ ಅಡುಗೆ ಮನೆಯ ಕಡೆ…. ಅಲ್ಲಿ ಹೇಳುವೆ”…. ಎಂದು ಅಕ್ಕ ಹೇಳಿದ್ದನ್ನು ಕೇಳಿ…”ಸರಿ ಬಾ ಅಕ್ಕ ನಿನ್ನ ಜೊತೆ ತುಂಬಾ ಮಾತನಾಡುವುದು ಇದೆ”….ಇಂದು ಸಂಜೆ ಇವರು ಬಂದ ಮೇಲೆ ನಿಮ್ಮ ಮನೆಗೆ ಬರೋಣ ಎಂದುಕೊಂಡಿದ್ದೆ….”ಎಂದು ಅಕ್ಕನ ತೋಳನ್ನು ಬಳಸಿ ಜೊತೆಗೆ ನಡೆದಳು. ನಾರಾಯಣನ್ ಕುರ್ಚಿಯನ್ನು ಎಳೆದುಕೊಂಡು ಕಿಟಕಿಯ ಹತ್ತಿರ ಕುಳಿತು ಅಕ್ಕಂದಿರ ಹಿಂದೆಯೇ ಹೋಗುತ್ತಿದ್ದ ಇಬ್ಬರು ತಮ್ಮಂದಿರನ್ನು ಕರೆದು….

ಇಲ್ಲಿ ಬನ್ನಿ ಮಕ್ಕಳೇ….ನೀವಿಬ್ಬರೂ ಹೊರಗೆ ಏನಾದರೂ ಆಟ ಆಡಿಕೊಳ್ಳಿ ಅಕ್ಕಂದಿರು ನಿಮಗೆ ತಿನ್ನಲು ರುಚಿಯಾದ ತಿಂಡಿಗಳನ್ನು ಮಾಡಿಕೊಡುವರು…ಎಂದಾಗ ಇಬ್ಬರೂ ಮನೆಯ ಮುಂದಿನ ಅಂಗಳಕ್ಕೆ ಹೋದರು. ಅಕ್ಕ ನೆಟ್ಟ ಹೂ ಗಿಡಗಳಲ್ಲಿ ಸುವಾಸನಾಭರಿತ ಹೂವುಗಳು ಅರಳಿದ್ದವು. ಅವುಗಳ ಮೇಲೆ ದುಂಬಿಗಳ ಹಾರಾಟ ನೋಡುತ್ತಾ ಇಬ್ಬರೂ ಎಲೆಯ ಮೇಲೆ ಕುಳಿತಿದ್ದ ಪುಟ್ಟ ತುಂಬಿಯನ್ನು ಹಿಡಿಯಲು ಮೆಲ್ಲನೆ ಅದರ ಬಳಿಗೆ ಹೋದಾಗ ಅದು ಹಾರಿ ಮತ್ತೊಂದು ಎಲೆಯ ಮೇಲೆ ಹೋಗಿ ಕುಳಿತುಕೊಂಡಿತು.

ಗಂಡು ಮಕ್ಕಳು ಇಬ್ಬರೂ ತುಂಬಿಯ ಹಿಂದೆಯೇ ಅದನ್ನು ಹಿಡಿಯಲು ಹರಸಾಹಸ ಪಡುತ್ತಾ ಅತ್ತಿಂದಿತ್ತ ಓಡುತ್ತಿದ್ದರು. ತೋಳ ಮೇಲೆ ಸುಖವಾಗಿ ನಿದ್ರಿಸುತ್ತಾ ಇದ್ದ ಪುಟ್ಟ ಕಂದನನ್ನು ಮಂಚದ ಮೇಲೆ ಮಲಗಿಸಿ ಅಡುಗೆ ಮನೆಗೆ ಬಂದ ಅಕ್ಕ ತಂಗಿಯರು ಒಲೆಯ ಬಳಿ ನಿಂತರು. ಸುಮತಿಯ ಅಕ್ಕ ಮುಚ್ಚಿಟ್ಟ ಪಾತ್ರೆಗಳ ಮೇಲೆ ಇದ್ದ ಮುಚ್ಚಳವನ್ನು ತೆರೆದು ಏನೆಲ್ಲಾ ಅಡುಗೆ ಮಾಡಿರುವಳು ಎಂದು ಪರಿಶೀಲಿಸುತ್ತಾ….” ಏನು ಸುಮತಿ ಪುಟ್ಟು ಮಾಡಿದ್ದು ತಿಂದೇ ಇಲ್ಲ…ಎಲ್ಲವೂ ಹಾಗೇ ಇದೆ ನಿನಗೆ ಬಹಳ ಪ್ರಿಯವಾದದ್ದು ಅಲ್ಲವೇ? ಮತ್ತೇಕೆ ಹೀಗೆ ಇಟ್ಟಿರುವೆ”….ಎಂದು ಕೇಳಿದಾಗ ಸುಮತಿ ಮುಖ ಕಿವುಚಿಕೊಂಡು….”ಅಕ್ಕಾ ಏನೂ ತಿನ್ನಲು ಸೇರುತ್ತಿಲ್ಲ….ಮೂಗಿಗೆ ಅಡುಗೆಯ ಘಮ ಸಿಕ್ಕರೆ ಸಾಕು ಹೊಟ್ಟೆ ತೊಳೆಸಿಕೊಂಡು ಬರುತ್ತದೆ….ನನಗೇನೂ ಆರೋಗ್ಯ ಕೆಟ್ಟಿಲ್ಲ ಆದರೆ ಇಂದು ಬೆಳಗ್ಗೆ ಎದ್ದಾಗ ತಲೆ ತಿರುಗುವ ಹಾಗಾಯ್ತು ಬವಳಿ ಬಂದು ಮಂಚದ ಮೇಲೆ ಹಾಗೇ ಕುಳಿತೆ.

ಹಲ್ಲುಜ್ಜುವಾಗ ವಾಂತಿ ಆಯ್ತು….ಅಡುಗೆ ಮನೆಗೆ ಹೋಗಿ

ಹೇಗೋ ತಿಂಡಿ ಮತ್ತು ಇವರಿಗೆ ಊಟದ ಡಬ್ಬಿಗೆ ಅಡುಗೆ ಮಾಡಲು ತಯಾರಿ ಮಾಡುವಾಗ ಬೇಳೆ ಬೇಯಿಸುವಾಗ ಹಾಗೂ ಸಾರಿಗೆ ಮಸಾಲೆ ಬೆರೆಸಿ ಕುದಿಸುವಾಗ ಹೊಟ್ಟೆ ತೊಳೆಸುತ್ತಾ ಇತ್ತು. ಏನೂ ತಿನ್ನಲೂ ಆಗುತ್ತಿಲ್ಲ ಆಹಾರ ಕಂಡರೆ ವಾಂತಿ ಬರುತ್ತೆ…..ನನಗೆ ಏಕೆ ಹೀಗೆ ಆಗುತ್ತಿದೆ? ಇಲ್ಲಿಯವರೆಗೂ ಒಮ್ಮೆಯೂ ಹೀಗೆ ಆಗಿದ್ದೇ ಇಲ್ಲ ಗಾಬರಿ ಆಗುತ್ತಿದೆ. ನಾನು ವಾಂತಿ ಮಾಡಿದರೆ ಇವರು ನಗುತ್ತಾ ನಿಂತಿದ್ದರು….ನನಗೆ ಬಹಳ ಸಂಕಟವಾಯಿತು”….ಎಂದು ಒಂದಿಷ್ಟು ಪುಕಾರು ಹೇಳುತ್ತಾ ಇರುವ ತಂಗಿಯ ಮುದ್ದು ಮುಖವನ್ನೇ ನೋಡುತ್ತಾ ನಾನೂ ಕೂಡಾ ಮೊದಲ ಬಾರಿಗೆ ತಾಯಿಯಾಗುವ ಲಕ್ಷಣಗಳು ನನ್ನಲ್ಲಿ ಕಾಣಿಸಿ ಕೊಂಡಾಗ ಹೀಗೇ ಮುಗ್ಧತೆಯ ಪ್ರಶ್ನೆಯನ್ನು ಅತ್ತೆಯ ಮಗಳ ಬಳಿ ಕೇಳಿದ್ದೆ ಅಲ್ಲವೇ ಎಂದು ನೆನಪಿಸಿಕೊಳ್ಳುತ್ತ ಮುಗುಳ್ನಕ್ಕು ಸುಮತಿಯನ್ನು ನೋಡಿದಾಗ…ಅಕ್ಕಾ ನೀನೂ ಕೂಡಾ ಏನೂ ಹೇಳದೇ ಸುಮ್ಮನೇ ನನ್ನನ್ನು ನೋಡಿ ಮುಗುಳು ನಗುತ್ತಿರುವೆಯಲ್ಲಾ?….ಎಂದು ಮುಖ ಊದಿಸಿಕೊಂಡಳು.


Leave a Reply

Back To Top