ಕಾವ್ಯ ಸಂಗಾತಿ
ನಾಗೊಂಡಹಳ್ಳಿ ಸುನಿಲ್
ಪ್ರೇಮಕಾವ್ಯದ ಮದಿರೆ
ಪ್ರೇಮದೂರಿನಿಂದ ಕಾವ್ಯದೂರಿಗೆ
ಹೊರಟ ದೋಣಿ ಸದ್ದಿಲ್ಲದೆ
ಹಾಯಿ ತಪ್ಪಿ ತಬ್ಬಲಿಯಾಯ್ತು
ತಪ್ಪು ನನ್ನದಲ್ಲ.
ಬದುಕಿದ್ದಾಗ ಯಾರೂ ಜೊತೆಯಾಗಲಿಲ್ಲ,
ನೋವಿಗೆ ಕಿವಿಯಾಗಲಿಲ್ಲ
ಸತ್ತಾಗ ಸಂತಾಪದ ಹುಸಿ ಕಣ್ಣೀರ
ಹರಿಸುವವರು ಲೆಕ್ಕವೇ ಇಲ್ಲ.
ಜೀವವಿರುವ ಕಾಲದಲ್ಲಿ
ಎಲ್ಲರೂ ದೂರ ತಳ್ಳಿದವರು
ಅನುಪಸ್ಥಿತಿಯಲ್ಲಿ ಮಾತ್ರ ಎಲ್ಲರೂ ನೆಂಟರೆ
ಅರೇ ಈ ಸಮಾಜವೇ ಹೀಗಲ್ಲವೆ?
ಎದುರುಗೊಂಡಾಗ
ಮುಖ ತಿರುಗಿಸಿ ಹೊರಟವರು,
ನಾ ಬಿದ್ದಾಗ ನೋಡಿ ನಕ್ಕವರು,
ಗರಿ ಬಿಚ್ಚಿ ಹಾರುವೆ ವೇಳೆಗೆ
ರೆಕ್ಕೆ ಕತ್ತರಿಸಿ ಆಕಾಶ ನೋಡಿದವರು
ನೀವಲ್ಲವೇ?
ಉಸಿರು ಹೊರಟಾಗ ಹೀಗೇಕೆ
ಬೊಬ್ಬೆ ಹೊಡೆಯುವಿರಿ
ಪ್ರೇಮ ಮತ್ತು ಮದಿರೆಗೆ ವ್ಯತ್ಯಾಸವೇನಿಲ್ಲ
ಎರಡು ಅಮಲಿನ ಅಮೃತವೇ
ಉಂಡವರಿಗಷ್ಟೇ ಗೊತ್ತು
ನಿದಿರೆ ಮರೆತ ರಾತ್ರಿಗಳ ನಶೆಯೆಂದರೇನು
ಬದುಕಿನ ನಿಷೆಯೆಂದರೇನು ಅಂತ.
ಉಚಿತ ಉಪದೇಶಗಳನ್ನು
ಎಲ್ಲರೂ ಕೊಡಬಲ್ಲರು
ಕೋಗಿಲೆ ಕಾಗೆಯಾಗಲಾರದು
ಇಲ್ಲದ ಹಣೆಪಟ್ಟಿ ಕಟ್ಟದೇ ಬನ್ನಿ
ನನ್ನೊಳಗಿನ ದಮನಿಗಳೊಳಗೆ
ಹರಿದು ಉರಿದ ಜ್ವಾಲೆಗಳನ್ನು,
ಅಕಾಲಿಕವಾಗಿ ಬತ್ತಿ ಬೂದಿಯಾದ
ಎದೆಯಾಳದ ಜೀವ ಕಾವ್ಯವನ್ನು ತೋರಿಸುವೆ
ನಿಮ್ಮ ಸಾಚಾತನದ ಹಸಿವುಗಳಿಗೆ
ನಾ ಮೇವಾಗಲಾರೆ
ಎದೆಯೊಡ್ಡಿ ನಿಂತಿದ್ದೇನೆ ಬನ್ನಿ
ಒಂದಷ್ಟು ಮಾತಾಡೋಣ
ನಿಮ್ಮ ತತ್ವ ಸಿದ್ದಾಂತಗಳನ್ನು ವಿಮರ್ಶಿಸೋಣ
ಸುಖಾಸುಮ್ಮನೆ ಈ ಕಣ್ಣುಗಳಿಗೆ ಮಣ್ಣೆರಚಬೇಡಿ
ಅರ್ಧ ಚಂದ್ರನ ಬೆಳದಿಂಗಳ ಮಸುಕಲ್ಲಿ
ನಲುಗಿದ ಇನ್ನಷ್ಟು ಕವಿತೆಗಳನ್ನು
ನಾ ಓದಬೇಕಿದೆ
ಜಗದ ನೋವಿಗೆ ತಣ್ಣಗೆ ಮಿಡಿಯಬೇಕಿದೆ
ಇನ್ನಾದರೂ ನನ್ನ ಪಾಡಿಗೆ ಬಿಡಿ…….
-ನಾಗೊಂಡಹಳ್ಳಿ ಸುನಿಲ್.