ಇಮಾಮ್ ಮದ್ಗಾರ ಕವಿತೆ-ಬಂದುಬಿಡು

ನಂಗೊತ್ತು ನಿಂಗೆ ಬಿಡುವಿಲ್ಲ
ಬರುವ ಮನಸ್ಸಿದ್ದರೆ
ಬರಲು ಬಿಡುವೇಕೆ ?
ಬಂದುಬಿಡು ಹಾಜರಾಗಿಬಿಡು.

ಎಲಕ್ಕಿ ಪುದೀನಾ ದೊಂದಿಗೆ
ಬೆಂದ ನಿನ್ನಿಷ್ಟದ ಚಹಾ
ಎರಡುಹನಿ ನಿಂಬೆರಸ
ಮೇಲಿಷ್ಟು ಜೇನಹನಿ !
ಮುಕ್ಕಾದ ಕಪ್ಪು
ಕಾಯುತಿದೆ.
ಮತ್ತೆ ಬಿಸಿಯಾಗಿ
ತುಟಿಗೆ ತುಟಿ ತಾಕಲೆಂದೇ..
ಬಂದುಬಿಡು

ಸೋಡಾದೊಂದಿಗೆ
ಹದವಾಗಿ ಬೆರೆತ
ಹಳೆಯ ಮದ್ಯ !
ಜೊತೆಗೆ ಮಂಜುಗಡ್ಡೆ
ಮತ್ತು ಅದೇ..ಬಿರಿದು
ಹೋದ ಹಳೆಯ ಗ್ಲಾಸು !
ತುಟಿಯ ತಾಕುವಿಕೆಗೆ
ಕಾಯುತಿದೆ ಬಂದುಬಿಡು

ನಾನಾ ತರದ ಮಸಾಲೆ
ಯೊಂದಿಗೆ ಬೆರೆತು
ಮಜವಾಗಿ ಬೆಂದು
ಘಮಘಮಿಸುವ ನಾಟಿ
ಕೋಳಿಯ ಸಾರು !
ಸುಡು ಸುಡುವ ಜೋಳದ
ರೊಟ್ಟಿ ಮೇಲೆರಡು ಉಳ್ಳಾಗಡ್ಡಿ ಕಾಯುತಿವೆ ಬಂದುಬಿಡು

ಹಳೆಯ ಸವಿ ಘಳಿಗೆಗಳಿವೆ
ಸತ್ತ ಮನಸಿನ ನನಸಾಗದ
ಎಷ್ಟೋ ಸಿಹಿ ಕನಸುಗಳಿವೆ
ಕೆಲಹೊತ್ತು ಜೊತೆಗೂಡಿ
ಸಮಯ ಸಾಯಿಸ
ಬಹುದು ಎಲ್ಲ..ನೋವ ಮರೆತು !

ಮೌನವಾಗಿರಲು
ನಾನು ಸಿದ್ಧ!
ಅದು ಅಭ್ಯಾಸ ವಾಗಿದೆನಗೆ
ಮಾತನಾಡಲು ನೀನು…
ಬರಬೇಕಷ್ಟೇ.
ಮಾತು ಕೇಳಲು ನಾನೂ
ಕಾಯುತಿರುವೆ
ನನ್ನ ಮನವೂ!
ಬಂದುಬಿಡು

ಅಂತ್ಯವಿಲ್ಲವಂತೆ
ಅನುರಾಗಕ್ಕೆ !
ಮದ್ದೇ ಇಲ್ಲವಂತೆ
ಮತ್ಸರಕ್ಕೆ !
ಮತ್ಸರವಂತೂ ನಂಗೇ
ಭೇಟಿಯಾಗಿಲ್ಲ
ಅನುರಾಗ ಸತ್ತೇಇಲ್ಲ
ಸುಖ ದುಃಖ ಗಳ
ಮಾತನಾಡೋಣ
ಬಂದುಬಿಡು

Leave a Reply

Back To Top