ಡಾ. ನಿರ್ಮಲ ಬಟ್ಟಲ ಅವರ ಕವಿತೆ-ಚಹಾ ನೆಪ….

ಒಂದಿಷ್ಟು ಸಮಯ
ಮಾಡಿಕೊಂಡು
ನೀನು ನನ್ನ ಬಳಿ
ಬರುವುದಾದರೆ ಈಗಲೇ
ಬಂದು ಬಿಡು
ಒಂದಿಷ್ಟು ಸವಿ
ಘಳಿಗೆಗಳನು
ಜೊತೆ ಗೂಡಿ
ಕಳೆಯಬಹುದು
ಮೌನದಲ್ಲಾದರು ಸರಿ
ಮಾತಿನಲ್ಲಾದರೂ ಸರಿ

ಮಾತು ಕಥೆ
ಹರಟೆ ನಗು
ಮುನಿಸು ಬೇಸರ
ತಂಟೆ ತಕರಾರು
ಎಲ್ಲ ಬೆರೆಸಿ ಈ ಕ್ಷಣಗಳ
ಮಧುರ ಮಾಡೋಣ

ಎಂದು ಸವಿಯದಂತ
ಸವಿಯ ಕೊಡುವ
ಕೆನೆ ಹಾಲಿಗೆ ಬೆಲ್ಲ ಬೆರೆಸಿ
ಚಹದ ಎಲೆಗಳ ಜೊತೆ
ಶುಂಠಿ ಏಲಕ್ಕಿಬೆರೆತ ವಿಭಿನ್ನ
ರಸ ಪರಿಮಳ
ಸೂಸುವ ಬಿಸಿ ಪೇಯ
ಮುಗುಳು ನಗುತಾ ತುಟಿಗಿಟ್ಟು
ನೆನಪುಗಳ ಮೆಲುಕು
ಹಾಕೋಣ

ಏನಾದರೊಂದು ನೆಪ
ಹೇಳಿ ಬಂದು ಬಿಡು
ಈಗಷ್ಟೇ ಕಪ್ಪು ಮೋಡ ಹವಣಿಸುತ್ತಿದೆ ಹನಿಯೊಡೆಯಲು
ಇಬ್ಬರೂ ಸೇರಿ
ಚಹಾ ಕುಡಿಯುತ
ಮತ್ತೆ ಸ್ನೇಹಕ್ಕೆ
ಬಣ್ಣ ರುಚಿ ಶಕ್ತಿ
ತುಂಬೋಣ


Leave a Reply

Back To Top