ಕಾವ್ಯ ಸಂಗಾತಿ
ಇಂದಿರಾ ಕೆ.
“ಪ್ರೆಮಸುಧೆಯ ಹರಿಸು”
ಬಾನಿನಲ್ಲಿ ಭಾವನೆಗಳು ವಿರಹವಾಗಿ
ತೋರುತಿರುವ ತಳಮಳದ ಈ ಬಗೆ
ಬಿತ್ತಿದ ಕನಸುಗಳು ಕಣ್ಣಂಚಲೆ
ಕರಗುತಿರುವ ಎದೆಯ ಈ ಧಗೆ..
ಬಯಸುತಿರುವೆ ಸೇರು ಬಾ ಕರಕಂಜದ ಬಂಧನ
ಬೇಡೆನೆಗೆ ನೀನಲ್ಲದ ಸಂಗಾತಿ ಸಜೆ
ನಿರುಕಿಸುತಿರುವೆ ನಿಂತಲ್ಲೆ ನೈದಿಲೆಯ ನಯನ
ಸಾಕಿನ್ನು ಪ್ರೀತಿ ವಿರಾಮದ ರಜೆ..
ಸಾಧಿಸುತಿರುವೆ ನಿನ್ನೊಲವನ್ನು
ಯಾವ ಜನುಮದ ಹಗೆ
ಕೆಣಕಿರಲು ನಿನ್ನಲ್ಲಿಯ ಮೌನವನು
ಬರುವೆಯಾ ಕನಲಿಂದ ಹಾಗೇ ಸುಮ್ಮನೆ..
ಮಲ್ಲಿಗೆಯ ಘಮಲಿನ ಮೇಘ ಸಂದೇಶ
ಅರುಹಿತಿನಗೆ ತಲ್ಲಣಿಸುವ ಕೋರಿಕೆ
ಕಂಗಳೇ ಪಿಸುಗುಟ್ಟಿ ಯಾಚಿಸುತಿವೆ
ಆಗಮಿಸು ನೀ ಇನ್ನು ಮೆಲ್ಲನೆ…
ಕಾದಿಹೆನು ತವಕದಿ ನೀ ಬರುವ ಹಾದಿಯ
ಖುಷಿಯ ಕರುಣಿಸು ಜೀವಂತಿಕೆ ಇಲ್ಲದ ಈ ಜೀವಕೆ
ಉತ್ಸುಕದಿ ನೀ ಬಂದು ಜೀವ ಉಸಿರು ತುಂಬಿ
ಒಲವ ಒರತೆಯ ಪ್ರೇಮಸುಧೆಯ ಹರಿಸು ಈ ಮನಕೆ…
ಇಂದಿರಾ.ಕೆ