ಮಧುಮಾಲತಿ ರುದ್ರೇಶ್ ಬೇಲೂರು ಕವಿತೆ-ಶಾಂತಿಧೂತ

ಜಗದ ಹೂದೋಟಕೆ ಶಾಂತಿ ಸಹನೆಯ ಬೀಜ ಬಿತ್ತಿದೆ
ಹೆತ್ತವರ ಪೂಜಾ ಫಲವು ನೀ ಎನಿಸಿದೆ

ಎಲ್ಲರಂತೆ ನೀ ಲೌಕಿಕ ಸುಖದ ಹೊಸ್ತಿಲಿನಲ್ಲಿದ್ದೆ
ಸತಿಸುತರ ಪ್ರೇಮದ ಅಮೃತವನುಂಡಿದ್ದೆ

ಅದಾವ ಮಾಯೆಗೆ ಮನಸೋತು ಶರಣಾಯಿತು
ಅದಾವ ಕೋಲ್ಮಿಂಚು ಭವ ಬಂಧನವ ಕಳಚಿತು

ಒಂಟಿಯಾಗಿ ನಡೆದೆ ದೈವತ್ವದ ಶಿಖರಕೇರಿದೆ
ಸರಳ ಜೀವನ ತತ್ವವ ಜಗಕೆ ಸಾರಿದೆ

ಆಸೆಯೇ ದುಃಖಕ್ಕೆ ಮೂಲವೆಂದರುಹಿದೆ ನೀನಂದು
ದುರಾಸೆಯ ಕೂಪದಲಿ ಬಸವಳಿಯುತಿದೆ ಜಗ ತಾನಿಂದು

ಪ್ರತಿ ಜೀವಿಯಲೂ ಭಗವಂತನನ್ನೇ ಕಂಡೆ
ಅಖಂಡ ಧರ್ಮಪ್ರಚಾರವನೇ ಕೈಗೊಂಡೆ

ಅಂಗೂಲಿಮಾಲ ಆಮ್ರಪಾಲಿಯರ ಮನಗೆದ್ದು ಬುದ್ಧನಾದೆ
ಪ್ರೀತಿ ಶಾಂತಿ ದಯೆ ಕರುಣೆಗಳಿಗೆ ನೀ ಬದ್ಧನಾದೆ

ಯುಗ ಹೊಗಳಿದ ತೇಜವು ನೀ ಶಾಂತಿಯ ಬಂಧು
ಜಗ ಬೆಳಗಿದ ದೀಪವು ನೀ ಕಾರುಣ್ಯ ಸಿಂಧು

ಶಬರಿ ತಾನಾಗಿಹಳಿಂದು ಧರಣಿ ನಿನ್ನಾಗಮನಕೆ
ಬಾ ಇಲ್ಲಿ ಸಂಭವಿಸು ಬೆಳಕ ಬೀರಲು ಜಗಕೆ

ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ


One thought on “ಮಧುಮಾಲತಿ ರುದ್ರೇಶ್ ಬೇಲೂರು ಕವಿತೆ-ಶಾಂತಿಧೂತ

  1. ಹೊಸಬರಹಗಾರರನ್ನು ಪ್ರೋತ್ಸಾಹಿಸುತ್ತಿರುವ ತಮಗೆ ತುಂಬು ಧನ್ಯವಾದಗಳು

Leave a Reply

Back To Top