ಕಾವ್ಯ ಸಂಗಾತಿ
ವ್ಯಾಸ ಜೋಷಿ
“ಅಮ್ಮನ ಕುರಿತ ತನಗಗಳು”
ತನಗಗಳು
ಸೃಷ್ಟಿಕರ್ತ ದೇವರೇ
ಧರೆಗೆ ಬಂದೊಡನೆ
ಕರೆದಿಲ್ಲ ನಿನ್ನನ್ನ,
ಕೂಗಿದ್ದು ಅಮ್ಮನನ್ನ!
ಓ ತ್ರಿಲೋಕದೊಡೆಯ
ನಾ ಹೆಚ್ಚು ನಿನಗಿಂತ ,
ನನಗಿದ್ದಾಳೆ ಅಮ್ಮ
ನಿನಗೆಲ್ಲಿಹಳಮ್ಮ?
ಅಮೃತವ ಉಣಿಸಿ
ನಡೆಸುವಳು ಅಮ್ಮ,
ಸಂಸ್ಕಾರವ ಕಲಿಸಿ
ಬೆಳೆಸುವಳು ಅಮ್ಮ.
ಪೆಟ್ಟಾದ ಮಗುವಿಗೆ
ನೋವಿನ ನಂತರದ
ಮೊದಲ ನೆಮ್ಮದಿಯು
ಆ ಅಮ್ಮನ ಧ್ವನಿಯು.
ಇದ್ದರೂ ಬಡತನ
ಉಣಿಸುವಳು ಅಮ್ಮ,
ತನ್ನ ಹಸಿವಿಲ್ಲೆಂದು
ಸುಳ್ಳು ಹೇಳುವಳಮ್ಮ
ಕಷ್ಟವೇನೇ ಇರಲಿ
ನೋವನೆಲ್ಲ ಮರೆತು
ಮತ್ತೆ ಎದ್ದು ನಿಲ್ಲುವ
ಗಟ್ಟಿಗಿತ್ತಿಯೇ ಅಮ್ಮ.
———————————-
ವ್ಯಾಸ ಜೋಶಿ.