“ಮೂತ್ರಪಿಂಡದ ಕಲ್ಲುಗಳು” ವೈದ್ಯಕೀಯ ಲೇಖನ ಡಾ.ಅರಕಲಗೂಡು ನೀಲಕಂಠ ಮೂರ್ತಿ.

ರಾತ್ರಿ ಮಲಗಿದ್ದು ತುಂಬ ತಡವಾಗಿತ್ತು; ವಾಸ್ತವವಾಗಿ ಒಂದು ಜಟಿಲ ಸಮಸ್ಯೆ ತಲೆ ಹೊಕ್ಕಿದ್ದರಿಂದ ನಿದ್ದೆ ಬರದೆ. ಹಾಗಾಗಿ ಬೆಳಿಗ್ಗೆ ಕರೆಗಂಟೆ ಬಡಿದಾಗ ಎದ್ದು, ಇಷ್ಟು ಬೆಳಿಗ್ಗೆ ಯಾರಿರಬಹುದು ಎಂದು ಯೋಚಿಸುತ್ತ ಮುಂಬಾಗಿಲು ತೆಗೆದಾಗ, ನನ್ನ ಬಂಧು ಒಬ್ಬರು ತಮ್ಮ ಮಗನನ್ನು ಕರೆತಂದಿದ್ದರು. ಆ ಇಪ್ಪತ್ತರ ಆಸುಪಾಸಿನ ಹುಡುಗ ತುಂಬ ಹೊಟ್ಟೆ ನೋವಿನಿಂದ ನಿಲ್ಲಲಾರದೆ ಕಷ್ಟದಲ್ಲಿದ್ದ. ವಾಂತಿ ಕೂಡ ಆಗುತ್ತಿತ್ತಂತೆ. ಆಹಾರದ ವ್ಯತ್ಯಾಸ ಏನಾದರೂ ಆಗಿದೆಯ ಎಂದು ಕೇಳುತ್ತಲೆ, ಆತನನ್ನು ಮಲಗಿಸಿ ಪರೀಕ್ಷೆ ಮಾಡತೊಡಗಿದೆ. ಅಷ್ಟರಲ್ಲಿ ಆಹಾರದ ವ್ಯತ್ಯಾಸ ಆಗಿರಲಿಲ್ಲ ಎಂಬ ಉತ್ತರ ಸಿಕ್ಕಿ, ಹಾಗಾದರೆ ಈತನಿಗೆ ಕಿಡ್ನಿ ಸ್ಟೋನ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಿ, ನೋವು ಮತ್ತು ವಾಂತಿ ಶಮನಕ್ಕೆ ಮಾತ್ರೆ ಮತ್ತು ಉದರದ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಸಲು ಬರೆದುಕೊಟ್ಟೆ. ಕ್ಲಿನಿಕ್ಕಿಗೆ ರಿಪೋರ್ಟ್ ತಂದಾಗ, ಎಡಗಡೆ ಮೂತ್ರನಾಳದಲ್ಲಿ ಕಲ್ಲು ಬಂಧಿಯಾಗಿ, ಮೂತ್ರ ಮುಂದೆ ಹರಿಯದೆ ಎಡ ಕಿಡ್ನಿ ಕೂಡ ಊದಿಕೊಂಡಿತ್ತು. ಆದ್ದರಿಂದ ತಕ್ಷಣ ಕಿಡ್ನಿ ತಜ್ಞರಿರುವ ಆಸ್ಪತ್ರೆಗೆ ಹೋಗಲು ಬರೆದುಕೊಟ್ಟೆ.

ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದೂಳಗೆ ಉಂಟಾಗುವ ಖನಿಜ ಮತ್ತು ಲವಣಗಳ ಗಡಸು ಪದಾರ್ಥಗಳಿಂದ ಆಗುವಂಥವು. ವೈದ್ಯಕೀಯ ಭಾಷೆಯಲ್ಲಿ ಕಿಡ್ನಿ ಸ್ಟೋನ್ಸ್, ರೀನಲ್ ಕ್ಯಾಲ್ಕ್ಯುಲೈ ಅಥವ ನೆಫ್ರೋ ಲಿಥಿಯಾಸಿಸ್ ಅಥವ ಯೂರೊಲಿಥಿಯಾಸಿಸ್ ಎನ್ನುವರು.
ಅತಿಯಾದ ಬೊಜ್ಜು, ಕೆಲವು ಆಹಾರ,
ಕೆಲವು ಕಾಯಿಲೆಗಳು ಮತ್ತು ಕೆಲವು ಔಷಧಗಳು ಹಾಗು ಕೆಲವು ಪೋಷಕ ಪದಾರ್ಥಗಳು, ಮೂತ್ರಪಿಂಡದ ಕಲ್ಲುಗಳಿಗೆ ಅನೇಕ ಕಾರಣಗಳಲ್ಲಿ ಪ್ರಮುಖವಾದವು. ಇಡೀ ಮೂತ್ರನಾಳದ ವ್ಯವಸ್ಥೆಯಲ್ಲಿ, ಮೂತ್ರಪಿಂಡದಿಂದ ಮೂತ್ರಕೋಶದವರೆಗು ಎಲ್ಲಿ ಬೇಕಾದರೂ ಕಲ್ಲುಗಳು ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಮೂತ್ರವು ಸಾರವರ್ಧಿತವಾಗಿ (concentrate) ಖನಿಜಗಳ ಹುಡಿಯೆಲ್ಲ ಅಂಟಿಕೊಂಡು ಸ್ಫಟಿಕಗೊಂಡಾಗ (crystallize) ಕಲ್ಲುಗಳಾಗಿ ಪರಿವರ್ತಿತವಾಗುತ್ತವೆ.

ಮೂತ್ರಪಿಂಡದ ಕಲ್ಲುಗಳು ಸಾಗುವಾಗ ಸಾಕಷ್ಟು ನೋವಾಗುವುದು ಸಹಜವಾದರು, ಸಮಯಕ್ಕೆ ಸರಿಯಾಗಿ ಅವುಗಳ ಇರುವಿಕೆಯ ಬಗ್ಗೆ ತಿಳಿದು ಚಿಕಿತ್ಸೆ ಪಡೆದರೆ ಹೆಚ್ಚು ಹಾನಿ ಆಗುವುದಿಲ್ಲ. ರೋಗಿಯಲ್ಲಿ ಮೂತ್ರಪಿಂಡದ ಕಲ್ಲಿರುವ ಪರಿಸ್ಥಿತಿಗೆ ಅನುಗುಣವಾಗಿ, ಕೆಲವರಿಗೆ ಕೇವಲ ನೋವುನಿವಾರಕ ಮಾತ್ರೆ ಸೇವನೆ ಮತ್ತು ಹೆಚ್ಚು ನೀರು ಕುಡಿಯುವುದರಿಂದಷ್ಟೆ  ಕಲ್ಲು ಹೊರಗೆ ಬಂದುಬಿಡಬಹುದು. ಇನ್ನು ಕೆಲವರಿಗೆ, ಅದರಲ್ಲೂ ಕಲ್ಲು ಮೂತ್ರನಾಳದೊಳಗಿದ್ದರೆ, ಜೊತೆಗೆ ಮೂತ್ರದ ಸೋಂಕು ಕೂಡ ಇದ್ದರೆ ಅಥವ ಇನ್ನಿತರೆ ತೊಡಕುಗಳಿದ್ದರೆ, ಅಂತಹ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಸಹ ಅವಶ್ಯಕ ಆಗಬಹುದು.

ರೋಗ ಲಕ್ಷಣಗಳು:
ಮೂತ್ರಪಿಂಡದ ಕಲ್ಲು ಮೂತ್ರಪಿಂಡದ ಒಳಗೆ ಚಲಿಸಿದಾಗ ಅಥವ ಯೂರಿಟರ್  (ಮೂತ್ರನಾಳ) ಒಳಗೆ ಹೋದಂಥ ಸ್ಥಿತಿಗಳನ್ನುಳಿದು, ಸಾಮಾನ್ಯವಾಗಿ ಯಾವುದೆ ಲಕ್ಷಣಗಳ ಸೂಚನೆ ಕೊಡುವುದಿಲ್ಲ. ಯೂರಿಟರ್ ಎಂಬುದು ಮೂತ್ರಪಿಂಡ ಹಾಗು ಮೂತ್ರಕೋಶಗಳ ನಡುವೆ ಸಂಪರ್ಕ ಏರ್ಪಡಿಸುವ ಕೊಳವೆ. ಹಾಗಾಗಿ, ಮೂತ್ರನಾಳದ ಒಳಗೆ ಕಲ್ಲು ಬಿಡದಿ ಬಿಟ್ಟ ಸಂದರ್ಭದಲ್ಲಿ ಮೂತ್ರದ ಮುಂದಿನ ಹರಿವಿಗೆ ಅಡಚಣೆ ಆಗುವುದರಿಂದ ಮೂತ್ರಪಿಂಡವು ಊದಿಕೊಂಡು, ಮೂತ್ರನಾಳದ ಸೆಳೆತವೂ ಆಗಿ ಅಗಾಧ ನೋವಿಗೆ ಕಾರಣ ಆಗಬಹುದು. ಅಂತಹ ಸಂದರ್ಭದಲ್ಲಿ ರೋಗದ ಲಕ್ಷಣಗಳು ಯಾವುವೆಂದರೆ —

… ಪಕ್ಕೆಲುಬಿನ ಕೆಳಗೆ ಮತ್ತು ಉದರದ
ಒಂದು ಪಾರ್ಶ್ವದಲ್ಲಿ ತೀಕ್ಷ್ಣ ನೋವು ಅನುಭವವಾಗುವುದು.
… ಆ ನೋವು ಕೆಳ ಹೊಟ್ಟೆ ಮತ್ತು ತೊಡೆಸಂದಿಯ ತನಕ ಹರಡಬಹುದು.
… ನೋವು ಅಲೆಯಲೆಯಾಗಿ ಹಾಗು ತೀಕ್ಷ್ಣತೆಯಲ್ಲಿ ಏರಿಳಿತಗಳಾಗಬಹುದು.
… ಮೂತ್ರ ಮಾಡುವಾಗ ನೋವು ಅಥವ ಉರಿ ಅನುಭವಿಸಬಹುದು.
… ಗುಲಾಬಿ, ಕೆಂಪು ಅಥವ ಕಂದು ಬಣ್ಣದ ಮೂತ್ರ ವಿಸರ್ಜನೆ.
… ಮಬ್ಬಾದ ಅಥವ ಕೆಟ್ಟ ವಾಸನೆಯ ಮೂತ್ರ ವಿಸರ್ಜನೆ.
… ಸ್ವಲ್ಪ ಸ್ವಲ್ಪ ಮಾತ್ರ ಮೂತ್ರ ಬರುವಿಕೆ ಅಥವ ಆಗಾಗ ಮೂತ್ರ ಮಾಡಬೇಕಾಗುವ ಜರೂರು ಅಥವ ಮೂತ್ರ ವಿಸರ್ಜನೆ ಮಾಡುವಂತಹ ನಿರಂತರ ಅನುಭವ.
… ಓಕರೀಕೆ ಮತ್ತು ವಾಂತಿ.  
… ಸೋಂಕು ಕೂಡ ಇದ್ದರೆ, ಅದರಿಂದ ಜ್ವರ ಮತ್ತು ಚಳಿ.
ಇಷ್ಟಲ್ಲದೆ, ಮೂತ್ರಪಿಂಡದ ಕಲ್ಲಿನ ಮೂತ್ರವ್ಯವಸ್ಥೆಯೊಳಗಿನ ಚಲನೆಯ ಮೇಲೆ, ನೋವಿನ ತೀವ್ರತೆಯಲ್ಲಿ ಬದಲಾವಣೆಗಳಾಗಬಹುದು.

ನೋವು ಅಗಾಧವಾಗಿ ಕೂರುವುದಾಗಲಿ ಅಥವ ನೆಮ್ಮದಿಯ ಸ್ಥಿತಿಯಲ್ಲಿ ಇರುವುದಾಗಲಿ ಕಷ್ಟವಾದಾಗ, ಜೊತೆಗೆ ಓಕರಿಕೆ ಅಥವ ವಾಂತಿಯೂ ಇದ್ದರೆ, ಜ್ವರ ಹಾಗು ಚಳಿ ಕೂಡ ಇದ್ದರೆ, ಮೂತ್ರದಲ್ಲಿ ರಕ್ತ ಕಂಡರೆ ಮತ್ತು ಮೂತ್ರ ವಿಸರ್ಜನೆಯೆ ತೊಂದರೆಯಾದರೆ ತಕ್ಷಣ ವೈದ್ಯರನ್ನು ಕಾಣಬೇಕಾಗಬಹುದು.

ಕಾರಣಗಳು:
ಮೂತ್ರಪಿಂಡದ ಕಲ್ಲಿಗೆ ಸಾಮಾನ್ಯವಾಗಿ ನಿರ್ದಿಷ್ಟ ಒಂದೇ ಒಂದು ಕಾರಣ ಇರುವುದಿಲ್ಲ; ಬದಲಿಗೆ, ಅನೇಕ ಅಂಶಗಳ ಕಾರಣದಿಂದ ಉಂಟಾಗುವುದು. ಮೂತ್ರದಲ್ಲಿ ಕ್ಯಾಲ್ಸಿಯಂ, ಆಗ್ಸಲೇಟ್ ಮತ್ತು ಯೂರಿಕ್ ಆಮ್ಲಗಳು ಅಧಿಕವಾಗಿ ಹರಳುಗಳಂತೆ ಆದಾಗ, ಅವುಗಳನ್ನು ನಿಸ್ಸಾರ ಮಾಡುವುದು ಆಗದಂತಹ ಸ್ಥಿತಿಯಲ್ಲಿ ಕಲ್ಲುಗಳು ಮೂಡುತ್ತವೆ. ಅಷ್ಟೇ ಅಲ್ಲದೆ, ಹಾಗೆ ಹರಳುಗಳು ಒಟ್ಟಾಗಿ ಕೂಡಿಕೊಳ್ಳದ ಹಾಗೆ ತಡೆಯುವ ಪದಾರ್ಥಗಳು ಮೂತ್ರದಲ್ಲಿ ಇಲ್ಲವಾದಾಗ, ಅವು ಕಲ್ಲುಗಳಾಗಿ ಮಾರ್ಪಾಡಾಗಲು ಸರಿಯಾದಂತಹ ಪರಿಸರವಾಗುತ್ತದೆ.

ಕಲ್ಲುಗಳ ವಿಧಗಳು:
ಯಾವ ಮಾದರಿಯ ಕಲ್ಲು ಇದೆ ಎಂಬ ಅರಿವಾದಾಗ, ಅದು ಆಗಬಹುದಾದ ಕಾರಣಗಳನ್ನು ತಿಳಿಯುವ ಸಾಧ್ಯತೆ ಇದ್ದು, ಭವಿಷ್ಯದಲ್ಲಿ ಮತ್ತೆ ಮತ್ತೆ ಕಲ್ಲು ಉಂಟಾಗದ ಹಾಗೆ ರೋಗಿಗೆ ತಿಳಿಸಲು ಸಾಧ್ಯವಾಗುತ್ತದೆ. ರೋಗಿಯು ಅಂತಹ ಒಂದು ಕಲ್ಲನ್ನು ಉಳಿಸಿಕೊಂಡು ವೈದ್ಯರಿಗೆ ನೀಡಿದರೆ, ಅದನ್ನು ವಿಶ್ಲೇಷಿಸುವವುದು ಸಾಧ್ಯವಾಗುತ್ತದೆ.

ಕಲ್ಲಿನ ಮಾದರಿಗಳು–

… ಕ್ಯಾಲ್ಸಿಯಂ ಕಲ್ಲುಗಳು – ಕಲ್ಲುಗಳಲ್ಲಿ ಅತ್ಯಂತ ಅಧಿಕವಾಗಿ ಕಂಡುಬರುವುದೆ ಕ್ಯಾಲ್ಸಿಯಂ ಕಲ್ಲುಗಳು; ಸಾಮಾನ್ಯವಾಗಿ ಕ್ಯಾಲ್ಸಿಯಂ ಆಗ್ಸಲೇಟ್ ಮಾದರಿ. ಆಗ್ಸಲೇಟ್ ಅಥವ ಆಗ್ಸಾಲಿಕ್ ಆಮ್ಲ ಎಂಬುದು ಸಸ್ಯಗಳಲ್ಲಿ ಕಂಡುಬರುತ್ತದೆ. ಅಲ್ಲದೆ, ಅದು ಮಾನವರ ಯಕೃತ್ತಿನಲ್ಲಿ ದಿನನಿತ್ಯ ತಯಾರಾಗುವ ಪದಾರ್ಥ ಮತ್ತು ಆಹಾರದಿಂದಲು ದೊರಕುತ್ತದೆ ಕೂಡ. ಕೆಲವು ಹಣ್ಣು, ತರಕಾರಿ ಹಾಗು ಬೀಜಗಳಲ್ಲಿ ಮತ್ತು ಚಾಕ್ಲೆಟ್ಗಳಲ್ಲಿ ಹೇರಳವಾಗಿ ಕಂಡುಬರುತ್ತದೆ.
ಆಹಾರದ ಅಂಶಗಳಲ್ಲದೆ, ವಿಟಮಿನ್ ಡಿ ಅನ್ನು ಅಧಿಕವಾಗಿ ಉಪಯೋಗಿಸಿದರೆ, ಕೆಲವು ಚಯಾಪಚಯದ ರೋಗಗಳು (metabolic diseases) ಮತ್ತು ಕರುಳಿನ ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ ಕ್ಯಾಲ್ಸಿಯಂ ಅಥವ ಆಗ್ಸಲೇಟ್ ಅಧಿಕವಾಗುತ್ತದೆ.                
ಕ್ಯಾಲ್ಸಿಯಂ ಕಲ್ಲುಗಳಲ್ಲಿ ಆಗ್ಸಲೇಟ್ ಮಾತ್ರ ಅಲ್ಲದೆ, ಕ್ಯಾಲ್ಸಿಯಂ ಫಾಸ್ಫೇಟ್ ಮಾದರಿ ಕಲ್ಲುಗಳು ಸಹ ಸಾಧ್ಯ.

… ಸ್ಟ್ರೂವೈಟ್ ಕಲ್ಲುಗಳು – ಮೂತ್ರನಾಳದ ಸೋಂಕಿನಿಂದ ಉಂಟಾಗುವ ಕಲ್ಲುಗಳು. ಸ್ಟ್ರೂವೈಟ್ ಕಲ್ಲುಗಳು ದಿಢೀರನೆ ಅತಿ ದೊಡ್ಡ ಕಲ್ಲುಗಳಾಗಬಹುದು. ಕೆಲವೊಮ್ಮೆ ಯಾವ ಥರದ ಲಕ್ಷಣಗಳೂ ಇಲ್ಲದೆ.

… ಯೂರಿಕ್ ಆಮ್ಲದ ಕಲ್ಲುಗಳು – ಅತಿಸಾರವಾಗಿ ಅಧಿಕ ದ್ರವವನ್ನು ಕಳೆದುಕೊಂಡಾಗ ಅಥವ ಕರುಳಿನ ಹೀರಿಕೆಯಲ್ಲಿ ವ್ಯತ್ಯಯ ಆದಾಗ, ಯೂರಿಕ್ ಆಮ್ಲದ ಕಲ್ಲು ಉಂಟಾಗಬಹುದು. ಅಲ್ಲದೆ ಅಧಿಕ ಪ್ರೋಟೀನ್ ಆಹಾರ ಸೇವಿಸುವವರಲ್ಲಿ, ಮಧುಮೇಹ ಮುಂತಾದ ಚಯಾಪಚಯದ ತೊಂದರೆಯುಳ್ಳ ರೋಗಿಗಳಲ್ಲಿ ಸಹ ಈ ರೀತಿಯ ಕಲ್ಲು ಸಾಮಾನ್ಯ. ಕೆಲವು ಆನುವಂಶಿಕ ಕಾರಣಗಳಿಂದ ಸಹ ಈ ರೀತಿಯ ಕಲ್ಲುಗಳು ಸಾಧ್ಯ.

… ಸಿಸ್ಟೀನ್ ಕಲ್ಲುಗಳು – ಸಿಸ್ಟೀನ್ಯೂರಿಯ ಎಂಬ ಆನುವಂಶಿಕ ರೋಗಿಗಳಲ್ಲಿ ಕಂಡುಬರುವುದು. ಸಿಸ್ಟೀನ್ ಎಂಬುದು ದೇಹಕ್ಕೆ ಅವಶ್ಯವಾದ ಅಮೈನೋ ಆಮ್ಲ (amino acid).

ಅಪಾಯಕಾರಿ ಅಂಶಗಳು (risk factors):

… ವಂಶ ಅಥವ ಸ್ವಂತ ಹಿಂದೊಮ್ಮೆಯ ಕಾಯಿಲೆ  ಅನುಭವ – ಒಬ್ಬ  ವ್ಯಕ್ತಿಯ ವಂಶದಲ್ಲಿ ಯಾರಾದರು ಮೂತ್ರಪಿಂಡದ ಕಲ್ಲಿನ ತೊಂದರೆಯಿಂದ ಬಳಲಿದ್ದರೆ, ಅಂತಹ ವ್ಯಕ್ತಿಯಲ್ಲಿ ಕಲ್ಲು ಉಂಟಾಗುವ ಸಂಭವ ಹೆಚ್ಚು. ಅಲ್ಲದೆ ಒಬ್ಬ ವ್ಯಕ್ತಿಯು ತಾನೆ ಹಿಂದೊಮ್ಮೆ ಕಲ್ಲಿನ ತೊಂದರೆ ಅನುಭವಿಸಿದ್ದರೆ, ಅಂತಹ ವ್ಯಕ್ತಿಗೆ ಈ ಅಪಾಯ ಮತ್ತೆ ಮತ್ತೆ
ಉಂಟಾಗುವ ಸಂಭವ ಹೆಚ್ಚು.

… ನಿರ್ಜಲೀಕರಣ –  ಪ್ರತಿದಿನ ಹೆಚ್ಚು ನೀರು ಕುಡಿಯದ ಜನರಲ್ಲಿ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚು. ಅಧಿಕವಾಗಿ ಬೆವರುವವರಲ್ಲಿ ಮತ್ತು ಉಷ್ಣ ಹಾಗು ಒಣ ಹವಾಮಾನ ಇರುವ ಪ್ರದೇಶದ ಜನರಲ್ಲಿ ಕಲ್ಲು ಉಂಟಾಗುವ ಅಪಾಯ ಅಧಿಕ.

… ಕೆಲವು ಆಹಾರ ಪದಾರ್ಥಗಳು – ಉಪ್ಪು, ಸಕ್ಕರೆ ಮತ್ತು ಪ್ರೋಟೀನ್ ಹೆಚ್ಚಿರುವಂಥ ಆಹಾರ ಸೇವಿಸುವವರಲ್ಲಿ ಕೂಡ ಕೆಲವು ಮಾದರಿ ಕಲ್ಲುಗಳಾಗುವ ಸಂಭವ ಸಾಧ್ಯ. ತುಂಬ ಉಪ್ಪು ತಿನ್ನುವವರಲ್ಲಿ ಕ್ಯಾಲ್ಸಿಯಂ ಕಲ್ಲುಗಳು ಹೆಚ್ಚು.

… ಅಧಿಕ ಬೊಜ್ಜು – ಅಧಿಕ ಸೊಂಟದ ಅಳತೆ ಇರುವ ವ್ಯಕ್ತಿಗಳು ಮತ್ತು  ಬಿ.ಎಂ.ಐ. (body mass index) ಹಚ್ಚಿರುವವರಲ್ಲಿ ಕಲ್ಲು ಉಂಟಾಗುವ ಅಪಾಯ ಹೆಚ್ಚು.

… ಶಸ್ತ್ರಚಿಕಿತ್ಸೆ ಮುಂತಾಗಿ – ಬೈಪಾಸ್ ಶಸ್ತ್ರಚಿಕಿತ್ಸೆ, ಕರುಳಿನ ಉರಿಯೂತದ ಕಾಯಿಲೆ (inflammatory bowel disease), ದೀರ್ಘಕಾಲಿಕ ಅತಿಸಾರ ಮುಂತಾದ ಸಂದರ್ಭಗಳಲ್ಲಿ ಜೀರ್ಣಕಾರಿ ಪ್ರಕ್ರಿಯೆಯ ಮೇಲೆ ಆಗುವ ಬದಲಾವಣೆಗಳಿಂದ, ಕ್ಯಾಲ್ಸಿಯಂ ಮತ್ತು ನೀರಿನ ಹೀರುವಿಕೆಯ ಮೇಲಾಗುವ ಪರಿಣಾಮದಿಂದ, ಕಲ್ಲುಗಳನ್ನು ರೂಪಿಸುವ ಪದಾರ್ಥಗಳು ಹೆಚ್ಚಾಗುತ್ತವೆ.

… ಕೆಲವು ಪೋಷಕಗಳ ಹಾಗು ಔಷಧಗಳು – ವಿಟಮಿನ್ ಸಿ, ಆಹಾರದ ಪೋಷಕಗಳು, ವೀರೇಚಕ ಅಥವ ಭೇದಿ ಮಾಡಿಸುವ ಔಷಧ, ಕ್ಯಾಲ್ಸಿಯಂ ಯುಕ್ತ ಆಂಟಾಸಿಡ್, ಮತ್ತು ಮೈಗ್ರೇನ್ ಹಾಗು ಖಿನ್ನತೆ ಔಷಧ ಸೇವನೆಗಳು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಅಧಿಕಗೊಳಿಸುತ್ತವೆ. ಹಾಗೆಯೆ, ಮೂತ್ರದ ಸೋಂಕು, ಸಿಸ್ಟೀನ್ಯೂರಿಯ, ಹೈಪರ್ ಪ್ಯಾರಥೈರಾಯ್ಡಿಸಂ ಮುಂತಾದ ರೋಗಗಳು ಸಹ ಕಲ್ಲುಗಳ ಅಪಾಯಕ್ಕೆ ಕಾರಣ.

ರೋಗನಿರ್ಣಯ:
ವೈದ್ಯರು, ರೋಗಿಯಲ್ಲಿ ಮೂತ್ರಪಿಂಡದ ಕಲ್ಲಿರುವುದರ ಬಗ್ಗೆ ಸಂಶಯಪಟ್ಟಾಗ, ಕೆಲವು ಪರೀಕ್ಷೆ ಮತ್ತು ಕಾರ್ಯ ವಿಧಾನಗಳನ್ನು ಮಾಡಿಸಿ ರೋಗನಿರ್ಣಯ ಮಾಡುವರು.

… ರಕ್ತ ಪರೀಕ್ಷೆ – ಇದರಿಂದ ರಕ್ತದಲ್ಲಿ ಅಧಿಕ ಕ್ಯಾಲ್ಸಿಯಂ ಅಥವ ಯೂರಿಕ್ ಆಮ್ಲ ಇರುವುದು ತಿಳಿಯುತ್ತದೆ. ಅಲ್ಲದೆ ಮೂತ್ರಪಿಂಡದ ಆರೋಗ್ಯ ಸ್ಥಿತಿ ಸಹ ತಿಳಿದು, ಬೇರೆ ವೈದ್ಯಕೀಯ ಸ್ಥಿತಿಗಳ ಬಗೆಗೆ ಕೂಡ ತಿಳಿಯುವರು.

… ಮೂತ್ರದ ಪರೀಕ್ಷೆ – ಇಪ್ಪತ್ನಾಲ್ಕು ಘಂಟೆಗಳ ಮೂತ್ರದ ಸಂಗ್ರಹಣೆಯ ಪರೀಕ್ಷೆಯಿಂದ ಅಧಿಕ ಕಲ್ಲುಕಾರಕ ಲೋಹಗಳು ಮತ್ತು ಅತಿ ಕಡಿಮೆ ಕಲ್ಲು ಮಾಡದಂತಹ ಪದಾರ್ಥಗಳು ಮೂತ್ರದಲ್ಲಿ ಹೋಗುತ್ತಿರುವ ಅಂಶ ತಿಳಿಯಬಹುದು.

… ಚಿತ್ರಣ (imaging) – ಅತಿವೇಗದ ಅಥವ ದ್ವಂದ್ವ ಸಾಮರ್ಥ್ಯ ಸಿ.ಟಿ. (High-speed or duel energy computerized tomography) ಯಿಂದ ಅತಿ ಚಿಕ್ಕ ಚಿಕ್ಕ ಕಲ್ಲುಗಳೂ ಸಹ ಕಾಣಬಹುದು. ಅಲ್ಟ್ರಾ ಸೌಂಡ್ ಚಿತ್ರಣದಿಂದ ಕೂಡ ಮೂತ್ರಪಿಂಡದ ಕಲ್ಲಿನ ನಿರ್ಣಯ ಸಾಧ್ಯ.

… ಕಲ್ಲಿನ ವಿಶ್ಲೇಷಣೆ – ಜರಡಿಯ ಮೂಲಕ ರೋಗಿಯಿಂದ ಮೂತ್ರ ಮಾಡಿಸಿ ಹೊರಬಂದ ಕಲ್ಲನ್ನು ತರಿಸಿಕೊಂಡು ವಿಶ್ಲೇಷಿಸುವುದರಿಂದ, ಯಾವ ಮಾದರಿಯ ಕಲ್ಲು ಎಂಬುದನ್ನು ತಿಳಿದು, ವೈದ್ಯರು ಆ ರೀತಿಯ ಕಲ್ಲುಗಳು ಆಗುವ ಕಾರಣ ವಿವರಿಸಿ ಮುಂದೆ ಮತ್ತೆ ಬರದೆ ಇರುವಂತೆ ಏನು ಮಾಡಬೇಕೆಂಬ ವಿವರ ತಿಳಿಸಿಕೊಡುವರು.

ಚಿಕಿತ್ಸೆ:
ಸಾಮಾನ್ಯವಾಗಿ ಯಾವ ಮಾದರಿಯ ಕಲ್ಲು ಮತ್ತು ಅದರ ಕಾರಣದ ಮೇಲೆ ಚಿಕಿತ್ಸೆ ನೀಡುವರು.

ಕನಿಷ್ಠ ಲಕ್ಷಣಗಳ ಚಿಕ್ಕ ಕಲ್ಲುಗಳು:–
ಹೆಚ್ಚಿನ ಸಮಯ ಚಿಕ್ಕ ಕಲ್ಲುಗಳಿಗೆ ಆಕ್ರಮಣಕಾರಿ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯವಾಗಿ ಸಣ್ಣ ಕಲ್ಲುಗಳಿಗೆ –
… ದಿನಕ್ಕೆ 2 ರಿಂದ 4 ಲೀಟರ್ ನೀರು
ಕುಡಿಯುವುದರಿಂದ ಮೂತ್ರವು ಹೆಚ್ಚು ದ್ರವವಾಗಿ, ಕಲ್ಲು ಉಂಟಾಗುವ ಸಂಭವ ಕಮ್ಮಿ. ಬೇರೆ ಕಾಯಿಲೆಯ ಕಾರಣದಿಂದ  ವೈದ್ಯರು ನೀರು ಹೆಚ್ಚು ಕುಡಿಯದ ಹಾಗೆ ಹೇಳದೆ ಇದ್ದರೆ, ಅಧಿಕವಾಗಿ ನೀರು ಕುಡಿಯುತ್ತ ಮೂತ್ರವನ್ನು ಸ್ಪಷ್ಟವಾಗಿರಿಸಬೇಕು (clear urine).

… ಸಣ್ಣ ಕಲ್ಲುಗಳು ಹೊರಹೋಗುವ ಸಮಯದಲ್ಲಿ ಸ್ವಲ್ಪ ಮಟ್ಟದ ಅಸ್ವಸ್ಥತೆ ಕಂಡುಬರುತ್ತದೆ. ನೋವಿನ ಶಮನಕ್ಕೆ ವೈದ್ಯರು ನೋವುನಿವಾರಕ ಗುಳಿಗೆಗಳನ್ನು ಬರೆದು ಕೊಡುತ್ತಾರೆ.

… ಮೂತ್ರಪಿಂಡದ ಕಲ್ಲನ್ನು ಹೊರಹಾಕಲು ವೈದ್ಯರು ಮೂತ್ರನಾಳದ ಸ್ನಾಯುಗಳನ್ನು ಸಡಿಲಗೊಳಿಸುವಂತಹ ಔಷಧ ಕೊಡುವರು. ಅದರಿಂದ ಕಲ್ಲು ಸುಲಭವಾಗಿ, ಅತಿ ಕಡಿಮೆ ನೋವಿನಿಂದ ಮೂತ್ರದ ಮೂಲಕ ಹೊರಹೋಗಲು ಅನುಕೂಲವಾಗುತ್ತದೆ.

ಹೆಚ್ಚು ತೊಂದರೆ ಲಕ್ಷಣಗಳ ದಪ್ಪ ಕಲ್ಲುಗಳು:–
ಮೂತ್ರದ ಮೂಲಕ ಹೊರಹಾಕಲು ಸುಲಭವಲ್ಲದ ದಪ್ಪ ಕಲ್ಲುಗಳು ರಕ್ತಸ್ರಾವ ಮತ್ತು ಮೂತ್ರಪಿಂಡದ ಹಾನಿ ಮಾಡುವ ಸಾಧ್ಯತೆ ಇರುವುದೆ ಅಲ್ಲದೆ, ಅದರ ಜೊತೆಗೆ ಮೂತ್ರದ ಸೋಂಕು ಕೂಡ ಇದ್ದಾಗ ಹೆಚ್ಚು ವಿಸ್ತ್ರತ ಚಿಕಿತ್ಸೆಯ ಅವಶ್ಯಕತೆ ಉದಯಿಸುವುದು:

… ಧ್ವನಿ ತರಂಗಗಳ ಉಪಯೋಗ – ಕೆಲವು ಮಾದರಿಯ ಮೂತ್ರಪಿಂಡದ ಕಲ್ಲುಗಳಿಗೆ, ಅವುಗಳ ಗಾತ್ರದ ಮತ್ತು ಅವು ಇರುವ ಸ್ಥಳದಮೇಲೆ ವೈದ್ಯರು ಲಿಥಾಟ್ರಿಪ್ಸಿ (ESWL – extracorporeal shock wave lithotripsy) ಎಂಬ ಕಾರ್ಯವಿಧಾನಕ್ಕೆ ಸೂಚಿಸಬಹುದು. ಈ ಚಿಕಿತ್ಸೆಯಲ್ಲಿ, ಧ್ವನಿತರಂಗಗಳ ಉಪಯೋಗದಿಂದ ಬಲವಾದ ಕಂಪನಗಳನ್ನು ಸೃಷ್ಟಿಸಿ, ಅವುಗಳ ಮೂಲಕ ಕಲ್ಲುಗಳನ್ನು ಚಿಕ್ಕ ಚಿಕ್ಕ ಗಾತ್ರದ ಚೂರುಗಳಾಗಿ ಒಡೆದು,  ನಂತರ ಸುಲಭವಾಗಿ ಮೂತ್ರದಿಂದ ಹೊರಹಾಕುವ ಹಾಗೆ ಮಾಡುತ್ತಾರೆ. 45 ರಿಂದ 60 ನಿಮಿಷಗಳ  ಈ ಕ್ರಮ, ಸ್ವಲ್ಪ ನೋವುಕಾರಕ. ಹಾಗಾಗಿ ಕಡಿಮೆ ಮಟ್ಟದ ಅರಿವಳಿಕೆ ಸಹಾಯದಿಂದ ಈ ಚಿಕಿತ್ಸೆ ಮಾಡುವರು. ಈ ವಿಧಾನದಿಂದ ರೋಗಿಗೆ ಆಗಬಹುದಾದ ತೊಂದರೆಗಳೆಂದರೆ, ಮೂತ್ರದಲ್ಲಿ ರಕ್ತ ಕಾಣಿಸಬಹುದು, ಉದರ ಅಥವ ಬೆನ್ನಿನ ಮೇಲೆ ತರಚುಗಾಯ ಆಗಬಹುದು, ಮೂತ್ರಪಿಂಡ ಮತ್ತಿತರ ಅಂಗಗಳ ಸುತ್ತ ರಕ್ತಸ್ರಾವ ಕಾಣಿಸಬಹುದು ಮತ್ತು ಕಲ್ಲಿನ ಚೂರುಗಳು ಆಚೆ ಬರುವಾಗ ಅಸ್ವಸ್ಥತೆಯ ಅನುಭವವಾಗಬಹುದು.

… ಅತಿ ದಪ್ಪ ಕಲ್ಲುಗಳಿಗೆ ಶಸ್ತ್ರಚಿಕಿತ್ಸೆ – ಸಾಮಾನ್ಯ ಅರಿವಳಿಕೆಯ (general anaesthesia) ಸಹಾಯದಿಂದ ಶಸ್ತ್ರಚಿಕಿತ್ಸೆ ಮೂಲಕ ಕಲ್ಲುಗಳನ್ನು ಹೊರತೆಗೆಯಲಾಗುವುದು. ಈ ಶಸ್ತ್ರಚಿಕಿತ್ಸೆಯ ಹೆಸರು ಪರ್ಕ್ಯುಟೇನಿಯಸ್ ನೆಫ್ರೋಲಿಥಾಟಮಿ. ಈ ಶಸ್ತ್ರಚಿಕಿತ್ಸೆಗೆ ಒಂದೆರಡು ದಿನ ಆಸ್ಪತ್ರೆಯಲ್ಲಿ ಚೇತರಿಕೆಗಾಗಿ ಇರಬೇಕಾಗುವುದು.

… ಮೂತ್ರಪಿಂಡ ಅಥವ ಮೂತ್ರನಾಳದ ಒಳಗಿರುವ ಕಲ್ಲನ್ನು ತೆಗೆಯಲು, ಒಂದು ಬೆಳಕಿನ ಕೊಳವೆಯನ್ನು ಮೂತ್ರವಿಸರ್ಜನಾ ನಾಳದ (urethra) ಮತ್ತು ಮೂತ್ರಕೋಶದ (bladder) ಮೂಲಕ ಮೂತ್ರನಾಳದ (ureter) ವರೆಗೆ ತೂರಿಸುತ್ತಾರೆ. ಕಲ್ಲು ಇರುವ ಸ್ಥಳ ತಿಳಿದು ಅದನ್ನು ತುಂಡರಿಸಿ ನಂತರ ಮೂತ್ರದಿಂದ ಹೊರಬರುವ ಹಾಗೆ ಮಾಡುವರು.

… ಪ್ಯಾರಾಥೈರಾಯ್ಡ್ ಗ್ರಂಥಿಗಳಿಂದ ಪ್ಯಾರಾಥೈರಾಯ್ಡ್ ಹಾರ್ಮೋನ್ ಹೆಚ್ಚು ಉತ್ಪತ್ತಿಯಾದಾಗ, ಶರೀರದ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗುತ್ತದೆ. ಹಾಗಾದಾಗ ಕ್ಯಾಲ್ಸಿಯಂ ಕಲ್ಲುಗಳು ಉಂಟಾಗುತ್ತವೆ. ಈ ತೊಂದರೆಗೆ ಹೈಪರ್ಪ್ಯಾರಾಥೈರಾಯ್ಡಿಸಂ ಎಂದು ಹೆಸರು. ಗ್ರಂಥಿಯ ಮೇಲೆ ಗೆಡ್ಡೆ ಬೆಳೆದಾಗ ಸಹ ಈ ರೀತಿಯ ಕಲ್ಲುಗಳು ಉಂಟಾಗಬಹುದು. ಆಗ ಆ ಗೆಡ್ಡೆಯನ್ನು ತೆಗೆದುಹಾಕಲಾಗುತ್ತದೆ.

ತಡೆಗಟ್ಟುವಿಕೆ:
ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು, ಜೀವನಶೈಲಿಯ ಬದಲಾವಣೆ ಮತ್ತು ಔಷಧೋಪಚಾರ ಅವಶ್ಯ.
ಜೀವನಶೈಲಿ —
… ಮೂತ್ರಪಿಂಡದ ಕಲ್ಲುಗಳಾಗಿರುವ ಇತಿಹಾಸ ಇರುವವರಿಗೆ ವೈದ್ಯರು ಪ್ರತಿ ದಿನ ಹೆಚ್ಚು ನೀರು ಕುಡಿದು, ದಿನ ಒಂದಕ್ಕೆ ಕನಿಷ್ಠ ಎರಡು ಲೀಟರಿನಷ್ಟು ಮೂತ್ರ ವಿಸರ್ಜನೆಯಾಗುವಂತೆ ನೋಡಿಕೊಳ್ಳಲು ಹೇಳುವರು. ಹೆಚ್ಚು ನೀರು ಕುಡಿವ ಸಾಕ್ಷಿಗಾಗಿ, ದಿನದ ಮೂತ್ರವನ್ನು ಅಳತೆ ಮಾಡಲೂ ಸಹ ಹೇಳುವರು. ಉಷ್ಣ ಹಾಗು ಒಣ ಹವಾಮಾನ ಇರುವಂಥ ಸ್ಥಳಗಳಲ್ಲಿ ವಾಸ ಮಾಡುವವರು, ಅಥವ ಹೆಚ್ಚಿನ ವ್ಯಾಯಾಮ ಮಾಡುವವರು, ಇನ್ನೂ ಹೆಚ್ಚು ಮೂತ್ರ ಬರುವ ಹಾಗೆ ನೀರು ಕುಡಿಯಬೇಕು.

… ಕ್ಯಾಲ್ಸಿಯಂ ಆಗ್ಸಲೇಟ್ ಕಲ್ಲುಗಳು ರೋಗಿಯಲ್ಲಿದ್ದಾಗ, ಆಗ್ಸಲೇಟ್ ಇರುವ ಪದಾರ್ಥಗಳಾದ ಬೆಂಡೆ, ಸ್ಪಿನಾಶ್, ಸಿಹಿ ಗೆಣಸು, ಬೀಜಗಳು, ಚಾಕ್ಲೆಟ್ ಮತ್ತು ಸೋಯ ಪದಾರ್ಥಗಳ ಸೇವನೆ ಮಿತಿಗೊಳಿಸಬೇಕು.

… ಕಡಿಮೆ ಉಪ್ಪು ಮತ್ತು ಪ್ರಾಣಿ ಪ್ರೋಟೀನ್ ಉಪಯೋಗ ಸಹ ಕಮ್ಮಿ ಮಾಡಬೇಕು. ಕಾಳುಗಳನ್ನು ಹೆಚ್ಚು  ಉಪಯೋಗಿಸಬೇಕು.

… ಆಹಾರದಲ್ಲಿನ ಕ್ಯಾಲ್ಸಿಯಂ ಮೂತ್ರಪಿಂಡದ ಕಲ್ಲುಗಳ ಮೇಲೆ ಯಾವುದೆ ಪರಿಣಾಮ ಕೂಡ ಮಾಡುವುದಿಲ್ಲ. ಹಾಗಾಗಿ, ಅದರ ಉಪಯೋಗಕ್ಕೆ ಇತರೆ ಕಾಯಿಲೆಗಳ ಕಾರಣಗಳಿಂದ ವೈದ್ಯರ ನಿರ್ಬಂಧ ಇಲ್ಲದಿದ್ದರೆ, ಆಹಾರದಲ್ಲಿ ಕ್ಯಾಲ್ಸಿಯಂ ಉಪಯೋಗ ಮುಂದುವರಿಸಬಹುದು. ಆದರೆ, ಕ್ಯಾಲ್ಸಿಯಂಯುಕ್ತ ಪೋಷಕಗಳು ಮಾತ್ರ ಮೂತ್ರಪಿಂಡದ ಕಲ್ಲು ಉತ್ಪತ್ತಿಗೆ ಕಾರಣವಾಗಬಹುದಾದ್ದರಿಂದ ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದು ಅಥವ ಉಪಯೋಗ ಕಡಿತ ಮಾಡಬೇಕು.

ಔಷಧೋಪಚಾರ — ಜೀವನಶೈಲಿಯ ಬದಲಾವಣೆಗಳ ಜೊತೆಗೆ, ಯಾವ ಮಾದರಿಯ ಕಲ್ಲಾಗುವ ಸಂಭವ ಸಾಧ್ಯ ಇರಬಹುದೋ, ಅಂತಹದನ್ನು ತಡೆಗಟ್ಟುವ ಔಷಧಗಳ ಬಗೆಗೆ ಸಹ ವೈದ್ಯರು ವಿವರವಾಗಿ ತಿಳಿಸಿಕೊಡುವರು. ರೋಗಿಗಳು ಅವುಗಳನ್ನು ಪಾಲಿಸಿದರೆ ಮೂತ್ರಪಿಂಡದ ಕಲ್ಲುಗಳಾಗುವುದನ್ನು ತಡೆಗಟ್ಟಬಹುದು.


Leave a Reply

Back To Top