ಕಾವ್ಯಸಂಗಾತಿ
ಡಾ ಡೋ.ನಾ.ವೆಂಕಟೇಶ
ಎಲ್ಲಿಯ ಎಲ್ ನೀನೋ
ನೆರಳ ಒಳಗೆ ನಿಂತ
ಬಿಸಿಲ ಕೋಲು
ಉದ್ದುದ್ದ ಬೆಳಕಿನ ಕೋಲು
ನಮಗೆ ಮಕ್ಕಳಿಗೆ ಆಟ
ಪ್ರಕೃತಿ ನಮಗಿತ್ತ ತೋಟ
ತನ್ನೊಳಗೆ ಚರಾಚರಗಳ ಹುದುಗಿಸಿ
ಎಲ್ಲರ ಚೆಹರೆಗಳೊಳಗಣ
ದೇಹ ಶಾಸ್ತ್ರ ಗೌಜುಗಳ,ಗೋಜಲುಗಳ
ಪರದೆ ಮೇಲೆ ಪ್ರಕಾಶಿಸಿ
ಭೂಮ್ಯಾಕಾಶದ ಉದ್ದಕ್ಕೂ ಉರಿದೆದ್ದು ನಿಂತ ಹೊಳೆ ಹೊಳೆವ ದೂರ ದರ್ಶಕ!
ಪಾರ ದರ್ಶಕ!
ಈಗ ಬಿಸಿಲ ಕೋಲೇ ಕಂಡಿಲ್ಲ
ನೆಲದಿಂದ ಮುಗಿಲೆತ್ತರಕ್ಕೂ
ಕೋರೈಸುವ ಬಿಸಿಲು,
ಉರಿ ಉರಿ ಕಂಡು ಕೇಳದಂಥ
ಬಿಸಿಯುಸಿರು
ಸೂರ್ಯನ ಕೋಲಲ್ಲದ ಬಿಸಿಲ ಕೋಲು,
ಬಳಲಿ ನಿಟ್ಟುಸಿರು!
ಈಗೆಲ್ಲ ಆಧುನಿಕರು
ಕೈಯಿಂದ ಉಜ್ಜಿ ಉಜ್ಜಿ
ಮಿಂಚಿಸಿದ ಕೃತಕ ಹೊಳಪು
ನೆಲವನ್ನು ಬಗೆದು ತೆಗೆದ ಎಣ್ಣೆ
ಜಲವನ್ನು ಜಾಲಾಡಿ ತೆಗೆದ
ಮೀನು ಮೊಸಳೆ,
ಆಕಾಶದ ಉದ್ದಕ್ಕೂ ಹಾಸಿದ
ಇಂಗಾಲದ ಮಾಸು
ಇತ್ಯಾದಿ-
ಹೇಳಲಿಕ್ಕೆ ಒಂದೆರಡೆ?
ಮಾನವ ಬಿಟ್ಟ ಬುರುಡೆ
ತ್ರೈಲೋಕ್ಯ ವಿಕ್ರಮನಾಗುವ
ತಲೆ ಹರಟೆ
ಪೃಥ್ವಿಯ ನಿದ್ದೆ ಕೆಡಿಸಿದ ಹವಾಮಾನ
ವೈಪರೀತ್ಯ
ದೂರ ಸಾಗರದಲ್ಲಿ ಉದ್ಭವಿಸಿದ
ಎಲ್ ನೀನೋ
ನಾನೋ ನೀನೋ ಎಂದು
ಬಂದಾಗ ಕೊಚ್ಚಿ ಹೋಗುವ ವರ್ಷಾ
ಬಾರದಾಗ ಮುಟ್ಟಿ ನೋಡುವ ಉತ್ಕರ್ಷ
ಬಿಸಿಲ ಬೇಗೆ, ಸೂರ್ಯನ ತಾಪ
ಎರಡು ಹನಿ ನೀರಿಗೂ ತತ್ವಾರ
ಕಣ್ಣಂಚಿನ ನೀರು ಗಲ್ಲದ ಮೇಲೆ
ಹರಿವುದಕ್ಕೆ ಮೊದಲೇ ಅದೃಶ್ಯ
ಕೋಲಲ್ಲದ ಈ ಬಿಸಿಲ ಬೇಗೆ
ಸೂರ್ಯನ ನಿಟ್ಟುಸಿರು
ಬೇಸಿಗೆಯ ಬಿಸಿಯುಸಿರು!
ಅಂತಿಮ ಎಚ್ಚರಿಕೆ-
ವಾತಾವರಣ ಹೊಸದಾಗಿ
ಸೃಷ್ಟಿಸುವ ಕೈಂಕರ್ಯ ಮಾಡಿ
ಹೊಸದಾಗಿ ಕಟ್ಟಿ ಹೊಸ ಭೂಮಿ
ಹೊಸ ಸಾಗರ
ಹೊಸ ಆಕಾಶ
ಬರಲಿ ಹೊಸ ಆಕಾಂಕ್ಷೆ
ಹೊಸ ಭರವಸೆ
ಹೇಳಲಿ ಭೂ ತಾಯಿ
ಇಲ್ಲಿ ನಾನೇ
ಡಾ ಡೋ.ನಾ.ವೆಂಕಟೇಶ
ಪರಿಸರದ ಮೇಲೆ ಎಲ್ ನಿನೊ ಪರಿಣಾಮಗಳನ್ನು ನಿಮ್ಮ ಕವಿತೆಯಲ್ಲಿ ಅತ್ಯುತ್ತಮವಾಗಿ ವಿವರಿಸಲಾಗಿದೆ.
ಧನ್ಯವಾದಗಳು!
“ಎಲ್ ನೀನ್ಯೋ” ಪರಿಣಾಮದ ನಿಮ್ಮ ಕವನ ಸಮಯೋಚಿತ ಮತ್ತು ಉತ್ತಮ ರಚನೆ.. “ಮಾನವ ಬಿಟ್ಟ ಬುರುಡೆ, ತ್ರೈಲೋಕ್ಯ ವಿಕ್ರಮನಾಗುವ, ತಲೆಹರಟೆ” ಮತ್ತು “ಕಣ್ಣಂಚಿನ ನೀರು ಗಲ್ಲದಮೇಲೆ ಹರಿವುದಕ್ಕೂ ಮುನ್ನವೆ ಅದೃಶ್ಯ” ಮುಂತಾದ ಸಾಲುಗಳು ಆಯಸ್ಕಾಂತೀಯ! ನಿಮಗೆ ಅಭಿನಂದನೆಗಳು, ವೆಂಕಟೇಶ್.