ನೃತ್ಯ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಭಾರತೀಯ ಶಾಸ್ತ್ರೀಯ ನೃತ್ಯ…
ಒಂದು ಅವಲೋಕನ” ವಿಶೇಷ ಲೇಖನ
ಆ ಒಂದು ಹಾಲ್ನಲ್ಲಿ ಕುಳಿತಿದ್ದ ಎಲ್ಲ ಮಕ್ಕಳು, ಹಿರಿಯರಾದಿಯಾಗಿ ಸಂಗೀತದ ತಾಳಕ್ಕೆ ತಕ್ಕಂತೆ ತಮ್ಮ ತಲೆಯನ್ನು ಕುಣಿಸುತ್ತಾ ಕಾಲ್ ಬೆರಳನ್ನು ನೆಲಕ್ಕೆ ಕುಟ್ಟುತ್ತಿದ್ದರು. ಇದುವೇ ನೃತ್ಯದ ಮೂಲ
ನೃತ್ಯ ಜೀವನದ ಒಂದು ಭಾಗ, ಜೀವನವೇ ಆಗಿದೆ. ನಮ್ಮೆಲ್ಲಾ ನೋವು ನಿರಾಸೆಗಳನ್ನು ಮರೆಯಲು ಹುಮ್ಮಸ್ಸನ್ನು ಪಡೆಯಲು ಮತ್ತೆ ಜೀವನ್ಮುಖತೆಯನ್ನು ಹೊಂದಲು ನೃತ್ಯವು ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ. ಅಂತಹ ನೃತ್ಯ ವನ್ನು ಪ್ರಸಿದ್ಧಿಗೊಳಿಸಲು ತಮ್ಮ ತಮ್ಮ ಸುರಕ್ಷತಾ ವಲಯಗಳಿಂದ ಹೊರಬಂದು ಸಾಕಷ್ಟು ಕಷ್ಟನಿಷ್ಠುರಗಳ ನಡುವೆ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಜಗತ್ತಿಗೆ ಪರಿಚಯಿಸಿದವರು.
ಪಾಶ್ಚಾತ್ಯ ವೇಷ ಧರಿಸಿದ ಹೆಣ್ಣು ಮಗಳು ತಾನು ಭೇಟಿ ಕೊಡಲು ಬಯಸಿದ ಕ್ಲಬ್ ಬಾಗಿಲು ಮುಚ್ಚಿದ್ದನ್ನು ಕಂಡು ಪಕ್ಕದಲ್ಲಿರುವ ಸಭಾಂಗಣಕ್ಕೆ ಬಂದು ಕುಳಿತಳು. ಅಲ್ಲಿ ನಡೆಯುತ್ತಿದ್ದ ನೃತ್ಯವನ್ನು ಕಂಡು ಪರವಶಳಾದ ಆಕೆ ನೃತ್ಯ ಮುಗಿಯುತ್ತಿದ್ದಂತೆ ಗ್ರೀನ್ ರೂಮಿಗೆ ಹೋಗಿ ಆ ನೃತ್ಯವನ್ನು ಮಾಡುತ್ತಿದ್ದ ತಂಡದ ಮಹಾ ಗುರುವಿನ ಬಳಿ ಹೋಗಿ ತನಗೂ ಕೂಡ ನೃತ್ಯವನ್ನು ಕಲಿಸುವಂತೆ ಕೇಳಿಕೊಂಡಳು. ಆಕೆಯ ವೇಷ ಭೂಷಣ, ಮಾದಕ ಮೇಕಪ್ ನೋಡಿದ ಗುರುಗಳು ಕೊಂಚ ಅಸಡ್ಡೆಯಿಂದಲೆ ಆಕೆಗೆ ಈ ಕಲೆ ಒಲಿಯಲು ಮಹಾ ತಪಸ್ಸು ಬೇಕು. ನಿನಗೆ ನಿಜವಾಗಿಯೂ ನೃತ್ಯ ಕಲಿಯುವ ಆಸೆ, ಆಸಕ್ತಿ ಇದ್ದರೆ ನಾಳೆ ಮಧ್ಯಾಹ್ನ ನಾನು ವಾಸಿಸುವ ಸ್ಥಳಕ್ಕೆ ಬಂದು ತಲುಪಬೇಕು. ಆದರೆ ನೃತ್ಯ ಕಲಿಯಲು ಈ ವೇಷಭೂಷಣಗಳು ಸರಿ ಹೋಗುವುದಿಲ್ಲ, ಭಾರತೀಯ ಸೀರೆ ಮತ್ತಿತರ ಉಡುಪುಗಳನ್ನು ಧರಿಸಬೇಕು, ಗುರುಕುಲದಲ್ಲಿ ಇರುವಷ್ಟು ದಿನ ಯಾವುದೇ ಹಮ್ಮು ಬಿಮ್ಮು ಇಟ್ಟುಕೊಳ್ಳದೆ ಗುರುಕುಲದ ಇತರ ಮಕ್ಕಳಲ್ಲಿ ಒಬ್ಬರಾಗಿ ಜೀವಿಸಬೇಕು ಎಂದು ಕಠೋರವಾಗಿ ನುಡಿದರು.
ಅವರ ಎಲ್ಲ ಮಾತುಗಳಿಗೆ ಒಪ್ಪಿದ ಆಕೆ ಕೂಡಲೇ ಮನೆಗೆ ಬಂದು ಪ್ರಖ್ಯಾತ ಮಾಡಲಾಗಿದ್ದ ತನ್ನ ಪತಿಗೆ ತನ್ನ ಎರಡು ಮಕ್ಕಳ ಸುಪರ್ದಿಯನ್ನು ವಹಿಸಿ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ ಕೊಲ್ಕತ್ತಾಗೆ ಪಯಣ ಬೆಳೆಸಿದಳು.
ಅಲ್ಲಿನ ಮಾರುಕಟ್ಟೆಯಲ್ಲಿ ಹತ್ತಾರು ಕಾಟನ್ ಸೀರೆಗಳನ್ನು ಖರೀದಿಸಿ ಅವುಗಳಿಗೆ ಕುಪ್ಪಸಗಳನ್ನು ಕೂಡ ಅಲ್ಲಿಯೇ ಹೊಲಿಸಿದಳು. ನಂತರ ಕೆಲ ಭಾರತೀಯ ಉಡುಪುಗಳನ್ನು ಕೂಡ ಖರೀದಿಸಿದಳು. ಮುಂಬೈಯಿಂದ ಆ ಗುರುಗಳು ತಮ್ಮೂರಿಗೆ ಮರಳುವ ಸಮಯಕ್ಕೆ ಸರಿಯಾಗಿ ಅವರ ಮನೆಯ ಮುಂದೆ ಹಣೆಯ ಮೇಲೆ ತಿಲಕವನ್ನಿಟ್ಟು ಅಪ್ಪಟ ಭಾರತೀಯ ನಾರಿಯ ಹಾಗೆ ಸೀರೆಯನ್ನುಟ್ಟ ಈ ಮಹಿಳೆ ಬಂದು ನಿಂತಳು.
ಆಕೆಯನ್ನು ಗುರುಗಳು ಸಖೇದಾಶ್ಚರ್ಯದಿಂದ ದಿಟ್ಟಿಸಿ ನೋಡಿ ಮುಂದೆ ಈಕೆ ಭಾರತ ದೇಶದ ಬಹು ದೊಡ್ಡ ನೃತ್ತ್ಯಗಾತಿಯಾಗಿ ಪ್ರಖ್ಯಾತಳಾಗುವಳು ಎಂದು ಭವಿಷ್ಯ ನುಡಿದರು.
ಮುಂದಿನ ಹಲ ವರ್ಷಗಳು ಆಕೆ ದಿನವೊಂದಕ್ಕೆ 13 ರಿಂದ 14 ಗಂಟೆಗಳ ಕಾಲ ನೃತ್ಯದ ಅಭ್ಯಾಸವನ್ನು ಮಾಡಿದಳು. ಅತ್ಯಂತ ಕಠಿಣ ಸ್ವರೂಪಿ ಗುರುಗಳ ಕೈಯಲ್ಲಿ ಪಳಗಿದ ಆಕೆ ಓಡಿಸ್ಸಿ ನೃತ್ಯದಲ್ಲಿ ಪಾರಂಗಿತಳಾದಳು.ಆಕೆಯೇ ಭಾರತದ ಪ್ರಖ್ಯಾತ ನೃತ್ಯಗಾತಿ ಪ್ರತಿಮಾ ಬೇಡಿ ಮತ್ತು ಆಕೆಗೆ ವಿದ್ಯೆ ನೀಡಿದ ಗುರು ಪದ್ಮವಿಭೂಷಣ
ಡಾ.ಕೇಳು ಚರಣ್ ಮಹಾಪಾತ್ರ.
ಓಡಿಸಿ ನೃತ್ಯದಲ್ಲಿ ಪರಿಣಿತಳಾದ ಪ್ರತಿಮಾ ಬೇಡಿ ಗುರುಗಳ ಆದೇಶದ ಮೇರೆಗೆ ಮುಂಬೈಗೆ ತೆರಳಿ ಅಲ್ಲಿಯೇ ಒಂದು ನೃತ್ಯ ಸಂಸ್ಥೆಯನ್ನು ತೆರೆದು ಓಡಿಸ್ಸಿ ನೃತ್ಯವನ್ನು ಕಲಿಸ ತೊಡಗಿದರು. ಮುಂದೆ 1989 ರಲ್ಲಿ ಬೆಂಗಳೂರಿನ ಬಳಿಯ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ನೃತ್ಯ ಗ್ರಾಮವನ್ನು ನಿರ್ಮಿಸಿದರು. ಎಲ್ಲ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಕಲಿಸುವ ಈ ನೃತ್ಯ ಗ್ರಾಮದ ನಿರ್ವಾಹಕಿಯಾಗಿ ಎಂಟು ವರ್ಷಗಳ ಕಾಲ ಸತತವಾಗಿ ಕಾರ್ಯನಿರ್ವಹಿಸಿದ ಪ್ರತಿಮಾ ಬೇಡಿ ನಂತರ ಅಮರನಾಥ ಯಾತ್ರೆಗೆ ಹೋಗುವಾಗ ಹಿಮಾಲಯದಲ್ಲಿ ಉಂಟಾದ ಭೂಕುಸಿತದಲ್ಲಿ ಸಿಲುಕಿ ಕಣ್ಮರೆಯಾದರು.
ಸುಸಂಸ್ಕೃತ ಶಾಸ್ತ್ರಿಗಳ ಕುಟುಂಬದಲ್ಲಿ ಹುಟ್ಟಿ ಬೆಳೆದ ರುಕ್ಮಿಣಿದೇವಿಯೆಂಬ ಯುವತಿ ಡಾ. ಜಿ.ಎಸ್.ಅರುಂಡೇಲ್ ರನ್ನು ವಿವಾಹವಾಗಿ ರಷ್ಯಾ ದೇಶಕ್ಕೆ ಪಯಣಿಸಿದರು. ಅಲ್ಲಿನ ಪ್ರಸಿದ್ಧ ಬ್ಯಾಲೆ ನೃತ್ಯಗಾತಿಯ ಬಳಿ ಶಿಷ್ಯತ್ವವನ್ನು ಸ್ವೀಕರಿಸಿದ ರುಕ್ಮಿಣಿ ದೇವಿ ಮುಂದೆ ಭಾರತದ ಎಲ್ಲ ಶಾಸ್ತ್ರೀಯ ಕಲೆಗಳಿಗೆ ಮರುಜೀವ ನೀಡಿದರಲ್ಲದೆ ಭರತನಾಟ್ಯಕ್ಕೆ ಹೊಸ ತಿರುವನ್ನು ತಂದುಕೊಟ್ಟರು. ಇದುವರೆಗೂ ಕೇವಲ ದೇವದಾಸಿಯರು ಮಾತ್ರ ಮಾಡುವ ನೃತ್ಯವೆಂದು ಹೆಸರಾಗಿದ್ದ ಭರತನಾಟ್ಯ ನೃತ್ಯವನ್ನು ಎಲ್ಲರೂ ಕಲಿಯಲು ಪ್ರೋತ್ಸಾಹಿಸಿದರು. ಮರಳಿ ಭಾರತಕ್ಕೆ ಬಂದ ಮೇಲೆ ಮದರಾಸಿನಲ್ಲಿ ಎಲ್ಲ ಶಾಸ್ತ್ರೀಯ ಕಲೆಗಳನ್ನು ಕಲಿಯಲು ಅನುಕೂಲವಾಗುವಂತಹ ಸಭಾಭವನ ಒಂದನ್ನು ನಿರ್ಮಿಸಿದರಲ್ಲದೇ ಎಲ್ಲಾ ರೀತಿಯ ಗುರುಗಳನ್ನು ಅಲ್ಲಿ ಕರೆಸಿ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಕಲಿಯಲು ಅನುವು ಮಾಡಿಕೊಟ್ಟರು.
ತಾವಿರುವ ಪರಿಸರದಿಂದ ಸಂಪೂರ್ಣ ವಿಭಿನ್ನವಾದ ಪರಿಸರದಲ್ಲಿ ಇದ್ದರೂ ಕೂಡ ನೃತ್ಯ ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಈ ಮಹಿಳೆಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನೃತ್ಯವನ್ನು ಪ್ರಸಿದ್ದಗೊಳಿಸಿದರು
ವೀಣಾ ಹೇಮಂತ್ ಗೌಡ ಪಾಟೀಲ್