ಧಾರಾವಾಹಿ-ಅಧ್ಯಾಯ –34
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಭಯದ ನೆರಳಲ್ಲಿ ಬದುಕು
ಎದ್ದು ಈಗ ಕೋಣೆಗೆ ಬರುತ್ತಿಯೋ ಇಲ್ಲವೋ?” ಎಂಬ ಗಡುಸಾದ ಪತಿಯ ಧ್ವನಿಗೆ ಹೆದರಿ ತಾನು ಅವರ ಇಂಗಿತಕ್ಕೆ ಅಸಮ್ಮತಿ ಸೂಚಿಸಿದರೆ ಪುನಃ ಎಲ್ಲಿ ಹೊಡೆತ ತಿನ್ನಬೇಕಾಗುತ್ತದೆಯೋ ಎಂದು ಒಲ್ಲದ ಮನಸ್ಸಿನಿಂದ ಕೋಣೆಗೆ ಹೋದಳು. ಏಟು ಬಿದ್ದ ಮೈ ಹಾಗೂ ಕೆನ್ನೆ ಇನ್ನೂ ನೋಯುತ್ತಿತ್ತು. ಆದರೂ ಪತಿಯ ಇಂಗಿತಕ್ಕೆ ಮೌನವಾಗಿ ಮೈ ಒಡ್ಡಿದಳು. ದುಖಃ ಒತ್ತರಿಸಿ ಬಂದು ಕಣ್ಣಿಂದ ನೀರು ಧಾರಾಕಾರವಾಗಿ ಹರಿಯುತ್ತಲೇ ಇತ್ತು. ಅವುಡುಗಚ್ಚಿ ನೋವನ್ನು ತಡೆದುಕೊಂಡಳು. ಇದು ಯಾವುದೂ ವೇಲಾಯುಧನ್ ಗಮನಕ್ಕೆ ಬರಲಿಲ್ಲ. ತನ್ನ ಅಗತ್ಯ ಮುಗಿದ ಕೂಡಲೇ ಅತ್ತ ಬೆನ್ನು ತಿರುಗಿಸಿ ಮಲಗಿದರು. ಸ್ವಲ್ಪ ಹೊತ್ತಿಗೆಲ್ಲ ಅವರ ಗೊರಕೆಯ ಸದ್ದು ಕೇಳಿಸತೊಡಗಿತು. ಸುಮತಿಗೆ ನಿದ್ರೆ ಬರಲಿಲ್ಲ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತಳಾಗಿದ್ದಳು.
ತಾನು ಇದುವರೆಗೂ ಅನುಭವಿಸಿರದ ಒಂದೊಂದು ನೋವನ್ನೂ ಈಗ ಹೊಸದಾಗಿ ಅನುಭವಿಸುತ್ತಿದ್ದಳು. ಯಾರೊಂದಿಗೂ ತನಗಾಗುವ ನೋವುಗಳನ್ನು ಹಂಚಿಕೊಳ್ಳುವಂತೆ ಇರಲಿಲ್ಲ. ಎದ್ದು ನೇರವಾಗಿ ಸ್ನಾನದ ಕೋಣೆಗೆ ಹೋದಳು. ಹಂಡೆಯಲ್ಲಿ ಬಿಸಿ ನೀರು ಇದ್ದರೂ ತಣ್ಣಗಿನ ನೀರನ್ನು ಮೈ ಮೇಲೆ ಸುರಿದುಕೊಂಡು ಬಟ್ಟೆ ಬದಲಿಸಿ ಕೃಷ್ಣನ ವಿಗ್ರಹದ ಮುಂದೆ ಕೈ ಜೋಡಿಸಿ ನಿಂತಳು. ಇವಳ ನೋವನ್ನೆಲ್ಲಾ ತನ್ನ ಇಷ್ಟ ದೈವ ಶ್ರೀ ಕೃಷ್ಣನಲ್ಲಿ ಹೇಳಿಕೊಳ್ಳುತ್ತಿದ್ದಳು. ಶ್ರೀ ಕೃಷ್ಣನ ಮುಂದೆ ತನ್ನ ಅಳಲನ್ನು ಹೇಳಿಕೊಂಡು ಅತ್ತರೆ ಸ್ವಲ್ಪ ಮನಸ್ಸು ಹಗುರಾದಂತೆ ಅನಿಸುತ್ತಿತ್ತು. ಜೋರಾಗಿ ಅಳುವಂತೆಯೂ ಇಲ್ಲ ಎಲ್ಲಿ ಪತಿ ಎದ್ದುಬಿಟ್ಟರೆ ಎನ್ನುವ ಭಯ. ಮೌನವಾಗಿ ಕೃಷ್ಣನಲ್ಲಿ ಕೇಳಿದಳು” ಏಕೆ ಕೃಷ್ಣಾ ನಾನೇನು ತಪ್ಪು ಮಾಡಿದೆ ಎಂದು ನನಗೆ ಈ ಶಿಕ್ಷೆ?…. ನನ್ನ ಆಸೆಯಂತೆ ನಾನು ಕೆಲಸಕ್ಕೆ ಸೇರುವುದು ತಪ್ಪೇ? … ರೋಗಿಗಳ ಶುಶ್ರೂಷೆಯಲ್ಲಿ ನಾನು ತೊಡಗುವುದು ಅಂಥಹ ಘೋರ ಅಪರಾಧವೇ?…
ನನ್ನ ಕುಟುಂಬಕ್ಕಾಗಿ ನನ್ನಿಂದ ಕೈಲಾದ ಸಹಾಯ ಮಾಡುವುದು ಕೂಡಾ ನನ್ನಿಂದ ಸಾಧ್ಯವಿಲ್ಲವೇ?… ಹೆಣ್ಣಾಗಿ ಹುಟ್ಟಿದೆ ಎಂಬ ಕಾರಣಕ್ಕೆ ನನಗೆ ಯಾವುದೇ ಸ್ವಾತಂತ್ರ್ಯ ಇಲ್ಲವೇ?… ಅಪ್ಪ ಕೂಡಾ ಹೇಳಿದರು ನಮ್ಮ ಕುಟುಂಬದ ಹೆಣ್ಣು ಮಕ್ಕಳು ಹೊರಗೆ ಕೆಲಸಕ್ಕೆ ಹೋಗಿ ದುಡಿಯುವ ಸಂಪ್ರದಾಯವಿಲ್ಲ ಎಂದು…. ಹಾಗಾದರೆ ನಾನು ಶಾಲೆಗೆ ಹೋಗಿ ಕಲಿತದ್ದು ಅಡುಗೆ,ಮನೆಕೆಲಸ ಮಾಡಲು, ಗಂಡನ ಅಗತ್ಯಕ್ಕೆ ತಕ್ಕಂತೆ ಇರಲು ಮತ್ತು ಮುಸುರೆ ತಿಕ್ಕಲು ಮಾತ್ರವೇ? …. ನನಗೆ ಕನಸು ಕಾಣುವ ಹಕ್ಕಿಲ್ಲವೇ? …ಹೆಣ್ಣು ತನ್ನ ಜೀವನದ ಪ್ರತಿಯೊಂದು ಹಂತದಲ್ಲೂ ಸದಾ ಪರಾವಲಂಬಿಯಾಗಿ ಗಂಡನ್ನು ಆಶ್ರಯಿಸಿ ಬದುಕಬೇಕೆ?… ವಿದ್ಯೆ ಕಲಿತು ಸ್ವಾವಲಂಬಿಯಾಗಿ ತನ್ನ ಕಾಲ ಮೇಲೆ ತಾನು ನಿಲ್ಲುವ ಕನಸು ಕಾಣಬಾರದೇಕೆ?….ಅಮ್ಮನ ಆಸೆಯಂತೆ ಅಪ್ಪ ನಮ್ಮನ್ನೆಲ್ಲ ಶಾಲೆಗೆ ಸೇರಿಸಿ ವಿದ್ಯಾಭ್ಯಾಸ ಕೊಡಿಸಿದಾಗ ಅಪ್ಪನೂ ಹೆಣ್ಣು ಮಕ್ಕಳನ್ನು ಸ್ವಾವಲಂಬಿಯಾಗಿ ಕಾಣಲು ಬಯಸುತ್ತಾರೆ ಎಂದು ತಿಳಿದಿದ್ದೆ. ಕೆಲಸಕ್ಕೆ ಸೇರಲು ಮೊದಲು ನಕಾರ ಸೂಚಿಸಿದ ಅಪ್ಪ ಕೆಲಸ ಸಿಕ್ಕಿದ ನಂತರವಾದರೂ ಬದಲಾಗಿ ನನ್ನನ್ನು ಕೆಲಸಕ್ಕೆ ಹೋಗಲು ಅನುವು ಮಾಡಿ ಕೊಡುವರು ಎಂಬ ನಂಬಿಕೆ ನನಗೆ ಇತ್ತು….ಆದರೆ ನನ್ನೆಲ್ಲಾ ಕನಸಿನ ಗೋಪುರವನ್ನು ಕೆಡವಿ ಅದರ ಮೇಲೆ ನನ್ನ ವಿವಾಹ ಮಾಡಿದರು….ಈಗ ಪತಿಯಂತೂ ನನ್ನ ಮಾತನ್ನು ಕೇಳುವುದಿರಲಿ…ನಾನು ಈ ರೀತಿಯಲ್ಲಿ ಅವರನ್ನು ಮೂದಲಿಸುತ್ತಿರುವೆ ಎಂದು ಹೇಳಿ ಹೊಡೆದರಲ್ಲ….ಮಿಲಿಟರಿಯಲ್ಲಿ ಕೆಲಸ ಮಾಡಿರುವುದರಿಂದ ಇವರು ಆಧುನಿಕ ಮನೋಭಾವನೆ ಉಳ್ಳವರು…. ಹೆಣ್ಣಿನ ಸ್ಥಾನ ಮಾನಕ್ಕೆ ಗೌರವ ಕೊಡುವವರು ಎಂದು ತಿಳಿದಿದ್ದೆ…. ಆದರೆ ನಾನು ಕೆಲಸಕ್ಕೆ ಸೇರಬಹುದೇ ಎಂದು ಕೇಳಿದಾಗ ಹೀಗೆ ರಾಕ್ಷಸನಂತೆ ನನ್ನ ಮೇಲೆ ಕೈ ಮಾಡಬಹುದು ಎಂದು ನಾನು ಎಣಿಸಿರಲಿಲ್ಲ…
ಈಗ ನಾನೇನು ಮಾಡಲಿ ಕೃಷ್ಣಾ…. ನೀನೇ ಏನಾದರೂ ದಾರಿ ತೋರಿಸು….ನಾನು ಕೆಲಸಕ್ಕೆ ಸೇರಲು ಸಮ್ಮತಿ ಸೂಚಿಸುವಂತೆ ಅವರ ಮನ ಪರಿವರ್ತನೆ ಮಾಡಿಸು…ಎಂದು ಬೇಡಿಕೊಂಡು ತನ್ನ ಮೈ ಮೇಲೆ ಎದ್ದಿದ್ದ ಬಾಸುಂಡೆಗಳನ್ನು ನೋಡಿದಳು. ದುಖಃ ಉಕ್ಕಿ ಬಂತು. ಕೆಂಪಗೆ ಅಲ್ಲಲ್ಲಿ ಬಾತುಕೊಂಡಿದ್ದವು. ಮುಟ್ಟಿದಾಗ ತುಂಬಾ ನೋಯುತ್ತಿತ್ತು. ನೇರ ಅಡುಗೆ ಮನೆಗೆ ನಡೆದಳು. ಒಲೆಯಲ್ಲಿ ಇನ್ನೂ ಬಿಸಿ ಕೆಂಡವಿತ್ತು. ಟವೆಲ್ ತೆಗೆದುಕೊಂಡು ಕೆಂಡದ ಮೇಲೆ ಹಿಡಿದಳು. ಅದು ಹದವಾಗಿ ಬಿಸಿಯಾದಾಗ ಅದನ್ನು ಮೈ ಮೇಲೆ ಹಾಗೂ ಕೈ ಕಾಲುಗಳ ಮೇಲೆ ಇದ್ದ ಬಾಸುಂಡೆಗಳ ಮೇಲೆ ಇಟ್ಟು ಕೊಂಡಳು. ಮೊದಲು ಉರಿಯಾದರೂ ಸ್ವಲ್ಪ ಹಿತವೆನಿಸಿತು. ಸ್ವಲ್ಪ ಹೊತ್ತು ಶಾಖ ಕೊಟ್ಟ ನಂತರ ನೋವು ಕಡಿಮೆ ಆದಂತೆ ಅನಿಸಿತು. ನಿಧಾನವಾಗಿ ಅಲ್ಲಿಂದ ಎದ್ದು ಮಲಗುವ ಕೋಣೆಗೆ ಸದ್ದಾಗದಂತೆ ಮೆಲುವಾದ ಹೆಜ್ಜೆ ಇಡುತ್ತಾ ಬಂದು ಪತಿಯ ಅನತಿ ದೂರದಲ್ಲಿ ಮುದುರಿ ಮಲಗಿದಳು. ನಿದ್ರೆಯಲ್ಲಿಯೂ ಪತ್ನಿಯು ಬಂದು ಪಕ್ಕದಲ್ಲಿ ಮಲಗಿದ ಅರಿವಾಗಿ ಪತ್ನಿಯನ್ನು ಪಕ್ಕಕ್ಕೆ ಸೆಳೆದುಕೊಂಡರು. ಮಿಸುಕಾಡಲೂ ಬಿಡದಂತೆ ಮತ್ತೊಮ್ಮೆ ಅವಳನ್ನು ಆವರಿಸಿಕೊಂಡರು. ನೋವಿಂದ ಚೀರಬೇಕು ಅನಿಸಿದರೂ ಪತಿಗೆ ಹೆದರಿ ಮೌನವಾಗಿ ಎಲ್ಲವನ್ನೂ ಸಹಿಸಿದಳು. ಮಿಲನವು ಸುಖದ ಸೋಪಾನವಾಗದೇ ಅವಳಿಗೆ ಸದಾ ಒಂದು ಭಯಾನಕ ಅನುಭವವಾಗಿ ಇರುತ್ತಿತ್ತು. ಬಳಲಿ ಬೆಂಡಾದ ಸುಮತಿಗೆ ಮೈ ಕೈ ನೋವು ಬಹಳ ಎನಿಸಿತು. ಜೊತೆಗೆ ಪತಿಯ ಈ ರೀತಿಯ ನಡವಳಿಕೆಯಿಂದ ಮಾನಸಿಕವಾಗಿ ಬಹಳ ನೊಂದಿದ್ದಳು. ನಿದ್ರೆ ಬಾರದೇ ಮಗ್ಗುಲು ಬದಲಿಸಿ ಮಲಗಲು ಪ್ರಯತ್ನಿಸಿದಳು. ಮೈ ಬಹಳ ನೋಯಿತ್ತಿದ್ದ ಕಾರಣ ನಿದ್ರೆ ಅವಳಿಂದ ದೂರವಾಯಿತು.
ಮೌನವಾಗಿ ಅಳುತ್ತಾ ಮಂಚದ ತುದಿಯಲ್ಲಿ ಮುದುರಿ ಮಲಗಿದಳು. ಬೆಳಗಿನ ಜಾವಕ್ಕೆ ಸ್ವಲ್ಪ ನಿದ್ರೆ ಹತ್ತಿತು.
ಕೋಳಿ ಕೂಗುವ ಸದ್ದಿಗೆ ನಿದ್ರೆ ಸಾಲದಿದ್ದರೂ ದಡಬಡಿಸಿ ಎದ್ದಳು. ಆದರೇಕೋ ಬಸವಳಿದು ಬಂದಂತಾಗಿ ಮತ್ತೆ ಮಂಚದ ಮೇಲೆ ಕುಳಿತಳು. ಮೈ ನಡುಗುತ್ತಿತ್ತು. ಮೈಯೆಲ್ಲಾ ಬಿಸಿಯಾದಂತೆ ಭಾಸವಾಯಿತು. ಹಣೆ ಮುಟ್ಟಿ ನೋಡಿಕೊಂಡಳು. ಹಣೆ ಕೆಂಡದಂತೆ ಸುಡುತ್ತಿತ್ತು. ಮೈಯೆಲ್ಲಾ ಬಹಳ ನೋವು ಅಲುಗಾಡಲೂ ಆಗುವುದಿಲ್ಲವೇನೋ ಅನಿಸಿತು. ಪಕ್ಕಕ್ಕೆ ತಿರುಗಿ ನೋಡಿದಳು. ಪತಿ ಆಗಲೇ ಎದ್ದು ಹೋಗಿದ್ದರು. ಓಹ್!! ಇನ್ನು ಅವರು ಕೆಲಸಕ್ಕೆ ಹೋಗಬೇಕಲ್ಲ… ಅಡುಗೆ ತಿಂಡಿ ಮಾಡಬೇಕು ಎಂದುಕೊಂಡು ಎದ್ದು ಸ್ನಾನದ ಕೋಣೆಗೆ ಹೋಗಿ ಹಂಡೆಯಲ್ಲಿ ಇದ್ದ ಬಿಸಿ ನೀರಿನಲ್ಲಿ ಸ್ನಾನದ ಶಾಸ್ತ್ರ ಮುಗಿಸಿದಳು. ಹಿಂದಿನ ದಿನವೇ ಹಂಡೆಯ ಒಲೆಗೆ ಬೆಂಕಿ ಹಚ್ಚಿ ನೀರನ್ನು ಬಿಸಿ ಮಾಡಿದ್ದಳು. ಬೆಳಗ್ಗೆ ಎದ್ದ ಕೂಡಲೇ ಸ್ನಾನ ಮಾಡುವ ಅಭ್ಯಾಸ ಅವಳಿಗೆ ರೂಢಿ ಇತ್ತು. ಅದೂ ಅಲ್ಲದೇ ಪತಿಯೂ ಬೇಗ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಬೆಳಗ್ಗೆಯೇ ಸ್ನಾನಕ್ಕೆ ನೀರು ಅವರಿಗೆ ಬೇಕಿತ್ತು. ಹಾಗಾಗಿ ಹಿಂದಿನ ದಿನವೇ ಹಂಡೆಯ ಒಲೆಗೆ ಬೆಂಕಿ ಹಚ್ಚಿ ಒಂದು ದೊಡ್ಡ ಮರದ ದಿಮ್ಮಿಯನ್ನು ಒಲೆಗೆ ತುರುಕಿ ಇಡುತ್ತಿದ್ದಳು. ಅದು ನಿಧಾನವಾಗಿ ಉರಿದು ಹಂಡೆಯಲ್ಲಿ ಬಿಸಿ ನೀರು ಸದಾ ಇರುತ್ತಿತ್ತು. ಸ್ನಾನ ಮುಗಿಸಿ ಶ್ರೀ ಕೃಷ್ಣನ ಮುಂದೆ ದೀಪ ಬೆಳಗಿಸಿ, ಶ್ಲೋಕಗಳನ್ನು ಹಾಡುತ್ತಾ ಅಡುಗೆ ಮನೆಗೆ ಬಂದು ಹಿಂದಿನ ದಿನ ರುಬ್ಬಿಟ್ಟ ದೋಸೆಯ ಹಿಟ್ಟಿಗೆ ಉಪ್ಪು ಸೇರಿಸಿ ಒಲೆ ಹಚ್ಚಿ ಹೆಂಚನ್ನು ಇಟ್ಟಳು. ಪಕ್ಕದ ಒಲೆಯಲ್ಲಿ ಅನ್ನಕ್ಕೆ ಅಕ್ಕಿ ತೊಳೆದು ಇಟ್ಟಳು. ಸಣ್ಣ ಬಿಸಿ ಒಲೆಯಲ್ಲಿ ಕಾಫಿ ಮಾಡಲೆಂದು ಹಾಲು ಕಾಯಿಸಲು ಇಟ್ಟಳು. ದೋಸೆಗೆ ಚಟ್ನಿ ರುಬ್ಬಿ ಮಿಶ್ರ ತರಕಾರಿಗಳನ್ನು ಹಾಕಿ ಸಾಂಬಾರ್ ಮಾಡಿದಳು. ಅಷ್ಟು ಹೊತ್ತಿಗೆ ತಯಾರಾಗಿ ವೇಲಾಯುಧನ್ ಅಡುಗೆ ಮನೆಗೆ ಬಂದರು. ಪತ್ನಿಯ ಮುಖ ನೋಡಿದರು. ಮುಖ ಬಾಡಿತ್ತು. ಕುತ್ತಿಗೆ ಹಾಗೂ ಕೈಗಳ ಮೇಲೆ ಬಾಸುಂಡೆ ಬರೆಗಳನ್ನು ಕಂಡರು.
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು