ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ನನ್ನೆನಪುಗಳ ಕದ ತಟ್ಟುವನೆಂದು
ಕೆಲಸಗಳನ್ನೆಲ್ಲಾ ಬದಿಗಿಟ್ಟಿದ್ದೇನೆ
ಖುಷಿಯ ಕಂಬನಿ ಮಿಡಿಯಲು
ನೋವಿನ ಕಣ್ಣೀರು ಬಸಿದಿಟ್ಟಿದ್ದೇನೆ
ನನ್ನಗುವಿನ ಕೀಲಿ ಕೈ ನೀನೆ
ಆಗಿರುವೆಯಲ್ಲ ನಲ್ಲ
ಮುದ್ದು ಮುಗುಳುನಗೆಯಿಂದ
ತುಟಿಯ ಶೃಂಗಾರ ಇಮ್ಮಡಿಸಿಟ್ಟಿದ್ದೇನೆ
ಒಲವಿನ ಸಾಗರದಿ ಮುಳುಗೇಳಲು
ತವಕವು ಹಪಹಪಿಸುತಿದೆ
ಸಿಹಿ ಭಾವನೆಗಳ ಉಡುಗೆಯನು
ಮನಕೆ ತೊಡಿಸಲು ಹೆಣೆದಿಟ್ಟಿದ್ದೇನೆ
ಹಗಲಿನಲಿ ನೀ ಹೊರುವ ಕೆಲಸದ
ಹೊರೆ ದೊಡ್ಡದು ಇನಿಯ
ಇರುಳಿನಲ್ಲಾದರೂ ನನ್ನ ನೆನಪಾಗಿಸಲು
ಚಂದ್ರ ಚುಕ್ಕಿಗಳಿಗೆ ಹೇಳಿಟ್ಟಿದ್ದೇನೆ
ವಾಣಿಗೆ ನೆನಪಾಗು ಇಲ್ಲವೇ ನೆನಪಿನ ಬಿಕ್ಕಳಿಕೆಯಾದರೂ ಕಳುಹಿಸು ,,,
ನೋವುಗಳನು ರಮಿಸಲು ನಿನ್ನೆನನಪುಗಳಿಗೆ
ಮುಲಾಮು ಎಂಬ ಹೆಸರಿಟ್ಟಿದ್ದೇನೆ
—————————————-
ವಾಣಿ ಯಡಹಳ್ಳಿಮಠ