ಶಿರೋಭ್ರಮಣೆ (Vertigo) ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ

‘ತಲೆ ಸುತ್ತು’ ಎಂಬ ಆ ಕೆಲವೇ ಕೆಲವು ಗಳಿಗೆಗಳಲ್ಲಿ ಭಯಭೀತರನ್ನಾಗಿಸುವ ಕ್ಷಣಿಕ ತೊಂದರೆ ಯಾರನ್ನು ತಾನೆ ಬಿಟ್ಟಿರಬಹುದು? ಕುರ್ಚಿ ಬಿಟ್ಟು ಏಳಲು ಆರಂಭಿಸಿದವರು ತಕ್ಷಣ ವಾಪಸ್ಸು ಅದೇ ಕುರ್ಚಿಯಲ್ಲಿ ದಿಢೀರಂತ ಕುಕ್ಕರಿಸುವ ಅನೇಕರನ್ನು ನಮ್ಮ ದೈನಂದಿನ ಬದುಕಿನಲ್ಲಿ ಕಂಡಿಲ್ಲವೆ? ಅಥವ ನೀವು ನಾವೆ ಒಮ್ಮೊಮ್ಮೆ ಅನುಭವಿಸಿರುವುದು ಸಹ ಸಾಧ್ಯ ಅಲ್ಲವೆ? ವೈದ್ಯರುಗಳು ತಮ್ಮ ಕ್ಲಿನಿಕ್ಕುಗಳಲ್ಲಿ ತಲೆಸುತ್ತು ಎಂಬ ಪ್ರಮುಖ ತೊಂದರೆ ಹೇಳಿಕೊಂಡು ಬರುವ ಅನೇಕರನ್ನು ಪರೀಕ್ಷಿಸಿ, ತಲೆಸುತ್ತಿನ ಕಾರಣ ಕಂಡುಹಿಡಿದು ಚಿಕಿತ್ಸೆ ನೀಡುವುದು ಸಾಮಾನ್ಯ. ಯಾರು ಸಹ ಇದಕ್ಕೆ ಹೊರತಲ್ಲ ಅಲ್ಲವೆ?

ಹಾಗಾದರೆ ತಲೆಸುತ್ತು ಬರಲು ಕಾರಣ?
ವೈದ್ಯಕೀಯ ಭಾಷೆಯಲ್ಲಿ ‘ವರ್ಟಿಗೊ’ ಎನ್ನುವ ಈ ತೊಂದರೆಗೆ ‘ಡಿಝಿನೆಸ್’ (vertigo or dizziness) ಎಂದೂ ಹೇಳುವರು. ಕನ್ನಡದಲ್ಲಿ ತಲೆಸುತ್ತು ಅಥವ ಶಿರೋಭ್ರಮಣೆ ಎನ್ನುವ ಈ ತೊಂದರೆಗೆ ಕಾರಣಗಳು ಸೋಂಕಿಂದ ಹಿಡಿದು, ಮೈಗ್ರೇನ್ ತಲೆನೋವು, ಆಘಾತಗಳು ಮತ್ತು ಇನ್ನೂ ಇತರೆ ಕಾರಣಗಳಿವೆ. ಹಾಗಾಗಿ ಯಾವ ಕಾರಣದಿಂದ ತಲೆಸುತ್ತು ಬಂದಿದೆಯೋ ಆ ರೋಗವನ್ನು ಕಂಡುಹಿಡಿದು, ಅದಕ್ಕೆ ಚಿಕಿತ್ಸೆ ನೀಡಿದರೆ, ತಲೆಸುತ್ತಿನಿಂದ ಆದ ಅಸ್ವಸ್ಥತೆಯನ್ನು ಕಡಿಮೆ ಮಾಡುವ ಜೊತೆಗೆ, ದೀರ್ಘಕಾಲದ ಪರಿಹಾರ ಕೂಡ ಸಾಧ್ಯ.

ವರ್ಟಿಗೊ ತೊಂದರೆಯಿಂದ ತಲೆಸುತ್ತು ಉಂಟಾಗಿ, ಅದರಿಂದ ಸುತ್ತಮುತ್ತಲಿನ ಪರಿಸರವೆ ನಮ್ಮ ಸುತ್ತ ಸುತ್ತಿದ ಹಾಗೆ ಅಥವ ನಾವೆ ಸುತ್ತು ಹೊಡೆಯುವಂತಹ ಪರಿಸ್ಥಿತಿ ಉಂಟಾಗುತ್ತದೆ. ಕೆಲವರಿಗೆ ಪ್ರಯಾಣ ಮಾಡುವಾಗ ಉಂಟಾಗುವಂತಹ ಚಲನಾ ಅಸ್ವಸ್ಥತೆ ಅಥವ ಪ್ರಯಾಣದ ಅಸ್ವಸ್ಥತೆ (motion sickness) ರೀತಿ ಇದೂ ಸಹ ಅನ್ನಿಸಲೂಬಹುದು.

ವಿಧಗಳು:                                
ಎರಡು ವಿಧವಾದ ವರ್ಟಿಗೊ ಕಾಯಿಲೆ ಇವೆ. ಬಾಹ್ಯ ಅಥವ ಹೊರವಲಯದ ವರ್ಟಿಗೊ (Peripheral vertigo) ಮತ್ತು ಕೇಂದ್ರೀಯ ವರ್ಟಿಗೊ (Central vertigo) ಎಂದು.

ಬಾಹ್ಯ ವರ್ಟಿಗೊ — ಈ ಮಾದರಿಯ ತಲೆಸುತ್ತುವಿಕೆ ಅತ್ಯಂತ ಸಾಮಾನ್ಯ. ಒಳ ಕಿವಿಯ (inner ear) ತೊಂದರೆಯಿಂದ ಅಥವ ವೆಸ್ಟಿಬ್ಯುಲಾರ್ ನರ್ವ್ (Vestibular nerve) ಎಂಬ ಕಿವಿಯ ನರದ (ಈ ನರವು ನಮ್ಮ ಸಮತೋಲನವನ್ನು ನಿಯಂತ್ರಿಸುತ್ತದೆ ಮತ್ತು ಒಳಕಿವಿ ಹಾಗು ಮೆದುಳಬಳ್ಳಿಯ ನಡುವೆ ಇರುವುದು) ತೊಂದರೆಯಿಂದ ಉಂಟಾಗುತ್ತದೆ.

ಕೇಂದ್ರೀಯ ವರ್ಟಿಗೊ — ಮೆದುಳಿನ ತೊಂದರೆಯಿಂದ ಉಂಟಾಗುವ ತಲೆಸುತ್ತು ಇದು. ಆ ತೊಂದರೆಗಳೆಂದರೆ-
… ಪಾರ್ಶ್ವವಾಯು
… ಮೆದುಳಿನ ಗೆಡ್ಡೆ
… ಮೈಗ್ರೇನ್ ಕಾಯಿಲೆ
… ಆಘಾತದಿಂದ ಮೆದುಳಿಗೆ ಪೆಟ್ಟು
… ಸೋಂಕು
… ಮಲ್ಟೀಪಲ್ ಸ್ಕ್ಲೀರೋಸಿಸ್ ರೋಗ (ಈ ರೋಗದಿಂದ ನಮ್ಮ ಪ್ರತಿರಕ್ಷಣಾ ವ್ಯವಸ್ಥೆ – immune system – ನರಗಳನ್ನು ಹಾನಿಗೊಳಿಸುತ್ತದೆ)
… ಕೆಲವು ಔಷಧಗಳು – ಆಸ್ಪಿರಿನ್, ಅಪಸ್ಮಾರ ತಡೆಯ ಔಷಧ ಮತ್ತು ಮದ್ಯ

ಕಾರಣಗಳು:
ವರ್ಟಿಗೊ ಉಂಟುಮಾಡುವ ಸಾಮಾನ್ಯ ಕಾರಣಗಳು —
… ಬಿನೈನ್ ಪ್ಯಾರಾಕ್ಸಿಸ್ಮಲ್ ಪೊಸಿಶನಲ್ ವರ್ಟಿಗೊ (BPPV)–ಇದು ಅತಿ ಸಾಮಾನ್ಯವಾದ ಮತ್ತು ತೀವ್ರವಾದ ತಲೆಸುತ್ತು. ಇದರಿಂದ ಬಳಲುವ ವ್ಯಕ್ತಿಯು ತಾನು ತಿರುಗುತ್ತಿರುವ ಅಥವ ಸುತ್ತುತ್ತಿರುವ ಹಾಗೆ ಸಂಕ್ಷಿಪ್ತವಾಗಿ ಅನುಭವಿಸುವನು. ಇಂಥ ಪ್ರಸಂಗಗಳು ತಲೆಯ ಕ್ಷಿಪ್ರವಾದ ಚಲನೆಯ ಕಾರಣ, ಉದಾಹರಣೆಗೆ ತಲೆಗೆ ಬಲವಾದ ಏಟು ಬಿದ್ದಾಗ, ಸಂಭವಿಸುತ್ತವೆ.
… ಸೋಂಕು–ವೆಸ್ಟಿಬ್ಯುಲಾರ್ ನ್ಯೂರೈಟಿಸ್ (vestibular neuritis) ಅಥವ ಲ್ಯಾಬರಿಂತೈಟಿಸ್ (labyrinthitis) ಎಂಬ ಕಿವಿಯ ವೆಸ್ಟಿಬ್ಯುಲಾರ್ ನರದ ವೈರಲ್ ಸೋಂಕು ಕೂಡ ತೀವ್ರತರವಾದ ಮತ್ತು ನಿರಂತರ ತಲೆಸುತ್ತಿಗೆ ಕಾರಣ.
… ಮೈಗ್ರೇನ್–ಮೈಗ್ರೇನ್ ಕಾಯಿಲೆಯ ಕಾರಣ ಉಂಟಾಗುವ ತಲೆಸುತ್ತು ನಿಮಿಷಗಳಿಂದ ಘಂಟೆಗಳವರೆಗು ತೊಂದರೆ ಕೊಡಬಹುದು.
… ಮನ್ಯಾರ್ಸ್ ಡಿಸೀಸ್ (Meniere’s disease)–ಒಳ ಕಿವಿಯಲ್ಲಿ (inner ear) ಹೆಚ್ಚು ದ್ರವ ನಿರ್ಮಾಣವಾದಾಗ, ಹಠಾತ್ತಾದ ತಲೆಸುತ್ತು ಆರಂಭವಾಗಿ ಘಂಟೆಗಟ್ಟಲೆ ತೊಂದರೆಯಾಗಬಹುದು.
… ತಲೆ ಅಥವ ಕುತ್ತಿಗೆಗೆ ಪೆಟ್ಟು–ತಲೆ ಅಥವ ಕುತ್ತಿಗೆಗೆ ಆಘಾತದಿಂದ ಪೆಟ್ಟು ಬಿದ್ದಾಗ, ಅದರಲ್ಲೂ ವೆಸ್ಟಿಬ್ಯೂಲಾರ್ ವ್ಯವಸ್ಥೆಗೆ ಏಟಾದಾಗ, ತಲೆಸುತ್ತು ಅತ್ಯಂತ ಸಾಮಾನ್ಯವಾದ ಲಕ್ಷಣ.
… ಔಷಧಗಳು–ಕೆಲವು ಔಷಧ ಸೇವನೆಯಿಂದ ವರ್ಟಿಗೊ ತಲೆಸುತ್ತಿನ ಜೊತೆಗೆ, ಶ್ರವಣದೋಶ ಹಾಗು ರಿಂಗಣಿಸುವ ಸಂವೇದನೆ ಸಹ ಸಾಧ್ಯ.
… ವೆಸ್ಟಿಬ್ಯುಲಾರ್ ನರದ ಮೇಲಿನ ಒತ್ತಡ; ಸಾಮಾನ್ಯವಾಗಿ ಕ್ಯಾನ್ಸರ್ ಅಲ್ಲದ ಗೆಡ್ಡೆಯಿಂದ.

Benign positional vertigo (ಸೌಮ್ಯ ಸ್ಥಾನಿಕ ವರ್ಟಿಗೊ/BPV):
ಸೌಮ್ಯ ಸ್ಥಾನಿಕ ತಲೆಸುತ್ತು ಎಂಬುದು ತ್ರಾಸದಾಯಕವಾದರೂ ಸಾಮಾನ್ಯವಾಗಿ ಅದು ಗಂಭೀರವಾದುದಲ್ಲ; ಕೆಳಕ್ಕೆ ಬೀಳಿಸುವಂಥ ಸಂದರ್ಭವನ್ನುಳಿದು. ಅದರ ಲಕ್ಷಣಗಳೆಂದರೆ —
… ತಲೆಸುತ್ತು
… ವ್ಯಕ್ತಿ ಅಥವ ಆತನ ಸುತ್ತಲಿನ ಸನ್ನಿವೇಶವೆ ಸುತ್ತಿದ ಹಾಗನ್ನಿಸುವುದು.
… ಅಸ್ಥಿರತೆ ಅಥವ ಸಮತೋಲನ ತಪ್ಪುವುದು.
… ಓಕರಿಕೆ
… ವಾಂತಿ
ಬಿ.ಪಿ.ವಿ. ಕಾಯಿಲೆಯಿಂದ ಸ್ವಲ್ಪ ಹೊತ್ತು ಸೌಮ್ಯವಾದ ಅಥವ ತೀವ್ರವಾದ ತಲೆಸುತ್ತಿಗೆ ಕಾರಣವಾಗಬಹುದು. ತಲೆಯ ನಿಲುವಿನ ಸ್ಥಾನದ ಬದಲಾವಣೆಯಿಂದ ಈ ಥರ ತಲೆಸುತ್ತಿಗೆ ಪ್ರಚೋದನೆಯಾಗಬಹುದು. ಇದಕ್ಕೆ ಇನ್ನಿತರೆ ಪ್ರಚೋದನೆಗಳೆಂದರೆ–
… ತಲೆಯನ್ನು ಮೇಲೆ ಕೆಳಗೆ ಆಡಿಸುವುದು (tilting)
… ಕೆಳಗೆ ಮಲಗುವುದು
… ಮೇಲೆ ಏಳುವುದು
… ಮಗ್ಗುಲು ಬದಲಾಯಿಸುವುದು

ಒತ್ತಡ — ವರ್ಟಿಗೊ ತೊಂದರೆಯು ಒತ್ತಡದಿಂದಲೆ (stress) ಬರದೆ ಇದ್ದರೂ, ಒತ್ತಡವಾದಾಗ ತಲೆಸುತ್ತನ್ನು ಹೆಚ್ಚು ಮಾಡಬಹುದು. ಅಲ್ಲದೆ ಒತ್ತಡದಿಂದ ಪಾರ್ಶ್ವವಾಯುವಿನ ಸಾಧ್ಯತೆ ಹೆಚ್ಚಾಗಿ, ಆ ಮೂಲಕ ವರ್ಟಿಗೊ ತೊಂದರೆ ಬರುವುದು ಸಾಧ್ಯ.

ಲಕ್ಷ್ಮಣಗಳು:
ವರ್ಟಿಗೊ ತೊಂದರೆಯಿಂದ ಉಂಟಾಗುವ ಬಹಳ ಮುಖ್ಯ ತೊಂದರೆಯೆಂದರೆ ತಲೆಸುತ್ತು, ಮತ್ತು ತಲೆ ಅಲ್ಲಾಡಿಸುವ ಚಲನೆಯಿಂದ ತಲೆಸುತ್ತು ಇನ್ನೂ ಹೆಚ್ಚಾಗುತ್ತದೆ. ರೋಗಿಗಳು ತಿರುಗುವ ಸಂವೇದನೆ ಬಗ್ಗೆ ಮುಖ್ಯವಾಗಿ ಹೇಳುತ್ತ, ಅವರು ಇರುವ ಕೊಠಡಿ ಅಥವ ಹತ್ತಿರದ ವಸ್ತುಗಳು ಗಿರಕಿಹೊಡೆದಂತೆ ಭಾಸವಾಗುವ ಬಗೆಗೆ ತಿಳಿಸುವರು.
ಇನ್ನುಳಿದ ಲಕ್ಷಣಗಳು —
… ಅತಿಯಾದ ಬೆವರು
… ಓಕರಿಕೆ
… ವಾಂತಿ
… ತಲೆನೋವು
… ಕಿವಿಗಳಲ್ಲಿ ರಿಂಗಣಿಸುವ ಸದ್ದು
… ಶ್ರವಣ ದೋಶ
… ಕಣ್ಣಿನ ಅನಿಯಂತ್ರಿತ ಚಲನೆ (Nystagmus)
… ಸಮತೋಲನ ಕಳೆದುಕೊಳ್ಳುವುದು

ಮೆದುಳಿನ ತೊಂದರೆಯಿಂದ ಉಂಟಾದ ವರ್ಟಿಗೊ ಆಗಿದ್ದರೆ ಇನ್ನೂ ಕೆಲವು ಲಕ್ಷಣಗಳು ಇರಬಹುದು —
… ನುಂಗುವ ತೊಂದರೆ
… ಎರಡೆರಡು ಕಾಣುವಿಕೆ (double vision)
… ಕಣ್ಣಿನ ಚಲನೆಯ ತೊಂದರೆ
… ಮುಖದ ಪಾರ್ಶ್ವವಾಯು
… ತೊದಲು ಮಾತು
… ಕೈ ಕಾಲುಗಳ ದುರ್ಬಲತೆ

ಚಿಕಿತ್ಸೆ:
ಚಿಕಿತ್ಸೆಗೆ ಮುನ್ನ ವೈದ್ಯರು ದೈಹಿಕ ಪರೀಕ್ಷೆಯಿಂದ
… ಸಮತೋಲನ ಇಲ್ಲದ ಕಾರಣ ನಡೆಯುವಾಗ ಆಗುವ ತೊಂದರೆ
… ಕಣ್ಣಿನ ಚಲನೆಯ ತೊಂದರೆಗಳು ಅಥವ ಅನಿಯಂತ್ರಿತ ಚಲನೆ
… ಶ್ರವಣ ದೋಷ
… ಹೊಂದಾಣಿಕೆ ಇಲ್ಲದೆ ಇರುವಿಕೆ
… ದುರ್ಬಲತೆ
ಮುಂತಾಗಿ ಕೇಳಿ ತಿಳಿದುಕೊಳ್ಳುವರು. ನಂತರ ಅವಶ್ಯಕವಾದ ಪರೀಕ್ಷೆಗಳನ್ನು ಮಾಡಿಸಬಹುದು —
… ರಕ್ತ ಪರೀಕ್ಷೆ
… ಇ.ಇ.ಜಿ (Electroencephalogram) ಇದರಿಂದ ಮೆದುಳಿನ ಕಾರ್ಯಕ್ಷಮತೆಯ ಬಗ್ಗೆ ತಿಳಿಯುತ್ತದೆ.
… ತಲೆಯ ಸಿ.ಟಿ. ಸ್ಕ್ಯಾನ್
… ಎಂ.ಆರ್.ಐ. ಸ್ಕ್ಯಾನ್
… ಲಂಬಾರ್ ಪಂಕ್ಚರ್ (ಬೆನ್ನಿಗೆ ಸೂಜಿ ಚುಚ್ಚುವ ಮೂಲಕ ಮೆದುಳು ಮತ್ತು ಮೆದುಳ ಹುರಿಗಳಲ್ಲಿ ಹರಿಯುವ ದ್ರವವನ್ನು – ಸೆರೆಬ್ರೋಸ್ಪೈನಲ್ ಫ್ಲೂಯಿಡ್ – ಹೊರತೆಗೆದು ಮಾಡುವ ಪರೀಕ್ಷೆ)
… ರೋಗಿಯ ನಡಿಗೆಯ ಪರೀಕ್ಷೆ

ಪ್ರಮುಖವಾಗಿ ಮೆದುಳಿನ ಯಾವ ತೊಂದರೆಯಿಂದ ವರ್ಟಿಗೊ ಬಂದಿರಬಹುದಾದ ಕಾರಣವನ್ನು ತಿಳಿದು, ಸಾಧ್ಯವಿರುವ ಕಡೆ ಅದರ ಚಿಕಿತ್ಸೆ ಮಾಡುವರು.
ತಲೆಸುತ್ತು, ಓಕರಿಕೆ ಮತ್ತು ವಾಂತಿಗೆ ಔಷಧ ನೀಡುವರು. ರೋಗಿಯ ಸಮತೋಲನ ಕಾಪಾಡುವ ದೈಹಿಕ ವಿಧಾನಗಳನ್ನು ತಿಳಿಸಿ ಅಭ್ಯಾಸ ಮಾಡಿಸುವರು. ಕೆಳಗೆ ಬೀಳದ ಹಾಗೆ ಸ್ನಾಯುಗಳ ಶಕ್ತಿವರ್ಧಕ ವ್ಯಾಯಾಮ ಹೇಳಿಕೊಡುವರು.

ತಲೆಸುತ್ತು ಬಂದ ಕ್ಷಣದಲ್ಲಿ ತೊಂದರೆ ಉಲ್ಬಣವಾಗದಂತೆ ಈ ಕೆಲವನ್ನು ಅಭ್ಯಸಿಸಬಹುದು–
… ಚಲಿಸಕೂಡದು. ಆ ಕ್ಷಣದಲ್ಲಿ ಮೆಲ್ಲ ಕೂರಬಹುದು, ವಿರಮಿಸಬಹುದು.
… ನಿಧಾನವಾಗಿ ಕೆಲಸ ಕಾರ್ಯ ಆರಂಭ ಮಾಡುವುದು.
… ಹಠಾತ್ತಾದ ಸ್ಥಾನ ಬದಲಾವಣೆ ಮಾಡದಿರುವುದು.
… ಆ ಕ್ಷಣಗಳಲ್ಲಿ ಓದಕೂಡದು.
… ತೀಕ್ಷ್ಣ ಬೆಳಕಿನಿಂದ ದೂರವಾಗಬೇಕು.
ತೊಂದರೆಯ ಸಮಯದಲ್ಲಿ ನಡೆಯಲು ಸಹಾಯಕರು ಬೇಕಾಗಬಹುದು. ಅಪಾಯಕಾರಿ ಕೆಲಸಗಳಾದ, ವಾಹನ ಚಾಲನೆ, ಯಂತ್ರಗಳ ಹತ್ತಿರದ ಕೆಲಸ, ಮೇಲೆ ಹತ್ತುವುದು ಮುಂತಾದುವುಗಳನ್ನು ಮಾಡದಿರುವುದು. ಇನ್ನುಳಿದಂತೆ ವರ್ಟಿಗೊ ಬಂದ ಕಾರಣದ ಮೇಲೆ ಚಿಕಿತ್ಸೆ ಅಥವ ಶಸ್ತ್ರಚಿಕಿತ್ಸೆ ಮುಂತಾಗಿ ಕೈಗೊಳ್ಳಬಹುದು.

ವರ್ಟಿಗೊ ಲಕ್ಷಣಗಳು ಆಗಾಗ ಬಂದು ಹೋಗಬಹುದು; ಸಾಮಾನ್ಯವಾಗಿ ಒಂದು ನಿಮಿಷಕ್ಕೂ ಕಡಿಮೆ ಹೊತ್ತು ತೊಂದರೆ ನೀಡಬಹುದು. ಮನ್ಯಾರ್ಸ್ ಡಿಸೀಸ್ ಆದರೆ ಪ್ರತಿ ಪ್ರಸಂಗವು ಸುಮಾರು ಇಪ್ಪತ್ತು ನಿಮಷಕ್ಕೂ ಮಿಕ್ಕಿ ತೊಂದರೆ ಆಗಬಹುದು. ಮೈಗ್ರೇನ್ ಕಾಯಿಲೆಯ ಕಾರಣ ಬಂದ ವರ್ಟಿಗೊ ಆದರೆ ಕೆಲವು ನಿಮಿಷಗಳಿಂದ ಘಂಟೆಗಟ್ಟಲೆ ಇರಬಹುದು.

ವರ್ಟಿಗೊ ಹಾಗು ಡಿಝಿನೆಸ್:
ವರ್ಟಿಗೊ ಮತ್ತು ಡಿಝಿನೆಸ್ ಎರಡರ ನಡುವೆ ಗೊಂದಲ ಖಂಡಿತ ಇದ್ದರೂ, ಒಬ್ಬ ವ್ಯಕ್ತಿ ನಿಶ್ಚಲವಾಗಿದ್ದಾಗ ಸುತ್ತಲಿನ ಪರಿಸರ ಅಥವ ಪ್ರಪಂಚ ಸುತ್ತುವಂತೆ ಅನಿಸಿದರೆ ಅದು ವರ್ಟಿಗೊ. ಆದರೆ ಡಿಝಿನೆಸ್ ಅನ್ನುವುದು ವ್ಯಕ್ತಿಯು ನಿಂತ ಸ್ವಂತ ಸ್ಥಾನದಲ್ಲಿ ಅಸಮತೋಲನದ ಭಾವನೆ. ಆದಾಗ್ಯೂ ಎರಡನ್ನೂ ಒಂದೇ ಸಂವೇದನೆಗೆ ಉಪಯೋಗ ಮಾಡುವುದು ಸಾಮಾನ್ಯ.

ಗರ್ಭಾವಸ್ಥೆಯಲ್ಲಿ ವರ್ಟಿಗೊ:
ಗರ್ಭಾವಸ್ಥೆಯ ಪ್ರಥಮ ತ್ರೈಮಾಸಿಕದಲ್ಲಿ ತಲೆಸುತ್ತುಸಾಮಾನ್ಯ. ಬಿ.ಪಿ.ವಿ. ತಲೆಸುತ್ತು ಮಹಿಳೆಯರಲ್ಲಿ ಪುರುಷರಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು. ಗರ್ಭಾವಸ್ಥೆ ಸಮಯದಲ್ಲಿ ತಲೆಸುತ್ತಿನ ಕಾರಣಗಳು –
… ಹಾರ್ಮೋನ್ (ಅಂತಃಸ್ರಾವಗಳ) ಗಳ ಏರಿಳಿತಗಳು
… ಸುದೀರ್ಘ ವಿಶ್ರಾಂತಿ – ಹಾಸಿಗೆಮೇಲೆ
… ಪೋಷಕಾಂಶಗಳ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇರಿದಂತೆ, ಚಯಾಚಪಚಯದಲ್ಲಿ (metabolism) ಬದಲಾವಣೆಗಳು. ರಕ್ತದಲ್ಲಿನ ಸಕ್ಕರೆ ಮಟ್ಟದ ಅಸ್ಥಿರತೆಯಿಂದ ಕೂಡ ತಲೆಸುತ್ತಿನ ಸಾಧ್ಯತೆ ಇದೆ. ಮೂರನೆ ತ್ರೈಮಾಸಿಕದಲ್ಲಿ ಗರ್ಭಿಣಿಯರು ಅಂಗಾತ ಮಲಗಿದಾಗ, ಉದರದ ಪ್ರಮುಖ ಅಭಿಧಮನಿಗಳ ಮೇಲೆ ಮಗುವಿನ ಒತ್ತಡವಾಗಿ ತಲೆಸುತ್ತು ಅನೇಕರಲ್ಲಿ ಅನುಭವವಾಗುತ್ತದೆ.

ವರ್ಟಿಗೊ ಅನುವಂಶಿಕವೆ?
ಕೆಲವು ಪ್ರಸಂಗಗಳಲ್ಲಿ ವರ್ಟಿಗೊ ವಂಶಪಾರಂಪರ್ಯ ಆಗಿರಬಹುದು. ಸಾಮಾನ್ಯವಾಗಿ ಮೈಗ್ರೇನ್ ತಲೆನೋವು ದಾಳಿಮಾಡಿದಾಗ ತಲೆಸುತ್ತು ಬರುವುದನ್ನು ಮೈಗ್ರೇನಸ್ ವರ್ಟಿಗೊ ಎಂದು ಕರೆಯುವರು ಮತ್ತು ಅದು ಆನುವಂಶಿಕವಾಗಿರುವುದು ಸಾಧ್ಯ.


2 thoughts on “ಶಿರೋಭ್ರಮಣೆ (Vertigo) ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ

  1. What is the medicine/ solution?
    Pl suggest that medicine.
    I have ringing sound in my rt ear 24/7
    Vertigo/ dizziness
    I am a diabetic since 4yrs

Leave a Reply

Back To Top