ಬೇಸಿಗೆ ಸುತ್ತಮುತ್ತ ಲೇಖನ- ಸುಜಾತಾ ರವೀಶ್

ಬೇಸಿಗೆ ಎಂದರೆ ಮನಸ್ಸಿನಲ್ಲಿ ನೆನಪುಗಳ ಬಾಲ್ಯದ ನೆನಪುಗಳ ದಿಬ್ಬಣ ಹೊರಡುತ್ತದೆ.
ಪರೀಕ್ಷೆಗಳು ಮುಗಿದ ನಂತರ ಬೇಸಿಗೆ ರಜೆ ಆರಂಭ. ಏಪ್ರಿಲ್ ಹತ್ತರ ಫಲಿತಾಂಶ ನೋಡಿಕೊಂಡ ಮೇಲೆ ಅಜ್ಜಿ ದೊಡ್ಡಮ್ಮ ಚಿಕ್ಕಮ್ಮಂದಿರ ಮನೆಗಳ ಭೇಟಿಯ ಕಾರ್ಯಕ್ರಮ. ಹಾಗಾಗಿ ಪರೀಕ್ಷೆ ಮುಗಿದ ನಂತರ ಏಪ್ರಿಲ್ 10 _15 ರವರೆಗೂ ನಮ್ಮ ಮನೆಯಲ್ಲಿ ನಮ್ಮದೇ ಬೇಸಿಗೆಯ ರಜೆ ಆಚರಣೆ.

ಪರೀಕ್ಷೆ ಮುಗಿದ ತಕ್ಷಣ ಒಂದೆರಡು ದಿನಗಳಲ್ಲಿ ಒಂದು ಮ್ಯಾಟಿನಿ ಸಿನಿಮಾ ನೋಡಲೇಬೇಕು ಎಂಬುದು ಒಂದು  ನಿಯಮ. ಅಲ್ಲಿಂದ ಬಂದು ಒಂದು ಮಸಾಲೆ ದೋಸೆ ತಿಂದರೆ ಅಂದಿನ ಕಾರ್ಯಕ್ರಮ ಸಾಂಗವಾದಂತೆ . ನಂತರ ಅದೇ ಊರಿನಲ್ಲಿದ್ದ ಸ್ನೇಹಿತರ ಬಂಧುಗಳ ಮನೆಗೆ ಹೋಗುವ ಕಾರ್ಯಕ್ರಮ.  ಬೆಳಿಗ್ಗೆ ತಿಂಡಿ ತಿಂದು ಹೊರಟರೆ ಸಂಜೆ ಹೊತ್ತು ಮುಳುಗುವ ವೇಳೆಗೆ ಮನೆಗೆ ವಾಪಸ್. ಮಧ್ಯಾಹ್ನದ ಊಟ ಅವರ ಮನೆಯಲ್ಲಿಯೇ. ಹಾಗೆ ಹೋದಾಗ ನಾವು ಓದದಿದ್ದ ಪುಸ್ತಕ ಅಥವಾ ಹಳೆಯ ನಿಯತಕಾಲಿಕೆಗಳಿದ್ದರೆ ಅದನ್ನು ಎರವಲು ತಂದು ಓದುವ ಕಾರ್ಯಕ್ರಮವಂತೂ ಕಡ್ಡಾಯ . ಹಾಗೆಯೇ ಅವರುಗಳು ನಮ್ಮ ಮನೆಗೆ ಒಂದು ಭೇಟಿ ನೀಡುವಂತದ್ದು.  ಗೆಳತಿಯರು ಗುಂಪು ಕಟ್ಟಿಕೊಂಡು ಯಾರಾದರೂ ಒಬ್ಬರ ಮನೆಯಲ್ಲಿ ಕಾಲ ಕಳೆಯುವ ಪರಿಪಾಠವಿತ್ತು .ಅದು ಅಂದಿನ ನಮ್ಮ ಮನರಂಜನೆ.

ಬೇಸಿಗೆ ಎಂದರೆ ನೆನಪಿಗೆ ಬರುವುದು ಮಲ್ಲಿಗೆ.  ನಮ್ಮ ಮನೆಯಲ್ಲಿ ಇದ್ದ ಮಲ್ಲಿಗೆ ಗಿಡಗಳಿದ್ದರಿಂದ ಮಧ್ಯಾಹ್ನ ಮೂರರಿಂದಲೇ ಪೊಣಿಸುವ ಚಟುವಟಿಕೆಗಳು ಆರಂಭವಾಗುತ್ತಿತ್ತು ಪ್ರತಿವರ್ಷ ಮಲ್ಲಿಗೆ ಮೊಗ್ಗಿನ ಜಡೆ ಹಾಕಿಸಿಕೊಳ್ಳುವ ಸಂಭ್ರಮ ಬೇರೆ. ಹಾಗೆಯೇ ಹೂ ಕಟ್ಟಿ ಪೊಣಿಸಿ ದಂಡೆ ಮಾಡುವುದು ಹೊಸ ಹೊಸ ವಿಧಾನಗಳನ್ನು ಕಲಿಯುವುದು ಇವೆಲ್ಲವೂ ಬೇಸಿಗೆಯ ನೆನಪುಗಳೇ.

ಕೊನೆ ಮೊದಲಿಲ್ಲದ ಆಟದ ಕಾರ್ಯಕ್ರಮಗಳು ಬೇಸಿಗೆಯ ಸಂಭ್ರಮವನ್ನು ಹೆಚ್ಚಿಸುತ್ತಿದ್ದವು. ಬೀದಿಯ ಮಕ್ಕಳ ಕಲರವವೇ. ಆಯಾಯಾ ವಯೋಮಾನದ ಗುಂಪುಗಳು ಆಡುತ್ತಿದ್ದ ಲಗೋರಿ ಕುಂಟೆಬಿಲ್ಲೆ ಪಾರ್ಟಿ ಕುಂಟಾಟ ಹೊರಾಂಗಣ ಕ್ರೀಡೆಗಳಾದರೆ, ಮಧ್ಯಾಹ್ನದ ಬಿಸಿಲಿನಲ್ಲಿ ಹೊರಗೆ ಬಿಡದಿದ್ದುದರಿಂದ ಚೌಕಭಾರ, ಕೈ ಮೇಲೆ ಕವಡೆ ಅಥವಾ ಕಾಶಿ ಕವಡೆ ಬಳೆ ಚೂರಿನಾಟ,ಚೀಟಿಯಲ್ಲಿ ರಾಜ ರಾಣಿ ಆಟ,ಹೆಸರು ಊರು ಬರೆಯುವಾಟ ಪರಮಪದ ಸೋಪಾನ ಪದ ಇವೆಲ್ಲವೂ ನಮ್ಮ ಪಾಲಿಗೆ ಖುಷಿಯನ್ನೀಯುತ್ತಿದ್ದ ಸಂಗತಿಗಳು.‌ ಯಾರಾದರೂ ಒಬ್ಬರ ಮನೆಯಲ್ಲಿ ಸೇರಿದರೆ ಅಂದಿನ ದಿನ ಆ ಮನೆಯ ಹಿರಿಯರಿಗೆ ಮಧ್ಯಾನದ ನಿದ್ದೆ ಪಾಪ ಕಸಿದುಕೊಂಡಂತೆ! ಅಷ್ಟು ಗಲಾಟೆ. ಆದರೆ ಯಾರೊಬ್ಬರೂ ಅದನ್ನು ತೋರುತ್ತಿರಲಿಲ್ಲ. ಕೆಲವೊಮ್ಮೆ ಅಮ್ಮಂದಿರೂ ನಮ್ಮೊಡನೆ ಆಟಕ್ಕೆ ಸೇರಿದಾಗ ಖುಷಿ ಇಮ್ಮಡಿಯಾಗುತ್ತಿತ್ತು.

ಬೇಸಿಗೆ ರಜೆಯಲ್ಲಿ ಒಮ್ಮೆಯಾದರೂ ಝೂ, ಕೆ ಆರ್ ಎಸ್, ಚಾಮುಂಡಿಬೆಟ್ಟ ಒಂಟಿಕೊಪ್ಪಲ್ ದೇವಸ್ಥಾನ ಇಲ್ಲಿಗೆಲ್ಲಾ ಅಕ್ಕ-ಪಕ್ಕದವರೆಲ್ಲ ಸೇರಿ ಒಟ್ಟಿಗೆ ಹೋಗುತ್ತಿದ್ದೆವು. ಸಿಟಿ ಬಸ್ಸಿನಲ್ಲಿ ಹೋಗಿ ಬಂದರೂ ಅದೆಷ್ಟು ಸಂಭ್ರಮ ಆಗ.  ಈಗ ಕಾರಿನಲ್ಲಿ ಹೋಗಲೂ ಸಹ ಬೇಜಾರು.   ಚಿಕ್ಕಾಪುಟ್ಟ ವಿಷಯಗಳಲ್ಲಿ ಖುಷಿ ಪಡುವುದನ್ನು ಮರೆತೇ ಬಿಟ್ಟಿದ್ದೇವೆ ಎನಿಸುತ್ತದೆ.

ಇನ್ನು ಕತ್ತಲಾದ ನಂತರ ಮುಸ್ಸಂಜೆಯಲ್ಲಿ ಗೇಟಿನ ಮುಂದೆ ಕಟ್ಟೆಯ ಮೇಲೆ ಕುಳಿತು ಹರಟೆ . ಆಗ ಅಜ್ಜಿ ಅಮ್ಮ ಅವರೆಲ್ಲ ಕಥೆಗಳನ್ನು ಹೇಳುತ್ತಿದ್ದು ಉಂಟು. .ರಾಮಾಯಣ ಮಹಾಭಾರತದ ಕಥೆಗಳು ಜಾನಪದ ಕಥೆಗಳು ಆಗ ಕೇಳಿದವು ಇನ್ನೂ ನೆನಪಿನಿಂದ ಮಾಸಿಯೇ ಇಲ್ಲ.

ಎಲ್ಲಕ್ಕಿಂತ ಹೆಚ್ಚು ಬೇಸಿಗೆ ಎಂದರೆ ಸಮಾನಾರ್ಥಕ ಪದ ಸಂಡಿಗೆಗಳ ತಯಾರಿಕೆ. ಮಾವಿನ ಕಾಯಿ ತೊಕ್ಕು ಉಪ್ಪಿನಕಾಯಿಗಳ ತಯಾರಿಕೆ ಒಂದು ಸಣ್ಣ ಕೈಗಾರಿಕೆಯೇ ಮನೆಯಲ್ಲಿ ನಡೆದಿರುತ್ತಿತ್ತು. ಮಾವಿನಕಾಯಿ ತೊಳೆದು ಒರೆಸಿ ದೊಡ್ಡ ದೊಡ್ಡ ಜಾಡಿಗಳಲ್ಲಿ ಉಪ್ಪಿನಕಾಯಿ ಹಾಕಿ ಓಟೆಯ ಮೇಲಿದ್ದ ತಿರುಳುಗಳನ್ನು ತೆಗೆದು ಮಾವಿನ ಕಾಯಿ ತೊಕ್ಕು ಮಾಡುತ್ತಿದ್ದುದು. ಅಕ್ಕಿಯ ಹಪ್ಪಳ,ಹುರಳಿ ಹಪ್ಪಳ ಅವಲಕ್ಕಿ ಹಪ್ಪಳ ಸಬ್ಬಕ್ಕಿ ಸಂಡಿಗೆ ಅರಳಿನ ಸಂಡಿಗೆ ಬಾಳಕದ ಮೆಣಸಿನಕಾಯಿ ಗೋರೀಕಾಯಿ ಬಾಳಕ ಇವೆಲ್ಲವೂ ತಯಾರಾಗುತ್ತಿತ್ತು ನಾವು ಸಹ ನಮ್ಮ ವಯಸ್ಸಿಗೆ ತಕ್ಕ ಹಾಗೆ ನಮ್ಮ ಕೈ ಜೋಡಿಸಿ ಸಹಕಾರ ನೀಡುತ್ತಿದ್ದೆವು. ದೊಡ್ಡ ದೊಡ್ಡ ತಟ್ಟೆ ಮೊರಗಳಲ್ಲಿ ಹಾಕಿ ಕೊಟ್ಟಿದ್ದನ್ನು ಏಣಿಯ ಮೇಲೆ ಇಟ್ಟು ಸಜ್ಜೆಯ ಮೇಲೆ ಇಡುತ್ತಿದ್ದುದ್ದು ಇಳಿಸಿಕೊಡುತ್ತಿದ್ದು ಮಕ್ಕಳ ಸೈನ್ಯವೇ. ಒಳಗೆ  ಅಮ್ಮ ಮಲಗಿದ್ದರೆ ಅದನ್ನು ಕಾಯುವುದು ನಾವುಗಳೇ .ನಮ್ಮ ಮನೆಯಲ್ಲಿ ಗೇಟಿನಿಂದ ಬಾಗಿಲ ತನಕ ಒಂದು ಉದ್ದ ಸಿಮೆಂಟ್ ಹಾಕಿದ ಹಾದಿ ಇತ್ತು .ಅಲ್ಲಿಯೇ ಚಾಪೆಯ ಮೇಲೆ ಹಳೆಯ ಪಂಚೆ ಸೀರೆಗಳನ್ನು ಹಾಕಿ ಸಂಡಿಗೆ ಹಪ್ಪಳಗಳನ್ನು ಒಣಗಿಸುತ್ತಿದ್ದೆವು.  ಕಾಗೆ ನಾಯಿ ಯಾವುದು ಬಂದು ಬಾಯಿ ಹಾಕದ ಹಾಗೆ ಅದರ ಕಾವಲು ನಮ್ಮದೇ.  ಕಥೆ ಪುಸ್ತಕಗಳನ್ನು ಓದುತ್ತಾ ಆ ಕೆಲಸ ಮಾಡುತ್ತಿದ್ದುದು ಇನ್ನೂ ನಿನ್ನೆ ಮೊನ್ನೆ ನಡೆದಂತಿದೆ.  ಆಗೆಲ್ಲ ಮಹಡಿ ಮೆಟ್ಟಲುಗಳಿರಲಿಲ್ಲ. ತಾರಸಿಯ ಮೇಲೆ ಹೋಗುವ ವ್ಯವಸ್ಥೆ ಇರಲಿಲ್ಲ .ಹಾಗಾಗಿ ಸಜ್ಜೆಯ ಮೇಲೆ ಅಳಿದುಳಿದ ಜಾಗದಲ್ಲಿಯೇ  ಒಣಭವಿಸುವ ವ್ಯವಸ್ಥೆ . ಅಂದಂದಿನ ಬ್ಯಾಚ್ ರುಚಿ ನೋಡಲು ದಿನಾ ಸಂಡಿಗೆ ಹಪ್ಪಳ ಕರಿಯುತ್ತಿದ್ದುದು ನಮಗೂ ಖುಷಿ. ಹೊರಗಿನ ತಿಂಡಿಗಳು ಹೆಚ್ಚು ಬಳಸದೆ ಇದ್ದಿದ್ದರಿಂದ ಇವುಗಳೇ ನಮ್ಮ ಸ್ನ್ಯಾಕ್ಸ್. ಮತ್ತು ಅತಿಥಿಗಳಿಗೂ ಅಷ್ಟೇ ಬಿಸ್ಕೆಟ್ ಬದಲು ಕಾಫಿಯೊಂದಿಗೆ  ಇವುಗಳನ್ನೇ ಕೊಡುತ್ತಿದ್ದುದು. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಇಟ್ಟುಕೊಳ್ಳುತ್ತಿತ್ತು.

ರಾಮೋತ್ಸವದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದು ಎಷ್ಟೋ ಬಾರಿ ಅಲ್ಲಿಂದ ಬರುವಾಗ ಬೇಸಿಗೆಯ ಮೊದಲ ಮಳೆಗೆ ಸಿಕ್ಕಿಹಾಕಿಕೊಂಡು ತಾಪತ್ರಯ ಪಟ್ಟಿರುವುದೂ ಉಂಟು.

ಆಗಿಲ್ಲ ಸೆಕೆ ಎಂದರು ಮೊದಮೊದಲು ಬೆತ್ತದ ಬೀಸಣಿಗೆಯಲ್ಲಿ  ಬೀಸಿಕೊಳ್ಳುತ್ತಿರುವುದು.  ನಂತರ ಮನೆಗೆ ಒಂದು ಟೇಬಲ್ ಫ್ಯಾನ್. ಸೀಲಿಂಗ್ ಫ್ಯಾನ್ ಬಂದದ್ದು ಎಷ್ಟು ವರ್ಷಗಳಾದ ನಂತರ ಆದರೂ ಈಗಿನಷ್ಟು ಒದ್ದಾಡುತ್ತಿರಲಿಲ್ಲಪ್ಪಾ….

ಮಲ್ಲಿಗೆ ಹೂ ಮಾವಿನ ಹಣ್ಣು ಬೇಕಾದಷ್ಟು ಆಟವಾಡುವ ಸಮಯ ಓದಬೇಕೆಂಬ ಶಿಕ್ಷೆ ಇಲ್ಲದ ಬೇಸಿಗೆ ನಮಗೆಲ್ಲ ಆಗ ಅತ್ಯಂತ ಆಪ್ಯಾಯಮಾನ ಹಾಗೂ ಅದರ ಆಗಮನವನ್ನೇ ನಿರೀಕ್ಷಿಸುತ್ತಾ ಇರುತ್ತಿದ್ದೆವು. ಅದನ್ನು ಖುಷಿಯಾಗಿ ಅನುಭವಿಸಿರುವುದು ನಮ್ಮ ತಲೆಮಾರಿನ ಅದೃಷ್ಟ ಎನಿಸುತ್ತದೆ. ಈಗಿನ ಮಕ್ಕಳಿಗೆ ಬೇಸಿಗೆ ಎಂದರೆ ಶಾಲೆಯ ಬದಲು ಸಮ್ಮರ್ ಕ್ಯಾಂಪ್ ಅಷ್ಟೇಯಾರೊಬ್ಬರ ಮನೆಗೂ ಯಾರೂ ಹೋಗಲು ಇಷ್ಟಪಡುವುದಿಲ್ಲ ಬರೀ  ಟೀವಿ ಮೊಬೈಲ್ಗಳಿಗೆ ಅಂಟಿಕೊಂಡು couch potato ಆಗುತ್ತಿರುವ ನಮ್ಮ ಇಂದಿನ ಮಕ್ಕಳನ್ನು ಕಂಡಾಗ ಪಾಪ ಎನಿಸುತ್ತದೆ ಬೇಸರವಾಗುತ್ತದೆ . ಆದರೆ ಕಾಲಾಯ ತಸ್ಮೈ ನಮಃ. ಬದಲಾವಣೆ ಜಗದ ನಿಯಮ ಅಲ್ಲವೇ?

One thought on “ಬೇಸಿಗೆ ಸುತ್ತಮುತ್ತ ಲೇಖನ- ಸುಜಾತಾ ರವೀಶ್

  1. ಅಂದದ ಚಿತ್ರಗಳೊಂದಿಗೆ ಪ್ರಕಟಿಸುವ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು .

    ಸುಜಾತ ರವೀಶ್

Leave a Reply

Back To Top