“ಅಥಣಿ ಶ್ರಿ ಶಿವಯೋಗಿಗಳು” ಸಾವಿಲ್ಲದ ಶರಣರು- ಡಾ. ಶಶಿಕಾಂತ್ ಪಟ್ಟಣ ರಾಮದುರ್ಗ

ಅಥಣಿ ಮುರುಘೕಂದ್ರ ಶಿವಯೋಗಿಗಳು
___________________________________

ಉತ್ತರ ಕರ್ನಾಟಕದಲ್ಲಿ ಅಥಣಿ ಶಿವಯೋಗಿಗಳು ಎಂದೇ ಜನರಿಂದ ಕರೆಸಿಕೊಂಡ ಮುರುಘೕಂದ್ರ ಶಿವಯೋಗಿಗಳು ಅಪೂರ್ವ ಶಿವಯೋಗ ಸಾಧಕರಲ್ಲಿ ಒಬ್ಬರು. ಇವರು ಉತ್ತರ ಕರ್ನಾಟಕದ ಕೃಷ್ಣಾನದಿ ತೀರಕ್ಕೆ ಸೇರಿದವರು. ಇತ್ತ ಉತ್ತರ ಕರ್ನಾಟಕದ ಕೊನೆಯ ಅಂಚು; ಅತ್ತ ಮಹಾರಾಷ್ಟ್ರದ ಆರಂಭದ ಅಂಚಿಗೆ ಸೇರಿದ ಅಥಣಿಯನ್ನು ಯೋಗಿ ಮುರುಘೕಂದ್ರರು ಲೋಕಪ್ರಸಿದ್ಧಿಗೊಳಿಸಿದರು. ಇವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲುಗುಂದದ ನಾಗಲಿಂಗಜ್ಜ, ಗರಗದ ಮಡಿವಾಳಪ್ಪ, ಸಂತ ಶಿಶುನಾಳ ಶರೀಫ, ಮೃತ್ಯುಂಜಯ ಸ್ವಾಮಿಗಳು, ಬಂಥನಾಳ ಸಂಗನಬಸವ ಸ್ವಾಮಿಗಳು, ಬೀಳೂರು ಅಪ್ಪಗಳು, ಮುಂತಾದ ‘ಸಿದ್ಧಸಾಧಕ’ರ ಸಮಕಾಲೀನರು. ಇವರ ವಾಕ್​ಸಿದ್ಧಿ ಮತ್ತು ಮನೋಸಿದ್ಧಿಗಳನ್ನು ಸಮಕಾಲೀನ ಜನರು ಅಪಾರವಾಗಿ ಗೌರವಿಸುತ್ತಿದ್ದರು. ಶಿವಯೋಗಿಗಳು ಅಥಣಿಯಿಂದ ಹೊರಟು ಉತ್ತರಕರ್ನಾಟಕವನ್ನೆಲ್ಲಾ ಆವರಿಸಿಕೊಂಡು ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಸಂಚರಿಸಿ ತಮ್ಮ ಶಿವಯೋಗಾನುಸಂಧಾನದಿಂದ ನೂರಾರು ಶಿಷ್ಯರನ್ನೂ ಸಹಸ್ರಾರು ಭಕ್ತರನ್ನೂ ತಮ್ಮತ್ತ ಸೂಜಿಗಲ್ಲಿನಂತೆ ಸೆಳೆದುಕೊಂಡ ಮಹಾಮಹಿಮರು. ಇವರು ಚಿತ್ರದುರ್ಗದ ಮುರುಘಾ ಪರಂಪರೆಗೆ ಸೇರಿದವರೆಂಬುದು ಒಂದು ವಿಶೇಷ.

ಜನನ-ವಿದ್ಯಾಭ್ಯಾಸ

ಅಥಣಿ ಶ್ರಿ ಮುರಗೆಂದ್ರ ಶಿವಯೋಗಿಗಳ ಮೂಲ ಪೂರ್ವಜರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಭಾಗೋಜಿಕೊಪ್ಪದವರು. ಹೀಗಾಗಿ ಇವರ ಮನೆತನದ ಅಡ್ಡ ಹೆಸರು ಭಾಗೋಜಿಕೊಪ್ಪಮಠ
ಕೃಷ್ಣಾನದಿ ತೀರದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಇಂಗಳಗಾವಿ ಗ್ರಾಮ. ಅಲ್ಲಿ ಭಕ್ತಿಸಂಸ್ಕಾರದಿಂದ ಪುನೀತರಾದ ಶರಣ ದಂಪತಿ ರಾಚಯ್ಯ ಮತ್ತು ನೀಲಾಂಬೆ ಇದ್ದರು. ಇಂಗಳಗಾವಿಯ ಜನರಿಗೆ ಈ ದಂಪತಿ ಆದರ್ಶರಾಗಿದ್ದರು. ಇಂತಹ ಶಿವಭಕ್ತ ದಂಪತಿಗೆ ಶಾಲಿವಾಹನ ಶಕೆ 1758ನೆಯ ದುಮುಖೀ ಸಂವತ್ಸರ ವೈಶಾಖಮಾಸದ 11ರ ಮುಂಜಾನೆ 5 ಗಂಟೆಗೆ ಕ್ರಿ.ಶ.1836ರಂದು ಶಿಶುವೊಂದರ ಜನನ ಆಯಿತು. ಈ ಮಗುವಿಗೆ ಗುರುಲಿಂಗಯ್ಯ ಎಂಬ ಹೆಸರನ್ನು ಇಟ್ಟರು. ಅಥಣಿಯಲ್ಲಿ ಗಚ್ಚಿನಮಠವಿತ್ತು. ಅಲ್ಲಿ ಮರುಳಶಂಕರ ಶಿವಯೋಗಿಗಳು ಮಠಾಧೀಶರಾಗಿದ್ದರು. ತಂದೆ-ತಾಯಿಗಳಿಬ್ಬರು ಆ ಮಗುವನ್ನು ಶಿವಯೋಗಿಗಳ ಉಡಿಯಲ್ಲಿ ಹಾಕಿಬಿಟ್ಟರು. ನಂತರ ಗುರುಲಿಂಗಯ್ಯನ ವಿದ್ಯಾಭ್ಯಾಸವನ್ನು ಶಿವಯೋಗಿಗಳೇ ವ್ಯವಸ್ಥೆ ಮಾಡಿದರು. ಗುರುಲಿಂಗಯ್ಯನ ಗುರುಗಳು ತೆಲಸಂಗದ ಬಸವಲಿಂಗದೇವರು. ಇವರ ಜತೆ ಬಸವಲಿಂಗ ಸ್ವಾಮಿಗಳು ಪ್ರಾಥಮಿಕ ಅಕ್ಷರಾಭ್ಯಾಸವನ್ನು ಗುರುಲಿಂಗಯ್ಯನವರಿಗೆ ಮಾಡಿಸಿದರು.

 ಶರಣ ತತ್ವ ಸಿದ್ಧಾಂತಗಳ ಉಪದೇಶ

ಗುರುಲಿಂಗಯ್ಯನವರು ಬದುಕಿದ್ದ ಕಾಲದಲ್ಲೆ ಪ್ರತಿಯೊಬ್ಬರು ಕಡ್ಡಾಯವಾಗಿ ಸಂಸ್ಕೃತವನ್ನು ಕಲಿಯಬೇಕಿತ್ತು. ಅಮರ-ಶಬ್ದ ಮತ್ತು ಶಿವಸ್ತೋತ್ರಗಳನ್ನು ಬಸವಲಿಂಗ ಸ್ವಾಮಿಗಳಿಂದ ಕಲಿತರು. ಇದರ ಜತೆಗೆ ವ್ಯಾಕರಣ ಮತ್ತು ಶರಣರ ವಚನಗಳ ಅಧ್ಯಯನವೂ ಸಾಗಿತು. 1844ರಿಂದ 1852 ರವರೆಗೆ ಮಮದಾಪುರದ ಮಹಾಸ್ವಾಮಿಗಳಿಂದ ವಿಶೇಷವಾಗಿ ಸಂಸ್ಕೃತಾಧ್ಯಯನ ಮತ್ತು ವಚನ ಶಾಸ್ತ್ರಾಧ್ಯಯನ ನಡೆಯಿತು. ಅಥಣಿಯ ಗುರುಶಾಂತಯೋಗಿಗಳಿಂದ ಷಟ್​ಸ್ಥಲ ಬ್ರಹ್ಮೋಪದೇಶವೂ ಇವರಿಗೆ ಆಯಿತು. ಈಗ ಗುರುಲಿಂಗದೇವರು ಗುರುಲಿಂಗಾರ್ಯನೆಂಬ ಅಭಿದಾನಕ್ಕೂ ನಂತರ ಮುರುಘೕಶ ಅಥವಾ ಮುರುಘೕಂದ್ರ ನಾಮದಿಂದ ಲೋಕಪ್ರಖ್ಯಾತಿಯನ್ನು ಪಡೆದರು. ಅಥಣಿ ಶಿವಯೋಗಿಗಳು ಗುರುಶಾಂತ ಶಿವಯೋಗಿಗಳಿಂದ 1852ರಲ್ಲಿ ಷಟ್​ಸ್ಥಲೋಪದೇಶ ಪಡೆದ ಮೇಲೆ ಪ್ರತಿನಿತ್ಯ ಇಷ್ಟಲಿಂಗಪೂಜೆ ಮತ್ತು ಶಿವಯೋಗ ಸಾಧನೆ ಮಾಡಲು ತೊಡಗಿದರು ಇದು ಸ್ವನಿಯಂತ್ರಣ ಮತ್ತು ಏಕಾಗ್ರತೆಯ ಸಾಧನೆಗೆ ಪೂರಕವಾಯಿತು. ಪರಮಾರ್ಥ ಪ್ರಪಂಚದಲ್ಲಿ ಧ್ಯಾನಸಾಧನೆ ಮಹತ್ತ್ವಪೂರ್ಣವಾದುದೇ ಸರಿ. ಅಥಣಿ ಶಿವಯೋಗಿಗಳು ಅಂತರಂಗ ಸಾಧನೆಯಲ್ಲಿ ತೊಡಗಿದರು. ಇದು ಬಹಿರಂಗದ ಸಾಧನೆಗೆ ಪೂರಕವಾಯಿತು. ಮುರುಘೕಂದ್ರ ಶಿವಯೋಗಿಗಳು ಷಟ್​ಸ್ಥಲ ಬ್ರಹ್ಮೋಪದೇಶ ಪಡೆದ ಮೇಲೆ 20 ವರ್ಷ ಕಾಲ ಏಕಾಂತಸಾಧನೆಯಲ್ಲೇ ತೊಡಗಿದ್ದರು. ಇದು ಅವರ ವ್ಯಕ್ತಿತ್ವವನ್ನು ಬೆಳೆಸಲು ಕಾರಣವಾಯಿತು.

ಲೋಕ ಕಲ್ಯಾಣ

ವ್ಯಕ್ತಿಕಲ್ಯಾಣವು ಲೋಕಕಲ್ಯಾಣದಲ್ಲಿ ಪರಮಸಾಧನವಾಗುತ್ತದೆಂಬ ನಂಬುಗೆ ಶಿವಯೋಗಿಗಳದಾಗಿತ್ತು. ವ್ಯಕ್ತಿಕಲ್ಯಾಣ ಆಗಬೇಕಾದರೆ ಲೋಕಾನುಭವವೂ ಅಗತ್ಯ. ಶಿವಯೋಗಿಗಳ ಮನಸ್ಸಿನಲ್ಲಿ ಈ ವಿಚಾರ ದೃಢವಾದ ತಕ್ಷಣವೇ 1856ರಿಂದ 1868ರವರೆಗೆ ಲೋಕಸಂಚಾರವನ್ನು ಕೈಗೊಂಡರು. ಹೊರಡುವಾಗ ಗುರುಗಳ ಅನುಮತಿಯನ್ನು ಪಡೆದರು. ಆ ದಿನಗಳಲ್ಲಿ ಪ್ರಚಲಿತದಲ್ಲಿದ್ದ ನಾಣ್ನುಡಿಯಂತೆ ‘ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಸಣ್ಣಸಣ್ಣ ಹಳ್ಳಿಗಳ ಭಕ್ತರ ಮನೆಯಲ್ಲಿ ಒಂದೊಂದು ದಿನ ತಂಗುತ್ತಿದ್ದರು. ಪಟ್ಟಣಗಳಲ್ಲಿ ಮಾತ್ರ ಐದುರಾತ್ರಿ ಇರುತ್ತಿದ್ದರು. ಇವರು ಹೋದೆಡೆಯೆಲ್ಲಾ ಜನ ಬಂದುಬಂದು ನೆರೆಯುತ್ತಿದ್ದುದು ವಿಶೇಷವಾಗಿತ್ತು.

ಶಿವಯೋಗಿಗಳು ಅಥಣಿಯಿಂದ ಹೊರಟು ಸೊಲ್ಲಾಪುರ, ಕಲ್ಯಾಣ, ಗೋಕರ್ಣ, ಬನವಾಸಿ, ಹರಿಹರ, ಹಂಪಿ, ಶ್ರೀಶೈಲ, ಕಂಚಿ, ಕಾಳಹಸ್ತಿ, ರಾಮೇಶ್ವರ, ಕಲಬುರಗಿ, ಸಂಗಮ, ಐಹೊಳೆ-ಪಟ್ಟದಕಲ್ಲು, ಸಿದ್ಧಗಂಗೆ, ಶಿವಗಂಗೆ, ಚಿತ್ರದುರ್ಗ, ಶಂಭುಲಿಂಗನಬೆಟ್ಟ ಮುಂತಾದ ದಕ್ಷಿಣಭಾರತದ ಎಲ್ಲಾ ಶಿವಕ್ಷೇತ್ರಗಳನ್ನು ಸಂದರ್ಶಿಸಿದರು. ಒಂದು ಕಡೆ ಶಿವಭಕ್ತರಿಂದ ಭಿಕ್ಷೆ ಮತ್ತೊಂದು ಕಡೆ ಶಿವಕ್ಷೇತ್ರಗಳ ದರ್ಶನ. ಇಂತಹ ಸಂಚಾರದ ನಡುವೆ, ಹಿಪ್ಪರಗಿ ಎಂಬ ಗ್ರಾಮದಲ್ಲಿ ನಡೆದ ಒಂದು ಘಟನೆ ಮಾತ್ರ ವಿಲಕ್ಷಣವಾದುದು. ಆ ಗ್ರಾಮದ ಶಿವಭಕ್ತನೊಬ್ಬ ಶಿವಯೋಗಿಗಳಿಗೆ ಹಿಡಿಜೋಳವನ್ನು ನೀಡಿದ. ಆ ಜೋಳವನ್ನೇ ಲಿಂಗಪ್ರಸಾದವೆಂದು ತಿಳಿದು ಬಂಡೆಯ ಮೇಲೆ ಜೋಳವನ್ನು ಅರೆದು-ಹಿಟ್ಟುಮಾಡಿ ಶಿವಯೋಗಿಗಳು ಸ್ವೀಕರಿಸಿದರು. ಅವರು ಲೋಕಸಂಚಾರದಲ್ಲಿದ್ದಾಗ ‘ಗುಹೇಶ್ವರಗಡ್ಡೆ’ಯಲ್ಲಿ ಆರುವರ್ಷ ‘ಶಿವಯೋಗಾನುಸಂಧಾನ’ದಲ್ಲಿದ್ದರು. ಆ ಗಡ್ಡೆಯಲ್ಲಿ ಹಾವು, ಚೇಳುಗಳು ಎಲ್ಲೆಂದರಲ್ಲಿ ಹರಿದಾಡುತ್ತಿದ್ದವು. ಭಕ್ತಜನರು ಇದನ್ನು ಶಿವಯೋಗಿಗಳ ಗಮನಕ್ಕೆ ತಂದಾಗ ಅವುಗಳ ಪಾಡಿಗೆ ಅವು ಇರುತ್ತವೆ; ನಮ್ಮ ಪಾಡಿಗೆ ನಾವು ಇರುತ್ತೇವೆ ಎಂದು ಉತ್ತರಕೊಟ್ಟರು.

ಶಿವಯೋಗಿಗಳು ಆರುವರ್ಷ ಗುಹೇಶ್ವರಗಡ್ಡೆಯಲ್ಲಿದ್ದು ಅಲ್ಲಿಂದ ಪರಮ ಶಿವಯೋಗಿಗಳಾದ ಅಂಕಲಗಿಯ ಅಡವಿಸ್ವಾಮಿಗಳ ದರ್ಶನ ಪಡೆಯಲು ಹೊರಟರು. ಅವರು ಹೋಗುತ್ತಿದ್ದ ಸ್ಥಳ ಘೊರಾರಣ್ಯವಾಗಿತ್ತು. ಆಗ ಅವರಿಗೆ ಹುಲಿಯೊಂದು ಎದುರಾಯಿತು. ಪರಮಸಾಧಕ ಶಿವಯೋಗಿಗಳು ಸಾತ್ವಿಕರು. ಅವರ ಮುಂದೆ ಹುಲಿ ಬಂದಾಗ, ಶಿವಯೋಗಿಗಳು ಪ್ರಸನ್ನರಾದರು. ಆ ಕಾಡಿನ ಹುಲಿಯೂ ಇವರನ್ನು ನೋಡಿ ಸರಿದುಹೋಯಿತಂತೆ. ಶಿವಯೋಗಿಗಳು ಈ ಸಂದರ್ಭವನ್ನು ಆಗಾಗ್ಗೆ ಸ್ಮರಿಸಿಕೊಂಡು ‘ಸಾತ್ವಿಕತೆಯ ಮುಂದೆ ತಾಮಸದ ಪ್ರಭಾವ ನಡೆಯುವುದಿಲ್ಲ’ ಎಂದು ಹೇಳುತ್ತಿದ್ದರಂತೆ. ನಂತರ ಅಡವಿಸ್ವಾಮಿಗಳನ್ನು ಕಂಡು ಅಲ್ಲಿ ಕೆಲಕಾಲವಿದ್ದರು. ಆಗ ‘ಶಿವಯೋಗ’ವನ್ನು ಕುರಿತು ಭಕ್ತಜನರೊಡನೆ ಸಂಭಾಷಿಸಿದರು. ಅಥಣಿ ಶಿವಯೋಗಿಗಳು ಮಾತಾಡುತ್ತಿರುವಾಗ ಭಕ್ತಜನರಿಗೆ ಅವರು ಹೇಳುವ ವಿಷಯ ಪ್ರತ್ಯಕ್ಷ ನಡೆದು ಹೋಗುತ್ತಿರುವ ಅನುಭವ ಉಂಟಾಗುತ್ತಿತ್ತು.

ದೇಶ ಸುತ್ತಿ ತತ್ವ ಬೋಧನೆ

ಶಿವಯೋಗಿಗಳು ಲೋಕಸಂಚಾರ ಹೊರಟ ಸಂದರ್ಭದಲ್ಲಿ ತಮ್ಮ ಗುರುಗಳಾದ ಮರುಳಶಂಕರ ದೇವರು ಮತ್ತು ಗುರುಶಾಂತ ಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿಯಿತು. ಅಥಣಿಗೆ ಮರಳಿ ಬಂದರು. ಆಗ ಚೆನ್ನಬಸವ ಸ್ವಾಮಿಗಳು ಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಶಿವಯೋಗಿಗಳು ಬಂದಾಗ, ಚೆನ್ನಬಸವ ಸ್ವಾಮಿಗಳು ಮಠದ ಅಧಿಕಾರವನ್ನು ವಹಿಸಿಕೊಳ್ಳಲು ಆಗ್ರಹಿಸಿದರು. ಆದರೆ, ಶಿವಯೋಗಿಗಳು ‘ಮಠಮಾನ್ಯಗಳ ಅಧಿಕಾರ ತಮಗೆ ಬೇಡವೆಂದೂ ಗುರುಗಳ ಪಾದಸೇವೆಯೆ ತಮಗೆ ಸಾಕು’ ಎಂದೂ ವಿನಮ್ರರಾಗಿ ನುಡಿದರು. ನಂತರ ಶಿವಯೋಗಿಗಳು ಸಂಚಾರ ಹೋಗದೆ ಗಚ್ಚಿನಮಠದಲ್ಲಿಯೇ ಉಳಿದು 1882ರಿಂದ ಶಿವಯೋಗಾನಂದದಲ್ಲಿ ನೆಲೆನಿಂತರು. ಶಿವಯೋಗಿಗಳು ಪ್ರತಿನಿತ್ಯ 4 ಗಂಟೆಗೆ ಎದ್ದು ಶಿವನಾಮ ಸ್ಮರಣೆ ಮಾಡುತ್ತ ನಿತ್ಯಕ್ರಿಯೆಗಳನ್ನು ಪೂರೈಸುತ್ತಿದ್ದರು. ನಂತರ ಶಿವಯೋಗ ಮಂಟಪ ಹಾಗೂ ಸುತ್ತಲಿನ ಜಾಗವನ್ನು ಗುಡಿಸುತ್ತಿದ್ದರು. ಊರ ಹೊರಗಡೆ ಇದ್ದ ಬಾವಿಗೆ ಹೋಗಿ, ನೀರನ್ನು ಸೇದಿಕೊಂಡು ಸ್ನಾನಮುಗಿಸಿ, ಬಟ್ಟೆಗಳನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ಪಕ್ಕದಲ್ಲಿದ್ದ ಹೂತೋಟಕ್ಕೆ ಹೋಗಿ ಹೂ-ಪತ್ರೆಗಳನ್ನು ಬಿಡಿಸಿಕೊಂಡು ಬಂದು ಲಿಂಗಪೂಜೆಯ ಸಾಮಗ್ರಿಗಳನ್ನು ತಾವೇ ತೊಳೆದುಕೊಂಡು ಲಿಂಗಪೂಜೆ ಮಾಡಿಕೊಳ್ಳುತ್ತಿದ್ದರು. ನಂತರ ಪ್ರಸಾದ ಸೇವನೆ ಆಗುತ್ತಿತ್ತು. ಮಧ್ಯಾಹ್ನ ಮರಳಿ ಪೂಜೆ ಮುಗಿಸಿ ಒಂದು ಗಂಟೆ ಯಾರಾದರೊಬ್ಬರು ಶಿವಯೋಗಿಗಳಿಂದ ವಚನ ಪಾರಾಯಣ ನಡೆಯುತ್ತಿತ್ತು. ಆ ವೇಳೆಯಲ್ಲಿ ಮೌನಾಚರಣೆ ಮಾಡುತ್ತಿದ್ದರು. ಶಿವಯೋಗಿಗಳು ತಮ್ಮ ಜೀವಿತ ಕಾಲದಲ್ಲಿ ಅಥಣಿಯ ಪರಿಸರದ ಭಕ್ತ ವರ್ಗಕ್ಕೆ ಸೇರಿದ ಶ್ರಿ ಢವಳೇಶ್ವರ ಮನೆತನದ ಶ್ರಿ ಸಿದ್ಧಲಿಂಗ ಅಪ್ಪನವರನ್ನು ಮಠದ ಪೀಠಾಧಿಪತಿಯನ್ನಾಗಿ ಮಾಡಿ ಅವರ ಜೊತೆಗೆ ಮಠದ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಚಟುವಟಿಕೆಗಳನ್ನು ನೋಡಿ ಕೊಳ್ಳುತ್ತಿದ್ದರು.

ಉಸಿರಾಯಿತು   ವಚನಸಾಹಿತ್ಯ

ಅಥಣಿ ಶಿವಯೋಗಿಗಳಿಗೊ ವಚನಗಳೆಂದರೆ ಬಲುಪ್ರೀತಿ.   .  1898ರಲ್ಲಿ ಶರಣ ಸಾಹಿತ್ಯ ವಿದ್ವಾಂಸರ ಸಭೆಯು ಅಥಣಿಯಲ್ಲಿ ನಡೆಯಿತು. ಇದು ಮುಂದೆ ಶರಣ ಸಾಹಿತ್ಯ ಪ್ರಕಟಣೆಗೆ, ಸಂಪಾದನೆಗೆ ಪರೋಕ್ಷವಾಗಿ ಕಾರಣವಾಯಿತು. ಆಕಾಲದಲ್ಲಿದ್ದ ಗಣ್ಯವಿದ್ವಾಂಸರೆಲ್ಲರು ಸೇರಿದ್ದೊಂದು ವಿಶೇಷ. ಇದಾದ ಎರಡು ವರ್ಷಕ್ಕೆ ‘ಲಿಂಗಾಯತ ವಿರಕ್ತ ಪರಿಷತ್ತು’ ಶಿವಯೋಗಿಗಳ ಮಾರ್ಗದರ್ಶನದಲ್ಲಿಯೇ ಅಸ್ತಿತ್ವಕ್ಕೆ ಬಂದಿತು. 1901ರಲ್ಲಿ ಅಥಣಿಯಲ್ಲಿ ಪ್ರಥಮ ಶರಣ ಸಾಹಿತ್ಯಸಮ್ಮೇಳನ ಜರುಗಿತು. ಶಿವಯೋಗಿಗಳೇ ಇದರ ಯಶಸ್ಸಿನ ರೂವಾರಿ. 1918ರಲ್ಲಿ ಹರ್ಡೆಕರ್ ಮಂಜಪ್ಪನವರಿಗೆ ದೀಕ್ಷಾಸಂಸ್ಕಾರವನ್ನು ನೀಡಿದರು. ಮಂಜಪ್ಪನವರು ಅತ್ತ ಬಸವಣ್ಣ; ಇತ್ತ ಗಾಂಧೀಜಿ ಇಬ್ಬರನ್ನೂ ಜತೆಗೂಡಿಸಿಕೊಂಡು ಸತ್ಯಾಗ್ರಹ, ಅಹಿಂಸೆ, ಗ್ರಾಮೋದ್ಯೋಗ, ಖಾದಿಪ್ರಚಾರ, ರಾಷ್ಟ್ರೀಯ ಆಂದೋಲನದಲ್ಲಿ ತೊಡಗಿಕೊಂಡರು. 1918ರಲ್ಲಿ ‘ಬಸವ ಜಯಂತಿ’ ನಡೆಸಲು ಪ್ರೇರಣೆ ನೀಡಿದವರೇ ಅಥಣಿ ಶಿವಯೋಗಿಗಳು. ನಂತರ ಕರ್ನಾಟಕದಾದ್ಯಂತ ಇದು ಪ್ರಚಾರಕ್ಕೂ ಆಚರಣೆಗೂ ಬಂದಿತು.

ಬಾಲ ಗಂಗಾಧರ ತಿಲಕರ ಭೇಟಿ

ಅಥಣಿ ಶಿವಯೋಗಿಗಳ ಕೃಪಾಕಟಾಕ್ಷಕ್ಕೆ ಬಂದವರು ಅನೇಕರು. ಅವರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರೂ ಒಬ್ಬರು; . ಆಗ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿತ್ತು. ಅಥಣಿ ಶಿವಯೋಗಿಗಳ ಹೆಸರು ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. 1917ರಲ್ಲಿ ತಿಲಕರು ಪುಣೆಯಿಂದ ಅಥಣಿಗೆ ದಯಮಾಡಿಸಿದರು. ಇದು ಚಾರಿತ್ರಿಕವಾಗಿ ನಡೆದ ಸಂಗತಿ. ಅವರು ಶಿವಯೋಗಿಗಳನ್ನು ಕಂಡು,‘ದೇಶಕ್ಕೆ ಸ್ವಾತಂತ್ರ್ಯ ಬರುವುದೆ?’ ಎಂದು ಕೇಳಿದ್ದರು. ಶಿವಯೋಗಿಗಳು ಸ್ವಲ್ಪಹೊತ್ತು ಸುಮ್ಮನಿದ್ದು ‘ಬಂದೇ ಬರ್ತದಪಾ’ ಎಂದು ದೃಢಸ್ವರದಲ್ಲಿ ಹೇಳಿ ‘ಸ್ವಾತಂತ್ರ್ಯ ಬಂದಾಗ ನಾನು ಒರುದಿಲ್ಲ ನೀವಿರುವುದಿಲ್ಲಪಾ’ ಎಂದರಂತೆ. ಆಗ ತಿಲಕರು ‘ದೇಶಕ್ಕೆ ಸ್ವಾತಂತ್ರ್ಯ ಬರುವುದು ಮುಖ್ಯವೇ ಹೊರತು, ನಾನು ಬದುಕಿರುವುದು ಮುಖ್ಯವಲ್ಲ’ ಎಂದು ಪ್ರತ್ಯುತ್ತರಿಸಿದರು. ಮುಂದೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಯಿತು. ಶಿವಯೋಗಿಗಳು ನುಡಿದ ಭವಿಷ್ಯ ನಿಜವಾಯಿತು.

ಬಿಡಿ ಜತ್ತಿ ಶಿವಯೋಗಿಗಳ ಹರಕೆಯ ಫಲ

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಾನಪ್ಪ ಜತ್ತಿ ಎಂಬ ಬಡ ಕಿರಾಣಿ ವ್ಯಾಪಾರಿ ಇದ್ದ. ಆತ ಮಠಕ್ಕೆ ಬಂದಾಗಲೆಲ್ಲಾ ಏನಾದರೊಂದು ‘ಸಾಹಿತ್ಯ’ ಹಿಡಿದುಕೊಂಡು ಬಂದವನೇ ಹೊರತು ಎಂದೂ ರಿಕ್ತಹಸ್ತದಲ್ಲಿ ಬಂದವನಲ್ಲ. ಒಮ್ಮೆ ಶಿವಯೋಗಿಗಳು ‘ನಿನ್ನ ಮಗ ಏನು ಮಾಡುತ್ತಿದ್ದಾನೆ’ ಎಂದು ಕೇಳಿದರು. ಅದಕ್ಕೆ ದಾನಪ್ಪ ‘ಅವನಿನ್ನೂ ಚಿಕ್ಕವನು, ಉಂಡಾಡಿಯಾಗಿ ತಿರುಗಾಡಿಕೊಂಡಿದ್ದಾನೆ’ ಎಂದು ಹೇಳಿದಾಗ ‘ಇಲ್ಲಾ ಅವ ರಾಜ್ಯ ಆಳ್ತಾನಪಾ’ ಎಂದು ಶಿವಯೋಗಿಗಳು ಮರುಮಾತು ಹೇಳಿ ಹಣ್ಣುಕೊಟ್ಟು ಕಳಿಸಿದರು. ದಾನಪ್ಪ ಊರಿಗೆ ಬಂದು ಆ ಹಣ್ಣನ್ನು ಮಗನಿಗೆ ಕೊಟ್ಟು ಶಿವಯೋಗಿಗಳ ಆಶೀರ್ವಾದ ನಿನಗಿದೆಯೆಂದು ತಿಳಿಸಿದನು. ಮುಂದೆ ಕೊಡುಗೈ ದಾನಿಗಳಿಂದ ಜತ್ತಿ ಅವರು ಪ್ರೌಢ ವಿದ್ಯಾಭ್ಯಾಸ ಮಾಡಿ, ಜಮಖಂಡಿ ಸಂಸ್ಥಾನದ ಮುಖ್ಯಮಂತ್ರಿಗಳಾದರು. ನಂತರ ದೇಶ ಸ್ವಾತಂತ್ರ್ಯ ಪಡೆದ ಮೇಲೆ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದರು. ರಾಷ್ಟ್ರಪತಿಯಾಗಿ ದೇಶವನ್ನು ಆಳಿದವರು.

ಶಿವಯೋಗ ಸಿದ್ಧಿ

ಅಥಣಿ ಶಿವಯೋಗಿಗಳು ಹಲವು ಸಿದ್ಧಿಗಳನ್ನು ಪಡೆದಿದ್ದರೆಂಬುದಕ್ಕೆ ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳು ಸಾಕ್ಷ್ಯ ನುಡಿಯುತ್ತವೆ. ಆದರೆ, ಅವರು ಅದನ್ನು ಎಂದೂ ಪ್ರದರ್ಶನಕ್ಕೆ ಬಳಸಿಕೊಂಡವರಲ್ಲ; ಲೋಕಕಲ್ಯಾಣಕ್ಕೆ ಮಾತ್ರ ಅದನ್ನು ಬಳಸಿದರು. ಅವರು ವಾಕ್​ಸಿದ್ಧಿ, ದೃಷ್ಟಿಸಿದ್ಧಿ ಮತ್ತು ಹಸ್ತಸಿದ್ಧಿ ಪಡೆದ ಶಿವಯೋಗಿಗಳೆನಿಸಿದ್ದರು. ಇದು ಹಲವರಿಗೆ ತಿಳಿದಿತ್ತು. ಅವರು 1856ರಿಂದ 1868ರವರೆಗೂ ದೇಶಸಂಚಾರಕ್ಕೆ ಹೊರಟಾಗ ಮತ್ತು 1877ರಿಂದ 1882ರವರೆಗೆ ತೀರ್ಥಕ್ಷೇತ್ರಗಳ ಯಾತ್ರೆಗೆ ಹೊರಟಾಗ ಇಂಥ ಕೆಲವು ಸಿದ್ಧಿಗಳನ್ನು ಶಿವಯೋಗಿಗಳು ಅನಿವಾರ್ಯವಾದ ಪ್ರಸಂಗದಲ್ಲಿ ಮಾತ್ರ ಬಳಸಿದರು.

ಅಥಣಿ ಶಿವಯೋಗಿಗಳು ಮೂಲತಃ ಚಿತ್ರದುರ್ಗದ ಮುರುಘಾಪರಂಪರೆಗೆ ಸೇರಿದವರೆಂಬುದು ಸರಿಯಷ್ಟೆ. ಚಿತ್ರದುರ್ಗದ ಚೆನ್ನವೀರದೇವರು ಕಾಶಿಯಲ್ಲಿ ‘ಜಯದೇವ’ ಪ್ರಶಸ್ತಿ ಪಡೆದು ಶಿವಯೋಗಿಗಳ ದರ್ಶನಕ್ಕೆ ಬಂದರು. ಆಗ ಅಥಣಿ ಶಿವಯೋಗಿಗಳು ಸವದತ್ತಿಯಲ್ಲಿ ಬಸವಪುರಾಣದ ಮುಕ್ತಾಯ ಸಮಾರಂಭದಲ್ಲಿದ್ದರು. ಚೆನ್ನವೀರದೇವರು ಶಿವಯೋಗಿಗಳಿದ್ದ ಜಾಗಕ್ಕೆ ಬಂದಾಗ ‘ನಮಗೆಲ್ಲರಿಗೂ ಜಗದ್ಗುರುಗಳಾಗುವವರು ಬರುತ್ತಿದ್ದಾರೆ. ಅವರಿಗೆ ಕೂಡಲು ಜಾಗಕೊಡ್ರಿ’ ಎಂದು ಹೇಳಿ ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡರು. ಮುಂದೆ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠಕ್ಕೆ ಅವರು ಪೀಠಾಧ್ಯಕ್ಷರಾದರು.

ಬಸವ ಪುರಾಣ ಪ್ರಿಯ ಕಾರ್ಯ

ಅಥಣಿ ಶಿವಯೋಗಿಗಳಿಗೆ ಬಸವಣ್ಣನವರ ವಚನಗಳೆಂದರೆ ಬಲು ಪ್ರೀತಿ. ಅವರು ‘ಅಪ್ಪನ ವಚನಗಳು’ ಎಂದೇ ಬಸವಣ್ಣನವರ ವಚನಗಳನ್ನು ಸಂಬೋಧಿಸುತ್ತಿದ್ದರು. ಪ್ರತಿದಿನ ಮಧ್ಯಾಹ್ನ ಅಪ್ಪನ ವಚನಗಳ ಪಠಣ ನಡೆಯುತ್ತಲೇ ಇರುತ್ತಿತ್ತು. ಆಗ ಶಿವಯೋಗಿಗಳು ಮೌನದಿಂದ ವಚನಗಳನ್ನು ಧ್ಯಾನಿಸುತ್ತಿದ್ದರು. ಅವರು ಸಂದರ್ಭ ಬಂದಾಗಲೆಲ್ಲಾ ವಚನಗಳನ್ನು ಸಾಂರ್ದಭಿಕವಾಗಿ ಉದಾಹರಿಸುತ್ತಿದ್ದರು. ಶಿವಯೋಗಿಗಳಿಗೆ ಚೆನ್ನಬಸವ ಪುರಾಣ, ಪ್ರಭುದೇವರ ಪುರಾಣ ಮತ್ತು ಬಸವಪುರಾಣಗಳು ಅಚ್ಚುಮೆಚ್ಚಿನ ಪುರಾಣಕಾವ್ಯಗಳಾಗಿದ್ದವು. ಅದರಲ್ಲೂ ಬಸವಪುರಾಣವನ್ನು ಕುರಿತು ಅನೇಕ ಕಡೆ ಪ್ರವಚನಗಳನ್ನು ಮಾಡುತ್ತಿದ್ದರು. 1903ರಲ್ಲಿ ಅಥಣಿಯಲ್ಲಿ ಬಸವಪುರಾಣವನ್ನು ಪ್ರಾರಂಭಿಸಿದರು. ಶಿವಯೋಗಿಗಳು ಹೇಳುವ ಬಸವಪುರಾಣವನ್ನು ಕೇಳಲು ದೂರದೂರದ ಹಳ್ಳಿಗಳಿಂದ ಜನರು ಬರುತ್ತಿದ್ದರು. ನಿಪ್ಪಾಣಿ ಪರದೇಶಿ ಮಠದಲ್ಲಿ, ಸದಲಗಾದ ವಿರಕ್ತಮಠದಲ್ಲಿ, ತೇರದಾಳದಲ್ಲಿ ನಡೆದ ಬಸವಪುರಾಣ ಕೇಳಲು ಜನರು ಜಾತ್ರೆಯಂತೆ ಬಂದು ಸೇರುತ್ತಿದ್ದರು. ಸಾಮಾನ್ಯವಾದ ಸಾಮತಿಗಳನ್ನು ತೆಗೆದುಕೊಂಡು ಹಿತಬೋಧನೆಯನ್ನು ಮನಮುಟ್ಟುವಂತೆ ಹೇಳುತ್ತಿದ್ದರು. ಜನರು ಭಾವಾವೇಶಕ್ಕೊಳಗಾಗಿ ಅದೇ ಗುಂಗಿನಲ್ಲಿ ಇರುತ್ತಿದ್ದರು. ಇವರ ಪುರಾಣ ಕೇಳಲು ಅನೇಕ ಮಠಗಳಿಂದ ವಿರಕ್ತರೂ, ಸಾಮಾನ್ಯ ಜನರೂ, ಶ್ರೀಮಂತರೂ ಬಂದು ಸೇರುತ್ತಿದ್ದುದು ವಿಶೇಷವಾಗಿತ್ತು. ಶಿವಯೋಗಿಗಳಿಗೆ ಪುರಾಣ ಹೇಳುವ ಕಲೆ ಚೆನ್ನಾಗಿ ಸಿದ್ಧಿಸಿತ್ತು.

ಲಿಂಗದೊಳಗೆ ಬಯಲದರು

ಅಥಣಿ ಶಿವಯೋಗಿಗಳು ವೃದ್ಧಾಪ್ಯದ ಕಡೆ ಸಾಗುತ್ತಿದ್ದರು. ಆದರೆ, ಅವರು ಪ್ರತಿನಿತ್ಯ ತ್ರಿಕಾಲದಲ್ಲೂ ಶಿವಪೂಜೆಯನ್ನು ಮಾಡದೆ ಇರುತ್ತಿರಲಿಲ್ಲ. ಒಮ್ಮೆ ಒಬ್ಬರು ‘ತಮ್ಮ ಲಿಂಗೈಕ್ಯ’ವು ಸೋಮವಾರ (ಶಿವನ ವಾರವೆಂಬ ಪ್ರತೀತಿ) ಆಗಬಹುದೆ?’ ಎಂದರಂತೆ. ಆಗ ‘ಇಲ್ಲಾ ಶನಿವಾರ ಆಗ್ತದಪಾ’ ಎಂದು ಮರುನುಡಿದರಂತೆ. ಅದರಂತೆ ಶಿವಯೋಗಿಗಳು ಶಾಲಿವಾಹನ ಶಕೆ 1843ನೆಯ ದುಮುಖಿ ನಾಮಸಂವತ್ಸರದ ಚೈತ್ರಮಾಸ ಕೃಷ್ಣಪಕ್ಷ ಪ್ರತಿಪದೆ ಶನಿವಾರ 11 ಗಂಟೆಗೆ ಲಿಂಗಾರ್ಚನೆಗೆ ಕುಳಿತರು. ಇಷ್ಟಲಿಂಗದಲ್ಲಿ ದೃಷ್ಟಿಯಿಟ್ಟು ಪತ್ರೆ-ಹೂವನ್ನು ಏರಿಸಿ, ಅಲ್ಲಿಯೇ ಲಿಂಗೈಕ್ಯರಾದರು. ಇಂಗ್ಲಿಷ್ ಕಾಲಮಾನದಂತೆ 23.04.1921ರಂದು ಅವರು ಶಿವಸಾಯುಜ್ಯವನ್ನು ಪಡೆದರು.

ಅಥಣಿ ಶಿವಯೋಗಿಗಳು ಅಂತರ್​ಜ್ಞಾನದೃಷ್ಟಿ ಹೊಂದಿದ್ದರು. ಅವರ ಬಳಿ ಬಂದವರಿಗೆ ‘ಬಿತ್ತಿದ್ದನ್ನು ಬೆಳೆದುಕೊ’ ಎಂದು ಸಾಂಕೇತಿಕವಾಗಿಯೂ ಒಡಪಿನ ಮಾತಿನಂತೆಯೂ ನುಡಿಯುತ್ತಿದ್ದರು. ಶಿವಯೋಗಿಗಳ ಮಾತಿನಲ್ಲಿ ದಯಾರ್ದ್ರತೆ ಸದಾ ಇರುತ್ತಿತ್ತು. ‘ನಡತೆಯೇ ಏಕನಿಷ್ಠೆ’ ಎಂದು ಜನರಿಗೆ ಬೋಧಿಸಿದರು. ಪ್ರತಿಯೊಬ್ಬರು ಪವಿತ್ರಸ್ಥಳದಲ್ಲಿ ಪೂಜ್ಯಬುದ್ಧಿಯನ್ನು ಇಟ್ಟುಕೊಳ್ಳಬೇಕೆಂದು ತಿಳಿಹೇಳುತ್ತಿದ್ದರು. ನಾವು ಸೇವೆ ಮಾಡುವಾಗ ‘ಅರಿವು’ ಮರೆಯಾಗದಂತೆ ಇರಬೇಕೆಂದು ಹೇಳಿದ ಶಿವಯೋಗಿಗಳು ಸದಾ ಹಸನ್ಮುಖರಾಗಿಯೇ ಇರುತ್ತಿದ್ದರು. ಅವರ ಬಳಿ ಬಂದ ಭಕ್ತರಿಗೆ ತಮ್ಮ ಸಹಜವಾದ ಕಾರುಣ್ಯಪೂರಿತ ದೃಷ್ಟಿಯನ್ನು ಹರಿಸುತ್ತಿದ್ದರು. ತಮ್ಮ ಬಳಿ ಇರುತ್ತಿದ್ದ ಹಣ್ಣನ್ನು ನೀಡಿ ಆಶೀರ್ವದಿಸುತ್ತಿದ್ದರು. ಪ್ರತಿಬಾರಿಯೂ ‘ಓಂ ನಮಃ ಶಿವಾಯ’ ಎಂದು ಹೇಳಿಯೇ ಮುಂದುವರಿಯುತ್ತಿದ್ದರು. ಅವರು ಹೂ-ಪತ್ರೆಗಳನ್ನು ಬಿಡಿಸಿಕೊಳ್ಳುವಾಗಲೂ ‘ಶಿವಜಪ’ವನ್ನು ಬಿಟ್ಟವರಲ್ಲ. ಹೀಗೆ 85 ವರ್ಷವರೆಗೆ ಬದುಕಿದ ಶಿವಚೇತನವು ಬಯಲಲ್ಲಿ ಬಯಲಾಯಿತು. ಅವರ ಸಮಾಧಿಯನ್ನು ಗಚ್ಚಿನಮಠದ ಶಿವಯೋಗ ಮಂಟಪದಲ್ಲಿ ನೆರವೇರಿಸಲಾಯಿತು. ಈಗಲೂ ನಾನಾ ಭಾಗಗಳಿಂದ ಅಥಣಿಗೆ ಬಂದವರು ಗಚ್ಚಿನಮಠಕ್ಕೆ ಬಂದು, ತುಸುಹೊತ್ತು ಶಿವಧ್ಯಾನ ಮಾಡಿ ಹೋಗುವುದು ಪದ್ಧತಿ. ಉತ್ತರ ಕರ್ನಾಟಕದ ಜನತೆಗೆ ಅಥಣಿ ಶಿವಯೋಗಿಗಳು ಸರ್ವಮಾನ್ಯರು, ಸಂಪೂಜ್ಯರು.

ಲಿಂಗಾಯತ ಧರ್ಮದ ಪುನರುತ್ಥಾನ ವಚನ ಚಳುವಳಿ ಆಶಯಗಳನ್ನು ಜನರಲ್ಲಿ ಪ್ರಸಾರ ಮಾಡಿ ಶಿವಯೋಗ ಸಾಮ್ರಾಟ ಎನಿಸಿಕೊಂಡ ಶ್ರೇಷ್ಠ ಶಿವಯೋಗ ಸಾಧಕರು.
_________________________

9 thoughts on ““ಅಥಣಿ ಶ್ರಿ ಶಿವಯೋಗಿಗಳು” ಸಾವಿಲ್ಲದ ಶರಣರು- ಡಾ. ಶಶಿಕಾಂತ್ ಪಟ್ಟಣ ರಾಮದುರ್ಗ

  1. ಅಥಣಿ ಶ್ರೀಗಳನ್ನು ಕುರಿತ ಅತ್ಯುತ್ತಮ ಲೇಖನ

  2. ಲಿಂಗಾಯತ ಧರ್ಮದ ಪುನರುತ್ಥಾನ ಮತ್ತು ವಚನ ಚಳುವಳಿಯ ಆಶಯಗಳನ್ನು ಜನರಲ್ಲಿ ಪ್ರಸಾರ ಮಾಡಿ, ಶಿವಯೋಗ ಸಾಮ್ರಾಟ ಎನಿಸಿಕೊಂಡ ಶ್ರೇಷ್ಠ ಶಿವಯೋಗ ಸಾಧಕರಾದ ಅಥಣಿ ಮುರುಗೇಂದ್ರ ಶ್ರೀ ಗಳ ಬಗೆಗೆ ಅರ್ಥಪೂರ್ಣವಾಗಿ ಮತ್ತು ಸವಿಸ್ತಾರವಾಗಿ ಲೇಖನ ಮೂಡಿಬಂದಿದೆ … ಸರ್

    ಸುಶಿ

  3. ಅಥಣಿ ಶ್ರೀ ಶಿವಯೋಗಿಗಳ ಕುರಿತು ಅರ್ಥಪೂರ್ಣ ಲೇಖನ ಸರ್

  4. ಅಥಣಿ ಶ್ರೀ ಶಿವಯೋಗಿಗಳ ಕುರಿತು ಅರ್ಥಪೂರ್ಣ ಲೇಖನ ಸರ್

    ಜಯಶ್ರೀ ಎಸ್ ಪಾಟೀಲ

    1. ಅಥಣಿ ಶ್ರೀ ಗಳ ಸಮಗ್ರ ಮಾಹಿತಿ ಲೇಖನ
      ಅಥ೯ವತ್ತಾಗಿ ತಿಳಿಸಿ ಕೊಟ್ಟಿದ್ದಾರೆ.ಶರಣಾಥಿ೯
      ಗಳು.ಸರ್

  5. ಮುರುಘೇಂದ್ರ ಶಿವಯೋಗಿಗಳ ಸಮಗ್ರ ಜೀವನ ಸ್ಪಷ್ಟೀಕರಣ ಅತ್ಯಂತ ಸುಂದರವಾಗಿದೆ ಸರ್

Leave a Reply

Back To Top