ಹಾರೋ..ಹಕ್ಕಿಯ ರೆಕ್ಕೆಯ ಮುರಿದು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಅವ.. ಬಾಳ ಉರ್ದಾಡಕತ್ಯಾನ… ಅವನಿಗೊಂದು ಜೋಡಿ ನೋಡಿ ಲಗ್ನ ಮಾಡಿದರೆ, ಎಲ್ಲ ಸರಿ ಹೋಗ್ತಾನೆ.

 “ಇವಳು ಯಾಕೋ.. ಯಾರು ಮಾತು ಕೇಳ್ತಾ ಇಲ್ಲ, ತುಂಬಾ ಹಠ ಮಾಡ್ತಾಳೆ, ಮದುವೆ ಮಾಡಿದರೆ ಲಮನೆ ಹೊತ್ತು ಬಾಳೆ ಮಾಡ್ತಾಳ, ಅವಾಗ ಎಲ್ಲ ಗೊತ್ತಾಗುತ್ತೆ..”

 ಹೀಗೆ ಮೇಲಿನ ಎರಡು ಸನ್ನಿವೇಶಗಳು ನಮ್ಮ ಹಿರಿಯರು ಯುವಕ ಯುವತಿಯರ ಬದುಕನ್ನು ಒಂದು ಶಿಸ್ತಿನ ದಾರಿಗೆ ತರಲು ಅವರು ಕಂಡುಕೊಂಡ ದಾರಿಯೇ ‘ಮದುವೆ’ ಎನ್ನುವ ಮೂರಕ್ಷರ..!!  ಮದುವೆ ಅದು ಗಂಡು ಹೆಣ್ಣುಗಳ ಸಮ್ಮಿಲನದ ಸಂಭ್ರಮ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆಯಂತೆ, ಇಂತಹ ಹಲವಾರು ಮಾತುಗಳನ್ನು ನಾವು ಸಮಾಜದಲ್ಲಿ ಕೇಳುತ್ತಿರುತ್ತೇವೆ.

 “ಸಂಸಾರವನ್ನು ಮಾಡುವಾಗ ಅವರು ಶಿಸ್ತಿನಿಂದ ಎಲ್ಲಿಯೂ ಅಂಡಲೆಯದಂತೆ ಇರುತ್ತಾರೆ” ಎನ್ನುವ ನಂಬಿಕೆ.  ಅದು ನಿಜವೂ ಹೌದು..!! ಗೆಳೆಯರೊಡನೆ ಎಲ್ಲಿಯೋ ಎಲ್ಲೆಂದರಲ್ಲಿ ತಿರುಗುವ ಹುಡುಗ, ತನ್ನ ಇಚ್ಛೆಗೆ ಅನುಸಾರವಾಗಿ ಅಡ್ಡಾಡಿಕೊಂಡು ಹಾರುವ ಹಕ್ಕಿಯ ರೀತಿ ಸ್ವಾತಂತ್ರ್ಯವನ್ನು ಅನುಭವಿಸುತ್ತಾ ಸ್ವಚ್ಛಂದವಾಗಿ ಓಡಾಡುತ್ತಿರುತ್ತಾನೆ.

 ತನ್ನಗನಿಸಿದ್ದನ್ನು ಯಾವುದೇ ಎಗ್ಗಿಲ್ಲದೆ ಕೆಲಸ ಮಾಡುತ್ತಿರುತ್ತಾನೆ. ಹಿರಿಯರ ಮಾತಿಗೆ ಬೆಲೆ ನೀಡುವುದಿಲ್ಲ. ಹಿರಿಯರ ಮಾತುಗಳೆಂದರೆ… ಆತನಿಗೆ ಅಲರ್ಜಿ, ಹಾಗಾಗಿ ಇವನ ಹಠಮಾರಿ ಧೋರಣೆ, ಕೊಂಕು ಮಾತುಗಳು, ಯಾವುದನ್ನು ಮಾಡಬೇಡ ಎಂದು ಹೇಳುತ್ತಾರೋ ಅದನ್ನು ಮಾಡಿಬಿಡುವ ಹಠ ಇದರಿಂದ ಅನೇಕ ಸಲ ಹಿರಿಯರು ಕಿರಿಕಿರಿಯನ್ನು ಅನುಭವಿಸುತ್ತಿರುತ್ತಾರೆ. ಮನೆಯ ಯಾವ ಕೆಲಸದಲ್ಲಿಯೂ ಪಾಲ್ಗೊಳ್ಳದೆ ಬದುಕಿಗೆ ಬೆನ್ನು ಮಾಡಿ ಓಡಿ ಹೋಗುವ ಹುಡುಗನನ್ನು ಒಂದು ಶಿಸ್ತಿಗೆ ತರುವುದಾದರೂ ಹೇಗೆ..?  ಎನ್ನುವ ಆಲೋಚನೆಯಲ್ಲಿರುವಾಗಲೇ ಅವರಿಗೆ ತಟ್ಟನೆ ನೆನಪಾಗುವುದು ಮದುವೆ…!!

ಇನ್ನೂ  ಅದೇ ಧೋರಣೆಯನ್ನು ಅನುಸರಿಸುತ್ತಿದ್ದ ಹುಡುಗಿಯ ಮನೋ ಧೋರಣೆಯನ್ನು ಬದಲಾಯಿಸಲು ಹಿರಿಯರು ಅನುಸರಿಸುವ ದಾರಿಯು ಅದೇ ಮದುವೆ..!!

 ಹಾಗಾಗಿ ಯೌವ್ವನದಲ್ಲಿ ಏನಾದರೂ ಸಾಧಿಸಬೇಕೆನ್ನುವ ಛಲ, ಸ್ಪೂರ್ತಿ ಇರುವಾಗಲೇ ಮದುವೆಯ ಮಾತಾಗಿ, ಒಂದು ಚೌಕಟ್ಟಿನ ಬದುಕಿನೊಳಗೆ ಬಂಧಿಸುವ ಕೌಶಲ್ಯ ಹಿರಿಯರಲ್ಲಿರುತ್ತದೆ.

 ಮೊನ್ನೆ ಕೊಪ್ಪಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸದ ನಿಮಿತ್ಯ  ಹೋಗಿದ್ದಾಗ ಅಲ್ಲಿಯ ಸೀನಿಯರ್ ನರ್ಸ್ ಒಬ್ಬರು, ತನಗೆ ಪರಿಚಯ ಇರುವ ಹುಡುಗನೊಡನೆ ಮಾತನಾಡುತ್ತಾ,  “ನಿಮ್ಮ ತಮ್ಮನ ಮದುವೆ ಆಯ್ತೆನೋ ಹುಡುಗ..” ಎಂದರು.
 “ಇನ್ನು ಇಲ್ಲ ಬುಡಕ್ಕ,ಅವನ್ಯಾಕೋ ಬೇಡ ಅಂತಿದ್ದಾನ”.  ಆಗ ದಾದಿ, “ಅವನಿಗೆ ಗೊತ್ತು ಕಣೋ,  ನಿನ್ನ ಮತ್ತು ನಿನ್ನ ಕುಟುಂಬದ ಪರಿಸ್ಥಿತಿಯನ್ನು ನೋಡುತ್ತಾನಲ್ಲ ಅವಾ, ಕಣ್ಣಾರೆ ಕಾಣುತ್ತಾನ ನಾನ್ಯಾಕೆ ಮದುವೆಯಾಗಿ ರೆಕ್ಕೆಯನ್ನು ಮುರಿಸಿಕೊಳ್ಳಲಿ, ಸ್ವಾತಂತ್ರ್ಯದ ಹಕ್ಕಿ ನಾನು ಎನ್ನುವ ಮಾತುಗಳನ್ನಾಡುತಿರಬಹುದು..” ಎಂದಳು ನಸ್೯ಬಾಯಿ…!!

 ಅದು ನಿಜವಿರಬಹುದು.
 ‘ಮದುವೆ’ ಆದ ತಕ್ಷಣ ಎಲ್ಲವನ್ನು ನಮ್ಮಿಂದ ಕಿತ್ತುಕೊಳ್ಳುವುದು ಸಾಧ್ಯವೇ…?  ನಮ್ಮ ಆಸೆ ಅಭಿಲಾಷೆಗಳನ್ನು ಬಂದವರು ಕಳೆದು ಬಿಡುತ್ತಾರಯೋ…?  ಎನ್ನುವ ಆತಂಕ. ಹೆಣ್ಣಾಗಲಿ, ಗಂಡಾಗಲಿ ಅವರವರ ಸಹಜ ಆಸೆಗಳನ್ನು, ಆಶಯಗಳನ್ನು ಈಡೇರಿಸಿಕೊಳ್ಳುವುದು ಅಷ್ಟೇ ಸತ್ಯ. ಆದರೆ ಒಂದು ಚೌಕಟ್ಟಿನ ಶಿಸ್ತಿನ ಬದುಕಿನೊಳಗೆ ಅವುಗಳನ್ನು ಈಡೇರಿಸಿಕೊಳ್ಳಬೇಕಾದ ಅನಿವಾರ್ಯತೆ ಬರುವುದಂತೂ ಸತ್ಯ. ಹಾಗಾಗಿ ಮದುವೆ ಅನ್ನೋದು ಶಿಸ್ತು ಕಲಿಸುವ ಶಾಲೆಯಿದ್ದಂತೆ.

 “ಅವಳ ಓದು ಅರ್ಧಕ್ಕೆ ನಿಲ್ಲಿಸದಂತೆ, ಪದವಿಯನ್ನು ಮುಂದುವರೆಸಲು ಸಹಾಯ ಮಾಡಬೇಕಾದ ದೊಡ್ಡ ಗುಣ ಗಂಡಿನಲ್ಲಿರಬೇಕು. ತನ್ನ ಗಂಡ ಸಮಾಜದಲ್ಲಿ ನಾಲ್ಕು ಜನರ ಮಧ್ಯದಲ್ಲಿ ಏನೋ ಸಾಧಿಸುತ್ತಾನೆ, ದೊಡ್ಡ ಗುರಿಯನ್ನು ಮುಟ್ಟುತ್ತಾನೆ ಅದಕ್ಕೆ ನಾನು ಸಹಕಾರ ನೀಡಬೇಕು” ಎನ್ನುವ ವಿಶಾಲಮನೋಭಾವ ಮದುವೆಯಾದ ಹೆಣ್ಣಿನಲ್ಲಿಯೂ ಇರಬೇಕು.

ಮದುವೆಯಾದ ತಕ್ಷಣ ಎಲ್ಲವೂ ಮುಗಿದು ಹೋಯಿತು ಎನ್ನುವ ಮನೋ ಧೋರಣೆ ಇಲ್ಲವಾಗಬೇಕು. ಮದುವೆ ಎಂದರೆ ಒಬ್ಬರಿಗೊಬ್ಬರು ಸಹಕಾರದಿಂದ ಒಬ್ಬರ ಗುರಿಯನ್ನೊಬ್ಬರು ಮುಟ್ಟಲು ಮೆಟ್ಟಿಲಾಗುವ, ಏಣಿಯಾಗುವ ದೃಷ್ಟಾಂತವಾಗಬೇಕು. ಹಾಗಾದಾಗ ಮದುವೆ ಬಂಧನವಾಗುವುದಿಲ್ಲ. ಮದುವೆ ಬಂಧುತ್ವ ಬೆಸೆಯುವ ಸೇತುವೆಯಾಗುತ್ತದೆ.

 ಇಲ್ಲವಾದರೆ….

ಯೌವನ ಒಂದು ಸುಂದರ ಅನುಭೂತಿ.  ಅದನ್ನು ಅನುಭವಿಸುವಾಗ ಹುಡುಗನಾಗಲಿ ಹುಡುಗಿಯಾಗಲಿ ಸ್ವಾತಂತ್ರ್ಯದ ಹಕ್ಕಿಯಾಗಿರುತ್ತಾರೆ. ಮದುವೆ ಮಾಡಿದ ತಕ್ಷಣ ಆ ಸ್ವಾತಂತ್ರ್ಯವನ್ನು ಕಳೆದು ಕೊಂಡು ಬಿಡುತ್ತಾರೆ ಎನ್ನುವ ಸಂಗತಿ ಸಮಾಜದಲ್ಲಿ ಬೇರು ಬಿಟ್ಟಿದೆ.  ಅದು ನಿಜವೂ ಇರಬಹುದು. ಮದುವೆಯಾದ ತಕ್ಷಣ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದಿಲ್ಲ. ಸ್ವಾತಂತ್ರ್ಯವನ್ನು ಅನುಭವಿಸುವ ದಾರಿ ವಿಭಿನ್ನವಾಗಿರುತ್ತದೆ.

ಅದು  ಸೃಷ್ಟಿಗೆ  ಒಳಪಡುತ್ತದೆ. ಅದನ್ನು ಗಂಡು ಮತ್ತು ಹೆಣ್ಣಿಗೆ ತಿಳಿಸಿ ಹೇಳುವ ಹೊಣೆಗಾರಿಕೆ ಹಿರಿಯರಲ್ಲಿರಬೇಕು.  ಇಂದು ಅಂತಹ ಮಾರ್ಗದರ್ಶನದ ಮಾತುಗಳು ಸಲಹೆಗಳು ಹಿರಿಯರಿಂದ ಬರುತ್ತಿಲ್ಲ. ಹಿರಿಯರಿಂದ ಮಾರ್ಗದರ್ಶನದ ಮಾತುಗಳು ಬಂದರೂ ಕೇಳುವ ಸವಧಾನ ಇಂದಿನ ಯುವಕ ಯುವತಿಯರಲ್ಲಿ ಇಲ್ಲ.  ಹಾಗಾಗಿ ಮದುವೆಯಾದ ಮೂರು ತಿಂಗಳಿಗೋ, ವರ್ಷಕ್ಕೂ ಮನಸ್ತಾಪಗಳುಂಟಾಗಿ,

 “ನನ್ನಿಂದ ಅವರಿಗೆ ತೊಂದರೆಯಾಯಿತು ; ಇವರಿಂದ ನನಗೆ ತೊಂದರೆಯಾಯಿತು” ಎನ್ನುವ ಕಸಿವಿಸಿ ಮನೋಭಾವದೊಳಗೆ, ಬದುಕಿನ ದ್ವಂದ್ವದೊಳಗೆ ಬಿದ್ದು ಒದ್ದಾಡುತ್ತಾರೆ. ಮನಸ್ತಾಪಗಳು ಉಂಟಾಗುತ್ತವೆ. ಕ್ರಮೇಣ ಅದು ಒಬ್ಬರಿಗೊಬ್ಬರು ಮಾತನಾಡಲಾರದಷ್ಟು ವಿಕೋಪಕ್ಕೆ ಹೋಗುತ್ತದೆ.

ಇದು ಎಲ್ಲವನ್ನು ಮೀರಿ ಬದುಕನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ. ಒಬ್ಬರಿಗೊಬ್ಬರು ಅನುಸರಿಸಿಕೊಂಡು ನಡೆದಾಗ ಸ್ವಾತಂತ್ರ್ಯದ ಹಕ್ಕಿಯಂತೆ ರೆಕ್ಕೆ ಬಿಚ್ಚೆ ಹಾರಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ಹೆಂಡತಿಯಿಂದ ಗಂಡನ ಸ್ವಾತಂತ್ರ್ಯದ ಹಕ್ಕಿಯ ರೆಕ್ಕೆ ಮುರಿದುಬಿಡುತ್ತದೆ ಎಂಬ ಹಪಾಹಪಿ ಉಂಟಾಗುತ್ತದೆ. ಇಬ್ಬರು ಸಮತೋಲಿತವಾಗಿ ಬದುಕನ್ನು ಅನುಭವಿಸಬೇಕು. ಆಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಯಾರೊಬ್ಬರ  ರೆಕ್ಕೆಯನ್ನು ಯಾರು ಮುರಿಯಬಾರದು. ಹಕ್ಕಿಯ ರೆಕ್ಕೆ ಮುರಿದು ಮುಸುಮುಸಿ ನಗಬಾರದು. ಅಂದಾಗ ಮಾತ್ರ ಬದುಕು ಅರಳುತ್ತದೆ.


Leave a Reply

Back To Top