ಏಪ್ರಿಲ್ ಹತ್ತು ಸುಜಾತಾ ರವೀಶ್ ಅವರ ಲೇಖನ

ಈಗ ನಲವತ್ತು ಐವತ್ತರ ವಯೋಮಾನದಲ್ಲಿರುವವರಿಗೆಲ್ಲಾ ಖಂಡಿತ ಚೆನ್ನಾಗಿ ನೆನಪಿನಲ್ಲಿ ಇದ್ದೇ ಇರುತ್ತದೆ. ಏಪ್ರಿಲ್ ಹತ್ತು ಎಂದರೆ ಪಬ್ಲಿಕ್ ಪರೀಕ್ಷೆಗಳನ್ನು ಹೊರತುಪಡಿಸಿ ಶಾಲಾ ಪರೀಕ್ಷೆಗಳ ಫಲಿತಾಂಶ ನೀಡುವ ದಿನ .
ಸಾಮಾನ್ಯ ಮಾರ್ಚ್ ನಡುಭಾಗ ಅಥವಾ ಅಂತ್ಯದ ವೇಳೆಗೆ ಪರೀಕ್ಷೆಗಳು ಮುಗಿದರೆ ಅದೇ ವರ್ಷ ಏಪ್ರಿಲ್ ಹತ್ತರಂದು ಫಲಿತಾಂಶ. ನಂತರ ಮೇ ೨೨ ರಂದು ಶಾಲೆ ಪುನರಾರಂಭ . ಇಡೀ ವರ್ಷದ ಹನ್ನೆರಡು ತಿಂಗಳಿನ ಫೀಸ್ ಅನ್ನು ಶಾಲೆಯವರು ವಸೂಲಿ ಮಾಡಲು ಇದೊಂದು ಒಳ್ಳೆಯ ಯೋಜನೆ ಎಂದು ಚಿಕ್ಕಂದಿನಲ್ಲಿ ಹೇಳುತ್ತಿದ್ದುದು ಇನ್ನೂ ನೆನಪು .  ಶಾಲೆಯ ಪರೀಕ್ಷೆ ಮುಗಿದ ಮೇಲೂ ಅರ್ಧ ದಿನ ಶಾಲೆ ನಡೆಸುತ್ತಿದ್ದರು. ಆದರೆ ಅದು ಕಡ್ಡಾಯವಲ್ಲ ಹೋಗಿ ಆಟವಾಡಿ ಬರಬಹುದಿತ್ತು . ಆದರೆ ಹೆಚ್ಚಿನಂಶ ಪರೀಕ್ಷೆಗಳು ಮುಗಿದ ತಕ್ಷಣ ಬೇರೆ ಊರುಗಳಿಗೆ ಹೋಗಿ ಏಪ್ರಿಲ್ ಹತ್ತರ ವೇಳೆಗೆ ವಾಪಸ್ ಬರುತ್ತಿದ್ದುದೇ ವಾಡಿಕೆ .

ನಾವೂ ಅಷ್ಟೇ ಪರೀಕ್ಷೆ ಮಾರ್ಚ್ ನಡುಭಾಗದಲ್ಲೇ ಮುಗಿದರೆ ಅಜ್ಜಿಯ ಮನೆಗೆ ಕರೆದುಕೊಂಡು ಹೋಗಿಬಿಡುತ್ತಿದ್ದರು.  ಏಪ್ರಿಲ್ ಹತ್ತರ ಫಲಿತಾಂಶದ ದಿನದ ವೇಳೆಗೆ ಮತ್ತೆ ಊರಿಗೆ ವಾಪಸ್ . ಹಾಗಂತ ಫಲಿತಾಂಶ ನೋಡಿಯೇ ಪಾಸು ಫೇಲು ಎಂದು ತಿಳಿಯಬೇಕಾದ ವರ್ಗದಲ್ಲಿ ನಾವೇನು ಇರಲಿಲ್ಲ.  ಖಂಡಿತ ಪಾಸ್ ಆಗುತ್ತದೆ ಎಂದು ಗೊತ್ತಿತ್ತು ಆದರೆ ಮಾರ್ಕ್ಸ್ ಕಾರ್ಡ್ ಕೊಡುವ ಆ ದಿನವನ್ನು ತಪ್ಪಿಸಿಕೊಳ್ಳಲು ಮಾತ್ರ  ಇಷ್ಟವಿರುತ್ತಿರಲಿಲ್ಲ.  ಮನೆಯಲ್ಲಿಯೂ ಅಷ್ಟೆ ತೀರಾ ಹತ್ತಿರದವರ ಮನೆಯಲ್ಲಿ ಶುಭ ಸಮಾರಂಭಗಳು ಏನಾದರೂ ಇದ್ದರೆ ಮಾತ್ರ ಚಕ್ಕರು ಇಲ್ಲದಿದ್ದರೆ ಫಲಿತಾಂಶದ ದಿನ ಖಂಡಿತ ಶಾಲೆಗೆ ಹೋಗಿಯೇ ಹೋಗುತ್ತಿದ್ದೆವು .

ಒಂದು ಮತ್ತು ಎರಡನೆಯ ಕ್ಲಾಸು  ಅಷ್ಟೊಂದು ನೆನಪಿಲ್ಲ.  ಮೂರನೇ ಕ್ಲಾಸಿನಿಂದ ಆರನೇ ಕ್ಲಾಸಿನ ತನಕ ಪ್ರತಿ ಫಲಿತಾಂಶದ ದಿನದಲ್ಲಿಯೂ  ಆ ದಿನ ಶಾಲೆಗೆ ಹೋಗಿ ಬಹಳ ದಿನದಿಂದ ಭೇಟಿಯಾಗದಿದ್ದ ಗೆಳತಿಯರನ್ನೆಲ್ಲ ಮಾತನಾಡಿಸಿ ಅಂಕದ ಪಟ್ಟಿ ತೆಗೆದುಕೊಂಡು ವಾಪಸಾಗುವುದು . ಟೆಸ್ಟ್ ಅಥವಾ ಪರೀಕ್ಷೆಗಳಂತೆ ಅಲ್ಲಿ ರ್ಯಾಂಕುಗಳನ್ನು ನಮೂದಿಸಿರದ ಕಾರಣ ಒಬ್ಬರೊಬ್ಬರ ಅಂಕಗಳನ್ನು ತಿಳಿದುಕೊಂಡು ನಾವೇ ಯಾವ ಸ್ಥಾನ ಎಂದು ನಿರ್ಧರಿಸಿಕೊಂಡು ಖುಷಿಯಾಗುತ್ತಿದ್ದೆವು. ಅಂದು ಶಾಲೆಗೆ ಸಮವಸ್ತ್ರವಲ್ಲದೆ ಕಲರ್ ಡ್ರೆಸ್ ನಲ್ಲಿ ಹೋಗಬಹುದಾದ್ದರಿಂದ ಅದೂ  1 ರೀತಿಯ ಖುಷಿಯ ವಿಷಯ .

ಹೀಗೆ ಏಪ್ರಿಲ್ ಹತ್ತು ಎಂದರೆ ಮನಸ್ಸಿನಲ್ಲಿ ಬೇರೂರಿ ನೆಲೆಯಾಗಿ ಉಳಿಯುವ ನೆನಪು
ಅಂದರೆ ಅಂದು ನಾವು ಮನೆ ಹತ್ತಿರದ ಗೆಳೆಯರೆಲ್ಲ ಒಟ್ಟಾಗಿ ಹೋಗಿ ಅಲ್ಲಿಗೆ ಅಂಕದ ಪಟ್ಟಿ  ತೆಗೆದುಕೊಂಡು ಸ್ವಲ್ಪ ಜಲಜಬೇರೆಯದೇ ದಾರಿಯಲ್ಲಿ ಅಣ್ಣ ಅಂದರೆ ನಮ್ಮ ತಂದೆಯ ಆಫೀಸಿನ ಬಳಿ ಹೋಗುತ್ತಿದ್ದೆವು . ಅಲ್ಲಿಯೇ ಬಳಿಯಲ್ಲಿ 1 ಬೇಕರಿ ಹಾಗೂ ಹೋಟೆಲಿತ್ತು. ಯಾವುದೆಂದರೆ ಅದು ನಮ್ಮ ಹುಡುಗರ ಹಿಂಡು ಹತ್ತುಹದಿನೈದು ಮಕ್ಕಳಿಗೆ ಅಲ್ಲಿ ದೋಸೆ ಕಾಫಿ ಅಥವಾ ಕೇಕ್ ಕೊಡಿಸುತ್ತಿದ್ದರು . ಆಗ ಹೆಚ್ಚು ಜನರನ್ನು ಕಟ್ಟಿಕೊಂಡು ಹೋದರೆ ಅಣ್ಣನಿಗೆ ಹೆಚ್ಚು ಖರ್ಚು ಎಂದು ಅರ್ಥವೇ ಆಗುತ್ತಿರಲಿಲ್ಲ . ಅವರೂ ಅಷ್ಟೇ ಹೆಚ್ಚು ಮಕ್ಕಳನ್ನು ಕರೆದುಕೊಂಡು ಬರಬೇಡಿ ಎಂದು ಹೇಳದೆ ಹೋದವರಿಗೆಲ್ಲಾ ಕೊಡಿಸಿಕೊಡುತ್ತಿದ್ದರು. ಹಣ ಹೆಚ್ಚಿಲ್ಲದಿದ್ದರೂ ಕೊಟ್ಟು ತಿನ್ನುವ ಬುದ್ಧಿ ಇದ್ದ ಕಾಲ ಅದು . ಈಗ ಎಷ್ಟಿದ್ದರೂ ನಮಗೇ ಇರಲಿ ನನ್ನ ಮಕ್ಕಳಿಗೆ ಇರಲಿ ಎನ್ನುವಂತಹ ಕಾಲ. ನಂತರ ಅಲ್ಲಿಂದ ಮನೆಗೆ ವಾಪಸಾಗುವುದು. 1ರೀತಿಯ ವ್ರತವೋ ಎಂಬಂತೆ ಪ್ರತಿ ವರ್ಷ ಇದು ಅನೂಚಾನವಾಗಿ ನಡೆದು ಬಂದಿತ್ತು .

ನಂತರ ಏಳನೆಯ ತರಗತಿ ಜಿಲ್ಲಾ ಮಟ್ಟದ ಪಬ್ಲಿಕ್ ಪರೀಕ್ಷೆಯ ಆದ್ದರಿಂದ ಏಪ್ರಿಲ್ ಹತ್ತರಂದು ರಿಸಲ್ಟ್ ಬಂದಿರಲಿಲ್ಲ.  ಶಾಲೆಗೆ ಹೋಗಿ ಫಲಿತಾಂಶ ನೀಡುವ ಮೊದಲೇ ದಿನಪತ್ರಿಕೆಯಲ್ಲಿ ರ್ಯಾಂಕ್ ವಿಜೇತರ ಪಟ್ಟಿ ಪ್ರಕಟವಾಗಿದ್ದು ನನ್ನ ಹೆಸರು ಇದ್ದದ್ದು ಮುಂದಿನ ಬೀದಿಗೆ ಮೊದಲು ಪೇಪರ್ ಕೊಟ್ಟಿದ್ದಾಗ ಅಲ್ಲಿದ್ದ ಗೆಳೆಯರು ತಂದು ತೋರಿಸಿ ಸಂಭ್ರಮಿಸಿದ್ದರು .  ನಾನಂತೂ ಆಗ ಎಷ್ಟು ಮುಗ್ಧಳೆಂದರೆ ಶಾಲೆಯಲ್ಲಿ ಪ್ರತಿ ಸಾರಿ  ಪ್ರಥಮ ರ್ಯಾಂಕ್  ಈಗ ಏಳನೇದು ಎಂದು ಅಳಲೇ ಆರಂಭಿಸಿದ್ದೆ. ಅಂತೂ ಅಮ್ಮ ಅಣ್ಣ ತುಂಬ ಖುಷಿ ಪಟ್ಟು ಸಂಭ್ರಮಿಸಿದ ದಿನ ಮರೆಯಲು ಸಾಧ್ಯವಿಲ್ಲ

ನಂತರ ಹೈಸ್ಕೂಲಿನಲ್ಲಿಯೂ ಅಷ್ಟೆ ಏಪ್ರಿಲ್ ಹತ್ತರಂದು 8ಹಾಗೂ 9ನೆಯ ತರಗತಿಗಳ ರಿಸಲ್ಟ್ ಬರುತ್ತಿದ್ವು ಹತ್ತನೆಯ ತರಗತಿ ಮಾತ್ರ ಬೇರೆ ದಿನ .   ಅದರಲ್ಲಿಯೂ ಒಳ್ಳೆಯ ಶೇಕಡಾ ಅಂಕಗಳನ್ನು ತೆಗೆದುಕೊಂಡಿದ್ದು 1ರೀತಿಯ ಸಮಾಧಾನ . ಪಿಯುಸಿ ಕಾಲೇಜುಗಳಲ್ಲಿ ಇಂತಹ ದಿನ ಫಲಿತಾಂಶ ಎಂದು ಪೇಪರಿನಲ್ಲಿ ನೋಡಿದೆ ಅಲ್ಲಿ ಹೋಗಿ ನಿಂತು ಖರ್ಚು ಮಾಡುವುದು ಅದೇನು ಅಂತ ಖುಷಿಯ ಸಂಗತಿ ಹಾಗೆಯೇ ಇರಲಿಲ್ಲ .

ನಂತರ ಕೆಲಸಕ್ಕಾಗಿ ವಿವಿಧ ಕಡೆ ಅರ್ಜಿ ಗುಜರಾಯಿಸಿ ಲಿಖಿತ ಪರೀಕ್ಷೆಗಳ ಫಲಿತಾಂಶ ಪೋಸ್ಟ್ನಲ್ಲಿ ಕಾಯುವುದು 1ರೀತಿಯ ಕಾತರದ ವಿಷಯ . ಆ ಹಂತವನ್ನು ದಾಟಿ ಮುಂದೆ ಸಂದರ್ಶನಕ್ಕೆ ಕರೆ ಬರುವುದು ಸಂದರ್ಶನದ ನಂತರ ಕಾಯುವುದು ಬದುಕಿನ ಆ ಘಟ್ಟದಲ್ಲಿ ಅನುಭವಿಸಿ ಬಂದ
ಮಜಲುಗಳು.

ಏನೇ ಆಗಲಿ  ಆಗಲಿ ಏಪ್ರಿಲ್ ಹತ್ತು ಅಂದರೆ ಫಲಿತಾಂಶದ ದಿನ ಎಂದು ಮನಸ್ಸಿನಲ್ಲಿ ಬೇರೂರಿತ್ತು. ಅದಕ್ಕಾಗಿ ಕಾಯುತ್ತಿದ್ದ ಅಥವಾ ಅದರ ಜತೆ ಅಪ್ಪ ಕೊಡಿಸುತ್ತಿದ್ದ ತಿಂಡಿಗಾಗಿ ಕಾಯುತ್ತಿದ್ದೆವೋ ಅದೂ ತಿಳಿಯದು ಅಂತೂ ಆ ಸಂಭ್ರಮ ನಂತರದ ದಿನಗಳಲ್ಲಿ ಕಾಣಸಿಗಲೇ ಇಲ್ಲ ಎನ್ನುವುದು ಬದುಕಿನ ಪ್ರಾಮುಖ್ಯತೆಗಳು ತೆಗೆದುಕೊಳ್ಳುವ ಪ್ರಾಧಾನ್ಯತೆಗಳು ನಾವು ಜೀವನವನ್ನು ನೋಡುವ ದೃಷ್ಟಿಕೋನ ಇದೆಲ್ಲದರ ಮೇಲೆ ಅವಲಂಬಿಸಿರುತ್ತದೆ ಎಂಬ ಸತ್ಯವನ್ನೂ ಅನಾವರಣಗೊಳಿಸುತ್ತವೆ.  ಬಾಲ್ಯದ ಆ ಮುಗ್ಧತೆಯ ದಿನಗಳು ಮತ್ತೆ ಕಣ್ಮುಂದೆ ಬರುತ್ತದೆ.  ಈಗಿನ ಮಕ್ಕಳಿಗೆ ಹೆಚ್ಚಿನ ಪ್ರಬುದ್ಧತೆ ಬಂದು ಬಿಟ್ಟಿರುತ್ತದೆ ಅನ್ನಿಸುತ್ತೆ. ಸಣ್ಣದರಲ್ಲಿ ಸಂತಸ ಕಾಣುವ ಪ್ರವೃತ್ತಿ ಕಡಿಮೆಯಾಗಿದೆ .

ಇತ್ತೀಚೆಗಂತೂ ಆನ್ ಲೈನ್ ನಲ್ಲಿ ಫಲಿತಾಂಶ ಪೋಸ್ಟ್ನಲ್ಲಿ ಅಂಕಪಟ್ಟಿ ಇವೆಲ್ಲವೂ ಜೀವನದ 1ಮುಖ್ಯ ಅನುಭವವನ್ನೇ ಕಸಿದುಕೊಳ್ಳುತ್ತಿವೆ ಏನೋ ಎಂಬ ಭಯವನ್ನೂ ಹುಟ್ಟಿಸುತ್ತದೆ . “ಕಾಲಾಯ ತಸ್ಮೈ ನಮಃ”.

ಈಗಿನ ಶಿಕ್ಷಕಿಯರಿಗೂ ಅಷ್ಟೇ…. ಏಪ್ರಿಲ್ ಹತ್ತು ಎಂದರೆ 1ಮೈಲಿಗಲ್ಲು .ಶಾಲೆಯ ಕೆಲಸಗಳು ಅಂಕಪಟ್ಟಿಯ ಕೆಲಸ ಎಲ್ಲವನ್ನು ಮುಗಿಸಿಕೊಟ್ಟು ರಜೆಯ ನಿಜವಾದ ಮಜದ ಅನುಭವವನ್ನು ಪಡೆಯಲು ಆರಂಭಿಸುವುದೇ ಏಪ್ರಿಲ್ ಹತ್ತರ ನಂತರ ಎಂದು ಶಿಕ್ಷಕಿ ಗೆಳತಿಯೊಬ್ಬರ ಅಭಿಪ್ರಾಯ.

ಶಾಲೆ, ಶಾಲೆಯ ಅನುಭವಗಳನ್ನೆಲ್ಲಾ ಜೀವನದ ದಾರಿಯಲ್ಲಿ  ಬಹಳ ಹಿಂದೆಯೇ ಬಿಟ್ಟು ಬಂದಿದ್ದರೂ ಏಪ್ರಿಲ್ ಹತ್ತು ಎಂಬ ತಾರೀಕು ನೋಡಿದಾಗಲೆಲ್ಲ ಹಳೆಯ ಸವಿನೆನಪುಗಳ ಉಯ್ಯಾಲೆ ಜೋರಾಗಿ
ಜೀಕಲು ಆರಂಭಿಸಿಬಿಡುತ್ತವೆ. ನನ್ನ ಬಾಲ್ಯದ ದಿನಗಳಿಗೆ ಕರೆದುಕೊಂಡು ಹೋಗಿ ವಾಪಸು ಬರುತ್ತವೆ .  ನಿಜಕ್ಕೂ “ಸವಿ ನೆನಪುಗಳು ಬೇಕು ಸವಿಯಲೀ ಬದುಕು” ತಾನೇ?

Leave a Reply

Back To Top