ಲೇಖನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಜನಾಭಿಪ್ರಾಯ ರೂಪಿಸುವಲ್ಲಿ
ಪ್ರಸಾರ ಮಾಧ್ಯಮಗಳ ಪಾತ್ರ
ಅಲ್ಲೊಂದು ಪ್ರಕರಣ ನಡೆದಿದೆ. ಕೂಡಲೇ ಕಾರ್ಯಪ್ರವೃತ್ತವಾದ ಮಾಧ್ಯಮಗಳು ತಂತಮ್ಮ ಮೂಗಿನ ನೇರಕ್ಕೆ ವಿಷಯವನ್ನು ಅರ್ಥೈಸಿಕೊಂಡು ತಮ್ಮದೇ ರೋಚಕವಾದ ಮಾತುಗಳಲ್ಲಿ, ಸಿನಿಮೀಯ ರೀತಿಯಲ್ಲಿ ನಮ್ಮಲ್ಲಿಯೇ ಮೊದಲು ಬಿತ್ತರವಾಗುತ್ತಿರುವ ಬ್ರೇಕಿಂಗ್ ನ್ಯೂಸ್ ಎಂಬಂತೆ ವಿಷಯವನ್ನು ಹೇಳುತ್ತಾರೆ.
ಹಾಗಾದರೆ ಮಾಧ್ಯಮಗಳದ್ದು ತಪ್ಪೇ? ಖಂಡಿತವಾಗಿಯೂ ತಪ್ಪು. ಪ್ರತಿಯೊಂದು ಘಟನೆಗೂ ಮೂರು ಆಯಾಮಗಳಿವೆ. ಒಂದು ನೀನು ನೋಡುವ ದೃಷ್ಟಿ ಮತ್ತೊಂದು ಪರರು ಅದನ್ನು ಅವಲೋಕಿಸುವ ರೀತಿ ಮತ್ತು ಮೂರನೆಯದ್ದು ನಿಜ ಸ್ಥಿತಿ. ಇದರಲ್ಲಿ ಯಾವುದನ್ನು ಹೇಳಬೇಕು? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾದರೆ ಉತ್ತರ ಅತ್ಯಂತ ಸರಳ ಮತ್ತು ಸುಲಭ. ಮಾಧ್ಯಮದವರು ಸಂಪೂರ್ಣವಾಗಿ ನಿಜ ಸ್ಥಿತಿಯ ವಿವರವನ್ನು ಇಲ್ಲವೇ ಅದಕ್ಕೆ ಹತ್ತಿರವಾದ ವಿವರವನ್ನು ಬಿತ್ತರಗೊಳಿಸಬೇಕು. ನಾವು ನಂಬಿಕೊಂಡಿರುವುದು ಕೇವಲ ನಮ್ಮ ವೈಯುಕ್ತಿಕ ಅಭಿಪ್ರಾಯ ಬೇರೆಯವರು ನಂಬಿಕೊಂಡಿರುವುದು ಅವರ ವೈಯಕ್ತಿಕ ಅಭಿಪ್ರಾಯ … ಅದು ಸಾರ್ವತ್ರಿಕವಲ್ಲ. ವಸ್ತುನಿಷ್ಠ ವರದಿ ಮಾತ್ರ ಮಾಧ್ಯಮಗಳ ಕಾರ್ಯ ವ್ಯಾಪ್ತಿಗೆ ಬರಬೇಕು. ನಮಗೆ ಸರಿ ಕಂಡದ್ದೆಲ್ಲ ಜನರ ಅಭಿಪ್ರಾಯವಾಗಿ ರೂಪಿಸುವಲ್ಲಿ ಮಾಧ್ಯಮಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು. ಈ ಸಮಾಜದ ಆಗುಹೋಗುಗಳನ್ನು ಸರಿಯಾಗಿ ಅವಲೋಕಿಸುವ, ನಿಷ್ಪಕ್ಷಪಾತವಾಗಿ ವರದಿ ಸಲ್ಲಿಸುವ ಆ ಮೂಲಕ ಸಮಾಜದ ಜನರಿಗೆ ಸರಿಯಾದ ದಾರಿ ತೋರುವ (ಹ್ಯಾಂಡ್ ಸಿಗ್ನಲ್) ಕೈಮರಗಳಾಗಿ, ದಿಕ್ಸೂಚಿಯಾಗಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು.
ಇನ್ನು ಕೆಲ ಮಾಧ್ಯಮಗಳಲ್ಲಿ ತಮ್ಮ ವೈಯುಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕ ಸಮೀಕ್ಷೆಯ ಮೂಲಕ ತಿಳಿದುಬರುವುದು ಎಂದು ಅತ್ಯಂತ ರೋಚಕವಾಗಿ ಧ್ವನಿಯ ಏರಿಳಿತಗಳ ಮೂಲಕ ಹೇಳಿದಾಗ ಜನರು ಪ್ರಭಾವಿತರಾಗುವುದು ಸಹಜ.
24*7 ಕಾರ್ಯನಿರ್ವಹಿಸುವ ದೃಶ್ಯ ಮಾಧ್ಯಮಗಳು ತಮಗಿರುವ ಹಿರಿದಾದ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗದೆ ಹೋದಾಗ ಒಂದೇ ವಿಷಯವನ್ನು ಪದೇ ಪದೇ ಹೇಳುತ್ತಾ ಒಂದೇ ದೃಶ್ಯವನ್ನು ಪದೇಪದೇ ತೋರಿಸುತ್ತಾ ಮಾತಿನ ಮಂಟಪ ಕಟ್ಟುತ್ತಾರೆ. ಪ್ರಸ್ತುತ ಸಮಾಜದಲ್ಲಿ ವಸ್ತುನಿಷ್ಠತೆಗಿಂತ ಒಣ ಡಂಬಾಚಾರಕ್ಕೆ ಹೆಚ್ಚು ಬೆಲೆ ಇದ್ದು ಜನರು ಕೂಡ ತಮ್ಮ ವೈಯುಕ್ತಿಕ ಜಂಜಾಟಗಳಿಂದ ಕೊಂಚ ಮುಕ್ತಿ ಪಡೆಯಲು ಇಂತಹ ರೋಚಕ ಸುದ್ದಿಗಳ ಮೊರೆ ಹೋಗುವುದು ಅವರ ಪಾಲಿಗೆ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳುವುದು ಹಾಲು ಅನ್ನ ಎಂಬಂತಾಗುತ್ತದೆ. ಇದರ ಜೊತೆಗೆ ದೃಶ್ಯ ಮಾಧ್ಯಮದವರು ಎದುರಿಸುವ ಬಹುಮುಖ್ಯ ಸಮಸ್ಯೆ ಟಿ ಆರ್ ಪಿ ಯದ್ದು. ತಮ್ಮ ಚಾನಲ್ ನ ಟಿ.ಆರ್.ಪಿ ಹೆಚ್ಚಿಸಲು ಪ್ರತಿಯೊಂದು ಚಾನೆಲ್ ನ ಜನರು ರೋಚಕ ಸುದ್ದಿಗಳನ್ನು ಬೆಂಬತ್ತಿ ಈ ಹಿಂದೆ ನಮ್ಮ ಸಮಾಜದಲ್ಲಿ ಯಾವ ವಿಷಯಗಳನ್ನು ಕುಟುಂಬಗಳಿಂದ, ಮನೆಯ ಮಕ್ಕಳಿಂದ ದೂರವಿಡುತ್ತಿದ್ದರೋ ಅದೇ ವಿಷಯಗಳನ್ನು ಪದೇಪದೇ ಬಿತ್ತರಿಸುವ ಮೂಲಕ ಜನರ ಆಸಕ್ತಿಯನ್ನು ಕೆರಳಿಸುವಲ್ಲಿ ಸಫಲವಾಗಿವೆ. ಇದು ಸಾಮಾಜಿಕ ಮೌಲ್ಯಗಳ ಕುಸಿತಕ್ಕೂ, ಅವನತಿಗೂ ಕಾರಣವಾಗುತ್ತದೆ. ಒಂದು ಆಕಸ್ಮಿಕ ಘಟನೆಯನ್ನು ಥ್ರಿಲ್ಲರ್ ಸ್ಟೋರಿಯಂತೆ ಪದೇ ಪದೇ ತೋರಿಸುವ ಮೂಲಕ ಸಮಾಜದಲ್ಲಿ ಕೇವಲ ಕೆಟ್ಟದ್ದು ಮಾತ್ರ ನಡೆಯುತ್ತದೆ ಎಂಬಂತೆ ಬಿಂಬಿಸುವಲ್ಲಿ ದೃಶ್ಯ ಮಾಧ್ಯಮಗಳು ಸಫಲವಾಗಿದ್ದು ಇದು ನಮ್ಮ ಭಾರತೀಯ ಸಂಸ್ಕೃತಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ವಿಷಯದಲ್ಲಿ ಪತ್ರಿಕೆಗಳು ತುಸು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತವೆ. ತಮ್ಮ ಸೀಮಿತತೆಯ ಪರಿಣಾಮವಾಗಿ, ಸ್ಥಳಾವಕಾಶದ ಕೊರತೆಯಿಂದ ಬರಪೂರ ಮಾಹಿತಿಗಳ ಹೆಚ್ಚಳದಿಂದಾಗಿ ಅವರು ಕೇವಲ ಅವಶ್ಯಕತೆ ಇರುವ ಮಾಹಿತಿಗಳನ್ನು ಮಾತ್ರ ಜರಡಿಯಾಡಿ ಸೋಸಿ ಜನರಿಗೆ ಉಣ ಬಡಿಸುತ್ತವೆ. ಮುದ್ರಣ ಮಾಧ್ಯಮವು ಕೇವಲ ಶಬ್ದಗಳನ್ನು ವಾಕ್ಯಗಳಾಗಿ ಬಳಸಿದರೆ ದೃಶ್ಯ ಮಾಧ್ಯಮವು ದೃಶ್ಯ ಸಮೇತವಾಗಿ ವಿಷಯವನ್ನು ರೋಚಕವಾಗಿ ಕಟ್ಟಿಕೊಡುವುದರಿಂದ ಜನರು ಮತ್ತಷ್ಟು ದೃಶ್ಯ ಮಾಧ್ಯಮಗಳತ್ತ ಆಕರ್ಷಿತರಾಗುತ್ತಾರೆ. ಇನ್ನು ಕೆಲವು ವಿತಂಡವಾದಿಗಳು, ಕಡ್ಡಿಯನ್ನು ಗುಡ್ಡ ಮಾಡುವ ಸ್ವಭಾವದವರು, ನಕಾರಾತ್ಮಕತೆಯನ್ನೇ ಹಾಸಿ ಹೊದ್ದು ಕೊಂಡಿರುವವರು ಇಂತಹ ವಿಷಯಗಳ ಮೇಲೆ ಊರ ಹೊರಗಿನ ಕಟ್ಟೆಗಳ ಮೇಲೆ, ಹೋಟೆಲ್ಗಳಲ್ಲಿ ಮತ್ತಿತರ ಹರಟೆಗೆ ಅವಕಾಶವಾಗುವ ಜಾಗಗಳಲ್ಲಿ ಅನಾರೋಗ್ಯಕರ ಚರ್ಚೆಗಳಲ್ಲಿ ತೊಡಗಿ ವಿಷಯಗಳನ್ನು ಮತ್ತಷ್ಟು ವಿಷಮಗೊಳಿಸುತ್ತಾರೆ. ಅವರಿಗೂ ಹೊತ್ತು ಹೋಗಬೇಕಲ್ಲವೇ!!
ಆದರೆ ಭಾರತದಂತಹ ಭವ್ಯ ದೇಶದಲ್ಲಿ ಹಲವಾರು ಜಾತಿ ಮತ ಪಂಥ ಮತ್ತು ಧರ್ಮಗಳ ಬೀಡಿನಲ್ಲಿ ಇಂತಹ ಅನಾರೋಗ್ಯಕರ ವಿಷಯಗಳು ಒಣ ಹುಲ್ಲಿಗೆ ಕಡ್ಡಿ ಗೀರಿದಂತಾಗುತ್ತದೆ.
A spark neglected burns the house ಎಂಬ ಮಾತಿನಂತೆ ಭಾರತಂತ ಬೃಹತ್ ದೇಶದ ಯಾವುದೋ ಪುಟ್ಟ ಹಳ್ಳಿಯಲ್ಲಿ ನಡೆದ ವಿಷಯವೊಂದು ದೇಶ ವ್ಯಾಪಿ ಚರ್ಚೆಯ ವಿಷಯವಾಗಿ ಪರ ವಿರೋಧಗಳು ರೂಪುಗೊಂಡು ಸಾಮಾಜಿಕ ಸಾಮರಸ್ಯಕ್ಕೆ ಕಂಟಕ ತರುವಂತಹ ಅನಪೇಕ್ಷಣೀಯ ಬೆಳವಣಿಗೆಗಳಿಗೆ ಕಾರಣವಾಗುತ್ತದೆ. ಕಪೋಲ ಕಲ್ಪಿತ ಕಥೆಗಳು ಚಾನೆಲ್ ಡಿಸ್ಕಶನ್ ಗಳಲ್ಲಿ ವಿತಂಡವಾದ, ಅಸಭ್ಯವಾದ ಆರೋಪ ಪ್ರತ್ಯಾರೋಪಗಳು ಅನೇಕ ಬಾರಿ ಜನರ ಆಕ್ರೋಶವನ್ನು ಹೆಚ್ಚಿಸುತ್ತವೆ. ಮುಂದೆ ಇವು ಸ್ಥಳೀಯ ಮಟ್ಟದಲ್ಲಿಯೂ ಗಲಭೆಗಳಿಗೆ ಕಾರಣವಾಗಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗುವ ಮಟ್ಟಿಗೆ ನಮ್ಮನ್ನು ಸುಡುತ್ತದೆ.
ನೆನ್ನೆಯ ತನಕ ಪರಸ್ಪರ ಹೆಗಲ ಮೇಲೆ ಕೈ ಹಾಕಿ ನಡೆಯುವ ಸ್ನೇಹಿತರು ಇಂತಹ ಘಟನೆಗಳ ನಂತರ ಒಬ್ಬರ ಮುಖ ಒಬ್ಬರು ನೋಡದಷ್ಟು ದ್ವೇಷವನ್ನು ಮಾಡುವ ಮಟ್ಟಿಗೆ ವಿಷಯಗಳು ವೈಪರೀತ್ಯಕ್ಕೆಳಸುತ್ತವೆ. ಇದು ಸಮಾಜದ ಶಾಂತಿ, ಸಾಮರಸ್ಯಗಳನ್ನು ಕದಡುತ್ತದೆ. ಆದರೆ ಹಾಗೆ ಟಿವಿ ಚಾನೆಲ್ ಗಳಲ್ಲಿ ಕಿವಿ ಕಿತ್ತು ಹೋಗುವಂತೆ ಗುದ್ದಾಡಿದ ಪರಸ್ಪರ ವಿರೋಧಿಗಳು ಕ್ಯಾಮರಾ ಕಣ್ಣಿನಿಂದ ಮರೆಯಾದ ಕೂಡಲೇ ಜೊತೆಯಾಗಿ ತಿಂಡಿ ತಿನ್ನುತ್ತಾರೆ.
ಕೇವಲ ಒಂದು ಕ್ಷಣದ ಕಹಿ ಘಟನೆ ಯಾವ ರೀತಿ ನಮ್ಮ ಸಂಸಾರದ ಸಾವಿರಾರು ಸವಿ ಕ್ಷಣಗಳನ್ನು ಮರೆ ಮಾಡುವುದಿಲ್ಲವೋ ಅಂತೆಯೇ ಭಾರತ ದೇಶವೆಂಬ ಬೃಹತ್ ಸಂಸಾರದಲ್ಲಿ ನಡೆಯುವ ಎಲ್ಲ ಘಟನೆಗಳು ಎಲ್ಲರಿಗೂ ಅನ್ವಯವಾಗಲೇಬೇಕೆಂದಿಲ್ಲ. ಎಲ್ಲರೂ ಪರಸ್ಪರ ಶಾಂತಿ ನೆಮ್ಮದಿ ಸಹಬಾಳ್ವೆಯ ಜೀವನವನ್ನು ನಡೆಸಲು ಅನುವಾಗುವಂತೆ ಮಾಧ್ಯಮಗಳು ಪ್ರಬುದ್ಧವಾಗಿ ಕಾರ್ಯನಿರ್ವಹಿಸಲೇಬೇಕು.
ಇದನ್ನು ಮನಗಂಡೇ ಪೂರ್ವ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ತಮ್ಮ ಸಮಾನ ಮನಸ್ಕ ಸ್ನೇಹಿತರ ಗುಂಪಿನಲ್ಲಿ ನಮ್ಮ ಕನ್ನಡದ ಹೆಮ್ಮೆಯ ಪುತ್ರ ಗುರುರಾಜ ಕರಜಗಿ ಅವರ ಜೊತೆಗೂಡಿ ಗುಡ್ ಎಂಬ ಇ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಜಗತ್ತಿನಲ್ಲಿ ನಡೆಯುವ ಒಳ್ಳೆಯ ವಿಷಯಗಳನ್ನು ಮಾತ್ರವೇ ಸಾದರಪಡಿಸುವ ಮೂಲಕ ಈ ಸಮಾಜದಲ್ಲಿ ಇನ್ನೂ ಒಳ್ಳೆಯದು ಇದೆ ಮತ್ತು ಒಳ್ಳೆಯದನ್ನು ಪ್ರೋತ್ಸಾಹಿಸಬೇಕು ಎಂಬ ಸದುದ್ದೇಶವನ್ನು ಈ ಪತ್ರಿಕೆ ಹೊಂದಿತ್ತು.
ಒಂದಿಡೀ ಸಮಾಜದ ಚಿಂತನ ವಿಧಿಯನ್ನೇ ಬದಲಾಯಿಸುವ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದಾದುದು. ಅಂತೆಯೇ ತಮ್ಮ ಲಾಭಕ್ಕಾಗಿ ಜನರನ್ನು ತಪ್ಪು ದಾರಿಗೆಳೆಯದೆ ವಸ್ತುನಿಷ್ಠ ವರದಿಗಳನ್ನು ನೀಡುವ ಮೂಲಕ ಅವರವರ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವ ಮೂಲಕ ಸಶಕ್ತ ದೇಶವನ್ನು ಕಟ್ಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿ ಎಂದು ವಿನಮ್ರವಾಗಿ ಕೇಳಿಕೊಳ್ಳುವ.
( ತಮಗೆ ಬೇಡವಾದ ಅನವಶ್ಯಕ ಮಾಹಿತಿಗಳ ಅವಶ್ಯಕತೆ ಜನರಿಗೂ ಇಲ್ಲ ಎಂದು ತೋರಿದಾಗ ತಾವು ಮಾಹಿತಿಗಳನ್ನು ನೋಡಲು ಬಳಸುವ ಚಾನಲ್ ಬದಲಿಸಬಹುದು, ಆಯ್ಕೆ ಮತ್ತು ಹಕ್ಕುಗಳು ಕೇವಲ ವೀಕ್ಷಕರದು ಎಂಬ ಅರಿವು ನಮಗೂ ಇರಬೇಕು )
ವೀಣಾ ಹೇಮಂತ್ ಗೌಡ ಪಾಟೀಲ್