ಪಿ.ವೆಂಕಟಾಚಲಯ್ಯ ಕವಿತೆ-ಚೈತ್ರ-ಫಾಲ್ಗುಣ

ಊರ ಹೊರಗಿನ ದಿನ್ನೆಯ ನೆತ್ತಿಯಿಂದ,
ದೂರ,ದೃಷ್ಟಿ ಹರಿದಷ್ಟು ದೂರ,
ಬೀರಿದರೆ ಕಣ್ಣೋಟ, ಹೊಲ ಗದ್ದೆ ಬಯಲು.
ಬರಡು, ಬಯಲು ಸೀಮೆಯ ಬಯಲು.
ಬರೀ ಕೆಂದೂಳು, ಅಲ್ಲಲ್ಲಿ ಚಿಗುರೊಡೆದ,
ಮರ ಗಿಡ ಬಳ್ಳಿಗಳು, ಸಾರುತಿವೆ, ಇದು ಚೈತ್ರ ವೆಂದು.

ಹಗಲು ಉರಿಬಿಸಿಲು,ಸಂಜೆಯೊಂದಿಗೆ ಮಳೆ.
ಹಿಂಗಾರಿನ ಕೊನೆ ಮಳೆಗೆ,ನೆನಯಿತೀ ಇಳೆ.
ನೇಗಿಲು ಎತ್ತುಗಳನ್ನೊಯ್ದು, ಹೊಲದೆಡೆಗೆ ನಡೆವ,
ಬೀಗುತಲೀ ರೈತ,ಉಳುಮೆಯಲ್ಲಿ ತೊಡಗುವ.
ಬಗೆದು ನೆಲವನು, ಹಸನು ಗೆಯ್ಯುತಲಿ,
ಸ್ವಾಗತಿಸುತ ಮುಂಗಾರನು, ವೈಶಾಖ ಜೇಷ್ಟದಲಿ.

ದೂರ ಸಾಗರದ ಮೇಲಿಂದ, ಮೋಡವನೊತ್ತು,
ಜೋರಿನಲಿ ಧಾವಿಸುವ ಗಾಳಿ, ಬಯಲು ನಾಡಿನಲಿ.
ಎರಸುವುದು ದೂಳು,ಮಳೆ ಬಂದ ಹೊತ್ತು,
ಭರದಿ ಬಿತ್ತನೆ ಮಾಡಿ,ಮೊಳಕೆಯ ನಿರೀಕ್ಷಿಸುತಲಿ,
ನೂರು ದೇವರಿಗೆ ಕೈ ಮುಗಿದು, ದುಗುಡದಲಿ,
ಬರ, ಬಾರದಿರಲೆಂದು  ಬೇಡುವ ರೈತ, ಆಷಾಢ ಮಾಸದಲಿ.

ಒಂಟಿ ಹೊಂಗೆಯ ಮರವೇರಿ ಕುಳಿತು,
ದಿಟ್ಟಿಸಿ ನೋಡಲು,ಸೃಷ್ಟಿಯದೇನು ಸೊಬಗು!
ಬಿತ್ತಿದ್ದು  ಮೊಳೆತು ಗಗನಭಿಮುಖವಾಗಿಹದು.
ಪೃಥ್ವಿ ಹಚ್ಚಹಸುರಿನುಡಿಗೆಯನುಟ್ಟಂತೆ ತೋರುತಿಹದು.
ಭತ್ತ,ರಾಗಿ,ಜೋಳದ ಪೈರು,ಸೂಸುವ ಗಂಧದಲಿ.
ಮತ್ತೇರಿಸಿದೆ,ಮನಸ್ಸು ಹೃದಯಗಳ,ಶ್ರಾವಣ ಮಾಸದಲಿ.

ಕೆಲವೊಮ್ಮೆ ಗುಡುಗು ಸಿಡಿಲೊಡಗೂಡಿದ ಮಳೆ,
ಹಲವೊಮ್ಮೆ ತುಂತುರಾಗಿ ಸುರಿವ ಸೋನೆ ಮಳೆ,
ಹಳ್ಳ,ಕೆರೆ,ಕುಂಟೆ,ನದಿಯು ತುಂಬಿ ಹರಿಯಲು,
ಬಳಲಿದ ಜೀವಸಂಕುಲಕೆ ನವಚೈತನ್ಯ ತುಂಬಲು,
ಬಲಿತ ಕಪ್ಪೆ ಜೀರುಂಡೆಗಳ,ರಾಗಾಲಾಪನೆಗಳಲಿ,
ಮೇಳೈಸಿದೆ ಏನೋ  ಆಹ್ಲಾದ, ಭಾದ್ರಪದ ಆಶ್ವಯುಜದಲಿ.

ಎಳೆತಾದದು ಬಲಿತಾಗಿದೆ, ಸಸಿ ಗರ್ಭಧರಿಸಿದೆ.
ಫಲ ನೀಡಿದೆ,ಹಸುರಾದುದು ಹೊಂಬಣ್ಣಕೆ ತಿರುಗಿದೆ.
ಗಾಳಿ, ಸಣ್ಣನೆ ತಣ್ಣನೆ ಬೀಸಲು,ತೆನೆ ತೂಗಾಡಿದೆ.
ಮಳೆ ಮಂಕಾಗಿದೆ,ಚಳಿ ತನ್ನಾಗಮನವ ತೋರಿದೆ.
ಬಿಳಿಮಂಜು ಇಬ್ಬನಿಯೊಡಗೂಡಿ, ನಡುಕ ನೀಡುವಲ್ಲಿ.
ಬೆಳಕನು ಹರಿಸಿ,ಮಬ್ಬನೋಡಸಿದೆ ಕಾರ್ತಿಕ ಹಣತೆಯಲಿ.

ಬಂಗಾರದ ತೆನೆ  ಭಾರದಿ, ಸಸಿ ನಡ ಬಾಗಿದೆ.
ಸೊಗಡಿನೊಡಗೂಡಿದವರೆ,ರಾಗಿ ಹೊಲದ ಸಾಲುಗಳಲಿ.
ಸಿಂಗರಿಸಿದ ಬಿಳಿ ಹೂ ಗೊಂಚಲು,ಮೈದುಂಬಿದೆ.
ಅಘ್ರಾಣಿಸುತ ಮಕರಂದವ, ದುಂಬಿಗಳ ದಂಡು ಮುತ್ತಿದೆ.
ಖಗಕುಲವು ಗೂಡನ್ನಾಶ್ರಯಿಸಿದೆ, ಸಂತಾನಪೇಕ್ಷೆಯಲಿ.
ಮಾರ್ಗಶಿರಧಿ ಹೊಸಹುಟ್ಟು,ಯುಗಪರಿವರ್ತನೆಯ ಸಾರಿದೆ.

ಅನತಿ ದೂರದ ಕೆರೆಯ ನೀರು, ಹರಿದೀಗ ಕೆರೆಯು ಬರಿದು.
ಬನದ ತೆರದಿ ಬೆಳೆದು ನಿಂತ, ಭತ್ತ ರಾಗಿಯ ತರಿದು,
ಕಣದೊಳು ಗುಪ್ಪೆಯೊಡ್ಡಿ,ಹೊಸಸುಗ್ಗಿಗೆ ಅಣೆಯಾಗುವೂಳು,
ಜನ ದನಗಳ  ಉದರ ಪೋಷನೆ ಚಿಂತೆ ದೂರವಾಗಲು,
ಉನ್ಮತ್ತದಲಿ, ಚಳಿ- ಮಂಜು ಧರೆಯನು ಮುಸಕಿರಲು,
ತಣ್ಣಗಿದೆ ಪ್ರಕೃತಿ, ಅರೆನಿದ್ರಾವಸ್ಥೆಯಲಿ, ಪುಷ್ಯ ಮಾಘದೊಳಲು.

ಎಲೆಯುದುರಿ ಮೈಯೊದರಿ ಬೋಳಾಗಿವೆ, ಮರಗಿಡಗಳು.
ಕಳೆಗುಂದಿದೆ ಪ್ರಕೃತಿ, ಒಣಗಿದ ತರಗೆಲೆ ಬಯಲು.
ಹಳತು ಗತಕ್ಕೆ ಸರಿದು,ಹೊಸತನಕೆ ಬಾಗಿಲು ತೆರೆದಿದೆ.
ಎಳೆ ಚಿಗುರು ಕೊನರಿ ಮರುಹುಟ್ಟಿಗೆ ನಾಂದಿಯಾಗಿದೆ.
ಮೆಲ್ಲನೆ ಇಣುಕಿದೆ ವಸಂತ, ತನ್ನಾಗಮನವ ತೋರಿದೆ.
ಫಾಲ್ಗುಣವು ನಿಡುಸುಯ್ದು, ನಿರ್ಗಮನದ ದಾರಿ ಹಿಡಿದಿದೆ.

ಬಿಸಿಲು, ಮಳೆ, ಚಳಿ,ಗಾಳಿಯಪ್ಪುಗೆಯಲ್ಲೀ ಧರೆ.
ಮಾಸಮಾಸವು ಹೊಸ ಅನುಭವಗಳನು ನೀಡುತ್ತಿರೆ.
ವರ್ಷವೊಂದು ಕಳೆದೊಡೆ ಮತ್ತದೆ ಹಾದಿ, ಅದೇ ಅನುಭವ.
ಸೃಷ್ಟಿಯ ಈ ಪರಿ,ಅದೇನೋ ಗುರಿ,ಅದರ ಜ್ಞಾನವನರಿಯುವ.
ವಿಶ್ವಬಾನಂಗಲದಿ ಸೃಷ್ಟಿ ನಿಯಮದಂತೆ ಪರಿಭ್ರಮಿಸುವ,
ವಸುಂಧರೆ, ಜೀವ ಚೈತನ್ಯಧಾರೆಗೆ, ನಾವು ನಮಿಸುವ.

——————————

Leave a Reply

Back To Top