ಧಾರಾವಾಹಿ-ಅಧ್ಯಾಯ –32
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಸುಮತಿಗೆ ಸರಕಾರಿ ಕೆಲಸ
ನಂಬಿಕೆ ಬಾರದೇ ಲಕೋಟೆಯನ್ನು ಎರಡೂ ಬದಿಯನ್ನು ತಿರುಗಿಸಿ ನೋಡಿದಳು. ತನ್ನ ಹೆಸರಿನ ವಿಳಾಸದ ಕೆಳಗೆ ಇದ್ದ ಇಂದ ವಿಳಾಸವನ್ನು ನೋಡಿ ಸುಮತಿ ಅಚ್ಚರಿಗೊಂಡಳು.
ಅವಳ ಅಚ್ಚರಿ ತುಂಬಿದ ಮುಖವನ್ನು ಕಂಡು ನಾರಾಯಣನ್ …” ಯಾರದಮ್ಮಾ ಪತ್ರ ಸುಮತಿ… ನಿನ್ನ ಹೆಸರು ಇದ್ದ ಕಾರಣ ಬೇರೆ ಏನೂ ನೋಡಿಲ್ಲ….ಯಾರಿಂದ ಬಂದದ್ದು ಎಂದು ಕೂಡಾ ನೋಡಿಲ್ಲ…ಹಾಗೇ ಕೈ ಚೀಲದಲ್ಲಿ ಇಟ್ಟಿದ್ದೆ”….ಎಂದು ಕೇಳಿದಾಗ ಏನು ಉತ್ತರ ಕೊಡಬೇಕೆಂದು ತೋಚದೇ ಉದ್ದದ ಲಕೋಟೆಯನ್ನು ಒಡೆದು ಒಳಗೆ ಮಡಚಿ ಇಟ್ಟಿದ್ದ ಬಿಳಿಯ ಬಣ್ಣದ ಕಾಗದವನ್ನು ಹೊರತೆಗೆದಳು. ಕಾಗದದಲ್ಲಿ ಮುದ್ರಿಸಿದ್ದ ಅಕ್ಷರಗಳ ಕಡೆಗೆ ಅವಳ ಗಮನ ಹರಿಯಿತು. ಕರ್ನಾಟಕ ಸರ್ಕಾರದ ಮುದ್ರೆ ಇದ್ದ ಪತ್ರ ಅದಾಗಿತ್ತು. ಅದರಲ್ಲಿ ತನ್ನನ್ನು
ಸ್ಟಾಫ್ ಸರ್ಸ್ ಆಗಿ ಆಯ್ಕೆ ಮಾಡಿದ ಬಗ್ಗೆ ಬರೆಯಲಾಗಿತ್ತು.
ಆದಷ್ಟು ಬೇಗ ಸಕಲೇಶಪುರದ ಸರ್ಕಾರಿ ಆಸ್ಪತ್ರೆಯ ಮೇಲಧಿಕಾರಿಗಳನ್ನು ಕಾಣುವಂತೆ ಹೇಳಲಾಗಿತ್ತು. ಜೊತೆಗೆ ಕೆಲವು ದಾಖಲಾತಿ ಪತ್ರಗಳನ್ನು ತೆಗೆದುಕೊಂಡು ಹೋಗುವಂತೆ ತಿಳಿಸಲಾಗಿತ್ತು. ಒಮ್ಮೆ ಓದಿದ ಅವಳಿಗೆ ತನ್ನ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ. ಮತ್ತೆ ಮತ್ತೆ ಓದಿ ಮನವರಿಕೆ ಮಾಡಿಕೊಂಡಳು. ವಿಷಯ ಏನೆಂದು ತಿಳಿಯದ ನಾರಾಯಣನ್ ಅಚ್ಚರಿಯಿಂದ ಪತ್ರವನ್ನು ಮತ್ತೆ ಮತ್ತೆ ಓದುತ್ತಾ ನಿಂತಿರುವ ಮಗಳನ್ನು ಕಂಡು ಏನಿರಬಹುದು? ಪತ್ರದಲ್ಲಿ….ಅವಳ ಮುಖಭಾವ ನೋಡಿದರೆ ಏನೋ ವಿಶೇಷವಿದೆ ಪತ್ರದಲ್ಲಿ ಎನಿಸಿತು. ಆದರೆ ಕಲ್ಯಾಣಿಯ ಪತ್ರ ಅದು ಅಲ್ಲವೆಂದು ಅವರಿಗೆ ಮೊದಲೇ ಖಾತ್ರಿಯಾಗಿತ್ತು. ಏಕೆಂದರೆ ಅವರು ತಮ್ಮ ಈಗಿನ ವಿಳಾಸವನ್ನು ಕೇರಳದಲ್ಲಿ ಯಾರಿಗೂ ಕೊಟ್ಟಿರಲಿಲ್ಲ. ಇನ್ನು ಯಾರು ಬರೆದಿರಬಹುದು? ತಾನು ಒಮ್ಮೆ ಯಾರಿಂದ ಎಂದು ನೋಡಬೇಕಿತ್ತು… ಛೇ…ಎಂದು ಹೇಳಿ, ಸುಮತಿ ಏನು ಹೇಳಬಹುದೆಂದು ಅವಳನ್ನೇ ಗಮನಿಸುತ್ತಾ ನಿಂತರು.
ಪತ್ರವನ್ನು ಓದಿ ಮುಗಿಸಿದ ಸುಮತಿ ತಲೆ ಎತ್ತಿ ಅಪ್ಪನ ಮುಖವನ್ನು ನೋಡಿದಳು. ಅಪ್ಪನ ಮುಖದಲ್ಲಿ ಇದ್ದ ಜಿಜ್ಞಾಸೆ ಕಂಡಳು. ಆದರೆ ಹೇಳಲು ಸ್ವಲ್ಪ ಭಯ ಪಟ್ಟಳು. ಏಕೆಂದರೆ ತಾನು ನರ್ಸ್ ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ಅಪ್ಪನಿಗೆ ಗೊತ್ತಾಗದಂತೆ ಗೆಳತಿಯ ಮುಖಾಂತರ ಆ ಅರ್ಜಿಯನ್ನು ಪೊಸ್ಟ್ ಮಾಡಿಸಿದ್ದಳು. ತನ್ನನ್ನು ಆಯ್ಕೆ ಮಾಡುವರು ಎಂದು ಅವಳು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಈಗ ಕೆಲಸಕ್ಕೆ ಕರೆ ಬಂದಿರುವುದು ಅವಳಿಗೆ ಅತ್ಯಂತ ಸಂತೋಷದ ವಿಷಯವಾಗಿತ್ತು. ಆದರೆ ಮೊದಲೇ ಅಪ್ಪ ಗೆಳತಿಗೆ ಹೇಳಿದ್ದು ನೆನಪಿದೆ,.. ನಮ್ಮ ಕುಟುಂಬದ ಹೆಣ್ಣು ಮಕ್ಕಳು ಹೊರಗೆ ದುಡಿಯುವಂತೆ ಇಲ್ಲ….ಎಂದು ಹಾಗಾಗಿ ಹೇಳಲು ಹಿಂಜರಿದಳು. ಆದರೆ ಅಪ್ಪನಿಗೆ ಈಗ ವಿಷಯ ತಿಳಿಸಲೇ ಬೇಕಿತ್ತು. ಹಾಗಾಗಿ ಶ್ರೀ ಕೃಷ್ಣನನ್ನು ಧ್ಯಾನಿಸುತ್ತಾ ಧೈರ್ಯ ತಂದುಕೊಂಡು… “ಅಪ್ಪಾ ಇದು ನನಗೆ ಕೆಲಸಕ್ಕೆ ಸೇರಲು ಬಂದ ಆಯ್ಕೆಯ ಪತ್ರ…ನನ್ನನ್ನು ಸ್ಟಾಫ್ ನರ್ಸ್ ಆಗಿ ಇಲ್ಲಿನ ಕ್ರಾಫರ್ಡ್ ಆಸ್ಪತ್ರೆಯ ಮೇಲಧಿಕಾರಿಗಳು ಆಯ್ಕೆ ಮಾಡಿರುವರು….ಆದಷ್ಟು ಬೇಗ ಕೆಲವು ದಾಖಲೆ ಪತ್ರಗಳೊಡನೆ ಅಲ್ಲಿ ಹೋಗಿ ಮೇಲಧಿಕಾರಿಗಳನ್ನು ಭೇಟಿ ಮಾಡಲು ತಿಳಿಸಿದ್ದಾರೆ…ಆರು ತಿಂಗಳ ತರಬೇತಿಯ ನಂತರ ನೇರವಾಗಿ ನನ್ನನ್ನು ಕೆಲಸಕ್ಕೆ ನೇಮಕ ಮಾಡುವರು…ನರ್ಸ್ ಆಗಿ ಸೇವೆ ಸಲ್ಲಿಸಬೇಕು ಎನ್ನುವುದು ನನ್ನ ಕನಸು”….ಎಂದು ಹೇಳುತ್ತಾ ಅಪ್ಪನ ಮುಖವನ್ನು ಒಮ್ಮೆ ಧೈರ್ಯ ತಂದುಕೊಂಡು ನೋಡಿ ತನ್ನ ಕೈಯಲ್ಲಿದ್ದ ಪತ್ರವನ್ನು ಮತ್ತೊಮ್ಮೆ ನೋಡಿದಳು. ಅಪ್ಪನ ಆಗಿನ ಮುಖಭಾವ ಹೇಗಿರಬಹುದು ಎಂದು ನೋಡುವ ಧೈರ್ಯ ಅವಳಿಗೆ ಇರಲಿಲ್ಲ. ಮಗಳು ಹೇಳಿದ ವಿಷಯವನ್ನು ಕೇಳಿ ನಾರಾಯಣನ್ ರವರ ನೆತ್ತಿಯಲ್ಲಿ ಚಿಂತೆಯ ನೆರಿಗೆಗಳು ಮೂಡಿ ಮಾಯವಾದವು. ಜೊತೆಗೆ ಕೋಪವೂ ಉಕ್ಕಿ ಬಂದು ಮುಖ ಕೆಂಪಗಾಯಿತು. ನಾನು ಅಷ್ಟು ಹೇಳಿದ್ದರೂ ಕೂಡಾ ನನಗೆ ತಿಳಿಯದಂತೆ ಮಗಳು ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
ನಾನು ಹೇಗೆ ಇದಕ್ಕೆ ಸಮ್ಮತಿ ಕೊಡುವೆ ಎಂದು ಇವಳು ಭಾವಿಸಿದ್ದಾಳೆ? ಅಮ್ಮನ ಹಾಗೇ ಮಗಳು ಕೂಡಾ ಎದುರು ನಿಲ್ಲಲು ಪ್ರಾರಂಭಿಸಿದ್ದಾಳೆ… ಈಗ ಇವಳು ವಿವಾಹಿತೆ…ನನಗೆ ಏನು ಹೇಳಲೂ ಈಗ ಮೊದಲಿನಂತೆ ಅಧಿಕಾರ ಇಲ್ಲ…ಈಗ ಇವಳು ಪರರ ಸ್ವತ್ತು….ಆದರೂ ಬುದ್ಧಿ ಹೇಳಲೇಬೇಕು…ಈ ವಿಷಯದಿಂದ ಇವಳ ಸಂಸಾರದಲ್ಲಿ ಈ ಹೊಸ ಜೀವನದ ಆರಂಭದಲ್ಲಿಯೇ ಪತಿ ಪತ್ನಿಯರಲ್ಲಿ ಒಡಕು ಮೂಡುವುದು ಬೇಡ…ನಾನು ಈಗ ಕೋಪಗೊಳ್ಳದೇ ಸಮಾಧಾನ ಚಿತ್ತದಿಂದ ಮಗಳಿಗೆ ತಿಳಿ ಹೇಳಲೇಬೇಕು ಎಂದು ತೀರ್ಮಾನಿಸಿ….” ಮಗಳೇ ನಿನ್ನ ಕನಸು ಏನೇ ಇರಬಹುದು…ಈಗ ನಿನಗೆ ವಿವಾಹವಾಗಿದೆ…
ನಮ್ಮ ಕುಟುಂಬದಲ್ಲಿ ಇಲ್ಲಿಯವರೆಗೆ ಯಾರೂ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಿದವರು ಇಲ್ಲ….ನನ್ನ ತೀರ್ಮಾನವನ್ನು ನಿನಗೆ ಮೊದಲೇ ಹೇಳಿದ್ದೆ…. ಈಗ ನಿನ್ನನ್ನು ಹೋಗಬೇಡ ಎನ್ನುವ ಅಧಿಕಾರ ನನಗಿಲ್ಲ…ನೀನು ಈಗ ವೇಲಾಯುಧನ್ ನ ಪತ್ನಿ….ಅವನ ತೀರ್ಮಾನವೇ ಅಂತಿಮ…. ಅಳಿಯ ಏನು ಹೇಳುವನೋ ತಿಳಿದಿಲ್ಲ…. ಈ ವಿಷಯವನ್ನು ಅವನಿಗೆ ತಿಳಿಸಿ ನಿನ್ನ ಸಂಸಾರದಲ್ಲಿ ಈಗಿಂದಲೇ ಒಡಕು ಮೂಡಿಸಬೇಡ….ಇದನ್ನು ಇಲ್ಲಿಯೇ ಮರೆತುಬಿಡು ಅವನಿಗೆ ಈ ವಿಷಯ ತಿಳಿಯುವುದು ಬೇಡ…. ಆ ಪತ್ರವನ್ನು ನನ್ನ ಕೈಗೆ ಕೊಡು” ….ಎಂದು ಅಪ್ಪ ಹೇಳಿದಾಗ ಸುಮತಿಗೆ ಬಹಳ ದುಃಖವಾಯಿತು. ಅಪ್ಪ ಎಂದಿಗೆ ನಮ್ಮ ಆಸೆ ಮತ್ತು ಕನಸುಗಳನ್ನು ಅರ್ಥ ಮಾಡಿಕೊಳ್ಳುವರು? ತಮ್ಮಂದಿರು ಎಳೆಯ ಮಕ್ಕಳಾಗದ ಅವರನ್ನು ನೋಡಿಕೊಳ್ಳಲೆಂದು ಅಕ್ಕನ ಓದು ಮೊಟಕುಗೊಳಿಸಿದ್ದು ಆಯ್ತು….ನಮ್ಮೆಲ್ಲರ ಇಷ್ಟಕ್ಕೆ ವಿರುದ್ಧವಾಗಿ ಊರಿನ ಆಸ್ತಿ ಮನೆಯನ್ನು ಮಾರಿ ಇಲ್ಲಿಗೆ ಬಂದು ಅನ್ಯರಿಂದ ಮೋಸ ಹೋಗಿದ್ದೂ ಆಗಿದೆ. ಅಮ್ಮ ಎಷ್ಟು ಬೇಡಿಕೊಂಡರೂ ಕೂಡಾ ಅಮ್ಮನ ಮಾತಿಗೆ ಬೆಲೆ ಕೊಡದೇ ತನ್ನ ಇಷ್ಟದಂತೆ ಇಲ್ಲಿಗೆ ಬಂದರು. ಜೊತೆಗೆ ನಮ್ಮನ್ನು ಕೂಡಾ ಅಮ್ಮನಿಂದ ದೂರ ಮಾಡಿದರು.
ಇಷ್ಟು ದಿನವಾದರೂ ಅಮ್ಮನನ್ನು ಕರೆದುಕೊಂಡು ಬರುವ ಬಗ್ಗೆ ಚಕಾರ ಎತ್ತಿಲ್ಲ. ನನ್ನ ಹಾಗು ಅಕ್ಕನ ವಿವಾಹಕ್ಕೆ ನಮಗೆ ಸಮ್ಮತವೇ ಎಂದು ಕೂಡಾ ಕೇಳಲಿಲ್ಲ. ಅವರಿಗೆ ತೋಚಿದವರ ಕೈಗೆ ನಮ್ಮನ್ನು ಒಪ್ಪಿಸಿದ್ದಾರೆ. ಬೇರೆ ವಿಧಿಯಿಲ್ಲದೇ ಬಂದ ಜೀವನವನ್ನು ಸ್ವೀಕರಿಸಿ ನಾವಿಬ್ಬರೂ ಬದುಕು ಸಾಗಿಸುತ್ತಾ ಇದ್ದೇವೆ. ತಮ್ಮಂದಿರು ಇನ್ನೂ ಚಿಕ್ಕವರು ಅವರಿಗೆ ತಾಯಿಯ ಪ್ರೀತಿ ಈಗ ಅಗತ್ಯವಿದೆ ಎಂದು ಅಪ್ಪನಿಗೆ ಅನಿಸಿಲ್ಲವೇ? ವಿವಾಹ ಆಗುವವರೆಗೂ ನಾನು ಹಾಗು ಅಕ್ಕ ಅವರನ್ನು ನೋಡಿಕೊಂಡೆವು. ಮಕ್ಕಳಿಗೆ ಬರೀ ಹೊಟ್ಟೆ ತುಂಬಲು ಊಟ ಮೈ ಮರೆಸಲು ಬಟ್ಟೆ ಇಷ್ಟು ಇದ್ದರೆ ಸಾಕೆ? ಇರಲು ಒಂದು ಮನೆ ಇದ್ದರೆ ಸಾಕೆ?ಅಮ್ಮನ ಪ್ರೀತಿಯ ಅಗತ್ಯ ಇಲ್ಲವೇ? ಇದೆಲ್ಲವೂ ಅಪ್ಪನ ಗಮನಕ್ಕೆ ಬಂದಿಲ್ಲವೇ? ಮಕ್ಕಳ ಮೇಲೆ ಬರಿಯ ಅಧಿಕಾರವೇ ಹೊರತು ಅಲ್ಲಿ ಕಾಳಜಿ ಇಲ್ಲವೇ? ಹೀಗೇಕೆ ಅಪ್ಪ ಯಾರನ್ನೂ ಅರ್ಥ ಮಾಡಿಕೊಳ್ಳದೇ ತಮ್ಮ ಇಚ್ಚೆಯಂತೆಯೇ ನಡೆದುಕೊಳ್ಳುವರು. ಹಾಗಾದರೆ ಕಟ್ಟಿಕೊಂಡ ಪತ್ನಿ ಹಾಗೂ ಅವಳಲ್ಲಿ ಹುಟ್ಟಿದ ತನ್ನ ಸ್ವಂತ ಮಕ್ಕಳಿಗೆ ಯಾವುದೇ ಸ್ವಾತಂತ್ರ್ಯ ಇಲ್ಲವೇ? ನಾವೆಲ್ಲರೂ ಬರೀ ಕೀಲು ಗೊಂಬೆಗಳೇ? ನಮಗೆ ನಮ್ಮದಾದ ಕನಸುಗಳು ಇಲ್ಲವೇ? ಏಕೆ ಅಪ್ಪ ಹೀಗೆ? ನಮ್ಮನ್ನು ಎಂದಿಗೂ ಅರ್ಥ ಮಾಡಿಕೊಂಡಿಲ್ಲವಲ್ಲ. ನಾಳೆ ನನಗೆ ಹುಟ್ಟುವ ಮಕ್ಕಳಿಗೆ ಒಂದು ಉತ್ತಮ ಜೀವನವನ್ನು ನಾನು ನಿರೂಪಿಸಲೇಬೇಕು.
ಪತಿಯ ವರಮಾನ ಈಗ ಸಧ್ಯಕ್ಕೆ ಮನೆಯ ಎಲ್ಲ ಖರ್ಚು ವೆಚ್ಚಗಳನ್ನು ಸರಿದೂಗಿಸಿ ಅಲ್ಪ ಉಳಿಸಿಕೊಳ್ಳಬಹುದು. ಆದರೆ ಹುಟ್ಟುವ ಮಕ್ಕಳ ಮುಂದಿನ ಭವಿಷ್ಯಕ್ಕೆ ಏನನ್ನಾದರೂ ಸಂಪಾದಿಸಿ ಇಡುವುದು ಬೇಡವೇ? ಅಮ್ಮನನ್ನು ಎಷ್ಟು ದಿನ ಎಂದು ಹೀಗೆ ಊರಲ್ಲಿ ಬಿಟ್ಟು ಇರುವುದು? ಅಪ್ಪನಿಗೆ ಅಮ್ಮನ ಮುಂದೆ ಸೋಲಲು ಸ್ವಾಭಿಮಾನದ ಪ್ರಶ್ನೆ, ಆದರೆ ತಮ್ಮಂದಿರಿಗೆ ಅಮ್ಮನ ಪ್ರೀತಿ ವಾತ್ಸಲ್ಯ ಬೇಡವೇ? ಅಮ್ಮ ಎಷ್ಟು ನೊಂದುಕೊಂಡು ಇರುವರೋ ಹೇಗೆ ಇರುವರೋ? ನಮ್ಮನ್ನೆಲ್ಲ ಬಿಟ್ಟು ಖಂಡಿತಾ ಅಮ್ಮ ನೆಮ್ಮದಿಯಿಂದ ಇರುವುದಿಲ್ಲ. ಎಂದು ಯೋಚಿಸುತ್ತಾ ಸುಮತಿ ಕೈಯ್ಯಲ್ಲಿದ್ದ ಲಕೋಟೆಯನ್ನು ಇನ್ನೂ ಬಿಗಿಯಾಗಿ ಹಿಡಿದುಕೊಂಡಳು.
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು