Less luggage more comfort-ಲೆಸ್ ಲಗ್ಗೇಜ್ ಮೋರ್ ಕಂಫರ್ಟ್ ವಿಶೇಷ ಲೇಖನ ಭಾರತಿಅಶೋಕ್

ಯುವ ಜೋಡಿಯೊಂದು ಕಣ್ಮುಂದೆ  ನಡೆದು ಹೋಯಿತು. ಆ ಯುವಕ(ಗಂಡ)ತನ್ನ ಪಾಡಿಗೆ ತಾನು  ಅನಾಯಾಸವಾಗಿ ಹೆಂಡತಿಯ ಮುಂದೆ ಮುಂದೆ ಕೈ ಹೊಸೆಯುತ್ತಾ ನಡೆಯುತ್ತಿದ್ದಾನೆ. ಅವಳು/ಹೆಂಡತಿ – ಬದುಕನ್ನು  ಬಗಲಲ್ಲಿ, ಹೆಗಲಲ್ಲಿ,ಹೊಟ್ಟೆಯಲ್ಲಿ ಮೂಟೆ ಕಟ್ಟಿಕೊಂಡು ಏಳಲಾರದ ಹೆಜ್ಜೆ ಎತ್ತಿ  ಇಡುತ್ತಾ ನಡೆಯುತ್ತಿದ್ದಾಳೆ. ತೆಳ್ಳಗೆ ಕೋಲಿನಂತಿರುವ ಅವಳ ವಯಸ್ಸು ಸರಿಸುಮಾರು ಇಪ್ಪತ್ತೆರಡು ಇಪ್ಪತ್ತ ಮೂರು ಇರಬಹುದು. ಕಂಕುಳಲ್ಲಿ ಒಂದು ಒಂದೂವರೆ ವರ್ಷದ ಮಗು ಕೈಯಲ್ಲೊಂದು  ಭಾರದ ಚೀಲ ಹಿಡಿದಿದ್ದಾಳೆ.ಇದು ಅವಳಿಗೆ ಭಾರವೆಂದರೆ ಹೊಟ್ಟೆಯಲ್ಲಿ ಆರೇಳು ತಿಂಗಳ ಗರ್ಭ ಹೊತ್ತು  ಕೈ ಹೊಸೆಯುತ್ತಾ ನಡೆಯುತ್ತಿದ್ದವನ ಹಿಂದೆ  ದಾಪುಗಾಲಾಕುತ್ತಿದ್ದವಳು  ಗಮನ ಸೆಳೆಯುತ್ತಾಳೆ.

ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಮ್ಮ ಗಣಿತ ಶಿಕ್ಷಕರು ಅಗಾಗ ಹೇಳುತ್ತಿದ್ದ ಮಾತು ನೆನಪಾಯ್ತು ಅದು  “ಲೆಸ್ ಲಗ್ಗೇಜ್  ಮೋರ್ ಕಂಫರ್ಟಬಲ್” ಅನ್ನುವುದು. ಆಗ್ಗೆ ಅದು ನನಗೆ  ಅರ್ಥ  ಆಗಿದ್ದಿಷ್ಟೇ ಎಲ್ಲಿಗಾದರೂ ಹೊರಟರೆ ಹೆಚ್ಚು ಲಗ್ಗೆಜ್ ಒಯ್ಯಬಾರದು  ಕಡಿಮೆ ಇದ್ದಷ್ಟು ಆರಾಮಾಗಿ ಪಯಣಿಸಬಹುದು  ಅಂತ. ಯಾವುದಾದರೂ ಊರಿಗೆ ಹೊರಟಾಗ ನಾನು‌ ನಮ್ಮ ಮೇಷ್ಟ್ರು ಹೇಳಿದ್ದನ್ನು ಚಾಚು ತಪ್ಪದೇ ಪಾಲಿಸುತ್ತಿದ್ದೆ ಮತ್ತು ಎರಡು ಮೂರು ಚೀಲ ತುಂಬುವ ವಸ್ತುಗಳನ್ನು ಒಂದೇ ಚೀಲಕ್ಕೆ ತುಂಬಿ ಆದಷ್ಟು ಕಡಿಮೆ ಮಾಡಿಕೊಳ್ಳುತ್ತಿದ್ದೆ. ಆಗಿನ ನನ್ನ ಜ್ಞಾನ ಅಷ್ಟೇ….

ಬರು ಬರುತ್ತಾ ಆ ಮಾತು ಇನ್ನು ಒಂಚೂರು ವಿಸ್ತರಿಸಿಕೊಂಡು ಮನೆಯಲ್ಲಿ ನಾವು ಮೂರು ಜನ ಮಕ್ಕಳಿದ್ದೆವು. ಪಕ್ಕದ ಮನೆಯಲ್ಲಿ ಇಬ್ಬರು ಮಕ್ಕಳು ಅವರ ಅಡುಗೆ, ಊಟಕ್ಕು ನಮ್ಮ‌ಮನೆಯ ಅಡುಗೆ ಊಟಕ್ಕು ವ್ಯತ್ಯಾಸ ವನ್ನು ಗ್ರಹಿಸುವಂತಾದೆ.  ನಮ್ಮ ಮನೆಯಲ್ಲು ಇಬ್ಬರೇ ಮಕ್ಕಳಿದ್ದಿದ್ದರೆ ಅಥವಾ ನಾನೊಬ್ಬಳೇ ಇದ್ದಿದ್ದರೆ ಅವರಿಗಿಂತ ಇನ್ನು ಆರಾಮಾಗಿ ಉಂಡು ತಿಂದು ಸ್ವಲ್ಪ ದುಬಾರಿ ಬಟ್ಟೆ ಉಡುವಂತಾಗುತ್ತಿತ್ತು ಎಂದು ಅನ್ನಿಸುತ್ತಿತ್ತು.

ಯಾವಾಗ ಅವ್ವ ನಮ್ಮನ್ನೆಲ್ಲಾ ಎಳೆದುಕೊಂಡು ತಾನು ಕೂಲಿ ನಾಲಿ ಮಾಡಿ  ತಂದು ಬೇಯಿಸಿ  ಮಕ್ಕಳ ಹೊಟ್ಟೆ ನೆತ್ತಿ ನೋಡುತ್ತಾ ಉಂಡಳೋ, ಉಪವಾಸ ಮಲಗಿದಳೂ ದಣಿದ  ದೇಹ ಹಾಸಿಗೆಯಲ್ಲಿ ಕೈ ಕಾಲು ಎಳೆದು ನರಳುತ್ತಾ ಮಕ್ಕಳನ್ನು ಎದೆಗವಚಿಕೊಳ್ಳುತ್ತಿದ್ದರೆ ಅಪ್ಪ ತನ್ನ ಪಾಡಿಗೆ ತಾನು ನೆಮ್ಮದಿಯಿಂದ ನಿದ್ದೆಯಲ್ಲಿ ಪಯಣಿಸುತ್ತಿದ್ದನು. ತಾನೊಬ್ಬನೇ  ಕೈ ಕಾಲು  ಹರಿ ಬಿಟ್ಟ ನೆಮ್ಮದಿಯ ಪಯಣವದು.  ಇದನ್ನು ನೋಡಿದಾಗಲೇ ಅನ್ನಿಸುತ್ತಿತ್ತು  ಲಗ್ಗೇಜ್ ಎಂದರೆ ಬರೀ ಲಗ್ಗೇಜ್ ಅಲ್ಲಾ ಅವ್ವ ತನ್ನ ಕೊರಳಿಗೆ  ಕಟ್ಟಿಕೊಂಡ  ಸಂಸಾರದ ನೊಗ ಎಂದು.  ಜೋಡೆತ್ತಾಗಬೇಕಿದ್ದ ಅಪ್ಪ ಅದನ್ನು ಅನಾಮತ್ತಾಗಿ ಅವ್ವನ ಕೊರಳಿಗೆ ಕಟ್ಟಿ ಕೊರಳ್ಹರಿದ ಎತ್ತಿನ ಹಾಗೆ ನಡೆಯುವವನು ಎಂದು.

ಅವ್ವನಿಗೆ ಮಕ್ಕಳು ಮರಿ ಎಂದೂ ಲಗ್ಗೇಜ್ ಆಗದೇ ಇರಬಹುದು. ಸಂಸಾರದ  ನೊಗ ಹೊತ್ತ ಆಕೆಗೆ ಮೈಗೆ ಮಾತ್ರ ಅಂಟಿಕೊಂಡ ಲಗ್ಗೆಜ್ ಲಗ್ಗೇಜೇ ಅಲ್ಲ. ಕುಟುಂಬದ ಸಮಾಜದ ಅಲಿಖಿತ ಠರಾವನ್ನುಆಚರಣೆ ಸಂಪ್ರದಾಯಗಳ  ಮೋಟೆ ಕಟ್ಟಿ ತಲೆಯೊಳಗೆ ತುರುಕಿಕೊಂಡ ಆಕೆಗದು ಬಲು ಭಾರ. ಅದೆಲ್ಲದರ ಭಾರ ಇಳಿಸದೇ  ಹೊತ್ತು ನಡೆಯುವ ಅವಳಿಗೆ ಬದುಕಿನ ಪಯಣ ನಿಜಕ್ಕು ಕಂಫಟ್೯ ಅಲ್ಲ- ಯಾವಾಗ ಅಪ್ಪನಂತೆ ಹೊರೆ ಇಳಿಸಿ ದೂರ ಸರಿಯುವಳೋ ಅಲ್ಲಿತನಕ, ಮೋರ್ ಲಗ್ಗೆಜ್ ಲೆಸ್ ಕಂಫರ್ಟ್ ಅಂತ ಅರ್ಥ ಆಗುವುದಿಲ್ಲ,  ಅಕೆಯ ಪಯಣ ಸುಖಕರವಾಗಿರುವುದಿಲ್ಲ

ಏನೇ ಆಗಲಿ ಅವ್ವನಿಗೆ ಈ ಲೆಸ್ಸು ಮೋರು ಎನ್ನುವ ಕಾನ್ಸೆಪ್ಟ್ ಗೊತ್ತಿಲ್ಲ. ಅಕೆ ತನ್ನನ್ನು ನೊಗಕ್ಕೆ ಕಟ್ಟಿದ ಎತ್ತು, ತಾನು ತನ್ನ ಕಾಯಕವನ್ನು ಸುಗಮವಾಗಿ ಮಾಡಲೇಬೇಕು-ಅದಕ್ಕಾಗಿ ತನಗೆ ನೋವಾಗಲಿ ಬೇಸರವಾಗಲಿ ಇಲ್ಲ. ಎಳೆಯುತ್ತಿದ್ದುದಕ್ಕಾಗಿಯಾಗಲಿ, ಎಳೆಯಲು ಪ್ರಯಾಸ ಪಡಿತ್ತಿರುವುದಕ್ಕಾಗಿಯಾಗಲಿ ಯಾರಾದ್ದೋ ಕರುಣೆ ಅಥವಾ ಪ್ರಶಂಸೆಯ ಕಲ್ಪನೆಯೂ ಇಲ್ಲದೇ, ಇರೋ ಲಗ್ಗೇಜನ್ನಲ್ಲಾ ಹೊತ್ತು ಪಯಣಿಸುವ ಕಂಫಟ್೯ ಅನ್ನುವ ಶಬ್ದ ಕ್ಕೆ ಅರ್ಥ ಹುಡುಕದ ಪಯಣಿಗಳು


Leave a Reply

Back To Top