ಸಾವಿಲ್ಲದ ಶರಣರು-ಗುಪ್ತ ಶಿವಯೋಗ ಸಾಧಕ  ಸದ್ಗುರು ಶ್ರೀಮಹಾದೇವ ತಾತ-ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಕರ್ನಾಟಕದ ಆಧ್ಯಾತ್ಮಿಕ ತಪೋಭೂಮಿಯಲ್ಲಿ ಸಹಸ್ರಾರು ಗುಪ್ತಯೋಗಿಗಳು ಇದ್ದರು; ಈಗಲೂ ಇದ್ದಾರೆ. ಅವರು ಪ್ರತ್ಯಕ್ಷರಾಗಿದ್ದರೂ ಅಪ್ರತ್ಯಕ್ಷರೇ. ಅವರು ಇಚ್ಛಿಸುವವರೆಗೂ ದೇಹಧಾರಣೆ ಮಾಡಿದ್ದು, ಅನಂತರ ದೇಹಬಿಟ್ಟ ಯೋಗಿಗಳಿಗೆ ನಮ್ಮಲ್ಲಿ ಕಡಿಮೆಯಿಲ್ಲ! ಸನಾತನ ಧರ್ಮದ ಸಾರವನ್ನು ಅವರು ಸಾರಿದ್ದುಂಟು. ಅವರು ಸರ್ವಧರ್ಮಗಳ ಸಾರವನ್ನೇ ಒಳಗೊಂಡಿದ್ದರು. ಇಂಥ ಪರಂಪರೆಗೆ ಸೇರಿದವರು ಬಳ್ಳಾರಿ ಜಿಲ್ಲೆಯ ಅಲ್ಲೀಪುರದ ಶ್ರೀ ಮಹಾದೇವ ಶಿವಯೋಗಿಗಳು.

ಹಿನ್ನೆಲೆ:
—————————
ಮಹಾದೇವ ತಾತ ದೇಶದ ಉದ್ದಗಲಕ್ಕೂ ಸಂಚಾರ ಮಾಡಿದರಷ್ಟೆ. ಅವರು ಕೆಲಕಾಲ ಹಿಮಾಲಯದ ಗುಹೆಗಳಲ್ಲಿದ್ದು ಸಾಧನೆ ಮಾಡಿದರು. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಮೂಲೆಮೂಲೆಗಳಲ್ಲಿ ಸಂಚಾರ ಮಾಡಿ, ಒಂಬತ್ತು ಮಠಗಳನ್ನು ನಿರ್ವಿುಸಿದರು. ಬಳ್ಳಾರಿಯ ಅಲ್ಲೀಪುರದಲ್ಲಿ ಸಾಧನೆ ಮಾಡಿ ಕೊನೆಗೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿ ಶ್ರೀಸಂಗಮಕ್ಷೇತ್ರದಲ್ಲಿ ಐಕ್ಯರಾದರು. ಮಹಾದೇವ ತಾತ ಅವರ ಗದ್ದಿಗೆ ಇಲ್ಲುಂಟು. ಇಂಥ ಪೂಜ್ಯರು ಎಲ್ಲಿಯವರು? ಎಲ್ಲಿ ಬೆಳೆದರು? ಇವರ ಸಾಧನೆಯ ನೆಲೆಗಳು ಯಾವುವು? ಎಂಬುದು ಸ್ವಲ್ಪ ಮಟ್ಟಿಗೆ ನಿಗೂಢ. ಇವರು ನಂಜನಗೂಡಿನವರೆಂದೂ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಚಿಕ್ಕಮಗುವಿದ್ದಾಗ ಇವರ ಪ್ರಾಯ ಹದಿನಾಲ್ಕು ವರ್ಷವಾಗಿತ್ತೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಈ ವಿವರಗಳ ಹಿನ್ನೆಲೆಯಲ್ಲಿ 1870ರಲ್ಲಿ ಇವರು ಜನಿಸಿದರೆಂದು ಅಂದಾಜಿಸಬಹುದಾಗಿದೆ. ಇವರ ತಂದೆ ಮರೆಯ್ಯ, ತಾಯಿ ಮಹಾದೇವಮ್ಮ. ತಾತನವರು ಚಿಕ್ಕಂದಿನಲ್ಲಿ ನಂಜನಗೂಡಿನ ತಮ್ಮ ಸೋದರಮಾವನ ಆಶ್ರಯದಲ್ಲಿ ಬಾಲ್ಯಕಾಲ ಕಳೆದರು. ಅಲ್ಲಿರುವಾಗಲೇ ಲೀಲಾಮೂರ್ತಿಯಂತೆ ಅಲೌಕಿಕ ಸಾಮರ್ಥ್ಯ ಮೆರೆದರು. ಜನ ಇವರನ್ನು ‘ಬಾಲ ಶಿವಯೋಗಿ’ ಎಂದು ಕರೆಯುತ್ತಿದ್ದದ್ದುಂಟು. ಒಮ್ಮೆ ಮಹದೇಶ್ವರ ಬೆಟ್ಟಕ್ಕೆ ಯಾತ್ರಿಕರು ಭಜನೆ ಮಾಡುತ್ತ ಹೋಗುತ್ತಿದ್ದರು. ಮಹಾದೇವ ತಾತ ಅವರ ಜತೆ ಹೊರಟರು. ಮಲೆಮಹದೇಶ್ವರ ಬೆಟ್ಟದ ಪರಿಸರಕ್ಕೆ ಮನಸೋತು ಅಲ್ಲಿಯೇ ಸಾಧನೆಗೆ ತೊಡಗಿದರು. ಇವರ ಸಾಧನೆ ಬಲಿತಂತೆ ಕಂತೆ ಮಾದನ ಬೆಟ್ಟದ ಆಶ್ರಮದ ಗುರುಗಳಾದ ನಂಜುಂಡಸ್ವಾಮಿಗಳ ದರ್ಶನ ಮತ್ತು ಆಶೀರ್ವಾದ ಇವರಿಗೆ ದೊರಕಿತು. ಇದು ತಾತಾ ಅವರ ಆಧ್ಯಾತ್ಮಿಕ ಸಾಧನೆಗೆ ಮೊದಲ ಮೆಟ್ಟಿಲಾಯಿತು.

ಮಹಾದೇವ ತಾತ ಎಂಟನೆಯ ವಯಸ್ಸಿನಲ್ಲಿ ದೀಕ್ಷೆ ಪಡೆದು ಹಠಯೋಗ ಸಾಧನೆಯಲ್ಲಿ ತೊಡಗಿದರು. ನಂತರ ಗುರುವಿನ ಆದೇಶದಂತೆ ದೇಶಸಂಚಾರ ಕೈಗೊಂಡರು. ಅವರು ಜಟಾಜೂಟಧಾರಿಯಾಗಿ ಹೆಗಲ ಮೇಲೆ ಪೂಜಾದ್ರವ್ಯದ ಗಂಟು, ಎಡಗೈಯಲ್ಲಿ ತಂಬೂರಿ, ಬಲಗೈಯಲ್ಲಿ ತ್ರಿಶೂಲ ಹಿಡಿದು ಅಲ್ಲಲ್ಲಿ ಪವಾಡಗಳನ್ನು ನಡೆಸಿದರು. ಅವರು ಮಲೆಮಹದೇಶ್ವರ ಬಿಟ್ಟು ನೇರವಾಗಿ ಮೈಸೂರಿಗೆ ಬಂದರು. ಅಲ್ಲಿಂದ ತಾತ ಕಾಶಿಗೆ ಬಂದು ವೇದಾಂತಶಾಸ್ತ್ರವನ್ನು ಅಧ್ಯಯನ ಮಾಡಿದರು. ಅಲ್ಲಿಂದ ನೇರವಾಗಿ ಹಿಮಾಲಯಕ್ಕೆ ಹೋದರು.

ಸಿದ್ಧಿ-ಸಾಧನೆ: 

ಬದರಿ, ಕೇದಾರ, ನೇಪಾಳ, ಮಾನಸಸರೋವರ ಮುಂತಾದ ಎಡೆಗಳಲ್ಲಿ ಹಲವು ವರ್ಷ ತಂಗಿದ್ದರಂತೆ. ಇದೇ ಸಮಯಕ್ಕೆ ಯೂರೋಪಿನ ಪ್ರದೇಶಗಳಿಗೆ ಹೋಗುವ ಅವಕಾಶಗಳು ಅವರಿಗೆ ಒದಗಿದವು. ಅವರು 1910ರ ಸುಮಾರಿಗೆ ಆಫ್ರಿಕಾ, ಅಮೆರಿಕ, ಇಟಲಿ, ಜರ್ಮನಿ, ಮೆಕ್ಕಾ ಮದೀನಾಗಳಲ್ಲಿ ಸಂಚಾರ ಮಾಡಿದರು. ಆಯಾಯ ದೇಶದ ಧಾರ್ವಿುಕರೊಡನೆ ಸಂವಾದಗಳನ್ನು ನಡೆಸಿದರು. ಅವರು ‘ಯಾವ ಮತವೂ ದೊಡ್ಡದಲ್ಲ; ಯಾವ ಮತವೂ ಸಣ್ಣದಲ್ಲ’-ಎಂದು ಜನತೆಗೆ ತಿಳಿಹೇಳಿದರು. ಮತಮತಗಳೊಡನೆ ಜಗಳ ತೆಗೆಯದೆ ಧಾರ್ವಿುಕವಂತರಾಗಬೇಕೆಂದು ಕರೆ ನೀಡಿದರು. ಅವರು ಆಯಾ ದೇಶಗಳಲ್ಲಿ ಯೋಗವಿದ್ಯೆ, ಆಯುರ್ವೆದ ಮತ್ತು ಆಧ್ಯಾತ್ಮಿಕ ವಿದ್ಯೆಗಳನ್ನು ಜನತೆಗೆ ತಿಳಿಸಿದರು. ಮಹಾದೇವ ತಾತ ವರ್ಚಸ್ಸಿಗೆ ಜನ ಮಾರುಹೋದರು. ಇವರು 1939-40ನೆಯ ಇಸವಿಯಲ್ಲಿ ಉತ್ತರಭಾರತದ ಕ್ಷೇತ್ರಗಳ ಪ್ರವಾಸ ಕೈಗೊಂಡರು. ಉತ್ತರದಿಂದ ದಕ್ಷಿಣದೇಶದ ಕಡೆ ಪ್ರಯಾಣ ಮಾಡುತ್ತ ಆಂಧ್ರಪ್ರದೇಶದ ಗಡಿಭಾಗಕ್ಕೆ ಬಂದರು. ಅವರು ಆಂಧ್ರಪ್ರದೇಶದ ನಗದೂರು ರೈಲ್ವೆ ನಿಲ್ದಾಣ ಮುಖಾಂತರ ಬಳ್ಳಾರಿ ಹತ್ತಿರ ಇರುವ ಆದವಾನಿಯ ಗವಿಮಠಕ್ಕೆ ಬಂದು ಸೇರಿದರು. ಇದು ಅಧಿಕೃತವಾದ ಸಂಗತಿ. ಆಗ ಆದವಾನಿ ಬಳ್ಳಾರಿಯ ಗಡಿಭಾಗದಲ್ಲಿತ್ತು. ಬಳ್ಳಾರಿಯ ಗುತ್ತಿಗೆದಾರರಾದ ಗಂಗಲಾಪುರದ ಹನುಮಂತಪ್ಪ ಸರ್ಕಾರಿ ಕಟ್ಟಡವೊಂದನ್ನು ನಿರ್ವಿುಸುತ್ತಿದ್ದರು. ಆ ಕಟ್ಟಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿತು. ಆಗ ತಾತನವರು ತಪಶ್ಶಕ್ತಿಯಿಂದ ಬೆಂಕಿ ನಂದಿಸಿದರು. ಈ ಪವಾಡಕ್ಕೆ ಹನುಮಂತಪ್ಪ ಬೆರಗಾದರು. ಮಹಾದೇವ ತಾತ ಬಳಿ ಬಂದು ತಾವು ಇರುವ ಅಲ್ಲೀಪುರಕ್ಕೆ ಬರಬೇಕೆಂದು ಕೋರಿಕೊಂಡರು. ಆದರೆ, ತಾತ ನಿರಾಕರಿಸಿದರು. ಒಂದುದಿನ ತಾತ ಅಲ್ಲೀಪುರದ ಹನುಮಂತಪ್ಪ ಮನೆ ಬಳಿಯೇ ಬಂದರು. ಹನುಮಂತಪ್ಪ ದಂಪತಿಗೆ ಹಿಗ್ಗೋಹಿಗ್ಗು. ಹನುಮಂತಪ್ಪ ಮತ್ತು ಮರೆಮ್ಮ ದಂಪತಿ ತಾತನವರನ್ನು ಭಯ-ಭಕ್ತಿಯಿಂದ ಬರಮಾಡಿಕೊಂಡು ಆದರಿಸಿದರು. ತಾತನಿಗೆ ಅವರು ಐದಾರು ತಿಂಗಳುಗಳ ಕಾಲ ಸೇವೆಸಲ್ಲಿಸಿದರು. ಹನುಮಂತಪ್ಪ ಬೋವಿ ಜನಾಂಗಕ್ಕೆ ಸೇರಿದ್ದರು. ಪರಮ ಸಾತ್ವಿಕರೂ ಕರುಣಾಳುಗಳೂ ಆಗಿದ್ದರು. ತಾತನು ಮರೆಮ್ಮನ ಹೆಸರನ್ನು ಗಂಗಮ್ಮನೆಂದು ಮರುನಾಮಕರಣ ಮಾಡಿದರು. ಕಾಲಕ್ರಮೇಣ ಹನುಮಂತಪ್ಪ ದಂಪತಿ ತಾತನವರ ಪ್ರಥಮ ಶಿಷ್ಯರಾದರು. ಹನುಮಂತಪ್ಪ ಅಗರ್ಭ ಶ್ರೀಮಂತರಾಗಿದ್ದರೂ ತಾತನ ಪರಮಭಕ್ತರಾಗಿಯೇ ಉಳಿದರು. ಅವರ ಬದುಕು ಆಧ್ಯಾತ್ಮಿಕ ಶ್ರೀಮಂತಿಕೆಯಿಂದ ಪರಿಪೂರಿತವಾಗಿತ್ತು. ಅವರು ತಮ್ಮ ಜೀವಿತದ ಕೊನೆಯವರೆಗೂ ಬರಿಗಾಲಲ್ಲಿ ತಾತನವರ ಹಿಂದೆಯೇ ಓಡಾಡಿದರು.

ಕರಡೀಗುಡ್ಡದ ಮಂಗಮ್ಮನ ಆದೇಶದಂತೆ ಅಂದಿನ ಬ್ರಿಟಿಷ್ ಸರ್ಕಾರದ ನಿರ್ಬಂಧಿತ ಪ್ರದೇಶವಾದ ಅಲ್ಲೀಪುರದಲ್ಲಿ ಮಠ ಕಟ್ಟಿಸಲು ತಾತ ನಿರ್ಧಾರ ಮಾಡಿದರು. ‘ಅದು ಸರ್ಕಾರಿ ಜಾಗವೆಂದೂ ಮುಂದೆ ತೊಂದರೆಯಾಗುವುದೆಂದೂ’ ಜನ ಹೇಳಿದರು. ಆದರೂ, ಆ ಜಾಗದಲ್ಲಿ ಗುಡಿಸಿಲನ್ನು ಹಾಕಿಸಿದರು. ‘ತಾತ, ಅದು ಸರ್ಕಾರಿ ಜಾಗ. ಬ್ರಿಟಿಷ್ ಕಲೆಕ್ಟರ್ಗೂ ಕೊಡುವ ಅಧಿಕಾರ ಇಲ್ಲ’ ಎಂದು ಪರಿಪರಿಯಾಗಿ ಹಿರಿಯರಾದಿಯಾಗಿ ಅಲವತ್ತುಕೊಂಡರು. ಆಗ ತಾತ ‘ಅವರಿಗೆ ನಾವು ಕೇಳೋದು ಬ್ಯಾಡೋ, ಅವರೇ ಬಂದು ಕೊಡ್ತಾರೆ’ ಎಂದು ಭವಿಷ್ಯ ನುಡಿದರಂತೆ. ಒಂದು ದಿನ ಮದರಾಸ್ ಗವರ್ನರ್ ಸರ್ ಬಾಲ್ಡನೈ ಕಂಪಲಿ ಪ್ರದೇಶದಲ್ಲಿ ನಡೆದ ಗಲಭೆ ವಿಚಾರಣೆಗೆ ಬಂದನು. ಅವನು ತಾತನ ಗುಡಿಸಿಲಿಗೆ ಬಂದಾಗ, ಮಹಾದೇವ ತಾತ ಇಂಗ್ಲಿಷಿನಲ್ಲಿ-‘ನಿಮ್ಮ ಪತ್ನಿಯ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು’ ಎಂದು ಹೇಳಿದರಂತೆ. ಈ ಮಾತನ್ನು ಕಡೆಗಣಿಸಿ ತಾತನ ಗುಡಿಸಿಲನ್ನು ಕಿತ್ತು ಹಾಕಿಸಿ ಮದರಾಸಿಗೆ ಮರಳಿದನು. ಇಂಗ್ಲೆಂಡಿನಿಂದ ಬಂದ ಸಂದೇಶದಲ್ಲಿ ‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ’ ಎಂಬ ಒಕ್ಕಣಿಕೆ ಇತ್ತು. ಇದು ಗವರ್ನರ್ಗೆ ಬೆರಗು ತಂದಿತು. ಅವನು ಬಳ್ಳಾರಿಗೆ ಮರಳಿ ಬಂದು ತಾತನವರನ್ನು ಕಂಡು, ಮಠ ಕಟ್ಟಿಕೊಳ್ಳಲು ಮೂರೂವರೆ ಎಕರೆ ಪ್ರದೇಶವನ್ನು ತಾತನ ಹೆಸರಿನಲ್ಲಿ ಕಾಗದಪತ್ರಗಳನ್ನು ಮಾಡಿಸಿ, ಕಚೇರಿಯ ಮೊಹರನ್ನು ಹಾಕಿಸಿಕೊಟ್ಟ ದಾಖಲೆಗಳಿವೆ!

ಪ್ರಸಂಗಗಳು:

 ತಾತ ಒಂದು ದಿನ ಬಳ್ಳಾರಿ ಹತ್ತಿರವಿರುವ ಚೇಳ್ಳೆಗುರಿಕೆ ಎರ್ರಿಸ್ವಾಮಿ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು. ಆದರೆ, ತಾತ ಚೇಳ್ಳಗುರಿಕೆಗೆ ಹೋಗದೆ, ಬೇರೊಂದು ಸ್ಥಳಕ್ಕೆ ಹೋಗುತ್ತಿದ್ದರು. ಅವರ ಎದುರಿಗೆ ಎರ್ರಿಸ್ವಾಮಿಯ ದೃಶ್ಯ ಆಕಾಶದ ತುಂಬೆಲ್ಲ ಕಾಣಿಸಿತು. ಆಗ ತಾತ ತಮ್ಮ ಕಾರನ್ನು ಚೇಳ್ಳಗುರಿಕೆ ಕಡೆ ತಿರುಗಿಸಿದರು. ಅವರು ಚೇಳ್ಳಗುರಿಕೆಗೆ ಬಂದು ನಡೆದ ಸಂಗತಿಯನ್ನು ಭಕ್ತಾದಿಗಳಿಗೆ ತಿಳಿಸಿ-ಎರ್ರಿಸ್ವಾಮಿ ಗದ್ದಿಗೆ ಮುಂದೆ ಕುಳಿತು ಕ್ಷಮಾಪಣೆ ಯಾಚಿಸಿದರು. ತಾತನವರು ಮಾಡಿದ ಪವಾಡಗಳು ಜನರ ಮನಸ್ಸಿನಲ್ಲಿ ನೆಲೆಯೂರಿ ನಿಂತಿವೆ. ಅವರು ನುಡಿದ ಭವಿಷ್ಯವಾಣಿಗಳು ಜನರ ಭಾಗ್ಯದ ಬಾಗಿಲನ್ನು ತೆರೆಸಿವೆ. ಮಹಾದೇವ ತಾತ ಅವರು ಶಿಶುವಿನಾಳ ಶರೀಫ, ಸಿದ್ಧಾರೂಢರು, ಗರಗದ ಮಡಿವಾಳಪ್ಪನವರು, ಹಾನಗಲ್ಲ ಕುಮಾರ ಮಹಾಸ್ವಾಮಿಗಳು, ಹಾವೇರಿ ಶಿವಬಸವ ಮಹಾಸ್ವಾಮಿಗಳು ಮುಂತಾದವರ ಸಮಕಾಲೀನರಾಗಿದ್ದರು. ತಾತ ನಿರಾಭಾರಿ, ಸರ್ವಸಂಗ ಪರಿತ್ಯಾಗಿ. ಆದರೆ, ತಾವೇ ಸ್ವತಃ ಕಬ್ಬಿಣದ ನೇಗಿಲನ್ನು ಹಿಡಿದು ಹೊಲವನ್ನು ಉಳುಮೆ ಮಾಡುತ್ತಿದ್ದರು.

ಮಹಾದೇವ ತಾತ ಭಕ್ತಸಮೂಹದ ಎದುರು ‘ನನ್ನದುಶರಣ ಧರ್ಮ ’ ಎಂದು ಹೇಳುತ್ತಿದ್ದರು. ಈ ಧರ್ಮದಲ್ಲಿ ಸತ್ಯ, ನ್ಯಾಯ, ನೀತಿ ಹಾಗೂ ಸರ್ವಸಮಾನತೆಗಳು ಮೂಲಮಂತ್ರಗಳೆಂದು ಹೆಸರಿಸುತ್ತಿದ್ದರು. ಇಂಥ ಮೂಲಮಂತ್ರಗಳನ್ನು ಪ್ರತಿಯೊಬ್ಬರು ಮೌಲ್ಯವಾಗಿ ಸ್ವೀಕರಿಸಬೇಕೆಂದು ತಿಳಿಹೇಳುತ್ತಿದ್ದರು. ಅವರು ಒಮ್ಮೊಮ್ಮೆ ಉಗ್ರಕೋಪಿ; ಮಗದೊಮ್ಮೆ ವಾತ್ಸಲ್ಯಮಯಿ. ಅವರ ಮನಸ್ಸು ತಾಯಿಯ ಅಂತಃಕರಣಗಿಂತಲೂ ಮಿಗಿಲಾಗಿರುತ್ತಿತ್ತು. ಆದರೆ, ಅದನ್ನು ಎಲ್ಲಿಯೂ ಪ್ರಕಟಪಡಿಸುತ್ತಿರಲಿಲ್ಲ. ಅವರಲ್ಲಿಗೆ ಬಂದ ಭಕ್ತರಿಗೆ ತಾವೇ ಪ್ರಸಾದ ತಯಾರಿಸಿ ಅಕ್ಕರೆಯಿಂದ ಉಣಬಣಿಸುತ್ತಿದ್ದರು. ಇದು ‘ಪ್ರಸಾದಯೋಗ’ ಎಂದು ಬಂದ ಭಕ್ತರಿಗೆ ಹೇಳುತ್ತಿದ್ದರು. ತಾತ ಎಂದೂ ಸೀಮಿತ ಜನಾಂಗದ ಗುರುವಾಗಿರಲಿಲ್ಲ. ಅವರು ಎಲ್ಲರ ಅಜ್ಞಾನವನ್ನು ಕಳೆಯಲು ಬಂದ ಮಹಾಸದ್ಗುರು. ಇಂಥವಕ್ಕೆ ಹತ್ತಾರು ಉದಾಹರಣೆಗಳುಂಟು. ಬಳ್ಳಾರಿಗೆ ಬಂದಾಗ ಬೋವಿ ಜನಾಂಗದ ಹನುಮಂತಪ್ಪನವರ ಮನೆಯಲ್ಲಿದ್ದು, ಅವರನ್ನು ಪ್ರಪ್ರಥಮ ಶಿಷ್ಯನನ್ನಾಗಿ ಸ್ವೀಕರಿಸಿದ್ದು ಆ ಕಾಲಕ್ಕೆ ಕ್ರಾಂತಿಯೇ ಆಗಿತ್ತು. ಕನಕಗಿರಿಯ ಹಡಪದ ಪಂಪನ ಸೇವೆ ಮತ್ತು ನಿಷ್ಠೆಗೆ ಮೆಚ್ಚಿ ಶಿವದೀಕ್ಷೆಯನ್ನು ಕೊಟ್ಟು ಅಂತರಂಗದ ಭಕ್ತನನ್ನಾಗಿ ಮಾಡಿಕೊಂಡ ಜಾತ್ಯತೀತ ಸದ್ಗುರು. ಅವರು ಸ್ಥಾಪಿಸಿದ ಒಂಬತ್ತು ಮಠಗಳಲ್ಲಿ ಎಲ್ಲ ಜನಾಂಗದವರಿಗೂ ಮಠಗಳ ಕಮಿಟಿಯಲ್ಲಿ ಪ್ರಾತಿನಿಧ್ಯ ಕೊಟ್ಟಿರುವುದನ್ನು ನಾವು ಗಮನಿಸಬಹುದು. ಇದಕ್ಕಾಗಿ ಅಲ್ಲೀಪುರದ ಮಠದ ಭಕ್ತರು ಇವರ ಮೇಲೆ ಲಾವಣಿಪದ ಕಟ್ಟಿ ಈಗಲೂ ಹಾಡುತ್ತಾರೆ. ಮಹಾದೇವ ತಾತ ಗುರುವಾಗಿ, ಅನುಭಾವಿಯಾಗಿ, ಶಿವಯೋಗಿಯಾಗಿ ಸದಾ ಆತ್ಮಾನಂದದಲ್ಲಿಯೇ ಇರುತ್ತಿದ್ದರು.

ಅಲ್ಲೀಪುರದ ಮಠದಲ್ಲಿರುವಾಗಲೇ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಹೋಗಿ ಸಿದ್ಧಾರೂಢರ ಜತೆ ಅನುಭವ ವೇದಾಂತದ ಬಗೆಗೆ ರ್ಚಚಿಸುತ್ತಿದ್ದರು. ಆ ಕಾಲದಲ್ಲಿದ್ದ ಗರಗದ ಮಡಿವಾಳಪ್ಪನ ಜತೆ ಹಲಕಾಲ ಇರುತ್ತಿದ್ದುದುಂಟು. ಇವರು ಪರಸ್ಪರ ಶಿವಯೋಗದ ಬಗೆಗೆ ಅವರೊಡನೆ ರ್ಚಚಿಸುತ್ತಿದ್ದರು. ಶಿಶುವಿನಹಾಳಕ್ಕೆ ಹೋಗಿ ಶರೀಫ ಸಾಹೇಬರು ಹಾಡುವ ತತ್ತ್ವಪದಗಳನ್ನು ಕೇಳುತ್ತಿದ್ದರು. ತಾತನಿಗೆ ಬಾಹ್ಯಾಚರಣೆಗಳಿಗಿಂತ ಅಂತರಂಗದ ಸಾಧನೆಗಳು ಇಷ್ಟವಾಗುತ್ತಿದ್ದವು. ಶರೀಫರಿಗೂ ಮಹಾದೇವ ತಾತ ಅವರಿಗೂ ಬಿಟ್ಟುಬಿಡಲಾರದ ಅಧ್ಯಾತ್ಮದ ನಂಟು. ಇವರಂತೆಯೆ, ಗುಡದೂರು ಶ್ರೀಅಜ್ಜನವರು, ಸಜ್ಜಲಗುಡ್ಡ ಶರಣಮ್ಮತಾಯಿ, ಒಳಬಳ್ಳಾರಿಯ ಚೆನ್ನಬಸವ ಸ್ವಾಮಿಗಳು, ಚಿಕ್ಕೇನಕೊಪ್ಪದ ಚೆನ್ನವೀರ ಶರಣರು-ತಾತನವರನ್ನು ಪೂಜ್ಯಭಾವನೆಯಿಂದ ಕಾಣುತ್ತಿದ್ದರು.

ಮಹಾದೇವ ತಾತ ಒಬ್ಬ ಗುಪ್ತ ಸಾಧಕ. ಅವರು ಭಸ್ಮವನ್ನು ಮೈತುಂಬ ಧರಿಸಿ ತ್ರಿಶೂಲ ಹಿಡಿದು ಅನುಷ್ಠಾನಕ್ಕೆ ಕುಳಿತರೆ ಸಾಕ್ಷಾತ್ ಶಿವನ ಅಪರಾವತಾರವಾಗಿಯೇ ಕಾಣುತ್ತಿದ್ದರು. ತಾತ ಐದಾರು ಗಂಟೆಗಳ ಕಾಲ ಶಿವಧ್ಯಾನದಲ್ಲಿ ಇರುತ್ತಿದ್ದರು. ಅವರ ಅನುಗ್ರಹಕ್ಕೆ ಪಾತ್ರರಾದವರು ಎಷ್ಟೋಜನ. ಅವರು ಆಡುಭಾಷೆಯಲ್ಲಿ ಮುಂದೆ ಆಗಬಹುದಾದ ಸಂಗತಿಗಳನ್ನು ಹೇಳುತ್ತಿದ್ದರು. ಅವರು ಹೇಳಿದಂತೆಯೇ ಅನೇಕ ಘಟನೆಗಳು ನಡೆದದ್ದುಂಟು. ತಾತನವರ ಮಹಿಮೆ, ವರ್ತನೆ, ಅನುಗ್ರಹ ಒಂದೇ ಸ್ವರೂಪದಲ್ಲಿ ಇರುತ್ತಿರಲಿಲ್ಲ. ಅವರ ಶಕ್ತಿ-ಸಾಮರ್ಥ್ಯಗಳು ಯಾರಿಗೂ ಅರಿವಾಗದಂತೆ ಗುಪ್ತವಾಗಿಯೇ ಇರುತ್ತಿದ್ದವು.

9 thoughts on “ಸಾವಿಲ್ಲದ ಶರಣರು-ಗುಪ್ತ ಶಿವಯೋಗ ಸಾಧಕ  ಸದ್ಗುರು ಶ್ರೀಮಹಾದೇವ ತಾತ-ಡಾ ಶಶಿಕಾಂತ ಪಟ್ಟಣ ರಾಮದುರ್ಗ 

  1. ಅವಿರತವಾದ ಶ್ರಮದ ಫಲವಾಗಿ ತಾವು ನಾಡಿನ ಅಸಂಖ್ಯಾತ ಶರಣರ ಶಿವಯೋಗ ಸಾಧಕರನ್ನು ಪರಿಚಯಿಸುತ್ತುರುವುದು ಅರ್ಥಪೂರ್ಣ ಸರ್
    ನಿಮ್ಮ ಶ್ರಮಕ್ಕೆ ಒಂದು ಶರಣು ನಿರಂತರವಾಗಿ
    ಮಾಲಿಕೆಯಲ್ಲಿ ಪ್ರಕಟ ಮಾಡಿ ಸಂಗಾತಿ ತನ್ನ ಹಿರಿಮೆ ಹೆಚ್ಚಿಸಿ ಕೊಂಡಿದೆ
    ಕು ಸ ಮಧುಸೂದನ ಸರ್ ಗೆ ಶರಣು

  2. ನಾಡಿನ ಅಸಂಖ್ಯಾತ ಗೊತ್ತಿರದ ಅದೆಷ್ಟೋ ಶರಣರ ಶಿವಯೋಗ ಸಾಧಕರನ್ನು ಪರಿಚಯಿಸುತ್ತುರುವುದು ಅರ್ಥಪೂರ್ಣ ಸರ್
    ನಿಮ್ಮ ಶ್ರಮಕ್ಕೆ ಒಂದು ಶರಣು ಶರಣಾರ್ಥಿ

  3. ಶಿವಾಯೊಗ ಸಾಧಕರ ಅರ್ಥ ಪೂರ್ಣ ವಿವರಗಳನ್ನು ನಮಗೆ ಪರಿಚಯ ಮಾಡಿ ಕೊಟ್ಟ ನಿಮಗೆ ಅನಂತ ಭಕ್ತಿ ಪೂರ್ವಕ ಶರಣಾರ್ಥಿ

  4. ಸರ್ ಸಂಶೋಧನಾತ್ಮಕ ಅದರಲ್ಲೂ ಶರಣರ ಸತ್ಪುರುಷರ ಜೀವನದ ಯಶೋಗಾಥೆ ಯನು ಒರೆಗಚ್ಚಿ ಕೂಲಂಕಷವಾಗಿ ಪರಿಶೀಲಿಸಿ ತಿಳಿಸುವ ನಿಮ್ಮ ಶ್ರಮ ಚಿಂತನೆಗೆ ಶರಣು ಶರಣಾರ್ಥಿ, ಇದರಲ್ಲಿ ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಹಡಪದ ಪಂಪನಿಗೆ ದೀಕ್ಷೆ ಕೊಟ್ಟ ಸಂಗಾತಿ ಅವರು ಕನಕಗಿರಿ ಯವರು ನಾವು ಚಿಕ್ಕವರಿದ್ದಾಗ ಕೇಳಿದ ನನ್ನ ತವರುಮನೆ ಕನಕಗಿರಿ ಆತನನ್ನು ನೋಡಿದ ನೆನಪು, ಮತ್ತು ನಮ್ಮ ತಂದೆ ತಾಯಿ ಅಲಿಪುರ ತಾತನವರ ಅಗಾಧ ಭಕ್ತರಾಗಿದ್ದರು,
    ನಿಮ್ಮ ಇಂತಹ ಲೇಖನಗಳಿಗೆ ಶರಣು ಶರಣಾರ್ಥಿ ಸರ್.

  5. ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಬರುತ್ತಿರುವ ಎಲ್ಲ ಮಹಾನ್ ಶರಣರ ಬಗೆಗೆ
    ನಮಗೆ ಓದಲು ಸಿಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ… ಇಂಥ ಅದ್ವಿತೀಯ ಶ್ರೇಷ್ಠ
    ವ್ಯಕ್ತಿಗಳನ್ನು ನಮಗೆಲ್ಲ ಪರಿಚಯಿಸುತ್ತಿರುವ
    ನಿಮ್ಮ ಈ ಕಾರ್ಯ ಸದಾಕಾಲಕ್ಕೂ ಶ್ಲಾಘನೀಯ ಸರ್

    ಸುಶಿ

  6. ಅಲ್ಲಿಪುರ ತಾತನವರ ಮಠ ಧಾರವಾಡದ ಶಾಲ್ಮಲಾ ನದಿಯ ಉಗಮಸ್ಥಾನದಲ್ಲಿ ಇದೆ. ರಾಜೀವ ಗಾಂಧಿನಗರದಲ್ಲಿ.ಇಲ್ಲಿಯು ತಾತನವರು ಆಗಾಗ ಇರುತ್ತಿದ್ದರು. ಇಲ್ಲಿ ಅನುಷ್ಠಾನ ಮಾಡಿದರು.ಭಕ್ತರು ಬಹಳ ಭಕ್ತಿಯಿಂದ ಇಲ್ಲಿ ಸೇವೆ ಸಲ್ಲಿಸುತ್ತಾರೆ. ಈ ಕ್ಷೇತ್ರವು ಕೈಲಾಸ ಮಠ ಲಕ್ಷ್ಮೀರಾಜಸಾಗರ ಪಡಿವಿಡಿ ಎಂದು ಕರೆಯಲ್ಪಡುವದು
    ತಾತನವರ ಚರಿತ್ರೆಯನ್ನು ಅನೇಕಮಹನೀಯರು ಬರೆದಿದ್ದಾರೇ. ಅವರು 391ವರ್ಷ ಜೀವಿಸಿದ್ದರೆಂದು ಇತಿಹಾಸ ಇದೆ.
    ಅವರು ಸಣ್ಣವರಿದ್ದಾಗ ಎತ್ತಿನ ಮೇಲೆ ಸವಾರಿ ಮಾಡುತ್ತ ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ಸಾಲೆಗೆ ಹೋಗುತ್ತಿದ್ದರಂತೆ. ಅವರು ಲಿಂಗೈಕ್ಯರಾಗಿದ್ದು ಮೈಸೂರ ಸಮೀಪದ ಕಪಿಲಾ ಮತ್ತು ಬೃಗು ನದಿಯ ದಡದಲ್ಲಿ ಹುಲ್ಲಹಳ್ಳಿಯಲ್ಲಿ ಲಿಂಗೈಕ್ಯರಾದರು .
    ಇದನ್ನು ಸಂಗಮ ಕ್ಷೇತ್ರ ಎಂದುಕರೆಯುತ್ತಾರೆ. ಬಹಳ ಸುಂದರ ಪರಿಸರ.
    ಭಕ್ತರಿಗೆ ಕಲ್ಪವೃಕ್ಷ ದಂತಿದರುವ ಶರಣ ಶಿವಯೋಗಿಗಳು ಇಂದಿಗೂ ತಮ್ಮ ಭಕ್ತರಿಗೆ ಬೇಡಿದ್ದನ್ನು ಕುಣಿಸುತ್ತಿರುವ ಮಹಾ ಯೋಗಿಗಳು.
    ಗೌರಮ್ಮ ಹಾಲಭಾವಿ ಧಾರವಾಡ

Leave a Reply

Back To Top