ವಿಶೇಷ ಲೇಖನ
‘ಸಲಹೆ ನೀಡುವ ವೇಳೆ ಎಚ್ಚರ’
ಲೋಹಿತೇಶ್ವರಿ ಎಸ್ ಪಿ
ಇಂದಿನ ಕಾಲದಲ್ಲಿ ಯಾರಿಗಾದರು ಸಲಹೆ ನೀಡುತ್ತಿದ್ದೇವೆ ಎಂದರೆ ಒಂದಕ್ಕೆ ನೂರು ಬಾರಿ ಯೋಚಿಸಬೇಕು. ಹಾಗೆಯೆ ಯಾವುದೇ ಸಲಹೆ ನೀಡಬೇಕಾದರೆ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಯಾಕೆಂದರೆ ಯಾರಿಗೆ, ಯಾವಾಗ, ಯಾಕೆ, ಎಂತಹ ಸಲಹೆ ನೀಡುತ್ತಿದ್ದೇವೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ನಮ್ಮವರು ಎಂದುಕೊಂಡವರಿಗೆ ಕೊಟ್ಟ ಸಲಹೆಗಳು ಅವರಿಗೆ ಇಷ್ಟವಾಗದೆ, ಕಷ್ಟವಾಗುಬಹುದು. ಇಲ್ಲವಾದಲ್ಲಿ ನಮ್ಮ ಬಗ್ಗೆಯೇ ಬೇಸರ ಮೂಡುವಂತೆ ಮಾಡಬಹುದು. ಆದ್ದರಿಂದ ಸಲಹೆ ನೀಡುವ ಬಗ್ಗೆ ತುಂಬ ಜಾಗರೂಕರಾಗಿರುವುದು ಅವಶ್ಯ. ನಾನು ನೋಡಿದ, ಕೇಳಿದ ಸಂಗತಿಗಳನ್ನು ನಿಮ್ಮ ಮುಂದೆ ಇರಿಸುವ ಮೂಲಕ ಈ ವಿಷಯವನ್ನು ಅರ್ಥಮಾಡಿಸಲು ಪ್ರಯತ್ನ ಪಡುತ್ತೇನೆ.
ಒಮ್ಮೆ ಗಂಡ-ಹೆಂಡಿಯ ನಡುವೆ ಒಂದು ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ಅದು ವೈಯಕ್ತಿಕ ವಿಷಯದ ಬಗ್ಗೆ. ನಾನು ಆರಂಭದಲ್ಲಿ ನೋಡಿದಾಗ ಇಬ್ಬರು ಕೂಲಂಕುಶವಾಗಿ ಚರ್ಚೆಯನ್ನು ಆರಂಭಿಸಿ ಮುಗಿಸುವ ಹಂತಕ್ಕೆ ಸಂಪೂರ್ಣವಾಗಿ ತದ್ವಿರುದ್ಧ ನಿಲುವಿಗೆ ಬಂದು ನಿಂತಿದ್ದರು. ಕೊನೆಗೆ ಏನಾಯಿತು ಎಂಬುದುನ್ನು ಕೇಳಿದಾಗ ಸಹಜವಾಗಿಯೇ ನೀಡುವ (ನನ್ನ ಮಾತಿಗೆ ಬೆಲೆನೇ ಕೋಡುವುದಿಲ್ಲ. ನೆಗ್ಲೆಕ್ಟ್ ಮಾಡ್ತಾರೆ) ಉತ್ತರ ನೀಡಿದರು. ಆದರೆ, ಅಲ್ಲಿ ಗಂಡ ಹೆಂಡತಿ ಇಬ್ಬರಿಗೂ ತಾಳ್ಮೆ ಎಂಬುದು ಇರಲೇ ಇಲ್ಲ. ಬಗೆಹರಿಸಿಕೊಳ್ಳಬಹುದಾದ ಚಿಕ್ಕ ವಿಷಯವನ್ನೆ ದೊಡ್ಡದಾಗಿಸಿಕೊಂಡು ಸಂಸಾರದ ನಡುವೆ ಸಮಸ್ಯೆ ತಂದು ಕೊಂಡಿದ್ದರು. ಗಂಡ ಹೆಂಡತಿಯಾದ ಕಾರಣ ಕೇಳಬೇಕಾದವರು ಕ್ಷಮೆ ಕೇಳಿ ಅದನ್ನು ಸರಿಪಡಿಸಿಕೊಂಡರು.
ಅದಾದನಂತರ ಇಬ್ಬರು ಗೆಳತಿಯರ ನಡುವಿನ ಸಂಭಾಷಣೆ ಗಮನಿಸಿದೆ. ಅಲ್ಲಿಯೂ ಇದೆ ಕಥೆ. ಸೀರೆ ತೆಗೆದುಕೊಳ್ಳಲು ಹೋದ ಯುವತಿ ಯಾವ ಸೀರೆಯನ್ನು ತೆಗೆದುಕೊಳ್ಳಬೇಕು ಎಂಬುದು ಗೊತ್ತಾಗದೆ ತನ್ನೊಂದಿಗೆ ಬಂದಿದ್ದ ಅವಳ ಗೆಳತಿಯನ್ನು ಕೇಳಿದಳು. ಅವಳು ತನಗೆ ಇಷ್ಟವಾದ ಸೀರೆಯೊಂದನ್ನು ತೋರಿಸಿ ಇದು ಚೆನ್ನಾಗಿದೆ. ನಿನ್ನ ಬಣ್ಣಕ್ಕೆ ಇದು ಒಪ್ಪುತ್ತೆ ಇದನ್ನೆ ತಗೊ ಎಂದು ಹೇಳಿದಳು. ಅಲ್ಲಿಗೆ ಶುರುವಾಯಿತು. ನಾನು ಕೇಳಿದೆ ಎಂಬ ಕಾರಣಕ್ಕೆ ಕಾಟಚಾರಕ್ಕೆ ಯಾವುದೊ ಒಂದು ಹಳೆಯ, ಅಂಚು ಸರಿಯಿಲ್ಲದ, ಬಣ್ಣಹೋಗುವ, ಕ್ವಾಲಿಟಿ ಇಲ್ಲದ ಸೀರೆಯನ್ನು ತೋರಿಸಿ ಚೆನ್ನಾಗಿದೆ ಎಂದು ತೋರಿಸಿದ್ದಲ್ಲದೆ ನಾನು ಕಪ್ಪಗೆ ಇದ್ದಿನಿ ಎಂದು ಆಡಿಕೊಳ್ಳುತ್ತಾಳೆ. ಇನ್ನು ಮುಂದೆ ಸತ್ತರೂ ಆಕೆಯನ್ನು ನನ್ನೊಂದಿಗೆ ಶಾಪಿಂಗ್ ಮಾಡಲು ಕರೆಯುವುದಿಲ್ಲ ಎನ್ನುತ್ತಾ ಇನ್ನೊಬ್ಬ ಗೆಳತಿಯ ಮುಂದೆ ತನ್ನ ಅಳಲನ್ನು ತೋಡಿಕೊಂಡಳು. ಆ ವಿಷಯ ತಿಳಿದ ಮೇಲೆ ಸೀರೆ ಆರಿಸಿಕೊಟ್ಟ ಯುವತಿ ಪುನಃ ಕರೆದರು ಹೋಗುವುದಿಲ್ಲ. ಜೊತೆಗೆ ಅವಳ ಜೊತೆ ಶಾಪಿಂಗ್ ಹೋಗುವುದರ ಜೊತೆಗೆ ಯಾವ ವಿಷಯದ ಬಗ್ಗೆಯೂ ಅವಳೊಂದಿಗೆ ಮಾತನಾಡದೆ ಕಂಪ್ಲೀಟ್ ಆಗಿ ಮಾತೇ ಬಿಟ್ಟುಬಿಟ್ಟಳು.
ಮತ್ತೊಬ್ಬ ವಿದ್ಯಾರ್ಥಿ ದುಶ್ಚಟಗಳಿಗೆ ಬಲಿಯಾಗಿ ತನ್ನ ಜೀವನದ ಗುರಿಯನ್ನೇ ಮರೆತು ಎಂಜಾಯ್ಮೆಂಟ್ ಬಗ್ಗೆ ಅಷ್ಟೇ ಗಮನ ಕೊಟ್ಟು ಓದುಬರಹದ ಬಗ್ಗೆ ಆಸಕ್ತಿ ಕಳೆದುಕೊಂಡು ಶುದ್ಧ ಸೋಮಾರಿಯಾಗಿ, ತನ್ನೊಂದಿಗೆ ಇದ್ದವರು ತನ್ನಂತೆಯೇ ಇರಬೇಕು ಎಂಬ ಮನಸ್ಥಿತಿ ತಳೆದಿರುತ್ತಾನೆ. ಆದರೆ, ಅವನೊಂದಿಗೆ ಇದ್ದವರು ಅವನಂತಾಗದೆ ಇರುವುದನ್ನು ಕಂಡು ಮನಸಲ್ಲಿಯೇ ಅವರ ಬಗ್ಗೆ ಕತ್ತಿಮಸಿಯುತ್ತಾ, ನಕಾರಾತ್ಮಕ ಅಂಶಗಳನ್ನು ಮಾತನಾಡತೊಡಗುತ್ತಾನೆ. ಅದನ್ನು ಗಮನಿಸಿದ ಅವನ ಗುರುಗಳು ಕರೆದು ತಿಳಿಹೇಳುತ್ತಾರೆ. ಅವನ ಇರುವಿಕೆ ಅವನೊಟ್ಟಿಗೆ ಇರುವವರ ಇರುವಿಕೆ ಬಗ್ಗೆ ಹೇಳುತ್ತಾ, ಅವರಿಬ್ಬರ ನಡುವಿನ ವ್ಯತ್ಯಾಸವನ್ನು ಎತ್ತಿತೋರಿಸುತ್ತಾರೆ. ಕಾರಣ ಆ ವಿದ್ಯಾರ್ಥಿ ಅವನೊಂದಿಗೆ ಇರುವವರನ್ನು ನೋಡಿ ಬದಲಾಗಲಿ, ಅವನಿಗೆ ಒಳ್ಳೆಯದಾಗಲಿ ಎಂದು. ಆದರೆ, ಆ ವಿದ್ಯಾರ್ಥಿ ಅದನ್ನು ಅರ್ಥಮಾಡಿಕೊಳ್ಳದೇ ಆ ಗುರುವಿನದು ಮಲತಾಯಿಧೋರಣೆ ಎಂದು ಹೇಳಿ ಸುದ್ದಿ ಮಾಡಿ, ಗುರುವಿನ ಬಗೆಗೆ ಬಳಸಬಾರದ ಪದಗಳನ್ನೆಲ್ಲಾ ಬಳಸಿದ. ಆ ವಿಷಯ ತಿಳಿದಮೇಲೆ ಆ ಗುರುವು ಬೇಸರಗೊಳ್ಳುತ್ತಾರೆ. ಆದರೂ ಆ ವಿದ್ಯಾರ್ಥಿಗೆ ಕನಸಲ್ಲಿಯೂ ಕೆಟ್ಟದ್ದನ್ನು ಬಯಸದೆ ಒಳ್ಳೆಯದನ್ನೇ ಮಾಡುತ್ತಾರೆ. ಅದು ಅವನ ಗುರುತಿಸುವಿಕೆಯನ್ನು ಬದಲಿಸಿ ಸಮಾಜದಲ್ಲಿ ಗೌರವ ದೊರೆಯುವಂತೆ……
ಇಲ್ಲಿ ಗಂಡ-ಹೆಂಡತಿ, ಗೆಳತಿಯರು ಹಾಗೂ ಗುರು-ಶಿಷ್ಯರ ನಡುವೆ ನಡೆದಿರುವ ಕೆಲವು ನೈಜ ಸಂಗತಿಗಳನ್ನೆ ಕೊಂಚ ಬದಲಾವಣೆ ಮಾಡಿ ಹೇಳಲಾಗಿದೆ. ಕಾರಣ ಇಂತಹ ಸಂಗತಿಗಳು ಪ್ರತಿಯೊಬ್ಬರ ಜೀವನದಲ್ಲೂ ಎದುರಾಗಿರುತ್ತವೆ. ನಾವು ಬೇಡ ಎಂದುಕೊಂಡವರ ಬಾಳಲ್ಲಿ ನಮ್ಮ ಅಗತ್ಯ ಏರ್ಪಡುವ, ಅವರಿಗೆ ಸಹಾಯ ಮಾಡುವ, ಸಲಹೆ ನೀಡುವ ಸಂದರ್ಭಗಳು ಎದುರಾಗಿ ಅದು ನಕಾರಾತ್ಮಕ ಪರಿಣಾಮ ಬೀರಿರಲೂ ಬಹುದು. ಆದರೆ, ಇಲ್ಲಿ ಹೇಳಿರುವ ಮೂರು ಘಟನೆಗಳಲ್ಲಿ ಸಲಹೆ ಎಂಬುದು ಸಹಜವಾಗಿದೆ. ಆದರೆ ಯಾರಿಗೆ ಸಲಹೆ ನೀಡಿದರೆ ಅದು ಯಾವ ಪರಿಣಾಮ ಬೀರುತ್ತದೆ ಎಂಬುದು ಮುಖ್ಯ ಸಲಹೆ ನೀಡುವ ಮುನ್ನ ಎದುರಿರುವ ವ್ಯಕ್ತಿ ಹಾಗೂ ನಮ್ಮ ನಡುವೆ ಯಾವ ಬಾಂಧವ್ಯವಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಕೊಡಬೇಕು. ಇಲ್ಲವಾದಲ್ಲಿ ಒಂದು ಸಲಹೆ ಆ ಸಂಬಂಧವನ್ನೇ ಕೊನೆಗೊಳಿಸಬಹುದಾದ ಸಂದರ್ಭಗಳು ಎದುರಾಗುತ್ತವೆ.
ಲೋಹಿತೇಶ್ವರಿ ಎಸ್ ಪಿ
Yes