ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಇಚ್ಛಾಶಕ್ತಿಯ ಕೊರತೆ-ಸುಧಾ ಹಡಿನಬಾಳ

ಇತ್ತೀಚಿಗೆ ಕರ್ತವ್ಯ ನಿಮಿತ್ತ ಗ್ರಾಮ ಪಂಚಾಯಿತದ ಸಭೆ ಒಂದರಲ್ಲಿ ಪಾಲ್ಗೊಂಡಿದ್ದೆ ; ಆ ಸಭೆಗೆ ನಮ್ಮನ್ನು ಕರೆದ ಉದ್ದೇಶ ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ನೀಡುವುದು ಮತ್ತು ಆ ಕುರಿತು ಸಂಸ್ಥೆಯ ಮುಖ್ಯಸ್ಥರಿಂದ ಬೇಡಿಕೆ ಪಡೆದುಕೊಳ್ಳುವುದಾಗಿತ್ತು. ಹೀಗಾಗಿ ಆ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯ ಶಿಕ್ಷಕರು, ಕೆಲ ವಿದ್ಯಾರ್ಥಿಗಳೇ ಹಾಜರಿದ್ದರು. ಆದರೆ ಅಲ್ಲಿ ಬೇರೆಯದೇ ಸರ್ಕಾರಿ ಕಾರ್ಯಕ್ರಮ ಆಯೋಜನೆಗೊಂಡಿದೆ! ಅಲ್ಲಿ ವಿಕಸಿತ ಸಂಕಲ್ಪ ಭಾರತ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯಗಾರವಾಗಿತ್ತು.ಅದೊಂದು ಅತ್ಯುತ್ತಮ ಕಾರ್ಯಕ್ರಮ. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಯಲ್ಲಿ ಬಂದ ಡ್ರೋನ್ ಉಡಾವಣೆ ಮೂಲಕ ಕೀಟನಾಶಕಗಳನ್ನು, ರಸಗೊಬ್ಬರಗಳನ್ನು ಸಿಂಪಡಿಸುವ ತರಬೇತಿ ನೀಡುವ ಮತ್ತು ಪ್ರಾತ್ಯಕ್ಷಿಕೆ ನೀಡುವ ವಿಶೇಷ ಕಾರ್ಯಕ್ರಮ ಕೂಡ ಏರ್ಪಾಡಾಗಿತ್ತು ಜೊತೆಗೆ ಸರ್ಕಾರದ ಹಲವು ಯೋಜನೆಗಳ ವಿಡಿಯೋ ಕ್ಲಿಪ್ಪಿಂಗ್ ಕೂಡ ಸಂಚಾರಿ ವಾಹನದಲ್ಲಿ ಬಿತ್ತರಿಸಲ್ಪಡುತ್ತಿತ್ತು., ಆದರೆ ಈ ಎಲ್ಲಾ ಯೋಜನೆಗಳ ಪ್ರಯೋಜನ ಯಾರಿಗೆ ತಲುಪಬೇಕಾಗಿತ್ತೊ ಅವರೇ ಇಲ್ಲ! ಅಲ್ಲಿ ನಮ್ಮನ್ನೇ ಸಾರ್ವಜನಿಕರಂತೆ ಬಿಂಬಿಸಿ ವಿವಿಧ ಬ್ಯಾನರ್, ಬುಕ್ಲೆಟ್ ನೀಡಿ ಫೋಟೋ ಕ್ಲಿಕ್ಕಿಸಿಕೊಂಡರಷ್ಟೆ! ನಿಜವಾಗಿ ಸರ್ಕಾರದ ಅತ್ಯುತ್ತಮವಾದ ಇಂತಹ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕಾದ , ಅವರಿಗೆ ಈ ಕುರಿತಾಗಿ ಮನವರಿಕೆ ಮಾಡುವ ಮತ್ತು ಪ್ರಾತ್ಯಕ್ಷಿಕೆ ಮೂಲಕ ಫಲಾನುಭವಿಗಳನ್ನಾಗಿ ಮಾಡುವ ಘನ ಉದ್ದೇಶವುಳ್ಳ ಕಾರ್ಯಕ್ರಮದಲ್ಲಿ ಬೆರಳೆಣಿಕೆಯ ಒಂದಿಬ್ಬರು ಮಹಿಳೆಯರನ್ನು ಹೊರತುಪಡಿಸಿದರೆ ಸಾರ್ವಜನಿಕರ ಸುಳಿವಿಲ್ಲ. ಕೇವಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ಕಾರ್ಯಕ್ರಮದಲ್ಲಿ ಪ್ರಯೋಜನ ಯಾರಿಗೆ ತಲುಪಬೇಕು ಎಂಬ ಪ್ರಶ್ನೆ ಕಾರ್ಯಕ್ರಮ ವೀಕ್ಷಿಸುತ್ತಿದ್ದ ನಮ್ಮೆಲ್ಲರದಾಗಿತ್ತು.

ಇತ್ತೀಚಿಗೆ ಲೋಕಸಭಾ ಚುನಾವಣೆ ಕಾವೇರುತ್ತಿದ್ದಂತೆ ಚುನಾವಣಾ ಆಯೋಗ ಹೊಸ ಮತದಾರರಿಗೆ ಮತದಾನದ ಮಹತ್ವದ ಕುರಿತಾಗಿ ಅರಿವು ಮೂಡಿಸುವ ವಿನೂತನ ಅಭಿಯಾನವನ್ನು ಜಾರಿಯಲ್ಲಿ ತಂದಿರುವುದು ಒಳ್ಳೆಯ ಬೆಳವಣಿಗೆ, ಯಾಕೆಂದರೆ ಇಂದು ಗ್ರಾಮೀಣ ಅಥವಾ ಸುಶಿಕ್ಷಿತರೇ ಇರುವ ನಗರಗಳಲ್ಲಿಯೂ ಕೂಡ ಮತದಾನದ ಪ್ರಮಾಣ ಶೇಕಡ 50 ರಿಂದ 70 ಮಾತ್ರ! ಅಂದರೆ ಇಂದಿಗೂ ಕೂಡ ಮತ ಚಲಾಯಿಸುವ ಅಮೂಲ್ಯವಾದ ಕರ್ತವ್ಯವನ್ನು ನಾವು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದರ್ಥ. ಈ ಕುರಿತಾಗಿ ಜಾಗೃತಿ ಮೂಡಿಸುವ ಅಭಿಯಾನವನ್ನು ಕೈಗೊಂಡಿರುವುದು ಉತ್ತಮ ಬೆಳವಣಿಗೆ .

ಏಪ್ರಿಲ್ ತಿಂಗಳ ರಜೆ ಪ್ರಾರಂಭವಾದುತ್ತಿದ್ದಂತೆ ಅದೊಂದು ದಿನ ಎಲ್ಲಿಗೋ ಹೋಗಲು ಬಸ್ ನಿಲ್ದಾಣಕ್ಕೆ ಹೋಗಿ ನಿಲ್ಲುತ್ತಿದ್ದಂತೆ ಒಂದಿಬ್ಬರು ಬ್ಯಾನರ್ ಹಿಡಿದು ‘ಮೇಡಂ ಒಂದು ಫೋಟೋ ಪ್ಲೀಸ್ ‘ ಎಂದು ಮತದಾನ ಜಾಗೃತಿಯ ಬ್ಯಾನರ್ ಕೈಯಲ್ಲಿ ಕೊಟ್ಟು ಬಸ್ ಸ್ಟ್ಯಾಂಡಿನಲ್ಲಿದ್ದ ಎಲ್ಲರನ್ನು ನಿಲ್ಲಿಸಿ ಒಂದು ಫೋಟೋ ಕ್ಲಿಕಿಸಿಕೊಂಡು ನಡೆದುಬಿಟ್ಟರು!! ಈ ಉದ್ದೇಶಕ್ಕಾಗಿ ಚುನಾವಣಾ ಆಯೋಗ ಖರ್ಚು ಮಾಡುವ ಅನುದಾನವೆಷ್ಟು? ಈ ಬಗೆಯ ಕಾಟಾಚಾರದ ದಾಖಲೆಗಳಿಂದ ಪ್ರಯೋಜನವೆಷ್ಟು??

ಸರ್ಕಾರಿ ಕೆಲಸವೆಂದರೆ ಕೇವಲ ಹೊಟ್ಟೆಪಾಡಿಗಾಗಿ, ಸಂಬಳಕ್ಕಾಗಿ ಎನ್ನುವ ಮನಸ್ಥಿತಿಯ ಸರಿಸುಮಾರು ಶೇಕಡಾ 70ಕ್ಕಿಂತ ಅಧಿಕ ಸಂಖ್ಯೆಯ ನೌಕರರ, ಅಧಿಕಾರಿಗಳ ಮನೋ ಧೋರಣೆಯಿಂದಾಗಿ ಇಂದು ಸರ್ಕಾರಿ ಸಂಸ್ಥೆಗಳು ,ಆಸ್ಪತ್ರೆಗಳು,ಶಾಲೆಗಳು ಜನಸಾಮಾನ್ಯರಿಂದ ಕಡೆಗಣಿಸಲ್ಪಟ್ಟಿವೆ .ಮೂಲಭೂತ ಸೌಕರ್ಯಗಳೂ ಇಲ್ಲದೆ ಗುಣಮಟ್ಟವಿಲ್ಲದೆ ಸಾರ್ವಜನಿಕರು ಆ ಕಡೆಗೂ ಸುಳಿಯದಂತೆ ಆಗಿವೆ. ಆದರೆ ಕೆಲವೊಂದು ಸರಕಾರಿ ಆಸ್ಪತ್ರೆಗಳಲ್ಲಿ , ಕಛೇರಿಗಳಲ್ಲಿ ಅಲ್ಲಿಯ ವೈದ್ಯರ , ಅಧಿಕಾರಿಗಳ ಇಚ್ಛಾ ಶಕ್ತಿಯಿಂದಾಗಿ ಸೇವಾ ಮನೋಭಾವದಿಂದಾಗಿ ಆಸ್ಪತ್ರೆಗಳು, ಕಛೇರಿಗಳು ಅತ್ಯುತ್ತಮ ಗುಣಮಟ್ಟ, ಮೂಲಭೂತ ಸೌಕರ್ಯಗಳಿಂದಾಗಿ ಜನಸಾಮಾನ್ಯರ ನೆಚ್ಚಿನ ಕೇಂದ್ರಗಳಾಗಿವೆ. ಹಾಗೆಯೇ ಎಷ್ಟೋ ಸರಕಾರಿ ಶಾಲೆಗಳು ಅಲ್ಲಿರುವ ಶಿಕ್ಷಕರ ಇಚ್ಛಾ ಶಕ್ತಿ, ಶೃದ್ಧೆಯಿಂದ ನಂದನವನದಂತೆ ಕಂಗೋಳಿಸುತ್ತಿವೆ.. ಇಂತಹ ನೌಕರರ ಅಧಿಕಾರಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಎನಿಸಿದರೂ ಅಲ್ಲಲ್ಲಿ ಇಂತಹ ಅಧಿಕಾರಿಗಳು ನೌಕರರು ಇಂದಿಗೂ ಇದ್ದಾರೆ ಎಂಬುದೇ ಸಂತಸದ ವಿಚಾರ!

ಸರಕಾರ ಅಧಿಕಾರಿಗಳಿಗೆ ನೌಕರರಿಗೆ ಕೈ ತುಂಬಾ ಐದಂಕಿ ಸಂಬಳವನ್ನು ಕೊಟ್ಟು ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಅಂತ ಎಲ್ಲ ನೌಕರರು, ಅಧಿಕಾರಿಗಳ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವುದೇ ಸರ್ಕಾರಿ ಸೇವೆಯಿಂದ ಎನ್ನುವ ಧನ್ಯತಾ ಮನೋಭಾವ ಇದ್ದಲ್ಲಿ ಖಂಡಿತ ಸರ್ಕಾರಿ ಸೇವೆಯನ್ನು ಕಡೆಗಣಿಸಲಾರರು. ಆದರೆ ಬಹುತೇಕರಲ್ಲಿ ಹೇಗಾದರೂ ನಡೆದೀತು ,ನಮ್ಮ ನೌಕರಿಗೇನು ತೊಂದರೆ ಇಲ್ಲ; ನಮ್ಮ ಸಂಬಳಕ್ಕೇನು ಕಡಿತವಿಲ್ಲ ಎಂಬ ಮನಸ್ಥಿತಿಯಿಂದಾಗಿ ವೇಳೆಗೆ ಸರಿಯಾಗಿ ಕಚೇರಿಗೆ ಬಾರದೆ, ಇದ್ದ ಹೊತ್ತಿನಲ್ಲೂ ಸರಿಯಾಗಿ ಕರ್ತವ್ಯ ನಿರ್ಭಾಯಿಸದೆ ,ಬರುವಾಗ ತಡವಾಗಿ ಬಂದರೂ ಹೋಗುವಾಗ ಅವಸರ; ಮೇಲಾಗಿ ಇಲಾಖೆಯಿಂದ ಎಷ್ಟನ್ನು ಕಮಾಯಿಸಬಹುದು ಎಂಬ ಮನೋ ಧೋರಣೆಯ ಹಲವರಿಂದಾಗಿ ಸರ್ಕಾರಿ ಯೋಜನೆಗಳ ಲಾಭ, ಪ್ರಯೋಜನ ಜನಸಾಮಾನ್ಯರನ್ನು ತಲುಪದೇ ಯಾರು ಯಾರೋ ಬೇಕಾಬಿಟ್ಟಿಯಾಗಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಿದೆ ಜನಸಾಮಾನ್ಯರ ಕೆಲವು ದೃಷ್ಟಿ, ನಡೆ ಕೂಡ ಬದಲಾಗಬೇಕಷ್ಟೆ. ಸರ್ಕಾರದಿಂದ ಲಾಭ ಇದೆ ಎಂದಾಗ ಜಮಾಯಿಸುವುದು, ಗ್ರಾಮ ಸಭೆ ಮತ ಚಲಾವಣೆಯಂತಹ ಅಮೂಲ್ಯ ಕರ್ತವ್ಯದಿಂದ ನುಣುಚಿಕೊಳ್ಳುವುದು ಜಾಣ ನಡೆ ಅಲ್ಲ.. ಪ್ರಜ್ಞಾವಂತ ಜನರಿಂದ, ನಿಷ್ಠಾವಂತ ನೌಕರರು, ಅಧಿಕಾರಿಗಳು, ಆಳುವವರಿಂದ ಮಾತ್ರ ಸರ್ಕಾರದ ಎಲ್ಲಾ ಯೋಜನೆಗಳು ಜನಸಾಮಾನ್ಯರಿಗೆ ತಲುಪಿ ಬಹುತೇಕ ಜನರ ಬದುಕು ಹಸನಾದೀತು . ಅಂತಹ ದಿನಗಳು ಹತ್ತಿರವಾಗಲಿ…


Leave a Reply

Back To Top