“ಬದುಕಿನ ಹಾದಿ ಸುಲಭವಲ್ಲ”ಹನಿಬಿಂದು


    ಪರೀಕ್ಷೆಗಳು ಈ ವರ್ಷದ್ದು, ಒಂದು ಲೆವೆಲ್ ನದ್ದು ಒಂದರಿಂದ ಪಿಯುಸಿ ವರೆಗೆ ಎಲ್ಲಾ ಮುಗಿದು ಹೋಗಿದೆ. ಎಲ್ಲೋ ಅಲ್ಲಿ ಇಲ್ಲಿ ಸ್ವಲ್ಪ ವಿದ್ಯಾರ್ಥಿಗಳು ಬೇರೆ ಬೇರೆ ಕೋರ್ಸ್ಗಳಿಗೆ ರೆಡಿ ಆಗುವುದು ಬಿಟ್ಟರೆ ಉಳಿದ ಮಕ್ಕಳ ಮನಸ್ಸೀಗ ಸಂಪೂರ್ಣ ಫ್ರೀ ಮತ್ತು ಬ್ಲಾಂಕ್. ಕೆಲವರು ಸಮ್ಮರ್ ಕ್ಯಾಂಪ್ ಸೇರಿಕೊಂಡರೆ ಇನ್ನೊಂದಿಷ್ಟು ಜನ ಸ್ವಿಮ್ಮಿಂಗ್, ಟ್ರಕಿಂಗ್ ಟೂರ್ ಅಂತ, ಇನ್ನೂ ಕೆಲವರು ಅಜ್ಜಿ ಮನೆ ನೆಂಟರ ಮನೆಗೆ ಹೊರಟರೆ ಮತ್ತೆ ಸ್ವಲ್ಪ ಮಕ್ಕಳು ತಂದೆ ತಾಯಿ ಕೆಲಸಕ್ಕೆ ಹೋದಾಗ ಮನೆಯಲ್ಲಿ ಒಬ್ಬರು, ಇಬ್ಬರೇ ಇಡೀ ದಿನ. ಟಿವಿ, ಮೊಬೈಲ್ ಗೇಮ್, ಕಂಪ್ಯೂಟರ್ ಇವಿಷ್ಟೇ ಇವರ ಪ್ರಪಂಚ. ಇನ್ನು ಕೆಲವರು ಸ್ಪೋರ್ಟ್ಸ್ ಗೇಮ್ಸ್ ಕೋಚ್ ತೆಗೆದುಕೊಳ್ಳುತ್ತಾ ಇದ್ದರೆ ಹಳ್ಳಿಯ ಮಕ್ಕಳು ದಿನವಿಡೀ ಶಾಲಾ ಮೈದಾನದಲ್ಲಿ ಕ್ರಿಕೆಟ್ ವಾಲಿಬಾಲ್ ಅಂತ, ಇನ್ನೂ ಕೆಲವರು ಮೀನು, ಏಡಿ ಹಿಡಿಯಲು ನದಿ, ತೋಡುಗಳಲ್ಲಿ ಅಲೆದಾಟ.        

          ಮನೆಯಲ್ಲಿ ತಂದೆ ತಾಯಿಯರ ದುಡಿಮೆ ಕಷ್ಟದ ಕೆಲಸವಾಗಿದ್ದು, ಬಡವರಾಗಿದ್ದರೆ ಅಂತಹ ಮಕ್ಕಳು ಜವಾಬ್ದಾರಿ ಹೊತ್ತು, ತಾವು ದುಡಿದು ತಮ್ಮ ಮುಂದಿನ ವರ್ಷದ ಫೀಸ್, ಪುಸ್ತಕಕ್ಕೆ ತಾವೇ ಹಣ ಹೊಂದಾಣಿಕೆ ಮಾಡುವ ಬೇರೊಂದು ವರ್ಗದ ಮಕ್ಕಳೂ ಇದ್ದಾರೆ. ದೊಡ್ಡ ದೊಡ್ಡ ಅಂಗಡಿ, ಫೋಟೋ ಸ್ಟುಡಿಯೋ, ಎಲೆಕ್ಟ್ರಿಷಿಯನ್ ಜೊತೆ, ಬಾವಿ ತೋಡಲು, ಮದುವೆ ಮನೆಗೆ ಕೆಲಸಕ್ಕೆ, ಕ್ಯಾಟರಿಂಗ್, ಹೂ ಹಣ್ಣು ತರಕಾರಿಗಳನ್ನು ಮಾರಲು, ಬೇರೆ ಬೇರೆ ಬ್ಯುಸಿನೆಸ್, ಹಾಲು ಹಾಕುವುದು, ಪೇಪರ್, ಮೀನು ಮಾರುವುದು, ಸಂತೆ ವ್ಯಾಪಾರ, ಕ್ಲೀನಿಂಗ್,  ಶೋ ರೂಮ್ಸ್, ಹೋಟೆಲ್, ಬಾರ್, ರೆಸ್ಟೋರೆಂಟ್, ಮಾಲ್, ವರ್ಕ್ ಶಾಪ್, ಗ್ಯಾರೇಜ್ ಗಳಲ್ಲಿ ದುಡಿಯುತ್ತಿರುವ, ಬೀಡಿಗೆ ಲೇಬಲ್ ಹಾಕುವ, ಬಿಲ್ಡಿಂಗ್ ಬಿಚ್ಚುವ, ಕಟ್ಟುವ, ಕುರಿ ಕಾಯುವ , ಸಾಮಾನು ಸರಂಜಾಮು ಹಾಕುವ, ಪಾರ್ಸೆಲ್ ಕೆಲಸ ಹೀಗೆ ಕಷ್ಟದ ದುಡಿಮೆ ಮಾಡಿ ತಾವೇ ಹಣ ಹೊಂದಿಸಿ ತಮ್ಮ ಮುಂದಿನ ವಿದ್ಯಾಭ್ಯಾಸ ನೋಡಿಕೊಳ್ಳುತ್ತಾರೆ. ಇದು ಎರಡನೆಯ ವರ್ಗದ ಮಕ್ಕಳ ಕಥೆ.


   ಇನ್ನೊಂದು ಮೂರನೆಯ ವರ್ಗವಿದೆ. ಅವರ ತಂದೆ ತಾಯಿಯ ಬಳಿ ಕೊಳೆಯುವಷ್ಟು ಹಣ ಇದೆ. ಮನೆಯಲ್ಲಿ ಆಳು ಕಾಳುಗಳು ಬೇಕಾದಷ್ಟು ಇದ್ದಾರೆ. ಅವರಿಗೆ ಈಗಲೇ ಕಾರ್ ಕಲಿಯುವ ಹುಚ್ಚು. ಮನೆಯ ಅಂಗಳದಲ್ಲಿ ನಿಲ್ಲಿಸಿರುವ ನಾಲ್ಕಾರು ಕಾರುಗಳಲ್ಲಿ ಒಂದರ ಕೀ ತಂದು ರೊoಯ್ಯನೆ ಹೋಗಿ ಅಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಯಾರೋ ಅಮಾಯಕರಿಗೆ ಗುದ್ದಿ ಅವರ ಜೀವ ಬಲಿ ತೆಗೆದುಕೊಂಡಿದ್ದೆ ಅಲ್ಲದೆ ಮುಂದೆ ಹೋಗುತ್ತಿದ್ದ ಕೂಲಿ ಬೈಕ್ ಸವಾರನಿಗೂ ಗುದ್ದಿ ಅವನ ಮೂಳೆ ಮುರಿದು ಮುಂದೆ ಅವನ ಇಡೀ ಕುಟುಂಬ ಬೀದಿಗೆ ಬೀಳುವ ಹಾಗೆ ಮಾಡಿದರೂ ದುಡ್ಡಿನ ಬಲದಿಂದ ಯಾವ ಶಿಕ್ಷೆಯೂ ಆಗದೆ ಕೇಸ್ ಪುಸ್ಕ ಆಗಿ ಹೊರ ಬಂದ ಸಿರಿವಂತರ ಮಕ್ಕಳು. ಇವರೇ ಮುಂದೆ ದೇಶ ದೋಚುವ ಕಳ್ಳರು. ಯಾರಿಗೂ ಹೆದರದೆ ತಪ್ಪು ಮಾಡುವವರು. ದೈರ್ಯದಲ್ಲಿ ಪರರ ಮೂಳೆಯ ಮೇಲೆ ಸಮಾಧಿ ಕಟ್ಟುವ ಬದಲು ಅಂಗಡಿ ಬಿಲ್ಡಿಂಗ್ ನಿರ್ಮಾಣ ಮಾಡುವವರು.
      ಬದುಕು ಕೆಲವರಿಗೆ ಎಷ್ಟು ಸುಲಭವೊ ಇನ್ನೂ ಕೆಲವರಿಗೆ ಅಷ್ಟೇ ಕಷ್ಟ. ಅದು ಮಕ್ಕಳಾಗಿರಲಿ ಅಥವಾ ಹಿರಿಯರೇ ಆಗಿರಲಿ. ನೋವು ನೋವೇ. ನೋವಿಲ್ಲದೆ ಬದುಕಿನ ಗುರಿ ತಲುಪಲು ಅಸಾಧ್ಯ. ಮಕ್ಕಳ ಬದುಕಲ್ಲೂ ಅಷ್ಟೇ. ಗೊಬ್ಬರ ಹಾಕಿದಷ್ಟು ಒಳ್ಳೆಯ ಫಸಲು ಬರುತ್ತದೆ ಎನ್ನುವ ಹಾಗೆ, ಪೋಷಕರು ತುಂಬಾ ದುಡ್ಡು ಸುರಿದು ಓದಿಸುವವರಾದರೆ ಮಕ್ಕಳು ವೈದ್ಯರು, ಇಂಜಿನಿಯರ್ಸ್ ಆಗ್ತಾರೆ. ಆದರೆ ಏನೂ ಇಲ್ಲದವರ ಮಕ್ಕಳು ಆ ಎತ್ತರಕ್ಕೆ ಬೆಳೆಯಬೇಕು ಎಂದರೆ ಅವರು ಪಡಬೇಕಾದ ಕಷ್ಟ ಅಷ್ಟಿಷ್ಟಲ್ಲ. ಸಾವಿರದಲ್ಲಿ ಒಬ್ಬರಿಗೆ ತಮ್ಮ ಗುರಿ ಮುಟ್ಟುವ ಭಾಗ್ಯ ದೊರೆಯುತ್ತದೆ. ಅದಕ್ಕೆ ಅವರು ಪಟ್ಟ ಕಷ್ಟ ಅದು ಅವರಿಗೇ ಗೊತ್ತು.
   ಬದುಕಿನಷ್ಟು ಉತ್ತಮ ಶಿಕ್ಷಕರು ಇನ್ನೊಬ್ಬರಿಲ್ಲ. ಚೆನ್ನಾಗಿ ಪಾಠ ಕಲಿಸಿ ಪರೀಕ್ಷೆ ಮಾಡುತ್ತಾ ಇರುತ್ತದೆ. ಗೆಲ್ಲುವುದು ಸುಲಭವೇ ಅಲ್ಲ, ಪಬ್ಲಿಕ್ ಪರೀಕ್ಷೆಗಿಂತಲೂ ಕಷ್ಟ ಅದು. ಬದುಕಿನ ದಾರಿ ಅಷ್ಟು ಸುಲಭದಲ್ಲಿ ಹೋಗಬಹುದಾದ ಹೈ ವೇ ಅಲ್ಲ, ಅದು ಕಲ್ಲು ಮುಳ್ಳಿನ ಹಾದಿ. ಬದುಕಿನ ಪಾಠ ಕಲಿತಷ್ಟು ಮುಗಿಯದು ಅಲ್ಲವೇ? ನೀವೇನಂತೀರಿ?

—————————-

Leave a Reply

Back To Top