ಸುಮತಿ ಮತ್ತು ವೇಲಾಯುಧನ್ ರವರ ವೈವಾಹಿಕ ಜೀವನವು ಸರಳ ಹಾಗೂ ಸುಂದರವಾಗಿತ್ತು. ಸಾವಕಾಶವಾಗಿ ಹೊಸ ಜೀವನಕ್ಕೆ ಸುಮತಿ ಒಗ್ಗಿಕೊಂಡಳು. ಪತಿಯ ಅಣತಿಯಂತೆ ನಡೆಯುವ ಪತ್ನಿಯಾದಳು. ಅತ್ಯಂತ ಶ್ರೀಮಂತ ಜೀವನವನ್ನು ಕಂಡಿದ್ದ ಸುಮತಿ ಈಗಾಗಲೇ ಮಧ್ಯಮ ವರ್ಗದ ಜೀವನಕ್ಕೆ ಹೊಂದಿಕೊಂಡಿದ್ದಳು. ಹಾಗಾಗಿ ಈಗಿನ ಜೀವನಕ್ಕೆ ಹೊದಿಕೊಳ್ಳುವುದು ಅಷ್ಟೇನೂ ಕಷ್ಟ ಎನಿಸಲಿಲ್ಲ. ಕೆಲಸದಲ್ಲಿ ಚುರುಕು, ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಳು. ರುಚಿಯಾದ ಅಡುಗೆ ಮಾಡಿ ಪತಿಗೆ ಉಣಬಡಿಸುವಳು. ಮನೆಯ ಮೂಲೆ ಮೂಲೆಯನ್ನು ಶುಚಿಯಾಗಿ ಇಟ್ಟುಕೊಳ್ಳುವಳು. ವೇಲಾಯುಧನ್ ರವರು ಅತ್ಯಂತ ಕಟ್ಟುನಿಟ್ಟಿನ ಮನುಷ್ಯ. ಎಲ್ಲವೂ ಸಮಯಕ್ಕೆ ಸರಿಯಾಗಿ ಆಗಬೇಕು. ಶಿಸ್ತುಬದ್ಧ ಜೀವನವನ್ನು ಸೈನ್ಯದಲ್ಲಿ ಇರುವಾಗ ರೂಢಿಸಿಕೊಂಡಿದ್ದರು. ಸ್ವಲ್ಪ ಕಠಿಣ ಮನಸ್ಕರು ಕೂಡಾ ಆಗಿದ್ದರು. ಮಿಲಿಟರಿಯಲ್ಲಿ ಮದ್ದುಗುಂಡು ಉಪಯೋಗಿಸಿ ಚೆನ್ನಾಗಿ ಪಳಗಿದ್ದ ಅವರು ದೊಡ್ಡ ಬಂಡೆಗಳನ್ನು ಒಡೆಯುವ ಕೆಲಸದ ಗುತ್ತಿಗೆ ಪಡೆದು ಕೆಲಸಗಾರರನ್ನು ದಿನಗೂಲಿ ವೇತನಕ್ಕೆ ಇಟ್ಟುಕೊಂಡು ಕೆಲಸ ಮಾಡಿಸುತ್ತಾ ಇದ್ದರು. ಇದರಿಂದ ಅವರಿಗೆ ಕುಟುಂಬ ಸರಿದೂಗಿಸಿಕೊಂಡು ಹೋಗುವಷ್ಟು ವರಮಾನ ಬರುತ್ತಿತ್ತು. ಅದೂ ಅಲ್ಲದೇ ಸುಮತಿ ಮಿತವ್ಯಯಿ ಗಂಡನ ವರಮಾನಕ್ಕೆ

ಅನುಸಾರವಾಗಿ ಖರ್ಚು ಉಳಿತಾಯ ಎರಡನ್ನೂ ಮಾಡುತ್ತಿದ್ದಳು. ಯಾವ ವಿಷಯದಲ್ಲಿ ಆಗಲೀ ಕೆಲಸ ಕಾರ್ಯಗಳಲ್ಲಿ ಆಗಲೀ ಸಣ್ಣ ತಪ್ಪು ಕೂಡಾ ಹುಡುಕುವಂತ ಪ್ರಮೇಯವೇ ಸೃಷ್ಟಿಯಾಗುತ್ತಿರಲಿಲ್ಲ.. ಹೀಗಾಗಿ  ವೇಲಾಯುಧನ್ ರವರಿಗೆ ಯಾವುದೇ ವಿಷಯದಲ್ಲಿ ಪತ್ನಿಯಲ್ಲಿ ಕೊರತೆ ಹುಡುಕುವಂತೆ ಇರಲಿಲ್ಲ. ಪತಿ ಕೆಲಸಕ್ಕೆ ಹೋದ ಸಮಯದಲ್ಲಿ ಎಲ್ಲಾ ಕೆಲಸವನ್ನೂ ಮಾಡಿ ಮುಗಿಸುತ್ತಾ ಇದ್ದಳು. ಸುಮತಿಗೆ ಹೂವಿನ ಗಿಡಗಳೆಂದರೆ ಪಂಚಪ್ರಾಣ. ಬಿಡುವಿನ ಸಮಯದಲ್ಲಿ ಮನೆಯ ಸುತ್ತಲೂ ಹೂ ಗಿಡಗಳನ್ನು ನೆಡುವ ಕೆಲಸದಲ್ಲಿ ನಿರತಳಾಗುವಳು.

ಕೆಲಸಕ್ಕೆ ಬಿಡುವು ಇರುವ ದಿನಗಳಲ್ಲಿ ಚಲನಚಿತ್ರ ವೀಕ್ಷಿಸಲು ವೇಲಾಯುಧನ್ ಸುಮತಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಪತಿ ಪತ್ನಿ ಇಬ್ಬರೂ ಖುಷಿಯಾಗಿ ಚಲನ ಚಿತ್ರ ವೀಕ್ಷಿಸಿ ಮನೆಗೆ ಹಿಂತಿರುಗಿ ಬರುವರು. ಇಬ್ಬರಿಗೂ ಹಾಡುಗಳೆಂದರೆ ಬಹಳ ಇಷ್ಟ. ಇಬ್ಬರೂ ಚಲನ ಚಿತ್ರ ನೋಡಿದ ನಂತರ ಕುಳಿತು ಚಿತ್ರದ ವಿಮರ್ಶೆ ಮಾಡುವರು. ಅವರು ಸಾಮಾನ್ಯವಾಗಿ ನೋಡುತ್ತಾ ಇದ್ದ ಚಿತ್ರಗಳೆಂದರೆ ಹೆಚ್ಚಾಗಿ ಪೌರಾಣಿಕ ಹಾಗೂ ಸಾಂಸಾರಿಕ. ಕನ್ನಡವನ್ನು ಕಲಿತಿದ್ದ ಸುಮತಿಗೆ ಚಿತ್ರಗಳಲ್ಲಿನ ಸಂಭಾಷಣೆ ಅರ್ಥವಾಗುತ್ತಿತ್ತು. ವೇಲಾಯುಧನ್ ಎಲ್ಲಾ ಭಾಷೆಯನ್ನು ಬಲ್ಲವರಾಗಿದ್ದರು. ಹಾಗಾಗಿ ಇತರ ಭಾಷೆಯ ಚಲನ ಚಿತ್ರಗಳಿಗೂ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಸುಮತಿ ಕನ್ನಡವಲ್ಲದೆ ತಮಿಳು ಹಾಗೂ ಹಿಂದಿ ಭಾಷೆಯನ್ನು ಕಲಿತಳು. ಶಾಲೆಯ ಪಠ್ಯದಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಕಲಿತಿದ್ದಳು. ಆದರೂ ಈಗ ಹಿಂದಿ ಭಾಷೆಯು ಇನ್ನೂ ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತಳು. ಇಂಗ್ಲೀಷ್ ಭಾಷೆಯನ್ನು ಕೂಡಾ ಚೆನ್ನಾಗಿ ಬಲ್ಲವಳಾಗಿದ್ದಳು.

ಇಬ್ಬರಿಗೂ ಸಂಗೀತದಲ್ಲಿ ಬಹಳ ಆಸಕ್ತಿ ಇತ್ತು. ವೇಲಾಯುಧನ್ ಬಹಳ ಸೊಗಸಾಗಿ ಕೊಳಲು ವಾದನ ಮಾಡುತ್ತಿದ್ದರು. ಬಿಡುವಿನ ವೇಳೆಯಲ್ಲಿ ಪತ್ನಿಯನ್ನು ಕುಳ್ಳಿರಿಸಿ ಕೊಳಲು ನುಡಿಸುತ್ತಿದ್ದರು ಹಾಗೂ ಪತ್ನಿಯ ಜೊತೆಗೂಡಿ ಹಾಡುಗಳನ್ನು ಹಾಡುತ್ತಿದ್ದರು. ಸುಮತಿಗೆ ಸಿನೆಮಾ ಹಾಡುಗಳನ್ನು ಹಾಡುವುದು ಸ್ವಲ್ಪ ಮುಜುಗರ ತರಿಸುತ್ತಿತ್ತು. ಆದರೆ ವೇಲಾಯುಧನ್ ಹಾಡಲು ಪ್ರೇರೇಪಿಸುತ್ತಿದ್ದರು. ಆದರೂ ಸುಮತಿ ಅದರಲ್ಲೂ ಹೆಚ್ಚಾಗಿ ದೇವರ ನಾಮಗಳನ್ನು ಹುಡುಕಿ ಹಾಡುವಳು. ಕೇರಳ ಬಿಟ್ಟು ಬಂದಿದ್ದರೂ ಅಲ್ಲಿನ ಆಚಾರ ವಿಚಾರಗಳನ್ನು ಚಾಚೂ ತಪ್ಪದೆ  ಪಾಲಿಸುತ್ತಾ ಇದ್ದಳು.

ಇಬ್ಬರೂ ಹೀಗೆ ಸಂತೋಷದಿಂದ ಜೀವನ ಸಾಗಿಸುತ್ತಾ ಇದ್ದರು. ವಾರಾಂತ್ಯದಲ್ಲಿ ಸಿನಿಮಾ ನೋಡುವುದು ಇಬ್ಬರಿಗೂ ಖುಷಿ ಕೊಡುವ ವಿಷಯವಾಗಿತ್ತು. ಸುಮತಿ ಬಹಳ ಸಂಪ್ರದಾಯಸ್ಥ ಕುಟುಂಬದವಳು. ಹಾಗಾಗಿ ಸದಾ ದೇವರ ಪೂಜೆಯಲ್ಲಿ ನಿರತಳಾಗಿ ಇರುತ್ತಿದ್ದಳು. ದೇವರ ನಾಮವನ್ನು ಹೇಳುವಾಗೆಲ್ಲಾ ಮೌನವಾಗಿ ಕಣ್ಣೀರು ಸುರಿಸುವಳು. ತಾಯಿಯನ್ನು ಇನ್ನೂ ಅಪ್ಪ ಊರಿಂದ ಕರೆದುಕೊಂಡು ಬಂದಿಲ್ಲವಲ್ಲ ಎನ್ನುವ ಕೊರಗು ಅವಳನ್ನು ಸದಾ ಕಾಡುತ್ತಿತ್ತು. ದೇವರಿಗೆ ಮೊರೆ ಇಡದೇ ಅವಳಿಗೆ ಬೇರೆ ದಾರಿ ಇರುತ್ತಿರಲಿಲ್ಲ. ಪತಿಗೆ ತನ್ನ ಅಳುವಾಗಲಿ ನೋವಿನ ಮುಖವಾಗಲಿ ತೋರಗೋಡುತ್ತಾ ಇರಲಿಲ್ಲ. ಅವರ ಎದುರು ಎಂದಿಗೂ ಹಸನ್ಮುಖಿಯಾಗಿ ಇರುವಳು. ಬೆಳಗ್ಗಿನ ಜಾವ ಬಹಳ ಬೇಗನೇ ಎದ್ದು ತಣ್ಣೀರಿನಲ್ಲಿ ಮಿಂದು ದೇವರ ಪೂಜೆ ಮಾಡುವಳು. ಗಂಟೆ ಗಟ್ಟಲೆ ದೇವರ ಧ್ಯಾನದಲ್ಲಿ ಕುಳಿತಿರುವಳು. ತನ್ನ ಮನಸ್ಸಿನ ಬೇಗೆಯನ್ನು ಶ್ರೀ ಕೃಷ್ಣನ ಎದುರು ತೆರೆದುಕೊಳ್ಳುವಳು. ಕೃಷ್ಣನ ಜೊತೆಗೆ ದಿನವೂ ಮೌನ ಸಂಭಾಷಣೆ ಮಾಡದಿದ್ದರೆ ಅವಳಿಗೆ ಸಮಾಧಾನವೇ ಇರುತ್ತಾ ಇರಲಿಲ್ಲ. ದಿನದ ಆಗು ಹೋಗುಗಳನ್ನು ಸಂತೋಷ ದುಃಖದ ವಿಷಯಗಳನ್ನು ಶ್ರೀ ಕೃಷ್ಣನಲ್ಲಿ ಹಂಚಿಕೊಳ್ಳುವಳು.

ಎಲ್ಲವನ್ನೂ ಶ್ರೀ ಕೃಷ್ಣನ ಮುಂದೆ ಭಿನ್ನವಿಸದೇ ಅವಳ ದಿನಚರಿ ಪ್ರಾರಂಭವಾಗುತ್ತಾ ಇರಲಿಲ್ಲ. ಪೂಜೆಯ ನಂತರವೇ ಅವಳು ಬೆಳಗಿನ ಉಪಹಾರ ಹಾಗೂ ಪತಿಗೆ ಮಧ್ಯಾಹ್ನದ ಬುತ್ತಿಗೆ ಬೇಕಾದ ಅಡುಗೆಯನ್ನು ಮಾಡಿ ಹಬೆಯಾಡುವ ಊಟವನ್ನು ಬಾಳೆಯ ಎಲೆಯಲ್ಲಿ ಸುತ್ತಿ ಡಬ್ಬಿಯಲ್ಲಿ ತುಂಬಿತ್ತಿದ್ದಳು. ಅವಳು ಮಾಡುವ ಅಡುಗೆಯ ಘಮ ಘಮ ಪರಿಮಳ ಬುತ್ತಿ ತೆರೆದಾಗ ವೇಲಾಯುಧನ್ ಆಸ್ವಾದಿಸಿಸುತ್ತಾ ತಿನ್ನುವರು. ಪತಿಯ ಎಲ್ಲಾ ಅಗತ್ಯವನ್ನು ತಪ್ಪದೇ ನೋಡಿಕೊಳ್ಳುತ್ತಾ ಇದ್ದಳು.  ಕಲ್ಯಾಣಿಯವರು ಚಿಕ್ಕ ವಯಸ್ಸಿನಿಂದಲೇ ಅಚ್ಚುಕಟ್ಟುತನ ಹಾಗೂ ಅಗತ್ಯಕ್ಕೆ ಬೇಕಾದ ಮನೆಯ ಕೆಲಸಗಳನ್ನು ಹೆಣ್ಣುಮಕ್ಕಳಿಗೆ ಕಲಿಸಿದ್ದರು.

ಹೀಗೆಯೇ ಸುಮತಿ ಹಾಗೂ ವೇಲಾಯುಧನ್ ರವರ ದಾಪಂತ್ಯ ಜೀವನ ಸುಗಮವಾಗಿ ಸಾಗುತ್ತಿತ್ತು. ಕೆಲವೊಮ್ಮೆ ಅಪರೂಪಕ್ಕೆ ನಾರಾಯಣನ್ ಮಗಳು ಅಳಿಯನ ಕ್ಷೇಮ ಸಮಾಚಾರವನ್ನು ವಿಚಾರಿಸಿಕೊಳ್ಳಲು ಬರುವರು. ಸಾಮಾನ್ಯವಾಗಿ ವೇಲಾಯುಧನ್ ಬೆಳಗ್ಗೆ ಬೇಗನೆ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಸಂಜೆಯವರೆಗೂ ಮಗಳ ಜೊತೆ ಮಾತುಕತೆಯಲ್ಲಿ ನಿರತರಾಗಿ ಸಂಜೆ ಕೆಲಸ ಮುಗಿಸಿ ವೇಲಾಯುಧನ್ ಬರುವವರೆಗೂ ಇದ್ದು ಅವರ ಜೊತೆ ಉಭಯ ಕುಶಲೋಪರಿಯ ನಂತರ ಹೊರಡುವರು. ಬರುವಾಗ ಜೊತೆಗೆ ಸುಮತಿಯ ಇಬ್ಬರೂ ತಮ್ಮಂದಿರನ್ನು ಕರೆದುಕೊಂಡು ಬರುವರು. ಸುಮತಿಗಂತೂ ತಮ್ಮಂದಿರನ್ನು ಕಂಡರೆ ಬಹಳ ಖುಷಿ. ಇಬ್ಬರನ್ನೂ ಅಪ್ಪಿಕೊಡರೆ ಅವಳ ಕಣ್ಣಿನಿಂದ ಕಣ್ಣೀರಧಾರೆ ಹರಿಯುತ್ತಿತ್ತು. ಅಮ್ಮನ ಮಾತೃವಾತ್ಸಲ್ಯದಿಂದ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ತಮ್ಮಂದಿರನ್ನು ವಂಚಿತರನ್ನಾಗಿ ಮಾಡಿದರಲ್ಲಾ ಅಪ್ಪ ಎನ್ನುವ ಕೋಪ ತೋರಿಸಿಕೊಳ್ಳಲಾರದ ಅಸಹಾಯಕತೆ ಕಣ್ಣೀರಾಗಿ ಹೊರ ಬರುತ್ತಿತ್ತು. ಅವರಿಗೆ ತಿನ್ನಲು ಬೇಕಾದ ಎಲ್ಲ ರುಚಿಕರ ತಿಂಡಿಗಳನ್ನು, ಊಟವನ್ನು ಖುಷಿಯಿಂದ ಮಾಡಿ ಉಣಬಡಿಸುವಳು. ಅಕ್ಕನ ಮನೆಗೆ ಬರುವುದೆಂದರೆ ತಮ್ಮಂದಿರಿಗೆ ಬಹಳ ಉತ್ಸಾಹ ಹಾಗು ಖುಷಿ. ಮನಸೋ ಇಚ್ಚೆ ಸುಮತಿಯ ಮನೆಯಲ್ಲಿ ಆಡುವರು ಆದರೆ ಭಾವ ಬಂದಾಗ ಸುಮ್ಮನೆ ಕುಳಿತು ಬಿಡುವರು. ಭಾವನನ್ನು ಕಂಡರೆ ಅವರಿಬ್ಬರಿಗೂ ಬಹಳ ಭಯ ಹಾಗೂ ಗೌರವ.

ಹಾಗೆಯೇ ಅಂದು ಬಂದ ನಾರಾಯಣನ್ ಇನ್ನೂ ಒಡೆದು ಓದಿರದ ಒಂದು ಕಂದು ಬಣ್ಣದ ಲಕೋಟೆಯನ್ನು ಸುಮತಿಯ ಕೈಗೆ ಕೊಟ್ಟು ” ಇದು ನಿನ್ನೆ ಅಂಚೆಯವನು ತಂದು ಕೊಟ್ಟನು…. ನಿನ್ನ ಹೆಸರು ಇದ್ದ ಕಾರಣ ನಾನು ಇದನ್ನು ಒಡೆದು ಓದಲಿಲ್ಲ… ನೀನೇ ಓದಿ ವಿಷಯ ಏನು ಎಂದು ತಿಳಿಸು ಎಂದರು”…. ಸುಮತಿಯ ಕಣ್ಣುಗಳು ಲಕೋಟೆಯನ್ನು ಕಂಡ ಕೂಡಲೇ ಅರಳಿದವು. ಅಮ್ಮನ ಪತ್ರ ಇರಬಹುದೇ? ಇಷ್ಟು ಕಾಲದ ನಂತರ ಅಮ್ಮನ ಪತ್ರ ಬಂದಿದೆ ಎಂದುಕೊಂಡು ಲಕೋಟೆ ಯಾರಿಂದ ಬಂದಿರಬಹುದು ಎಂದು ಉತ್ಸುಕತೆಯಿಂದ ವಿಳಾಸವನ್ನು ನೋಡಿದಳು.


Leave a Reply

Back To Top