“ಮಹಾನ್ ಚೇತನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ವೀಣಾ ಹೇಮಂತ್ ಗೌಡ ಪಾಟೀಲ್

ಅವರು ಹುಟ್ಟಿದ್ದು ‘ಮಹಾರ್’ ಎಂಬ ಜನಾಂಗದಲ್ಲಿ. ಅತ್ಯಂತ ಹಿಂದುಳಿದ ಆ ಜನಾಂಗದವರನ್ನು ಮೇಲ್ವರ್ಗದ ಜನರು ಪಶುವಿಗಿಂತ ಕೀಳಾಗಿ ನೋಡುವುದನ್ನು, ವ್ಯವಹರಿಸುವುದನ್ನು ಕಂಡು ನೊಂದುಕೊಂಡು ವಿದ್ಯೆ ಎಂಬ ಬ್ರಹ್ಮಾಸ್ತ್ರದ ಮೂಲಕ ಜ್ಞಾನವನ್ನು ಸಂಪಾದಿಸಿ ನಮ್ಮ ದೇಶದ ವಿವಿಧ ಧರ್ಮಶಾಸ್ತ್ರಗಳ ಅಧ್ಯಯನವನ್ನು ವಿದೇಶದಲ್ಲಿ ಕೈಗೊಂಡು ಅದರ ಜೊತೆಗೆ ಹಲವಾರು ವಿಷಯಗಳಲ್ಲಿ ಪರಿಣತಿಯನ್ನು ಪಡೆದು ಮರಳಿ ಭಾರತಕ್ಕೆ ಬಂದು ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುವ ಕಾನೂನು ತಜ್ಞರಾಗಿ ಮುಂದೆ ಭಾರತದ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಿದವರು….. ಅವರೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಡಾ. ಬಿ.ಆರ್. ಅಂಬೇಡ್ಕರ್.

ಅಸ್ಪೃಶ್ಯರು ಎಂದೇ ಕರೆಯಲ್ಪಡುವ ಮಹಾರ್ ಎಂಬ ಜನಾಂಗದಲ್ಲಿ 14ನೆಯ ಮಗನಾಗಿ ಹುಟ್ಟಿದ ಅಂಬೇಡ್ಕರ್ ಅವರಿಗೆ ಬಾಲ್ಯದಿಂದಲೂ ಸಿಕ್ಕ ಒಳ್ಳೆಯ ಸಂಸ್ಕಾರ ಆತನ ತಂದೆ ತಾಯಿಗಳ ಬಳುವಳಿ. ಮಾರುಕಟ್ಟೆಯ  ಮಧ್ಯದಲ್ಲಿಯೇ ಪುಟ್ಟ ಗುಡಿಸಲನ್ನು ಹೊಂದಿದ್ದ ಸದಾ ಗೌಜಿ ಗದ್ದಲಗಳಿಂದ ತುಂಬಿದ್ದ ಕೊಳೆತು ನಾರುವ ಮಾರುಕಟ್ಟೆಯ ಪರಿಸರದಲ್ಲಿ ಬೆಳೆದರೂ ಚಿಕ್ಕಂದಿನಲ್ಲಿಯೇ ಅದ್ಭುತ ಪ್ರತಿಭೆ ತೋರುತ್ತಿದ್ದ ಮಗನನ್ನು ತಂದೆ ಕಷ್ಟಪಟ್ಟು ಓದಿಸುತ್ತಿದ್ದರು. ಮಧ್ಯರಾತ್ರಿವರೆಗೂ ಎಚ್ಚರವಿರುತ್ತಿದ್ದ ತಂದೆ ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ಮಗನನ್ನು ಎಬ್ಬಿಸಿ ಓದಲು ಕೂಡಿಸುತ್ತಿದ್ದರು.ಮುಂಜಾನೆಯ ನೀರವ ವಾತಾವರಣದಲ್ಲಿ ಬಾಲಕ ಭೀಮನ ಓದು ಸಾಗುತ್ತಿತ್ತು.

ಶಾಲೆಯಲ್ಲಿ ಯಾವುದೇ ಮಕ್ಕಳು ಇವರೊಂದಿಗೆ ಸೇರುತ್ತಿರಲಿಲ್ಲ. ಕುಡಿಯಲು ನೀರನ್ನು ಕೂಡ ಮೇಲಿನಿಂದ ಹಣಿಸುತ್ತಿದ್ದರು. ಭೀಮ ಮತ್ತವನ ಸಹೋದರ ತರಗತಿ ಕೋಣೆಯ ಕಪ್ಪು ಹಲಗೆಯ ಹಿಂಭಾಗದ ಮೂಲೆಯಲ್ಲಿ ಕುಳಿತು ಪಾಠವನ್ನು ಕೇಳುತ್ತಿದ್ದರು. ದೇವಸ್ಥಾನಗಳಲ್ಲಿ ಕೂಡ ಇವರಿಗೆ ಪ್ರವೇಶವಿಲ್ಲ. ಬಾವಿ,ಕೆರೆ ಹಳ್ಳಗಳ ನೀರನ್ನು ಕೂಡ ಇವರ ಜನಾಂಗಕ್ಕೆ ನಿರ್ಬಂಧಿಸಿದ್ದುದು ಭೀಮನಿಗೆ ಯಕ್ಷ ಪ್ರಶ್ನೆಯಂತೆ ತೋರುತ್ತಿತ್ತು. ಈ ಎಲ್ಲಾ ಪ್ರಶ್ನೆಗಳನ್ನು ತಾಯಿಯ ಮುಂದೆ ಒಡ್ಡಿದಾಗ ತಾಯಿ ಇದೆಲ್ಲಕ್ಕೂ ಪರಿಹಾರ ನಿನ್ನ ಓದಿನಲ್ಲಿ ಅಡಗಿದೆ ಎಂದು ಸುಮ್ಮನೆ ಹೇಳಿದ್ದಳಾದರೂ ಅದನ್ನೇ ಗಂಭೀರವಾಗಿ ಪರಿಗಣಿಸಿದ ಭೀಮನು ಉತ್ತಮವಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆದನು. ಇಷ್ಟರಲ್ಲಾಗಲೇ ಅವರ ಜನಾಂಗದ ಪದ್ಧತಿಯಂತೆ ಅಂಬೇಡ್ಕರ್ ಅವರ ಬಾಲ್ಯ ವಿವಾಹವನ್ನು  ರಮ ಎಂಬ ಹೆಣ್ಣು ಮಗುವಿನೊಂದಿಗೆ ಮಾಡಿ ಮುಗಿಸಿದ್ದರು.

 ಮುಂದೆ ಕಾಲೇಜಿಗೆ ಸೇರಲು ಆತನಿಗೆ ಸಹಾಯ ಮಾಡಿದ ಶಿಕ್ಷಕರೊಬ್ಬರು ಆತನಿಗೆ ಅಂಬೇಡ್ಕರ್ ಎಂಬ ತಮ್ಮದೇ ಅಡ್ಡನಾಮವನ್ನು ಸೇರಿಸಿದರು. ಪದವಿ ವ್ಯಾಸಂಗದ ನಂತರ ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಮತ್ತು ದೊಡ್ಡ ಮೊತ್ತದ ನೌಕರಿಯ ಅವಕಾಶ ಎರಡೂ ಒಟ್ಟೊಟ್ಟಿಗೆ ಬಂದಾಗ ಅಂದಿನ ಬರೋಡದ ಮಹಾರಾಜರಾದ  ಗಾಯಕವಾಡರ ಸಹಾಯದಿಂದ ಅಂಬೇಡ್ಕರ್ ಅವರು ವಿದೇಶ ವ್ಯಾಸಂಗಕ್ಕೆ ಹೊರಟರು.

 ಅಸ್ಪೃಶ್ಯತೆಯ ಗಂಧ ಗಾಳಿಯನ್ನು ಅರಿಯದ ವಿದೇಶಿ ಜನರ ಮಧ್ಯ ಒಳ್ಳೆಯ ಆಹಾರ, ವಿಚಾರ ಮತ್ತು ಶಿಕ್ಷಣದ ಸಮ್ಮಿಶ್ರ ಪಾಕವನ್ನು ಸವಿದ ಅಂಬೇಡ್ಕರ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಪಕ್ವವಾದರು. ವಾಚನಾಲಯದಲ್ಲಿ ದೊರೆತ ಹಲವಾರು ಪುಸ್ತಕಗಳನ್ನು ಓದಿ ಜ್ಞಾನದ ಭಂಡಾರವನ್ನು ಹೆಚ್ಚಿಸಿಕೊಂಡ ಅಂಬೇಡ್ಕರ್ ಅವರು ಎಲ್ಲಾ ಧರ್ಮಗಳ ಸಾರವನ್ನು ಅರೆದು ಕುಡಿದರು. ಅಸ್ಪೃಶ್ಯರು ಸಂಸ್ಕೃತವನ್ನು ಕೇಳಿದರೆ ಅವರ ಕಿವಿಗಳಿಗೆ ಎಣ್ಣೆ ಕಾಸಿ ಹಾಕಬೇಕೆಂಬ ಭಾರತ ದೇಶದ ಮೇಲ್ವರ್ಗದ ಜನರ ಮಧ್ಯದಲ್ಲಿ ಬೆಳೆದ ಅಂಬೇಡ್ಕರ್ ವಿದೇಶದಲ್ಲಿ ನಮ್ಮ ಧರ್ಮ ಗ್ರಂಥಗಳನ್ನು ಓದಿದರು. ಚಿಕ್ಕಂದಿನಲ್ಲಿ ಮನಸ್ಸನ್ನು ಕದಡಿದ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅಸಮಾನತೆ ಎಂಬ ಅಮಾನವೀಯ ಕೃತ್ಯದ ಆಘಾತವನ್ನು ಅನುಭವಿಸಿದ್ದ ಅಂಬೇಡ್ಕರ್ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಮಧ್ಯದ ತುಲನಾತ್ಮಕ ಅಧ್ಯಯನವನ್ನು ಕೈಗೊಂಡರು. ಅಸ್ಪೃಶ್ಯತೆಯ, ಅನಾದರದ ಗಂಧ ಗಾಳಿ ಇಲ್ಲದ ವಿದೇಶಿ ಪರಿಸರ ಅಂಬೇಡ್ಕರ್ ಅವರ ಮನಸ್ಸನ್ನು ಅರಳಿಸಿತು.

ವಿದೇಶದಲ್ಲಿ ಅಧ್ಯಯನ ಪೂರೈಸಿ ಭಾರತಕ್ಕೆ ಮರಳಿದ ಅಂಬೇಡ್ಕರ್ ಅವರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. ಅಲ್ಲೂ ಕೂಡ ಅವರಿಗೆ ಅವಮಾನ ಕಟ್ಟಿಟ್ಟ ಬುತ್ತಿ ಎಂದು ಅರಿವಾದಾಗ ಎಲ್ಲ ಹಿಂದುಳಿದ ವರ್ಗಗಳ ಜನರ ಧ್ವನಿಯಾಗಿ ತಾನು ಕಾರ್ಯನಿರ್ವಹಿಸಿದರೆ ಮಾತ್ರ ಅವರ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ಅರಿತ ಅಂಬೇಡ್ಕರ್ ರಾಜಕೀಯ ಪ್ರವೇಶಿಸಿದರು.
ಅದೃಷ್ಟವಶಾತ್ ಮಹಾತ್ಮ ಗಾಂಧೀಜಿಯವರ ಸಂಪರ್ಕಕ್ಕೆ ಬಂದ ಅಂಬೇಡ್ಕರ್ ಅವರು ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾದರು. ಶ್ರೇಷ್ಠ ಮಾನವತಾವಾದಿ ಮಹಾತ್ಮ ಗಾಂಧೀಜಿಯವರ ಒಡನಾಟ, ಚರ್ಚೆ, ಭಾರತದ ಸ್ವಾತಂತ್ರ್ಯದ ಕುರಿತಾದ ಅವರ ನಿಲುವು, ಗ್ರಾಮೀಣ ಭಾರತದ ಅವರ ಕನಸು, ಗುಡಿ ಕೈಗಾರಿಕೆಗಳ ಮೂಲಕ ಗ್ರಾಮಗಳ ಸಶಕ್ತಿಕರಣ, ನೈತಿಕ ಹೊಣೆಗಾರಿಕೆ ಎಲ್ಲವನ್ನು  ನೋಡಿದ ಅಂಬೇಡ್ಕರ್ ಭಾರತ ದೇಶವು ಸ್ವಾತಂತ್ರ್ಪ ಪಡೆಯುವ ಸಮಯದಲ್ಲಿ ಶೋಷಿತರ ಪರವಾಗಿ ಧ್ವನಿ ಎತ್ತಿದರು. ಸಂಘಟನೆ ಅಂಬೇಡ್ಕರ್ ಅವರ ದೈತ್ಯಶಕ್ತಿಯಾಗಿತ್ತು.

ಇನ್ನೇನು ಭಾರತದ ಸ್ವಾತಂತ್ರ್ಯದ ಕ್ಷಣಗಣನೆ ಆರಂಭವಾಗಿದೆ ಎಂಬ ಹೊತ್ತಿನಲ್ಲಿ 1945-46 ರ ಸುಮಾರಿಗೆ ಅಂದಿನ ಕಾನೂನು ಮಂತ್ರಿಯಾಗಿ ಭಾರತ ದೇಶದ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ಅಂಬೇಡ್ಕರ್ ಅವರ ಜ್ಞಾನ ಮತ್ತು ವೈಯುಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ನೀಡಲಾಯಿತು.

ಪುರುಷರಷ್ಟೇ ಹೆಣ್ಣು ಮಕ್ಕಳಿಗೂ ಎಲ್ಲಾ ರೀತಿಯ ಸಮಾನ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ನೀಡಿದ್ದಾರೆ ಡಾ. ಅಂಬೇಡ್ಕರ್. ಬಹುಶಃ ಜಗತ್ತಿನ ಯಾವುದೇ ದೇಶ ಮಾಡಿರದ ಮಹತ್ಸಾದನೆ ಇದು. ಮನುವಾದಿಗಳ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಿದ್ದರು ನಿಜ ಆದರೆ ಸ್ವಾತಂತ್ರ್ಯ ಮತ್ತು ಸಮಾನತೆ ಎಂಬುದು ಕನಸಿನ ಮಾತಾಗಿದ್ದ ಕಾಲದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗ, ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಷ್ಟಿಯಿಂದ ರಚಿಸಲಾದ ಸಾಂವಿಧಾನಿಕ ಕಾನೂನು, ಮತದಾನದ ಹಕ್ಕು ಮತ್ತು ಸುವ್ಯವಸ್ಥೆಯ ನಿಯಮಗಳು ಹೆಣ್ಣು ಮಕ್ಕಳನ್ನು ಇನ್ನಿಲ್ಲದ ನೆಮ್ಮದಿಯಿಂದ ಜೀವಿಸುವಂತೆ ಮಾಡಿವೆ.

ಮಾರ್ಕ್ಸ್ ವಾದವನ್ನು ಅಧ್ಯಯನ ಮಾಡಿದ್ದ ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಮೂಲಕ ಬಂಡವಾಳಶಾಹಿಗಳ ದಬ್ಬಾಳಿಕೆಯನ್ನು ವಿರೋಧಿಸಿ ಎಲ್ಲಾ ವರ್ಗದ ಕಾರ್ಮಿಕರಿಗೂ ಕೆಲಸ, ಒಳ್ಳೆಯ ಸಂಬಳ, ಮೂಲಭೂತ ಅವಶ್ಯಕತೆಗಳ ಪೂರೈಕೆ, ಔದ್ಯೋಗಿಕ ಭದ್ರತೆ ಆರೋಗ್ಯ ವಿಮೆ ಮುಂತಾದವುಗಳನ್ನು ದೊರಕಿಸಿಕೊಟ್ಟರು. ಕಾರ್ಮಿಕ ಸಂಘಟನೆಗಳಿಗೆ ಶಕ್ತಿ ತುಂಬಿದ ಅಂಬೇಡ್ಕರ್ ಅವರು ಬಂಡವಾಳಶಾಹಿಗಳ ಮೇಲೆ ನಿಯಂತ್ರಣವನ್ನು ಹೇರುವ ಮೂಲಕ ಕಾರ್ಮಿಕ ವರ್ಗಕ್ಕೆ ಚೈತನ್ಯ ತುಂಬಿದರು. ವಾರದ ರಜಾ ದಿನಗಳನ್ನು ಮತ್ತು ದಿನದ ಮೂರನೇ ಒಂದು ಅವಧಿಯ ಕಾರ್ಯನಿರ್ವಹಣೆಯನ್ನು ಕೂಡ ನಿಶ್ಚಯಿಸಿದವರು ಡಾಕ್ಟರ್ ಅಂಬೇಡ್ಕರ್.

ಹಿಂದುಳಿದ ವರ್ಗಗಳು ದೀನ ದಲಿತರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಮತ್ತು ಶೈಕ್ಷಣಿಕ ಕ್ರಾಂತಿಯ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಅಡಿಪಾಯ ಹಾಕಿದವರು ಅಂಬೇಡ್ಕರ್. ಸಮಾನ ನಾಗರಿಕ ಹಕ್ಕುಗಳು ಮತ್ತು ಕಾನೂನಾತ್ಮಕ ಹೋರಾಟ ಮಾಡಲು ಎಲ್ಲ ದುರ್ಬಲ ವರ್ಗದವರಿಗೆ ಅವಕಾಶ ಕಲ್ಪಿಸಿದರು. ಹಿಂದುಳಿದ ವರ್ಗದವರಿಗಾಗಿ ವಿಶೇಷ ಮೀಸಲಾತಿಗಳನ್ನು, ಅನುದಾನಗಳನ್ನು ನೀಡಿದ ಅವರು ಮುಂದಿನ ಕೆಲವು ವರ್ಷಗಳು ಮಾತ್ರ ಇದನ್ನು ಅನುಷ್ಠಾನದಲ್ಲಿ ಇಡಬೇಕು ಎಂದು ಸೂಚಿಸಿದ್ದರು ಕೂಡ.

ಸನಾತನ ಭಾರತದ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಿದ್ದ ಅವರು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದರು. ನಮ್ಮ ಭವ್ಯ ಧಾರ್ಮಿಕ ಪರಂಪರೆಯ ಇತಿಹಾಸಕ್ಕೆ ಯಾವುದೇ ರೀತಿಯ ಕುಂದುತರದಂತೆ ಆದರೆ ಅಸ್ಪೃಶ್ಯತೆ ಅಮಾನವೀಯ ಆಚರಣೆಗಳನ್ನು ನಿಯಂತ್ರಿಸಲು ತಿದ್ದುಪಡಿಗಳನ್ನು ಮಾಡಿದರು.

ಬಾಬಾ ಸಾಹೇಬರ ಮತ್ತೊಂದು ಹೆಗ್ಗಳಿಕೆ ಭಾರತೀಯ ಸಮಾಜದ ಮೂಲ ಸ್ವರೂಪಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ಸನಾತನ ಧರ್ಮದ ಮೌಲ್ಯಗಳನ್ನು ಗೌರವಿಸುತ್ತಾ ಕೇವಲ ಅದರಲ್ಲಿ ಇರಬಹುದಾದ ಕೆಟ್ಟ ಅಂಶಗಳನ್ನು ಮಾತ್ರ ಗುರುತಿಸಿ ಅದಕ್ಕೆ ತಿದ್ದುಪಡಿ ತಂದು ಸಾಮಾಜಿಕ ಸಮಾನತೆಯನ್ನು ಉಳಿಸಿದ್ದು.

   ಭಾರತದ ಏಕತೆ, ವೈವಿಧ್ಯತೆ ಮತ್ತು ಸಮಗ್ರತೆಯ ಬಗ್ಗೆ ಹೆಮ್ಮೆ ಮೂಡುವುದು 73 ವರ್ಷಗಳು ಕಳೆದರೂ ನಮ್ಮ ಸಂವಿಧಾನದ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆ ತರದೆ ಇರುವುದು. ಜಗತ್ತಿನ ಅತ್ಯಂತ ಪ್ರಾಚೀನ ಸಭ್ಯತೆಯಲ್ಲಿ ಸಂವಿಧಾನದ ಮೂಲ ಸ್ವರೂಪ ಯಾವುದೇ ತಿದ್ದುಪಡಿಗೊಳಗಾಗದೆ ಹಾಗೆಯೆ ಉಳಿದಿರುವುದು ಕೇವಲ ಭಾರತದಲ್ಲಿ ಮಾತ್ರ. ಅದಕ್ಕೆ ಕಾರಣ ಅಂಬೇಡ್ಕರ್ ಅವರ ಅಧ್ಯಯನಶೀಲ ಚಿಂತನೆ, ದೂರದೃಷ್ಟಿ ಮತ್ತು ಸರ್ವಧರ್ಮ ಸಮಾನ ದೃಷ್ಟಿ. ಹೀಗಾಗಿಯೇ ಅಂಬೇಡ್ಕರ್  ಎಲ್ಲಾ ಭಾರತೀಯರು ಗೌರವಿಸುವಂತಹ ವ್ಯಕ್ತಿತ್ವ ಹೊಂದಿ ಬಾಬಾ ಸಾಹೇಬ್ ಎಂದು ಕರೆಯಲ್ಪಟ್ಟರು.

ಅಂಬೇಡ್ಕರ್ ಕೇವಲ ದಲಿತ, ಹಿಂದುಳಿದ ವರ್ಗದ ನಾಯಕರು ಮಾತ್ರವಲ್ಲ…. ಭವ್ಯ ಭಾರತದ ಭವಿಷ್ಯದ ಪ್ರಜೆಗಳ ನಾಯಕ, ತಂದೆ ತನ್ನ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ತನ್ನ ಜೀವಿತವನ್ನೇ ತ್ಯಾಗ ಮಾಡುವಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಇಡೀ ಜೀವಮಾನವನ್ನು ಭಾರತದ ಹಿಂದುಳಿದ ದುರ್ಬಲ ಅಸಹಾಯಕ ಜನರ ಏಳಿಗೆಗಾಗಿ, ಹೆಣ್ಣು ಮಕ್ಕಳ
 ಸಶಕ್ತೀಕರಣಕ್ಕಾಗಿ, ಕಾರ್ಮಿಕರಲ್ಲಿ ಬಲ ತುಂಬಲು ಮುಡಿಪಾಗಿಟ್ಟರು.  ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಭಾರತದ ಹೆಮ್ಮೆಯ ಪ್ರಜೆಗಳಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ.

Leave a Reply

Back To Top