’30 ಮಕ್ಕಳ ಮಡಿಲು ಈ ಅಮ್ಮ’ ವಿಶೇಷ ಲೇಖನ-ಡಾ. ಮೀನಾಕ್ಷಿ ಪಾಟೀಲ

ವಿಜಯಪುರ ಜಿಲ್ಲೆಯ ಶ್ರೀಮತಿ ವಿಜಯಾ ಬಾಳಿ M.sc ಪದವೀಧರರು. ತಂದೆ ಬಸವರಾಜ ದೊಡ್ಡಮನಿ ತಾಯಿ ಕಮಲಾ.ಧಾರವಾಡದಲ್ಲಿ ಜನಿಸಿದ ಇವರು ಹೈಸ್ಕೂಲ್ ಶಿಕ್ಷಕರನ್ನ ಮದುವೆಯಾಗಿ ವಿಜಯಪುರದಲ್ಲಿ ನೆಲೆ ನಿಂತರು. ಯಾವತ್ತು ಕ್ರಿಯಾಶೀಲರಾಗಿರುವ ಇವರು
ಎಂಎಸ್.ಸಿ ಪದವೀಧರೆಯಾಗಿ ಮನೆಯಲ್ಲಿ ವ್ಯರ್ಥ ಸಮಯ ಕಳೆಯದೆ ತಾವು ಪಡೆದ ಜ್ಞಾನವನ್ನು ಮಕ್ಕಳಿಗೆ ನೀಡಲು ನಿರ್ಧರಿಸಿ ಟ್ಯೂಷನ್ ಹೇಳಲು ಪ್ರಾರಂಭಿಸಿದರು . ಬರುವ ಮಕ್ಕಳಲ್ಲಿ ಅನೇಕ ಮಕ್ಕಳು ಬಡ ಕುಟುಂಬದಿಂದ ಬಂದವರಾಗಿರುತ್ತಿದ್ದರು. ಫ್ರೀ ಕೊಡಲು ಸಹ ಅವರಿಗೆ ಆಗುತ್ತಿರಲಿಲ್ಲ ಆದರೆ ಆ ಬಡ ಮಕ್ಕಳ ಕಲಿಯುವ ಉತ್ಸಾಹವನ್ನು ನೋಡಿ ಅವರಿಗೆ ಉಚಿತವಾಗಿ ಟ್ಯೂಷನ್  ಹೇಳತೊಡಗಿದರು. ಅನುಕೂಲಸ್ಥರ ಮಕ್ಕಳು ಫೀ ಕೊಟ್ಟು ಕಲಿಯುತ್ತಿದ್ದರು. ಆದರೆ ಬಡ ಮಕ್ಕಳ ಸಂಖ್ಯೆಯೇ ಹೆಚ್ಚಿರುವುದರಿಂದ ಬರ ಬರುತ್ತ ಎಲ್ಲರಿಗೂ ಉಚಿತವಾಗಿಯೇ ಅವರು ಪಾಠ ಹೇಳಲು ಮನಸ್ಸು ಮಾಡಿದರು. ಅವರ ಈ ನಿಸ್ವಾರ್ಥ ಸೇವೆಯ ವಿಷಯ ಗೊತ್ತಾಗಿ ಅನೇಕ ಬಡ ಕುಟುಂಬದ ಮಕ್ಕಳು ಹೆಚ್ಚು ಬರತೊಡಗಿದರು ಆಗ ಇವರಿಗೆ ಹೊಳೆದದ್ದು ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಬೇಕೆಂದು. ಪ್ರಾರಂಭದಲ್ಲಿ 11 ಮಕ್ಕಳಿಂದ ಶುರುವಾದ ಈ ಶಾಲೆಯಲ್ಲಿ ಈಗ 500 ಮಕ್ಕಳು ಓದುತ್ತಿದ್ದಾರೆ. ಶಿಕ್ಷಣದ ಜೊತೆ ಜೊತೆಗೆ ಅವರಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕೂಡ ಕಲ್ಪಿಸಿದರು. ಇವೆಲ್ಲದರ ಪರಿಣಾಮವಾಗಿ 2007ರಲ್ಲಿ ,”ವಿಜಯಲಕ್ಷ್ಮಿ, ಎಜುಕೇಶನ್ ಮತ್ತು ವೆಲ್ಫೇರ್ ಸೊಸೈಟಿ “ಎಂಬ ಟ್ರಸ್ಟನ್ನು ಸ್ಥಾಪಿಸಿದರು.

ಅನಾಥ ಮಕ್ಕಳ ಆಶ್ರಮ


ಉಚಿತ ಶಿಕ್ಷಣ ಹಾಗೂ ಅನ್ನ ದಾಸೋಹದ ಕುರಿತು ಎಲ್ಲೆಡೆ ಸುದ್ದಿ ಆಯಿತು. ಅವರು ಅನಾಥಾಶ್ರಮ ಪ್ರಾರಂಭಿಸಲು ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಅವರ ಮಾತಿನಲ್ಲಿ ಹೇಳುವುದಾದರೆ,”ಒಮ್ಮೆ ಹಳ್ಳಿಯ ಹುಡುಗನೊಬ್ಬನನ್ನು ಕರೆದುಕೊಂಡು ಯಾರೋ ಒಬ್ಬರು ಬಂದು ಅನಾಥ ಮಗು ಯಾರು ಇಲ್ಲ ಇವನನ್ನು ತಾವು ತಮ್ಮ ಶಾಲೆಗೆ ಸೇರಿಸಿಕೊಂಡರೆ ಅನುಕೂಲವಾಗುತ್ತೆ ಆ ಮಗುವಿಗೆ ಶಿಕ್ಷಣ ದೊರಕುತ್ತದೆ ಎಂದಾಗ ಆ ಮಗುವಿನ ಬಗ್ಗೆ ಪೂರ್ವಾಪರ ಎಲ್ಲ ವಿಚಾರಿಸಿ ನನ್ನ ಶಾಲೆಗೆ ಸೇರಿಸಿಕೊಂಡೆ ಆ ಮಗುವಿನ ಕಥೆ ಕೇಳಿದ ಮೇಲೆ ನನಗನಿಸಿದ್ದು ಅನಾಥ ಮಕ್ಕಳು ತಂದೆ ತಾಯಿಯ ಪ್ರೀತಿ ಸಿಗದೇ ಅನಾಥ ಪ್ರಜ್ಞೆಯನ್ನ ಅನುಭವಿಸುತ್ತಾರೆ ಅಂತ ಮಕ್ಕಳಿಗೆ ನಾನೇಕೆ ತಾಯಿಯ ಪ್ರೀತಿಯನ್ನು ಕೊಡಬಾರದು.
ಎಂದೆನಿಸಿ, ಈ ಅನಾಥ ಆಶ್ರಮವನ್ನು ಪ್ರಾರಂಭಿಸಿದೆ ಎನ್ನುತ್ತಾರೆ” ಈಗ ಈ ಆಶ್ರಮದಲ್ಲಿ 31 ಮಕ್ಕಳಿದ್ದಾರೆ, ಇವರಲ್ಲಿ ದುಡಿಯಲು ಬೇರೆ ಬೇರೆ ರಾಜ್ಯಗಳಿಗೆ ಹೋದವರ ಮಕ್ಕಳು, ಚಿಂದಿ ಆಯುವವರ ಮಕ್ಕಳು, ಬಡತನದಿಂದ ಮಕ್ಕಳನ್ನು ಸಾಕಲು ಕಷ್ಟ ಪಡುತ್ತಿರುವವರ ಮಕ್ಕಳು ಕೂಲಿಕಾರ್ಮಿಕರ ಮಕ್ಕಳು, ಅಷ್ಟೇ ಅಲ್ಲ ಮಗುವನ್ನು ಹೆತ್ತು ಬಿಟ್ಟು ಹೋದವರ ಮಕ್ಕಳು ಇದ್ದಾರೆ ಅಂತ ಅತ್ಯಂತ ನೋವಿನಿಂದ ಹೇಳುತ್ತಾರೆ.  ಅಂತಹ ಮಕ್ಕಳಿಗೆ ತಾಯಿಯಾಗಿ ಪ್ರೀತಿ ವಾತ್ಸಲ್ಯವನ್ನು ಕೊಟ್ಟು ಬೆಳೆಸಿದ್ದಾರೆ. 31 ಮಕ್ಕಳನ್ನು ದತ್ತು ಪಡೆದು ಅವರಿಗೆ ತಾಯಿಯ ಪ್ರೀತಿ ವಾತ್ಸಲ್ಯವನ್ನು ಧಾರೆ ಎರೆದಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು” ಮಕ್ಕಳ ತೆರೆದ ತಂಗುದಾಣ “ಯೋಜನೆ ಸೌಲಭ್ಯವನ್ನು ಒದಗಿಸಿದ್ದಾರೆ.ಇವರ ಸಮಾಜಮುಖಿ ಕಾರ್ಯ ಇನ್ನು ಮುಂದುವರೆದು ವೃದ್ಧಾಶ್ರಮಕ್ಕೆ ವಿಸ್ತಾರಗೊಂಡಿತು.

ಸ್ವಾಮಿ ವಿವೇಕಾನಂದ ವೃದ್ಧಾಶ್ರಮ


ಸ್ವಭಾವತಹ ಮಾತೃ ಹೃದಯ ಉಳ್ಳವರು ಆದ ಇವರು ವೃದ್ದಾಶ್ರಮದ ಸ್ಥಾಪನೆಯ ವಿಚಾರವಾಗಿ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಒಮ್ಮೆ ಧಾರವಾಡದ ಸಲಕಿನ ಕೊಪ್ಪದ ವೃದ್ಧಾಶ್ರಮಕ್ಕೆ ಭೇಟಿ ನೀಡುವ ಭಾಗ್ಯ ನನಗೆ ಒದಗಿ ಬಂತು. ಅಲ್ಲಿ ಅನೇಕ ವೃದ್ಧರು (ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು) ತಾವು ಬಾಳಿ ಬದುಕಿದ ಮತ್ತು ಇಂದಿನ ತಮ್ಮ ಸ್ಥಿತಿಯ ಕುರಿತಾಗಿ ಕರುಣಾಜನಕ ಕಥೆಯನ್ನ ಬಿಚ್ಚಿಟ್ಟರು.ಅವರಲ್ಲಿ ಶ್ರೀಮತಿ ಶಕುಂತಲಾ ಕುರ್ತುಕೋಟಿ (ಸ್ವಾತಂತ್ರ್ಯ ಹೋರಾಟಗಾರರು) ಆ ತಾಯಿ ಬಂದು ನನ್ನ ತಲೆ ಸವರಿ ನಿನ್ನಲ್ಲಿ ನನ್ನ ಮಗಳನ್ನು ಕಾಣುತ್ತೇನೆ ಎಂದರು.ಮತ್ತೊಬ್ಬರು ವೃದ್ದರಾದ ಶ್ರೀ ಹಳಕಟ್ಟಿ ಅವರು,( 90 ವರ್ಷ) ಕುರ್ಚಿಯಿಂದ ಎದ್ದು ನನಗೆ ನಮಸ್ಕಾರ ಮಾಡಿದರು. ಅಜ್ಜ ನೀವು ನನಗೆ ನಮಸ್ಕಾರ ಮಾಡಬಾರದು ಆಶೀರ್ವಾದ ಮಾಡಬೇಕು ಎಂದಾಗ ಅಜ್ಜನವರ ಹೃದಯ ತುಂಬಿ ಬಂತು. ನಿನ್ನಲ್ಲಿ ಏನೋ ಒಂದು ಶಕ್ತಿ ಇದೆ ಎನಿಸಿತು ನಿನ್ನಿಂದ ಒಂದು ಮಹತ್ಕಾರ್ಯ ಜರುಗುತ್ತದೆ ಎಂದು ನನಗೆ ಆಶೀರ್ವಾದ ಮಾಡಿದರು. ಅವರ ಮಾತಿನಿಂದ ನನ್ನಲ್ಲಿ ಏನೋ ಒಂದು ಹೊಸ ಚೈತನ್ಯ ತುಂಬಿಕೊಂಡಿತು. ವೃದ್ಧಾಶ್ರಮದ ಕನಸಿಗೆ ಸ್ಪೂರ್ತಿಯಾದವರು ಶ್ರೀಮತಿ ಶಕುಂತಲಾ ಕುರ್ತುಕೋಟಿ ಮತ್ತು ಶ್ರೀ ಹಳಕಟ್ಟಿ ಅಜ್ಜನವರು ಎಂದು ಅತ್ಯಂತ ಭಾವಕರಾಗಿ ಹೇಳುತ್ತಾರೆ. ಈಗ ಆಶ್ರಮದಲ್ಲಿ 8 ಜನ ಹೆಣ್ಣು ಮಕ್ಕಳು 12 ಜನ ಜನ ಗಂಡು ಮಕ್ಕಳು 70 ವರ್ಷದಿಂದ ಹಿಡಿದು 90ರ ಆಸುಪಾಸಿನ ವಯೋವೃದ್ದರು ನಮ್ಮ ಆಶ್ರಮದಲ್ಲಿದ್ದಾರೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳುತ್ತಾರೆ. ಆಪ್ತವಾದ ಅವರ ಮಾತುಗಳಲ್ಲಿ ಒಂದು ಭರವಸೆಯ ತೃಪ್ತ ಭಾವ ಕಾಣುತ್ತದೆ

ಯಜಮಾನರು ತೀರಿದ ಬಳಿಕ ಅವರ ಪೆನ್ಷನ್ ಹಣವನ್ನು ಟ್ರಸ್ಟಿಗೆ ವಿನಯೋಗಿಸುತ್ತಾರೆ. ಅದು ಅವರ ಯಜಮಾನರ ಆಸೆಯೂ ಆಗಿತ್ತು. ಇಬ್ಬರು ಗಂಡು ಮಕ್ಕಳು ಒಬ್ಬ ಮಗ ಇಂಜಿನಿಯರ್, ಅವರು ತಮ್ಮ ಸಂಬಳದ ಶೇಕಡ 25ರಷ್ಟನ್ನು ತಾಯಿಯ ಈ ಸೇವೆಗೆ ಕೊಡುತ್ತಾರೆ. ಮತ್ತೊಬ್ಬ ಮಗ ತಾಯಿಯೊಂದಿಗೆ ಕೈಜೋಡಿಸಿ ಟ್ರಸ್ಟಿನ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಸರಕಾರದ ಅನುದಾನವಿಲ್ಲದೆ, ಆಸಕ್ತ ದಾನಿಗಳು ಸಹಾಯ ಮಾಡಲು ಮುಂದಾದಾಗ ನಿರಾಕರಿಸುವುದಿಲ್ಲ.
ಯಾವುದೇ ಒಂದು ಮಹತ್ವದ ಕಾರ್ಯ ಜರುಗಬೇಕಾದರೆ ಸಾಧನೆಯ ಮಾರ್ಗದಲ್ಲಿ ನಡೆಯಬೇಕಾದ ಹೊತ್ತಿನಲ್ಲಿ ಮನೆಯ ಸಂಸ್ಕಾರ ಬಹಳ ಮುಖ್ಯವಾಗುತ್ತದೆ.ತಂದೆ ಪೊಲೀಸ್ ಇಲಾಖೆಯಲ್ಲಿದ್ದರೂ ಮೃದು ಮನಸ್ಸಿನವರು. ಬಡವರ ನಿರ್ಗತಿಕರ ಬಗ್ಗೆ ಕರುಣಾಭಾವ ಹೊಂದಿದವರು. ಅನ್ನದಾನಿಗಳು. ತಾಯಿಯು ಅಷ್ಟೇ, ಯಾರೇ ಸಹಾಯ ಬೇಡಿ ಬಂದಾಗ ಅವರೆಂದು ನಿರಾಕರಿಸಿದವರಲ್ಲ. ಇಂತಹ ಸಂಸ್ಕಾರ ಹೊಂದಿದ ಕುಟುಂಬದಿಂದ ಬಂದ ವಿಜಯ ಅವರು ಸಹಜವಾಗಿಯೇ ಆ ಗುಣಗಳನ್ನು ಅಳವಡಿಸಿಕೊಂಡವರು.

       ಮಾಡಿದೆನೆಂಬುದು ಮನದಲ್ಲಿ ಹೊಳೆದರೆ
       ಏಡಿಸಿ ಕಾಡಿತ್ತು ಶಿವನ ಡಂಗುರ
       ಮಾಡಿದೆನೆನ್ನದಿರ ಲಿಂಗಕ್ಕೆ
       ಮಾಡಿದೆನೆನ್ನದಿರ ಜಂಗಮಕ್ಕೆ
       ಮಾಡಿದೆನೆಂಬುದು ಮನದಲ್ಲಿ ಇಲ್ಲದಿದ್ದರೆ
       ಬೇಡಿದನೀವ ಕೂಡಲಸಂಗಮದೇವ


       ಎಂಬ ಬಸವಣ್ಣನವರ ವಚನದಂತೆ ಎಲೆ ಮರೆಯ     ಕಾಯಿಯಂತೆ, ಭೂಮಿಯೊಳಗಿನ ನಿಧಾನದಂತೆ, ಸಮಾಜ ಸೇವೆ ಮಾಡುವ ವಿಜಯ ಅಮ್ಮನವರು ಸದ್ದಿಲ್ಲದೆ ಸುದ್ದಿಯಾದವರು.
ಬದುಕಿನ ಹಲವಾರು ಹಳವಂಡಗಳಿಂದ ರೋಸಿ ಹೋದವರ ಮನಸ್ಸಿಗೆ ಸಾಂತ್ವಾನ ನೀಡುವ ಮಮತಾಮಯಿ, ತಾಯಿಯ ಮುಖವನ್ನೇ ಕಾಣದ, ಈಕೆ ನನ್ನ ತಾಯಿ ಎನ್ನುವ ಮಗುವಿನ ಹಂಬಲವನ್ನು
ನೀಗಿಸಿ ಮಮತೆಯ ಮಡಿಲ ತೊಟ್ಟಲವನ್ನು ತೂಗಿದಾಕೆ ಈ ತಾಯಿ.
ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸ ಬಯಸುವ ಮಕ್ಕಳಿರುವ ಇಂದಿನ ದಿನಗಳಲ್ಲಿ ಯಾವ ಪ್ರತಿಫಲಾಪೇಕ್ಷೆಯನ್ನು ನಿರೀಕ್ಷಿಸದೆ ವೃದ್ಧರನ್ನು ನೋಡಿಕೊಳ್ಳಬೇಕೆಂಬ ಅವರ ಹಂಬಲ,ಮನದಾಸೆ, ಪ್ರೀತಿ, ಒಲವು,  ಬೆಲೆಕಟ್ಟಲಾಗದು.
ಅವರ ಬದುಕಿನ ಜೀವನ್ಮುಖಿ ಕಾರ್ಯಗಳು ಸಮಾಜದಲ್ಲಿ ಮಾದರಿಯಾಗಿ ನಿಲ್ಲುವಂತಹವು.

ಗೌರವ ಸನ್ಮಾನಗಳು
ಇವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಸಂದ ಗೌರವ ಪ್ರಶಸ್ತಿಗಳು ಹಲವಾರು
.

ಗುರುಕುಲ ಚಕ್ರವರ್ತಿ 2017
 ಗುರು ಬಸವ ಮಾಚಿದೇವ ರಾಜ್ಯ ಪ್ರಶಸ್ತಿ 2017
 ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಸಮುದಾಯಗಳ ಒಕ್ಕೂಟ ಬಸವ ಶ್ರೀ ರಾಜ್ಯ ಪ್ರಶಸ್ತಿ 2017
 ಚಂದನ ವಾಹಿನಿಯಲ್ಲಿ “ಮಹಿಳಾ ಸಾಧಕಿ ಎಂದು ಇವರು ನಡೆದು ಬಂದ ದಾರಿ “ ಪ್ರಸಾರ 2018
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯೋತ್ಸವ ಪ್ರಶಸ್ತಿ 2018
ಅಕ್ಕ ಪ್ರತಿಷ್ಠಾನ ರಂಗಂಪೇಟೆ ಅಕ್ಕ ಪ್ರಶಸ್ತಿ 2019
ರಾಣಿ ಚೆನ್ನಮ್ಮ ವಿದ್ಯಾವರ್ಧಕ ಸಂಘದಿಂದ ರಾಣಿ ಚೆನ್ನಮ್ಮ ಪ್ರಶಸ್ತಿ 2020
ಕರ್ನಾಟಕ ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ 2023
ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2023


ಇನ್ನೂ ಹಲವಾರು ಸಂಘ ಸಂಸ್ಥೆಗಳು ಇವರ ಸಾಧನೆಯನ್ನ ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ.
ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಇಂಥವರ ಸೇವೆಯನ್ನು ಗುರುತಿಸುವುದು ಹಾಗೂ ಸ್ಮರಿಸುವುದು ಒಂದು ಹೆಮ್ಮೆಯ ಸಂಗತಿ.
ತಾವು ಮಾಡಿದ ಅನನ್ಯ ಸೇವೆಗೆ ಒಂದು ಹ್ಯಾಟ್ಸಾಫ್ ವಿಜಯಾ ಅಮ್ಮನವರಿಗೆ.


Leave a Reply

Back To Top