ಪುಸ್ತಕ ಸಂಗಾತಿ
ಅನಸೂಯ ಜಹಗೀರದಾರ
ಅವರ ಕಥಾಸಂಕಲನ
‘ಪರಿವರ್ತನೆ’ಗೆ
ಕೇಶವರೆಡ್ಡಿ ಹಂದ್ರಾಳ ಬರೆದ ಮುನ್ನುಡಿ
ಪರಿವರ್ತನೆ-ಕಥಾಸಂಕಲನ
ಲೇ-ಅನಸೂಯ ಜಹಗೀರದಾರ
ಗುರುಪ್ರಕಾಶನ
ಕೋಟೆ ಕೊಪ್ಪಳ-583231
ಮೊ.ನಂ:9449310955
ಬೆಲೆ:120 ರೂ..
ಸರಳ ಸುಂದರ ಕಥೆಗಳು
ಕಥೆ, ಕವಿತೆ, ಕಾದಂಬರಿ, ಪ್ರಬಂಧ, ಆತ್ಮಚರಿತ್ರೆ ಮುಂತಾದ ಪ್ರಕಾರಗಳನ್ನು ಒಳಗೊಂಡ ಸಾಹಿತ್ಯ ಕೃಷಿ ಕನ್ನಡದಲ್ಲಿ ಪ್ರಸ್ತುತ ವಿಫುಲವಾಗಿ ನಡೆಯುತ್ತಿದೆ. ಕೆಲವು ದಶಕಗಳ ಹಿಂದೆ ಸಾಹಿತ್ಯ ವಲಯದ ಆಧಿಪತ್ಯವನ್ನು ಅಕಾಡೆಮಿಕ್ ವಲಯ ಸಾಧಿಸಿತ್ತು. ಆಗಲೂ ನಾನ್ ಅಕಾಡೆಮಿಕ್ ವಲಯದ ಸಾಹಿತಿಗಳು ಗಮನಾರ್ಹವಾದ ಸಾಹಿತ್ಯ ಸಾಧನೆಯನ್ನು ಮಾಡುತ್ತಿದ್ದದ್ದು ಸುಳ್ಳೇನಲ್ಲ. ಹಾಗೆ ನೋಡಿದರೆ ಯಶವಂತ ಚಿತ್ತಾಲ, ಪೂರ್ಣಚಂದ್ರ ತೇಜಸ್ವಿ ಶಿವರಾಮ ಕಾರಂತ, ಡಾಕ್ಟರ್ ಬೆಸಗರಹಳ್ಳಿ ರಾಮಣ್ಣ ನಾ. ಡಿಸೋಜ ಮುಂತಾದ ಇನ್ನೂ ಅನೇಕ ಸಾಹಿತಿಗಳು ಅಕಾಡೆಮಿಕ್ ವಲಯದ ಸಾಹಿತಿಗಳಿಗಿಂತಲೂ ಗಟ್ಟಿಯಾದ ಸಾಹಿತ್ಯವನ್ನು ರಚಿಸಿರುವ ವಾಸ್ತವ ಸಂಗತಿ ನಮ್ಮ ಮುಂದಿದೆ. ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಓದಿನ ಗೀಳನ್ನು ಜನಸಾಮಾನ್ಯರಲ್ಲಿ ಹಚ್ಚಿದ್ದು ಎನ್ ನರಸಿಂಹಯ್ಯ ಜಿಂದೆ ನಂಜುಂಡಸ್ವಾಮಿ ಟಿ.ಕೆ.ರಾಮರಾವ್ ಮುಂತಾದ ಪತ್ತೆದಾರಿ ಕಾದಂಬರಿಕಾರರು.. ! ಮಹಿಳಾ ಓದುಗರನ್ನು ತ್ರಿವೇಣಿ, ಎಂ. ಕೆ ಇಂದಿರಾ, ಈಚನೂರು ಸಹೋದರಿಯರು ಮುಂತಾದವರು ತಮ್ಮ ಕಥೆ ಕಾದಂಬರಿಗಳ ಮೂಲಕ ಸೆಳೆದು ಓದಿನ ಅಭಿರುಚಿ ಬೆಳೆಸಿದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಬೇಕಾದ ಸಂಗತಿಗಳೇ ಸರಿ. ಕ್ರಮೇಣ ಅಕಾಡೆಮಿಕ್ ವಲಯದ ದಟ್ಟವಾದ ಸಾಹಿತ್ಯ ರಾಜಕಾರಣದ ನಡುವೆಯೂ ಸಾಹಿತ್ಯ ಕೃಷಿಯಲ್ಲಿ ನಾನ್ ಅಕಾಡೆಮಿಕ್ ವಲಯದ ಬರಹಗಾರರ ಪಾಲ್ಗೊಳ್ಳುವಿಕೆ ಯಶಸ್ವಿಯಾಗಿ ಸಾಗಿತು.
ಈಗಂತೂ ಸಾಫ್ಟ್ವೇರ್ ಉದ್ಯೋಗಿಗಳು, ಡಾಕ್ಟರುಗಳು, ಪ್ರೈಮರಿಸ್ಕೂಲಿನಿಂದ ಹಿಡಿದು ಹೈಸ್ಕೂಲುವರೆಗಿನ ಅಧ್ಯಾಪಕರು, ವಿವಿಧ ಸರ್ಕಾರಿ ಇಲಾಖೆಯ ನೌಕರರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಸ್ತೃತವಾಗಿ ತೊಡಗಿಸಿಕೊಂಡಿರುವುದು ಪ್ರಕಟಗೊಂಡಿರುವ ಸತ್ಯವೇ ಆಗಿದೆ. ನಾನ್ ಅಕಾಡೆಮಿಕ್ ಬರಹಗಾರರು ವ್ಯವಸ್ಥೆಯ ವೈವಿಧ್ಯಮಯವಾದ ಅನುಭವಗಳನ್ನು ದಕ್ಕಿಸಿಕೊಂಡು ಬರೆಯುವುದರಿಂದ ಅವರ ಸಾಹಿತ್ಯದಲ್ಲಿ ಅಕಾಡೆಮಿಕ್ ಸಾಹಿತಿಗಳ ಸಾಹಿತ್ಯಕ್ಕೆ ಹೋಲಿಸಿದರೆ ಹೊಸತನ, ಲವಲವಿಕೆ, ಭಾಷೆಯ ಹೊಸ ಆಯಾಮ ಇತ್ಯಾದಿಗಳನ್ನು ಢಾಳಾಗಿ ಕಾಣಬಹುದಾಗಿದೆ. ವಿಶ್ವವಿದ್ಯಾಲಯಗಳ ಬರಹಗಾರರ ಸಾಹಿತ್ಯದಲ್ಲಿದ್ದ ಏಕತಾನತೆಯ ಕೋಶಗಳು ಇದರಿಂದ ಮುರಿದುಬಿದ್ದಂತಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ಇಂದು ಪುರುಷ ಬರಹಗಾರರಿಗಿಂತಲೂ ಮಹಿಳಾ ಬರಹಗಾರ್ತಿಯರು ಮೇಲುಗೈ ಸಾಧಿಸಿದ್ದಾರೆಂದೇ ಹೇಳಬಹುದು.ಇದು ಕನ್ನಡ ಸಾಹಿತ್ಯದ ಮಟ್ಟಿಗೆ ಆರೋಗ್ಯಕರವಾದ ಮತ್ತು ಉತ್ತಮವಾದ ಬೆಳವಣಿಗೆಯೇ.
ಈ ಸಂದರ್ಭದಲ್ಲಿ ಲೇಖಕಿ ಶ್ರೀಮತಿ ಅನಸೂಯ ಜಹಗೀರದಾರವರು ತಮ್ಮ *ಪರಿವರ್ತನೆ*ಎಂಬ ಕಥಾ ಸಂಕಲನಕ್ಕೆ ಮುನ್ನುಡಿ ಬರೆದುಕೊಡಲು ಕೇಳಿರುವುದು ನನಗೆ ಮುಜುಗರಕ್ಕೀಡುಮಾಡಿದೆ. ಸಾವಿರದ ಒಂಬೈನೂರ ಎಂಬತ್ತನಾಲ್ಕರಿಂದಲೂ ಕನ್ನಡ ಕಥನ ಕೃಷಿಯಲ್ಲಿ ತೊಡಗಿದ್ದರೂ ಕಥೆಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ನೋಡುವ ವಿದ್ಯೆ ನನಗೆ ಅಂಟಿ ಬಂದಿಲ್ಲ. ಕನ್ನಡದ ಕಥಾ ವಿಮರ್ಶೆ ಕೂಡಾ ಕಥಾಕ್ಷೇತ್ರಕ್ಕೆ ವಿಮರ್ಶೆಯಲ್ಲಿ ನ್ಯಾಯ ಒದಗಿಸಿಲ್ಲವೆಂದು ಧೈರ್ಯವಾಗಿ ಹೇಳಬಲ್ಲೆ. ಕಥನ ಪ್ರಕಾರವೇನು.. ಸಾಹಿತ್ಯದ ಎಲ್ಲಾ ಪ್ರಕಾರಗಳ ವಿಮರ್ಶೆ ಸಹ ಕೊಟ್ಟು ಪಡೆದುಕೊಳ್ಳುವ ಕ್ರಿಯೆಯಾಗಿಯೇ ಉಳಿದಿದೆ. ವ್ಯಕ್ತಿ ಕೇಂದ್ರಿತವಾಗಿ, ಪೂರ್ವ ನಿರ್ಧರಿತವಾಗಿ ಇಲ್ಲಿ ವಿಮರ್ಶೆಗಳು ನಡೆಯುತ್ತಿವೆಯೋ ಹೊರತು ವಸ್ತುನಿಷ್ಠೆಯಿಂದ ಒಡಮೂಡಿದ ವಿಮರ್ಶೆ ಕನ್ನಡದಲ್ಲಿ ಬಹಳ ವಿರಳವೆಂದೇ ಹೇಳಬಹುದು. ಆ ದೃಷ್ಟಿಯಿಂದ ನಾನು ಶ್ರೀಮತಿ ಅನಸೂಯ ಜಹಗೀರದಾರರವರ ಸಂಕಲನಕ್ಕೆ ಆಶಯ ನುಡಿಗಳನ್ನು ಬರೆಯುತ್ತಿರುವೆನೆಂದು ಹೇಳಬಯಸುತ್ತೇನೆ.
ಪ್ರೌಡಶಾಲೆಯಲ್ಲಿ ಶಿಕ್ಷಕಿಯಾಗಿರುವ ಅನಸೂಯರವರದು ಬಹುಮುಖ ಪ್ರತಿಭೆ. ಕವಯಿತ್ರಿ ಮತ್ತು ಕಥೆಗಾರ್ತಿಯಾಗಿರುವುದರ ಜೊತೆಗೆ ಹಿಂದೂಸ್ತಾನಿ ಸಂಗೀತ ಕಲಾವಿದರು ಸಹ ಆಗಿದ್ದಾರೆ. ಕನ್ನಡ ಸಂಘಟನೆಯಲ್ಲೂ ಕೈ ಜೋಡಿಸಿದ್ದಾರೆ.ಕವನ ಸಂಕಲನ, ಗಜಲ್ ಸಂಕಲನ ಮತ್ತು ಕಥಾಸಂಕಲನಗಳ ಕರ್ತೃ ಆಗಿರುವರಲ್ಲದೆ ಅನೇಕ ಪ್ರಶಸ್ತಿ ಮತ್ತು ಸಾಹಿತ್ತಿಕ ಗೌರವಗಳಿಗೂ ಭಾಜನರಾಗಿದ್ದಾರೆ.
ಈ ದೃಷ್ಟಿಯಿಂದ ಕುತೂಹಲದಿಂದಲೇ ಈ ಸಂಕಲನದ ಎಲ್ಲಾ ಕಥೆಗಳನ್ನು ಓದಿದಾಗ ಅನಸೂಯರವರು ಸೂಕ್ಷ್ಮ ಮತ್ತು ಚಿಕಿತ್ಸಕ ದೃಷ್ಟಿಯಿಂದಲೇ ಸಮಾಜವನ್ನು ಗಮನಿಸುವ ಅಂಶ ಅವರ ಕಥೆಗಳಲ್ಲಿ ಬಯಲಾಗುತ್ತದೆ. ಅನಸೂಯರವರು ಶಿಕ್ಷಕಿಯೂ ಆಗಿರುವುದರಿಂದ ಸುತ್ತಲಿನ ಪರಿಸರದ ವಿಸ್ತಾರವಾದ ಗ್ರಹಿಕೆಯನ್ನು ದಕ್ಕಿಸಿಕೊಂಡಿರುವುದು ಕಥೆಗಳಲ್ಲಿ ಅನಾವರಣಗೊಂಡಿದೆ.ಕೌಟುಂಬಿಕ ತಾಪತ್ರಯಗಳು,ಆರ್ಥಿಕ ಕ್ಷೋಭೆ, ಹೆಣ್ಣು ಗಂಡುಗಳ ನಡುವಿನ ದೈಹಿಕ ಮತ್ತು ಭಾವನಾತ್ಮಕ ಸಂಬಂಧಗಳು, ಗೆಳೆತನದ ಬಂಧ ಮುಂತಾದ ಅಂಶಗಳು ಕಥಾ ಹಂದರಗಳಾಗಿ ಒಂದು ರೀತಿಯ ಸಮಾಜಮುಖಿ ಚಿಂತನೆ ಕಥೆಗಳಲ್ಲಿ ಹಾಸುಹೊಕ್ಕಾಗಿದೆ. ಸರಳವಾಗಿ ಕಥೆ ಹೇಳುವ ಕಲೆಯನ್ನು ಲೇಖಕಿ ರೂಢಿಸಿಕೊಂಡಿರುವುದರಿಂದ ಕಥೆಗಳ ಓದು ಎಲ್ಲೂ ಕಠಿಣವೆನಿಸುವುದಿಲ್ಲ ಅಥವಾ ಸಂಕೀರ್ಣವೆನಿಸುವುದಿಲ್ಲ. ಇಲ್ಲಿನ ಬಹಳಷ್ಟು ಕಥೆಗಳು ಕುಟುಂಬದ ಪರಿಧಿಯಲ್ಲಿ ನಡೆಯುತ್ತವೆಯಾದರೂ ಅವು ಕ್ರಮೇಣ ವ್ಯವಸ್ಥೆಯ ನಾನಾ ಸ್ತರಗಳ ಜಾಡುಗಳಿಗೆ ಇಳಿದುಬಿಡುತ್ತವೆ. ಮತ್ತು ವ್ಯವಸ್ಥೆಯ ನಾನಾ ಬಗೆಯ ವಿನ್ಯಾಸಗಳನ್ನು
ಅನಾವರಣಗೊಳಿಸುತ್ತವೆ.
ಸಂಕಲನದ ಶೀರ್ಷಿಕೆಯ ಕಥೆ ಓದುತ್ತಿದ್ದಂತೆ ಸಂಕಲನದಲ್ಲಿನ ಎಲ್ಲಾ ಕಥೆಗಳ ಆಶಯ ಸ್ಪಷ್ಟವಾಗಿಬಿಡುತ್ತದೆ. ಪ್ರಾಚೀನ ಕಾಲದಿಂದಲೂ ಮಾನವ ಸಮಾಜ ಬದಲಾವಣೆಗಳಿಗೆ ಅಂದರೆ ಪರಿವರ್ತನೆಗಳಿಗೆ ತೆರೆದುಕೊಂಡೇ ಸಾಗಿದೆ. ಒಂದು ಕುಟುಂಬದ ತಾಯಿ ಮತ್ತು ಮಗನ ನಡುವೆ ನಡೆಯುವ ಸಂವಾದದ ಈ ಕಥೆ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಕೆಲಸವನ್ನೂ ಸದ್ದುಗದ್ದಲವಿಲ್ಲದೆ ಮಾಡುತ್ತದೆ. ಕಥೆಯಲ್ಲಿ ಗಂಡನಿಂದ ಪರಿತ್ಯಕ್ತೆಯಾದ ನರಸಮ್ಮನ ಮಗ ಶರಣ ತಾಯಿಯ ಮಾತನ್ನು ಮೀರಿ ಗೌಡರ ಮಗಳ ಪ್ರೀತಿಯನ್ನೂ ನಿರಾಕರಿಸಿ ವಿಧವೆಯನ್ನು ಮದುವೆಯಾಗಿ ತಾಯಿಯ ಕೋಪಕ್ಕೆ ಗುರಿಯಾಗುತ್ತಾನೆ. ಕಡೆಗೆ ತಾನು ಏಕೆ ಹಾಗೆ ಮಾಡಬೇಕಾಯಿತೆಂದು ತಾಯಿಗೆ ಮನವರಿಕೆ ಮಾಡಿಕೊಟ್ಟು ಮತ್ತೆ ತಾಯಿಯ ಪ್ರೀತಿಯನ್ನು ಗಳಿಸುತ್ತಾನೆ. ಇಲ್ಲಿ ಶರಣ ತಾಯಿಯ ಮನಃ ಪರಿವರ್ತನೆ ಮಾಡುವುದು ಸಮಾಜದ ಪರಿವರ್ತನೆ ಎಂಬುದು ಸೊಗಸಾಗಿ ಬಿಂಬಿತವಾಗಿದೆ. ಇಲ್ಲಿ ಬಂಡಾಯ ಯಾವುದೇ ಅಬ್ಬರಗಳಿಲ್ಲದೆ ಮೈತುಂಬಿಕೊಂಡಿದೆ. ಕನ್ನಡದ ಪ್ರಮುಖ ಬಂಡಾಯ ಕಥೆಗಳ ಸಾಲಿನಲ್ಲಿ ಈ ಕಥೆಯನ್ನು ನಿಲ್ಲಿಸಬಹುದು.
ಮಹಾಭಾರತದ ದುರ್ಯೋಧನ ಮತ್ತು ಕರ್ಣನ ಪಾತ್ರಗಳ ಗಾಢ ಮತ್ತು ನಿಶ್ಕಲ್ಮಷ ಗೆಳೆತನದ ಎಳೆಯನ್ಶಿಟ್ಟಃಕೊಂಡು ಪ್ರಸ್ತುತ ಕಾಲದ ಗೆಳೆಯರಿಬ್ಬರ ನಡುವೆ ಹೆಣೆದಿರುವ ಕಥ ‘ಗೆಳೆತನದಾಲದಡಿಯಲ್ಲಿ’
ಒಂದು ಕುತೂಹಲಭರಿತವಾದ ಕಥೆಯಾಗಿದೆ. ಕಥೆ ಓದುತ್ತಾ ಹೋದಂತೆ ಓದುಗನ ನಿರೀಕ್ಷೆ ದಾರಿತಪ್ಪಿಸುತ್ತದೆ ಒಂದು ಕ್ಷಣ. ಸುಯೋಧ, ಸೂರಜ್ ಮತ್ತು ಸುಯೋಧನ ಹೆಂಡತಿ ಭಾನುಮತಿಯರ ನಡುವೆ ನಡೆಯುವ ಕಥೆ ಓದುಗನಲ್ಲಿ ಕೆಟ್ಟ ಕುತೂಹಲವನ್ನು ಹುಟ್ಟಿಸಿದರೂ ಕೊನೆಗೆ ಗೆಳೆತನದ ಪವಿತ್ರತೆಯನ್ನು ಉಳಿಸಿ ಕಥೆಗೊಂದು ಘನತೆ ಉಳಿದುಕೊಳ್ಳುತ್ತದೆ. ಇದೊಂದು ಕೌಟುಂಬಿಕ ಕಥೆಯಾಗಿದ್ದು ಎಲ್ಲೋ ಒಂದಿಷ್ಟು ಪತ್ತೇದಾರಿ ಅಂಶ ಅಡಕಗೊಂಡಂತೆ ನನಗೆ ವೈಯಕ್ತಿಕವಾಗಿ ಅನ್ನಿಸಿದೆ. ಹೆಂಡತಿಯನ್ನು ಕಳೆದುಕೊಂಡ ಗಂಡನೊಬ್ಬನ ಸ್ವಗತ ‘ವಾಸ್ತವ’ ಎಂಬ ಪುಟ್ಟ ಕಥೆಯಲ್ಲಿ ಅಗಾಧವಾಗಿಯೇ ಅನಾವರಣಗೊಂಡಿದೆ.ಸದಾ ವಾಸ್ತವತೆಯಲ್ಲಿ ನಂಬಿಕೆಯಿರುವ ಹೆಂಡತಿ ಮತ್ತು ವಾಸ್ತವವನ್ನು ಮೀರಿ ಭ್ರಮೆಯಲ್ಲಿ ಬದುಕುವ ಗಂಡ ಹೆಂಡತಿಯ ನಡುವಿನ ಸಂಘರ್ಷ ಸಂವಾದ ಕೊನೆಗೆ ಹೆಂಡತಿಯ ಸಾವಲ್ಲಿ ಪರ್ಯಾಯವಸಾನಗೊಳ್ಳುತ್ತದೆ.ಇಲ್ಲಿ ಗಂಡ ಮಹಾಪರಾಧವೇನೂ ಮಾಡಿರುವುದಿಲ್ಲ.ಕಾಲ ಸಂಕಲ್ಪದಂತೆ ಹೆಂಡತಿಯ ದೇಹಾಂತ್ಯವಾಗಿದ್ದು ವಾಸ್ತವವೇ ಸ್ಥಿರವಾದದ್ದು ಎಂಬ ಸಂಗತಿ ಕಥೆಯಲ್ಲಿ ಚನ್ನಾಗಿ ಚಿತ್ರಿತವಾಗಿದೆ.ಅಂತರ್ಧರ್ಮೀಯ ಪ್ರೀತಿ ಮತ್ತು ಅದು ದಕ್ಕದೇ ಹೋದಾಗ ಉಂಟಾಗುವ ತೊಳಲಾಟ ಮತ್ತು ನೋವುಗಳನ್ನು ಅನಸೂಯರವರು ‘ಚರಿತ್ರೆಯಲ್ಲಿ ಹುದುಗಿದವರು’ ಎಂಬ ಕಥೆಯಲ್ಲಿ ಮನಕರಗುವಂತೆ ಚಿತ್ರಿಸಿದ್ದಾರೆ. ಸಲೀಂನ ಸಾವಿನ ಮೂಲಕ ಯುದ್ಧದ ಘೋರ ದುಷ್ಪರಿಣಾಮಗಳನ್ನು ಹಾಗು ಆಂತರಿಕ ಭಯೋತ್ಪಾದನೆ,ಕಲಹ ಭೀತಿಯನ್ನು,ಲೇಖಕಿ ಸಲೀಂನ ಪ್ರೀತಿ ಪಾತ್ರಳಾದ ರಜನಿಯ ಮಾನಸಿಕ ತೊಳಲಾಟಗಳ ಮೂಲಕ ಮನಕರಗುವಂತೆ ಚಿತ್ರಿಸಿದ್ದಾರೆ.ಯುದ್ಧ ಮತ್ತು ಆಂತರಿಕ ಕಲಹ ಇಡೀ ಜಗತ್ತಿನ ಒಂದು ಸಾರ್ವತ್ರಿಕ ವ್ಯಾಧಿಯಂಬಂತೆ ಚಿತ್ರಿಸಲು ಲೇಖಕಿ ಪ್ರಯತ್ನಿಸಿದ್ದಾರೆ.
ಲೇಖಕಿ ಅನಸೂಯರವರು ತಮ್ಮ ಕಥೆಗಳಲ್ಲಿ ಕೌಟುಂಬಿಕ ಸಂಬಂಧ, ಸಂವೇದನೆಗಳನ್ನು ಮನೋಜ್ಞವಾಗಿ ಕಟ್ಟಿಕೊಡಲು ಯಶಸ್ವಿಯಾಗಿದ್ದಾರೆ. ಅವರ ಬಹುತೇಕ ಕಥೆಗಳಲ್ಲಿ ಈ ‘ಬಂಧ ಅಭಿವ್ಯಕ್ತವಾಗುತ್ತದೆ಼. ಜಾಗತೀಕರಣದಿಂದಾಗಿ ಪಲ್ಲಟವಾಗುತ್ತಿರುವ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳು, ಮನುಷ್ಯನ ಭಾವನೆಗಳನ್ನು ಸಾರ್ವತ್ರಿಕವಾಗಿ ಘಾಸಿಗೊಳಿಸುತ್ತಿರುವ ವಿದ್ಯಮಾನಗಳು,ಮಾನವೀಯತೆಗೆ ಧಕ್ಕೆಯನ್ನುಂಟುಮಾಡುತ್ತಿವೆ.’ಬರಿದಾದ ಬದುಕು’ ಅಜ್ಜಿ ಮತ್ತು ಮೊಮ್ಮಗಳ ನಡುವಿನ ಸಂಬಂಧವನ್ನು ಮತ್ತು ವಿದಾಯದ ಸಂಕಟವನ್ನು ಮನಮಿಡಿಯುವಂತೆ ಚಿತ್ರಿಸುತ್ತದೆ. ಮಗುವಾಗಿದ್ದಾಗಿನಿಂದಲೂ ತನ್ನೊಂದಿಗೆ ಬೆಳೆದ ಮೊಮ್ಮಗಳು ತನ್ನ ತಂದೆ ತಾಯಿಗಳೊಂದಿಗೆ ಇರಲು ವಿದೇಶಕ್ಕೆ ಹೊರಡುವಾಗ ಮೊಮ್ಮಗಳಿಗೆ ಒಂದು ರೀತಿಯ ಖುಷಿಯಾಗುತ್ತಿದ್ದರೆ ಅಜ್ಜಿಗೆ ಭರಿಸಲಾರದಷ್ಟು ನೋವು, ಸಂಕಟಗಳಾಗುತ್ತವೆ. ಎರಡು ತಲೆಮಾರುಗಳ ನಡುವಿನ ಭಿನ್ನ ಸಂವೇದನೆಗಳು ಈ ಕಥೆಯಲ್ಲಿ ಅವಿಸ್ಮರಣೀಯವಾಗಿ ಅನಾವರಣಗೊಂಡಿವೆ.
‘ಸುಟ್ಟು ಹೋದ ಸತ್ಯ’ ಕಥೆಯು ಒಂದು ನೈಜ ಘಟನೆಯ ಸುತ್ತಲೂ ಹೆಣೆದ ಕಥೆಯಾಗಿದೆ.ಬಸ್ಸಿಗೆ ಬೆಂಕಿಬಿದ್ದು ಚಾಲಕ ಸುಟ್ಟು ಕರಕಲಾದರೆ ನಿರ್ವಾಹಕ ಬದುಕುಳಿಯುತ್ತಾನೆ.ನಂತರ ನಡೆಯುವ ಘಟನಾವಳಿಗಳು ಭಾರತದ ನಿರ್ಲಜ್ಜ ರಾಜಕಾರಣಕ್ಕೆ ಕನ್ನಡಿ ಹಿಡಿಯುತ್ತವೆ. ಹೇಗೆ ವ್ಯವಸ್ಥೆಯ ಮಧ್ಯೆ ಸತ್ಯಗಳು ಹೂತುಹೋಗುತ್ತವೆ ಎಂಬುದನ್ನು ಲೇಖಕಿ ನಿರ್ಭಿಡೆಯಿಂದ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
‘ಆ ಮುಖ’ ಕಥೆ ಕೂಡಾ ಪತ್ತೇದಾರಿ ಕಥೆಯಂತೆ ಕುತೂಹಲಕರವಾಗಿ ಸಾಗಿದರೂ ಒಂದು ಸ್ಪಷ್ಟವಾದ ಸಂದೇಶವನ್ನು ನೀಡುತ್ತದೆ. ಅದೆಂದರೆ ಮನುಷ್ಯನ ಹೊರ ಮತ್ತು ಒಳ ರೂಪಗಳು ಭಿನ್ನವಾಗಿರುತ್ತವೆ.ಸುಟ್ಟ ಮುಖದ ವ್ಯಕ್ತಿಯನ್ನು ನೋಡಿ ಸಂದೇಹ ಮತ್ತು ಗಾಬರಿಗೆ ಬೀಳುವ ನಿರೂಪಕಿ ಕಡೆಗೆ ಆತನ ಹೃದಯ ಸೌಂದರ್ಯಕ್ಕೆ ಮಾರುಹೋಗುತ್ತಾಳೆ.ಮನುಷ್ಯ ಹೊರಗೆ ಕಾಣುವಂತೆ ಒಳಗಿರುವುದಿಲ್ಲ ಎಂಬುದನ್ನು ಈ ಕಥೆ ಸೊಗಸಾಗಿ ನಿರೂಪಿಸುತ್ತದೆ. ‘ಗುಂಡಿನ ಟೆಕ್ಕಿ’ ಕೂಡಾ ಒಂದು ಕುಟುಂಬದ ದಟ್ಟವಾದ ಸಂಬಂಧ ಸಂವೇದನೆಗಳನ್ನು ಚಿತ್ರಿಸುತ್ತದೆ. ಕುಟುಂಬದ ಏಳಿಗೆಗೆ ಹಳೆ ತಲೆಮಾರಿನವರ ತ್ಯಾಗವನ್ನು ಪಾರವ್ವನ ಪಾತ್ರದ ಮೂಲಕ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ ಲೇಖಕಿ.
‘ಆ ದೃಶ್ಯ’ ಕಥೆಯಲ್ಲಿ ಎಲ್ಲವೂ ಇದ್ದು ಹೇಗೆ ಒಂದು ಹೆಣ್ಣು ಒಂಟಿತನದ ಭಾವನೆಯಲ್ಲಿ ನರಳುತ್ತಿರುತ್ತಾಳೆ ಎಂಬುದು ಚಿತ್ರಿತವಾಗಿದೆ. ಭಾರತೀಯ ಸಂದರ್ಭದ ಕೌಟುಂಬಿಕ ನೆಲೆಗಳಲ್ಲಿ ಹೆಣ್ಣಿನ ಏಕಾಂತ ರೋದನೆಗಳು ಹೇಗಿರುತ್ತವೆ ಎಂಬುದು ಈ ಕಥೆಯಲ್ಲಿ ಢಾಳಾಗಿ ಅಭಿವ್ಯಕ್ತಿಗೊಂಡಿದೆ. ‘ಗೋಚರ’ ಕಥೆ ಕೂಡಾ ‘ಗೆಳೆತನದಾಲದಡಿಯಲ್ಲಿ’ ಎನ್ನುವ ಕಥೆಯ ಜಾಡಿನಲ್ಲೇ ಸಾಗುತ್ತದೆ. ರಮಾ, ಸುಮಾ ಎಂಬ ಇಬ್ಬರು ಗೆಳತಿಯರ ನಡುವೆ ನಡೆಯುವ ಸಂವಾದ ರೂಪದ ಈ ಕಥೆ ಮನುಷ್ಯನ ಸಹಜ ಅನುಮಾನ ಪ್ರವೃತ್ತಿಗಳಿಗೆ ಸಾಕ್ಷಿಯೆನಿಸುತ್ತದೆ. ಡಾಕ್ಟರ್ ಹರ್ಷನ ಪಾತ್ರವನ್ನು ಲೇಖಕಿ ಸೃಷ್ಟಿಸಿರುವುದು ಅವರ ಕಥನಗಾರಿಕೆಯ ಕೌಶಲ್ಯವನ್ನು ತೋರಿಸುತ್ತದೆ. ‘ಆತ್ಮಹೇಳಿದ ಕಥೆ’ ಈ ಸಂಕಲನದ ಮತ್ತೊಂದು ಮಹತ್ವದ ಕಥೆಯಾಗಿದೆ. ಕಥನ ಕಲೆಯ ಭಿನ್ನ ಮತ್ತು ಅಪರೂಪದ ತಂತ್ರಗಾರಿಕೆಯನ್ನು ಈ ಕಥೆಯಲ್ಲಿ ಗುರುತಿಸಬಹುದು. ಮತ್ತು ಅಂಥ ತಂತ್ರಗಾರಿಕೆಯಲ್ಲಿ ಲೇಖಕಿ ಯಶಸ್ಸನ್ನು ಕೂಡಾ ಸಾಧಿಸಿದ್ದಾರೆ. ಹಾಗಾಗಿ ಈ ಕಥೆ ಅನಸೂಯ ಜಹಗೀರದಾರರವರ ಬೇರೆಲ್ಲ ಕಥೆಗಳಿಗಿಂತ ಭಿನ್ನ ಆಯಾಮವನ್ನು,ಸ್ವರೂಪವನ್ನು ಪಡೆದುಕೊಳ್ಳುತ್ತದೆ. ವಸುಧಾ ಮತ್ತು ಹೇಮಾ ಇಬ್ಬರು ಗೆಳತಿಯರು. ಹೇಮಾಳ ಗಂಡ ಒಬ್ಬ ಹೆಸರಾಂತ ಸಾಹಿತಿ. ಮೂವರು ಮಕ್ಕಳ ತಾಯಿ ಹೇಮಾ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾಳೆ.ಕೌಟುಂಬಿಕ ಆಂತರಿಕ ಕಲಹ,ನೋವು ಆವರಿಸಿಕೊಳ್ಳುವ ಒಳ ಖಿನ್ನತೆ ಸೂಕ್ಷ್ಮ ಮನಸ್ಸುಗಳಿಗೆ ಯಾವ ರೀತಿಯ ದುಡುಕು ನಿರಗಧಾರ ತೆಗೆದುಕೊಳಗಳಲು ಕಾರಣವಾಗುತ್ತದೆ ಅನ್ನುವುದರ ಚಿತ್ರಣವೂ ಇಲ್ಲಿದೆ.ಈ ಸಾವು ಗೆಳತಿ ವಸುಧಾಳನ್ನು ಇನ್ನಿಲ್ಲದೆ ಹಾಗೆ ಕಾಡುತ್ತದೆ. ಸತ್ತ ಗೆಳತಿಯ ಆತ್ಮ ವಸುಧಾಳೊಂದಿಗೆ ಸಂವಾದದಲ್ಲಿ ತನ್ನ ಸಾವಿಗೆ ಆದ ಕಾರಣಗಳನ್ನು ಬಿಚ್ಚಿಡುತ್ತದೆ. ಅಂದರೆ ಹೊರ ಜಗತ್ತಿನಲ್ಲಿ ಒಳ್ಳೆಯವರಾಗಿರುವವರು ಒಳಗೆ ಎಷ್ಟು ತಣ್ಣಗೆ ಕ್ರೌರ್ಯವನ್ನು ಇಳಿಸಿಕೊಂಡಿರುತ್ತಾರೆ ಎಂಬ ಸತ್ಯವನ್ನು ಕಥೆ ಅನಾವರಣಗೊಳಿಸುವ ರೀತಿ ಅನನ್ಯವಾಗಿದೆ. ತೇಜೋಮಯಿ ಮಾಯಿ,
‘ನೆರಳು ಮತ್ತು ಬೆಳಕು’, ‘ಪಡೆದದ್ದು’ ಕಥೆಗಳು ಕೂಡಾ ಕೌಟುಂಬಿಕ ಬದುಕಿನ ನೆಲೆಯಲ್ಲಿ ಅರಳಿದ ಕಥೆಗಳಾಗಿವೆ.’ಕಾಳಿಕಾ’ ಕಥೆ ವಿಭಿನ್ನವಾಗಿ ರೂಪಿತವಾಗಿದೆ.
ನಾನು ಮೊದಲೇ ಹೇಳಿದಂತೆ ಶ್ರೀಮತಿ ಅನಸೂಯರವರ ಕಥೆಗಳನ್ನು ಮುನ್ನುಡಿ ಬರೆಯಬೇಕೆಂದು ಓದದೆ ಒಬ್ಬ ಸಹೃದಯ ಓದುಗನಾಗಿ ಓದಿದ್ದೇನೆ. ಒಟ್ಟಾರೆ ಹೇಳುವುದಾದರೆ ಇವರ ಕಥೆಗಳ ಓದು ಸಹನೀಯವಾಗಿಯೇ ಇದೆ. ಅನಸೂಯವರ ಕಥೆಗಳು ಇಷ್ಟು ಸಹನೀಯವಾಗಲು ಅವರ ಭಾಷೆ ಕೂಡಾ ಮುಖ್ಯ ಅನ್ನಿಸುತ್ತದೆ.ಕಥೆಗಳನ್ನು ಓದುತ್ತಿದ್ದರೆ ಗೆಳೆಯರೊಂದಿಗೆ, ಬಂಧುಗಳೊಂದಿಗೆ, ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುವಂತೆ ಸಹ್ಯ ಅನಿಸುತ್ತದೆ.ಆಪ್ತವಾಗುತ್ತದೆ.ಹೀಗೆ ಅನಿಸಲು ಕಾರಣ ಅದು ಅವರು ದುಡಿಸಿಕೊಂಡಿರುವ ಸರಳವಾದ ಭಾಷೆಯಿಂದಾಗಿಯೇ..!ಭಾಷೆಯಂತೆ ಶೈಲಿಯೂ ಸರಳವಾಗಿರುವುದರಿಂದ ಕಥೆಗಳ ಓದಿನ ಓಘಕ್ಕೆ ಎಲ್ಲಿಯೂ ತಡೆಯುಂಟಾಗುವುದಿಲ್ಲ.ಈ ಎಲ್ಲಾ ಗುಣಗಳು ಶ್ರೀಮತಿ ಅನಸೂಯರವರು ಕಥನಗಾರಿಕೆಯಲ್ಲಿ ಪಳಗಿರುವರೆಂಬುದನ್ನು ಸೂಚಿಸುತ್ತದೆ. ಕನ್ನಡ ಕಥನ ಕ್ಷೇತ್ರ ಸಮೃದ್ಧಿಯಾಗುತ್ತಿರುವ ಕಾಲದಲ್ಲಿ ಅವರ ಈ ಕಥಾಸಂಕಲನ ಕಥಾಲೋಕಕ್ಕೆ ಮತ್ತಷ್ಟು ವಿಸ್ತಾರವನ್ನು ಗಳಿಸಿಕೊಡಲಿ ಎಂದು ಆಶಿಸುತ್ತಾ ಅವರಿಂದ ಇನ್ನು ಮುಂದೆಯೂ ಗಟ್ಟಿ ಸಾಹಿತ್ಯ ರಚನೆಯಾಗಲಿ ಎಂದು ಹಾರೈಸುತ್ತೇನೆ
ಕೇಶವರೆಡ್ಡಿ ಹಂದ್ರಾಳ
ಕಥೆಗಾರರು.
ಉತ್ತಮ ಮುನ್ನುಡಿ. ಎಲ್ಲಾ ಕತೆಗಳನ್ನು ಸಮಗ್ರವಾಗಿ ಓದಿ ಸೂಕ್ಷ್ಮತೆಗಳನ್ನು ಗಮನಿಸಿ ವಿಸ್ತೃತವಾಗಿ ಪರಿಚಯಿಸಿದ್ದಾರೆ. ಪುಸ್ತಕ ಓದುವ ಆಸಕ್ಕಿ ಮೂಡಿಸುತ್ತದೆ
ಧನ್ಯವಾದಗಳು ಸರ್