ರಾಷ್ಟ್ರೀಯ ವಿಜ್ಞಾನ ದಿನ (ಫೆಬ್ರುವರಿ 28) ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ನಾವು ಕುಡಿಯುವ ನೀರು ಆಮ್ಲಜನಕ ಮತ್ತು ಜಲಜನಕಗಳ ಸಂಯೋಗ, ಉಸಿರಾಡುವ ಗಾಳಿಯಲ್ಲಿ  ಆಮ್ಲಜನಕ, ಇಂಗಾಲದ ಡೈಯಾಕ್ಸೈಡ್, ಸಾರಜನಕ, ಜಲಜನಕ ಮುಂತಾದ ಮೂಲವಸ್ತುಗಳಿವೆ, ಬಲೂನಿನಲ್ಲಿ ಗಾಳಿಯನ್ನು ತುಂಬುವುದರಿಂದ ಅದು ಮೇಲಕ್ಕೆ ಹಾರುತ್ತದೆ, ಸೂರ್ಯ ಮತ್ತು ಭೂಮಿಗಿರುವ ಅಂತರ, ಗ್ರಹಗಳ ಚಲನೆ, ಆಹಾರ ಸೇವನೆ ಮತ್ತು ಅವುಗಳ ಪರಿಣಾಮಗಳು, ಮಾನವನ ದೇಹದ ವಿವಿಧ ಅಂಗಗಳು ಮತ್ತು ಅವುಗಳ ಕಾರ್ಯ ನಿರ್ವಹಣೆ…… ಹೀಗೆ ಮುಂಜಾನೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಜೀವನದ ಪ್ರತಿ ಹಂತದಲ್ಲೂ ನಮ್ಮ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ.

ವೈಜ್ಞಾನಿಕ ಆವಿಷ್ಕಾರಗಳಿಂದ ಮಂಗನಾಗಿದ್ದವ ಮಾನವನಾಗಿದ್ದಾನೆ. ಹಕ್ಕಿಯಂತೆ ಆಕಾಶದಲ್ಲಿ ಹಾರುವ, ಗಾಳಿಯಲ್ಲಿ ತೇಲುವ ಯಂತ್ರವನ್ನು ಕಂಡುಹಿಡಿದಿದ್ದಾನೆ. ನೀರಿನಲ್ಲಿ ಮೀನಿನಂತೆ ಈಜುವ, ಮುಳುಗುವ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾನೆ. ಕುಳಿತಲ್ಲಿಯೇ ಇಡೀ ಜಗತ್ತನ್ನು ಸಂಪರ್ಕಿಸುವ ಅಂತರ್ಜಾಲ ವ್ಯವಸ್ಥೆ ನಮ್ಮಲ್ಲಿದೆ. ಹೀಗೆ ಸರ್ವವು ವಿಜ್ಞಾನಮಯ ಎಂಬ ರೀತಿಯಲ್ಲಿ ಜಗತ್ತು ನಡೆಯುತ್ತಿದೆ.

ಇಂತಹ ವೈಜ್ಞಾನಿಕ ಆವಿಷ್ಕಾರಗಳನ್ನು ಗುರುತಿಸುವ ದಿನವೇ ರಾಷ್ಟ್ರೀಯ ವಿಜ್ಞಾನ ದಿನ. ನಮ್ಮ ಭಾರತ ದೇಶದಲ್ಲಿ ಪ್ರತಿ ವರ್ಷ ಫೆಬ್ರುವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತಾರೆ. ನಮ್ಮ ದೇಶದ ಪ್ರಪ್ರಥಮ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ. ರಾಮನ್ ರವರು ಬೆಳಕಿನ ಕುರಿತಾದ ಸಂಶೋಧನೆ ‘ರಾಮನ್ ಎಫೆಕ್ಟ್’ ಅನ್ನು ಆವಿಷ್ಕರಿಸಿದ ದಿನವಿದು.

ಕ್ರಿ.ಶ 1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್ (ಎನ್‌ಸಿಎಸ್ಟಿಸಿ) ಯು ಭಾರತ ಸರ್ಕಾರವನ್ನು ಫೆಬ್ರುವರಿ 28ರ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲು ಕೇಳಿಕೊಂಡ ಪರಿಣಾಮವಾಗಿ ಸರ್ಕಾರವು ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಅಂಗೀಕರಿಸಿ ಘೋಷಿಸಿತು. ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28, 1987 ರಂದು ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ದೇಶದ ಅಭಿವೃದ್ಧಿಗೆ ವಿಜ್ಞಾನಿಗಳ ಕೊಡುಗೆಗಳನ್ನು ಗುರುತಿಸಲು ಮತ್ತು ನೆನೆಯಲು ಆಚರಿಸಲಾಗುತ್ತದೆ.

ಜನರು ದೈನಂದಿನ ಜೀವನದಲ್ಲಿ ಬಳಸುವ ವಿಜ್ಞಾನದ ಮಹತ್ವದ ಬಗ್ಗೆ ಸಂದೇಶವನ್ನು ಹರಡಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿನ ಎಲ್ಲಾ ಚಟುವಟಿಕೆಗಳು, ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸಲು, ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿನ  ಸಮಸ್ಯೆಗಳನ್ನು ಚರ್ಚಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ವೈಜ್ಞಾನಿಕ ಮನೋಭಾವದ ನಾಗರಿಕರಿಗೆ ಅವಕಾಶ ಕಲ್ಪಿಸುವುದು, ಪ್ರೋತ್ಸಾಹಿಸುವುದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು ಈ ದಿನದ ವೈಶಿಷ್ಟ್ಯ. ವಿಜ್ಞಾನ ದಿನದ ಆಚರಣೆಯು ಸಾರ್ವಜನಿಕ ಭಾಷಣಗಳು, ರೇಡಿಯೋ, ಟಿವಿ, ವಿಜ್ಞಾನ ಚಲನಚಿತ್ರಗಳು, ವಿಷಯಗಳು ಮತ್ತು ಪರಿಕಲ್ಪನೆಗಳನ್ನು ಆಧರಿಸಿದ ವಿಜ್ಞಾನ ಪ್ರದರ್ಶನಗಳು, ಚರ್ಚೆಗಳು, ರಸಪ್ರಶ್ನೆ ಸ್ಪರ್ಧೆಗಳು, ಉಪನ್ಯಾಸಗಳು, ವಿಜ್ಞಾನ ಮಾದರಿ ಪ್ರದರ್ಶನಗಳು ಮತ್ತು ಇನ್ನೂ ಅನೇಕ ಚಟುವಟಿಕೆಗಳನ್ನು ಒಳಗೊಂಡಿದೆ.

ನಮ್ಮ ಬದಲಾಗುತ್ತಿರುವ ಭೂಮಿ,ಮೂಲ ವಿಜ್ಞಾನದಲ್ಲಿ ಆಸಕ್ತಿಯನ್ನು ಮರುಸೃಷ್ಟಿಸುವುದು,ವಿಜ್ಞಾನ ಶಿಕ್ಷಣಕ್ಕಾಗಿ ಮಾಹಿತಿ ತಂತ್ರಜ್ಞಾನ, ತ್ಯಾಜ್ಯದಿಂದ ಸಂಪತ್ತು, 50 ವರ್ಷಗಳ ಡಿಎನ್ಎ ಮತ್ತು 25 ವರ್ಷಗಳ ಐವಿಎಫ್ ದ ಬ್ಲ್ಯೂ ಪ್ರಿಂಟ್ ಆಫ್ ಲೈಫ್, ಸಮುದಾಯದಲ್ಲಿ ವೈಜ್ಞಾನಿಕ ಜಾಗೃತಿಯ ಉತ್ತೇಜನ, ಸೆಲೆಬ್ರೇಟಿಂಗ್ ಫಿಸಿಕ್ಸ್, ಪ್ರಕೃತಿ ರಕ್ಷಣೆ, ಹನಿ ರಕ್ಷಣೆಯ ಮೂಲಕ ಹೆಚ್ಚಿನ ಬೆಳೆ ಬೆಳೆಯುವುದು, ನಮ್ಮ ಗ್ರಹವನ್ನು ಅರ್ಥೈಸಿಕೊಳ್ಳುವುದು, ವೈಜ್ಞಾನಿಕ ದಿಗಂತವನ್ನು ವಿಸ್ತರಿಸುವುದು, ಲಿಂಗ ಸಮಾನತೆ ಹಾಗೂವಿಜ್ಞಾನ ಮತ್ತು ತಂತ್ರಜ್ಞಾನ,
ಆಹಾರ ಭದ್ರತೆ, ರಾಷ್ಟ್ರ ನಿರ್ಮಾಣಕ್ಕಾಗಿ ವಿಜ್ಞಾನ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ವೈಜ್ಞಾನಿಕ ಆವಿಷ್ಕಾರಗಳ ಬಳಕೆ, ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮಹಿಳೆಯರ ವಿಜ್ಞಾನ ಶೈಕ್ಷಣಿಕ ಕೌಶಲ್ಯ ಮತ್ತು ಕೆಲಸದ ಮೇಲಿನ ಪರಿಣಾಮಕಾಗಿ ವಿಜ್ಞಾನ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ವಿಜ್ಞಾನ ದಿನದ  ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡು ಮೇಲಿನ ವಿಷಯಗಳಲ್ಲಿ ಚರ್ಚೆ, ವಿಷಯ ಮಂಡನೆ ಮತ್ತು ಆಚರಣೆಗಳನ್ನು ಕಳೆದ ಹಲವಾರು ವರ್ಷಗಳಿಂದ ಕೈಗೊಂಡಿತ್ತು.

ಪ್ರಸ್ತುತ ವರ್ಷದ ಫೆಬ್ರವರಿ 28, 2023 ರಂದು ಆಚರಿಸಲಾಗುತ್ತಿರುವ ರಾಷ್ಟ್ರೀಯ ವಿಜ್ಞಾನ ದಿನದ ಥೀಮ್ “ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ” ಎಂಬ ವಿಷಯವನ್ನು ಆಯ್ದುಕೊಳ್ಳಲಾಗಿದ್ದು ಬದುಕಿನ ಪ್ರತೀ ಸಮಸ್ಯೆಗೂ ವಿಜ್ಞಾನದಲ್ಲಿ ಪರಿಹಾರವಿದೆ ಎಂಬುದು ಈ ವರ್ಷದ ವಿಜ್ಞಾನ ದಿನದ ಆಶಯ. ಆದ್ದರಿಂದ ಮಕ್ಕಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದಲೇ ಗಣಿತ ಮತ್ತು ವಿಜ್ಞಾನಗಳ ಬಗ್ಗೆ ಒಲವು ಮೂಡಿಸಬೇಕು. ಕಲಿಕೆಯಲ್ಲೂ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸುತ್ತಿದ್ದು ವಿದ್ಯಾರ್ಥಿಗಳು ಏನನ್ನೇ ಕಲಿತರೂ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂಬುದು ಈ ವರ್ಷದ ವಿಜ್ಞಾನ ದಿನದ ವಿಶೇಷ ಕಾರ್ಯ ಸೂಚಿ.

ನಮ್ಮ ಪೂರ್ವಜರು ವಿಜ್ಞಾನದ ಆವಿಷ್ಕಾರಗಳನ್ನು ಈ ಮೊದಲೇ ಮಾಡಿದ್ದರು ಆದರೆ ಅದರ ಕುರಿತು ಅವರು ಗುಪ್ತವಾದ ಈಗಿನ ಭಾಷೆಯಲ್ಲಿ ಹೇಳುವುದಾದರೆ ಎನ ಕ್ರಿಪ್ಟ್…. ಅಂದರೆ ಕೋಡೆಡ್ ಭಾಷೆಯಲ್ಲಿ ನಮ್ಮ ವೈಜ್ಞಾನಿಕ ಆವಿಷ್ಕಾರಗಳನ್ನು ಕಾಯ್ದಿಟ್ಟಿದ್ದರು.
ಭೂಮಿ ಮತ್ತು ಸೂರ್ಯನ ಅಂತರವನ್ನು ಅಂದೆ ಕಂಡುಹಿಡಿದಿದ್ದ ನಮ್ಮ ವಿಜ್ಞಾನಿಗಳು, ಭೂಮಿಯು ಒಂದು ಗ್ರಹ ಅದು ಸೂರ್ಯನ ಸುತ್ತಲೂ ಸುತ್ತುತ್ತದೆ ಎಂದು ಕೂಡ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದರು. ದೆಹಲಿಯ ಜಂತರ್ ಮಂತರ್ ನಲ್ಲಿರುವ ಬೃಹತ್ ಖಗೋಳ ವೀಕ್ಷಣಾಲಯಗಳು ನಮ್ಮ ವಿಜ್ಞಾನಿಗಳು ಅಂದಿನ ಕಾಲದಲ್ಲಿಯೇ ಖಗೋಳ ವೀಕ್ಷಣಾಲಯಕ್ಕೆ ಸುಮಾರು 13 ಉಪಕರಣಗಳ ರೂಪದಲ್ಲಿ ಇಮಾರತುಗಳನ್ನು ಕಟ್ಟಿದ್ದರು. ಬೃಹದಾಕಾರದ ಗೊಲಗುಮ್ಮಟ ತಾಜ್ ಮಹಲ್ ಗಳ ಕಮಾನುಗಳ ಕಟ್ಟೋಣದಲ್ಲಿಯೂ ಕೂಡ ವಿಜ್ಞಾನ ಅಡಗಿದೆ. ಕ್ರಿಸ್ತಪೂರ್ವ ಹತ್ತನೇ ಶತಮಾನದಲ್ಲಿಯೂ ವಿಮಾನ ಮತ್ತು ಗಣಕಯಂತ್ರಗಳನ್ನು ನಮ್ಮವರು ಶಿಲ್ಪಗಳಲ್ಲಿ ಒಡಮೂಡಿಸಿದ್ದಾರೆ. ಸುಶ್ರುತ, ಚರಕ, ಪತಂಜಲಿ, ವರಾಹಮಿಹಿರ, ಭಾಸ್ಕರಾಚಾರ್ಯ, ಆರ್ಯಭಟ ಮುಂತಾದ ದಿಗ್ಗಜ ವಿಜ್ಞಾನಿಗಳ ಕೊಡುಗೆ ನಮ್ಮ ದೇಶದ ವೈಜ್ಞಾನಿಕ ಇತಿಹಾಸಕ್ಕಿದೆ. ಅಂದರೆ ಜಗತ್ತಿನ ಇನ್ನಿತರ ಭಾಗದಲ್ಲಿ ಜನರು ಕಣ್ತೆರೆಯುವ ಹೊತ್ತಿಗೆ ನಮ್ಮ ಭವ್ಯ ಭಾರತ ದೇಶವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯನ್ನು ಸಾಧಿಸಿತ್ತು ಎಂಬುದು ಭಾರತೀಯರಾದ ನಮಗೆ ಹೆಗ್ಗಳಿಕೆಯ ವಿಷಯ.

ಬನ್ನಿ ಈ ವಿಜ್ಞಾನ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸೋಣ.


Leave a Reply

Back To Top