ಕಥಾಗುಚ್ಛ
ನಾಗರಾಜ ಬಿ.ನಾಯ್ಕ
‘ಅಂತಃಕರಣ’
ಗುಡ್ಡದ ಅಂಚಿನಲ್ಲಿದ್ದ ಪಡುವಣದ ಕಡಲಿನಲ್ಲಿ ರವಿ ಮುಳುಗುತಲಿದ್ದ. ಕೆಂಬಣ್ಣದ ಬಣ್ಣವನ್ನೆಲ್ಲ ಬಾನಿಗೆ ಬಡಿದು ಏನೋ ಪ್ರೀತಿಯಿಂದ ಬರೆಯಲು ಹೋಗಿ ಮರೆತು ಹೋಗಿದ್ದ. ದಿಕ್ ಮತ್ತು ದಿಶಾ ಇಬ್ಬರೂ ಕುಳಿತಿದ್ದರು ಬೇರೆ ಬೇರೆಯಾಗಿ. ಪುಟಾಣಿ ಮಕ್ಕಳಿಬ್ಬರಿರುವ ಪುಟ್ಟ ಸಂಸಾರ ಅವರದ್ದು. ಇವರಿಬ್ಬರಲ್ಲಿ ಹುಟ್ಟಿದ ಬೆಳೆದ ಪ್ರೀತಿ ಮಾತ್ರ ಗಟ್ಟಿಯಾಗಿ ಬಹು ದಿನ ಉಳಿಯಲೇ ಇಲ್ಲ. ಅದು ಬಂದು ನಿಂತಿದ್ದು ಕೋರ್ಟ್ ನ ಕಟಕಟೆಯಲ್ಲಿ. ಅನುಬಂಧ ಕೂಡಿ ಬಾಳಬೇಕಾದರೆ ಕೂಡಿ ಬದುಕುವ ಮನಸಿರಬೇಕು. ಸಾರ್ಥಕವಾಗುವ ಕ್ಷಣಗಳಿರಬೇಕು. ಪ್ರೀತಿಯ ನೆನಪುಗಳು ಇರಬೇಕು. ಅರ್ಥ ಮಾಡಿಕೊಳ್ಳುವ ತಾಳ್ಮೆ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರಲ್ಲೂ ದೈನ್ಯತೆಯ ಅಂತಃಕರಣವಿರಬೇಕು. ಮಕ್ಕಳ ಖುಷಿಗೆಂದು ಸಮುದ್ರಕ್ಕೆ ಬಂದ ಇವರಿಬ್ಬರಲ್ಲಿ ಅಂತಹ ಅನ್ಯೋನ್ಯತೆ ಇರಲಿಲ್ಲ. ಮಾತುಗಳೂ ಇರಲಿಲ್ಲ . ಮಕ್ಕಳಿಬ್ಬರೂ ಮರಳಿನಲ್ಲಿ ಮನೆ ಕಟ್ಟುತ್ತಿದ್ದರು. ಅಮ್ಮ ಆಕಾಶದಲ್ಲಿ, ಅಪ್ಪ ಬೇರೆ ಊರಲ್ಲಿ ಎಂಬಂತಿದ್ದರು. ಮಕ್ಕಳ ಮನೆ ಕಟ್ಟುವ ಕಾರ್ಯ ಪೂರ್ತಿಯಾಗಿರಲಿಲ್ಲ. ಅಮ್ಮ ಚಿಕ್ಕ ಮಗನಿಗೆ ‘ಹೋಗೋಣ ಬಾ’ ಎಂದಳು. ಅಮ್ಮ ಹೇಳಿದ ಮಾತು ಕೇಳಿದ ಅಪ್ಪ ಎದ್ದು ನಿಂತ ದೊಡ್ಡ ಮಗನನ್ನ ಕರೆದ ‘ಬಾ ಹೋಗೋಣ’ ಎಂದು ಇಬ್ಬರೂ ಮಕ್ಕಳನ್ನು ಕರೆದೊಯ್ಯುತ್ತಿದ್ದರೆ ಕಡಲ ತೆರೆಗಳು ಬಂದು ಮಕ್ಕಳು ಕಟ್ಟಿದ ಮರಳಿನ ಮನೆಯನ್ನು ಕರಡಿ ನೀರಾಗಿಸುತ್ತಿತ್ತು. ಭಾವಗಳು ತೇಲಬೇಕು. ಮುಳುಗಬಾರದು ಎನ್ನುತ್ತಾ ಅಜ್ಜಿ ಒಬ್ಬಳು ಅಜ್ಜನೊಂದಿಗೆ ಸಾಗುತ್ತಿದ್ದರು. ಪ್ರೀತಿಗೆ ಭಾಷೆಯ ಗಡಿಗಳಿಲ್ಲ. ಆಡುವ ಮಾತುಗಳೇ ಆಭರಣ. ತೋರುವ ಅಕ್ಕರೆ ಆತ್ಮೀಯತೆ ಕ್ಷಣಗಳಿಗೆ ಹೊಸತು. ಅಜ್ಜ-ಅಜ್ಜಿ ನಡೆಯುತ್ತಿದ್ದರೆ ಮೇಲ್ಗಡೆ ಮಳೆ ಮಂಟಪ ಕಟ್ಟಿತ್ತು. ಆಧಾರವಾಗುವ ಖುಷಿಗೆ ಅರ್ಪಣೆಯಾಗಿತ್ತು. ಬದುಕು ಮೂರು ದಿನದ್ದು. ಒಂದು ಸಂಬಂಧ ಆತ್ಮೀಯವಾಗುತ್ತದೆ. ಜೊತೆಯಾಗುತ್ತದೆ. ಪ್ರೀತಿಯನ್ನು ನೀಡುತ್ತಾ ಕೊಡುತ್ತಾ ಒಂದು ಅನುಬಂಧವಾಗುತ್ತದೆ. ಅದು ಜೀವನ. ದಿಕ್ ಮತ್ತು ದಿಶಾ ತುಂಬಾ ಓದಿದವರು. ತುಂಬಾ ಬುದ್ಧಿವಂತರು .ಇಬ್ಬರಿಗೂ ಕೈತುಂಬಾ ಸಂಬಳ. ಐದು ದಿನ ಕೆಲಸ. ಆರಂಭದಿಂದಲೂ ಪ್ರೀತಿಸಿ ಮದುವೆಯಾದವರು. ಸಂಬಂಧಿಕರ ಬಿಟ್ಟು ತಾವೇ ಸುಖವಾಗಿರಬೇಕೆಂದು ಮದುವೆಯಾದವರು. ಪ್ರತಿಷ್ಠಿತ ಉದ್ಯೋಗ ಸಂಪಾದನೆ ಎಲ್ಲವುಗಳ ಜೊತೆ ಬದುಕುತ್ತಾ ಖುಷಿಯಾಗಿರುವ ಇವರಲ್ಲಿ ಆರಂಭವಾಗಿದ್ದು ಹೆಚ್ಚುಗಾರಿಕೆಯ ಪ್ರಶ್ನೆ. ಬುದ್ಧಿವಂತಿಕೆಯ ಪ್ರಶ್ನೆ. ಒಲ್ಲದ ಮಾತುಗಳ ಪ್ರಶ್ನೆ. ಈ ಭಿನ್ನತೆ ಹೆಚ್ಚಿ ಭವಿಷ್ಯ ಕಿರಿದಾದಂತೆ ಕಾಣಿಸುತ್ತಿತ್ತು ಇಬ್ಬರಿಗೂ. ಆದರೂ ಸೋಲು ಒಪ್ಪಿಕೊಳ್ಳದ ಸಣ್ಣತನ. ಮಕ್ಕಳು ಕಟ್ಟಿದ ಮಣ್ಣಿನ ಮನೆಯಲ್ಲಿ ಇಬ್ಬರು ಮಕ್ಕಳು ಸೇರಿಸಿ ಇಟ್ಟಿದ್ದು ಅಪ್ಪ ಅಮ್ಮನನ್ನು. ಅವರದೇ ಆದ ಭವಿಷ್ಯವನ್ನು . ಮಕ್ಕಳಿಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ಬೇರೆ ಬೇರೆ ಕಾರುಗಳಲ್ಲಿ ಕಣ್ಣೀರು ಹಾಕುತ್ತಾ ಸಾಗುತ್ತಿದ್ದರೆ ಅಮ್ಮ ಅಪ್ಪ ಇಬ್ಬರೂ ಅದರ ಪರಿವೇ ಇರದೇ ಸಾಗುತ್ತಿದ್ದರು ಅವರವರ ಅಹಂನ ಜೊತೆಯಲ್ಲಿ. ಸೋತದ್ದು ಮಕ್ಕಳ ಮನಸ್ಸು. ಭಾವ ,ಹೃದಯ, ಒಂಟಿತನದೊಟ್ಟಿಗೆ ನೋವು ಹೊರಡಿಸುವ ಮಾತುಗಳು ಮಕ್ಕಳಿಗೆ ಅರ್ಥವಾಗದಿದ್ದರೂ ಮನಸ್ಸಿನೊಳಗೆ ಇಳಿಯುತ್ತಿತ್ತು. ಇಬ್ಬರೂ ಬೇರೆ ಬೇರೆ ಹೊಟೇಲ್ಗಳಲ್ಲಿ ಊಟ ಮಾಡಿ ಸಾಗಿದರೆ ಮತ್ತೆ ಅವರದೇ ಪ್ರಪಂಚ. ಮಕ್ಕಳಿಗೆ ಮಾತ್ರ ಅವರ ಅಜ್ಜಿ ಮನೆಯ ನೆನಪು. ಹಳ್ಳಿಯ ಗದ್ದೆಯ ಬಯಲು ಹೊಳೆಗಳಲ್ಲಿ ಆಡುವ ಅವರದೇ ಬಾಲ್ಯದ ಮುಗ್ದ ಮಕ್ಕಳ ಮುಖಗಳು ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಕಾಣಿಸುತ್ತಿತ್ತು. ಆದರೆ ಪಟ್ಟಣದ ಬದುಕು ಅವರನ್ನು ಮಂಕಾಗಿಸಿತ್ತು. ಆದರೂ ಹೇಗಾದರೂ ಮಾಡಿ ಹಳ್ಳಿಗೆ ಹೋಗಲೇಬೇಕೆಂದು ಅಪ್ಪ ಅಮ್ಮನನ್ನ ಇಬ್ಬರೂ ಕೇಳುತ್ತಿದ್ದರು. ಇಬ್ಬರೂ ಮಕ್ಕಳ ಮಾತಿಗೆ ಕರಗಿ ಬಿಡುವ ಧನ್ಯತೆ ಅವರಿಗೆ ಇತ್ತು. ಅವರಿಬ್ಬರೂ ಮಕ್ಕಳ ಮಾತಿಗೆ ಮತ್ತು ಒತ್ತಾಸೆಗೆ ಕಟ್ಟು ಬಿದ್ದು ಅವರಿಬ್ಬರೂ ಹಳ್ಳಿ ಕಡೆ ಹೊರಟರು ಒಂದು ದಿನ . ಅದೇನೋ ಭಿನ್ನತೆ ಇಬ್ಬರಲ್ಲೂ. ಆದರೆ ಮಕ್ಕಳಿಗೆ ಮಾತ್ರ ನೋವು ಆಗಬಾರದು ಎನ್ನುವುದು ಇಬ್ಬರ ಸಹಮತ. ಅದೊಂದು ಸೆಳೆತ ಇಬ್ಬರಿಗೂ ಇದ್ದಿದ್ದು ಜೀವಂತಿಕೆಗೆ ಆಧಾರವಾಗಿತ್ತು ಎನ್ನುವುದರ ಜೊತೆಗೆ ಬೇರೆ ಬೇರೆ ಕಾರುಗಳಲ್ಲಿ ಬೇರೆ ಬೇರೆ ಮನಸ್ಸುಗಳಲ್ಲಿ ಹೊರಟಿಯಾಗಿತ್ತು. ಸಾಗುವ ಮಧ್ಯದಲ್ಲಿ ಒಂದು ಊಟದ ವಿರಾಮ. ಸಾಧಾರಣ ಎನಿಸುವ ಹೊಟೇಲ್. ಅಲ್ಲಿ ತುಂಬಿದ ಜನ. ಹಲವರ ನಗು, ಹಲವರ ಮಾತು ಹಲವು ಹೊಸ ನೋಟಗಳು. ಮಕ್ಕಳಿಗೆ ಬೇರೆ ಬೇರೆಯಾಗಿ ತಿಂಡಿ ಊಟದ ಬೇಡಿಕೆಯನ್ನು ನೀಡಿದರು ಇಬ್ಬರೂ. ಅನುಬಂಧ ಬಾಂಧವ್ಯವಾಗಿ ಉಳಿಯುವುದು ಸಂಬಂಧದಲ್ಲಿ. ಅದು ಮಾನಸಿಕ ಇರಲಿ ಅಥವಾ ರಕ್ತ ಸಂಬಂಧ ಇರಲಿ ಎಂಬ ಮಾತು ಹಚ್ಚಿದ ಧ್ವನಿ ಸುರುಳಿಯಿಂದ ಕೇಳುತ್ತಿತ್ತು. ವಾಸ್ತವದಲ್ಲಿ ಆಪ್ತತೆಯು ಅವಶ್ಯಕ ನಡೆ ಆಗಬೇಕು. ಅದು ಸೋಲಬೇಕು. ಸೋಲಿಸಬೇಕು ಸತ್ಯದ ದಾರಿಗೆ. ವಿಚಿತ್ರ ಸುಳಿಗೆ ಮನುಷ್ಯ ಸಿಕ್ಕಾಗ ಮುಂದಿನ ಗಮ್ಯದ ಭವಿಷ್ಯದ ಅರಿವಿದ್ದರೆ ಚೆಂದ. ಅಂತಃಕರಣ ಭಾವವಾಗಬೇಕು. ಪ್ರೇರಣೆ ದಾರಿಯಾಗಬೇಕು. ಆ ಸಮಯಕ್ಕೆ ತನ್ನ ಕಣ್ಣು ಕಾಣದ ಗಂಡನನ್ನ ಕೈ ಹಿಡಿದುಕೊಂಡು ಕರೆದುಕೊಂಡು ಬಂದು ಕುಳ್ಳಿರಿಸಿದ ಪ್ರೀತಿಯ ಮಡದಿ ಮಗಳೊಂದಿಗೆ ತಾನು ಅಲ್ಲೇ ಕುಳಿತಳು. ಸಿಬ್ಬಂದಿ ಬಂದು ಏನು ಬೇಕು? ಎಂದು ಕೇಳಿದರು. ಅವಳು ಸನ್ನೆ ಮಾಡಿ ಮೂರು ಊಟ ಎಂದು ತೋರಿಸಿದಳು. ಅವಳಿಗೆ ಹೇಳಲು ಮಾತು ಬರುತ್ತಿರಲಿಲ್ಲ. ಆತ್ಮೀಯ ಭಾವದಿಂದ ಊಟ ಮಾಡಿದರವರು ಸುಮ್ಮನೆ ಖುಷಿ ಖುಷಿಯಾಗಿ ಹೊರಟು ಹೋದರು. ಅವರ ನಡುವೆ ಮಾತಿನ ಶಬ್ದ ಇರಲಿಲ್ಲ. ಆದರೆ ಒಟ್ಟಿಗೆ ಬದುಕುವ ಒಲವಿತ್ತು. ಬದುಕಾಗುವ ಗುಣವಿತ್ತು. ಇವರಿಬ್ಬರನ್ನು ನೋಡಿ ಅರ್ಥೈಸಿಕೊಳ್ಳಬೇಕಾದ ಗುಣ, ಜ್ಞಾನ ಆ ಮಗುವಿಗೆ ಇತ್ತು. ಅವಳಿಗೆ ಚೆಂದ ಮಾತು ಬರುತ್ತಿತ್ತು. ಅವರಿಬ್ಬರ ಪ್ರತಿಬಿಂಬವಾದ ನಗು ಅವಳ ಮುಖದಲ್ಲಿತ್ತು. ಪುಟಾಣಿ ಮಗು ಈ ಮಕ್ಕಳನ್ನು ನೋಡಿ ನಕ್ಕಳು. ಆತ್ಮೀಯ ಭಾವದಿಂದ ಊಟ ಮಾಡಿ ಅವರು ಹೊರಟು ಹೋದರು. ಇವರಿಬ್ಬರನ್ನು ನೋಡಿದ ಅವರು ಸುಮ್ಮನೇ ಮಕ್ಕಳನ್ನು ನೋಡುತ್ತಾ ಕುಳಿತರು. ದಿಕ್ ಮತ್ತು ದಿಶಾ ಇಬ್ಬರಿಗೂ ಅದೇ ಜೋಡಿ ಮತ್ತೆ ಮತ್ತೆ ಕಣ್ಮುಂದೆ ಬರುತ್ತಿತ್ತು ಸುಮ್ಮನೇ. ಮಾತು ಬಾರದ ಅವರ ಬಗ್ಗೆ ಇಬ್ಬರಲ್ಲೂ ಕರಗುವ ಗುಣವಿತ್ತು. ಆ ಮಗುವಿನ ಬಗ್ಗೆ ತಲ್ಲಣವಿತ್ತು. ಅವರಿಗಿಂತ ನಾವು ಕಡೆಯಾದೆವಾ? ಎಂಬ ಪ್ರಶ್ನೆ ಇಬ್ಬರನ್ನೂ ಕಾಡಿ ಮನಸ್ಸನ್ನೂ ಚುಚ್ಚಿತ್ತು. ಛೇ ಇವನಾದರೂ ಬದಲಾದರೆ, ಹೇಳಿದಂತೆ ಒಪ್ಪಿದರೆ ನಾವು ಹೀಗೆ ಒಟ್ಟಿಗೆ ಬದುಕಬಹುದಿತ್ತು ಎಂದು ಅವಳು ಯೋಚಿಸಿದರೆ ಅವನೂ ಹಾಗೇ ಆಲೋಚಿಸುತ್ತಿದ್ದ. ಛೇ ಇವಳಾದರೂ ಬದಲಾದರೆ ನಾನು ಸೋಲಬಹುದಿತ್ತು.ಅವಳ ಮಾತಿಗೆ, ಕಥೆಗೆ, ಹಟಕ್ಕೆ ಎಲ್ಲವೂ ಏನಾದರೂ ಆಗಲಿ ನಾನೇ ಸೋತು ಬಿಡಬೇಕು ಎಂದುಕೊಂಡು ಮತ್ತೆ ಬೇರೆ ಬೇರೆ ಕಾರುಗಳನ್ನ ಹತ್ತಿದರು. ಹಳ್ಳಿ ಸಮೀಪಿಸಿತು. ಮನೆ ಬಂತು. ಇಳಿದು ಒಂದೇ ಮನೆಯಲ್ಲಿ ಅಪರಿಚಿತರಂತೆ ಮನೆ ಒಳಗೆ ಹೋಗಿ ಅಕ್ಕಪಕ್ಕ ಕುಳಿತರು. ಹಿರಿಯರ ಒಂದಿಷ್ಟು ಕುಶಲೋಪರಿ ಸಾಗಿತ್ತು. ಮಕ್ಕಳ ಮಾತ್ರ ಸ್ವರ್ಗದಲ್ಲಿದ್ದವರಂತೆ ಕುಣಿದು ಕುಪ್ಪಳಿಸಿದರು. ಮಕ್ಕಳಿಬ್ಬರನ್ನು ಬಿಟ್ಟು ಹೊರಟು ಹೋಗಲು ಅವರು ಬಂದಿದ್ದರು. ನಾಳೆಯ ಕೋರ್ಟನ ಅಂತಿಮ ತೀರ್ಮಾನದ ಅರಿವು ಇಬ್ಬರಿಗೂ ಇತ್ತು. ತಂದೆ ತಾಯಿ ಹಿರಿಯರ ಕೂಡು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಇವರಿಬ್ಬರ ಮುಖದಲ್ಲೂ ನಾವು ಪರಸ್ಪರ ಗೆದ್ದೆವಾ? ಸೋತೆವಾ ?ಎಂಬ ಪ್ರಶ್ನೆ ಪದೇಪದೇ ಕಾಡುತ್ತಿತ್ತು .ಹಳ್ಳಿಯ ಜನರ ಮುಗ್ಧತೆ ಅವರಲ್ಲಿನ ಸಂಬಂಧಗಳ ಕಲ್ಪನೆಗೆ, ಬಾಂಧವ್ಯಕ್ಕೆ ನಾವು ಸರಿಸಮವಲ್ಲ ಎನಿಸುತ್ತಿತ್ತು ಇಬ್ಬರಿಗೂ. ಆದರೂ ಕಾರಣ ನೀಡದೇ ಇಬ್ಬರೂ ಹೊರಡಲೇಬೇಕಿತ್ತು. ಇಬ್ಬರಿಗೂ ಅನಿವಾರ್ಯವಾಗಿತ್ತು. ಮಾರನೇ ದಿನ ಬೆಳಿಗ್ಗೆ ಮಕ್ಕಳಿಗೆ ಟಾಟಾ ಮಾಡಿ ಬೇರೆ ಬೇರೆ ಕಾರುಗಳಲ್ಲಿ ಹೊರಟರು. ಇಬ್ಬರ ಕಾರುಗಳು ವೇಗವಾಗಿ ಸಾಗುತ್ತಿತ್ತು. ಇಂದು ನಡೆಯುವ ಕೋರ್ಟನ ಅಂತಿಮ ತೀರ್ಮಾನದ ಕಡೆ ಇಬ್ಬರ ಯೋಚನೆ ಸಾಗಿತ್ತು. ಮನದ ದ್ವಂದ್ವಗಳು, ನಿಲುವುಗಳು, ಮಾತುಗಳು ಅಸ್ಪಷ್ಟವಾಗಿ ಇಬ್ಬರಿಗೂ ಬಂದು ಒಂದರ ಎದುರೆದುರು ನಿಲ್ಲುತ್ತಿತ್ತು. ಇದ್ದಕ್ಕಿದ್ದಂತೆ ಮುಂದಕ್ಕೆ ವೇಗವಾಗಿ ಹೊರಟಿದ್ದ ದಿಶಾಳ ಕಾರು ಮರಕ್ಕೆ ಡಿಕ್ಕಿ ಹೊಡೆದು ತಿರುಗಿ ಬಿದ್ದಿತ್ತು. ದಿಶಾಳ ತಲೆಗೆ ಏಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾರಿನೊಳಗೆ ಬಿದ್ದಿದ್ದಳು. ಹಿಂದಿದ್ದ ದಿಕ್ ತನ್ನ ಕಾರು ನಿಲ್ಲಿಸಿ ನೋಡಿದ. ಇದು ದಿಶಾಳ ಕಾರು ಎಂದು ಗುರುತು ಹಿಡಿಯಲು ಬಹಳ ಸಮಯ ಬೇಕಾಗಲಿಲ್ಲ. ನೋಡಿದರೆ ಪ್ರೀತಿಸಿದ ಜೀವ ರಕ್ತದಲ್ಲಿ ಬಿದ್ದಿತ್ತು. ಒಂದು ಕ್ಷಣ ಮನಸ್ಸು ಕರಗಿತು. ಸಹಾಯಕ್ಕಾಗಿ ಕೂಗಿದ. ಅಪರಿಚಿತ ಪೇಟೆಯಲ್ಲಿ ಯಾರು ಬರಲಿಲ್ಲ ಎಲ್ಲರೂ ಸಾಗಿ ಹೋಗುವವರೇ…. ಕಾರಿನ ಗಾಜು ಒಡೆದು ಒಳಗಿದ್ದ ದಿಶಾಳನ್ನು ಮೊದಲು ಎತ್ತಿಕೊಂಡ. ತನ್ನ ಕಾರಿನಲ್ಲಿ ಕುಳ್ಳಿರಿಸಿ ಆಸ್ಪತ್ರೆಯತ್ತ ವೇಗವಾಗಿ ಸಾಗಿದ. ಈಗ ಅವನ ಕಣ್ಣಿಂದ ನೀರು ಸುರಿಯುತ್ತಿತ್ತು. ಮಕ್ಕಳ ಮುಖ ನೆನಪಿಗೆ ಬರುತ್ತಿತ್ತು. ಬದುಕಿದರೆ ಸಾಕು ಎಂದುಕೊಂಡ. ಉಸಿರೊಂದು ಉಳಿದರೆ ಸಾಕು ಅಂದುಕೊಳ್ಳುತ್ತಾ ಆಸ್ಪತ್ರೆ ತಲುಪಿದ. ಆಸ್ಪತ್ರೆ ತಲುಪಿದ ಮೇಲೆ ವೈದ್ಯರ ಚಿಕಿತ್ಸೆ ನೀಡಿದರು. ತುರ್ತಾಗಿ ಎರಡು ಬಾಟಲಿ ರಕ್ತ ಬೇಕೆಂದರು. ತಕ್ಷಣ ತನ್ನ ರಕ್ತವನ್ನೇ ಅವಳಿಗೆ ನೀಡಿದ. ಬಹುದಿನಗಳ ಚಿಕಿತ್ಸೆ ನಂತರ ದಿಶಾ ಮೊದಲಿನಂತೆ ಆದಳು. ಅವನ ಆರೈಕೆ ಅವಳಲ್ಲಿ ಒಂದು ಚೈತನ್ಯ ಮೂಡಿಸಿತ್ತು. ಕೊನೆಯಲ್ಲಿ ಅವನು ಅವಳನ್ನು ಪರೀಕ್ಷಿಸಲೆಂದು ವಿಚ್ಛೇದನ ಬೇಕೇ ಎಂದು ಕೇಳಿದ. ಕೈ ಮುಗಿದಳು. ಪ್ರೀತಿಯಿಂದ ದಯವಿಟ್ಟು ಬೇಡ. ಪ್ರಾಣ ಉಳಿಸಿದ ಪುಣ್ಯಾತ್ಮ ನೀನು ನಿನ್ನ ಬಿಟ್ಟು ಬದುಕಲಾರೆ ಎಂದಳು ಅಂತರಾಳದಿಂದ. ಇಬ್ಬರಲ್ಲೂ ಅಂತಃಕರಣದ ಒಂದು ಸೆಲೆ ಜಾಗೃತವಾಗಿತ್ತು. ಅದೇ ಅವರಿಬ್ಬರೂ ಬೇರೆಯಾಗುವುದನ್ನು ತಡೆದು ನಿಲ್ಲಿಸಿತು. ಸಹಜ ಬದುಕು ಬದುಕಬೇಕು. ಸಹಜ ಪ್ರೀತಿ ಉಳಿಯಲು ಸಾಕು. ಅಂತರಂಗದ ಆಪ್ತತೆ ಒಂದು ಬದುಕುವ ಸೌಜನ್ಯವಾಗಬೇಕು. ಬದುಕು ಒಂದು ಆರಾಧನೆ ಆಗಬೇಕು. ಅಲ್ಲಿ ಮನಸ್ಸು ಮಾತ್ರ ನೆಲೆಯಾಗಿರಬೇಕು ಎಂದು ಹಿರಿಯರು ಹೇಳುತ್ತಿದ್ದ ಮಾತು ಇಬ್ಬರಿಗೂ ನೆನಪಿಗೆ ಬಂದು ಒಬ್ಬರನ್ನೊಬ್ಬರು ನೋಡಿ ನಕ್ಕರು. ಇಬ್ಬರೂ ಸಂತೋಷದಿಂದ ಬದುಕುವ ಒಲುಮೆಯಿಂದ ಮನೆಯ ಕಡೆ ಹೆಜ್ಜೆ ಹಾಕಿದರು.
ನಾಗರಾಜ ಬಿ.ನಾಯ್ಕ.
ವಿದ್ಯೆ ಆಸ್ತಿ ಅಂತಸ್ತುಗಳೇ ಜೀವನವಲ್ಲ. ಪ್ರೀತಿ ಅಂತಃಕರಣಗಳು ತುಂಬಿದಾಗ ಮಾತ್ರ ಜೀವನ ಸಾರ್ಥಕ.ಆಧುನಿಕ ಬದುಕಿನಲ್ಲಿ ಎಲ್ಲವೂ ಇದೇ, ಆದರೆ ಬದುಕಿಗೆ ಯಾವುದು ಮುಖ್ಯ ಎಂಬುದನ್ನು ಅರಿಯುವಲ್ಲಿ, ಇಂದಿನ ಯುವ ಜನಾಂಗ ಎಡವುತ್ತಿದೆ. ಪ್ರೀತಿ ಎನ್ನುವುದು ತೋರಿಕೆಯಲ್ಲಿ ಇರುವುದಲ್ಲ. ಹೃದಯದ ಅಂತರಾಳದಲ್ಲಿ ಇರುವಂತದ್ದು ಕಷ್ಟ ನಷ್ಟ ನೋವು ನಲಿವುಗಳಿಗೆ ಮಿಡಿಯುವಂತದ್ದು ಎಂಬುದ ತಿಳಿಯ ಬೇಕಿದೆ. ಪ್ರತಿಯೊಬ್ಬರ ಅಂತಃಕರಣವೂ ಪ್ರೀತಿಯಿಂದ ತುಂಬಿರುತ್ತದೆ, ಅಹಂ ಅದನ್ನ ಹಿಡಿದಿಟ್ಟಿರುತ್ತದೆ. ನಮ್ಮಲ್ಲಿಯ ಅಹಂ ಬಿಟ್ಟಾಗ ಪ್ರೀತಿ ಆತ್ಮೀಯತೆ ಹೊರ ಬರುತ್ತದೆ. ಅಂತಃಕರಣವು ಪ್ರೀತಿಯಿಂದ ಜಿನುಗುತ್ತದೆ. ಮನಸು ಮನಸ್ಸುಗಳ ನಡುವಿನ ಗೋಡೆ ಕಳಚಿ ಬಿದ್ದಾಗ ಬದುಕು ಅರಳುತ್ತದೆ. ಜೀವನ ಸಾರ್ಥಕತೆಯ ಕಾಣುತ್ತದೆ ಎಂಬುದು ಈ ಕಥೆಯಲ್ಲಿ ಸರಳ ಸುಂದರವಾಗಿ ಮೂಡಿ ಬಂದಿದೆ. Happy ending ಖುಷಿ ನೀಡುತ್ತದೆ.
ನಾನಾ ಬಾಡ
ಸರ್ ಕಥೆ ಬಹಳ ಉತ್ತಮವಾಗಿ ನಿಮ್ಮದೇ ಸರಳ ಶೈಲಿಯಲ್ಲಿ ಮೂಡಿಬಂದಿದೆ. ಖಂಡಿತವಾಗಲೂ ಈ ಕಥೆ ವಾಸ್ತವಕ್ಕೆ ಕೈಗನ್ನಡಿಯಂತಿದೆ.ಪ್ರಸ್ತುತ ಕಾಲಘಟ್ಟದಲ್ಲಿ ದಾಂಪತ್ಯ ಜೀವನ ಅಹಂ ,ಅಂತಸ್ತು, ಹೆಚ್ಚುಗಾರಿಕೆ, ನಾನು, ನನ್ನದು ಎಂಬ ಕಾರಣದಿಂದಾಗಿ, ಹೇಗೆ ಹೊಡೆದು ನುಚ್ಚುನೂರಾಗುತ್ತದೆ, ಅದಕ್ಕೆ ಬಲಿಪಶುಗಳಾಗುವ ಅನೇಕ ಮಕ್ಕಳ ದಾರುಣಾವಸ್ಥೆ ಪ್ರಸ್ತುತ ಕಾಲದ ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ .ಆದರೆ ಈ ಕಥೆಯಲ್ಲಿ ದಂಪತಿಗಳಿಬ್ಬರು ಒಂದಾಗುವಂತಹ ದೃಶ್ಯ ಮತ್ತೆ ಆ ಕುಟುಂಬದ ಕಥೆ ಸುಖಾಂತ್ಯಗೊಂಡಿರುವುದು ಸಂತೋಷವನ್ನುಂಟು ಮಾಡುತ್ತದೆ
Vastava badukina kathe……uttamavagide
ಕಥೆ ಚೆನ್ನಾಗಿದೆ
ಧನ್ಯವಾದಗಳು ತಮ್ಮೆಲ್ಲರ ಆತ್ಮೀಯ ಪ್ರತಿಕ್ರಿಯೆಗೆ……