ವಚನ ಸಂಗಾತಿ
ವಚನ ಮೌಲ್ಯ
ಆವ ಕಾಯಕವಾದಡೂ
ಸ್ವಕಾಯಕವ ಮಾಡಿ
ಸುಜಾತಾ ಪಾಟೀಲ ಸಂಖ
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ,
ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ?
ಶರಣ ಲದ್ದೆಯ ಸೋಮಯ್ಯನವರು
ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಕಾಯಕ ದಾಸೋಹ ಗಳೆಂಬ ವಿನೂತನ ಆರ್ಥಿಕ ಸಿದ್ಧಾಂತಗಳನ್ನು ರೂಪಿಸುವ ಮೂಲಕ ಪ್ರತಿಯೊಬ್ಬರೂ ದುಡಿದೇ ಉಣ್ಣುವ ಕಡ್ಡಾಯ ಕಟ್ಟಳೆ ಹಾಕಿಕೊಂಡು, ತನ್ನ ಅವಶ್ಯಕತೆಗೆ ಮಿಕ್ಕ ಆದಾಯವನ್ನು ದಾಸೋಹ ಮಾಡುವ ಅನಿವಾರ್ಯತೆ ಅಳವಡಿಸಿಕೊಂಡು , ಸಾಮಾಜಿಕ ಆರ್ಥಿಕ ವ್ಯವಸ್ಥೆಗೆ ಸಮತೆಯ ಅಡಿಗಲ್ಲು ಹಾಕಿದ ಶರಣರ ಅಂದಿನ ಸಮತೆಯ ಸಾಮಾಜಿಕ ವ್ಯವಸ್ಥೆ ನೋಡಿ, ಇವತ್ತೂ ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಅಸಮಾನತೆಯ ಅಟ್ಟಹಾಸ ಮೆರೆಯುವ ಸಮಾಜ ನಾಚಿಕೆಪಡಬೇಕು.
ಇಂದು ಮತ್ತೆ ಸಾರ್ವಕಾಲಿಕ ಸರ್ವತೋಮುಖ ಸಮತಾ ವ್ಯವಸ್ಥೆಯನ್ನು ತರಬೇಕಾದರೆ,ಶರಣರ
ವಚನ ಮೌಲ್ಯಗಳ ಮೊರೆ ಹೋಗುವ ,ಕಾಯಕ ದಾಸೋಹ ತತ್ವಗಳನ್ನು ಆಚರಣೆಗೆ ತರುವ ಅನಿವಾರ್ಯತೆ ಇದೆ ಎಂದು ನನಗೆ ಅನಿಸುತ್ತದೆ.
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಪ್ರತಿಯೊಬ್ಬರು
ಯಾವುದಾದರೂ ಸರಿ ಕಾಯಕವನ್ನು ಕಡ್ಡಾಯವಾಗಿ ಮಾಡಬೇಕು,
ಅದರ ಜೊತೆಗೆ ಪ್ರತಿಯೊಬ್ಬ ವ್ಯಕ್ತಿ ವೈಯಕ್ತಿಕವಾಗಿ ತನಗಿಷ್ಟವಾದ ಕಾಯಕವನ್ನು ಸತ್ಯ ಶುದ್ಧ ಭಾವದಿಂದ ಮಾಡಬೇಕು.
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ಈ ರೀತಿ ಸತ್ಯ ಶುದ್ಧ ಭಾವದಿಂದ ಮಾಡಿದ ಕಾಯಕದಿಂದ ಬರುವ ಪ್ರತಿಫಲ ರೂಪದ ಆದಾಯವನ್ನು ಮೊದಲು ಗುರುವಿಗೂ ನಂತರ ಲಿಂಗಕ್ಕೂ ಕೊನೆಗೆ ಜಂಗಮಕ್ಕೂ ಅರ್ಪಿಸಿ ಆಮೇಲೆ ತಾನು ಉಣಬೇಕು.
ಆದಾಯದ ಸದ್ಬಳಕೆ
ಅರಿವು ,ಆಚಾರ, ಅನುಭಾವಕ್ಕೆ ಆಗಬೇಕೆಂಬ ಗುರುತರ ಜವಾಬ್ದಾರಿ ವ್ಯಕ್ತಪಡಿಸಿದ್ದಾರೆ. ಶರಣ ಲದ್ದೆಯ ಸೋಮಯ್ಯನವರು.
ಇಂತಹ ಉತ್ಕೃಷ್ಟ ವೈಚಾರಿಕತೆ ಶರಣರಲ್ಲಿ ಇದ್ದದ್ದು ನೋಡಿದರೆ ಅವರೆಂಥಾ ತತ್ವಜ್ಞಾನಿಗಳು ಎಂಬ ಅಚ್ಚರಿ ಮೂಡುತ್ತದೆ.
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ,
ಶರಣರ ಇಂತಹ ಸತ್ಯ ಶುದ್ಧ ಬದುಕಿನಲ್ಲಿ ಸಹಜ ಸಂಗತಿಗಳಾದ ಬೇನೆ, ರೋಗ - ರುಜಿನಗಳು ಬಂದರೆ ಅದರ ನೋವು ಸಂಕಟಗಳನ್ನು ಅನುಭವಿಸುತ್ತಾ, ಸ್ಥಿತಪ್ರಜ್ಞರಾಗಿ ಧೈರ್ಯ, ಸ್ಥೈರ್ಯದಿಂದ ಬದುಕಬೇಕು .ಬಂದ ಸಹಜಸ್ಥಿತಿಗಳಾದ ನೋವು ನಲಿವುಗಳನ್ನು ಎದುರಿಸಬೇಕು. ಒಂದೊಮ್ಮೆ ಮರಣವೇ ಬಂದರೂ ನಿಶ್ಚಿಂತನಾಗಿ ಯಾವುದೇ ರೀತಿಯ ಸೀಮಿತತೆಗೆ ಒಳಗಾಗಿದೆ, ಸಾಯಲು ಸಿದ್ಧನಾಗಬೇಕು,ಸತ್ತು ಹೋಗಬೇಕು.
ಶರಣರ ಈ ನಿರಾಳ, ನಿರ್ಲಿಪ್ತತೆ ಭಾವ ಅಸಾಮಾನ್ಯವಾದದ್ದು.
ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ?
ಇದು ಬಿಟ್ಟು ಇವೆಲ್ಲವುಗಳ ನಿವಾರಣೆಗಾಗಿ, ರಕ್ಷಣೆಗಾಗಿ ,ಆ ದೇವರ ಮೊರೆ ಹೋಗುವುದೇಕೆ ? ಆತನ ಹoಗೇಕೆ ? ಎಂದು ಪ್ರಶ್ನಿಸುತ್ತಾರೆ ಶರಣ ಲದ್ದೆಯ ಸೋಮಯ್ಯನವರು.
ಶರಣ ಧರ್ಮದ ಮೂಲ ಸಿದ್ಧಾಂತವಾದ 'ಕಾಯಕ ' ದಾಸೋಹ ತತ್ವಕ್ಕೆ ಎಲ್ಲ ಶರಣರು ಎಲ್ಲಿಲ್ಲದ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು. ಪ್ರತಿಯೊಬ್ಬ ಶರಣರೂ ಒಂದಿಲ್ಲೊಂದು ಕಾಯಕ ಮಾಡಿಯೇ ಬದುಕುತ್ತಿದ್ದರು.
ಉದಾಹರಣೆಗೆ: ಕಾಶ್ಮೀರ ದೇಶದ ಅರಸು ಮಹಾದೇವ ಭೂಪಾಲ ಕಲ್ಯಾಣ ಪಟ್ಟಣಕ್ಕೆ ಬಂದು, ಕಿರೀಟ ಹೊತ್ತ ತಲೆಯ ಮೇಲೆ ಕಟ್ಟಿಗೆ ಕಡಿದು ಮಾರುವ ಕಾಯಕ ಮಾಡಿ, ಶರಣ ಮೋಳಿಗೆ ಮಾರಯ್ಯನಾದರು. ಶರಣರ ಬಟ್ಟೆ ಮಡಿ ಮಾಡುವ ಕಾಯಕದ ಶರಣೆ ಮಾಚಿದೇವರು, ನಿತ್ಯ ಬೆಳಗಿನಲ್ಲಿ ಶರಣರ ಮನೆಯಂಗಳ ಕಸ ಗುಡಿಸುವ ಶರಣೆ ಸತ್ಯಕ್ಕ;
ಹೀಗೆ ಶರಣರೆನಿಸಿಕೊಂಡವರೆಲ್ಲರೂ ತಮ್ಮ ತಮ್ಮ ಮನಕ್ಕೆ ಒಪ್ಪುವಂತ ಕಾಯಕವನ್ನು ಮಾಡುತ್ತಿದ್ದರು. ಈ ಕಾಯಕಗಳಲ್ಲಿ ಮೇಲು – ಕೀಳು, ಶ್ರೇಷ್ಠ – ಕನಿಷ್ಠಗಳೆಂಬ ತಾರತಮ್ಯ,ಭೇದ ಭಾವಗಳು ಇರಲಿಲ್ಲ. ಎಲ್ಲ ಕಾಯಕಗಳಿಗೂ ತಮ್ಮದೇ ಆದ ಆದರ್ಶ ,ಘನತೆ, ಗೌರವಗಳು ಇದ್ದವು.
ಸತ್ಯ ಶುದ್ಧ ಕಾಯಕದಿಂದ ಬಂದ ಪ್ರತಿಫಲವನ್ನು ಅರಿವು, ಆಚಾರ, ಅನುಭಾವಗಳ ಸಾಕಾರ ಸ್ವರೂಪವಾಗಿರುವ ಗುರುಲಿಂಗ ಜಂಗಮರಿಗೆ ಅರ್ಪಿಸಬೇಕು. ಗುರುವಿಗೆ ತನುವನ್ನು, ಲಿಂಗಕ್ಕೆ ಮನವನ್ನು, ಜಂಗಮಕ್ಕೆ ಧನವನ್ನು ಅರ್ಪಿಸಬೇಕು. ಹೀಗೆ ಕಾಯಕದ ಪ್ರತಿಫಲ ಸಮರ್ಪಣೆಯಾದ ನಂತರ ತಾನು ಸ್ವೀಕರಿಸಿ ಮಿಕ್ಕುಳಿದುದನ್ನು ಸಮಾಜಕ್ಕೆ ದಾಸೋಹ ಮಾಡಬೇಕು. ಇಂತಹ ಸತ್ಯ ಶುದ್ಧ ಸಮರ್ಪಣಾ ಭಾವದ ಕಾಯಕದ ಬದುಕನ್ನು ಸಂತೃಪ್ತಿಯಿಂದ ಆದ್ಯಾತ್ಮಿಕ ಅನುಸಂಧಾನದಲ್ಲಿ ಕಳೆಯುತ್ತಾ ಸಾಗಬೇಕು. ಶರೀರಧರ್ಮಕ್ಕೆ ಅನುಗುಣವಾಗಿ ದೇಹಕ್ಕೆ ರೋಗ, ರುಜಿನ ,ಬೇನೆಗಳು ಬಂದರೆ ಉಂಟಾಗುವ ಸಂಕಟ ನೋವುಗಳನ್ನು ಸಹಿಸಿ ಧೈರ್ಯದಿಂದ ಎದುರಿಸಬೇಕು. ಪ್ರಸಂಗವಷಾತ್ ಪ್ರಾಣ ಹೋಗುವ ಪರಿಸ್ಥಿತಿ ಬಂದರೂ ನಿಶ್ಚಿಂತವಾಗಿ ಜೀವ ಬಿಟ್ಟು ಮುಕ್ತನಾಗಬೇಕು. "ಜನನ ಆಕಸ್ಮಿಕವಾದರೆ ಮರಣ ಖಚಿತವೆಂಬ " ಜೀವನದ ಸತ್ಯವನ್ನು ಅರಿಯಬೇಕು. ಇದು ನಿಸರ್ಗ ಸಹಜ ಬದುಕು. ಇದನ್ನು ಆನಂದದಿಂದ ಬದುಕಬೇಕು. ಕಷ್ಟ ತೊಂದರೆಗಳ ನಿವಾರಣೆಗಾಗಿ ದೇವರನ್ನು ಆಶ್ರಯಿಸಿ ಮೊರೆಯಿಡುವುದು ಸಲ್ಲದ ಮನಸ್ಥಿತಿ. ದೇವರ ಹಂಗು ಇಲ್ಲದೆ ಅರ್ಥಪೂರ್ಣ ಬದುಕನ್ನು ಬಾಳುವ ತುರ್ಯಾವಸ್ಥೆಯ, ಸ್ಪಷ್ಟವಾದ ಅಮೋಘ ಶರಣ ಮಾರ್ಗವನ್ನು ಶರಣ ಲದ್ದೆಯ ಸೋಮಯ್ಯನವರು ಸೂಚಿಸುತ್ತಾರೆ.
ಈ ಮಾರ್ಗದಲ್ಲಿ ಬದುಕಿದವರೇ ಸಾವಿಲ್ಲದ ಶರಣರು. ಇಂತಹ ಬದುಕು ಬದುಕಿದ ಶರಣರಿಗೆ ಶರಣರೇ ಸಾಟಿ.
ಅಬ್ಬಾ………….!ದನ್ಯನಾದೆ
ಸುಜಾತಾ ಪಾಟೀಲ ಸಂಖ
Super meaningful appropriate & Very much Appreciable Explanation Sujata akka ThanQ Very much
Sharane Sujata Patil is the 21st century Akkamahadevi.Her interpretation of Vachanas is marvelous one. Her mystic experience is uncomparable.. Hats off to her versatile genius.