ಸಾಲವೆಂಬ ಆಪದ್ಬಾಂಧವ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಲೇಖನ

ಅರೇ ಏನಿದು…!!  ಎಲ್ಲರೂ ಸಾಲವೆಂದರೆ ಅದೊಂದು ಶೂಲ ಎನ್ನುತ್ತಾರೆ.  ಸಾಲ ಮಾಡಿದವನು ಸಾವಿಗೆ ಹತ್ತಿರವಾಗುತ್ತಾನೆಂಬ ಮಾತು ಬೇರೆ.   ಹೀಗೆ ‘ಸಾಲ’ದ ಬಗ್ಗೆ ಕೊಂಕು ಮಾತನಾಡುವವರೇ ಹೆಚ್ಚು ಜನ.  ಹೌದು ಮಾತನಾಡುವವರೆಲ್ಲರೂ ಸಾಲದಿಂದ ಮುಕ್ತರಾಗಿರುವುದಿಲ್ಲ..! ಅವರು ಕೂಡ ಸಾಲ ಮಾಡಿದವರೇ..!!  

 ತ್ರಿಪದಿಯ ಮಹಾ ಕವಿ ಸರ್ವಜ್ಞರು ಸಾಲವನ್ನು ಕುರಿತು,
 “ಸಾಲವನ್ನು ಕೊಂಬುವಾಗ ಹಾಲೋಗರದಂತೆ, ಸಾಲಿಗನು ಬಂದು ಸಾಲವನ್ನು ಕೇಳುವಾಗ ಕಿಬ್ಬದಿಯ ಕೀಲು ಮುರಿದಂತೆ” ಎಂದು ಸಾಲದ ಬಗ್ಗೆ ವಾಸ್ತವಿಕ ಸಂಗತಿಯನ್ನು ನಮ್ಮೆದುರು ತೆರೆದಿಟ್ಟಿದ್ದಾರೆ. ಸಾಲ  ಯಾರಿಗೂ ಬೇಡ ಎನ್ನುತ್ತಲೇ ಸಾಲವನ್ನು ಎಲ್ಲರೂ ಮಾಡುತ್ತಾರೆ. ಹಾಗೇ ನೋಡಿದರೆ ಟಾಟಾ, ಬಿರ್ಲಾ,  ಅಂಬಾನಿಯಿಂದ ಹಿಡಿದು ಕೂಲಿ ಮಾಡುವ ಸಾಮಾನ್ಯ ಕಾರ್ಮಿಕನೂ ಸಾಲದಿಂದ ಹೊರತಾಗಿಲ್ಲ. ನೌಕರರಂತೂ ಸಾಲದಲ್ಲಿ ಕೊಳೆಯುವುದನ್ನು ನಾವು ನೋಡುತ್ತೇವೆ. ಸ್ವತಃ ಅನುಭವಿಸುತ್ತಿದ್ದೇನೆ.

 ಮನುಷ್ಯನ ಅಗತ್ಯತೆಗಳು ಹೆಚ್ಚಾದಂತೆ ಮತ್ತು ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಇಂದಿನ ಆಧುನಿಕ ಕಾಲದಲ್ಲಿ ತನ್ನ ದುಡಿಮೆಯ ಆದಾಯವನ್ನು ನಂಬಿದರೆ ಸಾಲುವುದಿಲ್ಲ. ನೌಕರರಂತೂ ಸಾಲವಿಲ್ಲದೆ ಒಂದು ಚಿಕ್ಕ ಸೂರನ್ನೂ ಕಟ್ಟಿಕೊಳ್ಳಲಾಗುವುದಿಲ್ಲ. ರೈತನಾದರೇ ಹೊಲದಲ್ಲಿ ಬೀಜ ಹಾಕುವುದರಿಂದ ಹಿಡಿದು ಹರಗಲು ಕೃಷಿ ಚಟುವಟಿಕೆಗಳನ್ನು ಮಾಡಲು,  ಸಾಲವನ್ನು ಪಡೆದುಕೊಳ್ಳಲೇಬೇಕು. ಸಾಲವಿಲ್ಲದೆ ಯಾವ ಕಾರ್ಯವೂ ನಡೆಯುವುದಿಲ್ಲ. ಆದರೂ ನಾವು ಸಾಲ ಎಂದಕೂಡಲೇ ಮೂಗು ಮುರಿಯುತ್ತೇವೆ. ಕೊಂಕು ಮಾತನಾಡುತ್ತೇವೆ. ನನ್ನ ಪ್ರಕಾರ, ನಿಜವಾಗಲೂ ಸಾಲವೆಂದರೆ ಆಪದ್ಬಾಂಧವನಿದ್ದಂತೆ..!!

‘ಸಾಲ’ ಅದೊಂದು ಕಷ್ಟದಲ್ಲಿ ಕೈ ಹಿಡಿಯುವ ಕಾಮಧೇನು ಇದ್ದಂತೆ. ತಂದೆ ತಾಯಿಗಳ ಅನಾರೋಗ್ಯ ಅಥವಾ ಯಾರಾದರೂ ಕುಟುಂಬದ ಸದಸ್ಯರು ಅನಾರೋಗ್ಯ ಪೀಡಿತರಾದರೆ, ಏನಾದರೂ ವಿಶೇಷ ಕಾರ್ಯಕ್ರಮವನ್ನು ಮನೆಗಳಲ್ಲಿ ಹಮ್ಮಿಕೊಂಡರೆ, ಮದುವೆ, ಮಕ್ಕಳ ಓದು,  ಹೊಸ ಹೊಸ ಯೋಜನೆಗಳು, ಮನೆ ಕಟ್ಟುವಿಕೆ,  ಹೊಲಗದ್ದೆಗಳ ಖರೀದಿ ಅಲ್ಲದೆ ಅನೇಕ ಆರ್ಥಿಕ ಚಟುವಟಿಕೆಗಳನ್ನು ಉನ್ನತಿಕರಿಸಲು ನಮಗೆ ಎಲ್ಲವನ್ನೂ ಒಂದೇ ಸಲ ಹಣವನ್ನು ಗಳಿಸಿ, ಆಸ್ತಿ ಮಾಡಲು ಆಗುವುದಿಲ್ಲ. ಆಗ ನಾವು ಬ್ಯಾಂಕುಗಳ ಅಥವಾ ಫೈನಾನ್ಸರ್ ಅವರ ಮೊರೆ ಹೋಗಿ ಸಾಲವನ್ನು ಮಾಡುತ್ತೇವೆ. ಅದು ಅನಿವಾರ್ಯವೂ ಕೂಡ.

 “ಬದುಕಿನಲ್ಲಿ ಸಾಲ ಮಾಡಿಯಾದರೂ ಆಸ್ತಿ ಮಾಡಬೇಕು” ಎಂದು ಹಿರಿಯರು ಹೇಳುತ್ತಾರೆ. ಪ್ರತಿ ತಿಂಗಳು ಸಾಲವನ್ನು ಮುಟ್ಟಿಸಬೇಕೆನ್ನುವ ಜವಾಬ್ದಾರಿ, ಹೊಣೆಗಾರಿಕೆ ನಮ್ಮ ಹೆಗಲ ಮೇಲಿರುತ್ತದೆ.  ಇಲ್ಲವಾದರೆ ಬಂದ ಆದಾಯವನ್ನು ಯಾವುದೇ ಮುಲಾಜಿಲ್ಲದೆ ವಿಲಾಸಿ ಜೀವನಕ್ಕೆ ಖರ್ಚು ಮಾಡಿಬಿಡುತ್ತೇವೆ. ಯಾವುದೇ ಯೋಜನೆ ಇಲ್ಲದ ಖರ್ಚು ವೆಚ್ಚವು ನಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ. ‘ಸಾಲ’ ಮಾಡುವುದು ಒಂದು ಕಲೆ  ಆದರೆ ಅದನ್ನು ಅಷ್ಟೇ ಜಾಣತನದಿಂದ ಸಾಲವನ್ನು ನಿಗದಿತ ಕಂತುಗಳಲ್ಲಿ ಬಡ್ಡಿ ಸಮೇತ ಕಟ್ಟಬೇಕು. ಆ ರೀತಿಯಲ್ಲಿ ಪಾವತಿಸಿದರೆ ಬ್ಯಾಂಕುಗಳು ನಮ್ಮ ಮೇಲೆ ವಿಶ್ವಾಸವಿಟ್ಟು ‘ಸಿಬಿಲ್ ಸ್ಕೋರ್’  ಎನ್ನುವ ಪ್ರಾಮಾಣಿಕತೆಯ ಹಣೆಪಟ್ಟಿಯನ್ನು ನಮಗೆ ಕಟ್ಟುತ್ತವೆ. ಹಾಗೆಯೇ ವ್ಯಕ್ತಿಗಳಲ್ಲಿ ಸಾಲವನ್ನು ತಂದರೆ, ನಿಗದಿತವಾಗಿ ಬಡ್ಡಿ ಮತ್ತು ಅಸಲನ್ನು ಕಟ್ಟಿ, ಅವರ ಮೇಲೆ ನಾವು : ನಮ್ಮ ಮೇಲೆ ಅವರು ನಂಬಿಕೆ ಮೂಡುತ್ತದೆ. ಅವರು ಯಾವ ಸಂದರ್ಭದಲ್ಲಿಯಾಗಲಿ ಕೇಳಿದ ತಕ್ಷಣ ಸಾಲವನ್ನು ಕೊಡುತ್ತಾರೆ. ಸಾಲದ ವ್ಯವಹಾರ ನಂಬಿಕೆಯ ಮೇಲೆ ನಿಂತಿರುತ್ತವೆ. ಆ ನಂಬಿಕೆಯನ್ನು ಕಳೆದುಕೊಂಡರೆ ಯಾರ ಬಳಿಯೂ ಸಾಲ ಹುಟ್ಟುವುದಿಲ್ಲ ಅಲ್ಲದೆ ಸಂಬಂಧಗಳು ಕೆಡುತ್ತವೆ. ಹಾಗೆಯೇ ಬ್ಯಾಂಕುಗಳು ನಮ್ಮ ವಿಶ್ವಾಸದ ಗ್ರಾಫ್ ಅನ್ನು ಅಳೆದು ಬಿಡುತ್ತವೆ. ಅಳೆದು ತೂಗಿ ನಮ್ಮ ಆದಾಯವನ್ನು ನೋಡಿ ಬ್ಯಾಂಕುಗಳು ಸಾಲವನ್ನು ನೀಡುತ್ತೇವೆ. ಇದು ‘ಸಾಲ’ ಪಡೆಯುವ ಸಮಯದಲ್ಲಿ ಅನೇಕ ಸಾಕ್ಷಿ, ಪುರಾವೆಗಳು, ಕಾಗದ ಪತ್ರಗಳು, ಬಾಂಡ್ ಗಳು, ವೇತನ ಪತ್ರಗಳು… ವ್ಯವಹಾರಕ್ಕೆ ಪೂರಕವಾದ ಮಾಹಿತಿಗಳನ್ನು ಬ್ಯಾಂಕುಗಳಿಗೆ ಕೊಡಲೇಬೇಕು.  ಆಗ ಮಾತ್ರ ಬ್ಯಾಂಕುಗಳು ಸಾಲವನ್ನು ನೀಡುತ್ತವೆ.
ಬ್ಯಾಂಕ್ ಗಳು ಸಾಲ ಕೊಡುತ್ತವೆ ಎಂದು ಆಫರ್ ಮೇಲೆ ಆಫರ್ ಕೊಟ್ಟರೂ ತಮಗೆ ಬೇಕಾದ ಎಲ್ಲಾ ರೀತಿಯ ಆಧಾರಗಳನ್ನು ಪಡೆದು ಸಾಲ ಕೊಡುತ್ತವೆ.

 ‘ಸಾಲ’ವನ್ನು ಪಡೆದ ನಾವುಗಳು ಸಾಲದ ಉದ್ದೇಶ ನಮ್ಮ ಮನದಲ್ಲಿರಬೇಕು. ಅದೇ ಉದ್ದೇಶಕ್ಕೆ ಅನುಗುಣವಾಗಿ ಅದನ್ನು ಬಳಸಿಕೊಳ್ಳಬೇಕು. ಇಲ್ಲವಾದರೆ ಪಡೆದ ಸಾಲದ ಉದ್ದೇಶ ಮರೆತು ಬೇರೆ ಯಾವುದಕ್ಕೋ ಖರ್ಚು ಮಾಡಿ ನಂತರ ಪರಿತಪಿಸುತ್ತೇವೆ. ನಮ್ಮ ಆದಾಯದ ಇತಿಮಿತಿಯಲ್ಲಿಯೇ ಸಾಲವನ್ನು ಮಾಡಬೇಕು. ಅದಕ್ಕಾಗಿಯೇ ಹಿರಿಯರು, “ಹಾಸಿಗೆ ಇದ್ದಷ್ಟು ಕಾಲು ಚಾಚು”  ಎಂದು ಹೇಳಿದ್ದಾರೆ.  

 ನಮ್ಮ ಆದಾಯದ ಮಿತಿಯಲ್ಲಿ ಸಾಲವನ್ನು ಮಾಡಿ, ಆ ಸಾಲವನ್ನು ಬಡ್ಡಿ ಸಮೇತ ನಿಗದಿತವಾಗಿ ಕಟ್ಟಿದಾಗ ಮಾತ್ರ ನಮ್ಮ ಆರ್ಥಿಕ ಚಟುವಟಿಕೆಗಳ ಮೇಲೆ ಜವಾಬ್ದಾರಿ ಇದೆ ಎಂದು ಅರ್ಥ.  ಸಾಲವನ್ನು ಪಡೆದು ವಿಲಾಸಿ ಜೀವನವನ್ನು ಮಾಡಿ, ದುಡಿಯದಂತೆ ಇದ್ದು, ಆರ್ಥಿಕ ಮುಗ್ಗಟ್ಟಿನಿಂದ ಬಳಲಿದರೆ,  ಬ್ಯಾಂಕುಗಳ, ವ್ಯಕ್ತಿಗಳ ವಿಶ್ವಾಸವನ್ನು ಕಳೆದುಕೊಳ್ಳುತ್ತೇವೆ.  ಸಾಲ ಮುಟ್ಟಿಸದೇ ಹೋದರೆ ನೋಟಿಸ್, ದಂಡ, ಕೋರ್ಟ್,ಶಿಕ್ಷೆ,  ಮಾನ ಮರ್ಯಾದೆ ಹರಾಜು, ಆಸ್ತಿಗಳ ಹರಾಜು….ಹೀಗೆ ನಾನಾ ಪ್ರಕಾರದ ಶಿಕ್ಷೆಗೆ ಒಳಪಟ್ಟು, ಸಮಾಜದಲ್ಲಿ ನಮ್ಮತನವನ್ನು ಕಳೆದುಕೊಂಡು ಬಿಡುತ್ತೇವೆ.

ನಮ್ಮ ಹಿಡಿತದಲ್ಲಿ ಸಾಲವನ್ನು ಮರುಪಾವತಿಸಿ, ನಮ್ಮಾಸೆಗಳನ್ನು ಈಡೇರಿಸಿಕೊಳ್ಳಬೇಕು. ಸಂಬಂಧಿಕರು,  ಬಂಧುಗಳು, ಸ್ನೇಹಿತರು ಕಷ್ಟವಿದ್ದಾಗ ತಕ್ಕ ಮಟ್ಟಿಗೆ ಕೈಹಿಡಿಯಬಹುದು, ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುವುದಿಲ್ಲ ಎಂಬ ಎಚ್ಚರ ನಮ್ಮಲ್ಲಿದ್ದರೆ ‘ಸಾಲ’ ಆಪದ್ಬಾಂಧವನಾಗುವುದರಲ್ಲಿ ಸಂಶಯವಿಲ್ಲ. ಸಾಲ ಮಾಡಿಯಾದರೂ…ಆಸ್ತಿ ಗಳಿಸಿ ಆದರೆ  ನಮ್ಮ ಅಸ್ತಿತ್ವವನ್ನು ಮಾತ್ರ ಕಳೆದುಕೊಳದಿರಲಿ ಎಂದು ಬಯಸೋಣ.


One thought on “ಸಾಲವೆಂಬ ಆಪದ್ಬಾಂಧವ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಲೇಖನ

  1. ಸವಿಸ್ತಾರವಾದ ಲೇಖನ. ಸಾಲ ನಿಜವಾಗಿಯೂ ಆಪದ್ಭಾಂದವನೇ. ನೀವು ಹೇಳಿದಂತೆ ಟಾಟಾ, ಬಿರ್ಲಾ, ಮಲ್ಯ, ನೌಕರದಾರ, ಕಾರ್ಮಿಕ, ಕೃಷಿಕ ಎಲ್ಲರೂ ಸಾಲಗಾರರೇ. ಪಡೆದ ಸಾಲ ಸದ್ವಿನಿಯೋಗವಾಗಬೇಕು ಅಷ್ಟೇ.
    ಅಭಿನಂದನೆಗಳು.

Leave a Reply

Back To Top