‘ಮಾವಿನ ಮರದ ಪ್ರಾರಬ್ಧ’ನನ್ನ ಬಾಲ್ಯಕಾಲದ ಒಂದು ಪ್ರಸಂಗ.ಶೀಲಾ ಭಂಡಾರ್ಕರ್

ಗೇಟ್ ತೆರೆದ ಸದ್ದಾಯಿತೆಂದು ಹೋಗಿ ನೋಡಿದೆ, ಗಂಗಯ್ಯ ಅಂಗಳದ ಮಾವಿನ ಮರವನ್ನೇ ನೋಡುತ್ತಾ ನಿಂತಿದ್ದ. ಸೊಂಟದ ಮೇಲೆ ಎರಡೂ ಕೈಯಿಟ್ಟು ನಿಂತ ಅವನ ಭಂಗಿ ನೋಡಿದರೆ ಏನೋ ಯೋಚನೆಯಲ್ಲಿ ಬಿದ್ದ ಹಾಗಿತ್ತು.

ನಾನು ಒಳಗೆ ಹೋಗಿ ಅಪ್ಪನಿಗೆ ಗಂಗಯ್ಯ ಬಂದಿದ್ದಾನೆಂದು ತಿಳಿಸಿದೆ.
ಗಂಗಯ್ಯ ಅಪ್ಪನ ಬ್ಯಾಂಕಿನಲ್ಲಿ ಪ್ಯೂನ್ ಆಗಿರುವವನು.
ಅಜ್ಜಿ ಮತ್ತು ಅಪ್ಪ ಹಿಂದಿನ ಜಗುಲಿಯಲ್ಲಿ ಕೂತು ಹಲಸಿನಹಣ್ಣು ಹೆಚ್ಚಿ ಬಿಡಿಸುತಿದ್ದರು. “ಹಿಂದೆ ಬರಲಿಕ್ಕೆ ಹೇಳು” ಅಂದರು ಅಪ್ಪ. ನಾನು ಹೋಗಿ “ಅಪ್ಪ ಹಿತ್ತಲಲ್ಲಿ ಇದ್ದಾರೆ” ಅಂದೆ “ಹೂಂ” ಅಷ್ಟೇ ಹೇಳಿ ಇನ್ನೂ ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ಆಮೇಲೆ ಮನೆಯ ಹಿತ್ತಲಿನ ಕಡೆ ನಡೆದ.

” ದಾನೆಯೇ .. ಮರಟ್ ಒಂಜಾಂಡಲಾ ಕುಕ್ಕು ಬುಡ್ತಿಜ್ಜಾ?” ಮರದಲ್ಲಿ ಮಾವಿನಹಣ್ಣು ಬಿಟ್ಟಿಲ್ಲವೆಂಬುದು ಅವನ ತಲೆಬಿಸಿಗೆ ಕಾರಣವಾಗಿತ್ತು.
“ಕುಕ್ಕು ಎಂತದ್ದು, ನೆಟ್ಟು ಐದು ವರ್ಷ ಆಗ್ಲಿಕ್ಕೆ ಬಂತು, ಒಂದು ಹೂ ಕೂಡ ಬಿಡ್ಲಿಲ್ಲ” ಎಂದು ಅಜ್ಜಿ ಹೇಳಿದರು.
“ಯ್ಯೆಬ್ಬೆ.. ಮತ್ತೆ ಎಂತಕ್ಕೆ ಅದನ್ನು ಸಾಕ್ತಾ ಇದ್ದೀರಿ, ದಂಡಕ್ಕೆ.” ಗಂಗಯ್ಯನ ಮಾತಿಗೆ ಅಪ್ಪ ನಗುತ್ತಾ, “ಸಾಕುವುದೆಂದ್ರೆ ಅದಕ್ಕೇನು ಹೊಟ್ಟೆಗೆ ಹಾಕಬೇಕಾ? ಬಟ್ಟೆ ಕೊಡಿಸ್ಬೇಕಾ? ಶಾಲೆಗೆ ಕಳಿಸ್ಲಿಕ್ಕುಂಟಾ, ಎಂತ ಮಾತಾಡ್ತಿ ಗಂಗಯ್ಯಾ?!”
ನನಗೂ ನಗು ತಡೆಯಲಾಗಲಿಲ್ಲ.
“ಇರುವ ಇಷ್ಟು ಚಿಕ್ಕ ಜಾಗದಲ್ಲಿ ಅರ್ಧಕ್ಕರ್ಧ ಅದೇ ಹರಡಿಕೊಂಡಿದೆ. ಬಿದ್ದಿರ್ಲಿ ಅನ್ಲಿಕ್ಕೆ ನಿಮ್ದೇನು ಎಕರೆಗಟ್ಟಲೆ ತೋಟವಾ? ಹಾಗೆಲ್ಲಾ ಸುಮ್ನೆ ಭೂಮಿ ವೇಸ್ಟ್ ಮಾಡ್ಬಾರ್ದು.”

ಪರಿಸರ ಸಂರಕ್ಷಣೆಯ ಪಾಠ ಶುರು ಮಾಡಿದ ಗಂಗಯ್ಯನನ್ನು ಮಧ್ಯದಲ್ಲಿಯೇ ತಡೆದು ಅಜ್ಜಿ ಕೇಳಿದರು. “ವೇಸ್ಟ್ ಹೇಗೆ? ಅದರ ನೆರಳಲ್ಲಿ ಕೂತು ಮಕ್ಳು ಆಡುವುದಿಲ್ವಾ? ಅಂಗಳ ತುಂಬಾ ಹಸಿರು ಹಸಿರಾಗಿ ಇಲ್ವಾ? ಇರಲಿ ಬಿಡು. ಹಣ್ಣು ಬಿಡುವ ಕಾಲ ಬಂದ್ರೆ ಬಿಟ್ಟೀತು. ನಿಂಗೇನಾದ್ರೂ ಔಷಧಿ ಗೊತ್ತಿದ್ರೆ ಹೇಳು ಮಾರಾಯಾ”

“ನೀವು ಒಳ್ಳೆ ಗೊಬ್ಬರ ಗಿಬ್ಬರ ಹಾಕಿ ಬೆಳೆಸಿದ್ದೀರಿ. ಬಿಡುವುದಿದ್ದರೆ ಇಷ್ಟು ವರ್ಷ ಬೇಕಿರಲಿಲ್ಲ. ಇನ್ನು ಉಳಿದಿರುವುದು ಒಂದೇ ಉಪಾಯ.”
ಮರ ಕಡಿಯುವ ಅಂತಿಮ ಉಪಾಯ ಹೇಳುತಿದ್ದಾನೆಂದು ನನಗೆ ಅವನ ಮೇಲೆ ಕೋಪ ಬಂತು.

ತಿಂದು ಬಿಸಾಕಿದ ಮಾವಿನ ಹಣ್ಣಿನ ಗೊರಟೊಂದು ಮೊಳಕೆಯೊಡೆದಿತ್ತೆಂದು ಅದನ್ನು ನಾವು ಒಂದು ಒಳ್ಳೆಯ ಜಾಗ ನೋಡಿ ನೆಟ್ಟು ಪಾತಿ ಮಾಡಿ ನೀರು ಹಾಕಿ ಬೆಳೆಸಿದ್ದು

ಅದು ನೋಡನೋಡುತಿದ್ದಂತೆ ಗಿಡವಿದ್ದದ್ದು ಮರವಾಗಿ ಹರಡಿತು. ಛತ್ರಿಯ ಹಾಗೆ ಮನೆಯ ಮುಂದಿನ ಅಂಗಳದ ನೆರಳಾಗಿತ್ತು.

ಅದರ ನೆರಳಲ್ಲಿ ಚಾಪೆ ಹಾಸಿ ಮಲಗಿ ಕಥೆ ಪುಸ್ತಕ ಓದುತಿದ್ದುದು , ಹಗ್ಗ ಕಟ್ಟಿ ದಿಂಬಿಟ್ಟು ಕೂತು ಸುಮ್ಮನೆ  ದೂರದ ರಸ್ತೆಯಲ್ಲಿ ಹೋಗುವ ಜನರನ್ನು
 ನೋಡುವುದು, ಎದುರಿನ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿರುವವರನ್ನು ಗಮನಿಸುವುದು ಎಲ್ಲವೂ ಇಂದಿಗೂ ನನ್ನ ನೆನಪಿನ ಮಧುರ ಕ್ಷಣಗಳು.

“ಇವನಿಗ್ಯಾಕೆ ಅಧಿಕಪ್ರಸಂಗ, ಬಂದ ಕೆಲಸ ಏನು ಅಂತ ನೋಡಿ ಹೋಗುವುದಲ್ವಾ.” ಮನಸ್ಸಿನಲ್ಲೇ ಬೈದೆ.

“ಅದಕ್ಕೆ ಸಮಾ ಬಯ್ಬೇಕು. ಬಾಯಿಗೆ ಬಂದದ್ದು ಬಯ್ಬೇಕು. ನಾಚಿಕೆಯಾಗಿ ಫಲ ಬಿಡಲು ಶುರು ಮಾಡ್ತದೆ ನೋಡಿ ಬೇಕಾದ್ರೆ.” ಗಂಗಯ್ಯನ ಉಪಾಯ ಕೇಳಿ ಎಲ್ಲರೂ ನಕ್ಕರು.
“ಇದೆಂತ ಉಪಾಯ ನಿನ್ನದು. ಬಯ್ಯುವುದಂದ್ರೆ ಹೇಗೆ ಬಯ್ಯುವುದು? ಇಂಚಲಾ ಒಂಜಿ ಉಂಡಾ ಮಾರಾಯಾ?”
“ಹೀಗೂ ಉಂಟೇ” ಅನ್ನುವ ಸ್ಟೈಲಲ್ಲಿ ಅಜ್ಜಿ ಕೇಳಿದರು.

“ಉಂಡು ಅಮ್ಮಾ.. ನಾವು ಮಾಡಿದ್ದೇವೆ ಹಾಗೆ. ಆಮೇಲೆ ಮರದ ತುಂಬಾ ಹಣ್ಣು ಬಿಟ್ಟಿದೆ. ವರ್ಷ ವರ್ಷ.”

“ಹೌದಾ ಆದ್ರೆ ನಮಗೆ ಏನು ಬಯ್ಬೇಕು ಅಂತ ಗೊತ್ತಿಲ್ಲವಲ್ಲ. ಒಂದು ಕೆಲಸ ಮಾಡು ನೀನೇ ಬಯ್ದು ನೋಡು. ಮನೆಯವರು ಬೈದ್ರೆ ತಾಗ್ಲಿಕ್ಕಿಲ್ಲ. ಹೊರಗಿನವರು ಬೈದ್ರೆ ಜಾಸ್ತಿ ಅವಮಾನ ಆಗಬಹುದು.” ಅಪ್ಪ ಅವನ ಉಪಾಯವನ್ನು ಉಪಾಯದಿಂದಲೇ ಅವನ ತಲೆಗೇ ಅಂಟಿಸಿದರು.

ಬೆಳಗಿನ ಜಾವದಲ್ಲೇ ಬೈಬೇಕು. ಇನ್ನೂ ಕತ್ತಲೆ ಇರುವಾಗಲೇ. ಏನೇನೋ ಸಬೂಬು ಹೇಳುತಿದ್ದವನಿಗೆ ಅಮ್ಮ ಹೇಳಿದರು. ನಾಳೆ ಆದಿತ್ಯವಾರ. ನಿಂಗೆ ಬ್ಯಾಂಕಿಲ್ಲ ಅಲ್ವಾ? ಪುಲ್ಲೆ ಕಾಂಡೆಯೇ ಬಾ. ಆಮೇಲೆ ಇಲ್ಲಿಯೇ ಕಾಫಿ ತಿಂಡಿ ಮಾಡಿ ಹೋದರಾಯ್ತು. ಎಂದರು.

ತಿಂಡಿ ಅಂದ ಕೂಡಲೇ ಬಾಯಲ್ಲಿ ನೀರೇ ಸುರಿಯಿತು ಗಂಗಯ್ಯನಿಗೆ. ಎಂತ ತಿಂಡಿ ಮಾಡ್ತೀರಿ ನಾಳೆ?

ನಿಂಗೇನು ಬೇಕು ಹೇಳು ಅದೇ ಮಾಡ್ತಾರೆ ಎಂದು ಅಪ್ಪ ಕೂಡ. ಇವನು ಬಿಟ್ರೆ ಸಿಗುವ ಗಿರಾಕಿಯಲ್ಲ. ತಿಂಡಿ ಆಸೆಗಾದ್ರು ಬಂದೇ ಬರುತ್ತಾನೆ ಎಂದು ಅವನ ಉಪಾಯಕ್ಕೆ ಪ್ರತ್ಯುಪಾಯ ಹೂಡಿದರು.

“ಪುಂಡಿ ಗಟ್ಟಿ ಮಾಡ್ತೀರಾ? ಒಂದು ಸಲ ತಿಂದಿದ್ದೆ ನಿಮ್ಮನೇಲಿ. ಅಷ್ಟು ರುಚಿಯಾಗಿ ನಮ್ಗೆ ಮಾಡ್ಲಿಕ್ಕೆ ಬರುವುದಿಲ್ಲ. ನಮ್ಮನೇಲಿ ಮಾಡಿದ್ರೆ ಗಟ್ಟಿ ಗಟ್ಟಿಯಾಗೇ ಇರ್ತದೆ.”

“ನೀವು ಅದಕ್ಕೆ ಗಟ್ಟಿ ಅಂತೀರಲ್ಲ ಅದಕ್ಕೇ ಅದು ಗಟ್ಟಿಯಾಗುವುದು. ನಮ್ಮ ಹಾಗೆ ಕಡುಬು ಅಂತ ಕರೀರಿ ಮೆತ್ತಗಾಗ್ತದೆ” ಎಂದೆ. ನನಗೂ ಅವನ ಮರಕ್ಕೆ ಬಯ್ದು ಫಲ ಹುಟ್ಟಿಸುವ ಉಪಾಯದ ಬಗ್ಗೆ ಬಂದ ನಗುವನ್ನು ಹೊರ ಹಾಕಬೇಕಿತ್ತು.

“ಆಯ್ತು ನಾಳೆ ನಿನ್ನ ಕೋರಿಕೆಯ ಪುಂಡಿ ಕಡುಬೇ ಮಾಡುವ. ಬೇಗ ಬಂದು ನಿನ್ನ ಕೆಲಸ ಮಾಡು ಆಯ್ತಾ.” ಆಯ್ತು ಅಮ್ಮಾ ಅಂತ ಅವನಿಗೆ ತಿನ್ನಲು ಕೊಟ್ಟಿದ್ದ ಹಲಸಿನ ಹಣ್ಣು ತಿಂದು ಮುಗಿಸಿ ಹೋದ ಹಿ ಹಿಹಿ… ಇದೊಂದು ತರದ ತಮಾಷೆ ಎಂದು ಅನಿಸಿದರೂ,  ಪಾಪ.. ಮರ ಏನು ಮಾಡಿದೆ.. ಸುಮ್ಮಸುಮ್ಮನೆ ಬಯ್ಯಲು,…? ಆದರೂ ಗಂಗಯ್ಯ ಬಂದಾಗ  ಹೇಗೆ ಬಯ್ಯಬಹುದು ಎಂದು ನೋಡಬೇಕು.

ಮಾರನೆ ದಿನ ಗಂಗಯ್ಯ ಬೆಳಬೆಳಗ್ಗೆ ಬಂದು ಬಾಗಿಲು ತಟ್ಟಿದಾಗ ನಾನೂ ಎದ್ದೆ. ಆದರೆ ಅಮ್ಮ .. “ಅವನಷ್ಟಕ್ಕೆ ಅವನ ಕೆಲಸ ಮಾಡಲಿ.. ನೀನೇನೂ ಅದನ್ನು ನೋಡಬೇಕಾಗಿಲ್ಲ. ” ಅಂದರು.

ನಾನು ಎದ್ದು ಕೂತದ್ದೇ ಅದಕ್ಕೋಸ್ಕರ.. ನೋಡಬೇಕಾಗಿಲ್ಲ ಅಂದರೆ…!..
ಹೂಂ.. ಅಂದೆ ಅಷ್ಟೆ. ಮೆತ್ತಗೆ ಹೋಗಿ ಕಿಟಕಿಯಿಂದ ಇಣುಕಿ ನೋಡಿದೆ…

ಗಂಗಯ್ಯ ಪಂಚೆಯನ್ನು ಕಚ್ಚೆ ಕಟ್ಟಿ ನಿಂತಿದ್ದ.. ಇವನೇನು ಮರ ಹತ್ತಿ ಬಯ್ಯುತ್ತಾನಾ ಅಂತ ಆಶ್ಚರ್ಯ ನನಗೆ.
ಇಲ್ಲ.. ಅಲ್ಲೇ ನಿಂತು ಮೊದಲು ಮರಕ್ಕೆ ನಮಸ್ಕಾರ ಹಾಕಿದ. ನಂತರ ಬಗ್ಗಿ ಒಂದು ಹಿಡಿ ಮಣ್ಣನ್ನು ಕೈಯ್ಯಲ್ಲಿ ಹಿಡಿದುಕೊಂಡು ಕಣ್ಣೆಲ್ಲ ಅರಳಿಸಿ., ಕೈ ಬಾಯಿ ತಿರುವುತ್ತ..
ಅದೇನು ಬಯ್ಯುತಿದ್ದನೋ ಗೊತ್ತಿಲ್ಲ..!

ಒಟ್ಟಿನಲ್ಲಿ ಮೂಖಿ ಚಿತ್ರ ನೋಡಿದ ಅನುಭವವಾಯಿತು. ತುಂಬಾ ಹೊತ್ತು ಮಾತನಾಡಿದ ಮೇಲೆ ಕೈಯ್ಯಲ್ಲಿ ಹಿಡಿದ ಆ ಮಣ್ಣನ್ನು ಮರದೆಡೆಗೆ ತೂರಿ ಬಿಸಾಕಿದ .

ಆಮೇಲೆ ಹಿಂದುಗಡೆ ಬಾಗಿಲ ಹತ್ತಿರ ಇಟ್ಟಿದ್ದ ನೀರಿನಲ್ಲಿ ಕೈ ಕಾಲು ಮುಖ ಎಲ್ಲಾ ಚೆನ್ನಾಗಿ ತೊಳೆದು ಅಮ್ಮ ಕೊಟ್ಟ ಕಾಫಿ ಮತ್ತು ಕಡುಬು ತಿಂದು,ಅಪ್ಪ ದುಡ್ಡು ಕೊಡಲು ಹೋದರೆ ಬೇಡವೇ ಬೇಡ .. ಮರ ಫಲ ಬಿಟ್ಟಾಗ ನನಗೊಂದು ನಾಲ್ಕು ಹಣ್ಣು ಕೊಡಿ ಸಾಕು ಎಂದು ಹೊರಟೇ ಹೋದ.

ನೋಡಬೇಕಾಗಿಲ್ಲ ಎಂದು ಹೇಳಿದ್ದರೂ ಕೂಡ  ನಾನು ನೋಡಿಯೇ ನೋಡುತ್ತೇನೆ ಅಂತ ಅಮ್ಮನಿಗೆ ಗೊತ್ತಿತ್ತು
 ನನ್ನನ್ನು ಕರೆದು.. ಏನು ಮಾಡಿದ ಅವ? ಎಂದು ಕೇಳಿದರು. ನಾನು ಅದನ್ನೇ ಕಾಯುತಿದ್ದೆ.. ಎಲ್ಲವನ್ನೂ ಯಥಾವತ್ತಾಗಿ ತೋರಿಸಿದೆ.

ಅಮ್ಮನಿಗೆ ನಗುವೋ ನಗು.. ಆಮೇಲೆ ಎಷ್ಟೋ ದಿನದವರೆಗೆ ಮನೆಗೆ ಯಾರೇ ಬಂದರೂ, ಅಮ್ಮ ನನ್ನನ್ನು ಕರೆದು ಇವರಿಗೊಂದು ಸಲ ಗಂಗಯ್ಯನ ಮಿಮಿಕ್ರಿ ಮಾಡಿ ತೋರಿಸು ಅನ್ನುತಿದ್ದರು.

ಮೊದಮೊದಲು ನನಗೂ ಖುಷಿ. ಆಮೇಲಾಮೇಲೆ  ಅಮ್ಮ ಕರೆದರೂ ಕೇಳಿಸದ ಹಾಗೆ ಒಳಗೇ ಇರುತಿದ್ದೆ.

ಅಂತೂ ಇಂತೂ ಒಂದಿನ ನಮ್ಮ ಮಾವಿನ ಮರದಲ್ಲಿ ಹೂ ಬಿಟ್ಟಿತು.. ಅಮ್ಮನಿಗೆ ಆಗಲೇ ಎಷ್ಟು ಹಣ್ಣು ಬಿಡಬಹುದು.. ಯಾರ್ಯಾರಿಗೆ ಎಷ್ಟೆಷ್ಟು ಕಳಿಸುವುದು ಎಂದು ಲೆಕ್ಕಾಚಾರ ಹಾಕುವುದೇ ಕೆಲಸವಾಯಿತು.
ಗಂಗಯ್ಯನ ನಾಲ್ಕು ಹಣ್ಣು ಮೊದಲೇ ತೆಗೆದಿಡಬೇಕು ಎಂದು ಅಜ್ಜಿ ಅಂದಾಗ ನಾನು ಸುಮ್ಮನಿರದೆ.. “ಅಜ್ಜಿ …. ಒಂದು ವೇಳೆ ಬರಿಯ ನಾಲ್ಕೇ ಹಣ್ಣು ಬಿಟ್ಟರೆ ಏನು ಮಾಡುವುದು? “
” ಸುಮ್ಮನಿರು ನೀನು ಅಪಶಕುನ ಮಾತಾಡಬೇಡ ” ಎಂದು ಬಯ್ದರೂ … ಕೂಡಲೆ.. ಹೌದಲ್ಲ.. ಒಂದೊಂದು ಸಲ ಮೊದಲ ಫಲ 2-3 ಮಾತ್ರ ಬಿಡುವುದು ಇದೆ ಅಂತೆ ಅಂದರು…

ಹಾಗೆಯೇ…
ಹೂಗಳು ಉದುರಿ ಬಿದ್ದು ಉಳಿದಿದ್ದು ಬರೀ ನಾಲ್ಕು ಮಾವಿನಕಾಯಿಗಳು! ಈಗ ಏನು ಮಾಡುವುದು…? ಯಾರಿಗೆ ಹಂಚುವುದು..? ಎನ್ನುವ ಯೋಚನೆಯಲ್ಲಿ ಅಮ್ಮ ಬಿದ್ದಾಗ..

ಅಪ್ಪ ಸಮಾಧಾನ ಮಾಡಿದರು.”ಸ್ವಲ್ಪ ಇರು.. ಅದು ಯಾವ ತಳಿಯ ಮಾವಿನ ಹಣ್ಣು ಎಂದು ನೋಡುವ, ಅದೇ  ಹಣ್ಣುಗಳನ್ನು ಮಾರ್ಕೆಟ್ ನಿಂದ ತಂದು ಹಂಚಿದರಾಯಿತು ಬಿಡು. ನೀನು ಪಟ್ಟಿ ತಯಾರು ಮಾಡು, ಯಾರಿಗೆಲ್ಲ ಕೊಡಬೇಕು ಅಂತ ನೋಡು.”

ತಮಾಷೆಗೆ ಹೇಳಿದ್ದು ಎಂದು ಅಮ್ಮನಿಗೆ ಗೊತ್ತಾಗಲಿಲ್ಲ.. ಹಂಚುವ ಹುಚ್ಚಿನ ಅಮ್ಮ ನಿಜವಾಗಲೂ ಪಟ್ಟಿ ಮಾಡಲು ಕೂತರು.


One thought on “‘ಮಾವಿನ ಮರದ ಪ್ರಾರಬ್ಧ’ನನ್ನ ಬಾಲ್ಯಕಾಲದ ಒಂದು ಪ್ರಸಂಗ.ಶೀಲಾ ಭಂಡಾರ್ಕರ್

  1. ಹೀಗೂ ಉಂಟೇ ಶೀಲಾ. ಅಂದಿನ ಮುಗ್ಧ ಜನರ, ಮುಗ್ಧ ಮನಸ್ಸನ್ನು ಬಹಳ ಸುಂದರವಾಗಿ ಹೇಳಿದ್ದೀರ.

Leave a Reply

Back To Top