ಪುಸ್ತಕ ಸಂಗಾತಿ
ಹಮೀದಾ ಬೇಗಂ ದೇಸಾಯಿಯ
‘ಬೇಗಂ ಗಜಲ್ ಗುಚ್ಛ’
ಸುಜಾತಾ ರವೀಶ್
ಬೇಗಂ ಗಜಲ್ ಗುಚ್ಛ
ಒಲವಿನ ಮಧುವನ
ಕನ್ನಡತಿ ಪ್ರಕಾಶನ
ಪ್ರಥಮ ಮುದ್ರಣ 2023
ಎಂ ಎ ಬಿಎಡ್ ಪದವೀಧರರಾದ ಶ್ರೀಮತಿ ಹಮೀದಾ ಬೇಗಂ ದೇಸಾಯಿ ಅವರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅತ್ಯುತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿ ಪಡೆದ ಇವರು ಈಗಾಗಲೇ ಮೂರು ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾಗಿದ್ದಾರೆ. ಬೆನ್ನುಡಿಯಲ್ಲಿ ಶಮ ಜಮಾದಾರ ಅವರು ನುಡಿದಂತೆ “ಸರ್ವಧರ್ಮ ಸಮನ್ವಯ ರೀತಿಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಯಾವುದೇ ಜಾತಿ ಧರ್ಮದ ನಶೆ ಏರಿಸಿಕೊಳ್ಳದೆ ತಮ್ಮ ವಾತ್ಸಲ್ಯ ಮತ್ತು ಸ್ನೇಹಪರತೆಯ ಸ್ವಭಾವದಿಂದ ಎಲ್ಲರಿಗೂ ಆತ್ಮೀಯರಾಗಿ ಬದುಕುತ್ತಿರುವ ಸರಳ ಶಾಂತ ಜೀವಿ “.ಇದು ಇವರ ಮೊದಲನೆಯ ಗಜಲ್ ಸಂಕಲನ. “ಅಂತರಂಗದ ಬೆಳಕಿನಲ್ಲಿ ಅರಳಿದ ವಾರಿಸ್” ಎಂದು ತಮ್ಮ ಸುದೀರ್ಘ ಮುನ್ನುಡಿಯನ್ನು ಬರೆದಿರುವ ಪ್ರಸಿದ್ಧ ಗಜಲ್ಕಾರರಾದ ಶ್ರೀ ಮಲ್ಲಿನಾಥ ತಳವಾರ್ ಅವರು “ಆಧುನಿಕ ಕನ್ನಡ ಗಜಲ್ ಬಿರಾದರಿಯಲ್ಲಿ ಮಹಿಳಾ ಸಂವೇದನೆಗೆ ಸಂಬಂಧಿಸಿದಂತೆ ಒಂದು ಮಹಾಪೂರವೇ ಬರುತ್ತಿದೆ. ಸ್ತ್ರೀಯರು ಮತ್ತು ಪುರುಷರು ಇಬ್ಬರು ಈ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಿದ್ದಾರೆ .ಆದರೆ ಪುರುಷರ ಮಹಿಳಾ ಸಂವೇದನೆಗಿಂತ ಸ್ತ್ರೀಯರ ಮಹಿಳಾ ಸಂವೇದನೆ ಹೆಚ್ಚು ವಾಸ್ತವ ಎನಿಸುತ್ತದೆ” ಎಂದು ಅಭಿಪ್ರಾಯ ಪಡುತ್ತಾರೆ. ಪ್ರಸಿದ್ಧ ಸಾಹಿತಿಗಳಾದ ಈಶ್ವರ ಜಿ ಸಂಪಗಾವಿ ಹಾಗೂ ಶ್ರೀಮತಿ ಆಶಾ ಎಸ್ ಯಮಕನಮರಡಿ ಅವರ ಆಶಯ ನುಡಿಗಳಿವೆ. ಲೇಖಕಿಯವರು “ನನ್ನ ಮಾತು” ಎಂದು
ನೀರು ಗುಳ್ಳೆಯಂತೆ ನನ್ನ ಅಸ್ತಿತ್ವವಿಹುದು
ಬಿಸಿಲು ಗುದುರೆಯಂತೆ ಎಲ್ಲಾ ಪ್ರದರ್ಶನವಿದು
ಎಂಬ ಮೀರ್ ನ ನುಡಿಗಳ ಉಲ್ಲೇಖ ಮಾಡಿ ಗಜಲ್ ತಮ್ಮನ್ನು ಆಕರ್ಷಿಸಿದ ಬಗ್ಗೆ ಹಾಗೂ ವಾಟ್ಸಾಪ್ ಕಾವ್ಯಕೂಟ ಬಳಗದ ಮೂಲಕ ಗಜಲ್ ಕೃಷಿ ಸಾಧ್ಯವಾದ ಬಗ್ಗೆ ವಿವರಿಸಿ ಅದಕ್ಕೆ ಕಾರಣಕರ್ತರಾದವರೆಲ್ಲರನ್ನು ಸ್ಮರಿಸಿಕೊಳ್ಳುತ್ತಾರೆ.
ಗಜಲ್ ಅಂದರೆನೇ ಉತ್ಕಟ ಪ್ರೀತಿ ವಿರಹಗಳ ಅಭಿವ್ಯಕ್ತಿ ಮಾಧ್ಯಮ ಹಾಗಾಗಿ ಗಜಲ್ ರಚನೆಯಲ್ಲಿ ಈ ಭಾಗಗಳಿಗೆ ಆದ್ಯತೆ ಇದ್ದೇ ಇರಬೇಕು. ಬಹಳಷ್ಟು ಕವನಗಳು ಪ್ರೀತಿ ಮತ್ತು ವಿರಹಗಳ ಪರಾಕಾಷ್ಠತೆಯನ್ನು ಎತ್ತಿ ತೋರಿಸುತ್ತವೆ ಹಾಗೂ ತಮ್ಮ ಕಾರ್ಯದಲ್ಲಿ ಸಫಲತೆಯನ್ನು ಸಹ ಹೊಂದಿವೆ. ಇನಿಯನ ಬರುವಿಕೆಯ ಪ್ರತೀಕ್ಷೆಯಲ್ಲಿ ಇರುವ ಪ್ರೀತಿಯ ಹೃದಯ ಕನವರಿಸುವುದು ಹೀಗೆ
ಎನಿತೋ ದಿನಗಳ ನಿರೀಕ್ಷೆಯ ಗಳಿಗೆಗಳು ಸಮೀಪಿಸಿವೆ ನೋಡು ಬೇಗಂ
ಮಿಲನದ ಸಂದೇಶ ತಂಗಾಳಿ ತಂದಿಹುದು ನವಿರು ಸ್ಪರ್ಶದಲಿ ಬರುವೆಯೇನು ಮತ್ತೆ
ಪ್ರಸಿದ್ಧ ಸೋಮೇಶ್ವರ ಶತಕದಲ್ಲಿ ಒಂದು ಸಾಲು “ಸವಿವಂಣಲ್ಲಿನಿ ಮಾವು ಸರ್ವ ರಸದೊಳ್ ಶೃಂಗಾರ” ಅಂದರೆ ಮಾವು ಹೇಗೆ ಹಣ್ಣುಗಳಲ್ಲಿ ರಾಜನೋ ನವರಸಗಳಲ್ಲಿ ಶೃಂಗಾರ ರಸಕ್ಕೆ ಹೆಚ್ಚಿನ ಮಹತ್ವ ಎಂದು . ಪ್ರೀತಿ ಇದ್ದ ಕಡೆ ಶೃಂಗಾರ ಇರದೇ ಇರುತ್ತದೆಯೇ? ಹಾಗೆ ಇಲ್ಲಿನ ನವಿರು ಶೃಂಗಾರ ಮನಸ್ಸಿಗೆ ಪುಳಕ ತರುವುದರಲ್ಲಿ ಸಂದೇಹವಿಲ್ಲ. ನಲ್ಲೆಯ ಹೃದಯ ನಲ್ಲನಿಗೆ ಈ ರೀತಿಯ ಕೋರಿಕೆ ಇಡುತ್ತದೆ
ಒಲವ ಕೋಡಿ ಹರಿದು ಹೋಗದ ಹಾಗೆ ಬಂದೊಮ್ಮೆ ಮನತಣಿಸುವೆಯಾ
ಬಿಸಿ ಅಪ್ಪುಗೆಯ ಆಲಿಂಗನ “ಬೇಗಂ” ಗೆ
ಬೇಕಾಗಿದೆ ಸಖಾ
ಹಾಗೆಯೇ ಇಲ್ಲಿ ಗಜಲ್ ಕಾರ್ತಿಯ ಮನಸ್ಸು ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನದ ಬಗ್ಗೆ ಅವಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚಿಂತಿಸುತ್ತದೆ ಹಾಗಾಗಿಯೇ ಅವರು ಈ ಪ್ರಶ್ನೆ ಎತ್ತುತ್ತಾರೆ
ಬಂಧಿ ಅವಳು ಸಂಬಂಧಗಳಿಗೆ ಕೊನೆಯೆಂದು
ಕೇಳಿಹಳು ಬೇಗಂ ಹೆಣ್ಣೆಂದರೆ ಇಷ್ಟೇನಾಯೆಂದು
ಹಾಗೆಂದು ಶೋಕಸಾಗರದಲ್ಲಿ ಅಡಗಿ ಕೂರುವವಳಲ್ಲ ಅವಳು. ತನ್ನ ಸ್ವಾಭಿಮಾನ ಅಸ್ಮಿತೆಯನ್ನು ಉಳಿಸಿಕೊಳ್ಳುವ ಗಟ್ಟಿಗಿತ್ತಿ ಎಂಬುದನ್ನು ಸಹ ಈ ಸಾಲುಗಳಿಂದ ರೂಪಿಸುತ್ತಾರೆ
ಬೇಗಮ ಳಿಗೂ ಹೃದಯದ ವೀಣೆ ನುಡಿಸುವ ಹಕ್ಕಿದೆ ಕೇಳು
ದಿಟ್ಟ ಹೆಜ್ಜೆಗಳೊಂದಿಗೆ ನಡೆದು ಭವಿಷ್ಯದ ಗುರಿಯನ್ನು ಮುಟ್ಟುವೆ ನಾನು.
ತಮ್ಮ ತಂದೆಯ ಬಗೆಗಿನ ಅಪಾರ ಪ್ರೀತಿಯನ್ನು ಗಜಲ್ 37ರಲ್ಲಿ ವ್ಯಕ್ತಪಡಿಸುತ್ತಾರೆ ಹಾಗೆಯೇ ಈ ಗಜಲ್ ಸಂಕಲನವನ್ನು ತನ್ನ ತಂದೆಗೆ ಅರ್ಪಿಸಿರುವುದು ವಿಶೇಷ.
“ಮೌನದಲೆ ಕಾಣದೆ ಬಯಲಾದನಂತೆ ನನ್ನಪ್ಪ” ಎಂಬ ಸಾಲುಗಳಲ್ಲಿ ತಂದೆಯ ಬಗೆಗಿನ ಪ್ರೀತಿ ಗೌರವಗಳು ಸುಂದರ ಸಾಲಾಗಿರುವುದನ್ನು ಗಮನಿಸಬಹುದು ಹಾಗೆಯೇ ತವರು ಮತ್ತಿತರ ಕವನಗಳಲ್ಲಿ ಹೆಣ್ಣಿನ ಮೂಲಭೂತ ಸುಕೋಮಲ ಭಾವನೆಗಳ ಅನಾವರಣವಾಗಿದೆ.
ಪ್ರಕೃತಿಗೆ ಮನಸೋಲದವರುಂಟೇ. ಅದರಲ್ಲೂ ಕವಿಮನ ಆಷಾಢದ ಜಡಿ ಶ್ರಾವಣದ ತುಂತುರು ನೆಲದ ಬಸಿರಿನ ಹಸಿರು ಬಿಳಿ ಮುತ್ತುಗಳಂತಿರುವ ಮಳೆ ಹನಿಗಳನ್ನು ನೋಡಿ ಸಂತಸದಿಂದ ನಲಿಯುತ್ತದೆ. ಗಜಲ್ ಒಂಭತ್ತು ಹಾಗೂ 12 ರಲ್ಲಿ ಪ್ರಕೃತಿಯ ವರ್ಣನೆ ತುಂಬಾ ಸೊಗಸಾಗಿ ಮೂಡಿಬಂದಿದೆ.
ತಂಗಾಳಿಯು ನರುಗಂಪನು ಸೂಸುತ ನಗುತಲಿ ಸುಳಿದಾಡಿಹುದು
ಮರವನು ತಬ್ಬಿಹ ಎಳೆ ಬಳ್ಳಿಯು ತಾ ಚಂದದಿ ಬಳುಕಿದೆ ಸಖಿ
ಕವಿ ಅಂತರ್ಮುಖನಾಗಿ ತನ್ನೊಳಗೆ ತಾನು ವಿಲೀನನಾದರೂ ಸಮಾಜದ ಭಾಗ ತಾನು ಎನ್ನುವುದನ್ನು ಎಂದಿಗೂ ಮರೆಯುವುದಿಲ್ಲ ಹಾಗಾಗಿಯೇ ತನ್ನ ದೈನಂದಿನ ಎಲ್ಲಾ ಕೆಲಸಗಳಿಗೂ ಸಹಾಯಕವಾಗಿರುವ ಸಮಾಜದ ವಿವಿಧ ವ್ಯಕ್ತಿಗಳನ್ನು ನೆನಪಿಸಿಕೊಂಡು ಧನ್ಯವಾದ ಹೇಳುವ ರೀತಿಯಲ್ಲಿದೆ ಗಜಲ್ ೧೪.
ಸಮಾಜದಲ್ಲಿನ ವಿವಿಧ ಮುಖವಾಡ ಧರಿಸಿದ ಜನರು ಕಪಟಿಗಳು ಮೋಸ ಮಾಡುವ ವ್ಯಕ್ತಿಗಳು ಇರುತ್ತಾರೆ ಎಂಬ ಎಚ್ಚರಿಕೆ ಹೇಳುತ್ತಲೇ ನಾವು ಅವರೊಡನೆ ವ್ಯವಹರಿಸಬೇಕಾದ, ನಮ್ಮ ಮನಃಶಾಂತಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ.ಗಜಲ್ ಎಂದರೆ ಬರಿ ಸಾಕಿ ಮಧುಬಟ್ಟಲು ಮಧು ಶಾಲೆ ಎಂಬ ಚೌಕಟ್ಟಿನಿಂದ ಹೊರಬಂದು ಇಂದಿನ ಕನ್ನಡ ಗಜಲ್ ಗಳು ಅಪಾರ ವಿಸ್ತಾರ ವ್ಯಾಪ್ತಿ ಪಡೆಯುತ್ತಿರುವ ದ್ಯೋತಕ ಇಲ್ಲಿನ ಕವನಗಳು ಸಹ. ಸಮಾಜದ ವಿವಿಧ ಆಯಾಮಗಳಿಗೆ ತೆರೆದುಕೊಳ್ಳುತ್ತದೆ ಎಂಬುದು ನಿಜಕ್ಕೂ ಖುಷಿ ಕೊಡುವ ವಿಚಾರ.
ತುಂಬಾ ಸಶಕ್ತ ತರಹಿ ಗಜಲ್ ಗಳನ್ನು ಇಲ್ಲಿ ಕಾಣಬಹುದು ಗಜಲ್ ಸಂಖ್ಯೆ 27 51 52 53 54 55 ಇವೆಲ್ಲವೂ ವಿವಿಧ ಗಜಲ್ ಗಾರರ ಮಿಸ್ರಾಗಳಿಗೆ ಸೇರಿಸಿದ ತರಹಿಗಳು ಆದರೆ ಮೂಲದ ಅರ್ಥಕ್ಕೆ ಭಾವನೆಗೆ ಸಾತ್ ಕೊಡುವಂತೆ ರೂಪಗೊಂಡಿರುವುದು ಕವಯತ್ರಿಯ ಗಜಲ್ ಕಟ್ಟುವ ಸಾಮರ್ಥ್ಯಕ್ಕೆ ಒಂದು ನಿದರ್ಶನವಾಗಿದೆ.
ಇಲ್ಲಿ ವಿವಿಧ ರೀತಿಯ ಕಾಫಿಯ, ಜುಲ್ ಕಾಫಿಯ ಬಹು ಕಾಪಿಯ ಇತ್ಯಾದಿ ಗಜಲ್ ಗಳ ಪ್ರಯೋಗಗಳು ಆಗಿರುವುದು ಕಂಡುಬರುತ್ತದೆ. ನನಗೆ ಖುಷಿ ಕೊಟ್ಟ ಮತ್ತೊಂದು ವಿಷಯವೆಂದರೆ ಗಜಲ್ ಕಾರ್ತಿಯವರು ಬಳಸಿರುವ ವಿಭಿನ್ನ ಬಗೆಯ ಸುಂದರ ರದೀಫ್ಗಳು .ಉದಾಹರಣೆಗೆ ನನ್ನಪ್ಪ, ಸಲಾಂ, ಪ್ರಭುವೇ, ಬಸವೇಶ, ರಿವಾಜು, ಕಂದ ಈ ರೀತಿಯ ಪುಟ್ಟ ರೀಸ್ಗಳಲ್ಲದೆ ದೀರ್ಘ ರದೀಫ್ ಗಳ ಪ್ರಯೋಗವು ಕೆಲವು ಕಡೆ ಇವೆ. ಗಜಲ್ ನ ಒಟ್ಟು ಆಶಯಕ್ಕೆ ಈ ರದೀಫ್ ಗಳು ತುಂಬಾ ಪೂರಕವಾಗಿ ಕಳೆ ನೀಡುತ್ತಿವೆ.
ಯೋ ವೈ ಭೂಮಾ ತತ್ಸುಖಂ ನಾಲ್ಪೇ ಸುಖಮಸ್ತಿ” ಎಂಬ ಉಪನಿಷದ್ವಾಕ್ಯ ದಂತೆ ದೊಡ್ಡದರಲ್ಲಿ ಸುಖವಿದೆ . ಸಣ್ಣದರಲ್ಲಿ ಸುಖವಿಲ್ಲ. ಕವಿಯಾದವನು ಮತಾಚಾರ ಸಂಪ್ರದಾಯಗಳ ಶೃಂಖಲಾ ಸದೃಶವಾದ ಸಂಕುಚಿತ ದೃಷ್ಟಿಯಿಂದ ವಿಮುಕ್ತನಾಗಿ ಭೂಮವಾದುದರಲ್ಲಿ ಸಂಚರಿಸಬೇಕು. ಭಾವ, ಕಲ್ಪನೆ ಮತ್ತು ಆಲೋಚನೆಗಳ ವಿದ್ಯುದಾಲಿಂಗನದಿಂದ ಸಂಭವಿಸುವ ಪ್ರತಿಭಾ ಜ್ಯೋತಿ ಕವಿದರ್ಶನದ ಲಕ್ಷಣ .
_ ಕುವೆಂಪು
(ಕಾವ್ಯದ ಕಣ್ಣು ಕವಿಯ ದರ್ಶನ ಲೇಖನ)
ಇಲ್ಲಿನ ಗಜಲ್ ಗಳು ಭಾವನಾತ್ಮಕವಾಗಿ ಪ್ರೀತಿ ಪ್ರೇಮ ಪ್ರಕೃತಿ ಎಲ್ಲವನ್ನು ಬಣ್ಣಿಸಿದಂತೆ ಅದನ್ನು ಮೀರಿ ಮತ್ತೂ ಉನ್ನತಕ್ಕೇರಿ ಜೀವನ ಶ್ರದ್ಧೆ ಜೀವನ ಪ್ರೀತಿಗಳ ಪ್ರತಿಬಿಂಬಗಳಾಗಿ ತೋರುತ್ತದೆ. ಕವಿ ಮನಗಳೆಂದರೆ ಅವು ಸಾಂಸ್ಕೃತಿಕ ರಾಯಭಾರಿಗಳಂತೆ .ಹಾಗಾಗಿ ಸಮಾಜದ ಓರೆ ಕೋರೆಗಳನ್ನು ಬೆಳಕಿಗೆ ತರುವ ಜವಾಬ್ದಾರಿ ಮತ್ತು ತಿದ್ದುವ ಹೊಣೆ ಕವಿಯ ಮೇಲೆ ಇರುತ್ತದೆ ಎಂದು ಪ್ರತ್ಯೇಕವಾಗಿ ಬೇರೆ ಹೇಳಬೇಕಿಲ್ಲ .ಇಲ್ಲಿನ ಹಲವಾರು ಗಜಲ್ಗಳು ಹೀಗೆ ಸಮಾಜಮುಖಿಯಾಗಿ ಮೂಡಿಬಂದಿರುವುದು ಸಂತಸ ತರುವ ವಿಷಯ.
ಹೆಜ್ಜೆ ಇಡುವಲ್ಲಿ ಮುಳ್ಳುಗಳ ಹಾಸುವವರು ಸುತ್ತ ತುಂಬಿಹರು
ಅಂಜದೆ ಜೋಕೆಯಲಿ ಸರಿಯಾಗಿ ಹೋಗಲು ಕಲಿತುಕೋ ಮತ್ತೆ
ಎಲ್ಲಾ ಕವಿಗಳ ಇಚ್ಛೆಯು ಧ್ಯೇಯವು ಅದೇ. ತಮ್ಮ ಕವನದ ಕೂಸನ್ನು ಬೇರೆಯವರು ಮೆಚ್ಚುವಂತಾಗಬೇಕು ಎತ್ತಿ ಮುದ್ದಾಡಬೇಕು ಮಡಿಲಿಗೆ ತೆಗೆದುಕೊಳ್ಳಬೇಕು ಎಂಬುದು. ಶ್ರೀಮತಿ ಹಮೀದಾ ಬೇಗಂ ದೇಸಾಯಿ ಸೋದರಿರವರ ಈ ಗಜಲ್ ಸಂಗ್ರಹ ಸಮಾನ ಹೃದಯಿಗಳ ಮನದೊಳಗೆ ಜಾಗ ಪಡೆದು ಹೃನ್ಮನ ತಣಿಸುವಂತಾಗಲಿ .ಈ ಒಲವಿನ ಮಧುವನದಲ್ಲಿ ಕನ್ನಡ ಗಜಲ್ ರಸಿಕರೆಲ್ಲ ವಿಹರಿಸುವಂತೆ ಆಗಲಿ.
ಇದು ಪ್ರಥಮ ಗಜಲ್ ಸಂಕಲನವಾದ್ದರಿಂದ ಮುಂದಿನ ಸಂಕಲನಗಳಲ್ಲಿ ಮತ್ತೂ ಹೆಚ್ಚಿನ ಪ್ರಬುದ್ಧತೆ ಪ್ರೌಢಿಮೆ ನಿರೀಕ್ಷಿಸುವುದು ಸಹಜವೇ . ಹಾಗೆಯೇ ಮುನ್ನುಡಿಕಾರರು ಹೇಳಿದಂತೆ ಗಜಲಿನ ಮಿಸ್ರಾಗಳನ್ನು ಸಮ ಮೀಟರ್ ಗಳಲ್ಲಿ ಅಳವಡಿಸಿ ಒತ್ತಕ್ಷರಗಳನ್ನು ಕಡಿಮೆ ಮಾಡಿದರೆ ಮತ್ತೂ ಸುಂದರ ಗಜಲ್ ಗಳು ಇವರ ಲೇಖನಿಯಿಂದ ಬರುವುದು ಖಂಡಿತ ಸಾಧ್ಯ. ಹಾಗೆಯೇ ಗೇಯತೆಯ ಕಡೆಗೂ ಗಮನ ನೀಡಬಹುದು. ಗಜಲ್ ಲೋಕದಲ್ಲಿ ಮತ್ತಷ್ಟು ಮಹತಾದುದನ್ನು ಸಾಧಿಸಿ ಯಶಸ್ವಿಯಾಗಲೆಂದು ಹೃತ್ಪೂರ್ವಕ ಹಾರೈಕೆಗಳು.
ಸುಜಾತಾ ರವೀಶ್
Many congratulations congratulations madam!
Angelina Gregory