ಪ್ರೀತಿ ಪ್ರೇಮಗಳ ಬಗ್ಗೆ ಹಿರಿಯ ಕವಿಗಳಾದ ಶ್ರೀಯುತ ಸುಬ್ರಾಯ ಚೊಕ್ಕಾಡಿಯವರ “ಪ್ರೀತಿ
ನದಿಯಂತೆ” ಕವನ.ಅವರ “ಇನ್ನೊಂದು ಬೆಳಗು” ಕವನ ಸಂಕಲನದಿಂದ ಆಯ್ದದ್ದು .

ಪ್ರೀತಿ ನದಿಯಂತೆ

ಪ್ರೀತಿ ನದಿಯಂತೆ_ ನಿಜ ಈ ನದಿಯು ನೇಸರಿನ
ಕಿರಣಗಳ ಹೊದಿಕೆಯಡಿಯಲ್ಲಿ ಎರಡೂ ದಡ
ಅಪ್ಪುತ್ತ ಮರಗಳ ನೆರಳು ಹಿಡಿಯುತ್ತ ಮೆಲುಚಲನೆ_ಒಮ್ಮೊಮ್ಮೆ
ಹಠಮಾರಿ ಮಕ್ಕಳ ಮೇಲಿನ ಆಕ್ರೋಶದಂಥ ನಡವಳಿಕೆ
ಮುನ್ನಡೆದಂತೆ ಬೆಟ್ಟ ಸಾಗರವೊಂದು ನಡುವಿನ ವಿಸ್ತಾರದಲಿ
ನವಸೃಷ್ಟಿ ಸಂಭ್ರಮ ಉಳಿದೆಲ್ಲ ತನ್ನರಿವಿನಾಚೆ

ಈ ಕುರುಡಿನಲ್ಲಿ ತಿಳಿಯುವುದೇ ಇಲ್ಲ_ ನಡುವಿರುವ
ತಿರುಗಣಿ ಮಡಿಗಳು ಬಾಯ್ತೆರೆದು ಕುಳಿತ ಮೊಸಳೆಗಳು
ಈಜ ಬಂದವರನ್ನು ಜಾರಿಸುವ ಕ್ರೂರ ಹಿಕಮತ್ತು ಗಳು
ಈ ನಡುವೆ ನದಿಗೆ ಹುಟ್ಟಿನ ಜಾಗವೂ ಮರೆವು
ಗಮ್ಯವೂ ನೆನಪಿಲ್ಲ ನಡುವಿನ ವರ್ತಮಾನವಷ್ಟೇ ನಿಜ
ಆ ನಿಜದಲ್ಲಿ ಅದಕ್ಕೆ ಉಳಿದ ಕ್ರೌರ್ಯಗಳೆಲ್ಲ ಸಹಜ

ಥಳುಕು ಮೈ ಪ್ರೀತಿ ನದಿಯಾಳದಲಿ ಕಪ್ಪು ಬರಸೆಳೆದ ಸಾಗರದ ನೀರಲ್ಲೂ ಉಪ್ಪು

ಸುಬ್ರಾಯ ಚೊಕ್ಕಾಡಿ

ಪ್ರೀತಿ ಎಲ್ಲರನ್ನು ಆವರಿಸುವ ಒಂದು ಮಾಯೆ. ಇದರ ಹಿಡಿತದಿಂದ ಪಾರಾಗುವುದು ಸಾಧ್ಯವೇ ಇಲ್ಲ. ಇಂತಹ ಒಲ್ಮೆ ದೈವ ಸಾಕ್ಷಾತ್ಕಾರವೂ ಹೌದು ಹಣೆಬರಹ ಸರಿ ಇಲ್ಲದಿದ್ದಲ್ಲಿ ವಿಧಿ ಶಾಪವೂ ನಿಜ .

ಇಲ್ಲಿ ಕವಿ ಪ್ರೀತಿಯನ್ನು ಒಂದು ನದಿಗೆ ಹೋಲಿಸಿದ್ದಾರೆ . ಹೌದು ನದಿ ಎಂದರೆ ಜೀವಸೆಲೆ ಚೈತನ್ಯಧಾಯಿನಿ ಸಂಜೀವಿನಿ . ಆದರೆ ನೆರೆಯುಕ್ಕಿ ಪ್ರವಾಹ ಬಂದು ಪ್ರಕೃತಿ ಕಾಳಿಯಾಗಿ
ವಿಜೃಂಭಿಸಿದಾಗ ಅದೇ ನದಿ ಜೀವ ಜೀವನಗಳನ್ನು ಆಪೋಶನ ತೆಗೆದುಕೊಳ್ಳುವುದು ಅಷ್ಟೇ ಸಹಜ . ಹಾಗಾಗಿ ಕವಿ ಇಲ್ಲಿ ಪ್ರೀತಿಯ ಇನ್ನೊಂದು ಮುಖವನ್ನೂ ಬಿಂಬಿಸಿದ್ದಾರೆ ಎಷ್ಟಾದರೂ ಪ್ರೀತಿ ಹಾಗೂ ನೋವು ಒಂದೇ ನಾಣ್ಯದ ಎರಡು ಮುಖಗಳಲ್ಲವೇ?

ಭಾವಗಳ ಅಂತಃಸೆಲೆಯಲ್ಲಿ ಗುಪ್ತವಾಗಿ ಹುಟ್ಟುವ ಪ್ರೀತಿ ನದಿಯ ಉಗಮದಂತೆಯೇ ಅಗೋಚರ.
ಪ್ರೇಮಿಸುವ 2ಜೀವ ಗಳೆಂಬ ದಡಗಳ ಮದ್ಯದ ಸೇತುವೆಯಾಗುವ ನದಿ ಒಮ್ಮೊಮ್ಮೆ ಶಾಂತ ಪ್ರಶಾಂತವಾಗಿ ಮೆಲು ಚಲನೆ ಇದ್ದರೆ ಕೆಲವೊಮ್ಮೆ ಆರ್ಭಟ ರಭಸ ಥೇಟ್ ರಚ್ಚೆ ಹಿಡಿದ ಮಗುವಿನ ಹಾಗೆ .ಏನೂ ಮಾಡಲಾಗದ ಅಸಹಾಯಕತೆ ಕಾಡುವಂತೆ ಒಮ್ಮೊಮ್ಮೆ . ಪ್ರೀತಿಯೆಂಬ ನದಿಯ ಈ ಪಯಣದಲ್ಲಿ ಕೆಲವೊಮ್ಮೆ ಭೋರ್ಗರೆಯುವ ಜಲಪಾತಗಳು ದರ್ಶನವಾದರೆ ಹಲವೊಮ್ಮೆ ಗಂಭೀರ ವಿಸ್ತಾರ ಪ್ರವಹನ. ಕಡೆಗೊಮ್ಮೆ ಗಮ್ಯವೆಂದು ವಿಸ್ತಾರ ಸಮುದ್ರದಲ್ಲಿ ಬೆರೆತಾದಾಗ ಬೇರೆಲ್ಲವೂ ಮರೆತುಹೋಗುತ್ತದೆ . ಸಾಗರ ಸಂಗಮದಲ್ಲಿ ನವ ಸೃಷ್ಟಿಯಾಗಿ ಜೀವನದ ಸಾರ್ಥಕತೆ ಸಾಫಲ್ಯಕ್ಕೆ ಹೊಂದುತ್ತವೆ . ಇದು ಸಫಲಗೊಳ್ಳುವ ಎಲ್ಲ ಪ್ರೇಮಗಳ ಸಾಮಾನ್ಯ ಕಥೆ. .

ಮುಂದೆ ಕವಿ ಪ್ರೇಮದ ಹಿಂದಿನ ನಿಗೂಢ ರಹಸ್ಯ ಅವಿತ ಕ್ರೌರ್ಯಗಳನ್ನು ತೋರಿಸುತ್ತಾ ಹೋಗುತ್ತಾರೆ . ಪ್ರೀತಿ ಕುರುಡು ಎಂಬುದು ಜನಜನಿತ ನಾಣ್ಣುಡಿ. ಪ್ರೀತಿಸುವವರೂ ಅಂಧರಾಗಿಯೇ ಮುಂದುವರಿಯುತ್ತಾರೆ ಎನ್ನುವುದು ಸರ್ವವಿದಿತ . ಹಾಗಾಗಿಯೇ ಆ ಮಯಕದಲ್ಲಿ ಅವರಿಗೆ ನದಿಯ ಮಧ್ಯದ ಸುಳಿಗಳು, ಅಲ್ಲಲ್ಲಿ ಬಾಯ್ತೆರೆದು ಕುಳಿತ ಮೊಸಳೆಗಳು ಕಣ್ಣಿಗೆ ಕಾಣುವುದೇ ಇಲ್ಲ . ನದಿಯ ಸೆಳವಿಗೆ ಮನಸೋತು ಈಜಲು ಬಂದವರನ್ನು ತನ್ನೊಳಗೆ ನುಂಗಿಬಿಡುವಂತಹ ಕ್ರೂರ ಕ್ರೌರ್ಯ ಅದು .
ಇಷ್ಟೆಲ್ಲಾ ಆಗುವಾಗ ಪ್ರೀತಿ ಎಂಬ ನದಿಗೆ ತಾನು ಹುಟ್ಟಿದ ಜಾಗವೂ ಮರೆತು ಹೋಗುತ್ತದೆ ಅದರ ಉದ್ದೇಶವೂ ಮರೆತುಹೋಗುತ್ತದೆ ಗಮ್ಯವಂತೂ ನೆನಪಿಗೇ ಇರುವುದಿಲ್ಲ. ಕೆಲವೊಂದು
ಪ್ರೀತಿಗಳಿಗೆ ಹಾಗೇ… ಆದಿ ಅಂತ್ಯ ಇರುವುದಿಲ್ಲ ವರ್ತಮಾನ ಮಾತ್ರ ವಿಶೇಷ . ಹಾಗಾಗಿಯೇ ನಾಯಿಕೊಡೆಗಳಂತೆ ಅಳಿಯುತ್ತವೆ.ಮೇಲೆ ಶಾಂತವಾಗಿ ತೋರುವ ಸೌಮ್ಯವಾಗಿರುವ ನದಿಯ ಆಂತರ್ಯದೊಳಗೆ ಅಡಗಿರುವ ಈ ಎಲ್ಲಾ ಕ್ರೌರ್ಯಗಳು ಪ್ರೀತಿಯಲ್ಲು ಕಾಣುತ್ತದೆ ಎಂದು ಕವಿ ಎಚ್ಚರಿಸುತ್ತಾರೆ . ಹಾಗಾಗಿಯೇ ಪ್ರೀತಿಯನ್ನು ನದಿಗೆ ಹೋಲಿಸುತ್ತಾರೆ

ಕವನದ ಕಡೆಯ ೨ ಸಾಲುಗಳು ಇಡೀ ಕವನದ ಅರ್ಥಕ್ಕೊಂದು ಭಾಷ್ಯವನ್ನು ಬರೆದು ಬಿಡುತ್ತದೆ.
ಪ್ರೀತಿಯ ಮೇಲಿನ ವ್ಯಾಖ್ಯಾನ ಆಗಿಬಿಡುತ್ತದೆ .
ಪ್ರೀತಿ ಎಂದರೆ ಅದು ದೈಹಿಕ ಕಾಮನೆಗಳನ್ನು ಮೀರಿದ ಆತ್ಮಗಳ ಮಿಲನ ಅನುಸಂಧಾನ . ಅದನ್ನು ಅರಿಯದೆ ಆಂತರ್ಯದ ಸಂಬಂಧವಿರದ ಬರೀ ಬಾಹ್ಯ ಪ್ರೀತಿ ಬರಡು. ಅಂತಹ ರೀತಿ ಪಾರದರ್ಶಕವೂ ಅಲ್ಲ . ರಂಗು ರಂಗಿನದಂತೂ ಖಂಡಿತಾ ಅಲ್ಲ . ಅದರ ಮೈ ಪೂರ ಕಪ್ಪು ಕಡು ಕಪ್ಪು . ಹಾಗಾಗಿಯೇ ಅಂತಹ ಪ್ರೀತಿ ಸಾಫಲ್ಯ ಸೇರುವ ಸಂಗಮದ ಸಾಗರವೂ ಉಪ್ಪು . ಅದೆಂದೂ ಸಿಹಿಯಾಗಲು ಸಾಧ್ಯವೇ ಇಲ್ಲ . ದೇಹ ಮೋಹವನಳಿದ ನೇಹ ನಿಜವಾದ ಪ್ರೀತಿ . ಅದು ಮಾತ್ರ ಜೀವನದ ಸಾಕ್ಷಾತ್ಕಾರ. ಮಿಕ್ಕದ್ದೆಲ್ಲ ಹೀಗೆ ಕಪ್ಪು ಉಪ್ಪುಗಳ
ಮಿಲನದ ಬಾಯಿ ತೆರೆದ ಮಡುಗಳ ಆಪೋಶನ ತೆಗೆದುಕೊಳ್ಳುವ ಪ್ರೀತಿ ಎಂಬ ನದಿ .


Leave a Reply

Back To Top