ಘಟಿಸಿ ಹೋದ ಘಟನೆಯ ಬಗ್ಗೆ ಹೀಗೆ ಚಿಂತಿಸಿ ನಾನು ಕಾಲ ಹರಣ ಮಾಡುವುದು ಇನ್ನು ಸರಿಯಲ್ಲ. ಇನ್ನು ನಾನು ಎಚ್ಚೆತ್ತುಕೊಳ್ಳಬೇಕು. ಉಳಿದಿರುವ ಹಣವನ್ನು ಪೋಲು ಮಾಡದೇ ಉಪಯೋಗ ಆಗುವಂತಹ ದಾರಿಯನ್ನು ಈಗ ಹುಡುಕಬೇಕಿದೆ. ಮೊದಲು ನಾನು ಮತ್ತು ಮಕ್ಕಳು ವಾಸಿಸಲು ಯೋಗ್ಯವಾದ ಒಂದು ಮನೆಯನ್ನು ಖರೀದಿಸಬೇಕು. ಎಷ್ಟು ದಿನ ಎಂದು ಹೀಗೆ ಸಂಬಂಧಿಕರ ಮನೆಯಲ್ಲಿ ಇರುವುದು? ತೋಟ ಖರೀದಿಸುವವರೆಗೂ

ಇಲ್ಲಿ ಇರೋಣ ಎಂದು ಬಂದ ನಾವು ಹೆಚ್ಚು ದಿನ ಸಂಬಂಧಿಕರ ಮನೆಯಲ್ಲಿ ಇರುವುದು ಯೋಗ್ಯವಲ್ಲ ಎಂದು ಯೋಚಿಸಿ ವಾಸಿಸಲು ಯೋಗ್ಯವಾದ ಮನೆಯನ್ನು ಹುಡುಕಲು ಪ್ರಾರಂಭಿಸಿದರು. ಪರಿಚಯ ಇರುವ ಹಲವರಲ್ಲಿ ವಿಷಯ ತಿಳಿಸಿದರು.  ಹೇಮಾವತಿ ನದಿ ದಂಡೆಯ ಆಚೆ ಬದಿಯಲ್ಲಿ ಮನೆಯ ಸುತ್ತಲೂ ಸ್ವಲ್ಪ ಕಾಫಿ ಗಿಡಗಳು ಬೆಳೆದಿರುವ ಒಂದು ಮನೆ ವ್ಯಾಪಾರಕ್ಕೆ ಇದೆ ಎಂದು ತಿಳಿಯಿತು. ತಡ ಮಾಡದೇ ಅದನ್ನು ಖರೀದಿಸಿ ಮಕ್ಕಳ ಸಮೇತ ಅಲ್ಲಿಗೆ ಹೋಗಿ ವಾಸಿಸುವ ಎಲ್ಲಾ ತಯಾರಿ ಮಾಡಿದರು. ವ್ಯವಸಾಯದ ಕೆಲಸ ಗೊತ್ತಿದ್ದ ಕಾರಣ ನದಿಯ ದಂಡೆಯ ಪಕ್ಕದಲ್ಲಿಯೇ ಇರುವ ಉತ್ತಮ ಇಳುವರಿಯ ಭತ್ತ ಬೆಳೆಯುವ ಗದ್ದೆಯನ್ನು ಖರೀದಿಸಿದರು.

ಮಕ್ಕಳ ಜೊತೆಗೂಡಿ ಒಂದು ಒಳ್ಳೆಯ ಮುಹೂರ್ತ ನೋಡಿ ದೊಡ್ಡ ಆಡಂಭರವಿಲ್ಲದೇ ಸಣ್ಣ ಪೂಜೆಯನ್ನು ಮಾಡಿ ಹೊಸ ಮನೆಯಲ್ಲಿ ವಾಸ್ತವ್ಯ ಹೂಡಿದರು. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿದರು. ಆದರೆ ಮೇಲ್ವಿಚಾರಣೆಯೊಂದಿಗೆ ಎಲ್ಲರ ಯೋಗಕ್ಷೇಮವನ್ನು ಮುತುವರ್ಜಿ ವಹಿಸಿ ನೋಡಿಕೊಳ್ಳುವ ಮನೆಯ ಒಡತಿಯ ಕೊರತೆ ಅವರ ಜೀವನದಲ್ಲಿ ಎದ್ದು ಕಾಣುತ್ತಾ ಇತ್ತು.  ಅಕ್ಕ ತಂಗಿಯರು ಇಬ್ಬರೂ ಅಪ್ಪನ ಜೊತೆಗೂಡಿ ತಂದ ವಸ್ತುಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟರು. 

ಜೂನ್ ತಿಂಗಳು ಅರ್ಧ ಕಳೆದಿತ್ತು. ಮಳೆಯ ಆರ್ಭಟ ಬಹಳ ಜೋರಾಗಿತ್ತು. ನಿಲ್ಲದೇ ಸುರಿಯುವ ಮುಂಗಾರು ಮಳೆಗೆ ಗದ್ದೆಯಲ್ಲಿ ಪೈರು ನಾಟಿ ಮಾಡಿ ಆಯ್ತು. ಅವರ ಪುಟ್ಟ ತೋಟದ ಸುತ್ತ ಮುತ್ತಲಿನ ಪರಿಸರದಲ್ಲಿ ವಾಸಿಸುವ ದೊಡ್ಡ ಹಾಗೂ ಚಿಕ್ಕ ತೋಟ ಹೊಂದಿರುವ ಕೆಲವರು ಅವರಿಗೆ ಆಪ್ತರಾದರು. ಮೊದಲೇ ಸ್ನೇಹಜೀವಿಯಾದ ನಾರಾಯಣನ್ ಎಲ್ಲರ ಜೊತೆ ಬಹಳ ಬೇಗ ಬೆರೆತರು. ನಾರಾಯಣನ್ ರವರಿಗೆ ಸುತ್ತಮುತ್ತಲ ನಿವಾಸಿಗಳು ತಮ್ಮ ಸಹಾಯ ಹಸ್ತ ಚಾಚಿದರು. ಕೆಲವರು ಆತ್ಮೀಯ ಸ್ನೇಹಿತರಾದರು. ಸ್ನೇಹಿತರ ಸಲಹೆಯ ಮೇರೆಗೆ  ಸಕಲೇಶಪುರದ ಪ್ರತಿಷ್ಠಿತ ಶಾಲೆಯಾದ ಸಂತ ಜೋಸೆಫ್  ಕಾನ್ವೆಂಟ್ ನಲ್ಲಿ ಹಿರಿಯ ಮಗಳನ್ನು ಬಿಟ್ಟು ಉಳಿದ ಮಕ್ಕಳನ್ನು ದಾಖಲಿಸಿದರು. ಹಿರಿಯ  ಮಗಳು ಮನೆಯ ಕೆಲಸ ಕಾರ್ಯಗಳಲ್ಲಿ ಅಮ್ಮನಂತೆ ನಿಂತು ಉಳಿದವರ ಯೋಗಕ್ಷೇಮ ನೋಡಿಕೊಳ್ಳುವುದರಲ್ಲಿ ನಿರತಳಾದಳು. ಕಲಿಕೆಯ ಬಿಡುವಿನ ವೇಳೆಯಲ್ಲಿ ಸುಮತಿ ಅಕ್ಕನಿಗೆ ಮನೆಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಳು.

ಅಮ್ಮನಿಂದ ಮನೆಯ ಕೆಲಸಗಳನ್ನು ಕಲಿತಿದ್ದ ಇಬ್ಬರಿಗೂ

ಮನೆಯ ಕೆಲಸಗಳನ್ನು ನಿಭಾಯಿಸುವುದು ಅಷ್ಟು ಕಷ್ಟ ಎನಿಸಲಿಲ್ಲ. ಆದರೂ ಅಮ್ಮನಂತೆ ಎಲ್ಲವನ್ನೂ ನಿಭಾಯಿಸುವುದು ಸಾಧ್ಯವಿರಲಿಲ್ಲ. ಅಮ್ಮನ ಕೈ ಅಡುಗೆಯ ರುಚಿಯನ್ನು ನೆನೆಯುತ್ತಾ ಊಟ ಮಾಡುವುದು ಮಕ್ಕಳಿಗೆ ಅಭ್ಯಾಸವಾಗಿ ಹೋಯಿತು.  ಸುಮತಿ ಕೇರಳದಲ್ಲಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣಳಾಗಿದ್ದರೂ ಇಲ್ಲಿ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಲು ಅನುಕೂಲವಾಗಲಿ ಎಂದು ಪುನಃ ಕರ್ನಾಟಕ ರಾಜ್ಯ ಸರಕಾರದ ಪಠ್ಯಕ್ರಮಾನುಸಾರವಾಗಿ (ಎಸ್ ಎಸ್ ಎಲ್ ಸಿ)  ಹತ್ತನೇ ತರಗತಿಗೆ ಖಾಸಗಿಯಾಗಿ ದಾಖಲಾದಳು.

ವಿದ್ಯಾಭ್ಯಾಸ ಮುಂದುವರೆಸುವ ಅವಳ ಕನಸು ನನಸಾದಂತೆ ಆಯಿತು. 

ಕಲಿಕೆಯಲ್ಲಿ ಚುರುಕಾಗಿದ್ದ ಅವಳು ಬಹಳ ಬೇಗ ಕನ್ನಡ ಅಕ್ಷರಗಳನ್ನು ಓದಲು ಬರೆಯಲು ಕಲಿತಳು. ಕನ್ನಡವನ್ನು ಮಾತನಾಡಲು ಅಲ್ಪ ಸ್ವಲ್ಪ ಕಲಿತಳು. ಅಕ್ಕ ಪಕ್ಕದ ಮನೆಯ ಎಲ್ಲರೂ ಕನ್ನಡದವರೇ ಆದ ಕಾರಣ ಕಲಿಕೆಯು ಇನ್ನೂ ಸುಲಭವಾಯಿತು. ಅವಳಿಗಿಂತ ವಯಸ್ಸಿಗೆ ಹಿರಿಯಳಾದ ನೆರೆ ಮನೆಯ ಅಕ್ಕ ಕೂಡಾ ಸಿಕ್ಕಳು. ಹಾಗಾಗಿ ಕಲಿಕೆಗೆ ಸಾಕಷ್ಟು ಸಹಾಯ ಸಹಕಾರ ಅವಳಿಂದ ದೊರೆಯಿತು. ಸುಮತಿಯು ಕಲಿಕೆಯಲ್ಲಿ ಪ್ರವೀಣೆ ಹಾಗಾಗಿ ಬಹಳ ಬೇಗ ಎಲ್ಲವನ್ನೂ ಕಲಿತಳು. ಚಿತ್ರಕಲೆಯಲ್ಲಿ ಕೂಡಾ ನಿಪುಣೆ. ಹಾಗಾಗಿ ಎಲ್ಲರಿಗೂ ಬಹಳ ಪ್ರಿಯ ಗೆಳತಿಯಾದಳು. ಅವಳ ಮೃದು ಸ್ವಭಾವ ಅಚ್ಚುಕಟ್ಟುತನ ನಯ ವಿನಯ ಸ್ನೇಹಪರತೆ  ನೆರೆ ಹೊರೆಯ ಹಿರಿಯರಿಗೆ  ಹಿಡಿಸಿತು. ನಾರಾಯಣನ್ ರವರನ್ನು ಕಂಡಾಗ ಸುಮತಿಯ ಗುಣಗಳನ್ನು  ಹೊಗಳಿ ಕೊಂಡಾಡುವರು.  ಅಕ್ಕನಿಗೆ ಮನೆಯ ಕೆಲಸದಲ್ಲಿ ಸಹಾಯ ಮಾಡುತ್ತಾ ತಮ್ಮಂದಿರಿಗೆ ಕಲಿಕೆಯಲ್ಲಿ ಪ್ರೋತ್ಸಾಹ ನೋಡುತ್ತಾ ಅಮ್ಮನ ನೆನಪು ಬಂದಾಗ ಮೂಕವಾಗಿ ರೋಧಿಸುತ್ತಾ ದಿನಗಳ ಕಳೆಯುತ್ತಾ ಇದ್ದಳು. ರಾತ್ರಿಯಾದರೆ ಯಾರಿಗೂ ಕಾಣದಂತೆ ಹೊದಿಕೆಯನ್ನು ತಲೆವರೆಗೂ ಹೊದ್ದು ಬಾಯಿಗೆ ಕೈ ಅಡ್ಡಲಾಗಿ ಇಟ್ಟು ಅಳುವುದು ಅವಳಿಗೆ ಸ್ವಲ್ಪ ಸಮಾಧಾನ ತರುತ್ತಿತ್ತು. ಅಪ್ಪ ಹಾಗೂ ಅಕ್ಕನ  ಜೊತೆ ಬಿಡುವಿರುವ ದಿನಗಳಲ್ಲಿ ಗದ್ದೆಯ ಕೆಲಸಕ್ಕೆ ಸಹಾಯ ಮಾಡುತ್ತಾ ಇದ್ದಳು. ಕೇರಳದಲ್ಲಿ ಇದ್ದಾಗ ಸುಕುಮಾರಿಯರಂತೆ ಇದ್ದ  ಇಬ್ಬರೂ ಹೆಣ್ಣು ಮಕ್ಕಳು ಅಪ್ಪನ ಜೊತೆ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಮನೆಯ ಸುತ್ತ ಇದ್ದ ಅಲ್ಪ ಸ್ವಲ್ಪ ಕಾಫಿ ಗಿಡಗಳ ಆರೈಕೆಯನ್ನು ಅಪ್ಪನ ಜೊತೆಗೂಡಿ ಮಾಡುತ್ತಿದ್ದರು.

ಮಕ್ಕಳು ತನ್ನ ಜೊತೆ ಹೀಗೆ ಕಷ್ಟ ಪಡುವುದನ್ನು ನೋಡಿ ನಾರಾಯಣನ್ ರವರಿಗೆ ಕರುಳು ಚುರುಕ್ ಎನ್ನುತ್ತಿತ್ತು. ತಾನು ಮಾಡಿದ ತಪ್ಪಿಗೆ ಪತ್ನಿಯು ಬಹುದೂರದ ಊರಿನಲ್ಲಿ ರೋಧಿಸುತ್ತಾ ತನ್ನ ದಾರಿ ದಿನವೂ ಕಾಯುವುದರ ಅರಿವು ಅವರಿಗೆ ಇತ್ತು.

ಕೇರಳದಲ್ಲಿ ತಮ್ಮ ದೊಡ್ಡ ಮನೆ ಹಾಗೂ ಸಮೃದ್ಧವಾದ ದೊಡ್ಡ ಜಮೀನಿನಲ್ಲಿ ಆಡುತ್ತಾ ಬೆಳೆದ ಮಕ್ಕಳು ಇಂದು ಒಂದು ಸಾಮಾನ್ಯ  ಉತ್ತಮ ಎನಿಸುವ ಮನೆಯಲ್ಲಿ ತನ್ನೊಡನೆ ಯಾವುದೇ ತಕರಾರು ಇಲ್ಲದೇ ಹೊಂದಿಕೊಂಡು ಇರುವುದು ಅವರಿಗೆ ಹೆಮ್ಮೆಯ ವಿಷಯವಾದರೂ ಎಲ್ಲಾ ರೀತಿಯ ಸುಖವನ್ನು ಅನುಭವಿಸಿ ಬೆಳೆದ ಮಕ್ಕಳು ಇಲ್ಲಿ ಈ ರೀತಿ ಕಷ್ಟ ಪಡುವುದು ನೋಡಿ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಜೊತೆಗೆ ಮಕ್ಕಳನ್ನು ಅಮ್ಮನಿಂದ ಬೇರೆ ಮಾಡಿದ ದುಃಖವೂ ಅವರನ್ನು ಆಗಾಗ ಕಂಗೆಡಿಸುತ್ತಿತ್ತು.

ಆಸ್ತಿ ಮಾರಿ ತಂದ ಹಣವೂ ಖರ್ಚಾಗಿ ಹೋಗುತ್ತಿದೆ. ಮಕ್ಕಳ ಭವಿಷ್ಯದ ಯೋಚನೆ ಬೇರೆ ಕಾಡುತ್ತಿತ್ತು. ಬೆಳೆದ ಹೆಣ್ಣುಮಕ್ಕಳನ್ನು ಪತ್ನಿಯ ಸಹಾಯವಿಲ್ಲದೇ ಸಾಕಿ ಸಲಹುವುದು ಅವರಿಗೆ ಕಷ್ಟವಾಯಿತು. ಸ್ನೇಹಿತರ ಹಾಗೂ ಹಿತೈಷಿಗಳ ಸಲಹೆಯ ಮೇರೆಗೆ ಹೆಣ್ಣು ಮಕ್ಕಳಿಗೆ ಅನುರೂಪವಾದ ವರಗಳ ಹುಡುಕಾಟ ಪ್ರಾರಂಭಿಸಿದರು.

ಪರಿಚಿತರಲ್ಲಿಯೂ ಹುಡುಕಲು ಹೇಳಿದರು. ತಮ್ಮಲ್ಲಿ ಉಳಿದಿರುವ ಹಣ ಪೂರ್ತಿ ಖರ್ಚು ಆಗುವ ಮೊದಲೇ ಹೆಣ್ಣು ಮಕ್ಕಳ ಜವಾಬ್ದಾರಿಯಿಂದ ಮುಕ್ತರಾಗಲು ನಾರಾಯಣನ್ ಬಯಸಿದರು. ಪತ್ನಿಯು ಜೊತೆ ಇಲ್ಲದೇ ಎಲ್ಲವನ್ನೂ ಹೇಗೆ ನಿಭಾಯಿಸುವುದು ಎನ್ನುವುದು ಅವರನ್ನು ಚಿಂತೆಗೀಡು ಮಾಡುವ ವಿಷಯವಾಗಿತ್ತು. ತಾನಿರುವ ಈ ಸ್ಥಿತಿಯಲ್ಲಿ ಊರಿಗೆ ಹೋಗಿ ಮುಖ ತೋರಿಸುವುದು ಅವರಿಗೆ ಇಷ್ಟವಿರಲಿಲ್ಲ. ಪತ್ನಿಯು ಮಕ್ಕಳ ಮದುವೆಯ ಬಗ್ಗೆ ಕಂಡಿದ್ದ ಕನಸೆಲ್ಲ ನುಚ್ಚು ನೂರು ಮಾಡಿದೆನಲ್ಲಾ ಎನ್ನುವ ಕೊರಗು ನಾಣುವನ್ನು ಬಹುವಾಗಿ ಯೋಚನೆಗೀಡು ಮಾಡಿತು. ಕೇರಳದಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳಿಗೂ ಅನುರೂಪರಾದ ವರಗಳನ್ನು ಹುಡುಕುವುದು ಈಗ ಕಷ್ಟ ಸಾಧ್ಯವಾಗಿತ್ತು. ಮೊದಲು ದೊಡ್ಡ ಮಗಳಿಗೆ ಒಬ್ಬ ಯೋಗ್ಯ ವರನನ್ನು ಹುಡುಕುವುದು ಅವರ ಈಗಿನ ಮುಖ್ಯ  ಉದ್ದೇಶವಾಗಿತ್ತು.


Leave a Reply

Back To Top