ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಹೀಗಿರೋಣ ಅಲ್ಲವೇ?
ದೇಶದೆಲ್ಲೆಡೆ ಶ್ರೀ ರಾಮನ ಮಂತ್ರ. ಸರ್ವ ಹಿಂದೂ ಬಾಂಧವರು ಒಟ್ಟಾಗಿ ತಮ್ಮದೇ ಒಟ್ಟು ಸೇರಿಸಿದ ಹಣದಿಂದ 500 ವರ್ಷಗಳ ಬಳಿಕ ಬಾಲ ರಾಮನನ್ನು ವಿಗ್ರಹ ರೂಪಿಯಾಗಿ ಅವನು ಹುಟ್ಟಿದ ಅಯೋಧ್ಯೆಯಲ್ಲಿ ಪ್ರತಿಷ್ಟಾಪಿಸಿ, ಆ ಮೂರ್ತಿಯ ಅಂದ ಕಂಡು ಹಿಗ್ಗಿ ನಲಿದಾಡಿ ಖುಷಿ ಪಟ್ಟರು. ಪ್ರಧಾನ ಮಂತ್ರಿಗಳು ಕೂಡಾ ಉಪವಾಸವಿದ್ದು, ತಾನು ಹೇಳಿದ ಕಾರ್ಯವನ್ನು ಮಾಡಿ ಕೊಟ್ಟರು. ಇದು ಭಕ್ತಿಯ ಪರಾಕಾಷ್ಟೆ ಒಂದೆಡೆ ಆದರೆ ಭಾವನಾತ್ಮಕ ಬಂಧವೂ ಆಗಿ ಉಳಿಯಿತು. ಜನವರಿ 24ರ ದಿನ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಿತು.
ಇದರ ಮುಂದೆ ಹೀಗೆಲ್ಲಾ ಆದರೆ ಇದರ ಹಿಂದೆಯೂ ಹಲವಾರು ಕಟ್ಟು ಕಥೆಗಳು ಬಂದಿವೆ. ಈ ಮೂರ್ತಿಯ ಬದಲಾಗಿ ಇನ್ನೊಬ್ಬ ಕುಂದಾಪುರದ ಮೂರ್ತಿ ಕೆತ್ತನೆಗಾರನ ಕೆಲಸವೂ ಆಗಿದೆ. ಅವರು ಕೆತ್ತಿದ ಮೂರ್ತಿಗೆ ಪ್ರತಿಷ್ಠಾಪನೆಯ ಅವಕಾಶ ಸಿಗಲಿಲ್ಲ. ಹಲವು ಗಣ್ಯರನ್ನು ಏಕೆ ಒಳಗೆ ಬಿಡಲಿಲ್ಲ ಇತ್ಯಾದಿ. ಏನೇ ಆದರೂ ಆಯಾ ಕಾಲಕ್ಕೆ ಏನೇನು ಆಗಬೇಕು ಎಂದು ಇದೆಯೋ ಅದೇ ಆಗುತ್ತದೆ ಎಂದು ವಾಸ್ತು ತಜ್ಞರು ಹೇಳಿದರೆ, ನಮ್ಮ ಶ್ರಮಕ್ಕೆ ತಕ್ಕ ಪಾಠ ನಮಗೆ ಸಿಗುತ್ತದೆ ಎಂದು ವಿಜ್ಞಾನ ಹೇಳುತ್ತದೆ.
ರಾಮನ ದೇವಾಲಯ, ಆಯೋದ್ಯೆ ಬಹಳ ಹಿಂದೂಗಳನ್ನು ಐಕ್ಯಮತ್ಯಗೊಳಿಸಿದ್ದಂತೂ ಸತ್ಯ. ಇನ್ನೊಂದೆಡೆ ಇದನ್ನೇ ಕೆಲವರು ರಾಜಕೀಯಕ್ಕಾಗಿ ಬಳಸಿ ಕೊಂಡವರೂ ಇದ್ದಾರೆ. ರಾಮಮಂದಿರ ಕಾರ್ಯ ಹಾಗೂ ಭಕ್ತರಿಂದ ಸಂಗ್ರಹ ಆದ ಹಣಕಾಸಿನ ಲೆಕ್ಕಾಚಾರ ಭಕ್ತನೊಬ್ಬನಿಗೆ ಬೇಕಾಗಿದೆ ಆದರೆ ಇನ್ನೊಬ್ಬನಿಗೆ ಅಲ್ಲಿರುವ ಮೂರ್ತಿ, ಮತ್ತೊಬ್ಬನಿಗೆ ಅಲ್ಲಿನ ಕಾಂತಿ, ಇನ್ನೊಬ್ಬನಿಗೆ ಅಲ್ಲಿನ ಚಿಲ್ಲರೆ ಹೀಗೆ ಬೇಕುಗಳ ಪಟ್ಟಿ ಮುಗಿದು ಹೋಗದು..
ಆಯಿತು, ಇನ್ನು ಎಲೆಕ್ಷನ್ ಕ್ಯಾನ್ವಾಸ್ ಶುರು. ಪ್ರಜೆಗಳು, ಸುಳ್ಳು ಮೋಸಗಳಲ್ಲಿ ನಡೆಯುತ್ತಿರುವಂತಹ ಹಲವಾರು ವ್ಯಾಪಾರಗಳು ಇವುಗಳನ್ನು ನೋಡಿ ಭೂಮಿತಾಯಿ ಅದೆಷ್ಟು ನೊಂದು ಕೊಳ್ಳುತ್ತಿದ್ದಾಳೆಯೋ ಏನೋ. ನಾನೇನು ನೀನೇನು ಇದು ನನ್ನ ಭೂಮಿ ಇದು ನಿನ್ನ ಭೂಮಿ ಇದು ಈ ಧರ್ಮದವರಿಗೆ ಸೇರಿದ ಭೂಮಿ ಇದು ಆ ಧರ್ಮದವರಿಗೆ ಸೇರಿದ ಭೂಮಿ ಎಂದು ಮೊದಲಾಗಿ ನಾವು ಕಚ್ಚಾಡಿಕೊಳ್ಳುತ್ತಿರುವಾಗ ಆ ಭೂಮಿ ತಾಯಿ ಅದೆಷ್ಟು ನಗುತ್ತಿರಬಹುದು? ಜಗವೆಲ್ಲ ನನ್ನದು ಆದರೆ ಈ ಮನುಷ್ಯರು ನನ್ನನ್ನು ನಾನು ಎಂದು , ನನ್ನ ಜಾಗ ಎಂದು ಕಚ್ಚಾಡಿಕೊಳ್ಳುತ್ತಿರುವವರಲ್ಲ! ಎಂಥ ಮೂರ್ಖರು ಇವರು ಸರಿಯಾಗುವುದು ಯಾವಾಗ? ಬದುಕಿನಲ್ಲಿ ಸಾಧಿಸಲು ಅದೇನೇನೋ ವಿಷಯಗಳಿವೆ, ಅವುಗಳನ್ನು ಸಾಧಿಸಿ ಜೀವನವನ್ನು ಸಾರ್ಥಕಗೊಳಿಸುವಲ್ಲಿ ಬದುಕಿನ ಸತ್ವ ಅಡಗಿದೆ. ಅದರ ಬದಲಾಗಿ ಧರ್ಮ ಧರ್ಮದ ಬಗ್ಗೆ ಹಾಗೇನೇ ಜಾತಿ ಜಾತಿಯ ಬಗ್ಗೆ ವಿವಿಧ ಪಕ್ಷಗಳ ಬಗ್ಗೆ ಮಾತನಾಡಿ ಜಗಳವಾಡಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಅನ್ನಿಸುತ್ತಿಲ್ಲವೇ? ಹಲವಾರು ಪಕ್ಷಗಳು ಧರ್ಮಗಳ ಬಗ್ಗೆ ಮತ್ತು ಜಾತಿ ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತಿ ನಾವು ಮೇಲೆ ಅವರು ಕೆಳಗೆ ಎನ್ನುತ್ತಾ ಅಂಧಕಾರದಲ್ಲಿ ದರ್ಪವನ್ನು ವಿರುದ್ಧ ತಾವು ಚೆನ್ನಾಗಿ ಬಾಳದೆ, ಇಲ್ಲಿರುವ ಇತರರಿಗೂ ಚೆನ್ನಾಗಿ ಬಾಳಲು ಬಿಡದೆ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವ ಹಲವಾರು ಜನರಿದ್ದಾರೆ. ಕೆಲವೊಬ್ಬರು ಬದುಕನ್ನು ಸಂತೆ ಮಾರುಕಟ್ಟೆ ಹಾಕಿ ಬೇಕಾಬಿಟ್ಟಿ ಚೆಲ್ಲಿ ಸದುಪಯೋಗಪಡಿಸಿಕೊಳ್ಳದೆ ಇಲ್ಲಿಂದ ತೆರಳುವವರಿದ್ದಾರೆ.
ದೇವರು, ಜಾತಿ, ಧರ್ಮ ಇವೆಲ್ಲವೂ ಕೂಡ ಇರಲಿ. ತನಗೆ ಇಷ್ಟ ಬಂದ ದೇವರನ್ನು ಪೂಜಿಸಲಿ ತನಗೆ ಇಷ್ಟ ಬಂದ ಜಾತಿಯಲ್ಲಿ ಮುಂದುವರೆಯಲಿ , ತನಗೆ ಇಷ್ಟ ಬಂದ ಧರ್ಮವನ್ನು ಸ್ವೀಕರಿಸಲಿ , ಅದನ್ನು ವಿರೋಧಿಸುವವರು ಈ ಪ್ರಪಂಚದಲ್ಲಿ ಯಾರೂ ಇಲ್ಲ. ಆದರೆ ಇತರ ಧರ್ಮಗಳನ್ನು ಆಚರಿಸುವವರಿಗೆ ಅವರಷ್ಟಕ್ಕೆ ಅವರನ್ನು ಬದುಕಲು ಬಿಡದೆ ಉಪದ್ರ ಕೊಡುವ ಕಾರ್ಯ ಸಲ್ಲದು. ಯಾವ ದೇವರು ಕೂಡ ಕೀಳಲ್ಲ, ಯಾವ ಧರ್ಮವು ಮೇಲಲ್ಲ , ಯಾವ ಜಾತಿಯು ಮೇಲು ಕೇಳಲ್ಲ! ತತ್ವಗಳ ಆಂತರ್ಯದಲ್ಲಿ ಹೊಕ್ಕಿ ನೋಡಿದಾಗ ಪ್ರತಿಯೊಂದು ಜಾತಿ ಧರ್ಮ ದೇವರು ಹೇಳುವುದಿಷ್ಟೇ , ತಾವು ಚೆನ್ನಾಗಿ ಬದುಕಿ ಮತ್ತು ಇತರರನ್ನು ಚೆನ್ನಾಗಿ ಬದುಕಲು ಬಿಡಿ. ತಾವು ಉತ್ತಮ ಮಾರ್ಗದಲ್ಲಿ ನಡೆಯಿರಿ ಮತ್ತು ಇತರರಿಗೆ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿ. ಶಿಕ್ಷಣಕ್ಕೆ ಮತ್ತು ಜ್ಞಾನಕ್ಕೆ ಆದ್ಯತೆ ನೀಡಿ. ಇದು ಸರ್ವಕಾಲಕ್ಕೂ ಬೇಕಾದದು. ಗುರುಗಳಿಗೆ ಹಿರಿಯರಿಗೆ ಗೌರವ ಕೊಡಿ ಕಿರಿಯರನ್ನು ಪ್ರೀತಿಯಿಂದ ಆಧರಿಸಿ, ಸತ್ಕರಿಸಿ, ಕಷ್ಟಪಟ್ಟು ದುಡಿಯಿರಿ , ಯಾರಿಗೂ ಮೋಸ ಮಾಡಬೇಡಿ. ಒಳ್ಳೆಯ ಕೆಲಸಗಳನ್ನು ಮಾಡಿ ಮತ್ತು ಅದರ ಉತ್ತರಕ್ಕೆ ದೇವರ ಮೇಲೆ ಬಿಟ್ಟುಬಿಡಿ. ಎಲ್ಲರೂ ನಮ್ಮ ಹಾಗೆ ಎಲ್ಲರೂ ಒಂದೇ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಬೇಕು ಎನ್ನುವಂತಹ ಮಾತು ಅಲ್ಲವೇ? ಆ ಮಾತನ್ನು ನಾವೆಲ್ಲಾ ಪರಿಪಾಲಿಸಿಕೊಳ್ಳಬೇಕು.
ಮಂದಿರ ದೇವಸ್ಥಾನ ಮಸೀದಿ ಇವುಗಳೆಲ್ಲ ಎರಡನೆಯದು. ಇವುಗಳಲ್ಲಿ ಮೊದಲನೆಯದು ಮಾನವನ ಹೃದಯವೆಂಬ ಗರ್ಭಗುಡಿ. ಈ ಹೃದಯದ ಗರ್ಭಗುಡಿಯಲ್ಲಿ ಪೋಷಕರನ್ನು ತನ್ನದೇ ದೇವರಾಗಿ ಆರಾಧಿಸಿ, ಅವರಿಗೆ ಯಾವುದೇ ರೀತಿಯ ನೋವು ಕೊಡದೆ, ಅವರನ್ನು ಚೆನ್ನಾಗಿ ನೋಡಿಕೊಂಡಾಗ ಅವರ ಆಶೀರ್ವಾದವೇ ವರವಾಗಿ ಪರಿಣಮಿಸುತ್ತದೆ. ಅದಕ್ಕಿಂತ ದೊಡ್ಡ ದೇವರು, ಪೂಜೆ ಬೇಕಿಲ್ಲ. ಇದರ ಜೊತೆ ಜೊತೆಗೆ ಪರರಿಗೆ ಉಪಕಾರ, ಒಳ್ಳೆಯ ಭಾವನೆ, ಉದಾತ್ತ ಆಲೋಚನೆ ಇರುವ ಮನುಷ್ಯ ಯಾವ ದೇವರನ್ನು ನಂಬದೆ ಹೋದರೂ, ಯಾವ ಮಂತ್ರ ಪಠಣ ಮಾಡದೆ ಇದ್ದರೂ ಚೆನ್ನಾಗಿಯೇ ಬದುಕುತ್ತಾನೆ.
ಬದುಕು ನಾಲ್ಕೇ ದಿನ. ಅಷ್ಟು ದಿನ ದ್ವೇಷ, ಅಸೂಯೆ, ಮತ್ಸರ, ಹೊಟ್ಟೆಕಿಚ್ಚು, ಕೋಪ ಎಲ್ಲವನ್ನೂ ನಮ್ಮ ಮನಸ್ಸಿನ ಒಳಗೆ ತುಂಬಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುವ ಬದಲು ತಾಳ್ಮೆ, ಒಂಚೂರು ಮೌನ, ಕ್ಷಮೆ, ಸ್ಪಂದನೆ, ಮಿಡಿತ, ಒಂದಿಷ್ಟು ಸಾಂತ್ವನ, ಸಮಾನತೆ ಇವುಗಳನ್ನು ತುಂಬಿಕೊಂಡು ಏಕೆ ಹಗುರಾಗಿ ಬದುಕನ್ನು ಖುಷಿಯತ್ತ ಕೊಂಡುಹೋಗಬಾರದು ಅಲ್ಲವೇ? ನೀವೇನಂತೀರಿ?
ಹನಿಬಿಂದು
ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.