ಗಝಲ್
ಹೇಮಗಂಗಾ
ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ?
ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ?
ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತ
ಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ?
ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ?
ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ?
ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆ
ಬೆದರಿದ ಮನ ದೃಢತೆ ಕಳೆದುಕೊಂಡಿದೆ ಮರಳಿ ಊರ ಸೇರುವುದು ಹೇಗೆ ?
ತಿಳಿದಿಲ್ಲ ಹೊಂಚು ಹಾಕಿದ ಹದ್ದಿನಂತೆ ಎಂದೆರಗುವುದೋ ಎಂದು
ಮದ್ದಿಲ್ಲದ ಮಹಾಮಾರಿ ಹೆದರಿಸಿದೆ ಮರಳಿ ಊರ ಸೇರುವುದು ಹೇಗೆ ?
********