ರಾಮಮೂರ್ತಿ ನಾಯಕ ಕೃತಿ “ಅಂಬರಗುಬ್ಬಿ” ಒಂದು ಅವಲೋಕನ ರಾಜು ನಾಯ್ಕ.

ಅಂಬರಗುಬ್ಬಿ:- ಕವನ ಸಂಕಲನ
ರಚನೆ ರಾಮಮೂರ್ತಿ ನಾಯಕ
ಪ್ರಕಾಶಕರು/ಮುದ್ರಕರು:- ಮನೋರಮಾ ಪ್ರಿಂಟರ್ಸ್ ಮಂಗಳೂರು
ಸಂಪರ್ಕ944926945 (ಪುಸ್ತಕ ದೊರೆಯಲು)

ಕವಿ ರಾಮಮೂರ್ತಿ ನಾಯಕ ನನಗೆ ಪರಿಚಯವಾಗಿದ್ದು ಗೆಳೆಯ ಉದಯ ನಾಯಕ ಬಾಸ್ಗೋಡು ಇವರಿಂದ..ನಾವು ಆಗ  ಅಂಕೋಲಾ,ಕಾರವಾರದಲ್ಲಿ ಗ್ರಾಮ ಅರಣ್ಯ ಸಮಿತಿಗಳಿಗೆ ತರಬೇತಿ ನೀಡುತ್ತ  ಊರುರು ತಿರುಗುತ್ತಿದ್ದೇವು.. ಆಗ ಒಮ್ಮೆ ಬಾಸ್ಗೋಡಿನಿಂದ ಬರುವಾಗ ಉದಯ ಅವರು ಇವರು ರಾಮಮೂರ್ತಿ ನಾಯಕ ಎಂದು ಪರಿಚಯಿಸಿದ್ದರು..ಮೊದಲೆ ಓದುವ ಕುತೂಹಲಿಯಾದ ನಾನು ಅವರ ಅಂಬರ ಗುಬ್ಬಿ ಕವನ ಸಂಕಲನ ಓದಿದ್ದೆ.. ಕುತೂಹಲದಿಂದಲೆ ಪರಿಚಯವಾಗಿತ್ತು..ಗಂಭೀರ ವ್ಯಕ್ತಿತ್ವದ ರಾಮಮೂರ್ತಿ ನಾಯಕ ಬಹಳಷ್ಟು ಸರಳ ಜೀವಿ ಎಂಬುದು ನನಗೆ ತಿಳಿದಿರಲಿಲ್ಲ..ಆಮೇಲೆ ಮುಖಪುಸ್ತಕದಲ್ಲಿ ನನ್ನ ಬರಹಗಳನ್ನು ಓದಿ ನನ್ನ ತಿದ್ದುತ್ತ ಎಚ್ಚರಿಸುತ್ತ ಬಂದರು..ಆಗಲೆ ನಾನು ಅವರನ್ನು ಅಕ್ಷರ ಗುರುವೆಂದು ಒಪ್ಪಿಕೊಂಡಿದ್ದೆ.. ಪ್ರಾಜ್ಞವಂತಿಕೆಯ ಬರಹಗಳು ಜಾಲತಾಣಗಳಲ್ಲಿ ಖರ್ಚಾಗುವುದಿಲ್ಲ ಬಿಡಿಗಾಸಿನ ಪೋಸ್ಟಗಳಿಗೆ ಬರುವ ಲೈಕ್ ಕಾಮೆಂಟ್ ಲೋಕದಲ್ಲಿ ನನ್ನ ಬರಹ ಸೊರಗುತ್ತಿದೆ ಎಂಬ ಅಳುಕು ನನಗೆ ಇತ್ತು..ಆ ದಿನಗಳಲ್ಲಿ ನನ್ನ ಅಳುಕನ್ನು ಅಳಿಸಿ ಹಾಕಿ ನನ್ನ ಬರವಣಿಗೆಯಲ್ಲಿ ಸತ್ವವನ್ನು ಶಕ್ತಿಯನ್ನು ಸಂಚಯಿಸಲು ಕಾರಣರಾದವರೆ ಈ ರಾಮಮೂರ್ತಿ ನಾಯಕ.. ಕಾಲೇಜಿನ ಉಪನ್ಯಾಸಕರಾದರು ಅವರಿಗೆ ಸಾಹಿತ್ಯ ತುಡಿತ ವಿಪರೀತವಿದೆ,ಮತ್ತು ತನ್ನಂತೆ ಇತರರು ಬೆಳೆಯಲಿ ಎಂಬ ಉದಾತ ಚಿಂತನೆಗಳುಳ್ಳ  ಇವರು ಅನೇಕರನ್ನು ಬೆನ್ನು ತಟ್ಟಿ ಸಾಹಿತ್ಯಾಭಿಮುಖವಾಗುವಲ್ಲಿ ಪ್ರಯತ್ನಿಸಿದ್ದಾರೆ ಉದಾ:- ಮಂಜುನಾಥ ನಾಯ್ಕ ಯಲ್ವಡಿಕವೂರ,ಕವಿಯತ್ರಿ ತಿಲೋತ್ತಮೆ ಗೊಂಡ, ಗಣಪತಿ ನಾಯ್ಕ ಬೆಳಕೆ,ಆರತಿ ಹೆಗಡೆ,ಬಹು ಎತ್ತರಕ್ಕೆ ಏರಿದ ಇವರ ಶಿಷ್ಯರು.
 ಅವರ ಅಂಬರ ಗುಬ್ಬಿ ಕವನ ಸಂಕಲನದ ಅವಲೋಕನ ಮಾಡಲು ಹಲವಾರು ಸಲ ಪ್ರಯತ್ನಿಸಿದ್ದಿದೆ..ಯಾಕೋ ಹಿಂಜರಿಕೆ ಬಂದು ಬಿಟ್ಟು ಬಿಟ್ಟಿದ್ದೆ..ಕವನ ಸಂಕಲನಕ್ಕೆ ಮಹಾಬಲ ಮೂರ್ತಿ ಕೊಡ್ಲಕೆರೆ ಮುನ್ನುಡಿ ಬರೆದು ಮೂರ್ತಿಯಿಂದ ಮೂರ್ತಿಗೆ ಎಂಬ ಶಿರೋನಾಮೆ ನೀಡಿದ್ದಾರೆ.

ನಾನು ಕಂಡ ಅಂಬರ ಗುಬ್ಬಿ ಅಂಬರದ ತೊಟ್ಟಿಲಲ್ಲಿ ಮೊಟ್ಟೆ ಇಟ್ಟಿಲ್ಲ. ಎದೆಯ ಸಂಧುಗಳಲ್ಲಿ ಕನಸನ್ನು ನೆಟ್ಟಿಲ್ಲ…ಬದಲಾಗಿ ವಾಸ್ತವಿಕ ಪ್ರಜ್ಞೆಯಲ್ಲಿ ಸಮಾಜದ ದಿಕ್ಕನ್ನು ದೃಷ್ಟಿಸುತ್ತ ಅನುಭವ ಜ್ಞಾನದ ಆಧಾರದ ಮೇಲೆ ಕವನಗಳನ್ನು ಬರೆಯುತ್ತಾ ಅಕ್ಷರ ಲೋಕಕ್ಕೆ ಮಾಂತ್ರಿಕ ಸ್ಪರ್ಶ ನೀಡಿದ ಅವರ ಬರಹ ತುಸು ಬೇಗನೆ ಅರ್ಥ ಆಗುವುದಿಲ್ಲ..ಈ ಕವನ ಸಂಕಲನದಲ್ಲಿ ಇರುವ ಒಟ್ಟು ೪೧ ಕವನಗಳನ್ನು ಓದಿ ಭಿನ್ನ ಭಿನ್ನ ದೃಷ್ಟಿಕೋನದಲ್ಲಿ, ಅರ್ಥೈಸಿಕೊಳ್ಳಲು ಪ್ರಯತ್ನಿಸಿದ್ದೇನೆ.. ಒಟ್ಟು ಸಾರಾಂಶದಲ್ಲಿ ಗುಬ್ಬಿಯೊಂದು ಅಂಬರದಲ್ಲಿ ವಿಹರಿಸುವ ಕನಸುಗಳಿಗೆ ಎಡತಾಕುವ ತೊಡರುಗಳ ಮಹಾಪೂರವೆ ಕವನಗಳಲ್ಲಿವೆ..

ಮೊಗಸು ಈ ಕವನದಲ್ಲಿ ಅವರದೊಂದು ಸಾಲು ಹೀಗಿದೆ ನಂದ ಗೋಕುಲಕ್ಕೊಂದೇ ದಾರಿ
 ಒಳದಾರಿಗಳು ನೂರಾರು.
ಬದುಕಿನ ಅನಂತತೆಗೆ ಒಂದೇ ದಾರಿ ಇರುತ್ತದೆ ಆದರೆ ಬದುಕಲು ನಮಗೆ ನೂರಾರು ಒಳದಾರಿಗಳು ಸಿಗುತ್ತವೆ.. ರೂಪಾಂತರ ಕವನದಲ್ಲಿ ಹುಟ್ಟಿದೊಡನೆ ಚಟ್ಟಕ್ಕೆ ದಾರಿ ಎಂಬ ಸಾಲು ವಿಸ್ಮಯಗೊಳಿಸಿದೆ..ನಾವು ಹುಟ್ಟಿದಾಗ ಪ್ರಾರಂಭವಾಗುವ ಜೋಗಳವೆ ನಮಗೆ ಪಟ್ಟದ ಆಸೆ ತೋರಿಸುವಂತಿರುತ್ತದೆ. ಆದರೆ ನಮ್ಮ ಚಟ್ಟದ ದಾರಿಯಲ್ಲಿ ನಾವು ಪ್ರತಿದಿನ ಬೆಳೆಯುತ್ತೇವೆ,ಸಾಗುತ್ತೇವೆ. ಈ ಕವನಗಳಲ್ಲಿ .ಒಳಾರ್ಥಗಳನ್ನು ಗ್ರಹಿಸುವುದು ಸುಲಭವಲ್ಲ.. ಮೊಗಸು*ವಿಂದ ಶುರುವಾದ ಕವನ ಯಾತ್ರೆ *ಸ್ವಾತಂತ್ರ ಸಿಗುವಲ್ಲಿಯವರೆಗೆ ಅನೇಕ ಕಡೆ ರೂಪಾಂತರವಾಗಿದೆ.
ಕವಿಯ ಭಾವ ಲಹರಿಗೆ ಒಡ್ಡು ಕಟ್ಟಲಾಗದು..ಆದರು ಭಾವಗಳ ಏರಿಳಿತ ಸಡಿಲಚೌಕ ದಲ್ಲಿ ಸಡಿಲಗೊಂಡು ಮೋಡ ಸುರಿಸಿದ ಸೋನೆ ಮಳೆಯಂತೆ ಇಳಿದಿದೆ.. ಸೆರೆಮನೆಯಲ್ಲಿ ಹುಟ್ಟಿದ ಭಾವಗಳು ನೊರೆಬುರುಗ ಮಿಂದು ಫಳಫಳಿಸಿದೆ ಇಲ್ಲಿ..ತಿಳಿಗೊಳದಲ್ಲಿ ನೆಟ್ಟ ಬೆಳಕಿನ ಬೀಜ ಮೊಳಕೆಯೊಡವ ಮುನ್ನವೆ  ಹಿನ್ನೀರ ಕೆಸರಲ್ಲಿ ಮುಳುಗಿದ ವಿಷಾದತೆಯ ನೋಟ ಯಾಕೆ? ಯಾಕೆಂದರೆ ಗುರುಕುಲದಲ್ಲಿ ಕುರುಕುಲದವರ ವಿಕಾರ ನಗುವಿನ ಚಿತ್ರ ಕಾಣಿಸುತ್ತದೆ.ಆಗ ಬೆಳಕಿನ ಬೀಜ *ಅಸ್ತಿ ಯಂತೆ ಕಂಡಿದೆ.. ಸತ್ತವನ ರಕ್ತ*ಕ್ಕೆ ನರಿಗಳು ಕಂಬಿ ಕಿತ್ತ ಮೇಲೆ ತೋಳುಗಳು ಕಾಯುತ್ತಿವೆ..ಸಮಾಜದ ಈಗಿನ ದುರಂತ ಸನ್ನಿವೇಶವಿದು.. ನಮ್ಮ ಸ್ವಾತಂತ್ರದ ಹಂಬಲದಲ್ಲಿ ರಕ್ತ ಚೆಲ್ಲಿದ್ದು ದೇಶದ ಹುಲಿಗಳು,ಕಂಬಿ ಕಿತ್ತಿದ್ದು ನರಿಗಳು..ಹೊಂಚು ಹಾಕಿ ನಮ್ಮ ರಕ್ತ ಹೀರುತ್ತಿರುವುದು ತೋಳಗಳು.. ಸತ್ತವರ ರಕ್ತಕ್ಕೆ *ನಿಂತ ನೆಲ ತೂತಾದ ದೋಣಿಯಂತಾಗಿದೆ.. ಒಂದು ತರ ಪೊರೆ ಕಳಚಿದ ಹಾವಿನ ವಿಷ ಬೀರಿದ ತುಟಿಯ ಚುಂಬಿಸುಂತಾಗಿದೆ ನಮ್ಮ ಬಾಳು..ಮಡಿಕೆ*ಯಲ್ಲಿ  ಕೂಡಿಟ್ಟು ಮಲಗಿದವನ ಸಂಪತ್ತಿಗೆ ಹೆಗ್ಗಣಗಳ ಕಾಟ ತಪ್ಪಲಾರದು..ಬುದ್ಧ ಹಾಕಿದ ಕೊನೆಯ ಊಟ ಕೂಡ ನಮ್ಮ ಎದ್ದು ಕುಳಿಸಿಲ್ಲ ಎಂಬ ಬಡತನದ   ವಿಷಾದ ಇಲ್ಲಿದೆ..*ಸೂರ್ಯ ನಡೆ  ಹಗಲ ನುಂಗಿದ ಇರುಳು,ಬೆಳಕ ನುಂಗಿದ ಇರುಳಿನಂತೆ  ಒಡಲಾಳದ ಚಿಗುರೆಲೆಯ ಮೇಲೆ ಕನಸಿನ ಜೊಲ್ಲು ಬಿದ್ದು.. ಹಸುಗೂಸಿನ ಹೆಣದ ಮುಂದೆ  ಬಿಕ್ಕಳಿಸಿ ಅಳುವ ಹಸಿದ ಹೊಟ್ಟೆಯಂತೆ, ಅಕಾಲ ಕಮಲ ಅರಳಿದರೆ ಜೇನ್ನುಣ್ಣುವ ದುಂಬಿಯ ಮೊದಲೆ ಹೂ- ಕೊರಕಗಳ ಕಾಟ ತಪ್ಪುವುದೆ? ಗೊಲ್ಲ ಮನಸಿನಲ್ಲಿ ಗೋಲಿ ಆಡುವ ಬಯಕೆ ಕಣ್ಣುಳ್ಳ ಕುರುಡರಿಗೆ ಬೆಟ್ಟದ ಮೇಲೊಂದು ಒರತೆ ಕಂಡಂತೆ.. ತೆರೆ ನುಂಗಿದ ಹೆಜ್ಜೆ ಗಳಲ್ಲಿ  ತಿಥಿ ಶ್ರಾದ್ಧಗಳು ಸಾಕ್ಷಿಯಾಗಿ ಉಳಿದು ಬಿಟ್ಟಿವೆ.. ಗಂಧರ್ವರು ಕೊಳಲನುದುವ ಕೃಷ್ಣ ಮಣ್ಣಾದ ಮೇಲೆ ಇತ್ತ ತೂಗುಗತ್ತಿಯ ಹಿಡಿದು ಬಂದಿದ್ದಾರೆ.. ಇಲ್ಲಿಯ ಚಳಿಗೆ ಪ್ರೇಮದ ಅಮಲು ಏರಿ ಗಾಳಿಗೆ ಗೆಜ್ಜೆ ಕಟ್ಟಿ ಕುಳಿತ್ತಿದ್ದಾರೆ..ಯಾನಕ್ಕೆ ಹೊರಟ ಕುಸುಮಗಳು ಮೌನ ಮೆರವಣಿಗೆ ಮಾಡಿ  ಕನಸು ಮಾರಿಕೊಂಡಿರುವುದು ನಿಚ್ಚಳ ರೂಪದಲ್ಲಿರುವಾಗ ಮೆಲ್ಲನೆ ಅಡಿಯಿಟ್ಟ ಬೆಳಕಿನ ಕುಡಿಗಳು ನೆಣೆಯಿರದ ಹಣತೆಗೆ ಕಡ್ಡಿ ಗಿರಿ,ಗಲ್ಲ ಸವರಿಕೊಂಡಾಗಲೆ ಗಮಟೆ ಮುಗಿದ ಮೌನ*ದಲ್ಲಿ .. *ಅಂಬರಗುಬ್ಬಿ ನಭಕ್ಕೆ ರಂಗಿನ ರಗ್ಗು ಎಳೆಯಲು ಅಂಬೆಗಾಲಿಕ್ಕುವ ಬದಲು ರಥ ಏರಿದೆ… ಪಥವಿರದ ರಥದ ಕರುಳಿಗೆ ಕಣ್ಣು ಕಳೆದುಹೋದ ಮೇಲೆ  ಗಾಂಧಾರ ಶಿಲ್ಪಿ ಗಗನದಿಂದಿಳಿದು ಗೀಚಿದ ಶಿಶುವಿಹಾರ ಗೀತೆಗಳಲ್ಲಿ ಕನಸು ಮುಗಿಯುವುದಿಲ್ಲ ಬದಲಾಗಿ ಅವಳೆದೆಯಿಂದ ಉದುರುವ ಹೂವುಗಳನ್ನು ಜತನವಾಗಿಟ್ಟುಕೊಂಡೇ ಚಕ್ರವ್ಯೂಹ ನುಗ್ಗುವ ಮೊದಲು ಅರಿಗಳ ಎದೆಗೆ ಬಿರುಕು ಮೂಡಿಸುವ ಇರಾದೆಯಲ್ಲಿ ಅಂತರಂಗದ ಸುಗ್ಗಿಗೆ ಬೆಳೆದ ಹಳದಿಮರ ಚುಮು ಚುಮು ಚಳಿಗೆ ಸೂತಕದ ಛಾಯೆ ಹೊತ್ತು ಎಲೆಗಳೆಲ್ಲ ಗಗನದಲ್ಲಿ ಗಿಲಗಿಟ್ಟಿ
ಹೋಗಿವೆ.. ದಿಗಂತ ಮರೆತ ಮುಗಿಲು ಗರಿ ಬಿಚ್ಚುವ ಮುನ್ನವೆ ಸೂರ್ಯನ ಓಕುಳಿಯಲ್ಲಿ ಬ್ರಹ್ಮಾಂಡದಲ್ಲಿ ಅಣುವಾಗಿ ಗಾಳಿಯೊಂದಿಗೆ ಜಗಳ ಮಾಡಿ ಮುಸುಕಿನ ನಾಣ್ಯ ದ ವೇಷದಲ್ಲಿ ಯಾರು ಯಾರದ್ದೋ ಕೈಯಲ್ಲಿ ಜುಗಲ್ ಬಂದಿ ಆಟವಾಡುತ್ತಿದೆ.. ಹಳೆ ಹುಲ್ಲಿನ ಮೇಲೆ ಒಣಗಿಸಿದ  ವಾಟೆ ಯಂತೆ ಹೊಸ ಉಯಿಲು ಬರೆಯಲು ಮುಂಜಾವಿನ ಕೊರೆವ ಚಳಿಯಲ್ಲಿ ನನ್ನವಳು ಮೆಲ್ಲಗೆ ಬಳಿಸಾರಿ ಬಿಳಿ ನಗೆ ಬೀರಿದಂತೆ ಆಗಲೆ ಅಂತರಂಗದಲ್ಲಿ ಚಂದಿರನ ಪಿಸುಮಾತು ಅರೆಮನಸಿನಲ್ಲಿ ಬರುವ ಸೂರ್ಯ ಅಧ:ಕೃತ ನಾಗಿ ಕತ್ತಲಿಗೆ ಬೆಳಕಿನ ಕಿರಣಗಳ ಹೊದಿಸುತ್ತಿರುವಾಗ ಬಿರುಗಾಳಿಯ ರಭಸಕ್ಕೆ ಅಲೆಮಾರಿ ಆಕಾರ ಕಳೆದುಕೊಂಡು ಸ್ವರ್ಗದ ದಾರಿಗಾಗಿ ಹಣತೆ ಹಚ್ಚಿ ಸಂಭ್ರಮಿಸಿ ಸಂಜೆಯ ಹೆಜ್ಜೆ  ಯಾಗಿದ್ದು,ಯಾನ ಯಾವ ಕಡೆ ಎಂಬುದೆ ನಿಗೂಢವಾಗಿ ಕೈಯಲ್ಲಿ ದೊಂದಿ ಹಿಡಿದು ಬೆಳಕನ್ನು ಅರಸುತ್ತಾ ಒಂಟಿ ಸಲಗ ದಂತೆ ಅಮರಾವತಿಯ ಅರಸುತ್ತ.. ಒಂದು ಹೆಜ್ಜೆಯ ದಾರಿ ಯಲ್ಲಿ ಸ್ವಾತಂತ್ರ ತನಗೆ ಸಿಕ್ಕಿತೇ?ಎಂಬ ಹಂಬಲದಲ್ಲಿ ಅಂಬರಗುಬ್ಬಿ ಕನಸನ್ನು ಹೆಣೆದಿದೆ..

ಉಪಸಂಹಾರ:- ರಾಮಮೂರ್ತಿ ನಾಯಕರ ಅಂಬರಗುಬ್ಬಿ ಕವನ ಸಂಕಲನ ಓದಿ ನನ್ನ ಅನಿಸಿಕೆಯನ್ನಷ್ಟೆ ನಾನು ಇಲ್ಲಿ ದಾಖಲಿಸಿದ್ದೇನೆ.. ಪ್ರತಿಯೊಂದು ಕವನವೂ ಹತ್ತು ಹಲವಾರು ಆಯಾಮ ಪಡೆದಿರುವುದರಿಂದ ಕವಿತೆಗಳ ಸಾರ ಇಷ್ಟೆ ಎಂದು ನಿರ್ಧರಿಸುವುದು ಬಹಳ ಕಷ್ಟವಾಗಿದೆ..ಒಂದೊಂದು ಕವಿತೆಯು ಭಿನ್ನತೆಯಲ್ಲಿ ಮೆದುಳನ್ನೆ ಕದಡಿ ಹಾಕಿತ್ತು….ಈ ಕವನ ಸಂಕಲನದ ಉಸಾಬರಿಯೇ ಬೇಡವೆಂದು ಹಲವಾರು ಸಲ ಓದಿ ಪುಸ್ತಕ ಮಡಚಿಟ್ಟು ಮಲಗಿದ್ದಿದೆ…ಇಲ್ಲಿಯ ವಿಭಿನ್ನ ಕವಿತೆಗಳನ್ನು ಓದಿ ಮೂರ್ಚೆ ಹೋಗುವ ಮೊದಲು ಸಾಧ್ಯವಾದಷ್ಟು ಮೆದುಳನ್ನು ಖರ್ಚು ಮಾಡಿ ಅರ್ಧ ಅರ್ಥ ಮಾಡಿಕೊಂಡಿದ್ದೇನೆ..ನೀವೆಲ್ಲ ಈ ಕವನ ಸಂಕಲನ ಓದಿ ನಿಮಗೆ ಪೂರ್ಣ ಅರ್ಥವಾದರೆ ನನಗು ಒಂದಿಷ್ಟು..ತಿಳಿಸಿ ಎಂಬ ವಿನಂತಿ ನನ್ನದು….


Leave a Reply

Back To Top