ಮನದಲ್ಲಿ ಹೆಂಡತಿಯನ್ನು ಕರೆತರುವ ಆಲೋಚನೆ ಬಂದೊಡನೆ ನಾಣುವಿಗೆ ನಿರಾಳ ಎನಿಸಿತು. ಮಕ್ಕಳು ಅಮ್ಮ ಇಲ್ಲದೇ ದುಃಖಿಸುತ್ತಾ ಇರುವುದು ಅವರಿಂದ ಸಹಿಸಲು ಆಗುತ್ತಿರಲಿಲ್ಲ. ಊರಲ್ಲಿ ಇದ್ದಾಗ ಮಕ್ಕಳ ಸಂಪೂರ್ಣ ಜವಾಬ್ದಾರಿ ಕಲ್ಯಾಣಿ ನೋಡಿಕೊಳ್ಳುತ್ತಿದ್ದ ಕಾರಣ ಮಕ್ಕಳನ್ನು ನೋಡಿಕೊಳ್ಳುವ ಕಷ್ಟ ನಾಣುವಿಗೆ ತಿಳಿದಿರಲಿಲ್ಲ.

ಹೆಣ್ಣು ಮಕ್ಕಳಿಬ್ಬರೂ ತಮ್ಮಂದಿರನ್ನು ನೋಡಿಕೊಳ್ಳುತ್ತಾ ಇದ್ದರೂ ಅಮ್ಮನ ಪ್ರೀತಿಯ ಆರೈಕೆಯಲ್ಲಿ ಬೆಳೆಯಬೇಕಾದ ಮಕ್ಕಳು ಇಂದು ಅಮ್ಮನ ನೆರಳು ಇಲ್ಲದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮತ್ತೂ ಕೆಲವು ದಿನಗಳು ಕಳೆದವು ಆದರೂ ಬ್ರೋಕರ್ ನಿಂದ ತೋಟ ಹಸ್ತಾಂತರಿಸುವ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ.

ಒಂದು ದಿನ ಇದ್ದಕ್ಕಿದ್ದ ಹಾಗೆ ಬ್ರೋಕರ್ ಬಂದು ಮುಂಗಡವಾಗಿ ಸ್ವಲ್ಪ ಹಣ ಕೊಡುವಂತೆ ಕೇಳಿದರು. ಏಕೆ ಎಂದು ಕೇಳುವಾಗ ಕಾಗದ ಪತ್ರಗಳನ್ನು ನೋಂದಣಿ ಮಾಡಿಸಿಕೊಳ್ಳಲು ಅಗತ್ಯವಿದೆ ಎಂದು ಹೇಳಿದರು. ಅವರು ಕೇಳಿದಷ್ಟು ಹಣವನ್ನು ಕೊಟ್ಟರು. ಆದಷ್ಟು ಬೇಗ ನೋಂದಣಿ ಮಾಡಿಸಿ ಕೊಡಿಸುವಂತೆ ನಾರಾಯಣನ್ ಕೇಳಿಕೊಂಡರು. ಸರಿ ಎಂದು ಹೋದ ಬ್ರೋಕರ್ ಕೆಲ ದಿನಗಳ ನಂತರ ಸೋತ ಮುಖದೊಂದಿಗೆ ನಾರಾಯಣನ್ ರವರನ್ನು ಸಮೀಪಿಸಿದರು. ಅವರ ಮುಖ ನೋಡಿಯೇ ಏನೋ ತೊಂದರೆ ಇದೆ ಎನ್ನುವುದನ್ನು ನಾರಾಯಣನ್ ಅರ್ಥ ಮಾಡಿಕೊಂಡರು…..”ಇನ್ನೂ ಏನಪ್ಪಾ ಹೊಸ ಸಮಸ್ಯೆ” ಎಂದು ಕೇಳಿದಾಗ ಬ್ರೋಕರ್ ಹೇಳಲೋ ಬೇಡವೋ ಎಂದು ಅನುಮಾನಿಸುತ್ತಾ…. ಈಗ ಮಳೆಗಾಲ ಪ್ರಾರಂಭವಾದ ಕಾರಣ ತೋಟ ಮಾರುವುದಿಲ್ಲ …. ಮಾಲೀಕರು ಮಳೆಗಾಲ ಕಳೆದ ಮೇಲೆ ಇಂಗ್ಲೆಂಡಿನಿಂದ ಬರುವರು…. ನಂತರ ತೋಟದ ವಿಲೇವಾರಿ ಮಾಡುತ್ತಾರಂತೆ… ಇಲ್ಲಿಯ ಮಳೆಗಾಲ ಅವರಿಗೆ ಆಗದು…

ಆರು ತಿಂಗಳ ಕಾಲ ಇಪ್ಪತ್ತನಾಲ್ಕು ಗಂಟೆಯೂ ಸುರಿಯುವ ಮಳೆಯಲ್ಲಿ ಇಲ್ಲಿ ಇರಲು ಅವರಿಂದ ಸಾಧ್ಯವಾಗದು”….

ಎಂದು ಹೇಳಲು ನಾರಾಯಣನ್ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಕುಸಿದು ಕುಳಿತುಬಿಟ್ಟರು. ಮುಂದೆ ಬ್ರೋಕರ್ ಹೇಳಿದ ಯಾವ ಮಾತುಗಳೂ ಅವರ ಕಿವಿಗೆ ಬೀಳಲಿಲ್ಲ. ಗರ ಬಡಿದವರಂತೆ ಅಲ್ಲಾಡದೆ ನಿಸ್ತೇಜರಾಗಿ  ಕುಳಿತ ಅವರನ್ನು ಬ್ರೋಕರ್ ಭುಜ ಹಿಡಿದು ಅಲುಗಾಡಿಸಿ ಎಚ್ಚರಿಸಿದಾಗಲೆ ಅವರು ವಾಸ್ತವಕ್ಕೆ ಬಂದಿದ್ದು…. “ನಾನು ಕೇಳುತ್ತಿರುವ ಈ ಎಲ್ಲಾ ಮಾತುಗಳು ನಿಜವೇ? ಏನು ಹೇಳುತ್ತಾ ಇರುವಿರಿ ನೀವು? ತಮಾಷೆ ಮಾಡುತ್ತಿಲ್ಲ ತಾನೇ…

ಖಂಡಿತಾ ಮಾರುವರು ಎಂದು ನೀವು ಹೇಳಿದ್ದರಿಂದ ಅಲ್ಲವೇ ನಾನು ಮನೆ ತೋಟ ಆಸ್ತಿ ಎಲ್ಲವನ್ನೂ ಮಾರಿ ಪತ್ನಿ ನನ್ನ ಜೊತೆಗೆ ಬರದಿದ್ದರೂ ಸಹ ಮಕ್ಕಳನ್ನು ಕರೆದುಕೊಂಡು ಒಂಟಿಯಾಗಿ ಇಲ್ಲಿಗೆ ಬಂದಿದ್ದು…. ಈಗ ಹೀಗೆ ಹೇಳಿದರೆ ಹೇಗೆ?…. ಎಂದು ಅತ್ಯಂತ ದುಖಃ ಹಾಗೂ ಕೋಪದ ಧ್ವನಿಯಲ್ಲಿ ನಾರಾಯಣನ್ ಕೇಳಿದರು.

ಬ್ರೋಕರ್….” ನನಗೇನೂ ತಿಳಿಯದು…. ಅವರು ಹೇಳಿದಂತೆ ವಿಷಯವನ್ನು ನಿಮಗೆ ತಿಳಿದಸಿದ್ದೇನೆ…. ನಾನೇನು ಮಾಡಲಿ….ಮಳೆಗಾಲ ಕಳೆಯುವವರೆಗೂ ಸ್ವಲ್ಪ ಕಾಲಾವಕಾಶ ಕೊಡಿ ನನಗೆ….ಎಂದರು. ನಾರಾಯಣನ್ ಕೋಪ ಬೇಸರ ದುಖಃ ಎಲ್ಲವೂ ಒಟ್ಟಿಗೆ ಸೇರಿ ಏನು ಮಾಡಬೇಕು ಎಂದು ತೋಚದೇ ಹೇಳಿದರು…. ಇಷ್ಟೆಲ್ಲಾ ನೀವು ಹೇಳಿ ಆಯಿತು ಅಲ್ಲವೇ? ಇನ್ನೇನು ಹೇಳುವುದು ಇದೆ…. ಹಾಗಾದರೆ ಇನ್ನೂ ಆರು ತಿಂಗಳು ನಾನೇನು ಮಾಡಲಿ…. ಇಲ್ಲಿಯ ಭಾಷೆ ನನಗೆ ಬಾರದು….ಪಂಚಾಯತಿಯ ಕೆಲಸ ಹಾಗೂ ನನ್ನ ಜಮೀನಿನ ಕೆಲಸ ಮಾಡಿಕೊಂಡಿದ್ದ ನಾನು ಇಲ್ಲಿ ಏನು ಮಾಡಲಿ?….ಇಷ್ಟು ದಿನ ಕಾಯಲು ಹೇಳಿ ಈಗ ಒಮ್ಮೆಲೇ ಹೀಗೆ ನೀವು ಹೇಳಿದರೆ?…. ಇಲ್ಲಿ ನಾನು ಈ ಆರು ತಿಂಗಳು ಹೇಗೆ ಕಳೆಯಲಿ… ಇಂತಹ ಧಾರಾಕಾರ ಮಳೆಯಲ್ಲಿ ಇಲ್ಲಿ ಏನು ಮಾಡಲಿ? ಊರಿಗೆ ಕೂಡಾ ಹಿಂದಿರುಗುವಂತೆ ಇಲ್ಲ….ನಾನು ನೋಂದಣಿಗಾಗಿ ಕೊಟ್ಟ ಹಣವನ್ನು ನನಗೆ ಹಿಂತಿರುಗಿಸಿ….ಎಂದು ಕೇಳಿದರು.

” ನೋಂದಣಿಯ ಹಣ ಸ್ವಲ್ಪ ದಿನಗಳಲ್ಲಿ ಹಿಂತಿರುಗಿಸುವೆ…

ನನಗೆ ಕಾಲಾವಕಾಶ ಕೊಡಿ ಎಂದು ಬ್ರೋಕರ್ ಕೇಳಿಕೊಂಡರು. ಮೊದಲೇ ಅವರು ಹೇಳಿದ ಮಾತುಗಳನ್ನು ಕೇಳಿ ತಲೆ ಕೆಟ್ಟು ಹೋದ ಹಾಗೆ ಆಗಿತ್ತು. ಈಗ ಕೊಟ್ಟ ಹಣವನ್ನು ಕೂಡಾ ಸ್ವಲ್ಪ ದಿನಗಳಲ್ಲಿ ಹಿಂದಿರುಗಿಸುವೆ ಎಂದ ಮಾತು ಕೇಳಿ ನಾಣುವಿಗೆ ಕೆಟ್ಟ ಕೋಪ ಬಂದಿತ್ತು. ಆದರೂ ಸಮಚಿತ್ತ ವಹಿಸಿ ಇನ್ನು ಆ ದುಡ್ಡು ಕೂಡಾ ಕೈಯಿಂದ ಹೋದರೆ ಕಷ್ಟ ಎಂದು ಯೋಚಿಸಿ ಆದಷ್ಟು ಬೇಗ ಹಣವನ್ನು ಹಿಂತಿರುಗಿಸಿ ಎಂದು ಹೇಳಿ ಅವರನ್ನು ಕಳುಹಿಸಿದರು. ಬ್ರೋಕರ್ ಹೋದ ನಂತರ ಸಾವರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡಿಯಿತು. ತಾನು ಕಂಡ ಕನಸು ನುಚ್ಚುನೂರು ಆದಂತೆ ಅನಿಸಿತು ಆ ಕ್ಷಣ. ಏನೆಲ್ಲಾ ಆಸೆಗಳನ್ನು ಹೊತ್ತು ತನ್ನ ಪಿತ್ರಾರ್ಜಿತ ಆಸ್ತಿ ಹಾಗೂ ತಾನು ಖರೀಸಿದ್ದ  ನೆಲ ವಸ್ತುಗಳು ಎಲ್ಲವನ್ನೂ ಮಾರಿದೆನಲ್ಲಾ…. ನನ್ನ ಅತ್ಯಂತ ಪ್ರಿಯ ಮುದ್ದಿನ ಹೆಂಡತಿ ಎಷ್ಟು ಬೇಡಿಕೊಂಡರೂ ಕಾಲ ಕಸಕ್ಕಿಂತ ಕಡೆ ಮಾಡಿದೆನಲ್ಲ….ಕಲ್ಯಾಣಿ ಹೇಳಿದ ಪ್ರತಿಯೊಂದು ಮಾತಲ್ಲೂ ನಿಜವಿತ್ತು…. ನಮಗೆ ಅಲ್ಲಿ ಯಾವ ಕೊರತೆಯೂ ಇರಲಿಲ್ಲ….ಮಕ್ಕಳ ವಿದ್ಯಾಭ್ಯಾಸ ಕೂಡಾ ಮೊಟಕು ಆಯಿತಲ್ಲ…. ಅವರ  ಮುಗ್ದ ಮನಸ್ಸುಗಳನ್ನು ಕೂಡಾ ನೋಯಿಸಿದೆನಲ್ಲಾ…. ಮಾತನಾಡಲು ಹೆದರುತ್ತಾ ಇದ್ದ ಸುಮತಿ ಕೂಡಾ ಕೇಳಿಕೊಂಡಿದ್ದಳು. ಇಲ್ಲಿ ತೋಟ ಕೊಳ್ಳುವ ಭರದಲ್ಲಿ ನಾನು ಎಲ್ಲವನ್ನೂ ಎಲ್ಲರನ್ನೂ ಕಡೆಗಣಿಸಿ ಬಿಟ್ಟೆ…

ಹಿರಿಯರ ಮಾತುಗಳು…. ತನ್ನ ಬೀಗರ ಮಾತುಗಳು ಯಾವುದೂ ನನ್ನ ಕಣ್ಣು ತೆರೆಸದೇ ಹೋಯಿತಲ್ಲ….ನಾನು ದುಡುಕಿ ಬಿಟ್ಟೆ…. ನಿಧಾನವಾಗಿ ಯೋಚಿಸಿ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕಿತ್ತು…. ಎಂದು ತನ್ನನ್ನು ತಾನು ಹಳಿದುಕೊಂಡರು. ಕಲ್ಯಾಣಿ ಹೇಳಿದ ಪ್ರತಿಯೊಂದು ಮಾತುಗಳು ಕೂಡಾ ನೆನಪಿಗೆ ಬಂದು ಕಣ್ಣುಗಳಲ್ಲಿ ನೀರು ತುಂಬಿತು. ಇಂಥಹ ಸಮಯದಲ್ಲಿ ನನ್ನ ಪತ್ನಿ ನನಗೆ ಸಾಂತ್ವನದ ಧೈರ್ಯದ ಮಾತುಗಳು ಹೇಳಲು ಜೊತೆ ಇಲ್ಲವಲ್ಲ ಎಂದು ಕೊರಗಿದರು.

ಇನ್ನು ನಾನು ಎಷ್ಟೇ ಚಿಂತಿಸಿ ಕೊರಗಿದರೂ ಕಳೆದು ಹೋದದ್ದು ಮತ್ತೆ ಪಡೆಯಲು ಸಾಧ್ಯವೇ?…. ನಾನು ಎಲ್ಲಿ ದುಡುಕಿದೆ?…. ಹೆಂಡತಿ ಮಕ್ಕಳನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕು…. ಇದ್ದ ಆಸ್ತಿಯನ್ನು ಹತ್ತು ಪಟ್ಟು ಹೆಚ್ಚಿಸಿಕೊಳ್ಳಬೇಕು ಎನ್ನುವುದು ನನ್ನ ಅತಿ ಆಸೆಯಾಯ್ತೆ? 

ಛೆ… ಛೇ… ಎಂತಹ ಕೆಲಸ ಮಾಡಿಬಿಟ್ಟೆ…. ಕಲ್ಯಾಣಿ ಬಾರಿ ಬಾರಿಗೂ ಹೇಳಿದಳು…. ಅವಳ ಮಾತುಗಳನ್ನು ತಾತ್ಸಾರದಿಂದ ತಳ್ಳಿ ಹಾಕಿದೆ….ಅವಳಿಲ್ಲದ ಜೀವನ ನೆನೆಸಿಕೊಳ್ಳುವುದು ಕೂಡಾ ಸಾಧ್ಯವಿಲ್ಲ…. ತೋಟ ಖರೀದಿಸಿದ ಮೇಲೆ ಖಂಡಿತಾ ಅವಳು ಬಂದೇ ಬರುವಳು ಎಂಬ ನಂಬಿಕೆಯಲ್ಲಿ ಇದ್ದೆನಲ್ಲಾ…. ನಾನು ಎಂತಹಾ ಮೂರ್ಖತನ ಮಾಡಿಬಿಟ್ಟೆ…. ಇನ್ನು ಹೇಗೆ ಅವಳಿಗೆ ಮುಖ ತೋರಿಸಲಿ? ನನ್ನ ಮಕ್ಕಳಿಗೆ ಏನು ಹೇಳಲಿ? ಅಮ್ಮನ ಜೊತೆ ಇರಬೇಕು ಎಂಬ ಆಸೆ ಇದ್ದರೂ…. ನನಗೆ ಹೆದರಿ ಮಕ್ಕಳು ನನ್ನ ಜೊತೆ ಬಂದು ಬಿಟ್ಟರಲ್ಲ….ಗಂಡು ಮಕ್ಕಳು ಇನ್ನೂ ಚಿಕ್ಕವರು ಅವರನ್ನು ತಾಯಿಯ ಪ್ರೀತಿಯಿಂದ ವಂಚಿಸಿದೆನಲ್ಲಾ…. ಏನು ಮಾಡಲಿ ಈಗ? ಊರಿಗೆ ಹಿಂತಿರುಗಿದರೆ? ಎಂದು ಅವರ ಮನ ಯೋಚಿಸಿತು. ಆದರೆ ಈಗ ಹೇಗೆ ಊರಿಗೆ ಹೋಗುವುದು? ಎಲ್ಲರೂ ನನ್ನನ್ನು ಆಡಿಕೊಳ್ಳುವುದಿಲ್ಲವೇ? ಮೊದಲಿನಂತೆ ಇನ್ನು ಅಲ್ಲಿ ಜೀವನ ಸಾಗಿಸಲು ಸಾಧ್ಯವೇ?ಮನೆ ಆಸ್ತಿ ಎಲ್ಲವನ್ನೂ ಮಾರಿ ಬಂದಾಯ್ತು. ತಂದ ಹಣ ಸ್ವಲ್ಪ ಖರ್ಚು ಕೂಡಾ ಆಗಿದೆ…. ಇನ್ನು ಅಲ್ಲಿ ಹೋಗಿ ಪುನಃ ಜಮೀನು ಖರೀದಿಸಿ ಮೊದಲಿನಂತೆ ಆಗಲು ಸುಮಾರು ಸಮಯವೇ ಹಿಡಿಯುತ್ತದೆ. ಕಲ್ಯಾಣಿಗೆ ಹೇಗೆ ಮುಖ ತೋರಿಸಲಿ? ಹೊರಟು ಬರುವಾಗ ಕೂಡಾ ನಾವು ಹಿಂತಿರುಗಿ ಹೋಗುತ್ತೇವೆ ಎನ್ನುವ ಆಸೆಯಿಂದ ಹಠ ಹಿಡಿದು ಬರದೇ ಇದ್ದು ಬಿಟ್ಟಳಲ್ಲ. ಅದೂ ನನಗೆ ಅರ್ಥವಾಗದೇ ಹೋಯಿತೇ? ಎಂದೂ ಅವಳ ಮೇಲೆ ಕೋಪ ಮಾಡಿಕೊಳ್ಳದೇ ಇದ್ದ ನಾನು ಅವಳನ್ನು ತಿರಸ್ಕಾರದಿಂದ ನೋಡಿದೆನಲ್ಲ ಎಂದು ನಾಣುವಿಗೆ ತನ್ನ ನಡವಳಿಕೆಯ ಮೇಲೆ ಬೇಸರ ಮೂಡಿತು.


2 thoughts on “

  1. ಲೇಖಕರು ನಾಣಿ, ಮಕ್ಕಳು, ಅಮ್ಮ ಹೇಗಾದರೂ ಒಂದು ಮಾಡಬೇಕಿತ್ತು . ಕಥೆ ಅರ್ಧವಾಂತೆ ಅನಿಸಿತು.

    1. ತಮ್ಮ ಉತ್ತಮ ಅಭಿಪ್ರಾಯಕ್ಕೆ ಧನ್ಯವಾದಗಳು.
      ಕಥೆ ಇನ್ನೂ ಮುಂದುವರೆಯುತ್ತದೆ…

Leave a Reply

Back To Top