ಕ್ಯಾನ್ಸರ್( ಫೆಬ್ರುವರಿ 4 ವಿಶ್ವ ಕ್ಯಾನ್ಸರ್ ದಿನ)ಕ್ಕೊಂದು ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ಕ್ಯಾನ್ಸರ್ ಇದೊಂದು ಗ್ರೀಕ್ ಭಾಷೆಯ ಕಾರ್ಕಿನೋಸ್ ಎಂಬ ಪದದಿಂದ ಬಂದಿದ್ದು ಇದರ ಅರ್ಥ
ಏಡಿ ಹುಣ್ಣು, ಆಯುರ್ವೇದದಲ್ಲಿ ಕರ್ಕಾಟಕ ರೋಗ ಎಂದು ಕರೆಯುತ್ತಾರೆ. ಏಡಿ ಹೇಗೆ ತನ್ನ ಚೂಪಾದ ಕಾಲುಗಳಿಂದ ಬೇಟೆಯನ್ನು ಕಟ್ಟಿ ಹಾಕುವುದೋ ಹಾಗೆಯೇ ಕ್ಯಾನ್ಸರ್ ಗಡ್ಡೆ ತುಂಬಾ ಚಿಕ್ಕದಿದ್ದರೂ ತನ್ನ ಬೇರುಗಳನ್ನು ತೀವ್ರವಾಗಿ ಮತ್ತು ಅಷ್ಟೇ ಸತ್ವಯುತವಾಗಿ ಹಿಡಿದು ದೇಹವನ್ನು ಪ್ರತಿರೋಧಿಸಲಾಗದಷ್ಟು  ಬಲಹೀನಗೊಳಿಸಿಬಿಡುತ್ತದೆ.
ಕ್ಯಾನ್ಸರನ ಇರುವಿಕೆ ಕುರಿತು 500 ವರ್ಷಗಳಷ್ಟು ಹಿಂದಿನಿಂದಲೂ ನಮಗೆ ಮಾಹಿತಿ ಇದೆ. ಈಜಿಪ್ಟಿನ ಮಮ್ಮಿಗಳ ಸ್ತನಗಳಲ್ಲಿ ಗಂಟಿನ ಕುರುಹುಗಳನ್ನು ನಾವು ಕಾಣಬಹುದು. ಕ್ರಿಸ್ತಪೂರ್ವ 320 ರಲ್ಲಿ ಚರಕ ಮತ್ತು ಕ್ರಿಸ್ತಪೂರ್ವ 600 ರಲ್ಲಿ ಸುಶ್ರುತರು ತಮ್ಮ ಕೃತಿಗಳಲ್ಲಿ ಅರ್ಬುದ ರೋಗದ ಬಗ್ಗೆ ಬರೆದಿದ್ದಾರೆ. 5 ಲಕ್ಷ ವರ್ಷಗಳಷ್ಟು ಹಿಂದಿನ ಮಂಗ ಮಾನವನಿಗೂ ಕ್ಯಾನ್ಸರ್ ಬಂದಿತ್ತು ಎಂಬುದನ್ನು ಪಳೆಯುಳಿಕೆಗಳ ಕುರುಹುಗಳು ಸಾರುತ್ತವೆ.

ಕ್ಯಾನ್ಸರ್ ಗೆ ಕಾರಣಗಳು… ವೃತ್ತಿ, ವಾಸಿಸುವ ಪರಿಸರ, ಸೇವಿಸುವ ಆಹಾರ, ತಂಬಾಕು, ಗುಟ್ಕಾ, ಧೂಮಪಾನ, ಮಧ್ಯಪಾನ ಮತ್ತು ಕೆಲವೊಮ್ಮೆ ಆಲಸಿ ಜೀವನ ಶೈಲಿ ಕ್ಯಾನ್ಸರ್ ಗೆ ಆಹ್ವಾನ ನೀಡುತ್ತವೆ.
ರಾಸಾಯನಿಕಯುಕ್ತ ತಂಪು ಪಾನೀಯಗಳು, ಹುಳಿ ಖಾರ ಹೆಚ್ಚಿರುವ ಸಿದ್ದ ಆಹಾರ ಪಟ್ಟಣಗಳು, ಕಲುಷಿತ ವಾತಾವರಣ, ರಾಸಾಯನಿಕ ತ್ಯಾಜ್ಯಗಳ ಅವೈಜ್ಞಾನಿಕ ನಿರ್ವಹಣೆ, ಕಾರ್ಖಾನೆ ಮತ್ತು ವಾಹನಗಳು ಉಗುಳುವ ಹೊಗೆಗಳು ಕ್ಯಾನ್ಸರ್ ಜನಕ ವಾತಾವರಣಕ್ಕೆ ಕಾರಣೀಭೂತವಾಗುತ್ತವೆ. ನೊಬೆಲ್ ಪ್ರಶಸ್ತಿ ಪಡೆದ ಮೇಡಂ ಕ್ಯೂರಿ ಕೂಡ ಕ್ಯಾನ್ಸರ್ ನ ಶಿಕಾರಿಯಾಗಿದ್ದರು. ಆಕೆಯೇ ಕಂಡುಹಿಡಿದ ಮನುಕುಲ ವಿಕಾಸಕ್ಕೆ ಮಾದರಿಯಾದ ರೇಡಿಯಮ್ ಮತ್ತು ತೋರಿಯಂ  ವಿಕಿರಣಗಳಿಗೆ ಆಕೆಯೆ ಮೊದಲ ಬಲಿಯಾದಳು.

ವೈದ್ಯರು ಪ್ರತಿನಿತ್ಯ ಬಳಸುವ ಎಕ್ಸ್ ರೆ ಕಿರಣಗಳು ಅವರಿಗೆ ಹೆಚ್ಚು ಅಪಾಯಕಾರಿ. ಇವುಗಳಿಗೆ ಹೊಸ ಸೇರ್ಪಡೆ ಮೊಬೈಲ್ ಟವರ್ ಗಳು, ಸಿಗ್ನಲ್ ಗಳು ಮತ್ತು ಮೊಬೈಲ್ ಗಳು.

ಕ್ರಿಸ್ತಶಕ 1775ರ ಸುಮಾರು ಯುರೋಪಿನಲ್ಲಿ ಕೆಲವು ಜನರ ವೃಷಣ ಚೀಲಗಳಲ್ಲಿ ವಾಸಿ ಮಾಡಲಾಗದ ಹುಣ್ಣುಗಳು ಉಂಟಾಗುತ್ತಿದ್ದವು. ಅನೇಕ ವರ್ಷಗಳ ಕಾಲ ಇದು ಸತತ ನಡೆದಾಗ ಪರೀಕ್ಷಿಸಿ ನೋಡಲು ಅವರೆಲ್ಲ ಚಿಮ್ನಿ ಬಾಯ ಆಗಿದ್ದರು. ಆಗಿನ ಯುರೋಪ ನಲ್ಲಿ ಚಳಿಯನ್ನು ತಡೆಯಲು ನಡು ಮನೆಯಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಬೆಂಕಿ ಹಾಕಿ (ಕಟ್ಟಿಗೆಯ ಅಗ್ಗಿಷ್ಟಿಕೆ) ಮನೆಯನ್ನು ಬೆಚ್ಚಗಿಡಲಾಗುತ್ತಿತ್ತು. ಈ ಫೈಯರ್ ಪ್ಲೇಸ್ ಗೆ ಇರುತ್ತಿದ್ದ ಹೊಗೆ ಕೊಳವೆಯನ್ನು ಸ್ವಚ್ಛಗೊಳಿಸುವ ವ್ಯಕ್ತಿಗಳು ಗಂಟುಗಳ ತೊಂದರೆಗೆ ಒಳಗಾದವರು.

ಯುರೇನಿಯಂ ಗಣಿಗಳಲ್ಲಿ, ಅಣುಸ್ಥಾವರಗಳಲ್ಲಿ, ಎಕ್ಸ್ ರೇ ಘಟಕಗಳಲ್ಲಿ ಕ್ಯಾನ್ಸರ್ ನ ಅಟಾಟೋಪ ಇನ್ನೂ ಹೆಚ್ಚು. ಎರಡನೇ ಮಹಾಯುದ್ಧದಲ್ಲಿ ಬಲಿಷ್ಠ ಅಮೆರಿಕದ ದಾಳಿಗೆ ತುತ್ತಾದ ಹಿರೋಶಿಮಾ ಮತ್ತು ನಾಗಸಾಕಿಗಳಲ್ಲಿ ಬದುಕಿ ಉಳಿದವರು ಈಗಲೂ ಹಲವಾರು ತರದ ಕ್ಯಾನ್ಸರ್ ಗಳಿಂದ ಬಳಲುತ್ತಿದ್ದಾರೆ. ರಷ್ಯಾ ದೇಶದ ಚರ್ನೋಬಿಲ್ ನಲ್ಲಿ 1984ರಲ್ಲಿ ನಡೆದ ನ್ಯೂಕ್ಲಿಯರ್ ರಿಯಾಕ್ಟರ್ ಸಿಡಿದುದರ ಪರಿಣಾಮ ಕ್ಯಾನ್ಸರ್  ಹರಡಿತು. ಇನ್ನು ನಮ್ಮ ಭಾರತ ದೇಶದಲ್ಲಿಯೂ ಕೂಡ ಪಂಜಾಬ್ ನ ಭಟಿಂಡದಿಂದ ಹೊರಡುವ ಒಂದು ರೈಲಿಗೆ ಕ್ಯಾನ್ಸರ್ ರೈಲು ಎಂದೇ ಕರೆಯುತ್ತಾರೆ. ವಿದ್ಯುತ್ ತಯಾರಿಕಾ ಘಟಕಗಳಲ್ಲಿ ಕೆಲಸ ಮಾಡುವವರಲ್ಲಿ ಕೂಡ ಈ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ.

ಕ್ಯಾನ್ಸರ್ ಎನ್ನುವುದು ಜೀವಕೋಶಗಳ ಕಾಯಿಲೆ ಈ ಕೋಶಗಳ ಮೂಲಗುಣ ವಿಭಜನೆ. ವಿಭಜನೆಯ ಮೂಲಕ ತನ್ನ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುತ್ತಾ ಕ್ಯಾನ್ಸರ್ ತನ್ನದೇ ರಚನೆಯನ್ನು ಕಟ್ಟುವುದು ಕೋಶದ ಕೆಲಸ. ದೇಹದ ಮೇಲೆ ಆಗುವ ಗಾಯಗಳನ್ನು ಮುಚ್ಚುವುದು ಈ ಕೋಶ ವಿಭಜನೆಯ ಪ್ರಕ್ರಿಯೆಯೇ. ಬಹುಕಾಲ ಗಾಯ ವಾಸಿಯಾಗದೆ ಹೋದರೆ ಗಾಯ ತನ್ನ ಗಾತ್ರವನ್ನು ವಿನಾಕಾರಣ ಹೆಚ್ಚಿಸುತ್ತಾ ಹೋದರೆ ಅದು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಹೆಚ್ಚು.

ಕ್ಯಾನ್ಸರ್  ಗಡ್ಡೆಗಳ  ಕೋಶಗಳ ಅನಿಯಂತ್ರಿತ ವಿಭಜನ ಕ್ರಿಯೆಯಿಂದ ಅಕ್ಕಪಕ್ಕದ ಆರೋಗ್ಯಕರ ಅಂಗಗಳು ಕೂಡ ಹಾನಿಗೀಡಾಗುತ್ತವೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ (metastasis)ಮೆಟಾ ಸ್ಟಾಸಿಸ್ ಎನ್ನುತ್ತಾರೆ. ಎರಡನೇ ಹಂತದಲ್ಲಿ ಇದನ್ನು ಸೆಕೆಂಡರಿಸ್ (secondaries)ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಕ್ಯಾನ್ಸರ್ ನ ಮೂಲಬೇರನ್ನು ಹುಡುಕುವುದು ಅಸಾಧ್ಯವೇ ಸರಿ. ಮುಂದೆ ಈ ಕೋಶ ವಿಭಜನೆಗಳು ರಕ್ತದೊಡನೆ ಸೇರಿ ಟರ್ಟಿಯೋರಿಸ್ (turtiouris) ಅಂದರೆ ಮೂರನೇ ಹಂತದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ಕ್ಯಾನ್ಸರ್ ಎಲ್ಲೆಲ್ಲಿ ಮತ್ತು ಹೇಗೆ…

*ಆಸ್ಟ್ರೇಲಿಯಾ ಮತ್ತು ಅಮೆರಿಕಗಳಲ್ಲಿ ಬಿಸಿಲಿನ ಅತಿ ತಾಪದಿಂದ ಚರ್ಮದ ಕ್ಯಾನ್ಸರ್ ಉಂಟಾಗುತ್ತದೆ.
 *ಈಜಿಪ್ಟಿನಲ್ಲಿ ಮೂತ್ರಕೋಶದ ಸೋಂಕಿನಿಂದಾಗಿ      ಸಿಸ್ಟೋ ಸೋರಿಯಾಸಿಸ್ ಆಗುತ್ತದೆ. *ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಆಫ್ರಿಕನ್ನರಲ್ಲಿ ಲಿವರ್ ಕ್ಯಾನ್ಸರ್ ಹೆಚ್ಚು.
*ರಷ್ಯಾ ಮತ್ತು ಜಪಾನ್ ಗಳಲ್ಲಿ ಲುಕೇಮಿಯ (ಬ್ಲಡ್ ಕ್ಯಾನ್ಸರ್) ಹೆಚ್ಚು.
*ಭಾರತೀಯರಲ್ಲಿ ಹೊಗೆಸೊಪ್ಪನ್ನು ಬೀಡಾಗಳ ಜೊತೆಯಲ್ಲಿ ದವಡೆಯಲ್ಲಿ ಇರಿಸಿಕೊಳ್ಳುವುದರಿಂದ ಅವರಿಗೆ ಬಾಯಿ, ನಾಲಿಗೆ, ಕೆನ್ನೆ ಮತ್ತು ಗಂಟಲಿನ ಕ್ಯಾನ್ಸರ್ ಬಹಳ.
ಇದಲ್ಲದೆ ನಿರಂತರ ಧೂಮಪಾನಿಗಳಿಗೆ ಶ್ವಾಸಕೋಶದ ಕ್ಯಾನ್ಸರ್ ನ ಸಂಭವನೀಯತೆ ಹೆಚ್ಚು .

ಕ್ಯಾನ್ಸರ್ ನ ವಿಧಗಳು

ಬಾಯಿಯ ಕ್ಯಾನ್ಸರ್
 ಕರುಳಿನ ಕ್ಯಾನ್ಸರ್
 ಸ್ಥನ ಕ್ಯಾನ್ಸರ್
ಎಲುಬಿನ ಕ್ಯಾನ್ಸರ್
 ಚರ್ಮದ ಕ್ಯಾನ್ಸರ್
ಗಂಟಲಿನ ಕ್ಯಾನ್ಸರ್
ವೃಷಣದ ಕ್ಯಾನ್ಸರ್

ಹೆಂಗಸರಲ್ಲಿ ಸ್ತನ, ಅಂಡಾಶಯ ಮತ್ತು ಪ್ರೋಸ್ಟೇಟ್ ಕ್ಯಾನ್ಸರ್ ಗಳು ಹೆಚ್ಚುವರಿಯಾಗಿ ಬರುತ್ತವೆ.

ಯಾವ ಕ್ಯಾನ್ಸರ್ ಹೇಗೆ ಹರಡುತ್ತದೆ

*ಸ್ಥನದ ಕ್ಯಾನ್ಸರ್….. ಕಂಕುಳಿನ ಗಡ್ಡೆ ಮತ್ತು ದುಗ್ಧರಸ ಗ್ರಂಥಿಗಳಿಗೆ
*ಪ್ರೋಸ್ಟೇಟ್ ಕ್ಯಾನ್ಸರ್…. ಬೆನ್ನು ಮೂಳೆಗೆ
*ಶ್ವಾಸಕೋಶದ ಕ್ಯಾನ್ಸರ್…. ಮೆದುಳಿಗೆ
*ಗಂಟಲಿನ ಕ್ಯಾನ್ಸರ್ …..ಬಾಯಿ, ಗಂಟಲು, ದವಡೆ    ಮುಂತಾದೆಡೆ

ಕ್ಯಾನ್ಸರ್ ನ ಮುನ್ನೆಚ್ಚರಿಕೆಗಳು

*ಬಾಯಿಯ ಹುಣ್ಣು ಮಾಯದೇ ಇರುವುದು ಮತ್ತು ದುರ್ವಾಸನೆ
*ಕರ್ಕಶ ಕೆಮ್ಮು ಮತ್ತು ಗೂರಲು ದ್ವನಿ
*ಅಜೀರ್ಣ ಮತ್ತು ಆಹಾರವನ್ನು ನುಂಗುವಲ್ಲಿ ತೊಂದರೆ
*ಮಲವಿಸರ್ಜನೆಯಲ್ಲಿ ಬದಲಾವಣೆ
*ಮಚ್ಚೆ ಮತ್ತು ಗಂಟುಗಳು
*ಸ್ತ್ರೀಯರಲ್ಲಿ ಸ್ತನಗಳಲ್ಲಿನ ಅಸಹಜ ಗಂಟುಗಳು
*ಮುಟ್ಟು ನಿಲ್ಲುವ ಸಮಯದಲ್ಲಿ ವಿಪರೀತ ರಕ್ತಸ್ರಾವ

ಕ್ಯಾನ್ಸರ್ ಗಡ್ಡೆಯ ತೂಕ ಒಂದು ಗ್ರಾಮದಷ್ಟು ಇದ್ದಾಗ ಮಾತ್ರ ಅದನ್ನು ಪತ್ತೆ ಹಚ್ಚಬಹುದು. ಅಲ್ಟ್ರಾ ಸೌಂಡ್ ಸ್ಕ್ಯಾನ್ ಮೂಲಕ ಒಂದು ಸೆಂಟಿಮೀಟರ್ ದಪ್ಪದ ಗಡ್ಡೆಗಳನ್ನು, ಸಿಟಿ ಸ್ಕ್ಯಾನ್ ಮೂಲಕ ಒಂದು ಎಂ.ಎಂ. ಗಾತ್ರದ ಗಡ್ಡೆಗಳನ್ನು ಪತ್ತೆ ಹಚ್ಚಬಹುದು.
ಒಂದು ಗ್ರಾಂ ಗಡ್ಡೆಯಲ್ಲಿ ಹತ್ತು ಲಕ್ಷ ಜೀವಕೋಶಗಳು ಇರುತ್ತವೆ. ಒಂದು ವರ್ಷದ ಸುಮಾರಿಗೆ ಒಂದು ಕೋಟಿಯಷ್ಟಾಗುತ್ತದೆ ….ಇದೇ ಟ್ಯೂಮರ್ ಡಬ್ಲಿಂಗ್ ಟೈಮ್. ತದನಂತರ ಅತಿ ವೇಗದಲ್ಲಿ ಇದು ಸುತ್ತಲೂ ಹರಡುತ್ತದೆ ಆದರೆ ಇದು ಅಂಟು ಜಾಡ್ಯವಲ್ಲ. ಕ್ಯಾನ್ಸರ್ ಗಡ್ಡೆಯನ್ನು ಗಾತ್ರದ ಆಧಾರದ ಮೇಲೆ t1 ಇಂದ t4 ವರೆಗೆ ಗುರುತಿಸುತ್ತಾರೆ. ಗಡ್ಡೆಯ ಗಾತ್ರ 2cm ಇದ್ದರೆ t1 ಎಂದು ಐದು ಸೆಂಟಿ ಮೀಟರ್ಗಿಂತ ಹೆಚ್ಚಿದ್ದರೆ ಅದನ್ನು t4 ಎಂದು ಕರೆಯುತ್ತಾರೆ.

ಕ್ಯಾನ್ಸರ್ ಗಡ್ಡೆಯ ಹಬ್ಬುವಿಕೆಯ ಅನುಸಾರವಾಗಿ
N ಸ್ಟೇಟಸ್ ಅಂದರೆ ನೋಡ್ ಸ್ಟೇಟಸ್ (ಗ್ರಂಥಿಗಳಿಗೆ ಹಬ್ಬಿರುವ)
M ಸ್ಟೇಟಸ್ ಅಂದರೆ ಮೆಟಾ ಸ್ಟೇಟಸ್ ಅಂದರೆ ಮೆದುಳು, ಮೂಳೆ, ಶ್ವಾಸಕೋಶ ಮತ್ತು ಪಿತ್ತ ಜನಕಾಂಗಗಳಿಗೆ ಹಬ್ಬಿದ್ದರೆ
T ಸ್ಟೇಟಸ್ ಅಂದರೆ ಟ್ಯೂಮರ್ ಸೈಜ್ ಅಂದರೆ ಗಂಟಿನ ಗಾತ್ರ

ವಿಪರೀತದ ಆಹಾರ ಅಭ್ಯಾಸಗಳು, ಬೊಜ್ಜು, ವ್ಯಾಯಾಮರಹಿತ ಆಲಸ್ಯಕರ ಜೀವನಶೈಲಿ, ಪರಿಸರ, ಚಟಗಳು, ಲೈಂಗಿಕ ಅಸ್ವಚ್ಛತೆ ಇವು ಕ್ಯಾನ್ಸರ್ ಗೆ ಕಾರಣ. ಧೂಮಪಾನಿಗಳಲ್ಲದೆ ಇದ್ದರೂ ಅವರು ಬಿಟ್ಟ ಹೊಗೆ (ಪ್ಯಾಸಿವ್ ಸ್ಮೋಕಿಂಗ್)ಯ ಸೇವನೆಯೂ ಕೂಡ ಕ್ಯಾನ್ಸರ್ ಗೆ ಕಾರಣವಾಗಬಲ್ಲದು. ಕ್ಯಾನ್ಸರ್ ರೋಗ ತನ್ನ ಬೆಳವಣಿಗೆಗೆ ದೇಹಕ್ಕೆ ಒದಗಿಸುವ ಆಹಾರದ ಬಹುಪಾಲನ್ನು ಕರಗಿಸಿ ಬೆಳೆಯುತ್ತದೆ. ಇದರಿಂದಾಗಿ ದೇಹವು ಸೊರಗಿ ಎಲುವಿನ ಗೂಡಾಗುವುದು ಹೀಗೆ ಸೊರಗುವುದಕ್ಕೆ ಕ್ಯಾನ್ಸರ್ ಕ್ಯಾಕೆಕ್ಸಿಯ ಎನ್ನುತ್ತಾರೆ.

ಯಾವ ರೀತಿ ದೇಹದ ಬೆಳವಣಿಗೆಗೆ ಆಹಾರದ ಅವಶ್ಯಕತೆ ಇದೆಯೋ, ಹಾಗೆಯೇ ಕ್ಯಾನ್ಸರ್ ನ ಬೆಳವಣಿಗೆಗೆ ಕೊಬ್ಬಿನಿಂದ ಕೂಡಿದ ಆಹಾರ ಸೇವನೆ ಪ್ರಚೋದನಕಾರಿಯಾಗಿದೆ. ಹಾಗಾಗಿಯೇ ಬೆಣ್ಣೆ ಗಿಣ್ಣು ತುಪ್ಪ ಸಿಹಿತಿಂಡಿ ಹಂದಿ ಮಾಂಸಗಳನ್ನು ಹೆಚ್ಚು ಸೇವಿಸುವವರು ಕರುಳು ಮತ್ತು ಸ್ತನ ಕ್ಯಾನ್ಸರ್ ಗೆ ಗುರಿಯಾಗುತ್ತಾರೆ ಸಕ್ಕರೆಯ ಬದಲಾಗಿ ಉಪಯೋಗಿಸುವ ಸಿಹಿಕಾರಕವಾದ ಸ್ಯಾಕರಿನ್ ಸೇವಿಸುವವರು ಮೂತ್ರಕೋಶದ ಕ್ಯಾನ್ಸರ್ ಗೆ ಈಡಾಗುವ ಸಾಧ್ಯತೆ ಹೆಚ್ಚು.

ಸಿದ್ದ ಆಹಾರ ಪೊಟ್ಟಣಗಳಲ್ಲಿ ಸಂರಕ್ಷಣೆಗಾಗಿ ಉಪಯೋಗಿಸುವ ನೈಟ್ರೇಟ್ ಸಾಲ್ಟ್ ಜಠರ ಕ್ಯಾನ್ಸರ್ ಅನ್ನು ತಂದರೆ ಸೌಂದರ್ಯವರ್ಧಕ ಮತ್ತು ಸನಸ್ಕ್ರೀನ್ ಲೋಶನ್ ಗಳಲ್ಲಿ ಸೀಸದ ಪ್ರಮಾಣ ಹೇರಳವಾಗಿದ್ದು ಚರ್ಮದ ಕ್ಯಾನ್ಸರ್ ಅನ್ನು ತರುತ್ತದೆ. ಒಂದಿಡಿ ರೋಮನ್ ಸಾಮ್ರಾಜ್ಯವೇ ಈ ಸೀಸದ ಅತಿಯಾದ ಬಳಕೆಯಿಂದ ನಿರ್ನಾಮವಾಗಿ ಹೋಯಿತು.

ಆಹಾರ ಮತ್ತು ಕ್ಯಾನ್ಸರ್

-ಆಹಾರದಲ್ಲಿ ವಿಟಮಿನ್ ಎ ಮತ್ತು ಸಿ ಗಳ ಬಳಕೆಯು ಚರ್ಮ ಮತ್ತು ಲೋಳೆ ಪೊರೆಗಳನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.
-ಕೋಸು ಕ್ಯಾರೆಟ್ ಸೌತೆ ಹಾಲು ಮೊಟ್ಟೆಗಳಲ್ಲಿರುವ ಅಂಶಗಳು ಕ್ಯಾನ್ಸರ್ ನಿರೋಧಕವಾಗಿವೆ ವಿಟಮಿನ್ ಬಿ ಯಲ್ಲಿರುವ ರೆಬೋ ಫ್ಲೇವಿನ್ ಘಟಕ ಅತ್ಯುತ್ತಮ ಕ್ಯಾನ್ಸರ್ ನಿರೋಧಕ.
-ನಾರು ಯುಕ್ತ ಆಹಾರದಲ್ಲಿ ಸೆಲ್ಲೋಸ್ ಎಂಬ ಸಂರಚನೆ ಇದ್ದು ಇದು ಆಹಾರವು ಸುಲಭವಾಗಿ ಜೀರ್ಣವಾಗಿ ಹೊರಹೋಗಲು ಮತ್ತು ಮುಂದೆ ಚಲಿಸಲು ಅನುವಾಗುವಂತೆ ಮಾಡಿ ಅನಗತ್ಯ ಮತ್ತು ಸಕ್ಕರೆಯ ಹೀರುವಿಕೆಯನ್ನು ತಡೆಯುತ್ತದೆ. ಆಹಾರ ಬಹುಕಾಲ ಕರುಳಿನಲ್ಲಿ ನಿಂತು ಕೊಳೆತು ಹಾನಿಕಾರಕ ವಸ್ತುಗಳು ಉತ್ಪತ್ತಿಯಾಗುವುದನ್ನು ತಡೆಯುತ್ತದೆ.
ನಾರು ಯುಕ್ತ  ಹಿಟ್ಟು, ಜೈವಿಕ ಗೊಬ್ಬರ ಬಳಸಿದ ತರಕಾರಿಗಳು ಹಣ್ಣು ಹಂಪಲುಗಳ ಸೇವನೆ ಕ್ಯಾನ್ಸರ್ ಬರುವುದನ್ನು ಶೇಕಡ 80 ರಷ್ಟು ತಡೆಯುತ್ತದೆ.

ಕ್ಯಾನ್ಸರ್ ಎಂದರೆ ಕ್ಯಾನ್ಸಲ್ ಅಲ್ಲ

ಆತ್ಮವಿಶ್ವಾಸ ವೃದ್ಧಿ ಮತ್ತು ಮಾನಸಿಕ ದೃಢತೆ ಕ್ಯಾನ್ಸರ ನಿಂದ ಮನುಷ್ಯನು ಕುಸಿಯದಂತೆ ಮಾಡುತ್ತದೆ. ಇದಕ್ಕಾಗಿ ಕ್ಯಾನ್ಸರ್ ಹೊಂದಿರುವ ರೋಗಿಗಳಲ್ಲಿ ಆತ್ಮವಿಶ್ವಾಸ ಕುಸಿಯದಂತೆ ಮಾಡುವ ವೃದ್ಧಿಶಿಬಿರಗಳನ್ನು ಏರ್ಪಡಿಸುತ್ತಾರೆ.
ಚಟಗಳು ನಮ್ಮ ಅಧೀನವಿರಬೇಕೆ ಹೊರತು ನಾವು ಚಟಗಳಿಗೆ ಆಧೀನರಾಗಬಾರದು. ಅಮೆರಿಕ ಕ್ಯಾನ್ಸರ್ ರೋಗಕ್ಕೇ ಜಗತ್ತಿನ ಎರಡನೇ ಸ್ಥಾನದಲ್ಲಿದ್ದರೆ, ಮುಂದುವರೆದ ರಾಷ್ಟ್ರಗಳಲ್ಲಿ ಲಕ್ಷಕ್ಕೆ 300ಕ್ಕೂ ಹೆಚ್ಚು ಜನರು ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ ಭಾರತದಲ್ಲಿ ಈ ಪ್ರಮಾಣ ಲಕ್ಷಕ್ಕೆ 70 ರಿಂದ 80ರಷ್ಟು ಇದೆ ಕ್ಯಾನ್ಸರ್ ಗೆ ಯಾವ ಅಂಗವೂ ಹೊರತಲ್ಲ. ಅಡಿಯಿಂದ ಮುಡಿಯವರೆಗೆ ಹಬ್ಬುವ ಈ ರೋಗವನ್ನು ಬರಲಿಕ್ಕಿಲ್ಲ ಎಂದುಕೊಳ್ಳುವುದಕ್ಕಿಂತ ಬರದಂತೆ ನೋಡಿಕೊಳ್ಳುವುದು ನಮ್ಮ ಅತಿ ಮುಖ್ಯವಾದ ಜವಾಬ್ದಾರಿಯಾಗಿದೆ.


Leave a Reply

Back To Top