ಕಾವ್ಯ ಸಂಗಾತಿ
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
‘ದೇವರು ಭಿಕ್ಷುಕನಾದ’
ಅವನೊಬ್ಬ ಯುವರಾಜಕುಮಾರ
ಅವನಿಗಾಗಿ ಸಾರೋಟ ಮತ್ತು ಸಂಸಾರ.
ಆದರೋ ಅವನಿಗೆ ಅದೆಲ್ಲವೂ ಬೇಕಿರಲಿಲ್ಲ.
ಹೀಗೊಂದು ದಿನ ಎಲ್ಲವನ್ನು ತೊರೆದ
ಎಲ್ಲಿಗೋ ಹೊರಟ
ಒರಟು ದಾರಿ ಮುಳ್ಳು ಕಂಟಿ
ಇಟ್ಟ ಹೆಜ್ಜೆಗಿತ್ತು ದೃಢತೆ
ನೋವಿನ ಮೂಲ ಹುಡುಕ ಹೊರಟು
ಸನ್ಯಾಸಿಯಾದ.
ಅವನು ಭಿಕ್ಕುವಾದ
ಜ್ಞಾನದ ಜೋಳಿಗೆ ಹಿಡಿದು ತಿರುಗಾಡಿದ
ಅರಿವಿನ ದಾರಿ ಹಿಡಿದು ಅಲೆದಾಡಿದ
ಭಿಕ್ಕು ತನ್ನ ತಾನರಿಯುವತ್ತಲೇ
ಯಾರೂ ನಡೆಯದ ದಾರಿಯಲ್ಲಿ ನಡೆದ
ತನಗೆ ತಾನೇ ಬೆಳಕಾದುದ ಕಂಡ
ಕೊನೆಗೊಮ್ಮೆ ನಸುನಕ್ಕ
ಜಗದ ಬೆಳಕಿದು ಎಂದ
ಲೋಕ ಮೈಕೊಡವಿ ಎದ್ದಿತು. ಭಿಕ್ಷೆ ಬೇಡಿದವಗೇ ದೇವರೆಂದಿತು
ದೇವರೇ ಭಿಕ್ಷೆ ಕೇಳಿ ಭಿಕ್ಕುವಾದ.
ಅವನ ಜೋಳಿಗೆ ತುಂಬಿದವರು
ಜೋಳಿಗೆಯಿಂದ ಹೊಟ್ಟೆ ತುಂಬಿಸಿಕೊಂಡವರು
ಕೇವಲ ಮನುಷ್ಯರಾದರು
ಆದರೇ ಎಲ್ಲರಿಗೂ ಎಲ್ಲವನ್ನು
ಹಂಚಿದ ಭಿಕ್ಷುಕನೇ ದೇವರಾದ.
ಜೋಳಿಗೆಗೆ ಶತ ಶತಮಾನ ಕಳೆದ ಆಯುಷ್ಯವಿದೆ.
ಸದ್ಯ ಅದಕ್ಕೂ ಜಂಗು ಹಿಡಿದಿದೆ.
ಜೋಳಿಗೆಯೊಳಗಿನ ಬುತ್ತಿ ಉಂಡವರು ಇನ್ನೂ ಮನುಷ್ಯರಾಗಲೇ ಇಲ್ಲ.
ಎಲ್ಲ ನನ್ನದೇ ಎಲ್ಲ ನನಗೆ ಸೇರಲೇ ಬೇಕೆಂಬ ನಾವು ಮಾನವರು ಆಗುತ್ತಿಲ್ಲ.
ಬೇಡಾದುದ ಎಲ್ಲವನ್ನು ತೊರೆದು ಹೊರಟವ
ಬೇಕಾದುದ ಎಲ್ಲವನ್ನು ಗಳಿಸಿದ ಭಿಕ್ಷುಕ ದೇವರಾದ
ಭಿಕ್ಕು ಬೀರೀದ ಮಾತುಗಳೆಲ್ಲಾ ಅಮೃತದ ಅಗಳುಗಳು .
ಹಸಿವು ಸಾವು ನೋವು ಕೊನೆಗೆ ಬೆಲ್ಲ ಬೇವು
ತಥಾಗತನಾಗಲೇ ಬೇಕಾದ ಯುವರಾಜ
ಗತದ ಮಹಾದೇವನಾದ.
ದೇವರು ಭಿಕ್ಷುಕನಾದ ಭಿಕ್ಷುಕ ದೇವರಾದ.
ಯಶೋಧರೆಯ ಮೂರು ಮುಷ್ಟಿಯ
ಮೊದಲ ಖಾಲಿ ಭಿಕ್ಷೆ ಪಡೆದ ಸಿದ್ದಾರ್ಥ
ಲೋಕತೊಟ್ಟಿಲಿಗೆ ತಾಯಿಯಾದ
ಬೆರಳುಸಂದಿಗಳಲಿ
ಒಂದಗುಳೂ ಉಳಿಯದಂತೆ ಈಯುವವಳು ತಾಯಿ ತಾನಲ್ಲದೇ ಬೇರಿಲ್ಲ ಎಂದ
ಸತ್ಯ ಬೆತ್ತಲಾಗಿದೆ
ಕತ್ತಲ ಕಣ್ಣು ಗಹಗಹಿಸುತ್ತಿದೆ
ನ್ಯಾಯಕ್ಕೆ ವೃದ್ಧಾಪ್ಯ
ಪ್ರಾಮಾಣಿಕತೆ ಮಸಣದ ಹೂವಾಗಿದೆ.
ಬಿಸಿಲೂರು ಲುಂಬಿನಿಯ ಸಿದ್ದ .
ಜಗವ ಸುತ್ತಿದರು ಕರಗಿ ಕತ್ತಲಾಗಲಿಲ್ಲ
ಅಂದು ದಿವ್ಯಜ್ಯೋತಿ
ಯಾಗಿದ್ದ ಬುದ್ಧ
ಈಗ ಹಗಲಲ್ಲಿ
ಮಿಂಚು ಹುಳುವಾದ
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ.
ಎಂಥ ಸುಂದರವಾದ ಕಲ್ಪನೆ ಮೇಡಂ ಕವಿತೆ ತುಂಬಾ ಚೆನ್ನಾಗಿದೆ
ಎಂಥ ಸುಂದರವಾದ ಕಲ್ಪನೆಯ ಕವಿತೆ ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ MDM
ತುಂಬಾ ಚೆನ್ನಾಗಿದೆ