ನಾಗರಾಜ ಬಿ.ನಾಯ್ಕ ಕವಿತೆ ನಸು ನಗುವಿಗೆ

ಕಾವ್ಯಸಂಗಾತಿ

ನಾಗರಾಜ ಬಿ.ನಾಯ್ಕ

ನಸು ನಗುವಿಗೆ

ನಿಂತಲ್ಲೇ ನಸು ನಗುವ
ನಗುವಿಗೆ ಪರಿಚಯವೇಕೆ
ಚೌಕಟ್ಟಿಲ್ಲದ ಭಾವಕ್ಕೆ
ಸುಮ್ಮನೇ ಶಬ್ದವೇಕೆ
ಎಷ್ಟೊಂದು ಜೀವ ಈ ಜಗದಿ
ಶಬ್ದದ ಹಂಗಿಲ್ಲದೇ ಬದುಕಿವೆ
ನೋಟದಿ ನಲಿವಿದೆ
ಭರವಸೆಯ ಒಲವಿದೆ
ಅಲ್ಲೆಲ್ಲೂ ಪರಿಚಯ ಗುರುತಿಲ್ಲ
ಹರಿವ ನದಿಯಾಳದಿ
ಅಲೆಗಳ ಪರಿಚಯ ಅನಿಶ್ಚಿತ
ಓಡಿದ ಮೀನುಗಳ
ರೆಕ್ಕೆ ಗಳಲ್ಲಿ ಸಾಗಿದ ನೆನಪು
ಬೀಸುವ ಗಾಳಿಯಲ್ಲಿ
ಬೀಸಿ ಬಂದ ಸುಳಿವು
ಬರೀ ತಂಪಷ್ಟೇ ಅಂತರಾಳ
ಪಾತ್ರಕ್ಕೆ ಪರಿಚಯವಿಲ್ಲ
ಜೀವ ಮಾತ್ರ ಜೀವಂತ
ಉಸಿರ ಸಾಕ್ಷಿಗೆ ಯಾವ
ಪರಿಚಯ ಜಗಕೆ
ನಿಂತ ನಿಲುವೊಂದು ಜೀವಿತ
ನಕ್ಕ ನಗುವೊಂದು ಕರಗತ
ಬಿಂಬಕೆ ಸಾಕ್ಷಿ ಪ್ರತಿಬಿಂಬ
ಮೌನದೊಳು ಅಡಗಿದೆ
ಜಗದಿ ಅಂತರಂಗ…….


ನಾಗರಾಜ ಬಿ.ನಾಯ್ಕ.

2 thoughts on “ನಾಗರಾಜ ಬಿ.ನಾಯ್ಕ ಕವಿತೆ ನಸು ನಗುವಿಗೆ

  1. ನಗುವ ಮನಸ್ಸಿಗೆ ಬೇರೇನೂ ಬೇಕು.. ಮುಖದಿ ಮೂಡುವ ನಗು ಅಂತರಂಗದ ಪ್ರತೀಕ.. ನಗು ತುಂಬುವುದು ಜೀವ ಕಳೆ.. ನೋಟಕ್ಕೆ ಸಿಲುಕಿದ್ದು, ಮಾತಿಗೆ ಮೀರಿದ್ದು..ಜೀವಕ್ಕೆ ಜೀವ ತುಂಬುವ .. ನಗುವಿಗೆ ಬೇರೇನು ಬೇಕು.. ನಗು ಒಂದೇ ಸಾಕು.. ☺

    ನಾನಾ

Leave a Reply

Back To Top