ಸುಮಾವೀಣಾ ಹಾಸನ ಅವರ ಲಹರಿಲಹರಿ ವಿತ್ ಈರುಳ್ಳಿ ರಾಣಿ…

ಲಹರಿ ಸಂಗಾತಿ

ಸುಮಾವೀಣಾ ಹಾಸನ

ಲಹರಿ ವಿತ್ ಈರುಳ್ಳಿ ರಾಣಿ…

ಲಹರಿ ವಿತ್ ಈರುಳ್ಳಿ  ರಾಣಿ

  ಏನೀ ಮಹಾನಂದವೇ  ಓ ಭಾಮಿನೀ….  ಓ…. ಈರುಳ್ಳಿ…. ಏನೀ  ಬೆಲೆಯ ಸಂಭ್ರಮದಂದವೆ …….. ಮುಂದಕ್ಕೆ ಸಾಲುಗಳೆ  ಹೊಳಿತಾ ಇಲ್ಲ…  ನಮಸ್ಕಾರ !!    ತರಕಾರಿಗಳ ರಾಣಿ ಈರುಳ್ಳಿಯವರಿಗೆ….  ನಿಮ್ಮ   ಅಧ್ಯಕ್ಷತೆಯಲ್ಲಿಯೇ  ಅಡುಗೆ ಮನೆಯ ಅಡುಗೆ ಕಾರು ಬಾರು ಪ್ರಾರಂಭವಾಗೋದು.   ಒಂದೇ  ಸಮನೆ ವಾಕ್    ಮಾಡ್ತಾ ಇದ್ದೋರು   ಓಡೋಕ್ ಶುರು ಮಾಡಿದ್ದೀರಿ ಅನ್ನೋ ವರ್ತಮಾನ……   ಇದೆಲ್ಲಾ ಏನ್ ಕತೆ?   ಟೊಮ್ಯಾಟೊ ಮ್ಯಾಡಮ್ ಗಿಂತ  ನಾನೇನು ಕಡಿಮೆ ಅಂತ  ಕಳೆದೊಂದು  ವಾರದಿಂದ ಪ್ರೈಸ್ ವಾರ್ ಶುರು ಮಾಡಿದ್ದೀರಿ…….  
 ಮಳೆ ಹೆಚ್ಚಾಯ್ತು !ಬೆಳೆ ಕಡಿಮೆಯಾಯ್ತು ಬೆಲೆ ಹೆಚ್ಚಾಯ್ತು ಅನ್ನೋ  ವಾದವೇನೋ ನಿಮ್ದು . ಈರುಳ್ಳಿ  ಸತ್ರೆ ಯಾರ್ ಅಳೋರು  ಅಂದ್ರೆ ಈರುಳ್ಳಿ  ಕತ್ತರಿಸೋರೆ..  ಅನ್ನೋ ಉತ್ತರವೇ….. ಹಂಡ್ರೆಡ್ ಪರ್ಸೆಂಟ್. ಆದರೆ ಈಗೀಗ ನೀವು  ಪರ್ಸ್ ಕತ್ತರಿಸೋಕೂ ಶುರು ಮಾಡಿದ್ದೀರಿ…. ಮುಂಗಾರು ಮಳೆ ವಿಳಂಬ, ಬಿತ್ತನೆ ಕಡಿಮೆ, ಅನ್ನೋ ಉತ್ತರಗಳು ನಿಮ್ಮ ಬತ್ತಳಿಕೆಯಲ್ಲೂ ಇರಬಹುದು.  ಆಳುಗರು  ಇದನ್ನೆಲ್ಲ ಅಳೆದು ತೂಗಿ ನೋಡ್ತಾರೆ ಜನಗಳು ಅಳೋ ಹಾಗ್  ಮಾಡಲ್ಲ  ಅನ್ನೋ ವಿಶ್ವಾಸ ನಮ್ದು. ಹೆಣ್ಣು ಮಕ್ಕಳಿಗೆ ಪಿಂಕ್ ಅಂದ್ರೆ ಬಹಳ ಇಷ್ಟ. ಅದರಲ್ಲೂ ಆನಿಯನ್ ಪಿಂಕ್…. ಅದರಲ್ಲೂ ಎಷ್ಟೊಂದು ಶೇಡ್ಗಳು…… ಮಸ್ತ್ ಇರುತ್ತೆ …..   ಆನಿಯನ್  ಪಿಂಕ್  ಅನ್ನೋ  ಅಲ್ಟಿಮೇಟ್  ಬ್ರ್ಯಾಂಡನ್ನೇ ನೀವ್ ಸೃಷ್ಟಿ   ಮಾಡಿ  ಕಲರಲ್ಲೂ ನೀವೇ ರಾಣಿಯಾಗಿದ್ದೀರಿ….  ಶ್ವೇತಾಂಬರಿಯಾಗಿಯೂ ಅಲ್ಲಲ್ಲಿ ಕಾಣಿಸಿಕೊಂಡು ಚೆನ್ನಾಗಿಯೇ ಕಾಣಿಸ್ತೀರ…


  ಹಾಗೆ ನಿಮ್ಮ ಹೆಸರಿನೊಂದಿಗೆ ಬೆರೆತಿರೋ    ಈರುಳ್ಳಿ ಹುಳಿ, ರಾಯಿತ, ತಂಬುಳಿ, ಆನಿಯನ್ ಪಕೋಡ,  ಆನಿಯನ್ ದೋಸೆ, ಆನಿಯನ್ ರಿಂಗ್ಸ್ , ಚಟ್ನಿ ,ಸಾಗು, ಕೆಲವು ಕಡೆ ಕೊಡೋ  ಈರುಳ್ಳಿ  ಪಲ್ಯ..  ಇವುಗಳೂ  ಫೇಮಸ್ಸು.  ನೀವಿಲ್ದೆ ಅಡುಗೆ ಮನೆ   ಸೊಗಸುವುದಿಲ್ಲ….  ಅಡುಗೆ ಮನೆಗೆ ನೀವೇ ಅನಭಿಷಿಕ್ತರು. ಟೊಮ್ಯಾಟೋ ಮ್ಯಾಡಮ್,   ಮಿಸ್ ಚಿಲ್ಲಿ  ಇವರಿಗೆ ಬದಲಿ ಏನಾದ್ರು  ಹುಡುಕ್ಬೋದು  ಅದರೆ ನಿಮ್ ವಿಷಯದಲ್ಲಿ ಇಲ್ವೇ  ಇಲ್ಲ…..! ನಿಮ್ ಹತ್ರನೂ ಯಾರೂ ಸುಳಿಯೋಕ್ ಸಾಧ್ಯ ಇಲ್ಲ ಬಿಡಿ ನೀವೇ ಅಲ್ಟಿಮೇಟ್.
 ಕ್ಯಾರೆಟ್-ಬೀಟ್ರೋಟ್, ಜಹಾಂಗೀರ್ -ಜಿಲೇಬಿ ಇದ್ದಂಗೆ ನಿಮ್ ಜೋಡಿ ಬೆಳ್ಳುಳ್ಳಿ ನಿಲ್ಬೋದು ಆದ್ರೆ  ನಿಮ್  ಸ್ಥಾನನ ಸರಿಗಟ್ಟಕ್ಕಾಗಲ್ಲ.. ಮಧುಮೇಹದೋರು ಮಧುರವಾಗಿರಬೇಕು ಅಂದ್ರೆ ನೀವಿರಬೇಕು.  ಕೂದಲಿನ್ ಸಮಸ್ಯೆಗೆ, ಎದೆನೋವಿಗೆ  ನೀವು ಮದ್ದಾಗಿರ್ತೀರಿ,   ಚೇಳು ಕಚ್ಚಿದ್ರೆ , ಕಂಬಳಿ ಹುಳು ತಾಗಿದ್ರೆ ಅದರ ಉರಿ ತಗ್ಗಿಸ್ಲಿಕ್ಕೆ    ನೀವ್ ಬೇಕು. ಇಂಟರ್ನಲ್,ಎಕ್ಸ್ಟರ್ನಲ್  ಎರಡೂ ಕಡೆ   ನೀವೇ  ರಾಣಿ ಬಿಡ್ರಿ……
 ಚಾಟ್ಸ್ ಏರಿಯಾದಲ್ಲಂತೂ ನಿಮ್ದೆ ಪಾರುಪತ್ಯ.  ಅಲ್ಲಿ ಚಕ ಚಕ ಅಂತ ನಿಮ್ಮನ್ನ ಕತ್ತರಿಸ್ತಿದ್ದ ಕೈಗಳಿಗೆ ಬ್ರೇಕ್  ಹಾಕ್ತೀರಿ ಅನ್ನೋ ಸುದ್ದಿ ಸ್ವಲ್ಪ ಶಾಕಿಂಗ್ … ಬಹಳ ಮಂದಿಗೆ ಸಹಿಸೋಕ್ಕಾಗಲ್ಲ. ಚಾಟ್ಸ್  ಲವರ್ಸ್ನ  ಹೊಟ್ಟೆ ಉರಿಸಬೇಡಿ ನಿಮ್ಮದೇ ವಿರಹದಲ್ಲಿ ಉಪವಾಸ ಇದ್ಬಿಡ್ತಾರೆ.
 ಅಡುಗೆ ಮಾನೆ ಮಾತ್ರವಲ್ಲ  ಸೈನ್ಸ್ ಕಲಿಯೋ ಪಡ್ಡೆಗಳು ನಿಮ್ಮನ್ನೆ ಮೊದಲು  ಪ್ರಯೋಗಕ್ಕೆ ಒಳಪಡೊಸೋದು….. ಅದೇನೋ ಬೇರು ಬರಿಸೋದಂತೆ,  ಪೀಲ್ ತೆಗೆಯೋದಂತೆ ,  ಮೈಕ್ರೋಸ್ಕೋಪಲ್ಲಿ ನೋಡೋದಂತೆ…. ಹೀಗೆ… ಏನೇನೋ ……. ನಮ್ಗೆ ಗೊತ್ತಿಲ್ಲ! ನಾವು ಆರ್ಟ್ಸ್ ಸ್ಟ್ರೀಮವರಿಗೆ    ಲ್ಯಾಬ್ ವಿಷಯ ಅಂದಾಗ ನೀವು ಅಪರಿಚಿತವೇ ಬಿಡಿ.


 ‘ಈರುಳ್ಳಿ’  ಅಂತ ದಕ್ಷಿಣ ಕರ್ನಾಟಕದಲ್ಲಿ ನಿಮ್ಮನ್ಬ ಕರೆದ್ರೆ  ಧಾರವಾಡ ಕನ್ನಡದಲ್ಲಿ ನಿಮ್ಮನ್ನ ‘ಉಳ್ಳಾ ಗಡ್ಡಿ’ ಅಂತಾರೆ .ಗ್ರಾಮ್ಯದಲ್ಲಿ  ‘ನೀರುಳ್ಳಿ’,   ‘ಉಳ್ಳಿಗೆಂಡೆ’ ಇಲ್ಲವೆ ‘ಉಳ್ಳಿಗೆಡ್ಡೆ’ ಅಂತಾರೆ    ಇನ್ನೇನಿಲ್ಲ, ಅನುಸ್ವಾರ ಹೋಗಿ ಸಜಾತಿ ಒತ್ತಕ್ಷರ  ಆಗೋದು…  ಆ>ಇ, ಎ>ಇ  ಪರಿವರ್ತನಾ ವೆತ್ಯಾಸ ಅಷ್ಟೆ,  ಉತ್ತರಾದಿ- ಧಕ್ಷಿಣಾದಿ ಬೇಧವಿಲ್ಲದೆ ನೀವು ಪಾಶ್ಚಾತ್ಯ- ಪೌರ್ವಾತ್ಯ ಎಲ್ಲೆಲ್ಲೂ ಸರ್ವವ್ಯಾಪಿ.   ‘ನೀರು’ಳ್ಳಿ ಅಂತನೂ ನನ್ನನ್ನ ಕರಿತಾರೆ ಅಂತ  ಕಣ್ಣಲ್ಲಿ ನೀರ್ ತರಿಸ್ಬೇಡಿ….. ಒಳ್ಳೆಯದಾಗಲ್ಲ…. ಮಳೆ ಜಾಸ್ತಿ  ಆಗಿ ಕೊಳೆತು ಹೋಗ್ಬಿಡ್ತೀರಿ.   ಕ್ಷಮಿಸಿ ಬಾಯ್ತಪ್ಪಿ  ಹೇಳಿದೆ.ಬೇಡ  ಹಾಗಾಗ್ಬೇಡಿ ಎಲ್ಲರಿಗೂ  ಲಾಸ್…..  
 ಪ್ರಪಂಚದ ಯಾವುದೇ  ಅಡುಗೆ ಮನೆ ಹೊಕ್ಕರೂ  ಈರುಳ್ಳಿ ,ಟೊಮ್ಯಾಟೊ, ಹಸಿಮೆಣಸಿನಕಾಯಿ , ಈರುಳ್ಳಿಗಳ ಹೆಸರುಗಳನ್ನ ಹೇಳೇ ಹೇಳ್ತಾರೆ ನಮ್ ದೇಶದ ಭಾಷೆ  ಹಿಂದಿಯವರನ್ ಕೇಳಿದ್ರೆ ಪ್ಯಾಜ್, ಟಮಾಟರ್, ಹರಿಮಿರ್ಚ್  ಅಂತಾರೆ. ತಮಿಳವರು ವೆಂಗಾಯಂ, ತಕ್ಕಾಳಿ, ಪಚ್ಚಮೊಳಗ ಅಂದ್ರೆ ತೆಲುಗರು  ಉಲ್ಲಿಪಾಯ,ಟಮೊಟ, ಪಚ್ಚಿಮಿರಪಕಾಯಲು  ಅನ್ತಾರೆ,  ಇನ್ನು  ಉಲ್ಲಿ,ಟಕ್ಕಾಲಿ, ಪಚ್ ಮುಳಕ್  ಅಂತ ಮಲೆಯಾಳದವರು ಕೊಂಡಾಡ್ತಾರೆ,   ಕನ್ನಡ, ಮಲೆಯಾಳ, ತಮಿಳು, ತೆಲುಗು  ದ್ರಾವಿಢ ಭಾಷೆಗಳಲ್ವ  ಕರೆಸಿಕೊಳ್ಳೋದರಲ್ಲಿ  ಚೂರೇ ಚೂರು ವೆತ್ಯಾಸ ಅಷ್ಟೇ…….
ಅಡುಗೆ ಮನೆ ಆಡಳಿತಗಾರ್ತಿಯರು  ನೀವೇ ಗ್ರೇಟ್…..  ನೀವ್ ಮೂರ್ಜನನೂ  ಅಡುಗೆ ಮನೆಯ ತ್ರಿದೇವಿಯರು. ಜೊತೆಯಲಿ…… ಜೊತೆ ಜೊತೆಯಲಿ…..  ಅಂತ  ಹಾಡ್ ಹೇಳ್ಕೊಂಡೇ  ಒಮ್ಮೊಮ್ಮೆ  ತಿರುಗ್ ಮೂತಿ  ಹಾಕ್ತಿರ್ತೀರ . ನನಗನ್ನಿಸುತ್ತೆ ನಿಮ್ ನಿಮ್ಮಲ್ಲಿ   ಮುನಿಸು ಬಂದ್ರೆ  ರೇಟಲ್ಲಿ ಏರು ಪೇರಾಗುತ್ತೆ   ಅಂತ. ಇಲ್ವ! ಮಳೆ, ಫಸಲು,ಕ್ಲೈಮೇಟ್ ಎಲ್ಲಾ  ಅನ್ವಯವೇ…. ಏನಾದ್ರೂ ಆಗಲಿ ನಾವು ಗ್ರಾಹಕರ ಪರವಾದಿಗಳು  ಆದ್ರೆ  ನಿಮ್ ಸಿಟ್ಟು ತೆಗೆದು  ಗ್ರಾಹಕರ ಮೇಲೆ ಹಾಕ್ಬೇಡಿ.  ನನಗನ್ನಿಸುತ್ತೆ ದಲ್ಲಾಳಿಗಳು ಸ್ಟಾಕಿಸ್ಟ್ಗಳು ನಿಮ್ಮನ್ನ ಆಗಾಗ್ಗೆ ಬಂಧಿಸಿಟ್ಕೊಂಡು ಆಟವಾಡ್ತಾರೆ  ಅಂತ.   ಇನ್ಮುಂದೆ ನಿಮ್ಮನ್ನ ಲೋಡ್  ಮಾಡೋ  ಲಾರಿಗಳಿಗೆ ಜಿ.ಪಿ. ಎಸ್   ಹಾಕಿಸಿ  ಸೇಫ್  ಆಗಿ ನೋಡ್ಕೋತಾರೆ. ನೀವು    ನೇರ ಮಾರುಕಟ್ಟೆಗೆ ಬಂದ್ರೆ   ರೈತ್ರಿಗೆ ನಷ್ಟವಾಗಲ್ಲ ಲಾಭವೇ ಆಗುತ್ತೆ .  ನಮಗೆ ಅನ್ನ ಹಾಕುತ್ತಿರುವ ರೈತರೂ ಖುಷಿಯಿಂದ  ಇರವಂತಾಗಲಿ  ಅಲ್ವ!


 ನೀವು ಮೂವರು ಅಡುಗೆಗೂ ಸರಿ! ಅಲಂಕಾರಕ್ಕೂ ಸರಿ!   ಈರುಳ್ಳಿನಂತೂ ಫ್ಲವರ್ ಬೊಕೆ ಹಾಗೆ    ಅಡುಗೆ ಮನೆಗಳಲ್ಲಿ ಜೋಡಿಸಿರೋದ್ನ ನೋಡಿದ್ದೀನಿ…..  ತಾವರೆ ಹೂವು, ಗುಲಾಬಿ ಹೂವಿನಹಾಗೆ  ತರಕಾರಿ ರಾಣಿಯಾಗಿರೋ ಈರುಳ್ಳಿನ ಕತ್ತರಿಸಿ  ಬೆನ್ನಿಗೆ ಮೆಣಸಿನಕಾಯಿ ಇಟ್ಟರೆ ಬಹಳ ಚೆನ್ನಾಗಿರುತ್ತೆ .   ದೊಡ್ಡದು,ಚಿಕ್ಕದು, ಉದ್ದ, ಅಡ್ಡ,  ರೌಂಡ್  ಹೇಗ್ ಕತ್ತರಿಸಿದ್ದರೂ  ನೀವ್ ಚಂದ  ಯಾವಾಗಲೂ ಫ್ಲೆಕ್ಸಿಬಲ್ ಆಗಿರೋ  ನೀವು   ರಾಣಿಯೆನಿಸಿದ್ರೂ ರಾಜಗಾಂಭೀರ್ಯ ಉಳಿಸಿಕೊಂಡಿದ್ದೀರ.  
ನಿಮ್ ಸುತ್ತ  ಯಾವಾಗಲೂ   ಗಾಳಿಯಾಡ್ತಿರಬೇಕು  ಇಲ್ಲಂದ್ರೆ ಬೇಗ ಕೊಳೆತು ಹೋಗ್ ಬಿಡ್ತೀರಿ. ಅದಕ್ಕೇ  ನಿಮ್ಮನ್ನ  ಈರುಳ್ಳಿ ಚೀಲ ಅನ್ನೋ ಹೆಸರಿನ  ಪ್ಲಾಸ್ಟಿಕ್ ಇಲ್ಲ ಸೆಣಬಿನ ಚೀಲದಲ್ಲಿ ತುಂಬಿಸಿರ್ತಾರೆ. ನಮ್ ಜನ ಹೊರಗಿಂದ ನೋಡೋಕೆ  ಬಹಳ ಚಂದ   ಇದ್ದು  ಕೆಟ್ಟದ್ದನ್ನೆ ಮೈಮನಸ್ಸುಗಳಲ್ಲಿ ತುಂಬಿಕೊಂಡಿರ್ತಾರಲ್ಲ ಹಾಗೆ ನೀವೂ ಮೇಲ್ ಮೇಲೆ ಚೆನ್ನಾಗಿದ್ದು   ಒಮ್ಮೊಮ್ಮೆ ಒಳಗೇ ಕೊಳೆತು ಹೋಗಿರ್ತೀರಿ…..  ಮಳೆ ಪ್ರಭಾವನೋ  ಏನೋ ನಿಮಗೇ ಗೊತ್ತು!  ಪ್ರೋಕ್ರಾನ್    ಅಣು ಪರೀಕ್ಷೆ ಟೈಮಲ್ಲಿ   ಭಾರೀ ಡಿಮ್ಯಾಂಡಲ್ಲಿದ್ರಿ….   ಬೆಲೆ ಅನ್ನೋ ಮರ ಹತ್ತಿ   ಅಲ್ಲೆ ಒಂದಷ್ಟು  ದಿನ  ಪ್ರೈಸ್ ರೆಸ್ಟ್ ಮಾಡಿದ್ರಿ. ಯಾರು ಏನ್ ಮಾಡಿದ್ರು  ನೀವ್ ಕೆಳಗೆ ಇಳೀಲಿಲ್ಲ. ಸೀರೆ ಅಂಗಡಿಯೋರು   ಸೀರೆ  ಜೊತೆಗೆ  ಕೆ.ಜಿ ಫ್ರೀ ಕೊಟ್ಟು ಅವರ ಬ್ಯಸಿನೆಸ್ ಮಾಡ್ಕೊಂಱಡ್ರು .    ಈಗ  ಸೀರೆ-ಸುರೆ  ಯಾವುದಾದ್ರೂ  ಸಿಗುತ್ತೆ ಅಂದ್ರೂ ನೀವ್ ಸಿಗಲ್ಲ.ಫ್ರೀ ಅನ್ನೋ  ಧ್ವನಿಲೀ….ಅದೇನ್ ಅಡಗಿದೆಯೋ? ಲಾಭವೋ ಟೋಪಿ  ಹಾಕಿಸ್ಕೊಳ್ಳೋದೋ? ಗೊತ್ತಿಲ್ಲ….!  ಎಂತವರೂ ಬಿದ್ ಬಿಡ್ತಾರೆ. ನಿಮ್ಮನ್ನ ಹಸಿಯಾಗಿಯೂ ಬಿಸಿಯಾಗಿಯೂ    ತಿನ್ಬೋದು  ಇದನ್ನೆ ಹೆಚ್ಚುಗಾರಿಕೆ ಮಾಡ್ಕೊಬೇಡಿ. ಪ್ಲೀಸ್….…….. ಗ್ರಾಹಕರ ಹೈಟಿಗೆ ನಿಲ್ಲಿ ಹೈಕ್ ಆಗ್ಬೇಡಿ..  
 ಕಮಲದಂತಾ ಕಲರೋಳೆ, ಕಮಲದಂತಾ ಎಸಳಾಗೋಳೆ…       ಏಕಿಷ್ಟು ಹಠ.   ಮನೆಯಲ್ಲಿ  ಹೋಗಲಿ ಮಾರ್ಕೆಟಲ್ಲೂ ಕಣ್ಣಲ್ಲಿ   ನೀರ್ ತರಿಸ್ತಾ  ಇದ್ದೀರ.  ಟೊಮ್ಯಾಟೋ ಮ್ಯಾಡಮ್ ಮಾರ್ಕೆಟ್ನಲ್ಲಿ  ನಿಮ್ಮೆದುರು  ದರದ ದರ್ರ್ಬಾರು ಮಾಡಿದ್ರು  ಅಂತ ಬೇಸರ  ಮಾಡ್ಕೋಬೇಡಿ. ಅವ್ರು ಎನೋ ಹಾಗ್ ಮಾಡಿದ್ರೂ ಅಂತಾ ನೀವ್ ಹೀಗ್ ಮಾಡಿದ್ರೆ  ಹೇಗೆ ? ಅಪ್ಪ – ಅಮ್ಮನ ಜಗಳದಲ್ಲಿ  ಕೂಸು ಸೊರಗಿತು ಅನ್ನೋಹಾಗೆ ಟೊಮ್ಯಾಟೊ ಮ್ಯಾಡಂ  ಮತ್ತೆ ಈರುಳ್ಳಿ  ರಾಣಿ ಪ್ರೈಸ್ ವಾರಲ್ಲಿ ಜನಗಳು ಸೊರಗೋ  ಹಾಗ್  ಆಗ್ತಿದೆ.  


ಟೊಮ್ಯಾಟೊ, ಹಸಿಮೆಣಸಿನ  ಬೆನ್ನಿಗೆ ಒಂದಷ್ಟು   ತರಕಾರಿ ಸೊಪ್ಪುಗಳು  ಕಾಂಬಿನೇಷನಲ್  ಆಗಿ ಬೆಂಬಲ ಕೊಡುತ್ವೆ.  ಈ ವಿಚಾರದಲ್ಲಿ  ನಿಮಗೆ ಗುಂಪೇ ಬೇಡ… ಎಲ್ಲರೊಂದಿಗು ಬೆರೆಯೋ ಅಜಾತಶತ್ರು  ನೀವು……  ಅಡುಗೆ ಮನೆಲೀ ರಾಣಿ ಮಹಾರಾಣಿ…. ಮುದ್ದು ಮುದ್ದಾಗಿ ಕಾಣಿಸೋ ನೀವು  ಉರುಳಾಡ್ಕೊಂಡು ಇರೋದು ಬಿಟ್ಟು   ಬೆಲೆ ಹೆಚ್ಚಾಗಿ  ಕುಳಿತಲ್ಲೆ ಕೂತ್ಕೊಂಡು ಬಿಟ್ರೆ ಜನಸಾಮಾನ್ಯರ ಗತಿ ಏನೂ….? ಬೆಲೆ ಜಾಸ್ತಿ ಅನ್ನೋ ಬ್ರೇಕಿಂಗ್ ನ್ಯೂಸ್ ಆಗಿರೋ ನೀವ್  ಈರುಳ್ಳಿ ಬೆಲೆ ಸ್ಥಿರ  ಅನ್ನೋ ಬೆಟರ್ ನ್ಯೂಸ್ ಆಗಿ.

—————————————————————————

ಸುಮಾವೀಣಾ ಹಾಸನ

ಸುಮಾವೀಣಾ, ಹಾಸನ


 

2 thoughts on “ಸುಮಾವೀಣಾ ಹಾಸನ ಅವರ ಲಹರಿಲಹರಿ ವಿತ್ ಈರುಳ್ಳಿ ರಾಣಿ…

  1. ಓ ಈರುಳ್ಳಿ ನೀನೆಷ್ಟು ಹೆಸರಾದೆ?. ಸುಮಾವೀಣಾ ಬರಹದಿಂದಾ

Leave a Reply

Back To Top