ಅಮುಭಾವಜೀವಿ ಮುಸ್ಟೂರುಕವಿತೆ-ಕೊಳಲನೂದು ಮಾಧವ

ಕಾವ್ಯ ಸಂಗಾತಿ

ಅಮುಭಾವಜೀವಿ ಮುಸ್ಟೂರು

ಕೊಳಲನೂದು ಮಾಧವ

ಕೊಳಲನೂದು ಮಾಧವ
ಕಳೆಯಲೆಲ್ಲ ವಿಪ್ಲವ
ದುರುಳರಟ್ಟಹಾಸ ಮೆಟ್ಟಿ ನಿಂತು
ಧರ್ಮ ರಕ್ಷಣೆಯ ನಾದ ಹೊಮ್ಮಿಸು

ಯುದ್ಧೋನ್ಮತ್ತ ಹೃದಯಗಳಿಗೆ
ರಕ್ತದೊಕುಳಿಯ ದಾಹ ಹೆಚ್ಚಿದೆ
ಮಾನವೀಯತೆಯ ರಾಗ ಹೊಮ್ಮಿಸಿ
ಪ್ರೀತಿಯ ಅರ್ಥ ಮಾಡಿಸು

ಮೇಲು ಕೇಳಿನ ದಾಳ ಉರುಳಿಸಿ
ಅಸಮಾನತೆಯಲ್ಲಿ ಸಮಾಜ ಸೋತಿದೆ
ಸಮತೆಯ ಸಂಗೀತದ ಝರಿ ಹರಿಸು
ಸಹಬಾಳ್ವೆಯ ಸೂರಡಿಯಲ್ಲಿ ನಿಲ್ಲಿಸು

ಅಧಮ ತನವು ದಮನಗೊಳ್ಳಲಿ
ಸುಮಧುರ ಬಾಂಧವ್ಯ ನೆಲೆಗೊಳ್ಳಲಿ
ಭಾವದ ಉಸಿರ ಬೆರೆಸಿ ನುಡಿಸು
ಸಂಬಂಧಗಳ ಅನುಬಂಧ ಬೆಸಿಯಲು

ರಾಧೆಯ ನೆನಪಲ್ಲಿ ಮರೆಯದಿರು
ನಮ್ಮಯ ರೋಧನೆ ಕೇಳಿಸಿಕೊಳ್ಳುತ್ತಿರು
ಕೊಳಲಲ್ಲಿ ಹೊಮ್ಮುವ ಇನಿದನಿಯು
ನಮ್ಮ ಮನದ ಕತ್ತಲೆಯ ಕಳೆಯಲಿ

ಬೇಡುವೆ ಕೃಷ್ಣ ತೆರೆಯೋ ನೀ ಕಣ್ಣ
ಬಾಳ ರಥ ಬೀದಿಯಲ್ಲಿ ಕಷ್ಟವು ತೀಕ್ಷ್ಣ
ಎಲ್ಲ ನೀಗುವುದು ನಿನ್ನ ಕೊಳಲ ಮಾಧುರ್ಯ
ಜ್ಯೋತಿ ಗೀತೆ ಬೆಳಗಲಿ ಎಲ್ಲರ ಆಂತರ್ಯ

——————————————–


ಅಮುಭಾವಜೀವಿ ಮುಸ್ಟೂರು

One thought on “ಅಮುಭಾವಜೀವಿ ಮುಸ್ಟೂರುಕವಿತೆ-ಕೊಳಲನೂದು ಮಾಧವ

Leave a Reply

Back To Top